ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಭಾ ಪುರೋಹಿತ ಹೊಸ ಕವಿತೆ – ತಾಯಿ…

ವಿಭಾ ಪುರೋಹಿತ

ಒಡಲೊಳಗಿನ ಮಮತೆಗಡಲಿಗೆ
ಕಡಗೋಲು ಹಾಕಿ ಕಡೆದಂತೆ
ಧುಮ್ಮಿಕ್ಕಿ ಹರಿದುಬಂದ ನವನೀತ
ರವಿಕೆಯೆಲ್ಲ ಒದ್ದೆಯಾಗಿದ್ದು
ಮೋಡದೋಟದಿಂದ
ಧಾವಿಸಿದ ತಾಯ

ಒಡಲಕುಡಿಯ ಆಕ್ರಂದನ
ಆಕಾಶಮುಟ್ಟಿ
ಮಾರ್ದನಿಗೆ ಮರುಗಿದ ಮುಗಿಲಮ್ಮ
ಹನಿಸುತ್ತ ಬಂದಂತೆ

ಕದದಲ್ಲೇ ಬ್ಯಾಗುಬಿಸಾಕಿ
ಕೈಗೆ ಸ್ಯಾನಿಟೈಸರ್ ಹಾಕಿ
ಕದಡದೇ ತಬ್ಬಿದ್ದ ಕಕ್ಕುಲತೆ
ಪನ್ನೀರು ಸುರಿಸಿತ್ತು !

ಆ ಕ್ಷಣ ಕಾಲಸ್ತಬ್ಧವಾಗಬೇಕು !
ಅಂತಃಕರಣದ ಮಿಲನ
ಹಸಿದ ಹಸುಳೆ ಮತ್ತೆ
ರಚ್ಚೆ ಹಿಡಿದು ತಡಕಾಡಿತ್ತು

ಹೆಪ್ಪುಗಟ್ಟಿರಬಹುದು !
ಹಳೆಯ ಹಾಲು !
ಸರಸರನೆ ಹಿಂಡಿದಳು
ಚೀರಿಚೀರಿ ಅತ್ತ ಕಂದಗೆ
ಸಾರಿ…ಸಾರಿ.. ಅನ್ನುತ್ತ
ಬಾರಿ ಬಾರಿ ಅವುಚಿಕೊಂಡಳು

ಮಾತೃತ್ವದ ಭಾವಕ್ಕೆ
ಹೊನ್ನೀರ ಅಭಿಷೇಕ
ಹೊಟ್ಟೆಯೆಂಬ ಪುಟ್ಟ ಪುಷ್ಕರಣಿಗೆ
ವಾತ್ಸಲ್ಯ ಒರತೆ ಚಿಮ್ಮಿತ್ತು

ಅವಳು ದ್ರವಿಸುತ್ತಾಳೆ
ಬೆಳೆಸುತ್ತಾಳೆ ಬೆಳೆಯುತ್ತಾಳೆ
ಭೂಮಿ, ಬ್ರಹ್ಮಾಂಡವಾಗುತ್ತಾಳೆ
ಘನತೆವೆತ್ತ ವಿಶ್ವಮಾತೆಯು

‍ಲೇಖಕರು Admin

8 March, 2022

2 Comments

  1. ಸುಮಾವೀಣಾ

    ಅಭಿನಂದನೆಗಳು ವಿಭಾ ಅನನ್ಯ ಕವಿತೆ

  2. T S SHRAVANA KUMARI

    ಚಂದದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading