ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಭಾ..

‘ಅಂಕಿತ ಪುಸ್ತಕಾಲಯ’ದವರ ಬಳಿ ಕಾಡಿ-ಬೇಡಿ ವಿಭಾರ ‘ಜೀವ ಮಿಡಿತದ ಸದ್ದು’ ಕವನಸಂಕಲನದ ಹಲವು ಪ್ರತಿಗಳನ್ನು ಕೊಂಡು ಓದಿ ಹಂಚಿ ಈಗ ಅವರ ಅಗಲಿಕೆಯ ನೋವಿನಲ್ಲೂ ಅವರ ಕವಿತೆಯ ಸಾಂತ್ವನ ಪಡೆಯುತ್ತಾ ಮೌನಕ್ಕೆ ಜಾರುವಂತಾಗಿದೆ.

ವಿಭಾರ ಬಗ್ಗೆ ನನಗೆ, ನನ್ನ ಗೆಳೆಯರ ಬಳಗಕ್ಕೆ ತಿಳಿದದ್ದೇ ‘ಅವಧಿ’ಯಿಂದ. ಧನ್ಯವಾದಗಳು.

ವಿಭಾರಿಗೊಂದು ಪುಟ್ಟ ಕವನ ಬರೆದು ಇಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ವಿಭಾರ ಮಗಳು ‘ಕನಸು’ ಮತ್ತು ಅವರ ಎಲ್ಲ ಪ್ರೀತಿಪಾತ್ರರಿಗೂ ಸದಾ ನಮ್ಮ ಶುಭ ಹಾರೈಕೆಗಳು.

-ಸೌರಭಾ ರಾವ್ 

 

ವಿಭಾ,

ಮಡಿಲು ತುಂಬಿದ ಕಂದಳನ್ನು ‘ಕನಸು’ ಎಂದು ಕರೆದೆ
ಉತ್ಪ್ರೇಕ್ಷೆಯಿಲ್ಲದ ಹಿಗ್ಗು, ಮನಸ್ಸನ್ನು ಕಹಿಯಾಗದಂತೆ ನಿಗ್ರಹಿಸಿದ ನೋವು,
ಆಳ-ಪರಾಕಾಷ್ಠೆಗಳ ನಡುವೆ ಉದ್ವೇಗವಿಲ್ಲದ ನಿನ್ನ ಕವಿತೆಯ ಹೊಯ್ದಾಟದಲ್ಲಿ
ನಿನ್ನೊಡನೆ ನಾವೂ ಸಮಾನಸುಖಿ, ಸಮಾನದುಃಖಿಗಳಾಗುತ್ತೇವೆ
ನಿನ್ನ ‘ಅಕ್ಷರಗಳೆಲ್ಲ ಒದ್ದೆ’ಯಾದಾಗ ನಾವೂ ಮರುಗುತ್ತೇವೆ
ನೀ ನಿನ್ನ ಸಖನಿಗೆ ಕವನ ಬರೆದಾಗ ನಾವೇ ‘ಒಲವಿನ ಒರತೆ’ಯಲ್ಲಿ ಮೀಯುತಿರುವಂತೆ ಮುಗುಳ್ನಗುತ್ತೇವೆ
ನಿತ್ಯದ ಜಂಜಾಟಗಳಲ್ಲಿ ನೀರಸವೆನಿಸಿ ಮೂಕವಾಗಿಬಿಡುವ ವಿವರಗಳಿಗೆ ನಿನ್ನ ಕವಿತೆ ಧ್ವನಿಯಾಗುವಾಗ
ನಾವೂ ಮತ್ತಷ್ಟು ಸೂಕ್ಷ್ಮಗ್ರಾಹಿಗಳಾಗುತ್ತೇವೆ, ನೀ ಹಾಗೆ ಮಾಡುತ್ತೀ
ವಿಭಾ,
ಅಕ್ಕನ ಅಕ್ಕರೆಯಲ್ಲಿ ನೀನೇ ಅವಳಾಗಿ ಅವಳು ಹೋದಾಗ
‘ನಾನೇ ಇಲ್ಲವಾದೆ’ ಎನ್ನುವ, ನೋವಿಗೂ ಗಾಂಭೀರ್ಯ ತರುವ ಘನತೆ ನಿನ್ನದು
ಮುಟ್ಟಾದಮೇಲೆ, ‘ಕಚಗುಳಿಯಿಟ್ಟು ನಗಿಸುತ್ತಿದ್ದ ಅಪ್ಪ ಈಗ ಪಡಸಾಲೆಯಲ್ಲಿ ಸುಳಿದರೂ ನಾಚಿಕೆ’ ಎನ್ನುವ ತೀವ್ರಸಂವೇದನೆ ನಿನ್ನದು
ಅಮ್ಮನ ವೇದನೆಗಳ ನೆನೆಯುತ್ತಲೇ ನೀನೇ ತಾಯಿಯಾಗಿಬಿಡುವ ಪ್ರೀತಿಯ ಅಗಾಧತೆ ನಿನ್ನದು
ಜಗತ್ತಿನ ನಿರ್ದಯ ತಾತ್ಸಾರದೆದುರೂ ಅವುಡುಗಚ್ಚಿ ತಾಳುವ,
ತಾಳಿ ಸಹಿಸಿ ಕಲಿತು ಮುಂದರಿಯುವ ಅಪಾರ ತಾದಾತ್ಮ್ಯ ನಿನ್ನದು
ಕಾಡಿದ್ದೆಲ್ಲವೂ ಕವಿತೆಯಾಗಿ, ಕವಿತೆಯಾದದ್ದೆಲ್ಲವೂ ಕಾಡುವಂತೆ ಮಾಡಿದ ಶಕ್ತಿ ನಿನ್ನದು
ವಿಭಾ,
ಬೊಗಸೆಯೊಡ್ದಿದರೆ ಎಂದರೆ ಏನನ್ನೋ ಬೇಡುವ ಭಾವವೇ ಬರುವಂತೆ ಇದ್ದ ರೂಪಕ್ಕೆ,
ಬೊಗಸೆಯೊಡ್ಡಿ ಭೂಮಿಯನ್ನೇ ಹೊತ್ತು ಕಾಪಾಡುವ ಅಟ್ಟಹಾಸವಿಲ್ಲದ ಶ್ರೀಮಂತಿಕೆ ತಂದ ಹಿರಿಮೆ ನಿನ್ನದು
ನೀ ಹೋದ ಆ ತೀರದಿಂದ ನಿನ್ನ ಬೆಳಕು ನಿನ್ನ ಕವಿತೆಯ ಮೂಲಕ
ನಮ್ಮ ಭಾವವನ್ನು ಬೆಚ್ಚಗಿಟ್ಟು ಕಾಯುತಿರಲಿ

ಅಕ್ಕರೆಯಿಂದ,
ಸೌರಭಾ

‍ಲೇಖಕರು avadhi

20 August, 2017

1 Comment

  1. pravara

    teera kaadida padyagalu avaravu… anuvaadagalu haage ive..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading