ಡೋರ್ ನಂಬರ್ – 8 ಎಂಬ ಕಾವ್ಯ ಕಡಮೆಯ ಪುಟಾಣಿ ಲೋಕ

“ಮಾರ್ಗ” ಎನ್ನುವ ಪದವನ್ನು ಪ್ರತಿ ಸಾರಿ ಕೇಳಿದಾಗಲೂ ವಿಶೇಷ ಎನಿಸುವ ಅರ್ಥಗಳು ನನ್ನನ್ನು ಆವರಿಸಿಕೊಳ್ಳುತ್ತವೆ. ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ ಮನುಷ್ಯನಾದವನು, ತನ್ನ ನೋವು, ಖುಷಿ, ವ್ಯಂಗ್ಯ ಅಥವಾ ಉಳಿದ ಯಾವುದೇ ಸೃಷ್ಠಿಸಹಜ ಭಾವಗಳನ್ನು ಹೊರಗೆ ಜಾರಿಸಲು ಅಥವಾ ವ್ಯಕ್ತಪಡಿಸಲು ತನ್ನದೇ “ಮಾರ್ಗ”ವನ್ನು ಕಂಡುಕೊಳ್ಳುತ್ತಾನೆ ಎನಿಸಿದೆ. ಅದೊಂದು ಅನಿವಾರ್ಯ ಕ್ರಿಯೆಯೂ ಹೌದು. ಆದರೆ ಅದು ಒತ್ತಾಯಪೂರ್ವಕವಲ್ಲ. ಲೇಖಕನಾದವನಿಗೆ ಬರವಣಿಗೆ ಎನ್ನುವುದು ಕೂಡ ಇಂತಹದೇ ಒಂದು ಸೃಷ್ಠಿಸಹಜ “ಮಾರ್ಗ”ವಷ್ಟೇ.

ಬರವಣಿಗೆಯನ್ನು ದೃಢವಾಗಿ ನಂಬಿರುವ ಲೇಖಕನೊಬ್ಬ ತಾನು ಗಮನಿಸುತ್ತಿರುವ ಅಥವಾ ತನ್ನೊಳಗನ್ನು ಪ್ರತಿಸಾರಿಯೂ ಮತ್ತೊಂದು ಸ್ಥರದಲ್ಲಿ ಸ್ಪರ್ಶಿಸುವ ವಿಚಾರಗಳನ್ನು ಡಾಳುಡಾಳಾದ ಮಾತುಗಳಲ್ಲಿ ಓತಪ್ರೋತವಾಗಿ ಹರಿಯಲು ಅನುವು ಮಾಡಿಕೊಡುವುದಿಲ್ಲ. ನಿಜವಾಗಿಯೂ ಬರವಣಿಯೇ ಆ ವ್ಯಕ್ತಿಯ “ಮಾರ್ಗ”ವಾಗಿದ್ದೇ ಆದರೆ ಆವರಿಸಿಕೊಂಡ ಅಷ್ಟು ವಿಚಾರಗಳು ನಿಧಾನವಾಗಿಯಾದರೂ ಆತನೊಳಗೇ ಗೂಡುಕಟ್ಟುತ್ತವೆ. ಮುಂದೊಂದು ದಿನ ಅದೇ ಗೂಡಿನಲ್ಲಿ ತನ್ನದೆ ರೂಪದಲ್ಲಿ ಹಕ್ಕಿಯೊಂದು ಸ್ಪರ್ಶಿಸಿದ ಅಷ್ಟೂ ನೋವುಗಳಿಗೂ ಉತ್ತರವಾಗಿ ಚಿಲಿಪಿಲಿಗುಟ್ಟಬಹುದು. ಹೀಗೆ ಒಳಗೇ ನಿರ್ಮಾಣವಾಗುವ ಗೂಡಿನಲ್ಲಿ ಹಕ್ಕಿಯೊಂದು ಸಣ್ಣಗಂಟಲಿನಲ್ಲಿ ಚಿವ್‍ಗುಟ್ಟುವುದಕ್ಕೆ ಇಂತಿಷ್ಟೇ ಕಾಲ ಎಂಬುದಿಲ್ಲ. ಏಕೆಂದರೆ ಕಾಲವೆಂಬುದು ನಿರ್ಗುಣ.

ಈ ಎಲ್ಲವನ್ನೂ ನೆನೆಯುವಾಗ ಬರವಣಿಗೆಯೇ ನನ್ನ ಅಸಲಿ “ಮಾರ್ಗ” ಎಂದು ನಂಬಿರುವಂತೆ ಬರೆಯುವ ಕೆಲವೇ ಕೆಲವು ಈ ತಲೆಮಾರಿನ ಬರಹಗಾರರಲ್ಲಿ ಕಾವ್ಯ ಕಡಮೆ ಕೂಡ ಒಬ್ಬರು. ತನ್ನ ಅಸ್ಥಿತ್ವದ ಅಗತ್ಯವೇ ಇಲ್ಲ ಎನ್ನುವಂತೆ ಬದುಕುವ, ದೇಶದ ಯಾವುದೇ ಜ್ವಲಂತ ಸಮಸ್ಯೆಗೂ ಪ್ರತಿಯಾಗಿ ಯಾವುದೆ ರೂಪದಲ್ಲೂ ಸ್ಪಂದಿಸದ ಇವರು ಕೆಲವೊಮ್ಮೆ ಅಸೂಕ್ಷ್ಮ ಎನಿಸುತ್ತಾರೆ. ಆದರೆ, ಎಷ್ಟೋ ದಿನಗಳ ನಂತರ ಇವರು ಬರೆದ ಒಂದು ಪದ್ಯವನ್ನೋ, ಕತೆಯನ್ನೋ ಓದಿದಾಗ ಮಾತ್ರ ಜುಮ್ಮೆನಿಸುತ್ತದೆ. ನಮ್ಮ ಎಣಿಕೆಗಳೆಲ್ಲ ಬೋರಲು ಮಲಗಿಬಿಡುತ್ತವೆ.

ಈ ಬಗೆಯವರು ಯಾವುದೇ ಸಮಸ್ಯೆಗಳಿಗೂ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಒನ್‍ಲೈನ್ ಸ್ಟೇಟ್ ನೀಡುವ ವಾಚಾಳಿಗಳಾಗುವುದಿಲ್ಲ. ಲೋಕದ ಸಮಸ್ಯೆಗಳನ್ನು ತನ್ನದೇ ಎನ್ನುವಂತೆ ಧ್ಯಾನಿಸುತ್ತ, ಅದಕ್ಕೊಂದು ಮದ್ದು ದೊರಕಿಸಿಬಿಡುವ ಸಹಜ ಅಕ್ಷರವೈದ್ಯರಂತೆ ಅವರ ಕಾವ್ಯ ಹಾಗೂ ಕತೆಗಳಲ್ಲಿ ಪ್ರತ್ಯಕ್ಷರಾಗಿಬಿಡುತ್ತಾರೆ. ಅದು “ಮಾರ್ಗ”ವನ್ನು ಇವರು ಆಯ್ಕೆ ಮಾಡಿಕೊಳ್ಳದೆ “ಮಾರ್ಗ”ವೇ ಇವರನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಪುರಾವೆಯನ್ನು ಒದಗಿಸುವ ದಿವ್ಯಸ್ಥಿತಿ.

ಕಾವ್ಯ ಕಡಮೆಯ “ಡೋರ್ – 8” ಎಂಬ ನಾಟಕವನ್ನು ಓದುವಾಗಲೂ ಓರ್ವ ಓದುಗನಾಗಿ ಆ ಎಲ್ಲಾ ತಳಮಳಗಳನ್ನು ನನ್ನದೇ ರೀತಿಯಲ್ಲಿ ಅನುಭವಿಸಿದ್ದೇನೆ. ಕಾವ್ಯ ಈ ನಾಟಕದಲ್ಲಿ ಶೋಧಿಸಲು ಯತ್ನಿಸುತ್ತಿರುವ ವಿಷಯಗಳು ಅದೆಷ್ಟು ಸೂಕ್ಷ್ಮವಾದದ್ದು ಎನ್ನುವುದನ್ನು ಈ ಕ್ಷಣಕ್ಕೂ ಪ್ರಶ್ನಿಸಿಕೊಳ್ಳುತ್ತಿದ್ದೇನೆ.

ಈ ಇಡೀ ನಾಟಕದಲ್ಲಿ ಕೇಳಿ ಬರುವುದು ಮೂರೇ ಹೆಸರುಗಳಾದರೂ, ಪಾತ್ರಗಳು ಮಾತ್ರ ಎರಡೇ. ಕೃಷ್ಣ ಮತ್ತು ಅರ್ಜುನ. ಪುರಾಣದ ಕೃಷ್ಣಾರ್ಜುನರನ್ನು ಹೋಲುವ ಉಡುಗೆಯ ಇಬ್ಬರು ಸಿನೆಮಾ ಹಾಗೂ ನಾಟಕದ ವಿಚಾರವಾಗಿ ವೇಷ ತೊಟ್ಟವರು. ಇದು ಆ ಎರಡು ಪಾತ್ರಗಳ ಒಂದು ಚಹರೆಯಷ್ಟೇ. ಆದರೆ ಪುರಾಣದ ಕೃಷ್ಣಾರ್ಜುನರ ವೇಷತೊಟ್ಟ ಆ ಎರಡೂ ಪಾತ್ರಗಳು ನಾಟಕದುದ್ದಕ್ಕೂ ತೆರೆದಿಡುವ ಲೋಕಗಳು ಮಾತ್ರ ಲೌಕಿಕ ಬದುಕಿನದು.

ಒಂದು ಪಾತ್ರದ ಮೂಲಕ ತನ್ನ ಅನುಮಾನ ಹಾಗೂ ಪ್ರಶ್ನೆಗಳನ್ನು ಎದುರಿಟ್ಟು, ಮತ್ತೊಂದು ಪಾತ್ರದ ಮೂಲಕ ತಾನು ಕಂಡುಕೊಂಡ ಅಥವಾ ಶೋಧಿಸಲು ಸಾಧ್ಯವಾದ ಉತ್ತರಗಳನ್ನು ಸಮೀಕರಿಸುತ್ತ ಕಾವ್ಯ ಕಡಮೆ ಜಗತ್ತಿನೊಂದಿಗೆ ತಮ್ಮದೇ ರೀತಿಯಲ್ಲಿ ಸಂವಾದಿಸುತ್ತಾರೆ. ಮೇಲ್ಪದರಲ್ಲಿ ಇದೊಂದು ಸಹಜ ಸಂಭಾಷಣೆಯ ಲಘುವಾದ ನಾಟಕ ಎನಿಸಿದರೂ, ಆಳದಲ್ಲಿ ಇದು ಕೇಳಲು ಯತ್ನಿಸುತ್ತಿರುವ ಪ್ರಶ್ನೆ ಮಾತ್ರ ಗಂಭೀರವಾದದ್ದು.

ವಾಸಂತಿಚಾಳ್ ಎನ್ನುವ ಕೋಳಿಗೂಡಿನಂತಹ ಸಣ್ಣಸಣ್ಣ ಮನೆಗಳ ವಠಾರದ ಒಂದು ಸಣ್ಣ ಮನೆ ಡೋರ್ – 8. ಆ ಮನೆಯ ನಿವಾಸಿಯಾಗಿರುವ ಕೃಷ್ಣನ ಮನೆಗೆ, ಡೋರ್ ನಂಬರ್ – 7ರ ಅರ್ಜುನನ ಹೆಂಡತಿ ಪರಿಮಳ ಮನೆಯ ಕೀಲಿ ಕೈ ನೀಡುವಲ್ಲಿಗೆ ದೃಶ್ಯವೊಂದು ನಾಟಕೀಯತೆಯನ್ನು ಪಡೆದುಕೊಳ್ಳುತ್ತದೆ. ಪರಿಮಳ ನೀಡುವ ಕೀಲಿ ಕೈ ಕೇವಲ ಅವಳೊಬ್ಬಳ ಮನೆಯದಾಗದೆ, ಬಹುತೇಕರು ಇದುವರೆಗೂ ತೆಗೆದು ನೋಡದ ಬದುಕಿನ ಭಾಗ್ಯನಿಧಿಯನ್ನು ಉದುಗಿಸಿಟ್ಟಿರುವ ಆಜ್ಞಾತಕೋಣೆಯ ಕೀಲಿ ಎನಿಸಿಬಿಡುತ್ತದೆ. ಸಶಕ್ತ ರೂಪಕವಾಗಿ ನಾಟಕಕ್ಕೆ ಚಾಲಕ ಶಕ್ತಿಯನ್ನು ಓದಗಿಸುವ ಇಂಧನವಾಗುತ್ತದೆ.

***

ಕಾವ್ಯ ಕಡಮೆ ಈ ಇಬ್ಬರು ಬಣ್ಣ ಹಚ್ಚುವ ಕಲಾವಿದರನ್ನು ನಾಟಕದ ಪಾತ್ರಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಪೂರ್ವ ನಿರ್ಣಯ ಎನಿಸುವುದಿಲ್ಲ. ಏಕೆಂದರೆ ಪ್ರತಿ ಹಂತದಲ್ಲೂ ಮನುಷ್ಯನೊಬ್ಬ ತಲುಪಬಹುದಾದ ಬಹುಮುಖ್ಯ ಘಟ್ಟಗಳನ್ನು ಈ ನಾಟಕದ ಕೃಷ್ಣ ಮತ್ತು ಅರ್ಜುನರು ಬೆಂಗಳೂರಿನ ವಾಸಂತಿಚಾಳ್‍ನ ಪುಟಾಣಿ ಕೋಣೆಯಾದ ಡೋರ್ ನಂ – 8 ರಲ್ಲಿ ನಿಂತೇ ತಲುಪುತ್ತಿರುತ್ತಾರೆ. ನಿತ್ಯದ ಬದುಕಿನಲ್ಲಿ ನಾವೆಲ್ಲರೂ ಸಂದರ್ಭಕ್ಕೆ ಅನುಗುಣವಾಗಿ ಬದಲಿಸುತ್ತಲೇ ಇರುವ ಪಾತ್ರಗಳನ್ನು ಸೂಚ್ಯವಾಗಿ ತೋರುವ ವಾಹಕವಾಗಿ ಆ ಇಬ್ಬರೂ ಗೋಚರಿಸುತ್ತಾರೆ.

ಸಾಹಿತ್ಯದ ಯಾವುದೇ ಪ್ರಕಾರದಲ್ಲೂ ಘಟನೆಯೊಂದು ನಾಟಕೀಯ ತಿರುವು ತೆಗದುಕೊಳ್ಳುವುದು ಕೃತಿಯ ಓಘವನ್ನ ನಿಯಂತ್ರಿಸಿದೆ ವೇಗಕ್ಕೆ ಅನುಗುಣವಾಗಿ ನಿಲ್ಲುತ್ತದೆ. ಇಂತಹ ನಾಟಕೀಯ ತಿರುವಿನ ಕುರಿತು ಈಗ ಯೋಚಿಸಿದರೆ, ನನಗೆ ರಷ್ಯಾದ ಲೇಖಕ ಟಾಲ್‍ಸ್ಟಾಯ್ ನೆನಪಾಗುವಂತೆ, ಶಿವರಾಮ ಕಾರಂತರೂ ನೆನಪಾಗುತ್ತಾರೆ. ಟಾಲ್‍ಸ್ಟಾಯ್ ಬರೆದ “ಫಾದರ್ ಸೆರ್ಗಿಯಸ್” ನೀಳ್ಗತೆಯಲ್ಲಿ, ಕತೆ ಆರಂಭವಾಗುವುದು ರಾಜಕುಮಾರಿಯನ್ನು ಮದುವೆಯಾಗಬೇಕು ಎಂದು ತೀರ್ಮಾನಿಸಿಕೊಂಡಿದ್ದ ಸೈನಿಕನೊಬ್ಬ, ಮೊನೆಸ್ಟರಿಗೆ ಸೇರಿ ಸನ್ಯಾಸಿಯಾಗಲು ಹೊರಟುಬಿಡುತ್ತಾನೆ. ಇನ್ನು ಶಿವರಾಮ ಕಾರಂತರ ಚೋಮನ ಕೈನಿಂದ ಉರುಳಿಬಿಳುವ ದುಡಿಯೊಂದಿಗೆ ಕಾದಂಬರಿ ಕೊನೆಯಾದರೂ, ಅದೊಂದು ಘಟ್ಟ ಓದುಗನೊಳಗೆ ಬೆಳೆಯುತ್ತಲೇ ಇರುತ್ತದೆ. ಬಹುಶಃ ಅದೊಂದು ನಿರಂತರ ಪ್ರಕ್ರಿಯೆಯೂ ಇರಬಹುದು.

ಕಾವ್ಯ ಕಡಮೆಯ ಈ ನಾಟಕದಲ್ಲೂ ನಾಟಕೀಯ ಗುಣಗಳನ್ನು ಮೈದಾಳಿದ ಸನ್ನಿವೇಶಗಳಿಗೆ. ನಾಟಕದಲ್ಲಿ ಕೃಷ್ಣಾರ್ಜುನರು ಸೀರೆಯನ್ನುಡುವ ಒಂದು ಪ್ರಸಂಗವಿದೆ. ಓರ್ವ ಓದುಗನಾಗಿ ಹೇಳುವುದಾದರೆ, ಅದೊಂದು ಪ್ರಸಂಗ, ನಾಟಕದ ಕೇಂದ್ರಬಿಂದು. ಮೊದಲು ಸೀರೆಯನ್ನುಟ್ಟ ಕೃಷ್ಣನನ್ನ ಅರ್ಜುನ ಕಿಚಾಯಿಸುತ್ತಾನೆ. ಆದರೆ ಕೃಷ್ಣ ಧೃತಿಗೆಡದೆ ಅರ್ಜುನನಿಗೆ ಹೇಳುವ ಮಾತು ಇಷ್ಟೇ.

“ಯಾಕೆ ಹೇಳು? ನೂರಾರು ಉಡುಪುಗಳಂತೆಯೇ ಈ ಸೀರೇನೂ ಒಂದು ಉಡುಪು ಅಷ್ಟೇ ಅಲ್ವೇನಯ್ಯಾ? ಅದಕ್ಯಾಕೆ ಹೆಣ್ತನವನ್ನ ಕಟ್ಟುಹಾಕಿದೀವಿ ನಾವು? ನಮ್ಮ ಕೈಗಳನ್ನೇ ಬೇಡಿಗಳಲ್ಲಿಟ್ಟುಕೊಂಡು ಇನ್ನೊಬ್ಬರ ಬೇಡಿಗಳನ್ನ ಹೇಗಯ್ಯ ಬಿಡಿಸೋಕೆ ಸಾಧ್ಯ?

ಇದೊಂದು ಮಾತು ಕೃತಿಯೊಳಗಿನ ಪಾತ್ರವಾದ ಕೃಷ್ಣನ ಮಾತಿನಂತೆ, ಕೃತಿಯನ್ನು ಹೊರಗೆ ನಿಂತು ಸೃಜಿಸುತ್ತಿರುವ ಕಾವ್ಯ ಕಡಮೆಯ ಮಾತೂ ಹೌದು. ಕಾವ್ಯ ಅದೊಂದು ಸಾಲಿನ ಮೂಲಕ ಹೆಣ್ಣಿನ ಅಂತರ್ಗತ ದನಿಯಾಗಿಯೂ ಗೋಚರಿಸುತ್ತಾರೆ. ನಾನು ಈ ಮೊದಲು ಕೆಲವು ಲೇಖಕರು ಯಾವುದೇ ಸಮಸ್ಯೆಗಳು ಜ್ವಲಂತ ಎನಿಸುವಷ್ಟು ಧೈತ್ಯವಾಗುತ್ತಿದಾಗಲೂ ಸಂವೇದನೆಯುಳ್ಳ ವ್ಯಕ್ತಿಗಳಾಗಿ ಸ್ಪಂದಿಸದೇ ಅಸೂಕ್ಷ್ಮರು ಎನಿಸುತ್ತಾರೆ ಮತ್ತು ಮುಂದೆಂದೋ ತಾವು ಬರೆಯುವ ಕೃತಿಗಳಲ್ಲಿ ತಮ್ಮದೇ ರೀತಿಯಲ್ಲಿ ನಾವು ಎಣಿಸಿದ್ದ ಸಮಸ್ಯೆಗಳನ್ನು ತಮ್ಮದೇ ರೀತಿಯಲ್ಲಿ ಬಿಡಿಸಲು ಯತ್ನಿಸಿ ನಮ್ಮ ಆಲೋಚನೆಗಳನ್ನು ಬೋರಲು ಮಲಗಿಸುತ್ತಾರೆ ಎಂದಿದ್ದು ಇದೇ ಅರ್ಥದಲ್ಲಿ.
ಇದೇ ಪ್ರಸಂಗವನ್ನು ಮತ್ತೊಂದು ಆಯಾಮದಿಂದಲೂ ನೋಡುವ ಸಾಧ್ಯತೆಯಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಇದನ್ನು ಸಾರ್ವತ್ರಿಕಗೊಳಿಸದೇ ನನ್ನ ವಯಕ್ತಿಕ ಮಾತು ಎನ್ನುವಂತೆ ಹೇಳುತ್ತೇನೆ. ಕೃಷ್ಣನ ಒತ್ತಾಯಕ್ಕೆ ಅರ್ಜುನ ಸೀರೆಯನ್ನು ತೊಡುವ ಮೊದಲು ಅಂಗಿಸುತ್ತಾನೆ.

“ತಮಾಷೆಯಾಗಿದೆ ನೀವು ಹೇಳೋದು! ಸೀರೆ ಉಟ್ಕೊಂಡು ಬಿಟ್ರೆ ನನ್ನ ಹೆಂಡತೀನ ನಾನು ಅರ್ಥ ಮಾಡಿಕೊಂಡು ಬಿಡೋಕಾಗುತ್ತೆ ಅಂತ ನೀವು ಹೇಳ್ತಿರೋದಾ?” ಆದರೆ ಈ ವ್ಯಂಗ್ಯದೊಳಗೆ ಸತ್ಯವೂ ಇದೆ. ಇಲ್ಲಿ ಅರ್ಜುನ ಸೀರೆ ತೊಟ್ಟರೆ ಹೆಂಡತಿಯನ್ನು ಅರ್ಥ ಮಾಡಿಕೊಳ್ಳಬಹುದು ಎನ್ನುವುದನ್ನು ವಾಚ್ಯಾರ್ಥಕ್ಕಿಳಿಸದೆ ಸಾಮಾನ್ಯವಾಗಿ ಯೋಚಿಸಿದರೂ ಹೌದು ಎನಿಸುತ್ತದೆ.

ಹೆಣ್ಣೊಬ್ಬಳ ಆಲೋಚನೆಗಳನ್ನು ಅವಳದೇ ಸ್ತರದಲ್ಲಿ ನಿಂತು ಕಾಣುವುದು ಸಾಧ್ಯವಾದರೆ ಮಾತ್ರವೇ ಆಕೆಯ ಹೇಳಿಕೆಯಲ್ಲಿ ವಾಸ್ತಾಂಶಗಳನ್ನು ಗ್ರಹಿಸಲು ಸಾಧ್ಯ ಎನಿಸುತ್ತದೆ. ನಾಟಕದ ಆರಂಭದಲ್ಲಿ ಕೃಷ್ಣ ಹಳೆಯ ಮನೆಯಲ್ಲಿ ಕೂತು ಕೊಳಲನ್ನು ನುಡಿಸುತ್ತಿರುವ ಸದ್ದು ಕೇಳಿಬರುತ್ತದೆ, ಆದರೆ ನಾಟಕದ ಅಂತ್ಯವಾಗುವುದು ಅದೇ ಹಳೆಯ ಮನೆಯಲ್ಲಿ ಕೊಳಲನ್ನು ನುಡಿಸುವ ಸದ್ದಿನೊಂದಿಗೆ. ವ್ಯತ್ಯಾಸವೆಂದರೆ ನಾಟಕ ಅಂತ್ಯದಲ್ಲಿ ಕೊಳಲನ್ನು ಅರ್ಜುನ ನುಡಿಸುತ್ತಿರುತ್ತಾನೆ. ಈ ಎಲ್ಲವನ್ನ ಕೇವಲ ಹೇಳಿಕೆಯಂತೆ ಹೇಳಿಮುಗಿಸಿದೆ ಇನ್ನಷ್ಟು ತಾರ್ತಿಕವಾಗಿ ನೋಡಬೇಕಾದ, ಎಚ್ಚರದಿಂದ ಗಮನಿಸಬೇಕಾದ ಅಗತ್ಯವಿದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ.

ಈ ಎಲ್ಲದರ ನಡುವೆಯೂ ನಾಟಕದ ಬಗ್ಗೆ ನನಗೆ ನನ್ನದೇ ಒಂದಿಷ್ಟು ತಕರಾರುಗಳಿವೆ, ಆದರೆ ಆ ಎಲ್ಲವನ್ನೂ
ಮರುಓದಿನ ಸಮಯದಲ್ಲಿ ಶಮನ ಮಾಡಿಕೊಳ್ಳಬಹುದು ಎನ್ನುವ ನಂಬಿಕೆಯನ್ನು ಹೊಂದಿದ್ದೇನೆ. ಸಾಹಿತ್ಯದ ಓದುಗನಾಗಿ ಇದೊಂದು ಪ್ರಶ್ನೆಯೊಂದಿಗೆ ಆಗಾಗ ಬಡಿದಾಡುತ್ತಲೇ ಇರುತ್ತೇನೆ.

ಈ ನಡುವೆ ಬರೆಯುತ್ತಿರುವ ಯಾವ ಲೇಖಕರ ಉತ್ತಮ ಎನಿಸುವ ಕೃತಿಗಳು ಕೂಡ ಗಂಭೀರವಾದ ಸಾಹಿತ್ಯ ವಿಮರ್ಶೆಗೆ ಒಳಗಾಗುತ್ತಿಲ್ಲ. ಎಷ್ಟೋ ಕೃತಿಗಳು ಕೇವಲ ಪುಸ್ತಕ ಬಿಡುಗೆಯ ದಿನದ ಲಘು ಉಪಹಾರದಷ್ಟೇ ಸಲೀಸಾಗಿ ಪ್ರೀತಿಪಾತ್ರರ ಕಪಾಟಿನಲ್ಲಿ ಬೆಚ್ಚಗಿರುತ್ತವೆ. ಅದೊಂದು ಕಾವ್ಯ ಕಡಮೆಯ ಈ ಹಿಂದಿನ ಎರಡು ಕವನ ಸಂಕಲನ ಮತ್ತು ಒಂದು ಕಾದಂಬರಿಯನ್ನು ಓದಿದರೆ ಒಂದಿಷ್ಟಾದರೂ ಅವರ ಆಲೋಚನ ಕ್ರಮದ ಅರಿವಾಗಬಹುದು. ಕಾವ್ಯ, ಎಂದಿಗೂ ತನ್ನ ಮಾತನ್ನು ಗಂಟಲಿನಿಂದ ಹೊರಡಿಸುವ ಸಹಜ ಸದ್ದು ಎನ್ನುವಂತೆ ಹೊರಡಿಸದೆ, ಇದನ್ನೂ ನೀವು ಕೇಳಲೆಬೇಕು ಎನ್ನುವಂತೆ ಮುಂದಿಡುತ್ತಾರೆ. ಈ ದೃಷ್ಠಿಯಿಂದಾದರೂ ಕಾವ್ಯರ ಕೃತಿಗಳು ವಿಮರ್ಶೆಗೆ ಒಳಗಾಗಬೇಕು.

ಕೇವಲ ಪ್ರತಿಕ್ರಿಯೆ ಎನಿಸುವಂತಹ ಕಾವ್ಯಗಳು, ಲೇಖನ ಹಾಗೂ ಕತೆಗಳೇ ಹೆಚ್ಚು ಬರುತ್ತಿರುವ ಇವತ್ತಿನ ಸಂದರ್ಭದಲ್ಲಿ ತಮ್ಮದೇ ರೀತಿಂiÀiಲ್ಲಿ ಉತ್ತರಿಸುವವರು ಬರವಣಿಗೆ ಮುಖ್ಯವಾಗುತ್ತದೆ. ಹಾಗೊಂದು ವೇಳೆ ಕೇವಲ ಪ್ರತಿಕ್ರಿಯೆ ಎನಿಸುವಂತಹ ಕಾವ್ಯಗಳನ್ನೋ, ಕೃತಿಗಳನ್ನೋ ರಚಿಸಿದರೆ ಅದು ಅಪೌಷ್ಠಿಕತೆಯಲ್ಲಿ ನರಳಿ ಸಾಯುವ ಶಿಶುವಿನಂತಾಗಿಬಿಡುವ ಅಪಾಯವಿದೆ.

ಬರೆದ ಕಾವ್ಯವೂ ಕೂಡ ಪ್ರತಿಕ್ರಿಯೆ ನೀಡಿದ ಪ್ರಕರಣ ತಣ್ಣಗಾದ ಮರುಕ್ಷಣವೇ ಜೀವ ತ್ಯಜಿಸಬೇಕಾಗುತ್ತದೆ. ಆದರೆ ನಿಜವಾಗಲೂ ಲೋಕದ ಸಮಸ್ಯೆ ಲೇಖಕನದೂ ಆದರೆ ಮಾತ್ರವೇ ಸಾರ್ವಕಾಲಿಕ ಎನಿಸುವ ಕೃತಿಯನ್ನು ಸಹಜವಾಗಿ ಸೃಜಿಸಲು ಸಾಧ್ಯವಾಗಬಹುದು. ಅದು, ನನಗೆ ಮಾತನಾಡಲು ನನ್ನದೇ ಮಾರ್ಗವಿದೆ ಎನ್ನುವುದನ್ನು ಗಾಢವಾಗಿ ಒಪ್ಪಿಕೊಂಡಿರುವ ಗುಣ. ಇದೇ ಹಾದಿಯಲ್ಲಿ ಕಾವ್ಯ ಕಡಮೆ ಕೂಡ ಇದ್ದಾರೆ ಎನ್ನುವುದು ನನ್ನ ಭರವಸೆ.

ಕಡೆಯದಾಗಿ: ಲ್ಯಾಟಿನ್ ಅಮೇರಿಕಾದ ದೇಶಗಳು ಅಧಃಪತನ ಕಾಣುತ್ತಿರುವುದಕ್ಕೆ ಪ್ರಭುತ್ವದ ಮೌನವೇ ಕಾರಣ ಎಂದು ಕವಿ ಅಕ್ಟೋವಿಯಾ ಪಾಝ್ ವಾದಿಸಿದ್ದ. ಸರ್ಕಾರವನ್ನ ಸಾಮಾನ್ಯನೂ ಕೂಡ ಬಿಡುಗಣ್ಣಿನಿಂದ ನೋಡಬೇಕು, ಪ್ರಶ್ನಿಸಬೇಕು, ಸರ್ಕಾರದ ಹಾದಿ ಪ್ರಜೆಗೆ ಒಳಿತಾಗಿದ್ದರೆ ಮೆಚ್ಚಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿನ ಮನುಷ್ಯನೊಬ್ಬ ಸರ್ಕಾರವನ್ನ ವಿಮರ್ಶಿಸಲು ಸೋತರೆ, ಸೋಲುವುದು ಸರ್ಕಾರವಲ್ಲ ಪ್ರಜಾಪ್ರತುತ್ವ ಎಂದಿದ್ದ.

ಅಕ್ಟೋವಿಯಾ ಪಾಝ್‍ನ ಈ ಮಾತಗಳನ್ನು ಈಗಲೂ ಅನ್ವಯಮಾಡಿಕೊಳ್ಳಬಹುದು. ವಿಮರ್ಶೆಯನ್ನು ಒಪ್ಪದವರು ಎಲ್ಲಾ ಕಾಲದಲ್ಲೂ ಇದ್ದಾರೆ. ಕೆಲ ದಿನಗಳ ಹಿಂದೆ, ಹೊಸದಾಗಿ ಬರೆಯುತ್ತಿರುವ ಕಥೆಗಾರರೊಬ್ಬರು ಹಿರಿಯ ಲೇಖಕರಿಂದ ಅವರ ನೂತನ ಕಾದಂಬರಿಗೆ ಮುನ್ನುಡಿಯನ್ನು ಬರೆಯಲು ನೀಡಿದ್ದರು. ಹಿರಿಯ ಲೇಖಕರು ಒಂದಿಷ್ಟು ದಿನಗಳ ನಂತರ, ಆ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದುಕೊಟ್ಟರು. ಹಿರಿಯ ಲೇಖಕರು ಬರೆದ ಮುನ್ನುಡಿಯನ್ನು ಈ ಹೊಸ ಲೇಖಕರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ತಿರಸ್ಕರಿಸಿ, ಮತ್ತೊಬ್ಬರಿಂದ ಅದೇ ಪುಸ್ತಕಕ್ಕೆ ಮುನ್ನುಡಿಯನ್ನು ಬರೆಸಿದ ನಂತರ ಪುಸ್ತಕ ಪ್ರಕಟಸಿದರು.

ಇದು ಬಹಳ ಅಪಾಯದ ನಡಿಗೆ. ಓರ್ವ ಲೇಖಕ ಒಂದು ಸಣ್ಣ ವಿಮರ್ಶೆಯನ್ನು ಎದುರಿಸಲು ಸಾಧ್ಯವಾಗದೇ ಹೋಗಿದ್ದು ದುರಂತ ಎನಿಸಿತು. ತನ್ನ ಬರವಣಿಯನ್ನು ತಾನೇ ಆತ್ಮಪ್ರಶಂಸೆ ಮಾಡಿಕೊಳ್ಳುವ ನಿರ್ಗತಿಕ ಗುಣ ಹೊಂದಿದವರಷ್ಟೇ ಇಂತಹ ನಿರ್ಣಯಗಳನ್ನು ಮಾಡಬಲ್ಲರು. ಬರೆಯಲೇ ಬೇಕು ಎನ್ನುವ ನಮ್ಮ ಪ್ರಮಾಣಿಕತೆ ಆಳದಿಂದ ಚಿಮ್ಮದೇ ಹೋದರೆ ಬರೆಯುವುದು ಅನಿವಾರ್ಯವಲ್ಲ. ಏಕೆಂದರೆ ¨ರವಣಿಗೆ ಎನ್ನುವುದು ಮೂಲದಲ್ಲಿ ಪ್ರತಿಭೆಯಲ್ಲ, ಅದೊಂದು ಸೃಷ್ಠಿಸಹಜ ಮಾರ್ಗ.

ಈ ಕೃತಿಗೆ ಯಾವುದೇ ವಿಮರ್ಶೆಗಳು ಎದುರಾದರೂ ನಿರ್ಲಿಪ್ತವಾಗಿ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸುವ ಪ್ರಾಮಾಣಿಕತೆಯನ್ನ ಕಾವ್ಯ ತೋರಬಲ್ಲರು ಎಂದು ನಂಬಿದ್ದೇನೆ. ಅಷ್ಟೇ. ಈ ನಾಟಕ ಆದಷ್ಟು ಬೇಗ ರಂಗಕ್ಕೇರಲಿ ಎಂದು ಹಾರೈಸುತ್ತೇನೆ.

‍ಲೇಖಕರು avadhi

October 29, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

4 ಪ್ರತಿಕ್ರಿಯೆಗಳು

  1. Ahalya Ballal

    ಕಾವ್ಯಾಳ ಕವನಗಳನ್ನು ಅಲ್ಲಿ ಇಲ್ಲಿ ಓದಿ ಬೆರಗುಗೊಂಡು, ಇನ್ನಷ್ಟು ಓದಬೇಕು ಹೇಗೆ ಅಂದುಕೊಳ್ತಾ ಇದ್ದೆ. ನಿಮ್ಮ ಲೇಖನ ತುಂಬ ಇಷ್ಟವಾಯ್ತು. ಖುಶಿಯಾಗ್ತಿದೆ.

    ಪ್ರತಿಕ್ರಿಯೆ
  2. chandra aithal

    ರಂಗಪ್ರದರ್ಶನಕ್ಕಾಗಿ ಈ ನಾಟಕ ಸಿಕ್ಕೀತೆ?
    ಚಂದ್ರ ಐತಾಳ

    ಪ್ರತಿಕ್ರಿಯೆ
  3. Chinmay Hegde

    ತುಂಬಾ ಅಚ್ಚುಕಟ್ಟಾದ ಮತ್ತು ಪರಿಣಾಮಕಾರಿಯಾದ ಕೃತಿ ಪರಿಚಯ…

    ಪ್ರತಿಕ್ರಿಯೆ
  4. sandeep eshanya

    ಸರ್, ಒಮ್ಮೆ ಕಾವ್ಯ ಕಡಮೆ ಅವರನ್ನ ಸಂಪರ್ಕ ಮಾಡಿ. ಅವರು ಅನುಮತಿ ನೀಡಬಹುದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: