ವಿಶ್ವಾಸದ್ರೋಹಗಳ ಶರಶಯ್ಯೆಯಲ್ಲಿ ‘ಬಂಗಾರಪ್ಪ’!

ರಾಜ್ಯದಲ್ಲಿ ಮೂರು ಲೋಕಸಭಾ ಕ್ಷೇತ್ರಗಳಿಗೆ (ಶಿವಮೊಗ್ಗ, ಬಳ್ಳಾರಿ, ಮಂಡ್ಯ) ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ (ಜಮಖಂಡಿ, ರಾಮನಗರ) ಇದೀಗ ಉಪಚುನಾವಣೆ ನಡೆಯುತ್ತಿದೆ.

ರಾಜ್ಯದಲ್ಲಿನ ಜೆಡಿಎಸ್ –ಕಾಂಗ್ರೇಸ್ ಮೈತ್ರಿಕೂಟದ ಸರ್ಕಾರವನ್ನು ಉರುಳಿಸಲು ಹೆಣೆಯುತ್ತಿರುವ ಬಿಜೆಪಿಯ ಆಪರೇಷನ್ ಕಮಲದ ಅಳಿವು-ಉಳಿವು ಕೂಡ ಈ ಉಪಚುನಾವಣೆಗಳ ಫಲಿತಾಂಶವನ್ನು ಅವಲಂಬಿಸಿದೆ.

ಇದೀಗ ನಡೆಯುತ್ತಿರುವ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಶಿವಮೊಗ್ಗ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳದ್ದು ಒಂದು ತೂಕವಾದರೆ ಶಿವಮೊಗ್ಗ ಲೋಕಸಭಾಕ್ಷೇತ್ರದ್ದೇ ಒಂದು ತೂಕವಾಗಿ ತೂಗುತ್ತಿದೆ. ಇಲ್ಲಿ ಮತ್ತೊಮ್ಮೆ ಯಡಿಯೂರಪ್ಪ ಅವರ ಶಕ್ತಿ ಪ್ರದರ್ಶನದ ಅನಿವಾರ್ಯತೆ , ಆ ಮೂಲಕ ಮೈತ್ರಿ ಸರ್ಕಾರವನ್ನು ಕೆಡವಿ ಮುಖ್ಯಮಂತ್ರಿಯಾಗುವ ಅವರ ಪ್ರಯತ್ನಕ್ಕೆ ಇನ್ನಷ್ಟು ಬಲ ಸೇರಿಕೊಳ್ಳಬಹುದೇನೋ.., ಆದರೆ ಇದಕ್ಕೆ ಪ್ರತಿಯಾಗಿ ಹೆಚ್.ಡಿ ದೇವೇಗೌಡ- ಸಿದ್ದರಾಮಯ್ಯ ಜೋಡಿ ಮಧು ‘ಬಂಗಾರಪ್ಪ’ ಎಂಬ ಪ್ರತ್ಯಾಸ್ತ್ರವನ್ನೇ ಹೂಡಿದೆ. ಯಡಿಯೂರಪ್ಪ ಮತ್ತದೇ  ‘ಬಂಗಾರಪ್ಪ’ ಎಂಬ ದಟ್ಟ ಪ್ರಭಾವಳಿಯ ಮುಂದೆ ಹೋರಾಡಬೇಕಿದೆ.

ವರ್ಣರಂಜಿತ ರಾಜಕಾರಣಿ, ಛಲಗಾರ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಇಲ್ಲವಾಗಿ ಏಳು ವರ್ಷಗಳಾಗಿವೆ. (ಇದೇ ಅಕ್ಟೋಬರ್ 26 ಕ್ಕೆ ಬಂಗಾರಪ್ಪ ಅವರಿಗೆ 85 ನೇ ವರ್ಷದ ಜನ್ಮದಿನ) ಈ ಸೋಲಿಲ್ಲದ ಸರದಾರನ ರಾಜಕೀಯ ಬದುಕಿನ ಕೊನೆಯ ದಿನಗಳು ಸೋಲಿನೊಂದಿಗೆ ಪರ್ಯಾವಸನಗೊಂಡಿದ್ದು ದೊಡ್ಡ ವಿಪರ್ಯಾಸ.

ಎಸ್. ಬಂಗಾರಪ್ಪ ಇದೀಗ ನಡೆಯುತ್ತಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ‘ಸ್ಟಾರ್ ಕ್ಯಾಂಪೇನರ್’ ಆಗಿದ್ದಾರೆ.! 2009ರ ಲೋಕಸಭಾ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪ ಅವರ ಮಗ ಬಿ.ವೈ ರಾಘವೇಂದ್ರನ ವಿರುದ್ದ ಎಸ್. ಬಂಗಾರಪ್ಪ ಪರಾಭವಗೊಂಡಿದ್ದರು.

ಇದೀಗ ನಡೆಯುತ್ತಿರುವ ಲೋಕಸಭೆ ಉಪಚುನಾವಣೆಯಲ್ಲಿ ಅದೇ ರಾಘವೇಂದ್ರ ವಿರುದ್ದ ಬಂಗಾರಪ್ಪ ಅವರ ಮಗ ಮಧು ಬಂಗಾರಪ್ಪ ಜೆಡಿಎಸ್ –ಕಾಂಗ್ರೇಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಅಪ್ಪನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಹೊರಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ರಾಜಕಾರಣ ಇಂತಹ ರಾಜಕೀಯ ವೈವಿಧ್ಯ ಮತ್ತು ವೈರುಧ್ಯಗಳಿಗೆ ಅನೇಕ ಬಾರಿ ವೇದಿಕೆಯಾಗಿದೆ. ಬಂಗಾರಪ್ಪ ಅವರು ಕಾಗೋಡು ತಿಮ್ಮಪ್ಪ , ಯಡಿಯೂರಪ್ಪ ಅವರ ವಿರುದ್ದ ತೊಡೆ ತಟ್ಟಿದ್ದೂ ಇದೆ. ಅದೇ ಕಾಗೋಡು ತಿಮ್ಮಪ್ಪ, ಯಡಿಯೂರಪ್ಪ ಅವರ ಪರ ನಿಂತು ಅವರನ್ನು ಗೆಲ್ಲಿಸಿದ್ದು. ಅವರಿಂದಲೇ ಸೋಲುಂಡಿದ್ದೂ ಇದೆ.

ಬಂಗಾರಪ್ಪ ಅವರು ಇಲ್ಲದ ಈ ಏಳು ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಯಾವುದೇ ಚುನಾವಣೆಗಳು ‘ಬಂಗಾರಪ್ಪ’ ಅವರ ಹೆಸರಿಲ್ಲದೆ ನಡೆದಿಲ್ಲ. ಅಷ್ಟೊಂದು ದಟ್ಟ ಪ್ರಭಾವಳಿ ಬಂಗಾರಪ್ಪ. ಈಗ ನಡೆಯುತ್ತಿರುವ ಉಪಚುನಾವಣೆಯಲ್ಲಿ ಆಡಳಿತರೂಢ ಜೆಡಿಎಸ್-ಕಾಂಗ್ರೇಸ್ ನ ಮೈತ್ರಿಕೂಟಕ್ಕೆ ಬಂಗಾರಪ್ಪ ಅವರೇ ಆಸರೆಯಾಗಿದ್ದರೆ, ಅದೇ ಎದುರಾಳಿಯಾಗಿರುವ ಬಿಜೆಪಿಗೂ ‘ಬಂಗಾರಪ್ಪ’ ಅವರ ಹೆಸರೇ ಊರುಗೋಲು ಆಗಿರುವುದು ವೈಚಿತ್ರ್ಯ.

ಪಕ್ಷಾತೀತವಾಗಿ ಎಲ್ಲರೂ ಬಂಗಾರಪ್ಪ ಅವರಿಗೆ ಜೀವಿತಕಾಲದ ಸಾಧನೆ, ಅವರಿಗಾದ ರಾಜಕೀಯ ಅನ್ಯಾಯ, ವಿಶ್ವಾಸ ದ್ರೋಹಗಳು, ಬೆನ್ನಿಗಿರಿದ ಚೂರಿ ಚರಿತ್ರೆಗಳನ್ನು ಮತದಾರನ ಮುಂದಿಡುತ್ತಾ ಆತ್ಮವಂಚನೆಯ ಮುಸುಕು ಹೊತ್ತು ಮತ ಎತ್ತುವಳಿಗಿಳಿದಿರುವುದು ಸೂಜಿಗದ ಸಂಗತಿ.

1983 ರಲ್ಲಿ ಕ್ರಾಂತಿರಂಗದಲ್ಲಿದ್ದ ಎಸ್. ಬಂಗಾರಪ್ಪ ಅವರಿಗೆ ಅವತ್ತೇ ಮುಖ್ಯಮಂತ್ರಿಯಾಗುವ ಅವಕಾಶ ಒದಗಿ ಬಂದಿತ್ತು. ಆದರೆ ಅದನ್ನು ತಪ್ಪಿಸಿದ ಕೀರ್ತಿ ಹೆಚ್.ಡಿ ದೇವೇಗೌಡರದ್ದು. 1996 ರಲ್ಲಿ ಕೆಸಿಪಿಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದ ಬಂಗಾರಪ್ಪ ಯುನೈಟೆಡ್ ಫ್ರೆಂಟ್ ನ ಪಾಲುದಾರರು ಆಗಿದ್ದರು. ಆದರೆ ಅವರಿಗೆ ಅವತ್ತಿನ ಯುನೈಟೆಡ್ ಫ್ರೆಂಟ್ ನ ಪ್ರಧಾನಿಯಾಗಿದ್ದ ಹೆಚ್.ಡಿ ದೇವೇಗೌಡರು ತಮ್ಮ ಸಂಪುಟದಲ್ಲಿ ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಬಿಜೆಪಿ ಶಾಸಕ ಹರತಾಳುಹಾಲಪ್ಪ ಈಗ ನಡೆಯುತ್ತಿರುವ ಉಪಚುನಾವಣೆಯಲ್ಲಿ ಮತದಾರನಿಗೆ ನೆನಪಿಸತೊಡಗಿದ್ದಾರೆ.

ಮೊನ್ನೆಯಷ್ಟೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸೇರಿ ಸೊರಬ ಕ್ಷೇತ್ರದಲ್ಲಿ ತಮ್ಮ ಮಧು ಬಂಗಾರಪ್ಪನನ್ನು ಸೋಲಿಸಿ ಶಾಸಕರೂ ಆಗಿರುವ ಅಪ್ಪನಿಗೆ ದ್ರೋಹ ಬಗೆದ ಮಗ ಎಂಬ ಬಿರುದು ಹೊತ್ತಿರುವ ಈ ಕುಮಾರ್ ಬಂಗಾರಪ್ಪ ತನ್ನ ತಂದೆಗೆ ಕಾಂಗ್ರೇಸ್ ನವರು ಮಾಡಿದ ದ್ರೋಹಗಳನ್ನು ಎತ್ತೆಣಿಸುತ್ತಾ, ಅಪ್ಪನ ಆದರ್ಶ ಗುಣಗಳನ್ನು ಕೊಂಡಾಡುತ್ತಾ ಬಿಜೆಪಿಗೆ ಮತ ಕೇಳ ಹೊರಟಿದ್ದಾರೆ.

ಬಿಜೆಪಿ ಹರತಾಳುಹಾಲಪ್ಪ-ಕುಮಾರ್ ಬಂಗಾರಪ್ಪ ಬಾಯಿಯಿಂದಲೆ ಬಂಗಾರಪ್ಪನವರ ಗುಣಗಾನ ಮಾಡಿಸುತ್ತಾ ಓಟು ಕೇಳುತ್ತಿದೆ. ಕಾಂಗ್ರೇಸ್ ಸೇರಿಕೊಂಡಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪಶ್ಚಾತ್ತಾಪವೆಂಬಂತೆ ಬಂಗಾರಪ್ಪ ಅವರ ಸ್ಮರಣೆಗಿಳಿದಿದ್ದಾರೆ. ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷದ ನಾಯಕರುಗಳು ತಮ್ಮ ಮೈತ್ರಿ ಕೂಟದ ಅಭ್ಯರ್ಥಿಯಾಗಿರುವ ಮಧುಬಂಗಾರಪ್ಪ ಅವರ ಗೆಲುವು 2009 ರಲ್ಲಿ ಬಂಗಾರಪ್ಪ ಅವರ ಸೋಲಿನ ಸೊರಗಿಗೆ ಪ್ರತಿಯಾಗಿ ಒದಗಿಸಬಹುದಾದ ರಾಜಕೀಯ ನ್ಯಾಯವಷ್ಟೇ ಅಲ್ಲ, ಬಂಗಾರಪ್ಪ ಎಂಬ ನಾಯಕನಿಗೆ ನೀಡಬಹುದಾದ ಅದೊಂದು ಭಾವನಾತ್ಮಕ ಕೃತಜ್ಞತೆ ಎಂಬುವಷ್ಟರ ಮಟ್ಟಿಗೆ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ಕಸರತ್ತು ನಡೆಸಿದ್ದಾರೆ.

ಇಲ್ಲಿ ಸ್ಪಷ್ಟವಾಗಿ ಕಂಡು ಬರುವುದೇನೆಂದರೆ ಬಂಗಾರಪ್ಪ ನವರಿಗೆ ಜೀವಿತ ಕಾಲದಲ್ಲಿ ಎಲ್ಲರಿಂದಲೂ ಆದ ದ್ರೋಹಗಳೆ ಪರಸ್ಪರ ಬಂಡವಾಳದಂತೆ ಬೆತ್ತಲಾಗುತ್ತಿದೆ. ಮತ್ತು ಲಾಭಕ್ಕೆ ಬಳಕೆಯಾಗುತ್ತಿದೆ.

ಕ್ರಾಂತಿರಂಗದ ಕಾಲದಲ್ಲಿ ಬಂಗಾರಪ್ಪ ಅವರಿಗೆ ಧಕ್ಕಬಹುದಾಗಿದ್ದ ಮುಖ್ಯಮಂತ್ರಿ ಸ್ಥಾನವನ್ನು ದೇವೇಗೌಡರು ತಪ್ಪಿಸಿದ್ದು ನಿಜವೇ ಆದರೂ ಅದೇ ಕಾಲಕ್ಕೆ ಕಾಂಗ್ರೆಸ್ಸಿಗರು 1992 ರಲ್ಲಿ ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಿಗೊಳಿಸಿದ್ದು ಕಡಿಮೆ ಅನ್ಯಾಯವೆನ್ನಲಾಗದು. ಬಿಜೆಪಿ ಬಂಗಾರಪ್ಪ ಅವರನ್ನು ಬಳಸಿಕೊಂಡು ಬೆಳೆದು ಬಗೆದದ್ದು ಪರಮ ದ್ರೋಹವಲ್ಲವೇ? ಬಂಗಾರಪ್ಪ ಅವರಿಂದಲೇ ಸಂಸದರಾದ ಕೆ.ಜಿ ಶಿವಪ್ಪ. ಶಾಸಕರುಗಳಾದ ಬಿ. ಸ್ವಾಮಿರಾವ್, ಡಾ.ಜಿ.ಡಿ ನಾರಾಯಣಪ್ಪ ಅವರುಗಳು ಕಾಲ ಕಾಲಕ್ಕೆ ಕಳಚಿ ಹೋದರು. ಮುಖ್ಯಮಂತ್ರಿ ಕುರ್ಚಿ ಕಿತ್ತುಕೊಂಡ ಕಾಂಗ್ರೇಸ್ ನಿಂದ ಸಿಡಿದು ಹೊರಬಂದ ಬಂಗಾರಪ್ಪ ಕೆಸಿಪಿ ಕಟ್ಟಿ ಕಾಂಗ್ರೇಸ್ ನ್ನು ನುಚ್ಚುನೂರು ಮಾಡಿದ್ದು ಇತಿಹಾಸ. ಕಟ್ಟುವುದು, ಕೆಡವುವುದು, ಮೆಟ್ಟಿ ಗೆಲ್ಲುವುದು ಬಂಗಾರಪ್ಪ ಅವರಿಗೆ ಸಲೀಸು ಕೆಲಸವಾಗಿತ್ತು.

ಸರದಿ ಮೇಲೆ ಕರ್ನಾಟಕ ಕಾಂಗ್ರೇಸ್ ಪಾರ್ಟಿ, ಕರ್ನಾಟಕ ವಿಕಾಸ ಪಾರ್ಟಿ ಗಳನ್ನು ಕಟ್ಟಿ ಕಾಂಗ್ರೇಸ್ ನ್ನು ದಹನೀಯವಾಗಿ ಹಣಿದು ಹಾಕಿದರು. ಇನ್ನೇನು ಸರ್ಕಾರ ರಚನೆಗೆ ಮೂರೇ ಗೇಣು ಎಂತಿದ್ದ ಬಿಜೆಪಿಯನ್ನು 1999 ರಲ್ಲಿ ಕುಟ್ಟಿಪುಡಿಗೈದು ಕಾಂಗ್ರೆಸ್ ಅಧಿಕಾರದ ಮೆಟ್ಟಿಲು ಹತ್ತಲು ಊಡಾದರು. ಮುಖ್ಯಮಂತ್ರಿ – ಗೃಹಮಂತ್ರಿ ಆಗೇ ಬಿಟ್ಟೆವು ಎಂದು ಎದೆ ಉಬ್ಬಿಸಿಕೊಂಡು ಓಡಾಡುತ್ತಿದ್ದ ಬಿಜೆಪಿಯ ಬಿ.ಎಸ್ ಯಡಿಯೂರಪ್ಪ, ಕೆ.ಎಸ್ ಈಶ್ವರಪ್ಪ ಸಹಿತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯನ್ನು ಹೊರತು ಪಡಿಸಿ ಉಳಿದ ಏಳು ಕ್ಷೇತ್ರಗಳಲ್ಲೂ ಬಿಜೆಪಿಯನ್ನು ನೆಲಕಚ್ಚಿಸಿದ್ದ ಬಂಗಾರಪ್ಪನವರು 2004ರ ವೇಳೆಗೆ ಇದೇ ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಕೇವಲ 40 ರ ಆಸುಪಾಸಿನಲ್ಲಿ ತೆವಳುತ್ತಿದ್ದ ಬಿಜೆಪಿಯನ್ನು 79 ಸೀಟುಗಳೊಂದಿಗೆ ಗದ್ದುಗೆಯ ಗಡಿ ತಲುಪಿಸಿದ್ದರು.

ಹರತಾಳು ಹಾಲಪ್ಪ. ಬೇಳೂರು ಗೋಪಾಲಕೃಷ್ಣರಂತಹ ಅನಾಮಧೇಯರಿಗೆ ವಿಧಾನಸಭೆಯ ಪರಿಚಯ ಮಾಡಿಕೊಟ್ಟರು. ಅಪ್ಪನ ನಾಮಬಲದಲೇ ಮೊದಲ ಬಾರಿಗೆ ಶಾಸಕನಾಗಿ ಸಣ್ಣ ನೀರಾವರಿ ಸಚಿವರೂ ಆಗಿ ಗೂಟದ ಕಾರು ಹತ್ತಿದ್ದರು ಕುಮಾರ ಬಂಗಾರಪ್ಪ . ಒಂದೇ ವರ್ಷದಲ್ಲಿ ಕಾಂಗ್ರೇಸ್ ನಂಟು ಕಳಚಿಕೊಂಡ ಬಂಗಾರಪ್ಪ ಬಿಜೆಪಿಗೆ ಸೇರುವಾಗ ಅಪ್ಪನ ಬೆರಳ ಕೊಸರಿಕೊಂಡು ಎಸ್.ಎಂ ಕೃಷ್ಣ ಅವರ ಕೋಟಿನ ಜೇಬು ಸೇರಿಕೊಂಡ ಕುಮಾರ್ ಬಂಗಾರಪ್ಪ ಅಪ್ಪನಿಗೆ ಮಗ ಇರಿದ ಮೊದಲ ಚೂರಿ ಇದಾಗಿತ್ತು.

79 ಸೀಟುಗಳ ಬಿಜೆಪಿ ಹೆಚ್. ಡಿ ಕುಮಾರಸ್ವಾಮಿ ಜೊತೆ ಕೈ ಜೋಡಿಸಿ ಅಧಿಕಾರದ ರುಚಿ ಉಣ್ಣಲು ಬಂಗಾರಪ್ಪ ಭದ್ರ ಬುನಾದಿ ಹಾಕಿ ಕೊಟ್ಟಿದ್ದರು. ಬಿಜೆಪಿಯಿಂದ ಜಿಗಿದು 2005 ರಲ್ಲಿ ಸಮಾಜವಾದಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿದ ಬಂಗಾರಪ್ಪ ಅವರ ವಿರುದ್ದ ಅವತ್ತಿನ ಮುಖ್ಯಮಂತ್ರಿ ಧರ್ಮಸಿಂಗ್ ನೇತೃತ್ವದಲ್ಲಿ ಇಡೀ ಕಾಂಗ್ರೇಸ್ ಸರ್ಕಾರವೇ ವಿಧಾನಸೌಧದ ಬಾಗಿಲು ಮುಚ್ಚಿಕೊಂಡು ಬಂದು ಪ್ರಚಾರಕ್ಕಿಳಿದಿತ್ತು. ತಾವು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ತಮ್ಮಿಂದಲೇ ಮಂತ್ರಿಯಾಗಿದ್ದ ಧರಮ್ ಸಿಂಗ್, ಖರ್ಗೆ ಯಂತವರೆಲ್ಲಾ ಈಗ ನನ್ನನ್ನು ಸೋಲಿಸಲು ಬಂದಿದ್ದಾರೆ ಅವರೆಲ್ಲಾ ‘ನಿತ್ಯಸುಮಂಗಲೆಯರು’, ‘ಸ್ವಾಮಿ ದ್ರೋಹಿಗಳು’ ಎಂದು ಅವತ್ತು ಬಂಗಾರಪ್ಪ ಅಬ್ಬರಿಸಿದ್ದರು. ಆ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿ ಹೋರಾಡಿದ ಬಂಗಾರಪ್ಪ ಅವರು ಗೆದ್ದು ತಮಗಿದ್ದ ವಿರಾಟ ಜನಬಲವನ್ನು ಪ್ರದರ್ಶಿಸಿದರು.

2009 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪನ ಅವರ ಮುಖ್ಯಮಂತ್ರಿ ಅಧಿಕಾರ ಬಲ, ಹಣದ ಬಲ ದ ವಿರುದ್ದ ಕಾಂಗ್ರೇಸ್ ಅಭ್ಯರ್ಥಿಯಾಗಿ ಬಂಗಾರಪ್ಪ ಅವರು ಹೋರಾಡುವಾಗ ಇದೇ ಹಾಲಪ್ಪ , ಬೇಳೂರು ಗೋಪಾಲಕೃಷ್ಣ ಎಲ್ಲರೂ ಯಡಿಯೂರಪ್ಪ ಅವರ ಬಗಲಲ್ಲಿ ನಿಂತು ಬಂಗಾರಪ್ಪ ಅವರ ಬೆನ್ನಿಗೆ ಇರಿಯುತ್ತಲೇ ಹೋದರು.. ಬಂಗಾರಪ್ಪ ಅವರಿಂದ ಉಪಕೃತಾರ್ಥರಾದವರೆಲ್ಲಾ ಅಂದು ಬಂಗಾರಪ್ಪ ಅವರ ಸೋಲಿಗೆ ಕೈ ಜೋಡಿಸಿದರು. ಬಂಗಾರಪ್ಪ ಅವರ ಕುರಿತು ಆಡಿದ ಮಾತು, ನಡೆದುಕೊಂಡ ರೀತಿ ಕೃತಘ್ನದ್ದು ಎಂಬುದನ್ನು ಜನ ಈಗಲೂ ಮರೆತಿಲ್ಲ. ( ಈ ಚುನಾವಣೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬಂಗಾರಪ್ಪ ಅವರಿಗೆ ಬೆಂಬಲ ಘೋಷಿಸಿತ್ತು)

ಈ ಚುನಾವಣೆಯಲ್ಲಿ ಮಗ ರಾಘವೇಂದ್ರ ಅವರನ್ನು ಕಣಕ್ಕಿಳಿಸಿದ್ದ ಅವತ್ತಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕಾರಬಲ. ಹಣದ ಬಲದ ಮುಂದೆ ಬಂಗಾರಪ್ಪ ಅವರದ್ದು ಒಂದು ವೀರೋಚಿತ ಹೋರಾಟ. ಆರೋಗ್ಯ ಬಸವಳಿದಿತ್ತು, ದಣಿದಿದ್ದನ್ನು ತೋರಿಕೊಳ್ಳದ ಜಯಮಾನದ ಬಂಗಾರಪ್ಪ ಎದೆಯುಬ್ಬಿಸಿಕೊಂಡೆ ತಿರುಗುತ್ತಿದ್ದರು. ಮತದಾನಕ್ಕೆ ಕೆಲವೇ ದಿನಗಳಿದ್ದವು. ‘ಸರ್ , ಇನ್ನೊಂದು ಸ್ವಲ್ಪ ದುಡ್ಡು ಬೇಕು , ನಾವು ಗೆಲ್ತಿವಿ, ಸ್ವಲ್ಪ ದುಡ್ಡಿನ ವ್ಯವಸ್ಥೆ ಮಾಡಿ’.. ಎಂದು ತಮ್ಮ ಮುಂದೆ ನಿಂತಿದ್ದ ಕಾಂಗ್ರೇಸ್ ಮುಖಂಡರಿಗೆ ಬಂಗಾರಪ್ಪ ‘ನನ್ನತ್ರ ಬಿಡಿಗಾಸು ಇಲ್ಲ. ಇಷ್ಟ ಇದ್ರೆ ಕೆಲ್ಸ ಮಾಡಿ ಇಲ್ಲವೆ ಬಿಡಿ, ಅದೇನಾಗುತ್ತೇ ನೋಡೋಣ ..’ ಎಂದು ಬಿಟ್ಟರು. ಕಾಂಗ್ರೇಸ್ ಮುಖಂಡರುಗಳು ಕಂಗಾಲಾಗಿ ಜಾಗ ಖಾಲಿ ಮಾಡಿದರು.

ಅದೇ ವೇಳೆಗೆ ಸಂದರ್ಶನಕ್ಕಾಗಿ ಅವರ ಮುಂದೆ ಕುಳಿತಿದ್ದ ನಾನು ಸಂದರ್ಶನ ಮುಗಿಸಿದ ಮೇಲೆ ಆಫ್ ದಿ ರೆಕಾರ್ಡ್ ಎಂಬಂತೆ ‘ಸರ್. ಕೊನೆ ಘಳಿಗೆಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರಿಗೂ ಕಾಸು ಕೊಡದಿದ್ದರೆ ಹೇಗೆ, ಚುನಾವಣೆ ಕಷ್ಟವಾಗುತ್ತದೆ ಅಲ್ಲವೇ?’ ಎಂದೆ.

‘ಯು ಸೀ …..ಮಿಸ್ಟರ್ ರವಿಕುಮಾರ್ ನಾನು ಮನಸ್ಸು ಮಾಡಿದ್ರೆ ಯಾರಿಂದಲಾದರೂ ಒಂದಿಷ್ಟು ದುಡ್ಡು ತರ್ಸ್ತಿನಿ, ಅದು ದೊಡ್ಡ ವಿಚಾರ ಅಲ್ಲ. ಯಡಿಯೂರಪ್ಪ ಬಳಿ ದುಡ್ಡು ,ಅಧಿಕಾರ ಎಲ್ಲವೂ ಇದೆ. ನಾನು ಒಂದು ಬೂತ್ ಗೆ ಒಂದ್ಸಾವ್ರ ಕೊಟ್ರೆ, ಅವ್ರು (ಯಡಿಯೂರಪ್ಪ) ಎರಡ್ಸಾವ್ರ ಕೊಡ್ತಾರೆ. ನಾನು ಎರಡು ಸಾವ್ರ ಕೊಟ್ರೆ ಅವ್ರು ಮೂರ್ಸಾವ್ರೆ ಕೊಡ್ತಾರೆ. ಯಡಿಯೂರಪ್ಪನ ದುಡ್ಡಿನ ಮುಂದೆ ನನ್ನ ದುಡ್ಡು ನಡೆಯೋಲ್ಲ. ಅದ್ಕೆ ನಾನು ದುಡ್ಡು ಹಂಚೊದಿಲ್ಲ. ಈ ಜನಕ್ಕೆ ಬಂಗಾರಪ್ಪ ಬೇಕಾದ್ರೆ ಓಟ್ ಹಾಕ್ತಾರೆ. ದುಡ್ಡು ಗೆಲ್ಲುತ್ತೋ. ಜನ ಗೆಲ್ತಾರೋ ನೋಡೇ ಬಿಡ್ತೀನಿ….., ಈ ಜನರಿಂದಲೇ ನಾನು ಬೆಳೆದವನು. ನಾ ಹೆದ್ರೋ ಗಂಡಲ್ಲ ..’ ಎಂದು ಗೋಲ್ಡ್ ಪ್ರೇಮ್ ನ ಕಡುಗಪ್ಪು ಕನ್ನಡಕವನ್ನು ಮೂಗಿನ ಮೇಲೆರಿಸಿಕೊಂಡು ಮೌನಕ್ಕೆ ಜಾರಿದರು.

ಅವರು ಜನರ ಮೇಲಿಟ್ಟ ವಿಶ್ವಾಸ ಅಂತಿಂಥದ್ದಲ್ಲ. ಸುತ್ತ ಯಾರೂ ಇರಲಿಲ್ಲ. ಒಂದು ಕಾಲದಲ್ಲಿ ತುಂಬಿದ ಲಾರಿಗಳನ್ನು ನಿಲ್ಲಿಸಿಕೊಂಡು ತಮ್ಮ ಪತ್ನಿ ಸಮೇತ ಬೀಜದ ಭತ್ತ. ರಾಗಿ . ಜೋಳವನ್ನು ಕೊಳಗದಲ್ಲಿ ಮೊಗೆದು ಮೊಗೆದು ಬರದಿಂದ ಬಸಿದು ಹೋದ ಜನರಿಗೆ ತಾಯ್ತನದಿಂದ ಮಡಿಲು ತುಂಬಿದ ಈ ಜನನಾಯಕ ಅವತ್ತು ಬರಿಗೈಲಿ ಒಂಟಿಯಾಗಿ ಕುಳಿತಿದ್ದದ್ದು ನನಗೆ ಕ್ಷಣಕಾಲ ನೋಡಲಾಗಲಿಲ್ಲ.

ಮತದಾನದ ದಿನ ಬಹಳಷ್ಟು ಮತಗಟ್ಟೆಗಳಲ್ಲಿ ಬಂಗಾರಪ್ಪ ಅವರ ಪರ ಮತ ಕೇಳಲು ಒಬ್ಬ ಕಾರ್ಯಕರ್ತನೂ ಇರಲಿಲ್ಲ. ಬಿಜೆಪಿಯ ಬಿ.ವೈ ರಾಘವೇಂದ್ರ ಗೆದ್ದಿದ್ದು ನಿಜ, ಆದರೆ ಬಂಗಾರಪ್ಪ ಅವರ ಠೇವಣಿ ಕಳೆಯಬೇಕೆಂದು ಮತದಾನದ ಕೊನೆಯ ಕ್ಷಣದವರೆಗೂ ಎಲ್ಲಾ ಅಸ್ತ್ರ-ಶಸ್ತ್ರ, ದಂಡಿ ಸಂಪನ್ಮೂಲದ ‘ಬಲ’ವನ್ನು ಬಳಸಿದ್ದ ಯಡಿಯೂರಪ್ಪ ಅವರಿಗೆ ನಿರಾಶೆಯಾಗಿತ್ತು. ಬರಿಗೈ ಫಕೀರನಂತಿದ್ದ ಬಂಗಾರಪ್ಪ ಅವರು ಕೇವಲ 52.893 ಮತಗಳ ಅಂತರದಲ್ಲಿ ಸೋಲುಂಡಿದ್ದರು. ಹಣ-ಅಧಿಕಾರದ ಬಲದ ಮುಂದೆ ಬರಿಗೈ ಬಂಗಾರಪ್ಪ ನೈತಿಕವಾಗಿ ಗೆದ್ದಿದ್ದರು. ಬಂಗಾರಪ್ಪನವರಂತೆ ನಿಷ್ಣಾತ ರಾಜಕಾರಣಿಯಾಗಿದ್ದ ಯಡಿಯೂರಪ್ಪ ಅವರಿಗೆ ತಮ್ಮ ಮಗನ ಗೆಲುವಿನ ಲೀಡು ತೃಪ್ತಿ ತರಲಿಲ್ಲ. ಅದಕ್ಕಾಗಿ ಅವರು ತಮ್ಮದೇ ಪಕ್ಷದ ನಾಯಕರ ಹೆಗಲಿಗೆ ವೈಫಲ್ಯದ ಹೊರೆ ಹೊರಿಸಿ ಗುಡುಗಿದ್ದರು.

ಮಧು ಬಂಗಾರಪ್ಪ ಅವರನ್ನು ಜೆಡಿಎಸ್-ಕಾಂಗ್ರೇಸ್ ನ ಮೈತ್ರಿಕೂಟದ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದರ ಹಿಂದೆ ಯಡಿಯೂರಪ್ಪ ಅವರ ಪ್ರಾಬಲ್ಯ ಹತ್ತಿಕ್ಕುವ ರಣ ತಂತ್ರ ಅಡಗಿದೆ. ಬಲಿಷ್ಟ ಮತ್ತು ಸಂಘಟಿತ ಲಿಂಗಾಯಿತ ಮತ್ತು ಬ್ರಾಹ್ಮಣ ಮತಬ್ಯಾಂಕಿಗೆ ಪರ್ಯಾಯವಾಗಿ ಬಂಗಾರಪ್ಪ –ಕಾಗೋಡು ತಿಮ್ಮಪ್ಪ ಅವರ ಬಲದಲ್ಲೇ ಬೆಳೆದು ನಿಂತಿದ್ದ ಈಡಿಗ ಸಮುದಾಯ 2004 ರ ನಂತರ ಹರಿದು ಹಂಚಿ ಹೋಗಿತ್ತು. ಅದೊಂದು ದಿನ ದಿಢೀರನೆ ಕೈಯಲ್ಲಿ ಕಮಲದ ಹೂ ಹಿಡಿದುಕೊಂಡು ಬಿಜೆಪಿಯ ದೀನದಯಾಳು ಕಚೇರಿಗೆ ಹುರುಪಿನಿಂದಲೆ ಹೋಗಿದ್ದ ಬಂಗಾರಪ್ಪ ಅವರನ್ನು ಹಿಂಬಾಲಿಸಿದ ದೀವರ ಸಮುದಾಯ ಬಂಗಾರಪ್ಪ ಅವರು ಹಿಂತಿರುಗುವಾಗ ಹಿಂಬಾಲಿಸದೆ ಅಲ್ಲೇ ಉಳಿದು ಬಿಟ್ಟಿತು. ದಿನದಿಂದ ದಿನಕ್ಕೆ ಮತ್ತಷ್ಟು ಹರಿದು ಹಂಚಿಹೋಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗ ಈಡಿಗ ಸಮುದಾಯವನ್ನು ರಾಜಕೀಯ ಶಕ್ತಿಯನ್ನಾಗಿ ಕಾಯ್ದುಕೊಂಡವರು ಬಂಗಾರಪ್ಪ. ಈಡಿಗ ಸಮುದಾಯಕ್ಕೆ ರಾಜಕೀಯ ಪ್ರಜ್ಞೆಯನ್ನು ಕೊಟ್ಟವರೂ ಆವರೆ. ಈಡಿಗ ಸಮುದಾಯದ ಆಧಾರ ಸ್ಥಂಬಗಳಿಂತಿದ್ದ ಬಂಗಾರಪ್ಪ-ಕಾಗೋಡು ತಿಮ್ಮಪ್ಪ ಪರಸ್ಪರ ಮುನಿಸಿಕೊಂಡಾಗಲೆಲ್ಲಾ ಈಡಿಗ ಸಮುದಾಯ ಈ ಇಬ್ಬರ ನಾಯಕರ ನಡುವೆಯೇ ಹಂಚಿಹೋಗುತ್ತಿದ್ದರೂ ಮೂರನೇ ನಾಯಕರನ್ನು ಬಿಟ್ಟುಕೊಳ್ಳುತ್ತಿರಲಿಲ್ಲ.

ಹಾಗೆಂದು ಬಂಗಾರಪ್ಪ ಕೇವಲ ಈಡಿಗರ ನಾಯಕನಾಗಿ ಉಳಿದಿರಲಿಲ್ಲ. 1999 ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ಮಹಾಲಿಂಗಪ್ಪ. ಶಿವಮೊಗ್ಗದಲ್ಲಿ ಹೆಚ್.ಎಂ ಚಂದ್ರಶೇಖರಪ್ಪರಂತ ಲಿಂಗಾಯಿತರನ್ನು ಶಾಸಕರನ್ನಾಗಿ ಮಾಡಿದ್ದು ಇದೆ ಬಂಗಾರಪ್ಪ. ಅದರೆ ಈಗ ಪ್ರಬಲ ಹಿಂದುಳಿದ ವರ್ಗವೊಂದು ಸಮುದಾಯ ತನ್ನದೆ ಸ್ವಾಭಿಮಾನದ ನಾಯಕತ್ವ ಕಳೆದುಕೊಂಡು ಯಡಿಯೂರಪ್ಪ ರ ನಾಯಕತ್ವಕ್ಕೆ ‘ಸಾಮಂತ ಸೇವೆ’ಯ ಮತಬ್ಯಾಂಕಾಗಿ ಉಳಿದು ಬಿಟ್ಟಿದೆ. ಗೇಣಿ ಹೋರಾಟದ ಫಲವಾಗಿ ಭೂಮಿ,ಅನ್ನ-ಅಕ್ಷರ ಕಂಡ ಈಡಿಗ ಸಮುದಾಯದ ಹುಡುಗರು ಈಗ ದೇಶಾವರಿ ದೊರೆಯ ಮುಖವಿಟ್ಟುಕೊಂಡು ಮೆರವಣಿಗೆ ಹೊರಟಿದ್ದಾರೆ. ಬಂಗಾರಪ್ಪ ಅವರ ಮನೆ ಉರಿಯುವಾಗ ಪಕ್ಷಾತೀತವಾಗಿ ಗಳ ಇರಿದು ಮನೆ ಕಟ್ಟಿಕೊಂಡವರಿದ್ದಾರೆ. ಅವರ ಬಾಯಲೆಲ್ಲಾ ಈಗ ಬಂಗಾರಪ್ಪ ಅವರ ನುಡಿಕೀರ್ತಿ ನಡೆಯುತ್ತಿದೆ ಓಟಿಗಾಗಿ.

ಈಡಿಗ ಸಮುದಾಯಕ್ಕೆ ಏನೆಲ್ಲಾ ಕೊಟ್ಟ ಅದೇ ಸಮಾಜದಿಂದ ಏನೆಲ್ಲಾ ಪಡೆದುಕೊಂಡ ಬಂಗಾರಪ್ಪ ತಮ್ಮ ರಾಜಕೀಯ ಬದುಕಿನ ಕೊನೆಗಾಲದಲ್ಲಿ ಅದೇ ಸಮಾಜದ ವಿಘಟನೆಯಿಂದ ಘಾತುಕ ಇರಿತಗಳಿಗೊಳಗಾಗಿದ್ದು ದುರಂತ. ಹಿಂದುಳಿದ ವರ್ಗದ ಬಲಾಢ್ಯ ಸಮುದಾಯವಾಗಿರುವ ಈಡಿಗ ಮತಗಳು ಪುನರ್ ಧ್ರುವೀಕರಣಗೊಂಡಿದ್ದೇ ಆದರೆ ಅದುವೆ ಬಂಗಾರಪ್ಪ ಅವರ ಆತ್ಮಕ್ಕೆ ಸಲ್ಲಿಸುವ ನಿಜಶಾಂತಿಯಾಗುತ್ತದೆ.

ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ‘ಎಸ್.ಬಂಗಾರಪ್ಪ ‘ ಇಲ್ಲದೆಯೂ ‘ಅವರಿದ್ದಾರೆ’. ತಾವೇ ಬೆಳೆಸಿದ ಬಿದಿರಮೆಳೆಗಳು ಹರಿತ ಬಾಣಗಳಾಗಿ ಬೆನ್ನ ಇರಿದು ಶರಶಯ್ಯೆಯಲ್ಲಿದ್ದಾರೆ. ಇರಿದವರೂ ಅವರ ಕೊಂಡಾಡುತ್ತಾ ಮತಗಳ ಫಸಲಿನ ಕೂಯ್ಲು ನಡೆಸಿದ್ದಾರೆ. ಇದೊಂದು ಚೂರಿ ಚರಿತ್ರೆ.

‍ಲೇಖಕರು avadhi

October 29, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. Naveen

    Ravi beautiful writing, nice narration of Shimoga politics and about politicians.

    ಪ್ರತಿಕ್ರಿಯೆ
  2. Bvkulkarni

    Nice article on Bangarappa. But his tenure as CM was not good. It was full of scandals and corruption.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: