ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೀರಣ್ಣ ಮಡಿವಾಳರ ಹೊಸ ಕವಿತೆ- ಬಿಳಿರಾತ್ರಿಯ ಬಣ್ಣದ ಕನಸು…

ವೀರಣ್ಣ ಮಡಿವಾಳರ

ನಟ್ಟನಡುರಾತ್ರಿಗೆ ನಿನ್ನ ನೆನಪು ಬಿಳಿಯ ಬಣ್ಣ ಬಳಿದಿವೆ
ರಕ್ತಹೆಪ್ಪುಗಟ್ಟಿಸುವ ಈ ಮಾಗಿಯ ಚಳಿಯಲಿ
ನಿನ್ನ ಚೇತನ ನನ್ನಲ್ಲಿ
ನನ್ನ ಚೇತನ ನಿನ್ನಲ್ಲಿ
ತಣ್ಣಗೆ ಉರಿಯುತ್ತಿವೆ

ನೀನು ಕೇಳುವುದಾದರೂ ಏನು
ಒಂದು ನವಿಲು ಗರಿ
ಎರಡು ಮುದ್ದು ಮೊಲ
ಬೊಗಸೆ ತುಂಬಾ ನಗುವ ನಕ್ಷತ್ರ

ಈ ಗಾಢ ರಾತ್ರಿಯಲಿ ನನಗೆ ಕಳ್ಳನಪಟ್ಟ ಕೊಟ್ಟರೂ ಸರಿಯೇ
ಚಂದಿರ ಲೋಕವ ಕೊಳ್ಳೆ ಹೊಡೆದು ನೀನು ಬಯಸಿದ
ಆ ಪುಟಾಣಿ ನಕ್ಷತ್ರಗಳ ಕರೆತರುತ್ತೇನೆ
ನಿನ್ನ ಉಡಿತುಂಬುತ್ತೇನೆ

ಈ ಬೆಳ್ಳಗಿನ ಕತ್ತಲಲಿ ದಟ್ಟ ಕಾಡಿನಲಿ
ಉದುರಿಬಿದ್ದಿರುವ ಆ ಒಂದು ಮಾಯಕಾರ ನವಿಲುಗರಿಗಾಗಿ ತಡಕಾಡುತ್ತೇನೆ
ಕಂಡೊಡನೆ ಹಗುರಾಗಿ ಎತ್ತಿತಂದು
ನಿನಗೆ ಮುಡಿಸುತ್ತೇನೆ

ನನಗೆ ಮೊಲಗಳದ್ದೇ ಚಿಂತೆ
ಬಿಳಿಯ ರಾತ್ರಿಯಲಿ ಬಿಳಿಯ ಮುಖವಾಡದ ಬೇಟೆಗಾರರು
ಮೊಲಗಳದ್ದೇ ಭಾಷೆಯಲ್ಲಿ ಹಾಡುತ್ತ
ಬಲೆಯ ಬೀಸಿದ್ದಾರೆ
ನನಗೂ

ಚಿಂತಿಸದಿರು ಖಂಡಿತ ನಾನು
ನಿನ್ನ ಬಣ್ಣದ ನೆನಪುಗಳ ಕರುಣೆಯ ಕವಿತೆ ಹೇಳಿ
ಬೇಟೆಗಾರರ ಬಾಣಗಳ ಕೊಳಲಾಗಿಸಿ
ನಿನ್ನ ಗುಣಗಾನ ಮಾಡುವುದ ಕಲಿಸುತ್ತೇನೆ
ನೀನು ಬಯಸಿದ ಮೊಲಗಳ ನಿನ್ನ ಮಡಿಲಲ್ಲಿ ಆಟವಾಡಲು ಬಿಡುತ್ತೇನೆ
ಮತ್ತು ನಾನೂ

ನೀನು ಬಯಸುವುದಾದರೂ ಏನು
ಒಂದು ನವಿಲು ಗರಿ
ಎರಡು ಮುದ್ದು ಮೊಲ
ಬೊಗಸೆ ತುಂಬಾ ನಗುವ ನಕ್ಷತ್ರ
ನಾನೂ ….

‍ಲೇಖಕರು Admin

20 December, 2021

1 Comment

  1. Shilpa A H

    Nice and very creative writing sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading