ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಶಾಲ್ ಮ್ಯಾಸರ್ ಕವಿತೆಗಳು

ವಿಶಾಲ್ ಮ್ಯಾಸರ್ 

**

ಕವಿತೆ ೧

ನೆಲಕ್ಕೆ ಎದೆ ತಾಕಿದಾಗ

ಎರಡರಿಂದಲೂ ಮೊಳೆಯುವುದು

ಒಂದೊಂದು ಬೀಜ

ಎದೆಯಾಳದಲ್ಲೊಂದು ಬೀಜ ಹುಟ್ಟಿ

ಒಡಲಿಗೆ ಇಳಿದು

ನೆಲದಿಂದೊಂದು ಚಿಗುರು ಹೊಮ್ಮಿ 

ಆಂತರ್ಯಕ್ಕೆ ಸುಳಿದು 

ಸರಳ ರೇಖೆಯಲ್ಲಿಯೆ ಎರಡರ ಬೇರು 

ಕೂಡಿಸುವುದು ನಡುವೆ ಹರಿದ ನೀರು

ಕೊಂಬೆಗೊಂದು ಗುಬ್ಬಿಯ ಗೂಡು

ಪೋಟರೆಗೊಂದು ಹಕ್ಕಿಯ ಹಾಡು

ಆಕಾಶದ ಬಂದರಿಕೆಗೂ ಜಾಗ

ಎಲ್ಲೆಲ್ಲೂ ಪ್ರೇಮದ ರಾಗ

ಹೌದು ನೆಲಕ್ಕೆ ಎದೆಯಿಕ್ಕಿದವನು

ಆಕಾಶಕ್ಕೆ ಬೆನ್ನು

ಆಕಾಶಕ್ಕೆ ಬಾಯಿ ತೆರೆದವನ

ಪಾದವೆಲ್ಲ ಹುಣ್ಣು

      ***

ಕವಿತೆ ೨

ಅವಳು ನದಿಯಂತೆ ಹರಿದಳು

ಎದೆಯ ಬಾಚಿ ಹಾಲುಡಿಸಿದಳು

ಸೆರಗು ಚಾಚಿ ಬದುಕ ಪೊರೆದಳು

ಕಲ್ಲ ಕಡೆಯುತ್ತಾಳೆ ಶಿಲ್ಪ ಬರೆಯುತ್ತಾಳೆ 

ಅವಳು ಬೆಚ್ಚಗಿನ ಹಚ್ಚಡ

ಅದೆಷ್ಟು ಸೂಜಿಯ ಚುಚ್ಚಿ

ದಾರ ದಾರದಿ ಬೆಸೆದು ಅರಳಿದಳು

ಚಳಿ ಗಾಳಿಗೆ ಬದುಕು ಬೆಚ್ಚಗಿಟ್ಟಳು 

ಅವಳು ಬೆವರು ಹಸಿರ ಬೆಸೆದು

ಅರಳಿದ ಚೆಲುವು

ಹೂವು, ಹೀಚು,ಕಾಯಿ,ಮಯ್ಯಿ 

ಕಸ ಕಡ್ಡಿಯ ನಡುವೆ ಅರಳಿದನಗುವು

       

‍ಲೇಖಕರು avadhi

8 January, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading