ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಭಾ ಪುರೋಹಿತ್ ಕವಿತೆ- ವಾಗರ್ಥ

ವಿಭಾ ಪುರೋಹಿತ್

ಭೂಮ್ಯಾಕಾಶದ ತಾದಾತ್ಮ್ಯ
ಬಯಲಬಸಿರಲ್ಲೇ ಹಡೆದ
ಮೂಲ ಮೂರುಗಳು
ಗಾಳಿಯಾಗಿ ಉಸಿರಲ್ಲಿ ಉಳಿದು
ಅಗ್ನಿಯಾಗಿ ಉದರದಲ್ಲಿ ಉರಿದು
ಜಲವಾಗಿ ಕರ್ಣದಲಿ ಕೂತು
ಸರ್ವಸ್ವವನ್ನಾವರಿಸಿದೆ

ಔನ್ನತ್ಯದಲ್ಲಿದ್ದರೂ ಅವಳು
ಸತತ ಅವನದೇ ಸಾಂಗತ್ಯ
ಎಲ್ಲಿ ಅವನಿಲ್ಲವೋ ಅಲ್ಲಿಯೂ
ಹಿಡಿದಿಡುತ್ತಾಳೆ
ಜೀವ ತೇಯುವಳು
ಸದಾ ಧೇನಿಸುವುದು
ತನ್ನ ಜಗತ್ತನ್ನಲ್ಲ!

ಅವನೇ ಅವಳ ಜಗತ್ತು
ನೋಟದಲ್ಲಿಲ್ಲದಿದ್ದರೂ ದೃಷ್ಟಿಯಲ್ಲಿ
ಧ್ವನಿಸದಿದ್ದರೂ ಎದೆಬಡಿತದಲ್ಲಿ
ಘ್ರಾಣಿಸಲಾರದ ಅವನಿರುವಿಕೆ
ವ್ಯಾಪಕವೆನಿಸುವುದೇ ಆಪ್ತ ಅವಳಿಗೆ

ಸಭೆಯಲ್ಲಿದ್ದಾಗ ರಸ್ತೆಯಲ್ಲಿದ್ದಾಗ
ಏನೋ ಹೊಸತು ನೆನಪಾಗಿ
ಅವನಿಗರುಹಬೇಕೆನಿಸುತ್ತದೆ
ಜನ ನಿಬಿಡತೆಯಲ್ಲೂ ಅವಳ
ಮನದೇಕಾಂತ ಭಂಗವಾಗದು
ಸಾವಿರ ಗಾವುದ ದೂರವಿದ್ದವನನ್ನ
ತನ್ನೆದುರಲ್ಲೇ ತರುತ್ತಾಳೆ
ಅಭಿಜಾತ, ಕಲಿತ ಕಲೆಯಲ್ಲ
ಅವಳಿಗೇ ಗೊತ್ತಿರದ ತಪಸಿ
ಅವಳೊಳಗಿದ್ದಾಳೆ ಧ್ಯಾನಸ್ಥೆ
ಏಕೋಭಾವ ಲೀಲಾಜಾಲ

ದಟ್ಟಿರುಳು ದುರುಗುಟ್ಟಿದರೂ
ಅವನು ಮಾತ್ರ ಉತ್ಸವಮೂರ್ತಿ
ಮೀರಾಳ ಮಾಧವ, ಅಕ್ಕನ ಮಲ್ಲಿಕಾರ್ಜುನನಂಥ
ಅದಮ್ಯ ಆತ್ಮಸಾಂಗತ್ಯ
ಏನೂ ಇಲ್ಲದೆಡೆ
ಏನೆಲ್ಲಾ ಇದೆಯೆಂದು
ಎಲ್ಲವೂ ಇದೆಯಾದರೂ
ಅವನ ಸಾನಿಧ್ಯ ಸಾಕೆಂದವಳು
ಗಮ್ಯಗಳೆಲ್ಲ ಅವನೆದುರಿಗೆ
ಬಂದು ನಿಲ್ಲುವ ಸಾಮ್ಯ
ಲೌಕಿಕದ ಅಲೌಕಿಕತೆ ಅವಳ ಪ್ರೇಮ
ಅವನದ್ದೂ ಬೇಷರತ್ತಾಗಿ ಬೆರೆತರಷ್ಟೇ
ಹಾರ್ದ ವಾಗರ್ಥ

‍ಲೇಖಕರು Avadhi

19 February, 2021

1 Comment

  1. ಕಲಾ ಭಾಗ್ವತ್

    ಸುಂದರ ಭಾವ …ಬೆಸುಗೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading