ವಿಭಾ ಪುರೋಹಿತ ಓದಿದ ‘ನಿರುತ್ತರ’

ಸಾಕಿಯೊಂದಿಗಿನ ಆತ್ಮಾನುಸಂಧಾನ

ವಿಭಾ ಪುರೋಹಿತ

ಪ್ರತಿವರ್ಷ ಪ್ರಕಟವಾದಂಥ ಹೊಸ ಕವನಸಂಕಲನಗಳನ್ನು ಓದುತ್ತಾ ಸಮಕಾಲೀನ ಕವಿ ಮನಸ್ಸುಗಳನ್ನು ತಿಳಿದುಕೊಳ್ಳುವ ಕೂತೂಹಲ ಸದಾ ನನಗೆ, ಹಾಗಾಗಿ ಕಳೆದ ಕೆಲವು ವರ್ಷಗಳಿಂದ ಕವನ ಸಂಕಲನ, ಆತ್ಮಕಥೆ, ಸಣ್ಣಕಥೆ, ಪ್ರಬಂಧ ಹಾಗೂ ಇತ್ಯಾದಿ ಲೇಖನಗಳನ್ನು ಓದುತ್ತಿರುತ್ತೇನೆ. ಮುಂದೆ ಸ್ವಲ್ಪದಿನಗಳಾದ ಮೇಲೆ ಸಹಜವಾಗಿ ಮರೆತುಬಿಡುತ್ತೇವೆ. ಇತ್ತೀಚೆಗೆ ಜಾಲತಾಣಗಳಲ್ಲಿ ಬರುವಂತಹ ಕತೆಗಳು, ಕವಿತೆಗಳು ಹಾಗೂ ಗಝಲ್ ಗಳು ಓದಲು ಸಿಗುತ್ತವೆ. ನನ್ನ ಅರಿವಿನಲ್ಲಿ ಗಟ್ಟಿಯೆನಿಸಿದ ಕವಿತೆಗಳನ್ನು ದಾಖಲು ಮಾಡಿಡಲು ಪ್ರಯತ್ನಿಸಿದ ಫಲವೇ ಈ ಪುಸ್ತಕ ಪರಿಚಯ.

ಕೆ. ಬಿ. ವೀರಲಿಂಗನಗೌಡ್ರ ಅವರ ‘ನಿರುತ್ತರ’ ಕವನ ಸಂಕಲನ ಓದಿದಾಗ ನನಗೆ ನಾಲ್ಕು ಸಾಲುಗಳು ಬರೆಯದೇ ಇರಲಾಗಲಿಲ್ಲ. ಇದು ರಾಣಿಬೆನ್ನೂರಿನ ‘ಕಾಗದ ಸಾಂಗತ್ಯ ಪ್ರಕಾಶನ’ದಿಂದ ೨೦೨೦ರಲ್ಲಿ ಹೊರಬಂದ ಪುಸ್ತಕವಾಗಿದೆ. ಇದರಲ್ಲಿ ಒಟ್ಟು ೨೬ ಕವಿತೆಗಳಿದ್ದು, ಪ್ರತಿ ಕವಿತೆಯೂ ೧೦ ರಿಂದ ೧೬ ಸಾಲುಗಳ ಮಿತಿಯಲ್ಲಿವೆ. ನೋಡಲೂ ಪುಟ್ಟ ಪುಸ್ತಕವಾದರೂ ಪ್ರಕಾಂಡ ಕಾವ್ಯಾತ್ಮಕ ಹರವುಳ್ಳದ್ದಾಗಿದೆ. ಸಾಹಿತಿ ವೀರಲಿಂಗನಗೌಡ್ರ ಅವರ ಆರನೇ ಕೃತಿಯಾಗಿದ್ದು, ಇವರು ನಾಟಕ, ಕಥಾಸಂಕಲನ ಮತ್ತು ಪ್ರಬಂಧಗಳನ್ನೂ ಪ್ರಕಟಿಸಿರುತ್ತಾರೆ.

ಚಿತ್ರಕಲಾ ಶಿಕ್ಷಕರಾಗಿ ಶಿರಸಿಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಮೂಲತ ಕಲೆ, ಸಾಹಿತ್ಯ ಮತ್ತು ಸಂಗೀತದ ಆರಾಧಕರಾಗಿದ್ದಾರೆ. ಕವಿತನ ಇವರಿಗೆ ಸಿದ್ಧಿಸಿದೆ ಎನ್ನಬಹುದು. ಅತ್ಯಂತ ಕಡಿಮೆ ಶಬ್ದಗಳಲ್ಲಿ ಹೆಚ್ಚು ಹೇಳುವ ಕಲೆ ಇವರಿಗೆ ಓಲಿದಿದೆ. ಕೃತಿಯನ್ನು ಕೈಗೆತ್ತಿಕೊಂಡಾಗ ಒಂದೇ ಗುಕ್ಕಿಗೆ ಓದಿ ಮುಗಿಸಿದೆನಾದರೂ ಸಮಾಧಾನವಾಗಲಿಲ್ಲ. ಮರುದಿನ ಮತ್ತೊಮ್ಮೆ ಓದಬೇಕೆನಿಸಿ ಪ್ರತಿಯೊಂದು ಕವನಗಳ ಒಳಹೊಕ್ಕು ಓದಿದಾಗ ಮನಸ್ಸಿಗೆ ಮುದ ನೀಡಿದ್ದು ಬಹುಶ: ಎಲ್ಲಾ ಕವಿತೆಗಳಾದರೂ ಅವುಗಳಲ್ಲಿ ಪ್ರಮುಖವೆಂದರೆ, ತಂಗಾಳಿ, ಅಲ್ಲಮರ ಬಯಲು, ಪ್ರೀತಿಯೆಂದರೆ, ಕವಿತೆಯೆಂದರೆ, ಮಧುಶಾಲೆಯಲಿ, ಹೂಮಾತು, ಮಣ್ಣು ಮರ, ಸಾಸಿವೆಗೀಗ ಸಂಭ್ರಮ, ನಿರುತ್ತರ, ಎದೆಗೊದ್ದಂತೆ ಇತ್ಯಾದಿ.

ಭಾವಪದರದೊಳಗೆ ಸೋಸಿಬಂದ ಗಟ್ಟಿಭಾವಧ್ವನಿ ಇಲ್ಲಿ ಸಾಂದ್ರಗೊಂಡಿದೆ. ಕವಿಯೊಳಗಿನ ಒಂದು ಒಳಗು ಅವಳೇ ‘ಸಾಕಿ’ ಎನ್ನಬಹುದು. ಸಾಕಿಯೊಂದಿಗಿನ ಅವರ ಕಾವ್ಯಾನುಸಂಧಾನ ತುಂಬ ಆಕರ್ಷಕವೆನಿಸಿತು. ಸುಖ-ದು:ಖ, ವಿಷಾದ-ಆಮೋದಗಳನ್ನೆಲ್ಲ ಹೃದಯಕ್ಕೆ ತಾಕುವಂತೆ ಪದಗಳಲ್ಲಿ ಹಿಡಿದಿರುವ ಕಲೆ ಇವರಿಗೆ ಸಿದ್ಧಿಸಿದೆ. ತಂಗಾಳಿಯ ತಂಪು ಅನುಭವಕ್ಕಷ್ಟೇ ಸಿಗುತ್ತದೆ ಅದನ್ನು ಕಾಣಲು ಸಾಧ್ಯವಿಲ್ಲ. ಹಾಗೇಯೇ ಗೌಡ್ರ ಸಾಕಿ ಆಮೂರ್ತ ಸಂಗಾತಿ ಅನುಭವಾತೀತ ಸಂತೃಪ್ತಿಯನ್ನು ನೀಡಿದವಳು.

ಕವಿ ಈ ನಿರುತ್ತರ ಕವನಗಳಲ್ಲಿ ಬದುಕಿನ ಮತ್ತು ಸಮಾಜದ ವಿವಿಧ ಆಯಾಮಗಳ ಮುಖದರ್ಶನ ಮಾಡಿಸುವುದಲ್ಲದೇ ವಿಡಂಬನಾತ್ಮಕವಾಗಿಯೂ ಮೂಡಿಬಂದಿವೆ. ಲೌಕಿಕವಾಗಿ, ರಾಜಕೀಯವಾಗಿ, ತಾತ್ವಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಓಳನೋಟವನ್ನು ಬೀರುವ ಹಲವಾರು ಸಾಲುಗಳಿವೆ. ಇಲ್ಲಿಯ ಕವಿತೆಗಳನ್ನೊದುವಾಗ ದ.ರಾ. ಬೇಂದ್ರೆಯವರ ‘ಸಖಿಗೀತ’ದ ನೆನಪು ಮಧುರಚೆನ್ನರ ‘ನನ್ನನಲ್ಲ’ ಝಗ್ಗನೆ ಮಿಂಚಿ ಹಾದುಹೋದದ್ದಿದೆ.

ಸಾಮಾಜಿಕ ಹಾಗೂ ರಾಜಕೀಯ ವಿಡಂಬನೆಯನ್ನು ಸರಳರೀತಿಯಲ್ಲಿ ಗಹನವಾಗಿ ತೋರಿಸುತ್ತವೆ ಇಲ್ಲಿಯ ಕವಿತೆಗಳು.
‘ಕೋಗಿಲೆಯ ಕಂಠಕೂ ತೆರಿಗೆಯ ಬರೆ ಬಿದ್ದಿವೆ’ (ಕರುಳಕೂಗು)
‘ಶವಪೆಟ್ಟಿಗೆಗಳು ಮತಪೆಟ್ಟಿಗೆಗಳಾಗದಿರಲಿ’ (ಕೋರಿಕೆಗಳು)

ಅಲ್ಯಾರೋ
ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ
ಮುಖವಾಡಕಳಚಿ ಹೊರದಬ್ಬಿಬಿಡು ( ಅಮಲಲಿ)

ಕೆಲವೊಮ್ಮೆ ಸಾಕಿ ಜೀವನಸಂಗಿಣಿಯಂತೆ ಭಾಸವಾದರೆ ಇನ್ನೂ ಕೆಲಸಲ ಮಾತೃತ್ವ ಭರಿತ ವಾತ್ಸಲ್ಯ ಇಣುಕುವುದಿದೆ. ‘ಮನೆ ಕಟ್ಟುವುದ ಮೊದಲು / ಮನಸು ಕಟ್ಟುವುದನು ಕಲಿಸಿದೆ ( ಕಟ್ಟುವುದು) ‘ಬೆಳೆಸಲೆಂದೇ /ಬೇರಾಗಿ ಕೆಳಗಿಳಿದವಳು’ ( ತಂಗಾಳಿ ). ನಿರುತ್ತರದಲ್ಲಿ ಕವಿ ವೀರಲಿಂಗನಗೌಡ್ರ ಅವರು ಆಧ್ಯಾತ್ಮಿಕವಾಗಿ ಪರಿಪಕ್ವಗೊಂಡ ತಾತ್ವಿಕವಾಗಿ ಬಲಿತವರಾಗಿ ಕಾಣಿಸಿಕೊಂಡಂತಿದೆ. ಯಾವ ಸಂಭಂದಗಳ ಮಾಯೆಗೂ ಸಿಲುಕದೇ ಸತ್ಯದ ಪರವಾಗಿ ನಿಲ್ಲುತ್ತಾರೆ. ‘ಸತ್ಯಂ ಶಿವಂ ಸುಂದರ’ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಳ್ಳುವ ಸಾಹಸವನ್ನು ತೋರಿದ್ದಾರೆ.

ಸತ್ಯಗೊತ್ತಿದ್ದು
ಮಿಥ್ಯವನೇ ಅಪ್ಪಿಕೊಂಡರೆ
ಅಪ್ಪನ ನಡೆಯನ್ನು ಒಪ್ಪಲಾರೆ

ಲೌಕಿಕದ ಬಂಧನದಿಂದ ಮುಕ್ತರಾದಂಥ ಎಳೆಗಳ ಭಾವ ಕೆಲವು ಸಾಲುಗಳಲ್ಲಿ ಉಕ್ಕಿಬಂದು ಶಾಶ್ವತಸುಖದೆಡೆಗೆ ಬೆರಳುಮಾಡುತ್ತವೆ.

‘ಅವ್ವ ಅಪ್ಪನ ಪರ ನಿಂತರೆ
ಅಕ್ಕ ಅಲ್ಲಮರ ಬಯಲಲಿ
ಬಯಲಾಗಿ ಲಯವಾಗಿಬಿಡುವೆ’ (ಅಲ್ಲಮರ ಬಯಲು)

ಪ್ರೀತಿಯನ್ನು ಭಕ್ತಿಯಂತೆ ಸಾರುವ ಆಧ್ಯಾತ್ಮಿಕ ಹೊಳಹಿರುವ ಸಾಲುಗಳು ಇಲ್ಲಿವೆ. ಇದು ಕವಿಯ ಮನಸ್ಸಿನ ಹದಗೊಳ್ಳುವಿಕೆಗೆ ಸಾಕ್ಷೀಕರಿಸುತ್ತದೆ.

ಪ್ರೀತಿಯೆಂದರೆ ಶರಣಾಗುವುದಲ್ಲ
ಶರಣ ಸಂಸ್ಕೃತಿಗೆ ಅಣಿಯಾಗುವುದು (ಪ್ರೀತಿಯೆಂದರೆ)

ಸಾಹಿತ್ಯವೆಂದರೆ ಅದರಲ್ಲೂ ಸೃಜನಶೀಲ ಬರವಣಿಗೆಯಲ್ಲಿ ಕವಿತೆಗಳ ಬಗ್ಗೆ ಹೇಳುವುದಾದರೆ, ಕವಿತೆಗಳ ಅರ್ಥವನ್ನು ನಿರ್ದಿಷ್ಟತೆಗೆ ಒಳಪಡಿಸದೇ ಇರುವುದೇ ಸರಿಯೆನ್ನಬಹುದು. ಒಬ್ಬೊಬ್ಬರು ಒಂದೊಂದು ರೀತಿಯಾಗಿ ಮನನ ಮಾಡಿಕೊಳ್ಳುವಂಥದ್ದು. ಕವಿತೆಗಳು ಅರ್ಥಾನುಸಾರವಾಗಿ, ಭಾವಾನುಸಾರವಾಗಿ, ಕೆಲವೊಮ್ಮೆ ಸಂದರ್ಭಾನುಸಾರವಾಗಿ ಇರುವಂಥವು. ಅವರವರಿಗೆ ದಕ್ಕಿದ್ದೇ ಅವರ ಪಾಲಿನ ವ್ಯಾಖ್ಯಾನವಾಗಬಹುದು ಎಂದು ನನ್ನ ಅನಿಸಿಕೆ.

ಸಾಕಿ……
ಕವಿತೆಗಳೇ ಹೀಗೆ
ನಸುನಗುವ ಹಸುಗೂಸಂತೆ
ಮಾಯದ ಗಾಯದಂತೆ

ಹೆಚ್ಚಾಗಿ ಗಝಲ್‌ಗಳಲ್ಲಿ ಕಾಣುವ ಸಾಕಿಯನ್ನು ಮಧುಶಾಲೆಯಿಂದ ದಾಟಿಸಿ ಹೊಸಜನ್ಮ ನೀಡಿದ್ದಾರೆ. ನೋವು ನಲಿವುಗಳಲ್ಲಿ, ವಾಸ್ತವದ ಚಿತ್ರಣದಲ್ಲಿ, ಸಾಮಾಜಿಕ ವಿಡಂಬನೆಯಲ್ಲಿ ಯಥೇಚ್ಛವಾಗಿ ಸ್ಪಂದಿಸಿದ್ದಾಳೆ ಸಾಕಿ. ಈಗ ಸಾಕಿಗಿಂತ ಹೆಚ್ಚಾಗಿ ಸಖಿಯಾಗಿ, ಆತ್ಮಸಖಿಯಾಗಿ ಕವಿತೆಗಳಲ್ಲಿ ಸ್ಥಾನ ಕೊಟ್ಟದ್ದು ಗಮನಾರ್ಹವಾದ ವಿಸ್ತರಣೆ ಹಾಗೂ ಪ್ರಯೋಗಶೀಲತ್ವವನ್ನು ಮೆಚ್ಚುವಂಥದ್ದು. ಗಝಲ್‌ಗಳ ದಾಯಿರೆ ಮೀರಿ ಕವಿತೆಗಳಿಗೆ ಪರಿಚಯಿಸಿದ್ದು ಸುಂದರ ಬೆಳವಣಿಗೆ ಮತ್ತು ಸ್ವಾಗತಾರ್ಹ.

‍ಲೇಖಕರು Admin

August 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: