ವಿ ಮಿಸ್ ಯೂ ಭಂಡಾರಿ ಸರ್…

ಮೊನ್ನೆಯಷ್ಟೇ ನಮ್ಮನ್ನು ಅಗಲಿದ ಡಾ|ವಿಠ್ಠಲ ಭಂಡಾರಿಯವರ ಮನೆ ‘ಸಹಯಾನ’ ದ ಅಂಗಳದಲ್ಲಿ ಪ್ರತಿವರ್ಷವೂ ಮಕ್ಕಳ ಶಿಬಿರ ನಡೆಯುತ್ತಿತ್ತು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಮಕ್ಕಳು ಮತ್ತು ಆ ಹಳ್ಳಿಯ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡು ಮುಖ್ಯವಾಗಿ ರಂಗತರಬೇತಿಯನ್ನು ಪಡೆಯುತ್ತಿದ್ದರು.

ಅಂತಹ ಶಿಬಿರದಲ್ಲಿ ಅನೇಕ ವರ್ಷ ಪಾಲ್ಗೊಂಡು ತರಬೇತಿ ಪಡೆದ ಉಡುಪಿಯ ಪ್ರೀತಂ ತನ್ನ ನುಡಿ ನಮನವನ್ನು ಭಂಡಾರಿ ಸರ್‌ಗೆ ಅರ್ಪಿಸಿದ್ದಾನೆ.

ಪ್ರೀತಂ, ಉಡುಪಿ


ಅಂಕುಡೊಂಕಾದ ರಸ್ತೆಯ ತಿರುವಿನಲ್ಲಿ ಸಿಗುವ ‘ಕೆರೆಕೋಣ’ ಎಂಬ ಊರಿನ ‘ಸಹಯಾನ’ದ ಮನೆಯಂಗಳದಲ್ಲಿ ಪ್ರತಿವರ್ಷದಂತೆ ಮಕ್ಕಳ ಶಿಬಿರ ನಡೆಯುತ್ತಿತ್ತು ಮತ್ತು ಮನೆಯ ಮುಂದೆ ಮಕ್ಕಳ ಶಿಬಿರದ ಸಮಾರೋಪದ ಅಂಗವಾಗಿ “ಧರಣಿ ಮಂಡಲ ಮಧ್ಯದೊಳಗೆ” ನಾಟಕ ಪ್ರದರ್ಶನವಿದೆಯೆಂಬ ಬ್ಯಾನರ್ ತೂಗುಹಾಕಲಾಗಿತ್ತು.

ಮನೆಯ ಚಾವಡಿಯ ಮೂಲೆಯೊಂದರಲ್ಲಿ ಹುಲಿಯೊಂದು ಜೋಲುಮೋರೆ ಹಾಕಿಕೊಂಡು ಕುಳಿತಿತ್ತು. ಅದರ ಮುಖದ ತುಂಬಾ ಬರೆದಿದ್ದ ವ್ಯಾಘ್ರಗೆರೆಯೊಳಗಿಂದ ಬೇಸರದ ಛಾಯೆ ಇಣುಕುತ್ತಿತ್ತು. ಉಳಿದೆಲ್ಲ ಹುಲಿಗಳು, ದನಗಳು ಸಂಜೆಯ ಪ್ರದರ್ಶನದ ಗುಂಗಿನಲ್ಲಿ ಉತ್ಸಾಹದಿಂದ ಚಿಮ್ಮುತ್ತಿದ್ದರೆ ಈ ಹೆಬ್ಬುಲಿ ಮಾತ್ರ ಮುದಿಹುಲಿಯಂತೆ ಮೂಲೆಸೇರಿತ್ತು.

ಕಾರಣವೆಂದರೆ ಅಂದೇ ಅಚಾನಕ್ಕಾಗಿ ಆ ಹುಲಿಯ ಗಂಟಲು ಹಿಡಿದುಕೊಂಡಿತ್ತು, ದನಿ ಸರಿಯಾಗಿ ಹೊರಬರದೇ ಘರ್ಜಿಸಲು ಅಡಚಣೆಯಾಗಿತ್ತು. ಘರ್ಜಿಸಲಾರದ ತಾನು ಹೆಬ್ಬುಲಿಯಂತಾದೇನು? ಎಂಬ ಚಿಂತೆ ವ್ಯಾಘ್ರವನ್ನು ಕಾಡುತ್ತಿತ್ತು.

ಆ ಮನೆಯಲ್ಲಿರುವ ವ್ಯಕ್ತಿಯೊಬ್ಬರು ಹುಲಿಯ ಚಿಂತೆಯನ್ನು ಹೇಳದೆಯೂ ಗ್ರಹಿಸಿದರು ಮತ್ತು ಅವರನ್ನು ಶಿಬಿರದಲ್ಲಿರುವ ಎಲ್ಲ ಮಕ್ಕಳೂ ಪ್ರೀತಿಯಿಂದ ‘ವಿಠ್ಠಲ ಮಾವ’ ಅಥವಾ ‘ಭಂಡಾರಿ ಸರ್’ ಎಂದು ಕರೆಯುತ್ತಿದ್ದರು. ಬೈಕಿನಲ್ಲಿ ಪೇಟೆಗೆ ಹೊರಟ ಅವರು ಮರಳಿ ಬಂದಾಗ ಚೀಲದೊಳಗಿಂದ ಕಲ್ಲುಸಕ್ಕರೆ ತುಂಬಿದ ಪೊಟ್ಟಣವೊಂದನ್ನು ಹುಲಿಯ ಕೈಗೆ ಕೊಟ್ಟು ಹೇಳಿದರು, “ಹುಲಿ ಎಂದಾದರೂ ದನಿ ಹೋಯಿತೆಂದು ಹೆದರುತ್ತದೆಯೆ? ಇಗೋ ಇದನ್ನು ತಿನ್ನು ಮತ್ತು ಸಂಜೆ ಚಂದ ಮಾಡಿ ಪ್ರದರ್ಶನ ನೀಡು”. ಅವರ ಸಾಂತ್ವನ ಅದೆಷ್ಟು ಶಕ್ತಿಶಾಲಿಯಾಗಿತ್ತೆಂದರೆ ಹುಲಿಯು ತಕ್ಷಣ ಕಲ್ಲುಸಕ್ಕರೆಯನ್ನು ಪುಣ್ಯಕೋಟಿಯಿಂದ ಹಿಡಿದು, ಗೊಲ್ಲ, ಪುಟಾಣಿ ಕರು, ಮರಿಹುಲಿಗಳಿಗೆಲ್ಲ ಹಂಚುತ್ತಾ, ತಾನೂ ಬಾಯೊಳಗಿಟ್ಟು ಚೀಪುತ್ತ ಮನೆಯಿಡೀ ಎಲ್ಲರೊಂದಿಗೆ ಕುಣಿದು ಕುಪ್ಪಳಿಸತೊಡಗಿತು.

ಇಂದು ಅದೇ ಮನೆಯ ಚಾವಡಿಯ ಮೂಲೆಯಲ್ಲಿ ‘ವಿಠ್ಠಲ್ ಮಾವ’ ಅಥವಾ ‘ಭಂಢಾರಿ ಸರ್’ ನಿದ್ದೆಯಲ್ಲಿ ಮಲಗಿದ್ದಾರೆ. ಹುಲಿ, ಹಸುಗಳ ಜೊತೆಗೆ ದೊಡ್ಡವರೆಲ್ಲರೂ ಪ್ರೀತಿಯ ಕಲ್ಲುಸಕ್ಕರೆ ಹಿಡಿದು ಕಾಯುತ್ತಿದ್ದಾರೆ, ಅದನ್ನು ತಿಂದು ಅವರು ಮತ್ತೆ ಎದ್ದು ನಿಲ್ಲುತ್ತಾರೆ ಮತ್ತು ಎಲ್ಲರೂ ಸೇರಿ ಮನೆಯ ತುಂಬಾ ಕುಣಿಯಬೇಕೆಂದು!

ನನಗೀಗ ಟೆರಿ ಪ್ರೆಚೆಟ್ ಹೇಳಿದ ಹೇಳಿಕೆಯೊಂದು ನೆನಪಾಗುತ್ತಿದೆ, “ವ್ಯಕ್ತಿಯೊಬ್ಬನು ಈ ಜಗತ್ತಿನಲ್ಲಿ ಹುಟ್ಟುಹಾಕಿದ ಅಲೆಗಳು ಅಳಿಯುವವರೆಗೂ ಅವನಿಗೆ ನಿಜವಾಗಲೂ ಸಾವಿಲ್ಲ.” ಅರಿವಿನ ಕಲ್ಲುಸಕ್ಕರೆಯನ್ನು ಮೊಗೆಮೊಗೆದು ತಿನ್ನಿಸಿದ ಭಂಡಾರಿ ಸರ್ ಅವರಿಗೆ ಈ ಸಮಯದಲ್ಲಿ ನಾನು ಹೇಳಲು ಸಾಧ್ಯವಾಗುವುದು ಇಷ್ಟೆ, “ನೀವು ನಮ್ಮೊಳಗೆ ಹುಟ್ಟುಹಾಕಿದ ಅಲೆಗಳು ಶಾಂತವಾಗುವುದಿಲ್ಲ.”

ಹಾಗಾಗಿ ನಾನು ಮತ್ತೊಮ್ಮೆ ಗಾಢವಾಗಿ ನಂಬುತ್ತೇನೆ, ಅದೇ ಅಂಕುಡೊಂಕಿನ ತಿರುವಿನ ರಸ್ತೆಯಲ್ಲಿ ಸಿಗುವ ‘ಕೆರೆಕೋಣ’ ಎಂಬ ಊರಿನಲ್ಲಿ ‘ಸಹಯಾನ’ ಎಂಬ ನಮಗೆಲ್ಲ ಇನ್ನೊಂದು ಮನೆಯೇ ಆದ ಅಂಗಳ ಇದ್ದೇ ಇರುತ್ತದೆ ಮತ್ತು ಅಲ್ಲಿಯ ಚಾವಡಿಯಲ್ಲಿ ನಮಗೆಲ್ಲ ಇನ್ನೊಬ್ಬ ಅಮ್ಮನಂತಿರುವ ‘ಭಂಡಾರಿ ಸರ್’ ಎಂಬ ವ್ಯಕ್ತಿ ನಮ್ಮ ದಾರಿಯನ್ನು ಕಾಯುತ್ತಿರುತ್ತಾರೆ.

                                

‍ಲೇಖಕರು Avadhi

May 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: