ವಿರಮಿಸುವ ಮುನ್ನ…

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

ಸಂಯುಕ್ತ ಕರ್ನಾಟಕ’ ‘ವಾರ್ತಾ ಭಾರತಿಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರುಅವಧಿ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ

೧೯೯೯ ಹೆಚ್ಚು ಸದ್ದು ಗದ್ದಲವಿಲ್ಲದೆ ಇಪ್ಪತ್ತನೆಯ ಶತಮಾನಕ್ಕೆ ವಿದಾಯ ಹೇಳಿತು. ಹೊಸ ಶತಮಾನದ ಮೊದಲನೆಯ ಮಾಹೆ ತೇದಿ ೩೧ಕ್ಕೆ ನಾನು ದಿ ಪ್ರಿಂಟರ್ಸ್‌ (ಮೈಸೂರು) ಲಿಮಿಟೆಡ್ ಸಂಸ್ಥೆಯಿಂದ ನಿವೃತ್ತಿ ಹೊಂದಲಿರುವ ಸೂಚನೆಯನ್ನು ಸಿಬ್ಬಂದಿ ವಿಭಾಗ ಮೂರು ತಿಂಗಳು ಮುಂಚೆಯೇ ನೀಡಿತ್ತು. ಜನವರಿ ೧೨ಕ್ಕೆ ನನಗೆ ೫೮ ವರ್ಷ ತುಂಬುತ್ತಿತ್ತು. ಅಂದೇ ನನ್ನನ್ನು ಸೇವೆಯಿಂದ ಬಿಡುಗಡೆ ಮಾಡಿ ಎಂದು ಪರ್ಸನಲ್ ಮ್ಯಾನೇಜರಿಗೆ ತಿಳಿಸಿದೆ. ತಿಂಗಳ ಮಧ್ಯೆ ಬಿಡುಗಡೆಡ ಮಾಡುವಂತಿಲ್ಲ ಎಂದರು.

ಆ ದಿನ ಬಂದೇ ಬಿಟ್ಟಿತು. ನಾನು ಎಂದಿನಂತೆ ಬೆಳಿಗ್ಗೆ ೧೦-೩೦ಕ್ಕೆ ಕಚೇರಿಗೆ ಹೋದೆ. ಕೆಲಸದಲ್ಲಿ ನಿರತನಾದೆ. ಸುಮಾರು ೧೧.೩೦ ರ ಸಮಯ. ಇ.ಡಿ.ಯವರು ನಮ್ಮ ಕಂಪನಿಯ ನಿರ್ದೇಶಕರೂ ಅದ ಖ್ಯಾತ ಪತ್ರಕರ್ತ ಕುಲದೀಪ್ ನಯ್ಯಾರ್ ಜೊತೆ ನನ್ನ ಕ್ಯಾಬಿನ್ ಗೆ ಬಂದರು. ಇಬ್ಬರನ್ನೂ ಸ್ವಾಗತಿಸಿದೆ. ಐದ್ ಹತ್ತು ನಿಮಿಷ ಲೋಕಾಭಿರಾಮ ಮಾತು ಕತೆಯಾಯಿತು.

ನಂತರ ಇ.ಡಿ.ಯವರು ನಾನು ಹೊರಡುತ್ತೇನೆ ಎಂದು ನಿರ್ಗಮಿಸಿದರು. ಕುಲದೀಪ್ ನಯ್ಯರ್ ಹೀಗೆ ಬಂದಾಗಲೆಲ್ಲ ಕರ್ನಾಟಕದಲ್ಲಿ ಏನಾಗುತ್ತಿದೆ’ ಎಂದು ಮಾತು ಶುರುಮಾಡುತ್ತಿದ್ದರು. ನನ್ನಿಂದ ಕರ್ನಾಟಕದ ರಾಜಕೀಯ ಮತ್ತಿತರ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಿದ್ದರು. ದೆಹಲಿಯಲ್ಲಿ ಕುಳಿತು ತಾವು ಕಂಡ ಕರ್ನಾಟಕದ ರಾಜಕೀಯದ ಒಳನೋಟಗಳನ್ನು ನಮಗೆ ನೀಡುತ್ತಿದ್ದರು. ಅವರು ಬಂದು ಕುಳಿತರೆ ದೆಹಲಿ ರಾಜಕಾರಣ, ರಾಷ್ಟ್ರದ ರಾಜಕಾರಣ ನಮ್ಮ ಬಳಿ ಬಂದಂತಾಗುತ್ತಿತ್ತು. ಅಂದು ಸಹ ಈ ಮಾತುಕತೆ ಮುಗಿದ ನಂತರ ನಯ್ಯರ್ ಕೇಳಿದರು:

‘ಐ ಆಮ್ ಟೋಲ್ಡ್ ಟು ದೇ ಇಸ್ ಯುವರ್ ಲಾಸ್ಟ್ ವರ್ಕಿಂಗ್ ಡೇ ಹಿಯರ್, ಈಸಿಟ್?

‘ಯಸ್ ಸರ್, ಟುಡೇ ಈಸ್  ಮೈ ಲಾಸ್ಟ್ ವರ್ಕಿಂಗ್ ಡೇ ಹಿಯರ್’

‘ಯು ಶುಡ್ ಕಂಟಿನ್ಯೂ ಒನ್ ಆರ್ ಟು ಯಿಯರ್ಸ್. ಯು ಆರ್ ನಾಟ್ ಆಸ್ಕಿಂಗ್ ಫಾರ್ ಎಕ್ಸಟೆನ್ಷನ್’

‘ನೋ ಸರ್ ಐ ಆಮ್ ನಾಟ್.’

‘ದೆ ಶುಡ್ ಹ್ಯಾವ್ ಆಫರ್ಡ್ ಯು’

ಎಂದು ಎದ್ದು ನಿಂತರು. ಶುಭ ಕೋರಿದರು. ಲಿಫ್ಟ್ವರೆಗೆ ಹೋಗಿ ಅವರನ್ನು ಬೀಳ್ಕೊಟ್ಟು ಬಂದೆ.

ಅಂದು ಮಧ್ಯಾಹ್ನ ನಿತ್ಯದ ಮೀಟಿಂಗಿಗೆ ಸ್ವಲ್ಪ ಮುಂಚಿತವಾಗಿಯೇ ಆಡಳಿತ ವಿಭಾಗಕ್ಕೆ ತೆರಳಿ ಪ್ರತ್ಯೇಕವಾಗಿ ಎಂ.ಡಿ, ಇ.ಡಿ. ಮತ್ತು ಡೈರೆಕ್ಟರ್ ಅವರನ್ನು ಭೇಟಿಮಾಡಿ ನನ್ನ ನಿವೃತ್ತಿಯ ವಿಚಾರ ತಿಳಿಸಿದೆ. ಈ ಮುವತ್ಮೂರು ವರ್ಷಗಳ ಕಾಲ ‘ಪ್ರವಾ’ದಲ್ಲಿ ನನಗೆ ನೀಡಿದ ಅವಕಾಶಗಳಿಗಾಗಿ ಸಂಸ್ಥೆಗೆ ಹಾಗೂ ವೈಯಕ್ತಿಕವಾಗಿ, ಗುರುಸ್ವಾಮಿಯವರು, ನೆಟ್ಟ ಕಲ್ಲಪ್ಪನವರು ಹಾಗೂ  ಈಗಿನ ಎಲ್ಲ ನಿರ್ದೇಶಕರುಗಳಿಗೆ ನಾನು ಕೃತಜ್ಞನಾಗಿದ್ದೇನೆ ಎಂದು ನಮ್ರತೆಯಿಂದ ತಿಳಿಸಿದೆ.

ನಿತ್ಯದ ಸಭೆಯ ನಂತರ ಎಲ್ಲ ಮ್ಯಾನೇಜರುಗಳಿಗೂ ತಿಳಿಸಿ, ಇದುವರೆಗಿನ ಸಹಕಾರಕ್ಕೆ ವಂದಿಸಿ ವಿದಾಯ ಹೇಳಿದೆ. ಕಾರ್ಪೊರೆಟ್ ವಿಭಾಗದ ವೈಸ್ ಪ್ರೆಸಿಡೆಂಟ್ ಪದ್ಮನಾಭನ್ ‘ಯು ಆಸ್ಕ್ ಫಾರ್ ಎಕ್ಸ್ಟೆನ್ಷನ್. ವಿ ನೀಡ್ ಯು’ ಎಂದರು.

‘ಥ್ಯಾಂಕ್ಯೂ ಸರ್, ೩೩ ಇಯರ್ಸ್ ೩ ಮಂತ್ಸ್ . ಲಾಂಗ್ ಇನ್ನಿಂಗ್ಸ್.. ‌ ಇಟೀಸ್ ಎನಫ್ ಫಾರ್ ಮಿ’ -ಎಂದು ವಿದಾಯ ಹೇಳಿದೆ.

ಅಂದು ಸಂಜೆ ಎಂದಿನಂತೆ ಸಂಪಾದಕೀಯ ಸಭೆ ನಡೆಸಿದೆ. ರಾತ್ರಿ ೯-೩೦ರವರೆಗೆ ಇದ್ದು ಕೆಲಸ ಮಾಡಿದೆ. ನಂತರ ಸಹೋದ್ಯೋಗಿಗಳಿಗೆ ವಿದಾಯ ಹೇಳಿ ಮನೆಗೆ ಬಂದೆ.

ಸಹೋದ್ಯೋಗಿಗಳಲ್ಲಿ ಕೆಲವರು ನಾನು ಇನ್ನೂ ಒಂದೆರಡು ವರ್ಷ ಇರುತ್ತೇನೆ ಎಂದು ಭಾವಿಸಿದಂತ್ತಿತ್ತು.ಇನ್ನು ಕೆಲವರಿಗೆ ನಾನು ಎಕ್ಸ್ಟೆನ್ಷನ್ನಿಗೆ ಮನವಿ ಮಾಡದೆ ಇದ್ದುದು ಆಶ್ಚರ್ಯವನ್ನುಂಟುಮಾಡಿತ್ತು. ೫೮, ಸರ್ಕಾರ ನಿವೃತ್ತಿಗೆ ಗೊತ್ತುಪಡಿಸಿದ ವಯಸ್ಸು. ಹಾಗೆಂದು ದುಡಿಯುವ ಶಕ್ತಿ ತೀರಿತೆಂದಲ್ಲ.ಹೊಸ ತಲೆಮಾರಿಗೆ ಅವಕಾಶಗಳನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರ ಸೇರ್ಪಡೆಗೆ-ನಿವೃತ್ತಿಗೆ ವಯೋಮಿತಿಗಳನ್ನು ಗೊತ್ತುಪಡಿಸಿರ ಬೇಕು.

ಉದ್ಯೋಗ ಬೇಡಬೇಕಾದ ವಯಸ್ಸಿನಲ್ಲಿ ಉದ್ಯೋಗ ಬೇಡಿದೆ. ಉದ್ಯೋಗ ಕೊಟ್ಟರು. ಈಗ ನಿವೃತ್ತಿಯ ವಯಸ್ಸು ಬಂದಿದೆ. ನಿವೃತ್ತನಾಗಿ ಹೊಸ ತಲೆಮಾರಿಗೆ ಜಾಗ ಬಿಟ್ಟುಕೊಡ ಬೇಕು, ಅವರ ದಾರಿಗೆ ಅಡ್ಡಿಯಾಗಬಾರದು ಎನ್ನುವುದು ನನ್ನ ನಿಲುವಾಗಿತ್ತು. ಎಂದೇ ನಾನು ಎಕ್ಸ್ಟೆನ್ಷನ್ ಕೇಳಲಿಲ್ಲ.

ನನ್ನಲ್ಲಿ ಇನ್ನೂ ದುಡಿಯುವ ಹುಮ್ಮಸ್ಸು ಮತ್ತು ಶಕ್ತಿ ಇತ್ತು. ಮನೆಯ ಸ್ಥಿತಿಯೂ ಇನ್ನಷ್ಟು ಕಾಲ ನನ್ನ ಸಂಪಾದನೆಯನ್ನು ಬಯಸುತ್ತಿತ್ತು. ಮನೆಯಲ್ಲಿ ಐದು ಮಂದಿ. ಮಕ್ಕಳ ವಿದ್ಯಾಭ್ಯಾಸ ಇನ್ನೂ ಮುಗಿದಿರಲಿಲ್ಲ. ಅವರ ವಿದ್ಯಾಭಾಸ ಮುಗಿದು ಅವರೊಂದು ನೆಲೆ ಕೆಂಡು ಕೊಳ್ಳುವವರೆಗೆ ನನ್ನ ಜವಾಬ್ದಾರಿ ಇತ್ತು. ಮಗಳ ಮದುವೆ ಮಾಡಬೇಕಿತ್ತು. ಕೆಲಸ ಮಾಡುವ ಶಕ್ತಿ, ಹುಮ್ಮಸ್ಸು ಇದ್ದರೂ ಅವಕಾಶಗಳು ಕಾಣಿಸಲಿಲ್ಲ. ‘ಪ್ರವಾ’ದಲ್ಲಿಕಾರ್ಯ ನಿರ್ವಾಹಕ ಸಂಪಾದಕನಾಗಿ ನಿವೃತ್ತಿ ಹೊಂದಿದವನಿಗೆ ಅದೇ ಸ್ಥಾನಮಾನ ಬೇರೆಡೆ ಸಿಗುವ ಸಾಧ್ಯತೆ ಇರಲಿಲ್ಲ.

ನಿವೃತ್ತಿ ಹೊಂದಿದ ಸ್ವಲ್ಪ ಸಮಯದ ನಂತರ ಜಿ.ಎಸ್.ಸದಾಶಿವ ಫೋನ್ ಮಾಡಿ ‘ಕನ್ನಡ ಪ್ರಭ’ಕ್ಕೆ ಎರಡು ವಾರಗಳಿಗೊಮ್ಮೆ ಪುಸ್ತಕದ  ಅಂಕಣ ಬರೆಯಲು ಹೇಳಿದರು. ಸುಮ್ಮನೆ ಕೂರಲಿಲ್ಲ. ಓದು ಮತ್ತು ಬರಹಗಳಲ್ಲಿ ತೊಡಗಿಕೊಂಡೆ. ಎಷ್ಟೋ ದಿನಗಳ ಹಿಂದೆ ಮಾಡಬೇಕೆಂದುಕೊಂಡಿದ್ದ ಕೆಲಸಗಳ ನೆನಪಾಯಿತು. ಶೇಕ್ಸ್ಪಿಯರ್, ಒ.ಹೆನ್ರಿ, ಟಾಲ್ ಸ್ಟಾಯ್, ಲಾರೆನ್ಸ್ ಅಧ್ಯಯನ ಶುರುಮಾಡಿದೆ. ಅವರ ಕೆಲವು ಕೃತಿಗಳನ್ನು ಕನ್ನಡದಲ್ಲಿ ಅನುಸೃಷ್ಟಿ ಮಾಡಿದೆ. ವಿಮರ್ಶೆ ಬರೆದೆ. ‘ಅಂಕಿತ’ದ ಪ್ರಕಾಶ ಕಂಬತ್ತಳ್ಳಿ ಮತ್ತು ಪ್ರಭಾ ಪ್ರಕಟಿಸಲು ಮುಂದಾದರು. ಬರವಣಿಗೆಯಿಂದ ಬದುಕ ಬಲ್ಲೆ ಎನ್ನುವ ಧೈರ್ಯ ಬಂತು. ಮುಂದೆ ವಸಂತ ಪ್ರಕಾಶನದ ಶ್ರೀ ಮುರುಳಿ ಮತ್ತು ಸ್ವಪ್ನ,ಕಾಮಧೇನು ಪ್ರಕಾಶನಗಳೂ ನನ್ನ ಪುಸ್ತಕಗಳನ್ನು ಪ್ರಕಟಿಸಿದರು.

ಓದು ಬರವಣಿಗೆಗಳ ಮಧ್ಯದಲ್ಲಿರುವಾಗಲೇ ಒಂದು ದಿನ ಗೆಳೆಯ ದೇವನಾಥನಿಂದ ಫೋನ್ ಬಂತು.

‘ರಾಮ ಮೂತೀಯವರು ನಿನ್ನನ್ನು ನೋಡಬೇಕೆನ್ನುತಿದ್ದಾರೆ, ಎಲ್ಲಿ ಭೇಟಿಯಾಗೋಣ’

ರಾಮ ಮೂರ್ತಿ ಸರಿಸುಮಾರು ನನ್ನ ಓರಿಗೆಯ ಪತ್ರಕರ್ತರು.ಪ್ರಾರಂಭದಲ್ಲಿ ‘ಇಂಡಿಯನ್ ಎಕ್ಸಪ್ರೆಸ್’ ಬೆಳೆಸಿದ ಖ್ಯಾತಿಯ ಹಿರಿಯ ಪತ್ರಕರ್ತ ಶ್ರೀ ಸಂಪಿಗೆಮನೆ ಕೃಷ್ಣ ಮೂರ್ತಿಯವರ ಗರಡಿಯಲ್ಲಿ ಪಳಗಿದವರು. ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಡೆಪ್ಯುಟಿ ನ್ಯೂಸ್ ಎಡಿಟರ್ ಆಗಿದ್ದರು. ಭಾರತೀಯ ವಿದ್ಯಾ ಭವನದ ಪತ್ರಿಕೋದ್ಯಮ ಶಿಕ್ಷಣ ಶಾಲೆಯಲ್ಲಿ ಪ್ರಾಧ್ಯಪಕರಾಗಿದ್ದರು. ಮರುದಿನ ಎಂ.ಜಿ.ರಸ್ತೆಯ ಕಾಫೀ ಹೌಸ್ನಲ್ಲಿ ಭೇಟಿಯಾದೆವು. ರಾಮ ಮೂರ್ತಿಯವರರು ನೇರ ವಿಷಯ ಪ್ರಸ್ತಾಪಿಸಿದರು.

ಭಾರತೀಯ ವಿದ್ಯಾ ಭವನ ಕನ್ನಡ ಮಾಧ್ಯಮದಲ್ಲಿ ಪತ್ರಿಕೋದ್ಯಮ ಡಿಪ್ಲೊಮಾ ಶಿಕ್ಷಣ ಆರಂಭಿಸುವ ಉದ್ದೇಶ ಹೊದಿದೆಯೆಂದೂ ಅದರ ಶೈಕ್ಷಣಿಕ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳಬೇಕೇಂಬುದು ಕಾಲೇಜಿನ ಪ್ರಾಂಶುಪಾಲರ ಇಚ್ಛೆಯಾಗಿದೆಯೆಂದೂ ತಿಳಿಸಿದರು. ಆಗ ಶ್ರೀ ವಿ.ಎನ್.ನಾರಾಯಣನ್ ಭಾರತೀಯ ವಿದ್ಯಾಭವನ ಜರ್ನಲಿಸಮ್ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಸಂಯುಕ್ತ ಕರ್ನಾಟಕದಲ್ಲಿ ನನ್ನ ಸಹೋದ್ಯೋಗಿಯಾಗಿದ್ದ  ಶ್ರೀ ಮತ್ತೂರು ಕೃಷ್ಣ ಮೂರ್ತಿ ಬೆಂಗಳೂರು ಭವನದ ನಿರ್ದೇಶಕರಾಗಿದ್ದರು.

ವಿ.ಎನ್.. ನಾರಾಯಣನ್, ಖ್ಯಾತ ಪತ್ರಕರ್ತರಾಗಿದ್ದ ವಿ.ಕೆ.ನರಸಿಂಹನ್ (ತುರ್ತು ಪರಿಸ್ಥಿತಿ ವಿರುದ್ಧ ಇಂಡಿಯನ್ ಎಕ್ಸ್ಪ್ರೆಸ್  ಸಂಪಾದಕೀಯ ಅಂಕಣವನ್ನು ಖಾಲಿ ಬಿಟ್ಟು ಪ್ರತಿಭಟಿಸಿದ ಖ್ಯಾತಿಯವರು) ಅವರ ಪುತ್ರ. ಸ್ಟೇಟ್ಸ್ಮನ್ ಮೊದಲಾದ ಪತ್ರಿಕೆಗಳಲ್ಲಿ ಕೆಲಸ ಮಾಡಿ ನವ ದೆಹಲಿಯ ಹಿಂದೂಸ್ತಾನ್ ಟೈಮ್ಸ್  ಪತ್ರಿಕೆಯ ಸಂಪಾದಕರಾಗಿದ್ದರು. ಒಂದು ಮುಂಜಾನೆ ನಾರಾಯಣನ್ ಅವರಿಗೆ ಆಘಾತ ಕಾದಿತ್ತು. ಅಂದಿನ ಸಂಚಿಕೆಯಲ್ಲಿ ಅವರ ಗಮನಕ್ಕೆ ತಾರದೆಯೇ ಸುಪ್ರಿಸಿದ್ಧ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರ ಚಾರಿತ್ರ್ಯ ಹರಣ ಮಾಡುವ ವರದಿಯೊಂದು ಪ್ರಕಟವಾಗಿತ್ತು.

ಆ ವರದಿಯನ್ನ ಸಂಪಾದಕರಾದ ತಮ್ಮ ಗಮನಕ್ಕೆ ತಾರದೆ ‘ನಾಟಿ’ ಮಾಡಿಸಿ ಅದರ ಹೊಣೆಯನ್ನು ತಮ್ಮ ತಲೆಗೆ ಕಟ್ಟಿದ್ದರೆಂದು ನಾರಾಯಣ್ ಅವರ ಅಂಬೋಣ. ಅದರ ವಿರುದ್ಧ ಪ್ರತಿಭಟಿಸಿ ನಾನಾರಾಯಣನ್ ರಾಜೀನಾಮೆ ನೀಡಿದರು. ಭಾರತೀಯ ವಿದ್ಯಾ ಭವನ ಅವರನ್ನು ಭವನ್ಸ್ ಕಾಲೇಜ್ ಆಫ್ ಕಮ್ಯುನಿಕೇಷನ್ ಅಂಡ್ ಮ್ಯಾನೇಜ್‌ಮೆಂಟ್‌ನ ಬೆಂಗಳೂರು ಶಾಖೆಯ ಪ್ರಾಂಶುಪಾಲರನ್ನಾಗಿಯೂ ಭವನ್ಸ್ ಜರ್ನಲ್ ನ  ಸಂಪಾದಕರನ್ನಾಗಿಯೂ ನೇಮಿಸಿತು. ಕನ್ನಡ ಮಾಧ್ಯಮದಲ್ಲಿ ಪತ್ರಿಕೋದ್ಯಮ ಶಿಕ್ಷಣ ನೀಡುವುದರಿಂದ ಕನ್ನಡಿಗರಿಗೆ ಹೆಚ್ಚು ಪ್ರಯೋಜನವಾದೀತು ಎನ್ನುವುದು ನಾರಾಯಣನ್ ಅವರ ಚಿಂತನೆಯಾಗಿತ್ತು.

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದರಿಂದ  ಹೆಚ್ಚಾಗಿ ಕನ್ನಡಿಗ ವಿದ್ಯಾರ್ಥಿಗಳನ್ನು ಆಕರ್ಷಿಸಬಹುದೆಂಬುದು ಅವರ ಆಲೋಚನೆ ಯುಕ್ತವಾದುದೇ ಆಗಿತ್ತು. ಭಾರತೀಯ ವಿದ್ಯಾ ಭವನದ ಆಡಳಿತ ಮಂಡಳಿ ಒಪ್ಪಿಗೆ ನೀಡಿದ ಕೂಡಲೇ ೨೦೦೦ ನವೆಂಬರ್‌ನಿಂದ ತರಗತಿಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಕನ್ನಡ ಪತ್ರಿಕೋದ್ಯಮ ಶಿಕ್ಷಣದ ಪೂರ್ತಿ ಹೋಣೆ ಹೊರಲು ಹಾಗೂ ಪಾಠ ಹೇಳಲು ಕನ್ನಡ ಪತ್ರಿಕೆಯ ನಿವೃತ್ತ ಸಂಪಾದಕರೊಬ್ಬರನ್ನು ಸೂಚಿಸುವಂತೆ ನಾರಾಯಣನ್ ಇಂಗ್ಲಿಷ್ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಾಠಮಾಡುತ್ತಿದ್ದ ರಾಮ ಮೂರ್ತಿಯವರನ್ನು ಕೇಳಿದ್ದರಂತೆ. ಅವರು ದೇವನಾಥ್‌ಗೆ ತಿಳಿಸಲಾಗಿ ದೇವನಾಥ್ ನನ್ನ ಹೆಸರನ್ನು ಸೂಚಿಸಿದ್ದರು. ಅಕ್ಟೋಬರ್ ಮೊದಲ ವಾರದಲ್ಲಿ ಮೂವರು ಭೇಟಿಯಾದೆವು.

ರಾಮ ಮೂರ್ತಿಯವರು ಈ ಹೊಸ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುವಂತೆ ನನಗೆ ಸೂಚಿಸಿದರು. ಉಪನ್ಯಾಸಕನಿಗಿರಬೇಕಾದ ಭಾಷಣ ಕೌಶಲ ನನ್ನಲ್ಲಿಲ್ಲ. ನಾನು ಒಳ್ಳೆಯ ಮಾತುಗಾರನಲ್ಲ, ನೀವು ಬೇರಯವರನ್ನು ಯೋಚಿಸಿವುದು ಉತ್ತಮವಾದೀತು ಎಂದೆ. ‘ಅದು ಪರವಾಗಿಲ್ಲ. ವಿದ್ಯಾರ್ಥಿಗಳ ಮುಂದೆ ನಿಂತಾಗ ಅನುಭವವೇ ನಿಮ್ಮಿಂದೆ ಮಾತನಾಡಿಸುತ್ತೆ’ ಎಂದರು ರಾಮ ಮೂರ್ತಿ.

ರಾಮ ಮೂರ್ತಿಯವರ ಧೈರ್ಯದ ಮೇಲೆ ಮರುದಿನ ನಾರಾಯಣನ್ ಅವರನ್ನು ನೋಡಿದೆ. ಮುವತ್ತಾರಕ್ಕೂ ಹೆಚ್ಚು ವರ್ಷಗಳ ಅನುಭವ, ಸಂಪಾದಕೀಯ ವಿಭಾಗದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿರುವುದು,ಸಾಹಿತ್ಯ ರಚನೆ ಮೊದಲಾದವುಗಳಿಂದ ನಾರಾಯಣನ್ ನನ್ನ ಅರ್ಹತೆಯನ್ನು ಅಳೆದು ತೂಗಿ ನೋಡಿದ್ದರು. ಅಕ್ಟೋಬರ್ ೧೪ರೊಳಗೆ ಕೆಲಸಕ್ಕೆ ಹಾಜರಾಗುವಂತೆ ಆಗಲೇ ನೇಮಕಾತಿ ಪತ್ರ ಕೊಟ್ಟು ಬಿಟ್ಟರು. ಶಿಕ್ಷಣದ ಪಠ್ಯ ಕ್ರಮ ಇಂಗ್ಲಿಷ್‌ನ ನಕಲು ಆಗಿರಬಾರದು ಕನ್ನಡಕ್ಕೇ ಪ್ರತ್ಯೇಕವಾಗಿರಬೇಕು ಹಾಗೂ ಶಿಕ್ಷಣ ಕಾರ್ಯಾನುಭವ ಪ್ರಧಾನವಾಗಿರಬೇಕು ಎಂಬ ನನ್ನ ಸಲಹೆಯನ್ನು ನಾರಾಯಣನ್ ಒಪ್ಪಿಕೊಂಡು ಅದರಲ್ಲಿ ನನಗೆ ಪೂರ್ಣ ಸ್ವಾತಂತ್ರ್ಯವಿದೆಯೆಂದು ತಿಳಿಸಿದರು.

ಕಾರ್ಯಕ್ರಮದಂತೆ ಆ ವರ್ಷವೇ ಶಿಕ್ಷಣ ಶುರುವಾಯಿತು. ಮೊದಲ ವರ್ಷ ವಿದ್ಯಾರ್ಥಿಗಳ ಸಂಖ್ಯೆಯನ್ನು ಮುವತ್ತಕ್ಕೆ ಸೀಮಿತಗೊಳಿಸಿದ್ದೆವು. ವಿದ್ಯಾರ್ಥಿಗಳ  ಪ್ರತಿಕ್ರಿಯೆಯೂ ಚೆನ್ನಾಗಿತ್ತು. ನಾನು ಸುದ್ದಿ ಪರಿಷ್ಕರಣೆ ಮತ್ತು ನಿರ್ವಹಣೆ, ಭಾಷಾಂತರ, ಪುಟ ವಿನ್ಯಾಸ, ನುಡಿಚಿತ್ರ ಬರವಣಿಗೆ, ಕನ್ನಡ ಭಾಷೆ ಮತ್ತು ಸಾಹಿತ್ಯ ಇವುಗಳನ್ನು ಬೋಧಿಸುತ್ತಿದ್ದೆ. ಖಾದ್ರಿ ಅಚ್ಯುತನ್ ಅವರನ್ನು ವಿದ್ಯುನ್ಮಾನ ಮಾಧ್ಯಮದ ವರದಿಗಾರಿಕೆ ಬೋಧಿಸುತ್ತಿದ್ದರು. ಹಾಗೂ ಮುದ್ರಣ ಮಾಧ್ಯಮದ ವರದಿಗಾರಿಕೆಯನ್ನು ಉದಯವಾಣಿಯ ಶ್ರೀ ಸುರೇಶ್ ಕುಮಾರ್ ಬೋಧಿಸುತ್ತಿದ್ದರು.

ವಿದ್ಯಾರ್ಥಿಗಳಿಗೆ ಒಂದು ತಿಂಗಳ ಕಾಲ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯಾನುಭವ ತರಬೇತಿಗೂ ವ್ಯವಸ್ಥೆ ಮಾಡಿದೆ.ಗ್ರಂಥಾಲಯಕ್ಕೆ ಕನ್ನಡ ಪುಸ್ತಕಗಳನ್ನು ತರಿಸಿದೆ. ಕನ್ನಡ/ಇಂಗ್ಲಿಷನ ಎಲ್ಲ ಪ್ರಮುಖ ಪತ್ರಿಕೆಗಳು  ಕನ್ನಡ ವಿಭಾಗಕ್ಕೆ ಪ್ರತ್ಯೇಕವಾಗಿ ತರಿಸಲು ನಾರಾಯಣನ್ ಅವರಿಂದ ಮಂಜೂರಾತಿ ಪಡೆದುಕೊಂಡೆ. ಕನ್ನಡ ಮಾಧ್ಯಮದ ಈ ಡಿಪ್ಲೊಮಾ ಶಿಕ್ಷಣ ಯಶಸ್ವಿಯಾಯಿತು. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದರು. ಭವನ್ಸ್ ಕಾಲೇಜಿನಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪಡೆದವರು ದೂರದರ್ಶನ ಮತ್ತು ಕನ್ನಡ ಪತ್ರಿಕೆಗಳಲ್ಲಿ ಉದ್ಯೋಗ ಪಡೆದರು.

೨೦೦೧ನೇ ಇಸವಿಯಿಂದ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಬಿ.ಎ.ಪದವಿ ಪರೀಕ್ಷೆಗೆ ಪತ್ರಿಕೋದ್ಯಮವನ್ನು ಐಚ್ಛಿಕವಾಗಿ ಬೋಧಿಸುವದನ್ನು ಜಾರಿಗೆ ತಂದಿತು. ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಿಂದ ಒಂದು ದಿನ ಕರೆ ಬಂತು. ಲೋಕ ಸೇವಾ ಆಯೋಗದಿಂದ ಉಪನ್ಯಾಸಕರ ನೇಮಕವಾಗುವವರೆಗೆ ತಮ್ಮ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಪತ್ರಿಕೋದ್ಯಮ ಪಾಠ ಮಾಡುವಂತೆ ಅವರು  ನನ್ನನ್ನು ಆಹ್ವಾನಿಸಿದರು. ದಿನಕ್ಕೆ ಎರಡು ಮೂರು ಪೀರಿಯಡ್ ಪಾಠ ಮಾಡಬೇಕಿತ್ತು- ಬೆಂಗಳೂರು ವಿಶ್ವವದ್ಯಾನಿಲಯದ ಪಠ್ಯ ಕ್ರಮದಂತೆ.

ವಿದ್ಯಾ ಭವನದಲ್ಲಿ ತರಗತಿಗಳು ನಡೆಯುತ್ತಿದ್ದು ಬೇಳಿಗೆ ೭-೪೫ ರಿಂದ ೯-೧೫ರ ವರೆಗೆ. ಅಲ್ಲಿ ಮುಗಿಸಿಕೊಂಡು ಸರ್ಕಾರಿ ಕಲಾ ಕಾಲೇಜಿಗೆ ಹೋಗುತ್ತಿದ್ದೆ. ಸರ್ಕಾರಿ ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯವರಾಗಿದ್ದು ಕನ್ನಡ ಮಾಧ್ಯಮದವರಾಗಿದ್ದರು. ವಿಶ್ವವಿದ್ಯಾನಿಲಯ ಗೊತ್ತುಪಡಿಸಿದ ಪಠ್ಯಕ್ರಮದಂತೆ ಪತ್ರಿಕೋದ್ಯಮ ಶಿಕ್ಷಣದ ಪಠ್ಯ ಪುಸ್ತಕಗಳು ಇಂಗ್ಲಿಷ್‌ನಲ್ಲಿದ್ದವು. ಕನ್ನಡದಲ್ಲಿ ಯಾವುದೂ ಲಭ್ಯವಿರಲಿಲ್ಲ. ಸುದ್ದಿ ಪರಿಷ್ಕರಣ, ವರದಿಗಾರಿಕೆಯಿಂದ ಹಿಡಿದು ಪಠ್ಯಕ್ರಮದ ಎಲ್ಲ ವಿಷಯಗಳನ್ನೂ ನಾನೊಬ್ಬನೇ ಬೋಧಿಸಬೇಕಾಗಿತ್ತು.

ನಾನು ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡು, ಕನ್ನಡದಲ್ಲಿ ಟಿಪ್ಪಣಿಗಳನ್ನು ಮಾಡಿಕೊಂಡು ಹೋಗುತ್ತಿದ್ದೆ. ಒಂದು ದಿನ ಒಂದಷ್ಟು ವಿದ್ಯಾರ್ಥಿಗಳು ಬಂದು ನಿಮ್ಮ ಟಿಪ್ಪಣಿಗಳನ್ನು ಕೊಡಿ ಸಾರ್ ಜೆರಾಕ್ಸ್ ಮಾಡಿಸಿಕೊಂಡು     ವಾಪಸು ಕೊಡುತ್ತೇವೆ. ಮನೇಲಿ ಅಭ್ಯಾಸ ಮಾಡಲಿಕ್ಕೆ ಅನುಕೂಲವಾಗುತ್ತೆ. ಇಂಗ್ಲಿಷ್ ನಮಗೆ  ಅರ್ಥವಾಗುವುದಿಲ್ಲ ಎಂದು ಕೇಳಿಕೊಂಡರು. ಒಬ್ಬಿಬ್ಬರು ವಿದ್ಯಾರ್ಥಿಗಳು ಈ ಟಿಪ್ಪಣಿಗಳನ್ನೇ ಪುಸ್ತಕ ಮಾಡಿಬಿಡಿ ಸರ್ ಎಂದು ಸಲಹೆಯನ್ನೂ ಕೊಟ್ಟರು. 

ಕನ್ನಡದಲ್ಲಿ ಪತ್ರಿಕೋದ್ಯಮ ಪುಸ್ತಕಗಳ ಅಗತ್ಯ ಎಷ್ಟಿದೆ ಎಂಬುದು ಆಗ ನನ್ನ ಅರಿವಿಗೆ ಬಂತು. ಹೀಗೆ ವಿದಾರ್ಥಿಗಳು ಕನ್ನಡದಲ್ಲಿ ಪತ್ರಿ ಕೋದ್ಯಮಕ್ಕೆ ಸಂಬಂಧಿಸಿದಂತೆ ನನ್ನಿಂದ ಪುಸ್ತಕಗಳನ್ನು ಬರೆಸಿದರು. ಪ್ರತಿಕೋದ್ಯಮ ಮತ್ತು ಅದರ ಇತಿಹಾಸ ಕುರಿತ ಸಮಗ್ರ  ಸಂಪುಟವೂ ಪ್ರಕಟವಾಯಿತು.

೨೦೦೯ನೇ ಇಸವಿಯವರೆಗೆ ಈ ಎರಡೂ ಕಾಲೇಜುಗಳಲ್ಲಿ ಪಾಠ ಮಾಡಿದೆ. ಸರ್ಕಾರಿ ಕಾಲೇಜಿಗೆ ಲೋಕಸೇವಾ

ಆಯೋಗದಿಂದ ಆಯ್ಕೆಯಾದ ಉಪನ್ಯಾಸಕರ ನೇಮಕವಾಯಿತು.ಸರ್ಕಾರಿ ಕಲಾ ಕಾಲೇಜಿನ ಉಪನ್ಯಾಸಕ ವೃತ್ತಿಯಿಂದ ಬಿಡುಗಡೆಯಾಯಿತು. ನಾರಾಯಣನ್ ವಿದ್ಯಾ ಭವನ ಬಿಟ್ಟರು. ಹೊಸದಾಗಿ ಬಂದವರು ಕನ್ನಡ ವಿಭಾಗಕ್ಕೆ ಇಷ್ಟೊಂದು ಪತ್ರಿಕಗಳೇಕೆ ವಿದ್ಯಾಥಿಗಳು ಪ್ರಜಾವಾಣಿ/ಡೆಕ್ಕನ್ ಹೆರಾಲ್ಡ್ ಓದಿದರೆ ಸಾಲದೆ ಎಂದು ಪತ್ರಿಕೆಗಳನ್ನು ನಿಲ್ಲಿಸಿ ಬಿಟ್ಟರು.

ವಿದ್ಯಾರ್ಥಿಗಳು ಪ್ರತಿದಿನ ತರಗತಿಯ ನಂತರ ಕನ್ನಡ ಪತ್ರಿಕೆಗಳನ್ನು ಓದಿ ಟಿಪ್ಪಣಿಗಳನ್ನು ಬರೆಯುಬೇಕೆಂದು ನಾನು  ಕಡ್ಡಾಯಮಾಡಿದ್ದೆ. ವಾರದ ಕೊನೆಯ ದಿನ ಒಂದು ಪೀರಿಯಡ್ ವಾರದ ಪತ್ರಿಕೆಗಳ ಪರಾಮರ್ಶೆ ನಡೆಯುತ್ತಿತ್ತು. ಪತ್ರಿಕೆಗಳನ್ನು ನಿಲ್ಲಿಸಿದ್ದು ಸರಿಯಲ್ಲ ವೆನಿಸಿತು. ಹೊಸಬರಿಗೆ ವಿದ್ಯಾರ್ಥಿಗಳು ಕನ್ನಡ ಪತ್ರಿಕೆಯನ್ನು ಓದಿ ಕಲಿಯುವ ಕ್ರಮ ಮನವರಿಕೆಯಾಗಲಿಲ್ಲ. ಹೊಸ ವ್ಯವಸ್ಥೆಯಲ್ಲಿ ಕೆಲಸ ಮಾಡುವುದು ಸಾಧ್ಯವಿಲ್ಲ ಎನಿಸಿ ಭಾರತೀಯ ವಿದ್ಯಾ ಭವನಕ್ಕೆ ವಿದಾಯ ಹೇಳಿದೆ.

ಈ ಪರಿಯಲ್ಲಿ ಬರವಣಿಗೆ , ಪತ್ರಿಕಾ ವ್ಯವಸಾಯ ನನ್ನ ಕೈಹಿಡಿದು ನಡೆಸಿತು. ಪತ್ರಿಕೋದ್ಯಮ ಬೋಧನೆಯಿಂದಲೂ ನಿವೃತ್ತನಾಗಿ ಓದು-ಬರವಣಿಗೆಯಲ್ಲಿ ತೊಡಗಿಕೊಂಡಿದಾಗಲೇ ಸಂಯುಕ್ತ ಕರ್ನಾಟಕದ ಸಂಪಾದಕ ಶ್ರೀ ಹುಣಸವಾಡಿ ರಾಜನ್ ಅವರಿಂದ ಕರೆ ಬಂತು. ರಾಜನ್ ಸಾಹಿತ್ಯದ ವಿದ್ಯಾರ್ಥಿ, ಸಮುದಾಯ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದವರು. ಅವರ ಸಾಮುದಾಯಿಕ ಕಳಕಳಿ, ಕೆಲಸಗಳ ಪರಿಚಯ ನನಗಿತ್ತು.

‘ಏನು ವಿಷಯ, ಹೇಳಿ ರಾಜನ್’

‘ಸಾರ್, ನಮ್ಮ ಅಧ್ಯಕ್ಷರು ನಿಮ್ಮನ್ನು ಭೇಟಿ ಮಾಡಬೇಕೆಂದಿದ್ದಾರೆ, ಬಿಡುವುದು ಮಾಡಿಕೊಂಡು ಬಂದರೆ ಸಂತೋಷವಾಗುತ್ತದೆ’

ಆಗ ಖ್ಯಾತ ವಕೀಲರಾದ ಶ್ರೀ ಅಶೋಕ್ ಹಾರನಹಳ್ಳಿಯವರು ಲೋಕ ಶಿಕ್ಷಣ ಟ್ರಸ್ಟಿನ ಅಧ್ಯಕ್ಷರಾಗಿದ್ದರು. ಮನೆಗೆ ಕಾರು ಕಳುಹಿಸಿಕೊಟ್ಟರು. ನಾನು ಹೋದೆ. ನಲವತ್ತೈದು ವರ್ಷಗಳ ನಂತರ ಮತ್ತೆ ಸಂಯುಕ್ತ ಕರ್ನಾಟಕದ  ಹೊಸ್ತಿಲಲ್ಲಿ ನಿಂತಿದ್ದೆ. ಶುರುವಿಗೆ ಅನ್ನ ಕೊಟ್ಟ ಸಂಸ್ಥೆ, ಅವಕಾಶಗಳನ್ನು ಕಲ್ಪಿಸಿದ ಸಂಸ್ಥೆ.ಶ್ಯಾಮ ರಾಯರ ‘ಇಫ್ ಐ ಮೈಂಡ್ ಐ ಕೆನ್ ಮೇಕ್ ಆರ್ ಮಾರ್ ಯುವರ್ ಕೆರಿಯರ್’ ಬೆದರಿಕೆಗೆ ಸಡ್ಡು ಹೊಡೆದು ಬಂದಿದ್ದ ಸಂಸ್ಥೆಯ ಹೊಸ್ತಿಲಲ್ಲಿ ಮತ್ತೆ ನಿಂತಿದ್ದೆ. ಲೋಕ ಶಿಕ್ಷಣ ಟ್ರಸ್ಟ್ ನನ್ನನ್ನು ಮತ್ತೆ ಕರೆದಿತ್ತು. ಮಗ ಮರಳಿ ಮನೆಗೆ ಬಂದಿದ್ದ.

ಈ ಭಾವನೆಗಳ ತಾಕಲಾಟದಲ್ಲೇ ನಾನು ಆಶೋಕ್  ಹಾರನಹಳ್ಳಿಯವರನ್ನು ಭೇಟಿಯಾದೆ. ಉಭಯ ಕುಶಲೋಪರಿಯ ನಂತರ ಅಶೋಕ ಹಾರನಹಳ್ಳಿಯವರು ಆಗಷ್ಟೆ ಪ್ರಕಟವಾಗಿದ್ದ ರಾಜಮೋಹನ ಗಾಂಧಿಯವರ ‘ಮೋಹನದಾಸ್- ಎ ಟ್ರೂ ಸ್ಟೋರಿ ಆಫ್ ಎ ಮ್ಯಾನ್. ಹಿಸ್ ಪೀಪಲ್ ಅಂಡ್ ಅನ ಎಂಪೈರ’ ಬೃಹತ್ ಗ್ರಂಥವನ್ನು ನನ್ನ ಮುಂದೆ ಹಿಡಿದು- ‘ಇದರ ಕನ್ನಡ ಅನುವಾದವನ್ನು ಲೋಕಶಿಕ್ಷಣ ಟ್ರಸ್ಟ್ ವತಿಯಿಂದ ಪ್ರಕಟಿಸುವ ಆಸೆ ನಮ್ಮದು. ನೀವು ಇದನ್ನು ಕನ್ನಡಕ್ಕೆ ಅನುವಾದಿಸಿಕೊಡಬೇಕು’ ಎಂದರು.

‘ಸಾರ್, ನನ್ನಿಂದ ಇದು ಸಾಧ್ಯವೇ? ನಾನು ಓದಿ ನೋಡಬೇಕು’

‘ನಿಮ್ಮಿಂದ ಸಾಧ್ಯ. ನಾನು ನಿಮ್ಮ, ರಾಮಚಂದ್ರ ಗುಹಾ ಮೊದಲಾದವರ ಕೃತಿಗಳ ಅನುವಾದಗಳನ್ನು ಓದಿದ್ದೇನೆ’ ಎಂದರು ಆಶೋಕ ಹಾರನಹಳ್ಳಿ. ನಾನು ಓದಿನೋಡಿ ತಿಳಿಸುತ್ತೇನೆ ಎಂದು ಹೇಳಿ ಪುಸ್ತಕ ತೆಗೆದುಕೊಂಡು ಬಂದೆ. ಹಗಲು ರಾತ್ರಿ ಎನ್ನದೆ ರಾಜಮೋಹನ ಗಾಂಧಿಯವರ ಅಜ್ಜನ  ಕಥನ ಓದಿಸಿಕೊಂಡಿತು. ಅನುವಾದವಲ್ಲ ಅದರ ಅನುಸೃಷ್ಟಿ ನನ್ನದಾಗಿರುತ್ತದೆ ಎಂದು ಶ್ರೀ ಅಶೋಕ್ ಹಾರನಹಳ್ಳಿಯವರಿಗೆ ಒಪ್ಪಿಗೆ ತಿಳಿಸಿದೆ.

‘ಗಾಂಧಿ ಒಂದು ಸತ್ಯ ಕಥೆ’ ಕನ್ನಡದಲ್ಲಿ ಅನುಸೃಷ್ಟಿಯಾಯಿತು. ಲೋಕ ಶಿಕ್ಷಣ ಟ್ರಸ್ಟ್ ಅಂದಚಂದಗಳಿಂದ ಬೃಹತ್ ಗ್ರಂಥವನ್ನು ಬಹಳ ಮುತುವರ್ಜಿವಹಿಸಿ ಪ್ರಕಟಿಸಿತು. ಶ್ರೀ ಅಶೋಕ್ ಹಾರನಹಳ್ಳಿಯವರು ರಾಜಮೋಹನ ಗಾಂಧಿಯವರನ್ನು ಕರೆಸಿ ಅವರ ಉಪಸ್ಥಿತಿಯಲ್ಲಿ ಗ್ರಂಥವನ್ನು ಲೋಕಾರ್ಪಣೆ ಮಾಡಿದರು.

೨೦೦೧೪-ಒಂದು ದಿನ ಬೆಳಿಗ್ಗೆ ಶ್ರೀ ಹುಣಸವಾಡಿ ರಾಜನ್ ಅವರಿಂದ ಮತ್ತೊಂದು ಫೋನ್ ಕರೆ. ಉಭಯಕುಶಲೋಪರಿಯ ನಂತರ ‘ಸಾರ್, ಇವತ್ತು ನಾಳೆಗಳಲ್ಲಿ ನಮ್ಮ ಆಫೀಸಿನ ಕಡೆ ಬರಲು ಸಾಧ್ಯವೆ ಸ್ವಲ್ಪ ಮಾತನಾಡುವುದಿದೆ’ ಎಂದು ಕೇಳಿದರು.

ಆಗಲಿ ನಿಮ್ಮನ್ನು ಭೇಟಿಯಾಗುವುದು ಸಂತೋಷವೇ ಎಂದೆ. ಮುಂದೊಂದು ದಿನ ಅವರು ಕಾರು ಕಳುಹಿಸಿಕೊಟ್ಟರು. ನಾನು ಅವರ ಆಫೀಸಿಗೆ ಹೋದೆ. ಅವರು ಸೀದಾ ನನ್ನನ್ನು ಶ್ರೀ ಆಶೋಕ ಹಾರನಹಳ್ಳಿಯವರ ಚೇಂಬರ್ಸಿಗೆ ಕರೆದೊಯ್ದರು. ಪತ್ರಿಕೋದ್ಯಮದ  ಅವತ್ತಿನ ಸ್ಥಿತಗತಿಗಳ ಬಗ್ಗೆ ಲೋಕಾಭಿರಾಮವಾಗಿ ಕೆಲವು ಮಾತುಗಳು ನಡೆದ ನಂತರ ಶ್ರೀ ಆಶೋಕ ಹಾರನಹಳ್ಳಿಯವರು ‘ಕಸ್ತೂರಿ ಮಾಸ ಪತ್ರಿಕೆಯ ಸಂಪಾದಕತ್ವವನ್ನು ನಾನು ವಹಿಸಿಕೊಳ್ಳಬೇಕೆಂಬುದು ತಮ್ಮ ಅಪೇಕ್ಷೆಯಾಗಿದೆ’ ಎಂದರು.

ನನಗೆ ಅದು ಅನಿರೀಕ್ಷಿತವಾಗಿತ್ತು. ಜೊತೆಗೆ ಸವಾಲೂ ಆಗಿತ್ತು. ದೂರದರ್ಶನದಿಂದಾಗಿ ನಿಯತಕಾಲಿಕಗಳು ಓದುಗರ ಉಪೇಕ್ಷೆಗೆ ಗುರಿಯಾಗಿದ್ದ ದಿನಗಳು.

‘ಸರ್ ಇದು ಕಷ್ಟ ಕಾಲ. ಸ್ವಲ್ಪ ಯೋಚಿಸಲು ಅವಕಾಶ ಕೊಡಿ’ ಎಂದೆ.

‘ಇಲ್ಲ, ಈ ಕಷ್ಟಕಾಲದಲ್ಲೇ ‘ಕಸ್ತೂರಿ’ಯ ಜವಾಬ್ದಾರಿಯನ್ನು ನೀವು ವಹಿಸಿಕೊಳ್ಳಬೇಕು’ ಎಂದರು ಆಶೋಕ್          ಹಾರನಹಳ್ಳಿಯವರು.

‘ಕಸ್ತೂರಿ’, ಪಾ.ವೆಂ. ಆಚಾರ್ಯರು ರೂಪಿಸಿದ ಕನ್ನಡದ ರೀಡರ್ಸ್ ಡೈಜೆಸ್ಟ್ ಎಂಬ ಖ್ಯಾತಿಯ ಮಾಸಪತ್ರಿಕೆ. ಅವರ ನಂತರ ಪತ್ರಿಕೋದ್ಯಮ ಕಂಡ ಹಲವು ಏಳುಬೀಳುಗಳಿಂದಾಗಿ ಅದರ ಖ್ಯಾತಿ ಗತ ವೈಭವವಾಗಿತ್ತು. ಈಗಿನ ಯುವಜನಾಂಗಕ್ಕೆ ‘ಕಸ್ತೂರಿ’ಯ ಪರಿಮಳದ ಪರಿಚಯವೇ ಇರಲಿಲ್ಲ. ಹಳೆಯ ತಲೆಮಾರಿನವರಿಗೆ ಅದು ಇನ್ನೂ ತಮ್ಮ ಅಚ್ಚುಮೆಚ್ಚಿನ ಡೈಜೆಸ್ಟ್ ಆಗಿತ್ತು.

ನನಗೂ ಇಂಥದೊಂದು ಕೆಲಸದ ಅಗತ್ಯವಿತ್ತು, ಒಪ್ಪಿಕೊಂಡೆ. ಪತ್ರಿಕಾ ವ್ಯವಸಾಯದಲ್ಲಿ ನಲವತ್ತು ವರ್ಷಗಳ ಸೇವೆಯ ನಂತರ, ಜಿ.ಎನ್.ರಂಗನಾಥ ರಾವ್ ಸಂಪಾದಕನಾಗಿ ಇಂಪ್ರಿಟಿನಲ್ಲಿ ಕೊನೆಗೂ ಕಾಣಿಸಿಕೊಂಡಿದ್ದ. ‘ಕಸ್ತೂರಿ’ಗೆ ಗತ ವೈಭವವನ್ನು ಮರಳಿ ತರುವುದರ ಜೊತೆಗೆ ನನ್ನದೇ ಆದ ಛಾಪನ್ನೂ ಮೂಡಿಸ ಬೇಕಿತ್ತು. ಶ್ರೀ ಅಶೋಕ ಹಾರನಹಳ್ಳಿಯವರು ಅದಕ್ಕೆ ಬೇಕಾದ ಸಂಪೂರ್ಣ ಸ್ವಾತಂತ್ರ್ಯವನ್ನು ನನಗೆ ಕೊಟ್ಟಿದ್ದರು.

‘ನಿಮ್ಮ ಶಬ್ಬ ಭಂಡಾರ ಬೆಳೆಯಲಿ’ ಎನ್ನುವುದು ಪಾ.ವೆಂ. ಅವರು ಪ್ರಾರಾಂಭಿಸಿದ ಅತ್ಯಂತ ಜನಪ್ರಿಯ ಅಂಕಣಗಳಲ್ಲಿ ಒಂದು. ಅದನ್ನು ಪುನರಾರಂಭಿಸಿದೆ. ವಿಜ್ಞಾನ ಹಾಗೂ ವಿವಿಧ ಕ್ಷೇತ್ರಗಳಿಳಲ್ಲಿ ಆಗುತ್ತಿರುವ ಬೆಳವಣಿಗೆಗಳ ಮಾಹಿತಿ ನಿಡುವ ತುಣುಕು ಸುದ್ದಿಗಳಿಗೆ ‘ಕಸ್ತೂರಿ’ ಪ್ರಖ್ಯಾತವಾಗಿತ್ತು. ಅದನ್ನು ಮತ್ತೆ ಪ್ರಾರಂಭಿಸಿದೆ. ವಿಜ್ಞಾನ, ಪರಿಸರ, ಮತ್ತು ಭಾಷೆ ಕುರಿತು ಹೊಸ ಅಂಕಣಗಳನ್ನು ಪ್ರಕಟಿಸಿದೆ.

ಅನಂತ ಮೂರ್ತಿ, ಶೂದ್ರ ಶ್ರೀನಿವಾಸ್, ಎಚ್.ಎಸ್. ವೆಂಕಟೇಶ ಮೂರ್ತಿ, ಟಿ.ಆರ್. ಅನಂತರಾಮು, ಶ್ರೀರಾಮ ಭಟ್ಟ ಅವರುಗಳಿಂದ ಹೊಸ ಅಂಕಣಗಳನ್ನು ಬರೆಸಿದೆ. ಪುಸ್ತಕ ವಿಭಾಗದಲ್ಲಿ ಆಧುನಿಕ ಸಂವೇದನೆಯ ಕಥೆ-ಕಾದಂಬರಿಗಗಳು ಪ್ರಕಟವಾದವು.ಹಳೆಯ ಸಂಚಿಕೆಗಳ ಉತ್ಕೃಷ್ಟವಾದ ಲೇಖನಗಳನ್ನು ‘ಮರುಕಳಿಕೆ’ಯಾಗಿ ಪ್ರಕಟಿಸಿದೆ. ಈ ಎಲ್ಲಪ್ರಯತ್ನಗಳಿಂದ ‘ಕಸ್ತೂರಿ’ ಮತ್ತೆ ಮೊದಲಿನಂತೆ ಪರಿಮಳಿಸಿ ಮಿಂಚತೊಡಗಿತು.

ವರ್ಷ ಕಳೆಯಿತು. ಮೋದಿ ಸರ್ಕಾರಕ್ಕೂ ವರ್ಷ ಕಳೆದಿತ್ತು. ಮೋದಿ ಸರ್ಕಾರದ ವರ್ಷದ ಸಾಧನೆಗಳನ್ನುಕುರಿತು ನಾನು ಕಟುವಾದ ಸಂಪಾದಕೀಯವೊಂದನ್ನು ಬರೆದಿದ್ದೆ. ಅದು ಸಹಜವಾಗಿಯೇ ‘ಭಕ್ತರಿಗೆ’ ಪ್ರಿಯವಾಗಿರಲಿಲ್ಲ. ನಿಂದನೆಯ ಟೆಲಿಫೋನ್ ಕರೆಗಳು ಬರಲಾರಂಭಿಸಿದವು. ಜೊತೆಗೆ ಅನಂತ ಮೂರ್ತಿ ಮತ್ತು ಗಿರೀಶ್ ಕರ್ನಾಡರ ಲೇಖನಗಳನ್ನು’ಕಸ್ತೂರಿ’ಯಲ್ಲಿ ಪ್ರಕಟಿಸಬಾರದೆಂದೂ ಆಗ್ರಹದ ಕರೆಗಳು ಬರಲಾರಂಭಿಸಿದವು. ಈ ಕರೆಗಳು ಹೆಚ್ಚಾಗಿ ಶಿವಮೊಗ್ಗ, ಬೆಳಗಾವಿ ಮತ್ತು ವಿಜಯಪುರದಿಂದ ಬರುತಿದ್ದ ಬೆದರಿಕೆಯ ಕರೆಗಳಾಗಿದ್ದವು. ಬರಿ ಬೆದರಿಕೆ ಕರೆಗಳಾಗಿರಲಿಲ್ಲ. ಅಸಭ್ಯ ಮಾತುಗಳಿಂದ ನಿಂದಿಸುತ್ತಿದ್ದರು.

ನಾನು ಅದಕ್ಕೆ ಹೆಚ್ಚು ಮಹತ್ವ ಕೊಡಲಿಲ್ಲ. ಆದರೆ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಭಟ್ ಅವರೇ ಒಮ್ಮೆ, ಅನಂತ ಮೂರ್ತಿಯವರ ಲೇಖನವೊಂದರ ಅರ್ಥ ತಿಳಿಸುವಂತೆ ಕೇಳಿದಾಗ ನನಗೆ ಸ್ವಲ್ಪ ಇರುಸುಮುರುಸಾಯಿತು. ಆ ವೇಳೆಗಾಗಲೇ ಮೋದಿಯವರ ಸರ್ಕಾರವನ್ನು ಟೀಕಿಸಿ ಬರೆಯವುದೆಂದರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಎನ್ನುವ ಅಭಿಪ್ರಾಯ ಪತ್ರಿಕಾ ರಂಗದಲ್ಲಿ ಮೂಡಿತ್ತು. 

ಮಾಧ್ಯಮವನ್ನು ಸೆಳೆದುಕೊಳ್ಳುವ ಪ್ರಯತ್ನವೂ ಆಖಿಲ ಭಾರತ ಮಟ್ಟದಲ್ಲಿ ಅಧಿಕಾರಾರೂಢ ಪಕ್ಷದಿಂದ ನಡೆದಿತ್ತು. ಮಾಧ್ಯಮದ-ವಿಶೇಷವಾಗಿ ವಿದ್ಯುನ್ಮಾನ-ವರ್ತನೆಯೂ ‘ಮೋದಿ’ಗೊಳಗಾದಂತಿತ್ತು. ಇಂಥ ಪರಿಸ್ಥಿತಿಯಲ್ಲಿ ಪತ್ರಿಕೆಗಳ ಆಡಳಿತವರ್ಗದವರೂ ಸಂಪಾದಕನಿಗೆ ಬೆಂಬಲವಾಗಿ ನಿಲ್ಲತ್ತಾರೆಂಬ ಭರವಸೆ ಇರಲಿಲ್ಲ. ಶ್ರೀ ಅಶೋಕ ಹಾರನಹಳ್ಳಿಯವರೂ ಅಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಟ್ಟಿದ್ದರು. ಆಗ ನನಗೆ ಕೆಲಸ ಮಾಡುವುದು ಅಸಾಧ್ಯವೆನಿಸಿ ರಾಜೀನಾಮೆ ಕೊಟ್ಟು ಹೊರಬಂದೆ.

ಈ ನಡುವೆ ಲೋಕ ಶಿಕ್ಷಣ ಟ್ರಸ್ಟ್ ಪ್ರಕಟಿಸಿದ ನನ್ನ ಅನುಸೃಷ್ಟಿ ‘ಮಹಾತ್ಮ ಗಾಂಧಿ ಒಂದು ಸತ್ಯಕಥೆ ‘ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. ನಾನು ಅಸ್ಸಾಂನಲ್ಲಿ ನಡೆದ ಸಮಾರಂಭಕ್ಕೆ ಹೋಗಿ  ಪ್ರಶಸ್ತಿ ಸ್ವೀಕರಿಸಿದೆನಾದರೂ ಮುಂದೊಂದು ದಿನ, ೨೦೧೫ರಲ್ಲಿ ಮೋದಿ ಸರ್ಕಾರದ ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ನೀತಿ ವಿರುದ್ಧ ಪ್ರತಿಭಟಿಸಿ ಈ ಪ್ರಶಸ್ತಿಯನ್ನು ಹಿಂದಿರುಗಿಸಿದೆ. ಪ್ರಶಸ್ತಿ ಮೊತ್ತವನ್ನು ಹಿಂದುರಿಗಿಸಿ ನೀಡಿದ  ಚೆಕ್ಕನ್ನು ಅಕಾಡೆಮಿ ನಗದು ಮಾಡಿಸಿಕೊಳ್ಳಲಿಲ್ಲ. ಫಲಕವನ್ನು ತನ್ನಲ್ಲೇ ಇಟ್ಟುಕೊಂಡಿತು.

ಈ ಪ್ರಶಸ್ತಿ ಮೋತ್ತವನ್ನು ನಾನು ಸ್ವಂತಕ್ಕೆ ಬಳಸಿಕೊಳ್ಳಲಿಲ್ಲ. ಅದರ ಜೊತೆಗೆ ‘ಮಹಾಭಾರತ’ ಹಾಗೂ ಇತರ ಪುಸ್ತಕಗಳಿಂದ ಬಂದ ಸಂಭಾವನೆಯನ್ನು ಸೇರಿಸಿ ಬಾಳ ಸಂಗಾತಿ ಸರಳಾಳ ಹೆಸರಿನಲ್ಲಿ ಉದಯೋನ್ಮುಖ ಮಹಿಳಾ ಲೇಖಕಿಯರನ್ನು ಪ್ರೋತ್ಸಾಹಿಸುವ ಸಲುವಾಗಿ ಟ್ರಸ್ಟ್ ಒಂದನ್ನು ಸ್ಥಾಪಿಸಿದೆ. ಈ ಟ್ರಸ್ಟ್ ಈ ವರ್ಷದಿಂದ ಕಾರ್ಯಾರಂಭಿಸಿದ್ದು ಮೊದಲ ವರ್ಷದ ಪ್ರಶಸ್ತಿ ಗ್ರಾಮೀಣ ಪ್ರತಿಭೆಗೆ ಸಂದಿರುವುದು ಸಂತೋಷದ ಸಂಗತಿ.

 ‘ನಡೆದ ದಾರಿಯ ತಿರುಗಿ ನೋಡಬಾರದು ಏಕೆ?

 ತಿರುಗಿ ನೋಡಿದರೆ ಮತ್ತೆ ಆ ಹೂವೆ ನಲುಗಬಹುದೆ?’ -ಎಂಬುದು ಕವಿ ವಾಣಿ.ತಿರುಗಿ ನೋಡದಿರಲು ಸಾಧ್ಯವೆ?ತಿರುಗಿ ನೋಡದಿದ್ದರೆ ಚರಿತ್ರೆ ಎಲ್ಲಿರುತ್ತಿತ್ತು? ನಲುಗಿದ್ದೇ ಹೆಚ್ಚು.

ನನ್ನ ಯಾತನೆ ಹೊರತಾಗಿ, ಯಾರನ್ನೂ ನೋಯಿಸುವುದು ನನ್ನ ಬರವಣಿಗೆಯ ಉದ್ದೇಶವಲ್ಲ. ಶ್ರೀಮತಿ ಪೂರ್ಣಿಮಾ ಅವರ ಹೇಳಿಕೆ ಓದಿದ್ದೇನೆ. ಮಿಥ್ಯಾರೋಪ ಎಂಬುದು ಅವರ ಸ್ವಕಲ್ಪನೆ. ರಾ.ನಂ. ಚಂದ್ರಶೇಖರ್ ಅವರೇ ‘ಕನ್ನಡ ಹೋರಾಟಗಳು’ ಪುಸ್ತಕದಲ್ಲಿ ಬರೆದಿರುವಂತೆ ೧೯೯೪ರ ಜನವರಿ ೩೧ರಂದು ಕಪ್ಪು ಬಾವುಟ ಪ್ರದರ್ಶ ನಡೆದದ್ದು ನಿಜ. ಆದರಲ್ಲಿ ಶ್ರೀಮತಿ ಪೂರ್ಣೀಮಾ ಅವರ ಭಾಗವಹಿಸಿದ್ದರು ಎಂಬುದು ನನ್ನ ಮಾತಲ್ಲ, ಅದು ಬೇರೊಬ್ಬರ ಮಾತು. ನಾನು ಉಲ್ಲೇಖ ಮಾಡಿರುವುದಷ್ಟೆ. ಒಂದು ಜವಾಬ್ದಾರಿ ಹುದ್ದೆಯಲ್ಲಿ ಇದ್ದುಕೊಂಡು, ನಾನು ಕಾಣದ ಪ್ರಕರಣದಲ್ಲಿ ಶಿಕ್ಷೆ ಕೊಡಬೇಕಾಗಿ ಬಂದ ಪರಿಸ್ಥಿತಿಯಲ್ಲಿ ನನಗೆ ಎದುರಾದ ನೈತಿಕ ಬಿಕ್ಕಟ್ಟನ್ನು ಮಾತ್ರ ಹೇಳುವ ಪ್ರಯತ್ನಮಾಡಿದ್ದೇನೆ.

ಬರೆಯುವುದು ಇನ್ನೂ ಬೇಕಾದಷ್ಟಿದೆ. ಸದ್ಯಕ್ಕೆ ವಿರಮಿಸುತ್ತೇನೆ.

ಎದೆಗೆ ಬರುತಿದೆ ಜಗದ ‘ಮದ’
ಕುಣಿದಲ್ಲದೆ ನಾ ತಾಳೆನಿದ…

(ಪುತಿನ ಕ್ಷಮೆ ಕೋರಿ)   

March 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಶ್ರೀರಂಗ

    *ಪ್ರಶಸ್ತಿ ವಾಪಸಾತಿ* ಎಂಬ ನಾಟಕದಿಂದ ಆದ ಪ್ರಯೋಜನವೇನು? ಅದೊಂದು ಸಮೂಹ ಸನ್ನಿ. ಅಷ್ಟೇ. ಅಲ್ಲವೇ?

    ಪ್ರತಿಕ್ರಿಯೆ
  2. SUDHA SHIVARAMA HEGDE

    ಇಂಥದೊಂದು ಅಂಕಣಕ್ಕಾಗಿ ತಮಗೆ ಆಭಾರಿಯಾಗಿದ್ದೇವೆ

    ಪ್ರತಿಕ್ರಿಯೆ
  3. ಶ್ರೀರಂಗ

    ಅಭಿವ್ಯಕ್ತಿ ಸ್ವಾತಂತ್ರ್ಯ ಪೂರ್ಣ ರೀತಿಯಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಹಿಂದೆ ಇತ್ತೆ? ಈಗ ಇದೆಯೇ? ನಿಮ್ಮಲ್ಲೇ ಇಲ್ಲದ ಮೇಲೆ ಬೇರೆಯವರನ್ನು ಟೀಕೆ ಮಾಡುವುದು ನೈತಿಕತೆಯೇ?

    ಪ್ರತಿಕ್ರಿಯೆ
  4. ಶ್ರೀರಂಗ

    ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಅದರದ್ದೇ ಆದ ಭಕ್ತರು ಇರುತ್ತಾರೆ. ಹೀಗಾಗಿ ಕೇವಲ ಒಂದು ಪಕ್ಷದವರನ್ನು ಹೀಯಾಳಿಸಿ ಬರೆಯುವುದು ಸರಿಯಲ್ಲ. ಅದು ಅಸಹನೆಯಾಗುತ್ತದೆ.

    ಪ್ರತಿಕ್ರಿಯೆ
  5. ಶ್ರೀರಂಗ

    ದೇಶದ ಮುದ್ರಣ ಮತ್ತು ಟಿವಿ ವಾರ್ತವಾಹಿನಿಗಳಲ್ಲಿ ಬಿಜೆಪಿ ಪರ ಮತ್ತು ವಿರೋಧಿ ಎಂಬ ಗುಂಪುಗಳಿರುವುದು ಎಲ್ಲರಿಗೂ ತಿಳಿದಿರುವ ಗುಟ್ಟು. ದೇಶಕ್ಕೇ ಉಪದೇಶ ಮಾಡುವ ಪತ್ರಕರ್ತರುಗಳಿಗೆ ಇದು ತಿಳಿದಿಲ್ಲ ಎಂದರೆ ಯಾರೂ ನಂಬುವುದಿಲ್ಲ. ಓದುಗರನ್ನು ಮತ್ತು ಟಿವಿ ವೀಕ್ಷಕರನ್ನು taken for granted ಎಂದು ನಂಬಿಸುವ ಕಾಲ ಮುಗಿದು ಹೋಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: