ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೀಕೆಂಡಿಗೆಂದೆ ತೆಗೆದಿರಿಸಿದ ಸುಖದ ಸಾಲದ  ಮೊಬಲಗು..

ಡಾ .ಲಕ್ಷ್ಮಣ ವಿ ಎ

ಸುಖದ ಬೆನ್ನಿಗೆ ಸೂತಕವ ಹೊತ್ತ
ಕಂತಕ
ಈ ತಿಂಗಳ ರಾತ್ರಿ ಹಾಲಾಹಲದ ಹೊಳೆ
ದಾಟಿತು
ದಾಟಿತು ಭವ ಭಯ ಬಯಲು ಬಾನು
ಲೆಕ್ಕಿಸದೆ
ನೆತ್ತಿ ಸುಡುವ ಉರಿ ಬಿಸಿಲು
ಬಿಸಿಲೆಂದರೆ ಬರಿ ಸುಡುವುದಲ್ಲ
ಬಯಲ ಬುಡ ನಿರ್ವಾತ ಗೊಳಿಸಿ
ಹದ ಗೊಳಿಸಿ ನೆಲವ
ಹಿಂದಿನ ಸುಗ್ಗಿಗೆ  ಸಿಡಿದು  ತಪ್ಪಿ  ನೆಲಕೆ ಬಿದ್ದ
ಸಾಸಿವೆಯ ಎದೆಗೆ ಬಿಸಿ ಕಿರಣ ತಾಗಿಸಿ
ಮಾಗಿಸಿ
ಹೊಸ ಗಾಳಿ ಬೆಳಕಿಗೆ
ಕಿಡಕಿ ಬಾಗಿಲುಗಳಾಗಿ ತೆರೆಯುವುದು ಎಲ್ಲ
ಮುಗಿದ ಕನಸುಗಳಂತ ಎಲೆ
ಕಳಚಿ ಬೆತ್ತಲಾಗುವುದು
ಹಾಲಾಹಲದ ಕಡಲೊಂದು ದಿನ
ಈ ಬಯಲಲಿ ಸುರಿಯುವುದಿಲ್ಲವೆ ?
ಮಳೆಯಾಗಿ
ಎಲ್ಲ ಒದ್ದೆಯಾಗಿಸುವುದು ಬಯಲು ಭೂಮಿ
ಕಿಡಕಿ ಬಾಗಿಲು ಮನದ ಹೊಸ್ತಿಲವ

ಸುರಿವ ಸುಖದ ನಡುವೆಯೂ
ಮೇಲೆ ನೀಲಿಮದ ಮರೆಯಲಿ ಹೊಂಚಿ ಹಾಕಿ ಕುಳಿತ ಸಿಡಿಲು

ಕಂತಿನಲಿ ಬರುವ ಸಾಲು ಸಾಲು
ಸಾಲದ ಮೋಡಗಳು
ವೀಕೆಂಡಿಗೆಂದೆ ತೆಗೆದಿರಿಸಿದ ಸುಖದ ಸಾಲದ
ಮೊಬಲಗು
ಪ್ರವಾಸಿ ಪ್ಯಾಕೇಜಿನಲಿ ಅಡಗಿದ
ಎರಡು ಹಗಲಿನ ನಡುವಿನ ಒಂದು ಇರುಳು
ಯಾ
ಎರಡು ಇರುಳಿನ  ನಡುವಿನ ಒಂದು ಹಗಲು

ಈ ನಡುವೆ ಎಷ್ಟೊಂದು ಇಮೋಜಿ
ನಗೆಗಳು ಮತ್ತು ಸಾಲಗಳು
ಸಾಸಿವೆ ಸುಖಕೆ ಸಾಗರದ ಹಾಲಾಹಲ

ತಥಾಗತನ ಕಾಡಿಗೆ ಬಿಟ್ಟ
ಕಂತಕನ ಕಾಲುಗಳಲ್ಲಿ ಕಸುವಿಲ್ಲ
ಬೆನ್ನ ಮೇಲೆ ಭಾರವಿಲ್ಲದೆಯೂ
ಒಜ್ಜೆಯಾಗಿರುವ ಸೂತಕದ ಹೆಜ್ಜೆ
ದಾಟಿತು ಹಾಲಾಹಲದ ಹೊಳೆ
ಮೇಲೆ ಕಂಬನಿಯ ಮಳೆ ,
ನೀಲಿಮದ ಮರೆಯಲಿ ಹೊಂಚಿ ಹಾಕಿದ
ಸಿಡಿಲು
ಹೊಡೆಯಬಾರದೆ ಅರಮನೆಯ ತಲುಪುವ
ಮೊದಲು ?

| ಮಧ್ಯರಾತ್ರಿ  ಎದ್ದ ಸಿದ್ಧಾರ್ಥ ಅರಮನೆಯ ಬಿಟ್ಟು ಕಂತಕ ಎಂಬ ಹೆಸರಿನ ಕುದುರೆಯ ಮೇಲೆ ಕಾಡಿಗೆ  ಹೊರಡುತ್ತಾನೆ,ಕಾಡಿಂದ ಅರಮನೆಗೆ ತೆರಳಿದ ಕುದುರೆ ಖಿನ್ನತೆಗೊಳಗಾಗಿ ಅನ್ನ ಆಹಾರವ ತ್ಯಜಿಸಿ  ಪ್ರಾಣ ಬಿಡುತ್ತದೆಯೆಂಬ ಪ್ರತೀತಿಯಿದೆ.  |

‍ಲೇಖಕರು avadhi

29 April, 2018

2 Comments

  1. Shreedevi keremane

    ಚಂದವಿದೆ ಡಾಕ್ಟ್ರೆ…

  2. Laxman

    ತ್ಯಾಂಕ್ಯೂ ಶ್ರೀದೇವಿ ಮೇಡಮ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading