ವಿಶಾಲ್ ಮ್ಯಾಸರ್
——
ಈ ಕಾಲಕ್ಕೆ ಯಾವ
ಕವಿತೆಯು ಹುಟ್ಟುವುದಿಲ್ಲ
ಉಸಿರು ಕಟ್ಟುವ
ಕಂಬನಿಯೊಂದನ್ನು ಬಿಟ್ಟು
ಈ ಕಾಲಕ್ಕೆ ಯಾವ
ರೂಪಕವು ಕೆಲಸಕ್ಕೆ ಬರುವುದಿಲ್ಲ
ಜಗದ ದುಃಖಕೆ ತೆರೆದ
ಸಮಣನ ಕಿವಿಯೊಂದು ಬಿಟ್ಟು
ಈ ಕಾಲಕೆ ಯಾವ ಧರ್ಮವೂ ದಯಾಮಯಿ ಆಗಿರುವುದಿಲ್ಲ
ಕಣ್ಣೊರೆಸುವ ಒರಟಾದ ಕಯ್ಯೊಂದನ್ನು ಬಿಟ್ಟು
ಈ ಕಾಲಕ್ಕೇ ಯಾವ ದೇಶವೂ ಏನು ಮಾಡುವುದಿಲ್ಲ
ಗಡಿ ಕೊರೆದು ದ್ವೇಷ ತುಂಬಿ ಯುದ್ಧದ ಹೊಟ್ಟೆ ತುಂಬಿಸುವುದು ಬಿಟ್ಟು
ಪ್ರಭುವೆ ಈ ಕಾಲಕ್ಕೇ ಏನೂ ಮಾಡಲಾಗುವುದಿಲ್ಲ

ಅಳಬಹುದಷ್ಟೆ ಪಾಪಿಗಳನ್ನು ಶಪಿಸಬಹುದಷ್ಟೆ
ಮಣ ಮಣ ಗೀಚಬಹುದಷ್ಟೆ
ಗಂಟಲು ಕಟ್ಟುತ್ತದೆ
ದುಃಖ ಉಮ್ಮಳಿಸುತ್ತದೆ
ನಿದ್ರೆಯಲ್ಲಿ ಈ ರಕ್ತ ಸಿಕ್ತ ಬೂಟುಗಳು ಎದೆಗೆ ಒದೆಯುತ್ತವೆ
ಇನ್ನೇನೂ ಮಾಡಲಿ ಪ್ರಭು
ಯುದ್ಧ ನಿಲ್ಲಲಿ ಅಷ್ಟೇ…!






0 Comments