ವಿಶ್ವನಾಥ ಎನ್ ನೇರಳಕಟ್ಟೆ ಓದಿದ ‘ಯು ಕ್ಯಾನ್ ಹೀಲ್ ಯುವರ್ ಲೈಫ್’

ವಿಶ್ವನಾಥ ಎನ್ ನೇರಳಕಟ್ಟೆ

ಇತ್ತೀಚೆಗೆ ಲೂಯೀಸ್ ಎಲ್ ಹೇ ಅನ್ನುವ ಅಮೇರಿಕನ್ ಬರಹಗಾರ್ತಿಯ ‘ಯು ಕ್ಯಾನ್ ಹೀಲ್ ಯುವರ್ ಲೈಫ್’ ಪುಸ್ತಕವನ್ನು ಓದುವ ಅವಕಾಶ ಒದಗಿಬಂತು. ಮೊದಲಿಗೆ ನನ್ನಲ್ಲಿ ಅಚ್ಚರಿ ಮೂಡಿಸಿದ್ದು ಪುಸ್ತಕದ ಶೀರ್ಷಿಕೆ. ಕನ್ನಡಕ್ಕೆ ಅನುವಾದಿಸಿದರೆ ಬರುವ ಅರ್ಥ- ನಾವು ನಮ್ಮ ಬದುಕನ್ನು ಗುಣಪಡಿಸಿಕೊಳ್ಳಬಹುದು. ಬದುಕಿಗೆ ಖಾಯಿಲೆ ಬರುತ್ತದಾ? ಅದೇನು ಮನುಷ್ಯಾನಾ ಖಾಯಿಲೆ ಬರುವುದಕ್ಕೆ? ಬದುಕಿಗೆ ಬರುವ ಖಾಯಿಲೆಯನ್ನು ಗುಣಪಡಿಸುವುದಕ್ಕಾಗುತ್ತದಾ? ಗುಣಪಡಿಸುವುದು ಹೇಗೆ? ಅಂತೆಲ್ಲಾ ಯೋಚನೆ ಮಾಡುತ್ತಲೇ ಲೂಯೀಸ್ ಅವರ ಪರಿಚಯ ನೋಡಿದರೆ ಅವರ ಜೀವನದ ಕರಾಳ ಅಧ್ಯಾಯ ಕಣ್ಣೆದುರು ತೆರೆದುಕೊಂಡಿತು. ಅವರು ೧೮ ತಿಂಗಳ ಮಗುವಾಗಿದ್ದಾಗ ಅವರ ಅಪ್ಪ ಅಮ್ಮ ಡಿವೋರ್ಸ್ ತೆಗೆದುಕೊಳ್ಳುತ್ತಾರೆ. ತಾಯಿಯ ಜೊತೆಗೆ ಬೆಳೆಯುತ್ತಿದ್ದ ಲೂಯೀಸ್ ಅವರಿಗೆ ಐದು ವರ್ಷ ಇದ್ದಾಗ ಅವರ ಪಕ್ಕದ ಮನೆಯ ಒಬ್ಬ ವ್ಯಕ್ತಿ ಅವರನ್ನು ರೇಪ್ ಮಾಡುತ್ತಾರೆ. ಆ ವ್ಯಕ್ತಿಗೆ ೧೫ ವರ್ಷಗಳ ಜೈಲು ಶಿಕ್ಷೆಯಾಗುತ್ತದೆ. ಐದು ವರ್ಷದ ವಯಸ್ಸಿನ ಲೂಯೀಸ್ ಅವರದ್ದು ಏನು ತಪ್ಪಿಲ್ಲದಿದ್ದರೂ ತಪ್ಪು ಎಂದು ಕೆಲವರು ಹೇಳತೊಡಗುತ್ತಾರೆ. ತನ್ನದ್ದೇನೋ ತಪ್ಪಿದೆ ಎನ್ನುವ ಭಾವನೆಯಲ್ಲಿಯೇ ಲೂಯೀಸ್ ತಮ್ಮ ಬಾಲ್ಯವನ್ನು ಕಳೆಯುವಂತಾಗುತ್ತದೆ.

ಚಿಕ್ಕ ವಯಸ್ಸಿನ ಹುಡುಗಿ ಲೂಯೀಸ್ ಅದೆಷ್ಟು ಅವಮಾನ ಅನುಭವಿಸಿದ್ದರು ಎನ್ನುವುದಕ್ಕೆ ಅವರ ಶಾಲೆಯಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ನಾಲ್ಕನೇ ತರಗತಿಯಲ್ಲಿದ್ದಾಗ ನಡೆದ ಘಟನೆಯಿದು. ಶಾಲೆಯಲ್ಲಿ ಪಾರ್ಟಿ ಇತ್ತು. ಮಕ್ಕಳಿಗೆ ಕೊಡುವುದಕ್ಕೆಂದೇ ಕೇಕ್ ತರಲಾಗಿತ್ತು. ಕೇಕನ್ನು ಎಲ್ಲಾ ಮಕ್ಕಳಿಗೂ ಕೊಡುತ್ತಾ ಬಂದ ಟೀಚರ್ ಕೊನೆಗೆ ಬಂದುನಿಂತದ್ದು ಲೂಯೀಸ್ ಎದುರಿಗೆ. ಆಸೆಯಿಂದ ಕೇಕ್ ತೆಗೆದುಕೊಳ್ಳಲು ಹೊರಟ ಲೂಯೀಸ್‌ಗೆ ವಿಪರೀತ ನಿರಾಸೆ ಆಗುತ್ತದೆ. ಮಕ್ಕಳೆಲ್ಲಾ ಈಗಾಗಲೇ ಕೇಕ್ ತೆಗೆದುಕೊಂಡದ್ದರಿಂದ ಟೀಚರ್ ಕೈಯ್ಯಲ್ಲಿದ್ದ ಬಾಕ್ಸಿನಲ್ಲಿ ಒಂದು ತುಂಡೂ ಕೇಕ್ ಇರಲಿಲ್ಲ. ಲೂಯೀಸ್ ಎಲ್ಲರಿಗಿಂತಲೂ ಕಡಿಮೆ, ಅವರಿಗೆ ಏನನ್ನೂ ಪಡೆಯುವ ಯೋಗ್ಯತೆಯಿಲ್ಲ ಎನ್ನುವುದನ್ನು ಉಳಿದ ಮಕ್ಕಳು, ಶಿಕ್ಷಕರು ನಿರ್ಧರಿಸಿಯಾಗಿತ್ತು.

ಈ ರೀತಿಯ ಅವಮಾನ, ಸಮಸ್ಯೆಗಳನ್ನೇ ಅನುಭವಿಸಿದ ಲೂಯೀಸ್ ೧೫ ವರ್ಷವಾದಾಗ ಶಾಲೆ ಬಿಡುತ್ತಾರೆ. ಮನೆಯನ್ನೂ ಬಿಟ್ಟು, ಬೇರೆ ಊರಿಗೆ ಹೋಗಿ, ಯಾವುದೋ ಸಣ್ಣ ಪುಟ್ಟ ಕೆಲಸಗಳನ್ನು ಮಾಡಲಾರಂಭಿಸುತ್ತಾರೆ. ಈ ಸಮಯದಲ್ಲಿ ಅವರು ಬಯಸುತ್ತಿದ್ದದ್ದು ಪ್ರೀತಿಯನ್ನು. ಅವರ ಮನೆ, ಶಾಲೆ ಎಲ್ಲಿಯೂ ಕೂಡಾ ಅವರಿಗೆ ನಿಜವಾದ ಪ್ರೀತಿ ಸಿಕ್ಕಿರಲಿಲ್ಲ. ಮನೆ ಬಿಟ್ಟುಬಂದ ಲೂಯೀಸ್ ಅವರ ಮೇಲೆ ವ್ಯಕ್ತಿಯೊಬ್ಬರು ಪ್ರೀತಿ ತೋರಿಸುತ್ತಾರೆ. ೧೬ರ ಪ್ರಾಯದಲ್ಲಿ ಲೂಯೀಸ್ ಗರ್ಭಿಣ ಯಾಗಿ ಮಗುವನ್ನು ಹೆರುತ್ತಾರೆ. ಆದರೆ ಮಗುವನ್ನು ಸಾಕುವುದು ಸಾಧ್ಯವಿರಲಿಲ್ಲ. ಮಕ್ಕಳಿಲ್ಲದ ದಂಪತಿ ಮಗುವನ್ನು ದತ್ತು ತೆಗೆದುಕೊಳ್ಳುತ್ತಾರೆ. ಹೆತ್ತ ಮಗುವನ್ನು ಬೇರೆಯವರ ಕೈಯ್ಯಲ್ಲಿಟ್ಟು ಲೂಯೀಸ್ ಹೊರಟಾಗ ಮಗು ಹುಟ್ಟಿ ಐದು ದಿನ ಆಗಿತ್ತಷ್ಟೇ.

ಮತ್ತೆ ತನ್ನ ಊರಿಗೆ, ಮನೆಗೆ ಹೋದ ಲೂಯೀಸ್ ತಾಯಿ ನಡೆಸುತ್ತಿದ್ದ ಸಣ್ಣ ಹೋಟೆಲ್‌ನಲ್ಲಿ ಕೆಲಸ ಮಾಡತೊಡಗುತ್ತಾರೆ. ಇದೇ ಸಮಯದಲ್ಲಿ ಫ್ರೆಂಡ್ ಮನೆಗೆಂದು ಹೋದ ಲೂಯೀಸ್ ತಾಯಿ ಹಿಂದಿರುಗಿ ಬರುವುದೇ ಇಲ್ಲ. ತಾಯಿಯನ್ನು ಲೂಯೀಸ್ ಕಳೆದುಕೊಳ್ಳಬೇಕಾಗುತ್ತದೆ. ಈ ಸಮಯದಲ್ಲಿ ಲೂಯೀಸ್ ಅವರನ್ನು ಕಾಡಿದ್ದು ಚಿಕ್ಕ ಹುಡುಗಿಯಾಗಿದ್ದಾಗ ಅನುಭವಿಸಿದ ಹಿಂಸೆ ಮತ್ತು ನಾನು ಯಾವುದಕ್ಕೂ ಪ್ರಯೋಜನ ಇಲ್ಲ ಎಂಬ ಭಾವನೆ. ಇದರಿಂದಾಗಿ ಅವರ ಮನಃಸ್ಥಿತಿ ವಿಚಿತ್ರವಾಗುತ್ತದೆ. ಕೆಟ್ಟದಾಗಿ ನಡೆದುಕೊಳ್ಳುವ ಗಂಡಸರನ್ನೇ ಇಷ್ಟಪಡತೊಡಗುತ್ತಾರೆ. ಡಾಮಿನೇಟ್ ಆಗಿರುವ ಗಂಡಸರೊಂದಿಗೆ ಸಂಬಂಧ ಇಟ್ಟುಕೊಳ್ಳುತ್ತಾರೆ.

ಅಮೇರಿಕಾದ ಚಿಕಾಗೋದಲ್ಲಿ ಕೆಲವು ವರ್ಷ ಇದ್ದ ಲೂಯೀಸ್ ಫ್ಯಾಶನ್ ಮಾಡೆಲ್ ಆಗುವುದಕ್ಕಾಗಿ ನ್ಯೂಯಾರ್ಕಿಗೆ ಹೋಗುತ್ತಾರೆ. ಈ ಸಮಯದಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆ ಮಾಡಿಕೊಳ್ಳುತ್ತಾರೆ. ಬದುಕು ಚೆನ್ನಾಗಿದೆ ಎಂದುಕೊಳ್ಳುವಾಗಲೇ ಲೂಯೀಸ್ ಅವರ ಗಂಡ ಡಿವೋರ್ಸ್ ಕೊಡುತ್ತಾರೆ. ೧೪ ವರ್ಷಗಳ ಸಂಬಂಧ ಕೊನೆಗೊಳ್ಳುತ್ತದೆ. ಈಗ ಲೂಯೀಸ್ ಅವರ ಗಮನ ಹೋದದ್ದು ಧರ್ಮ, ದೇವರ ಕಡೆಗೆ. ನ್ಯೂಯಾರ್ಕಿನಲ್ಲಿದ್ದ ಚರ್ಚ್ ಆಫ್ ರಿಲೀಜಿಯಸ್ ಸೈನ್ಸ್ ಎನ್ನುವುದು ಲೂಯೀಸ್ ಅವರ ಹೊಸ ಮನೆಯಂತೆಯೇ ಆಗಿಬಿಡುತ್ತದೆ. ತತ್ತ್ವಶಾಸ್ತ್ರವನ್ನೂ ತಿಳಿದುಕೊಳ್ಳಲಾರಂಭಿಸುತ್ತಾರೆ. ಬದುಕನ್ನು ಅರ್ಥ ಮಾಡಿಕೊಳ್ಳುವ ಕಲೆಯನ್ನು ಕಲಿತುಕೊಳ್ಳಲಾರಂಭಿಸುತ್ತಾರೆ. ಚರ್ಚ್ ಕಲಿಕೆ ಇಲ್ಲದಿದ್ದಾಗ ಇಂಟರ್ ನ್ಯಾಷನಲ್ ಯುನಿವರ್ಸಿಟಿ ಕಾಲೇಜಿಗೆ ಹೋಗುತ್ತಾರೆ. ಧರ್ಮದ ಪರಿಚಯದ ಜೊತೆಗೆ ಕಾಲೇಜು ವಿದ್ಯಾಭ್ಯಾಸದ ಪರಿಚಯವೂ ಆಗುತ್ತದೆ. ಜೀವಶಾಸ್ತ್ರ ,ರಸಾಯನಶಾಸ್ತ್ರ, ಈ ಎಲ್ಲಾ ವಿಷಯಗಳನ್ನು ಕಲಿಯುತ್ತಾರೆ.

ನ್ಯೂಯಾರ್ಕ್ ನಗರದಲ್ಲಾದ ಅನುಭವ ಲೂಯೀಸ್ ಅವರ ಪಾಲಿಗೆ ಹೊಸದು. ಊಟ ಮಾಡುವುದು, ನಂತರ ಓದಲು ಕೋಣೆಗೆ ಹೋಗುವುದು, ದಿನಕ್ಕೆ ನಾಲ್ಕು ಸಲ ಧ್ಯಾನ ಮಾಡುವುದು ಇದು ಅವರು ನ್ಯೂಯಾರ್ಕಿನಲ್ಲಿ ಬದುಕುತ್ತಿದ್ದ ರೀತಿ. ಸಿಗರೇಟ್ ಸೇದುವುದು, ಡ್ರಿಂಕ್ಸ್ ಮಾಡುವುದು, ಡ್ರಗ್ಸ್ ಈ ರೀತಿಯ ಯಾವುದೂ ಇರಲಿಲ್ಲ. ಅಲ್ಲಿದ್ದವರಲ್ಲಿ ಚಿಕ್ಕ ವಯಸ್ಸಿನವರೆಂದರೆ ಲೂಯೀಸ್. ಎಲ್ಲರಿಂದಲೂ ಹೊಸದನ್ನು ಕಲಿತುಕೊಳ್ಳುವುದನ್ನು ಲೂಯೀಸ್ ಎಂಜಾಯ್ ಮಾಡುತ್ತಿದ್ದರು. ದೇಹ ಮತ್ತು ಮನಸ್ಸಿಗಿರುವ ಸಂಬಂಧ, ಬದುಕಿನ ತತ್ವ, ಬದುಕಿನ ಸಮಸ್ಯೆಗಳನ್ನು ನೀಗಿಕೊಳ್ಳುವ ವಿಧಾನ ಎಲ್ಲವನ್ನೂ ಲೂಯೀಸ್ ಕಲಿತದ್ದು ಇಲ್ಲಿಯೇ. ತಮಗೇನು ಗೊತ್ತಿದೆಯೋ ಅದನ್ನು ಬೇರೆಯವರಿಗೂ ತಿಳಿಸಬೇಕು ಎಂಬ ಮನಸ್ಸು ಲೂಯೀಸ್ ಅವರದ್ದು. ಇದ್ದಕ್ಕಾಗಿ ತಮಗೆ ತಿಳಿದ ವಿಚಾರಗಳ ಬಗ್ಗೆ ಭಾಷಣ ಮಾಡಲಾರಂಭಿಸುತ್ತಾರೆ. ತರಗತಿಗಳನ್ನು ತೆಗೆದುಕೊಂಡು ವಿಚಾರಗಳನ್ನು ತಿಳಿಸಲಾರಂಭಿಸುತ್ತಾರೆ.

ಇಷ್ಟಾಗುವಾಗ ಅವರಿಗೆ ಯೋನಿ ಕ್ಯಾನ್ಸರ್ ಇದೆ ಎನ್ನುವುದು ಗೊತ್ತಾಗುತ್ತದೆ. ಈ ವಿಚಾರ ತಿಳಿದಾಗ ಮೊದಲು ಬೇಸರವಾಗುತ್ತದೆ. ಆದರೆ ನಂತರ ಲೂಯಿಸ್ ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಾರೆ. ದೇಹಕ್ಕೆ ಖಾಯಿಲೆ ಬರಬೇಕಾದರೆ ಮನಸ್ಸೇ ಕಾರಣ ಎಂದು ಅರ್ಥ ಮಾಡಿಕೊಂಡಿದ್ದ ಅವರು ಮನಸ್ಸನ್ನೂ ಗಟ್ಟಿಗೊಳಿಸಿಕೊಳ್ಳುತ್ತಾರೆ. ಆಪರೇಷನ್ ಮಾಡಿಸಿಕೊಳ್ಳುವುದನ್ನು ಮೂರು ತಿಂಗಳು ಮುಂದೆ ಹಾಕಿ ಈ ಸಮಯದಲ್ಲಿ ಮನಸ್ಸನ್ನು ಸರಿಮಾಡಿಕೊಳ್ಳುತ್ತಾರೆ. ನಾನೇ ನನ್ನ ರೋಗವನ್ನು ಗುಣಮಾಡಿಕೊಳ್ಳಬೇಕು ಎನ್ನುವುದು ಲೂಯೀಸ್ ಅವರ ನಂಬಿಕೆ. ಕ್ಯಾನ್ಸರ್ ಬಗ್ಗೆ ಇರುವ ಪುಸ್ತಕಗಳನ್ನು ಓದುತ್ತಾರೆ. ತಲೆದಿಂಬುಗಳಿಗೆ ಜೋರಾಗಿ ಹೊಡೆಯುವ ಮೂಲಕ ಅಸಮಾಧಾನ, ಕೋಪವನ್ನು ಹೊರಹಾಕುತ್ತಾರೆ. ತನ್ನನ್ನು ತಾನು ಇಷ್ಟಪಡುವ ಅಭ್ಯಾಸ ಮಾಡಿಕೊಳ್ಳುತ್ತಾರೆ. ಒಳ್ಳೆಯ ಆಹಾರವನ್ನು ತಿನ್ನಲಾರಂಭಿಸುತ್ತಾರೆ. ಜಂಕ್ ಫುಡ್ ತಿನ್ನುವುದನ್ನೇ ಬಿಟ್ಟುಬಿಡುತ್ತಾರೆ. ಇದರಿಂದ ಲೂಯೀಸ್ ಅವರ ದೇಹವೂ ಸ್ವಚ್ಛವಾಗುತ್ತದೆ. ಮನಸ್ಸೂ ಸ್ವಸ್ಥವಾಗುತ್ತದೆ. ಕೊನೆಗೆ ಲೂಯೀಸ್ ಅವರಿಗಾದ ದೊಡ್ಡ ಪ್ರಯೋಜನ- ಆಪರೇಷನ್ ಮಾಡದೆಯೇ ಅವರಿಗಿದ್ದ ಕ್ಯಾನ್ಸರ್ ರೋಗ ಗುಣವಾಗಿರುತ್ತದೆ. ಯೋಚನೆ ಹಾಗೂ ಜೀವನಶೈಲಿಯನ್ನು ಬದಲಿಸಿಕೊಂಡರೆ ಜೀವನದ ರೋಗವನ್ನು ಗುಣಪಡಿಸಿಕೊಳ್ಳಬಹುದು ಎಂಬ ಜೀವನಪಾಠವನ್ನು ಲೂಯೀಸ್ ಕಲಿತದ್ದು ಹೀಗೆ.

ಈ ಜೀವನಪಾಠವನ್ನು ಎಲ್ಲರಿಗೂ ತಿಳಿಸಿಕೊಡಬೇಕೆಂದು ಅಂದುಕೊಂಡ ಲೂಯೀಸ್ ಹೋದದ್ದು ಲಾಸ್ ಏಂಜಲೀಸ್‌ಗೆ. ಇದು ಅವರ ಹುಟ್ಟೂರು. ಈಗ ಅವರ ತಾಯಿ- ತಂಗಿ ಅಲ್ಲಿದ್ದರು. ಲೂಯೀಸ್ ಅವರ ತಾಯಿಗೆ ವಯಸ್ಸಾಗಿತ್ತು. ಕಣ್ಣು ಕಾಣುತ್ತಿರಲಿಲ್ಲ. ಕಿವಿ ಕೇಳುತ್ತಿರಲಿಲ್ಲ. ಬಿದ್ದು ಬೆನ್ನು ಮುರಿದುಹೋಗಿತ್ತು. ತಂಗಿಗೆ ವಿಪರೀತ ಬೆನ್ನುನೋವಿತ್ತು. ಈ ಹೊತ್ತಿಗಾಗಲೇ ಹೀಲ್ ಯುವರ್ ಬಾಡಿ ಪುಸ್ತಕ ಜನಪ್ರಿಯವಾಗಿತ್ತು. ದೇಹವನ್ನು ಸರಿಮಾಡಿಕೊಳ್ಳುವ ರೀತಿಯನ್ನು ಲೂಯೀಸ್ ತಾಯಿಗೆ ಕಲಿಸಲಾರಂಭಿಸಿದರು. ದಿನಕ್ಕೆ ನಾಲ್ಕು ಸಲ ವ್ಯಾಯಾಮ ಮಾಡಿಸಲಾರಂಭಿಸಿದರು. ಕಣ್ಣಿನ ಪೊರೆ ತೆಗೆಸಲಾಯಿತು. ಚಿಕ್ಕವರಿದ್ದಾಗ ತಾಯಿಯ ಪ್ರೀತಿಯೂ ಲೂಯೀಸ್ಗೆ ಸಿಕ್ಕಿರಲಿಲ್ಲ. ಆದರೆ ಈಗ ತಾಯಿ ಮತ್ತು ಮಗಳ ಮಧ್ಯೆ ಬಾಂಧವ್ಯ ಮೂಡುವಂತಾಯಿತು. ಬದುಕಿನಲ್ಲಿ ಕಳೆದುಕೊಂಡದ್ದೆಲ್ಲವನ್ನೂ ಮರಳಿ ಗಳಿಸಿಕೊಂಡ ತೃಪ್ತಿ ಲೂಯೀಸ್ ಅವರದ್ದು.

ಯು ಕ್ಯಾನ್ ಹೀಲ್ ಯುವರ್ ಲೈಫ್ ಪುಸ್ತಕವನ್ನು ಮೊದಲು ಮುದ್ರಿಸಿದ್ದು ಸ್ವತಃ ಲೂಯೀಸ್ ಅವರೇ. ಯಾವ ಪ್ರಕಾಶಕರೂ ಇರಲಿಲ್ಲ. ಹೇ ಹೌಸ್ ಎನ್ನುವ ಪಬ್ಲಿಶಿಂಗ್ ಕಂಪೆನಿಯನ್ನು ಆರಂಭಿಸಲಾಗಿತ್ತು. ಒಬ್ಬರು ಬರೆದ ಪುಸ್ತಕವನ್ನು ಅವರೇ ಪ್ರಕಟಿಸುವುದು, ಬಿಡುಗಡೆ ಮಾಡುವುದು ಇದೆಲ್ಲಾ ಆ ಕಾಲಕ್ಕೆ ಅಂದರೆ ೧೯೮೪ಕ್ಕೆ ಹೊಸದು. ಆ ಬಳಿಕ ಹೇ ಹೌಸ್ ಕಂಪೆನಿ ಬೆಳೆದ ರೀತಿ ಅದ್ಭುತ. ಆಸ್ಟ್ರೇಲಿಯಾ, ಇಂಗ್ಲೇಂಡ್, ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್, ಕೆನಡಾ ದೇಶಗಳಲ್ಲಿ ಈ ಕಂಪೆನಿ ಇದೆ. ಇವರ ಪುಸ್ತಕಗಳು ೩೫ ದೇಶಗಳಲ್ಲಿ ಮಾರಾಟವಾಗಿವೆ. ೨೯ ಭಾಷೆಗಳಿಗೆ ಅನುವಾದಗೊಂಡಿವೆ.

ಅವರು ಡ್ಯಾನ್ಸ್ ಕಲಿತ ರೀತಿ ಸ್ವಾರಸ್ಯದಿಂದ ಕೂಡಿದೆ. ತಾನೂ ಡ್ಯಾನ್ಸ್ ಮಾಡಬೇಕೆಂಬ ಆಸೆ ಬಂದಾಗ ಲೂಯೀಸ್ ಅವರ ವಯಸ್ಸು ೭೬ ವರ್ಷ. ನೃತ್ಯ ಮಾಡಬೇಕೆಂದೇನೋ ನಿರ್ಧರಿಸುತ್ತಾರೆ. ತರಗತಿಗೆ ಸೇರಿಕೊಳ್ಳುತ್ತಾರೆ. ಆದರೆ ಅವರಲ್ಲಿದ್ದ ಭಯ, ಸಂಕೋಚದಿಂದಾಗಿ ಚೆನ್ನಾಗಿ ಕಲಿಯುವುದಕ್ಕೆ ಆಗುವುದಿಲ್ಲ. ಆಸಕ್ತಿ ಇದೆ. ಆದರೆ ಡ್ಯಾನ್ಸ್ ಕ್ಲಾಸ್ ಇರುವ ಬುಧವಾರ ಮಧ್ಯಾಹ್ನ ಬಂದರೆ ಸಾಕು, ವಿಪರೀತ ಭಯ. “ಯಾಕಿಷ್ಟು ಹೆದರಿಕೊಳ್ಳುತ್ತೀರಿ?” ಎಂದು ಡ್ಯಾನ್ಸ್ ಮಾಸ್ಟರ್ ಕೇಳಿದಾಗ ಇವರು ಕೊಟ್ಟ ಉತ್ತರ- “ತಪ್ಪು ತಪ್ಪಾಗಿ ಡ್ಯಾನ್ಸ್ ಮಾಡಿದರೆ ನೀವು ಕೆನ್ನೆಗೆ ಹೊಡೆಯುತ್ತೀರಿ ಎಂಬ ಭಯವಿದೆ”. ೭೬ ವರ್ಷಗಳ ಲೂಯೀಸ್ ಅವರ ಹೃದಯದ ಮೂಲೆಯಲ್ಲಿ ಡ್ಯಾನ್ಸ್ ಟೀಚರ್ಗೆ ಹೆದರುವ ಮಗುವೊಂದು ಕುಳಿತಿತ್ತು. ಆ ಬಳಿಕ ಚೆನ್ನಾಗಿಯೇ ಡ್ಯಾನ್ಸ್ ಕಲಿತ ಲೂಯೀಸ್ ಎಂಜಾಯ್ ಮಾಡಿಕೊಂಡು ಡ್ಯಾನ್ಸ್ ಮಾಡುವಂತಾಗಿದ್ದಾರೆ.

ಮುಂದಿನ ೨೦ ವರ್ಷಗಳಲ್ಲಿ ನಮ್ಮ ಬದುಕಿಲ್ಲಿ ಏನಾಗುತ್ತದೆ ಎನ್ನುವುದನ್ನು ಯಾರಿಗೂ ಹೇಳಲು ಸಾಧ್ಯವಿಲ್ಲ. ಸಂತೋಷದಿಂದ ಸಾಯುವಂತಾಗುವುದು ಹೇಗೆ ಎನ್ನುವುದನ್ನು ನಾವು ಯೋಚಿಸಬೇಕು. ಹುಟ್ಟಿದವರೆಲ್ಲರೂ ಸಾಯಲೇಬೇಕು. ಇದು ಸರಳವಾದ ಸತ್ಯ. ಇದು ಗೊತ್ತಿದ್ದರೂ ನಾವು ಸಾವಿಗೆ ಹೆದರಿಕೊಳ್ಳುತ್ತೇವೆ. ಸಾವಿನ ಬಗ್ಗೆ, ಸಾವಿನ ನಂತರದ ಜೀವನದ ಬಗ್ಗೆ ಏನೇನೋ ಭಯ, ಕಲ್ಪನೆಗಳು ನಮ್ಮಲ್ಲಿದೆ. ಲೂಯೀಸ್ ಹೇಳುವಂತೆ, ಸಂತೋಷದಿಂದ ಜೀವನ ಮಾಡುವುದನ್ನು ಕಲಿತರೆ ಸಂತೋಷದಿಂದಲೇ ಸಾಯಬಹುದು. ಸಾವಿಗೆ ಹೆದರಿಕೊಳ್ಳಬೇಕಾಗಿಲ್ಲ. ಎಲ್ಲಾ ಸರಿಯಾಗಿದೆ, ಜೀವನ ಒಳ್ಳೆಯದಿದೆ ಎಂಬ ನಂಬಿಕೆ ನಮ್ಮಲ್ಲಿದ್ದಾಗ ಬದುಕು ಚೆನ್ನಾಗಿರುತ್ತದೆ. ‘ನಮ್ಮ ಹಿಂದಿನ ಜೀವನಕ್ಕೆ ಮತ್ತೆ ಹೋಗಲು ಸಾಧ್ಯವಿಲ್ಲ. ಹಿಂದೆ ಆಗಿರುವ ತಪ್ಪುಗಳನ್ನು ಸರಿ ಮಾಡುವುದಕ್ಕೂ ಸಾಧ್ಯವಿಲ್ಲ. ಆದರೆ ಈಗ ಇರುವ, ಮುಂದೆ ಬರುವ ಬದುಕನ್ನು ಚೆನ್ನಾಗಿ ನಡೆಸಬಹುದು’- ಇದು ಲೂಯೀಸ್ ಅವರ ಸಂದೇಶ.

ಲೂಯೀಸ್ ಅವರ ಹೀಲ್ ಯುವರ್ ಬಾಡಿ ಪುಸ್ತಕದ ಮುಂದುವರಿಕೆಯ ಹಾಗೆ ಯು ಕ್ಯಾನ್ ಹೀಲ್ ಯುವರ್ ಲೈಫ್ ಪುಸ್ತಕವಿದೆ. ಹೀಲ್ ಯುವರ್ ಬಾಡಿ ಪುಸ್ತಕದಲ್ಲಿ ದೇಹವನ್ನು ಗಟ್ಟಿಗೊಳಿಸುವ ಬಗ್ಗೆ ಹೇಳಲಾಗಿತ್ತು. ಈ ಪುಸ್ತಕದಲ್ಲಿ ದೇಹದ ಜೊತೆಗೆ ಮನಸ್ಸನ್ನು ಗಟ್ಟಿಮುಟ್ಟಾಗಿಸುವ ಬಗ್ಗೆಯೂ ತಿಳಿಸಿಕೊಡಲಾಗಿದೆ. ನಮ್ಮ ದೇಹಕ್ಕೆ ರೋಗ ಬರುವುದು ನಮ್ಮಿಂದ. ರೋಗಗಳನ್ನು ಸೃಷ್ಟಿಸುವವರು ನಾವೇ. ಸಮಾಧಾನ ಇಲ್ಲದಿರುವುದು, ಇನ್ನೊಬ್ಬರನ್ನು ಬೈಯ್ಯುವುದು, ಕೆಟ್ಟ ಕೆಲಸ ಮಾಡುವುದು ಇದರಿಂದ ನಮ್ಮ ಮನಸ್ಸು ಕೆಟ್ಟುಹೋಗುತ್ತದೆ. ದೇಹಕ್ಕೂ ರೋಗ ಬರುತ್ತದೆ. ಮನಸ್ಸಿನ ಅಸಮಾಧಾನ ದೂರವಾದರೆ ಕ್ಯಾನ್ಸರ್ನಂತಹ ದೊಡ್ಡ ಕಾಯಿಲೆಯನ್ನೂ ಗುಣಪಡಿಸಬಹುದು.

ಬದುಕಿನಲ್ಲಿ ನಾವು ಏನನ್ನು ಅನುಭವಿಸುತ್ತೇವೆಯೋ ಅದರ ಜವಾಬ್ದಾರಿ ನಮ್ಮದು. ಸಂತಸಕ್ಕೂ ನಾವೇ ಕಾರಣ. ದುಃಖಕ್ಕೂ ನಾವೇ ಕಾರಣ. ನಮ್ಮಿಂದಾಗಿ ಉಂಟಾದ ಬದುಕಿನ ಸಮಸ್ಯೆಗಳನ್ನು ನಾವೇ ಸರಿಪಡಿಸಿಕೊಳ್ಳಬೇಕು. ನಮ್ಮ ಭವಿಷ್ಯ ನಿರ್ಧಾರವಾಗುವುದು ನಮ್ಮ ಯೋಚನೆಗಳಿಂದ. ಇಂದು ನಾವು ಏನು ಯೋಚಿಸುತ್ತೇವೋ ಅದು ಹತ್ತು ವರ್ಷಗಳ, ಇಪ್ಪತ್ತು ವರ್ಷಗಳ, ಐವತ್ತು ವರ್ಷಗಳ ನಂತರದ ನಮ್ಮ ಬದುಕನ್ನು ನಿರ್ಧರಿಸುತ್ತದೆ. ಬೇರೆಯವರಷ್ಟು ಶ್ರೀಮಂತಿಕೆ ನನ್ನಲ್ಲಿಲ್ಲ, ನೋಡಲು ಸುಂದರವಾಗಿಲ್ಲ, ನನ್ನ ಬ್ಯಾಂಕ್ ಅಕೌಂಟಿನಲ್ಲಿ ಕೋಟಿಗಟ್ಟಲೆ ಹಣವಿಲ್ಲ, ದೊಡ್ಡದಾದ ಮನೆ ನನ್ನದಲ್ಲ ಇವುಗಳು ಕೇವಲ ಆಲೋಚನೆಗಳಲ್ಲ. ನಮ್ಮ ಬದುಕನ್ನು ನಿರ್ಧರಿಸುವ ಸಂಗತಿಗಳು. ಆಲೋಚನೆಗಳನ್ನು ಬದಲಾಯಿಸಿಕೊಳ್ಳುವ ಮೂಲಕ ನಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಬಹುದು. ಹಿಂದೆ ಜೀವನದಲ್ಲಿ ಏನೆಲ್ಲಾ ಕೆಟ್ಟದಾಗಿದೆಯೋ ಅದನ್ನು ಮರೆಯಬೇಕು. ನಮಗೆ ಕೆಟ್ಟದ್ದು ಮಾಡಿರುವವರನ್ನು ಕ್ಷಮಿಸಿ ಬದುಕಿನಲ್ಲಿ ಮುಂದೆ ಸಾಗಬೇಕು. ನಮ್ಮನ್ನು ನಾವು ಪ್ರೀತಿಸಬೇಕು. ಆಗ ಪಾಸಿಟಿವ್ ಆಗಿರುವ ಪರಿವರ್ತನೆಗಳನ್ನು ಬದುಕಿನಲ್ಲಿ ಕಾಣಲು ಸಾಧ್ಯವಿದೆ. ಎಲ್ಲವೂ ನಾವು ಅಂದುಕೊಂಡಂತೆಯೇ ನಡೆಯುತ್ತದೆ.

ಜೀವನ ತುಂಬಾ ಸರಳವಾದದ್ದು. ನಾವು ಏನನ್ನು ಕೊಡುತ್ತೇವೆಯೋ ಅದನ್ನೇ ಪಡೆಯುತ್ತೇವೆ. ಇನ್ನೊಬ್ಬರಿಗೆ ನಾವು ಪ್ರೀತಿ ತೋರಿಸಿದರೆ ನಮಗೂ ಪ್ರೀತಿ ಸಿಗುತ್ತದೆ. ಇನ್ನೊಬ್ಬರನ್ನು ನಾವು ದ್ವೇಷಿಸಿದರೆ ಬೇರೆಯವರು ನಮ್ಮನ್ನು ದ್ವೇಷಿಸುತ್ತಾರೆ. ನಾವು ನಮ್ಮ ಬಗ್ಗೆ ಯೋಚಿಸಿದ್ದು ಸತ್ಯವಾಗುತ್ತದೆ. ನಾವು ಕೆಟ್ಟ ಸ್ಥಿತಿಯಲ್ಲಿದ್ದರೆ ಕೆಟ್ಟದ್ದನ್ನು ನಾವು ಯೋಚಿಸಿದ್ದೇವೆ ಎಂದರ್ಥ. ಆದ್ದರಿಂದ ನಮ್ಮ ಬದುಕಿನಲ್ಲಿ ಏನೇ ಒಳ್ಳೆಯದಾಗಲಿ, ಕೆಟ್ಟದ್ದಾಗಲಿ ನಾವೇ ಹೊಣೆಗಾರರು. ನಮ್ಮ ಆಲೋಚನೆಯಂತೆ ನಮ್ಮ ಭವಿಷ್ಯದ ಬದುಕು ಇರುತ್ತದೆ. ಎಲ್ಲಾ ಜನರೂ ಕೆಟ್ಟವರು. ನನಗೆ ಮೋಸ ಮಾಡುತ್ತಾರೆ ಎಂದೂ ನಾವು ಯೋಚಿಸಬಹುದು. ನನಗೆ ಕಷ್ಟ ಬಂದಾಗ ಎಲ್ಲರೂ ನನಗೆ ಸಹಾಯ ಮಾಡುತ್ತಾರೆ ಎಂದೂ ಯೋಚಿಸಬಹುದು. ನಾವು ಯಾವ ರೀತಿಯಲ್ಲಿ ಯೋಚಿಸಿದರೂ ಆ ಯೋಚನೆ ನಮ್ಮ ಸುಪ್ತಪ್ರಜ್ಞೆಯನ್ನು ಸೇರಿಕೊಳ್ಳುತ್ತದೆ. ಆದ್ದರಿಂದ ಕೆಟ್ಟ ಜನರು ನನಗೆ ಮೋಸ ಮಾಡುತ್ತಾರೆ ಎಂದುಕೊಳ್ಳುವುದಕ್ಕಿಂತ ಎಲ್ಲರೂ ನನಗೆ ಸಹಾಯ ಮಾಡುತ್ತಾರೆ ಎಂದುಕೊಳ್ಳುವುದೇ ಒಳ್ಳೆಯದು.

ಯುನಿವರ್ಸಲ್ ಪವರ್ ಎನ್ನುವುದಿದೆ. ಕನ್ನಡದಲ್ಲಿ ಇದನ್ನು ವಿಶ್ವಶಕ್ತಿ ಎನ್ನಬಹುದು. ಈ ಯುನಿವರ್ಸಲ್ ಪವರ್ ನಮ್ಮ ಬಗ್ಗೆ ಏನನ್ನೂ ನಿರ್ಧರಿಸುವುದಿಲ್ಲ ಅಥವಾ ಬೈಯ್ಯುವುದಿಲ್ಲ. ನಾವು ಹೇಗಿದ್ದೇವೆಯೋ ಹಾಗೆ ಈ ಜಗತ್ತು ನಮ್ಮನ್ನು ಸ್ವೀಕರಿಸುತ್ತದೆ.

ಹೆಚ್ಚಿನ ಜನರಿಗೆ ತಾವು ಯಾರು ಎನ್ನುವುದೇ ಗೊತ್ತಿಲ್ಲ. ಜೀವನ ಖುಷಿಖುಷಿಯಾಗಿರಬೇಕು ಎಂದುಕೊಳ್ಳುವವರು ಎಲ್ಲರು. ಆದರೆ ಖುಷಿ ಪಡೆಯುವುದು ಹೇಗೆ? ಗೊತ್ತಿಲ್ಲ. ಎಷ್ಟೇ ದುಃಖ ಆದರೂ ಗಂಡಸರು ಅಳುವುದಿಲ್ಲ. ಹೆಂಗಸರಿಗೆ ದುಡಿಯಲು ಆಗುವುದಿಲ್ಲ ಈ ರೀತಿಯ ತಪ್ಪು ಕಲ್ಪನೆಗಳು ಹಲವರಲ್ಲಿವೆ. ನಮ್ಮ ಸುತ್ತಮುತ್ತ ಇರುವ ಜನರು ಭಯ ಹೊಂದಿದವರಾಗಿದ್ದರೆ, ಖುಷಿ ಇಲ್ಲದವರಾಗಿದ್ದರೆ, ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುವವರಾಗಿದ್ದರೆ ನಾವು ನೆಗೆಟಿವ್ ಮೈಂಡ್ಸೆಟ್ ಅಂದರೆ ನಕಾರಾತ್ಮಕ ಮನಃಸ್ಥಿತಿಯವರಾಗುತ್ತೇವೆ. ನಾನು ಮಾಡುವುದೆಲ್ಲವೂ ತಪ್ಪು, ಆ ತಪ್ಪಿಗೆ ನಾನೇ ಕಾರಣ, ನಾನು ಕೋಪ ಮಾಡಿಕೊಳ್ಳುತ್ತೇನೆ; ಆದ್ದರಿಂದ ನಾನು ಕೆಟ್ಟ ವ್ಯಕ್ತಿ- ಈ ತರಹದ ಯೋಚನೆಗಳು ನಮ್ಮ ಜೀವನವನ್ನು ಹಾಳುಮಾಡುತ್ತದೆ. ನಮ್ಮ ವ್ಯಕ್ತಿತ್ವ ರೂಪುಗೊಳ್ಳುವುದರಲ್ಲಿ ನಮ್ಮ ತಂದೆತಾಯಿಯ ಪಾತ್ರ ತುಂಬಾ ಮುಖ್ಯ. ನಮ್ಮ ತಂದೆತಾಯಿ ಪ್ರೀತಿಯಿಂದ ಖುಷಿಯಿಂದ ಬದುಕುತ್ತಿದ್ದರೆ ಅದೇ ಸ್ವಭಾವ ನಮ್ಮದೂ ಆಗುತ್ತದೆ.

ಪವರ್ ಪಾಯಿಂಟ್ ಎನ್ನುವುದಿದೆ. ಇದನ್ನು ಶಕ್ತಿಯ ಬಿಂದು ಎನ್ನಬಹುದು. ಇದು ನಮ್ಮ ಭವಿಷ್ಯವನ್ನು ಸೂಚಿಸುವ, ನಿರ್ಧರಿಸುವ ಅಂಶವಾಗಿದೆ. ಪವರ್ ಪಾಯಿಂಟ್ ಇರುವುದು ವರ್ತಮಾನ ಕಾಲದಲ್ಲಿ. ಈ ಕ್ಷಣದಲ್ಲಿ ನಾವು ಏನನ್ನು ಯೋಚಿಸುತ್ತೇವೆಯೋ ಅದುವೇ ನಮ್ಮ ಭವಿಷ್ಯವಾಗುತ್ತದೆ. ಹಿಂದೆ ನಾವು ಏನನ್ನು ಅನುಭವಿಸಿದ್ದೇವೆಯೋ, ಹೇಗೆ ಬದುಕಿದ್ದೇವೆಯೋ ಅದ್ಯಾವುದೂ ಮುಖ್ಯವಲ್ಲ. ಈ ಕ್ಷಣ, ಈ ಕಾಲ, ವರ್ತಮಾನ ಕಾಲ ತುಂಬಾ ಮುಖ್ಯ.

ನಾವು ಮಾಡುವ ಕೆಲಸ ಒಳ್ಳೆಯದಿರಬೇಕಾದರೆ ನಮ್ಮನ್ನು ನಾವು ದ್ವೇಷಿಸುವುದನ್ನು ಬಿಟ್ಟುಬಿಡಬೇಕು. ನಮ್ಮನ್ನು ನಾವು ಒಪ್ಪಿಕೊಂಡಾಗ ಜಗತ್ತು ನಮ್ಮನ್ನು ಒಪ್ಪಿಕೊಳ್ಳುತ್ತದೆ. ನಮ್ಮಲ್ಲಿ ಹೆಚ್ಚಿನವರು ನಾವು ಒಳ್ಳೆಯವರಲ್ಲ ಎಂದುಕೊಳ್ಳುತ್ತಿರುತ್ತೇವೆ. ಆದರೆ ನಾವ್ಯಾಕೆ ಹೀಗೆ ಅಂದುಕೊಳ್ಳುತ್ತಿದ್ದೇವೆ? ನಾವು ಹೀಗೆ ಅಂದುಕೊAಡದ್ದು ಯಾವ ಆಧಾರದಲ್ಲಿ? ಎನ್ನುವುದಕ್ಕೆ ಉತ್ತರ ನಮ್ಮಲ್ಲಿಲ್ಲ. ನಮ್ಮ ಬಗ್ಗೆ ನಮಗೆ ಅಸಮಾಧಾನವಿದೆ. ನಮ್ಮನ್ನು ನಾವೇ ಬೈದುಕೊಳ್ಳುತ್ತೇವೆ. ನಾವೇನೋ ತಪ್ಪು ಮಾಡಿದ್ದೇವೆ ಎಂದುಕೊಳ್ಳುತ್ತಿರುತ್ತೇವೆ. ಕಾರಣವಿಲ್ಲದೆ ಹೆದರುತ್ತೇವೆ. ಇದೇ ನಿಜವಾದ ಸಮಸ್ಯೆ. ಜೀವನದಲ್ಲಿ ಹೆಚ್ಚು ಸಮಸ್ಯೆ ಎದುರಿಸುವಂತಾಗುವುದೇ ಇಂತಹ ಕೆಟ್ಟ ಭಾವನೆಗಳಿಂದ.

ಅಸಮಾಧಾನ, ಟೀಕೆ, ಅಪರಾಧ ಮತ್ತು ಭಯ- ಈ ನಾಲ್ಕು ಭಾವನೆಗಳು ನಮ್ಮ ದೇಹಕ್ಕೂ ಸಮಸ್ಯೆ ಉಂಟುಮಾಡುತ್ತವೆ. ಮನಸ್ಸಿಗೂ ಸಮಸ್ಯೆ ಉಂಟುಮಾಡುತ್ತವೆ. ನಮ್ಮ ಒಟ್ಟು ಜೀವನಕ್ಕೂ ಸಮಸ್ಯೆ ಉಂಟುಮಾಡುತ್ತವೆ.

ಈ ಭಾವನೆಗಳು ಬರುವುದು ಹೇಗೆ? ಗೊತ್ತಿದೆಯಾ? ಬೇರೆಯವರನ್ನು ಬೈದರೆ ಈ ಭಾವನೆಗಳು ಬರುತ್ತವೆ. ನಮ್ಮ ಜೀವನದ ಜವಾಬ್ದಾರಿಯನ್ನು ನಾವೇ ತೆಗೆದುಕೊಂಡಾಗ ಈ ಕೆಟ್ಟ ಭಾವನೆಗಳು ಬರದಂತೆ ಮಾಡಬಹುದು.

ನಮ್ಮ ಯೋಚನೆಗಳು ಅದೆಷ್ಟು ಶಕ್ತಿಯುತವಾದದ್ದು ಎನ್ನುವುದನ್ನೊಮ್ಮೆ ಗಮನಿಸಿ. ಪ್ರತಿಯೊಬ್ಬರೂ ನನಗೆ ಮೋಸ ಮಾಡುತ್ತಾರೆ ಎಂದುಕೊಂಡಾಗ ಮೋಸಗಾರರೇ ನಮ್ಮ ಸುತ್ತಮುತ್ತ ಇರುತ್ತಾರೆ. ನಾವು ಮೋಸ ಹೋಗುತ್ತೇವೆ. ನನ್ನನ್ನು ಬೈಯ್ಯುವವರೇ ತುಂಬ ಜನ ಎಂದುಕೊಂಡಾಗ ಅನೇಕ ಜನರಿಂದ ಬೈಸಿಕೊಳ್ಳುತ್ತೇವೆ. ಅವರವರ ಸ್ವಾರ್ಥಕ್ಕೆ ನನ್ನನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಯೋಚನೆ ನಮ್ಮ ತಲೆಗೆ ಬಂದಾಗ ಬೇಕಾದ ಹಾಗೆ ನಮ್ಮನ್ನು ಬಳಸಿಕೊಳ್ಳುವ ಸ್ವಾರ್ಥಿಗಳು ಹೆಚ್ಚಾಗುತ್ತಾರೆ. ಈ ಎಲ್ಲಾ ಯೋಚನೆಗಳಿಗೆ ವಿರುದ್ಧವಾಗಿ ಯೋಚಿಸಿದರೆ ಮೋಸಗಾರರು, ಬೈಯ್ಯುವವರು, ಸ್ವಾರ್ಥಿಗಳು ನಮ್ಮಿಂದ ದೂರ ಹೋಗುತ್ತಾರೆ. ನಮ್ಮ ಬದುಕು ಇರುವುದೇ ಯೋಚನೆಗಳಲ್ಲಿ.

ದೇಹದ ಖಾಯಿಲೆಗೂ ಮನಸ್ಸಿಗೂ ನೇರಾನೇರ ಸಂಬಂಧವಿದೆ. ಅದೆಷ್ಟೋ ಕಾಲದಿಂದ ನಮ್ಮೊಳಗಿರುವ ಅಸಮಾಧಾನ, ಬದುಕಿನ ಕುರಿತಾದ ಅತೃಪ್ತಿ ಕ್ಯಾನ್ಸರ್ ರೋಗದ ರೂಪದಲ್ಲಿ ನಮ್ಮ ದೇಹವನ್ನು ತಿನ್ನುತ್ತದೆ. ನಾನು ಸರಿಯಿಲ್ಲ, ನಾನು ಕೆಟ್ಟ ವ್ಯಕ್ತಿ, ತಪ್ಪು ಮಾಡಿದ್ದೇನೆ ಎಂದು ನಮಗೆ ನಾವೇ ಬೈದುಕೊಳ್ಳುವುದರಿಂದ ಸಂಧಿವಾತ ಖಾಯಿಲೆ ಬರಬಹುದು. ನಾವು ನಮ್ಮ ಜೀವನದಲ್ಲಿ ಯಾವತ್ತೋ ಮಾಡಿದ ತಪ್ಪಿಗೆ ನೋವಿನ ರೂಪದಲ್ಲಿ ಶಿಕ್ಷೆ ಅನುಭವಿಸುತ್ತಿರುತ್ತೇವೆ. ಈ ನೋವು ದೇಹದಲ್ಲಿರುವ ನೋವೂ ಆಗಿರಬಹುದು; ಮನಸ್ಸಿನದ್ದೂ ಆಗಿರಬಹುದು. ಭಯದಿಂದಾಗಿ ಉದ್ವೇಗ ಉಂಟಾಗುತ್ತದೆ. ಬೇಗ ಬೇಗ ಅವಸರವಸರವಾಗಿ ಪ್ರತಿಕ್ರಿಯೆ ನೀಡುವ ಮನಃಸ್ಥಿತಿ ನಮ್ಮಲ್ಲಿ ಬೆಳೆಯುತ್ತದೆ. ಸಣ್ಣ ವಿಷಯಗಳಿಗೂ ಟೆನ್ಶನ್ ಮಾಡಿಕೊಳ್ಳುತ್ತೇವೆ. ಇದರಿಂದ ತಲೆಗೂದಲುಗಳು ಉದುರತೊಡಗುತ್ತವೆ. ಅಲ್ಸರ್ ಅಂದರೆ ಹೊಟ್ಟೆಹುಣ್ಣು ಆಗಬಹುದು. ಪಾದಗಳು ನೋಯಲಾರಂಭಿಸುತ್ತವೆ. ಈ ಎಲ್ಲದಕ್ಕೂ ಸುಲಭವಾದ ಪರಿಹಾರವಿದೆ. ಆ ಪರಿಹಾರ ಕ್ಷಮೆ. ಇನ್ನೊಬ್ಬರ ಬಗ್ಗೆ ಮತ್ತು ನಮ್ಮ ಬಗ್ಗೆ ನಮಗಿರುವ ಅಸಮಾಧಾನವನ್ನು ಬಿಟ್ಟುಬಿಡಬೇಕು. ಬೇರೆಯವರ ತಪ್ಪುಗಳನ್ನು ಕ್ಷಮಿಸಬೇಕು. ನಮ್ಮ ತಪ್ಪುಗಳನ್ನು ಮರೆತುಬಿಡಬೇಕು. ಮುಂದೆ ತಪ್ಪುಗಳಾಗದಂತೆ ನೋಡಿಕೊಳ್ಳಬೇಕು. ಈ ಮೂಲಕ ಎಲ್ಲಾ ಸಮಸ್ಯೆಗಳಿಂದ ಪಾರಾಗಬಹುದು. ಕ್ಷಮೆ ಎನ್ನುವುದು ಕೇಳುವುದಕ್ಕೆ ಸರಳವಾದ ಪದ. ಆದರೆ ಇದನ್ನು ಆಚರಿಸುವುದಕ್ಕೆ ಬಹಳ ಕಷ್ಟವಿದೆ.

ನಮ್ಮ ಬದುಕಿನಲ್ಲಿ ಹಿಂದೆ ಏನಾಗಿದೆಯೋ ಅದು ಈಗ ನಮ್ಮ ಕೈಯ್ಯಲ್ಲಿಲ್ಲ. ನಾವೀಗ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ನಮ್ಮ ಹಿಂದಿನ ಬದುಕಿನ ಬಗ್ಗೆ ನಮಗಿರುವ ಆಲೋಚನೆಗಳನ್ನು ಬದಲಾಯಿಸಿಕೊಳ್ಳಬಹುದು. ಹಿಂದೆ ಯಾರೋ ನಮಗೆ ನೋವು ಕೊಟ್ಟಿರುವುದನ್ನು ಈ ಕ್ಷಣ ನೆನಪಿಸಿಕೊಂಡರೆ ಈಗಿನ ಖುಷಿಯನ್ನೂ ನಾವು ಹಾಳುಮಾಡಿಕೊಳ್ಳುತ್ತೇವೆ. ಅದು ನಮಗೆ ನಾವೇ ಶಿಕ್ಷೆ ಕೊಟ್ಟಂತೆ, ಮೂರ್ಖತನದ ಕೆಲಸ. ನಾವು ಮೊದಲು ಬದುಕುತ್ತಿದ್ದುದಕ್ಕಿಂತ ಚೆನ್ನಾಗಿ ಈಗ ಬದುಕುತ್ತಿದ್ದೇವಾದರೆ ನಾವು ಮಾಡಬೇಕಾದ ಮೊದಲ ಕೆಲಸ ನಮ್ಮ ಅಸಮಾಧಾನವನ್ನು ಕರಗಿಸುವುದು. ಅಂದರೆ ನಮ್ಮ ಹಿಂದಿನ ಜೀವನದ ಬಗ್ಗೆ ಏನೆಲ್ಲಾ ಬೇಸರ, ಅತೃಪ್ತಿ ಇದೆಯೋ ಅವೆಲ್ಲವನ್ನೂ ಒಂದೊಂದಾಗಿ ಕಡಿಮೆ ಮಾಡಿಕೊಳ್ಳುತ್ತಾ ಬರಬೇಕು. ಇದಕ್ಕಾಗಿ ಆಸ್ಪತ್ರೆಯ ಆಪರೇಷನ್ ಬೆಡ್ ಮೇಲೆ ಮಲಗಿಕೊಳ್ಳುವವರೆಗೆ ಕಾಯಬೇಕಾಗಿಲ್ಲ.

ಭಯ ನಮ್ಮಲ್ಲಿದ್ದಾಗ ನಮ್ಮ ಮನಸ್ಸನ್ನು ನಾವು ಗುಣಪಡಿಸಿಕೊಳ್ಳಲಾಗುವುದಿಲ್ಲ. ಆದ್ದರಿಂದ ಭಯವನ್ನು ಮೊದಲು ಬಿಟ್ಟುಬಿಡಬೇಕು. ನಾವು ಅಸಹಾಯಕರಾಗಿದ್ದೇವೆ. ನಾವು ಬಲಿಪಶುಗಳು. ನಮ್ಮ ಇಡೀ ಬದುಕು ಕೆಟ್ಟದಾಗಿದೆ ಎಂದು ನಾವು ನಂಬುತ್ತಿದ್ದರೆ ಜಗತ್ತಿನ ಜನರೂ ನಮ್ಮ ಬಗ್ಗೆ ಹಾಗೆಯೇ ಅಂದುಕೊಳ್ಳುತ್ತಾರೆ. ನಾವು ಯಾವ ಪ್ರಯೋಜನಕ್ಕೂ ಇಲ್ಲದವರಾಗಿ ಮೂಲೆ ಸೇರಬೇಕಾಗುತ್ತದೆ. ನಮ್ಮ ಯಾವ ಬೆಳವಣ ಗೆಗೂ ಕಾರಣವಲ್ಲದ, ನಮ್ಮಲ್ಲಿ ನೆಗೆಟಿವಿಟಿಯನ್ನೇ ತುಂಬುವ ಈ ತರಹದ ನಂಬಿಕೆಗಳನ್ನು ಬಿಟ್ಟುಬಿಡಬೇಕು. ಆಗ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯ.

ಈ ತರಹದ ನಂಬಿಕೆಗಳನ್ನು ಬಿಟ್ಟುಬಿಡಬೇಕಾದರೆ ಹಿಂದೆ ಆಗಿರುವ ಎಲ್ಲಾ ತಪ್ಪುಗಳನ್ನು, ಎಲ್ಲರ ತಪ್ಪುಗಳನ್ನು ಕ್ಷಮಿಸಬೇಕು. ಹೆಚ್ಚಿನವರ ಸಮಸ್ಯೆ ಏನೆಂದರೆ ಅವರಿಗೆ ಕ್ಷಮಿಸುವುದು ಗೊತ್ತಿಲ್ಲ. ಕ್ಷಮಿಸಲು ಸಿದ್ಧರಾಗಿರುವುದು, ಕ್ಷಮಿಸುವ ಇಚ್ಛೆಯನ್ನು ಹೊಂದುವುದು ನಮ್ಮ ಬದುಕಿನ ಹೀಲಿಂಗ್ ಪ್ರಕ್ರಿಯೆಯನ್ನು ಆರಂಭಿಸುತ್ತದೆ. ಖಾಯಿಲೆ ಬಂದು ಹಾಸಿಗೆ ಹಿಡಿದಿರುವ ನಮ್ಮ ಬದುಕನ್ನು ಗುಣಪಡಿಸಿಕೊಳ್ಳಬೇಕೆಂದರೆ ಕ್ಷಮಿಸುವ ಗುಣ ನಮ್ಮದಾಗಬೇಕು. ನೆನಪಿಟ್ಟುಕೊಳ್ಳಬೇಕಾದ ವಿಷಯವೆಂದರೆ, ಕ್ಷಮಿಸುವುದು ಇನ್ನೊಬ್ಬರಿಗೆ ಒಳ್ಳೆಯದು ಮಾಡುವುದಕ್ಕಾಗಿ ಅಲ್ಲ; ನಮ್ಮ ಒಳ್ಳೆಯದಕ್ಕೆ. ಕ್ಷಮಿಸುವುದರಿಂದ ನಮಗಾಗುವ ದೊಡ್ಡ ಪ್ರಯೋಜನ ನಮ್ಮ ಚಿಂತೆ, ಒತ್ತಡ, ಗಾಬರಿ ಎಲ್ಲವೂ ಹೊರಟುಹೋಗುತ್ತದೆ. ನಮ್ಮ ನೋವನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ. ಇನ್ನೊಬ್ಬರ ನೋವೂ ನಮಗರ್ಥವಾದಾಗ ಇನ್ನೊಬ್ಬರನ್ನು ಕ್ಷಮಿಸಲೂ ನಾವು ಸಿದ್ಧರಾಗುತ್ತೇವೆ.

ಜನರಿಗಿರುವ ಸಮಸ್ಯೆ ಹಲವು. ಲೆಕ್ಕ ಮಾಡುವುದಕ್ಕಾಗದಷ್ಟು ತೊಂದರೆಗಳಿದೆ. ಕೆಲವರಿಗೆ ಆರೋಗ್ಯ ಇಲ್ಲ. ಕೆಲವರಿಗೆ ಬಡತನ. ಏನು ಮಾಡಿದರೂ ಶ್ರೀಮಂತರಾಗಲು ಸಾಧ್ಯವಾಗುತ್ತಿಲ್ಲ. ಇನ್ನೂ ಕೆಲವರಿಗೆ ಬೇರೆಯವರ ಜೊತೆಗೆ ಜಗಳ, ನಿಷ್ಠುರ. ಇದಿಷ್ಟೂ ಸಮಸ್ಯೆಗಳಿಗೆ ಇರುವುದು ಒಂದೇ ಪರಿಹಾರ. ಅದು ಪ್ರೀತಿ. ನಮ್ಮನ್ನು ನಾವು ಪ್ರೀತಿಸಬೇಕು. ಆಗ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ನಾವು ನಮ್ಮನ್ನು ನಿಜವಾಗಿಯೂ ಪ್ರೀತಿಸಿದಾಗ ನಾವು ಹೇಗೆ ಇದ್ದೇವೆಯೋ ಹಾಗೆಯೇ ನಮ್ಮನ್ನು ಒಪ್ಪಿಕೊಳ್ಳುತ್ತೇವೆ. ಬೇರೆಯವರನ್ನೂ ಇಷ್ಟಪಡುತ್ತೇವೆ. ಒಳ್ಳೊಳ್ಳೆಯ ಸಂಬಂಧಗಳು ಆರಂಭಗೊಳ್ಳುತ್ತವೆ. ಹೊಸ ಉದ್ಯೋಗ ಸಿಗಬಹುದು. ಬರ‍್ಯಾವುದೋ ಊರಿನಲ್ಲಿ ಬದುಕುವುದಕ್ಕೆ ಆರಂಭಿಸಬಹುದು. ಯಾರು ತಮ್ಮನ್ನು ತಾವು ಇಷ್ಟಪಡುತ್ತಾರೋ ಅವರು ತಮ್ಮನ್ನೂ ಬೈಯ್ಯುವುದಿಲ್ಲ; ಬೇರೆಯವರನ್ನೂ ಬೈಯ್ಯುವುದಿಲ್ಲ.

ನಾವು ನಮ್ಮನ್ನು ಬೈದುಕೊಂಡಿದ್ದಾಗ, ನಾವೇನೂ ಇಲ್ಲ ಎಂದುಕೊಮಡಿದ್ದಾಗ ನಮ್ಮ ಜೀವನ ನಿಂತ ನೀರಾಗಿರುತ್ತದೆ. ನಾವು ಏನನ್ನೂ ಸಾಧಿಸುವುದಿಲ್ಲ. ಅದೇ ನಮ್ಮನ್ನು ನಾವು ಪ್ರೀತಿಸುವುದನ್ನು ಒಮ್ಮೆ ಕಲಿತುಕೊಂಡರೆ ಮ್ಯಾಜಿಕ್ ಶುರುವಾಗುತ್ತದೆ. ನಮ್ಮ ಶಕ್ತಿ ಏನು ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ನಮ್ಮ ಬಗ್ಗೆ ನಾವೇ ಕೆಟ್ಟದಾಗಿ ಯೋಚಿಸುತ್ತಾ ಇದ್ದಲ್ಲೇ ಇರುವ ಬದಲು ನಮ್ಮನ್ನು ನಾವು ಪ್ರೀತಿಸುತ್ತಾ ಯಶಸ್ಸು ಪಡೆಯುವುದರಲ್ಲಿ ಖಂಡಿತವಾಗಿಯೂ ಖುಷಿಯಿದೆ.

ಹೀಗೆ ನಮ್ಮ ಬದುಕಿಗೆ ಮಾರ್ಗದರ್ಶಕವಾಗಬಲ್ಲ ಅದೆಷ್ಟೋ ವಿಚಾರಗಳನ್ನು ಲೂಯೀಸ್ ಅವರು ಈ ಪುಸ್ತಕದಲ್ಲಿ ತಿಳಿಸಿಕೊಟ್ಟಿದ್ದಾರೆ. ದೇಹ ಮತ್ತು ಮನಸ್ಸಿನ ಸಮಸ್ಯೆಗಳನ್ನು ಸರಿಮಾಡಿಕೊಂಡರೆ ಬದುಕಿಗೆ ಹಿಡಿದಿರುವ ರೋಗವನ್ನು ಗುಣಪಡಿಸಬಹುದು ಎನ್ನುವುದು ಅವರ ಅನುಭವ ಮತ್ತು ನಂಬಿಕೆ. ಇಂತಹ ಒಳ್ಳೆಯ ಪುಸ್ತಕ ಬರೆದ ಲೂಯೀಸ್ ಅವರಿಗೆ ನಿಜಕ್ಕೂ ಅಭಿನಂದನೆ ಸಲ್ಲಲೇಬೇಕು.

‍ಲೇಖಕರು avadhi

February 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: