ಅಲೆಗಳ ವಿರುದ್ಧ ಈಜುವ ಮೀನು..

ಶ್ರೀಜಾ ವಿ ಎನ್

ಜಿ ಎನ್ ಮೋಹನ್

Short in length, Strong in statement

– ಡಾಕ್ಯುಮೆಂಟರಿ ಸಿನೆಮಾಗಳ ಬಗ್ಗೆ ಹೇಳುವ ಮಾತಿದು. ಯಾಕೆಂದರೆ ಡಾಕ್ಯುಮೆಂಟರಿ ಸಿನೆಮಾ ಕಡಿಮೆ ಅವಧಿಯದ್ದು. ಆದರೆ ಸಾಕಷ್ಟು ಚಿಂತನೆಗೆ ಹಚ್ಚುವ ಶಕ್ತಿಯುಳ್ಳದ್ದು. ಸಮಾಜ ಹಿಡಿಯುತ್ತಿರುವ ಧಿಕ್ಕನ್ನು ಸಮರ್ಥವಾಗಿ ತೋರಿಸಬಲ್ಲಂತಹದ್ದು. ಒಂದು ವಿಷಯದ ನಾನಾ ಮಗ್ಗುಲುಗಳನ್ನು ಸ್ಪರ್ಶಿಸಿ ಹೊಸ ನೋಟವನ್ನು ಕೊಡಬಲ್ಲಂತಹದ್ದು.

ಅಂತಹ ಅನುಭವ ಮತ್ತೊಮ್ಮೆ ನನಗೆ ಆದದ್ದು ರಾಜಾರಾಂ ತಲ್ಲೂರು ಅವರ ‘ನುಣ್ಣನ್ನ ಬೆಟ್ಟ’ ಕೃತಿಯನ್ನು ಓದಿದಾಗ. ಇದು ನಮ್ಮದೇ ‘ಅವಧಿ’- avadhimag.com ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ಬರಹಗಳ ಗುಚ್ಛ. ಹಾಗಾಗಿ ಇಲ್ಲಿರುವ ಎಲ್ಲಾ ಲೇಖನಗಳನ್ನು ಆಯಾ ವಾರವೇ ಓದಿದ್ದೇನೆ. ಬಹುಷಃ ನಾನು ಈ ಬರಹಗಳ ಮೊದಲ ಓದುಗನೂ ಹೌದು. ಈಗ ಆ ಎಲ್ಲಾ ಲೇಖನಗಳನ್ನೂ ಒಂದೇ ಗುಕ್ಕಿಗೆ ಓದುವ ಅವಕಾಶವನ್ನು ರಾಜಾರಾಂ ಕೊಟ್ಟಿದ್ದಾರೆ.

ನನಗೆ ರಾಜಾರಾಂ ಸಹೋದರರ ಪರಿಚಯ ನನ್ನ ಕರಾವಳಿ ಬದುಕಿನ ಕಾಲದಿಂದ. ಆಗ ಈ ಇಬ್ಬರೂ ಸುರತ್ಕಲ್ ನಲ್ಲಿ ಹೊಸ ಕನಸಿಗೆ ಕಣ್ಣು ನೀಡಲು ಹೊರಟಿದ್ದರು. ಅಲ್ಲಿಂದ ಇಲ್ಲಿಯವರೆಗೆ ನಮ್ಮ ಸ್ನೇಹದ ಯಾತ್ರೆ ಸಾಗಿ ಬಂದಿದೆ. ನಾನು ಕಂಡ ರಾಜಾರಾಂ ಮಿತ ಭಾಷಿ, ಮೃದು ಭಾಷಿ. ಆದರೆ ಅವರ ‘ಮುಂಗಾರು’, ನನ್ನ ‘ಪ್ರಜಾವಾಣಿ’ ಕಾಲದಿಂದ ಬಹು ದೂರ ಸಾಗಿಬಂದು ಮತ್ತೆ ಫೇಸ್ ಬುಕ್ ನಲ್ಲಿ ಕೈ ಕುಲುಕಿದಾಗ ಒಮ್ಮೆ ಅಚ್ಚರಿಯಾಯಿತು. ಈಗಿನ ರಾಜಾರಾಂ ಚುರುಕು ಭಾಷೆ ಹಾಗೂ ಖಡಕ್ ನೋಟ ಹೊಂದಿದ್ದರು. ಎರಡು ರಾಜಾರಾಂಗಳ ಮಧ್ಯೆ ನಾನು ಇದ್ದೆ. ಆಮೇಲೆ ಅನಿಸಿತು- ಮೃದು ಮನಸ್ಸಿನ, ಮೃದು ಭಾಷೆಯವರಿಗೆ ಖಡಕ್ ನೋಟ ಇರಬಾರದೆಂದೇನು?

ರಾಜಾರಾಂ ಬರೆಯುತ್ತಿರುವ ಈ ಕಾಲವನ್ನು ಗಮನದಲ್ಲಿಟ್ಟುಕೊಂಡು ಈ ಮಾತನ್ನು ಹೇಳಬೇಕಾಯಿತು. ಇಂದು ಬಾಯಾಳಿಗಳಾಗದಿದ್ದರೆ ಅಥವಾ ಹೇಳಿಕಾಸುರರಾಗದಿದ್ದರೆ ಅವರು ಅಸ್ತಿತ್ವದಲ್ಲಿಯೇ ಇಲ್ಲ ಅಥವಾ ಅವರಿಗೆ ಸಾಮಾಜಿಕ ಕಾಳಜಿಯೇ ಇಲ್ಲ ಎನ್ನುವ ತೀರ್ಮಾನಕ್ಕೆ ಬರುವ ಕಾಲ. ಫ್ರೀಡಂ ಪಾರ್ಕ್ ಅಂಗಳದಲ್ಲಿ , ಟೌನ್ ಹಾಲ್ ಮೆಟ್ಟಿಲ ಮೇಲೆ ಕಾಣಿಸಿಕೊಂಡರೆ ಮಾತ್ರ ನೀವು ಸಾಮಾಜಿಕ ಬದ್ಧತೆ ಉಳ್ಳವರು. ಮೆರವಣಿಗೆ ತೆಗೆದಾಗ ಇರಬೇಕು, ಅಂಗನವಾಡಿ ಕಾರ್ಯಕರ್ತೆಯರು ಬೀದಿಯ ಮೇಲೆ ಮಲಗಿದ್ದಾಗ ಹೋಗಿ ಬಿಸ್ಕತ್ ಹಂಚಬೇಕು ಆಗ ಮಾತ್ರ ನಿಮ್ಮ ಸಾಮಾಜಿಕ ಕಾಳಜಿಗೆ ರುಜುವಾತು ಸಿಗುತ್ತದೆ ಎನ್ನುವ ಕಾಲ. ಹೌದು, ಟೌನ್ ಹಾಲ್, ಫ್ರೀಡಂ ಪಾರ್ಕ್, ಅಂಗನವಾಡಿ ಮೆರವಣಿಗೆ, ಘೋಷಣೆ ಎಲ್ಲವೂ ಬೇಕು. ಅದು ಸಾಮಾಜಿಕ ಹೋರಾಟದ ಒಂದು ಅಭಿವ್ಯಕ್ತಿ. ಆದರೆ ಅದೊಂದೇ ಹೋರಾಟದ ಮಾದರಿಯಲ್ಲ.

ನನಗೆ ಕವಿ ಸು ರಂ ಎಕ್ಕುಂಡಿಯವರು ಒಂದು ಸಂದರ್ಶನದಲ್ಲಿ ಹೇಳಿದ ಮಾತು ನೆನಪಿಗೆ ಬರುತ್ತದೆ- ‘ಹಲವರು ಯೋಧರಾಗಿ ರಣರಂಗಕ್ಕೆ ಹೋದರು, ನಾನು ಅವರಿಗೆ ಕತ್ತಿ  ಗುರಾಣಿಗಳನ್ನು ತಯಾರಿಸಿಕೊಟ್ಟೆ’. ಎಕ್ಕುಂಡಿ ದಶಕಗಳ ಕಾಲ ಉಪಾಧ್ಯಾಯರಾಗಿ ಕೆಲಸ ಮಾಡಿದವರು. ‘ನಾನು ಮನಸ್ಸುಗಳನ್ನುಸಾಮಾಜಿಕ ಸಂಗತಿಗಳಿಗೆ ಎದುರಾಗಿಸುವ ಮೂಲಕ, ಜಡ್ಡುಗಟ್ಟಿದ ಮನಸ್ಸುಗಳನ್ನು ತಿದ್ದುವ ಮೂಲಕ ಅವರು ವಿಚಾರವಂತರಾಗಲು ಕಾರಣನಾದೆ’  ಎನ್ನುವ ಅಂಶವನ್ನು ವಿವರಿಸುತ್ತಿದ್ದರು. ಇದರ ಫಲವಾಗಿಯೇ ನಂತರದಲ್ಲಿ ಆ ಮನಸ್ಸುಗಳು ಸಮಾಜವನ್ನು ಪ್ರಶ್ನಿಸಲು ಸಾಧ್ಯವಾಗಿತ್ತು. ಯಾವುದೇ ಒಂದು ವಿಷಯಕ್ಕೆ ಇರುವ ಹಲವು ಪದರುಗಳನ್ನು ಗಮನಕ್ಕೆ ತೆಗೆದುಕೊಳ್ಳದ, ಯಾವುದೇ ಒಂದು ಸಂಗತಿಗೆ ಇರುವ ಹಲವು ಆಯಾಮಗಳನ್ನು ಗಣಿಸದ ಕಾಲದಲ್ಲಿ ರಾಜಾರಾಂ ಬರೆಯುತ್ತಿದ್ದಾರೆ.

ರಾಜಾರಾಂ ಅವರ ಬರಹಗಳು ಸದ್ದಿಲ್ಲದೆ ಒಂದು ವೈಚಾರಿಕ ಭೂಮಿಕೆಯನ್ನು ಸಿದ್ಧಪಡಿಸಿದೆ. ರಾಜಾರಾಂ ಅವರ ಅಂಕಣ ಹೋರಾಟಕ್ಕೆ ಬೇಕಾದ, ಸಮಾಜದ ಮುನ್ನಡೆಗೆ ಬೇಕಾದ ಸ್ಪಷ್ಟತೆಯನ್ನು ಕೊಡಲು ಪ್ರಯತ್ನಿಸಿದೆ. ಜಾಗತೀಕರಣ ತಂದೊಡ್ಡಿರುವ ಭಿಕ್ಕಟ್ಟುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಇನ್ನೂ ಹಲವು ಹೆಜ್ಜೆ ಸವೆಸಬೇಕಾಗಿದೆ. ಜಾಗತೀಕರಣ ಸಮಾಜವನ್ನು ಇನ್ನಷ್ಟು, ಮತ್ತಷ್ಟು ಸಂಕೀರ್ಣ ಮಾಡಿದೆ. ಆ ಸಂಕೀರ್ಣತೆಯ ಕಗ್ಗಂಟನ್ನು ಬಿಡಿಸಲು ‘ಇದೇ’ ಎನ್ನುವ ಒಂದೇ ದಾರಿ ಇರಲು ಸಾಧ್ಯವಿಲ್ಲ. ಹಾಗಾಗಿಯೇ ಹಲವು ನದಿಗಳು ಹೋರಾಟದ ಸಾಗರವನ್ನು ಸೇರಲೇಬೇಕು.

ರಾಜಾರಾಂ ತಲ್ಲೂರು ಅವರ ಬರಹಕ್ಕೆ ಮಹತ್ವ ಬರುವುದು ಈ ಕಾರಣದಿಂದ. ಜಾಗತೀಕರಣ ನಾಲ್ಕೂ ಧಿಕ್ಕಿನಿಂದ ಆವರಿಸಿ ದಶಕಗಳು ಉರುಳಿದ್ದರೂ ಇನ್ನೂ ಅದರ ಪೂರ್ವದ ಕಾಲದಲ್ಲೇ ಇರುವವರಿಗೆ, ಆ ಮಾದರಿಗಳನ್ನೇ ಮುಂದಿಟ್ಟುಕೊಂಡವರಿಗೆ ಹೊಸ ರೀತಿಯ ಸವಾಲುಗಳು ಎದುರಾಗಿವೆ, ಆ ಸವಾಲುಗಳನ್ನು ಎದುರಿಸಲು ಹೊಸ ಮಾದರಿಗಳು ಬೇಕಾಗಿವೆ ಎಂದು ಗೊತ್ತೇ ಆಗುವುದಿಲ್ಲ. ಅಂತಹ ಸ್ಥಗಿತ ಮನಸ್ಸುಗಳು ಇರುವ ಕಾಲದಲ್ಲಿ ರಾಜಾರಾಂ  ತಣ್ಣಗೆ ಸಮಾಜವನ್ನು, ಇಂದಿನ ರಾಜಕೀಯವನ್ನು, ಇಂದಿನ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳುವ ಬಗೆಯನ್ನು ಮುಂದಿಟ್ಟಿದ್ದಾರೆ. ಒಂದು ದೇಶ, ಒಂದು ಭಾಷೆ, ಒಂದು ವೇಷ, ಒಂದು ಬಣ್ಣ, ಒಂದು ಪ್ರಾಣಿ, ಒಂದು ಪಕ್ಷಿ ಎನ್ನುವ ಹುನ್ನಾರ ನೇರಾನೇರ ಅದೇ ವೇಷದಲ್ಲಿ ಸಮಾಜದ ಮುಂದೆ ಬರುವುದಿಲ್ಲ. ಕೋಮುವಾದದ ಪ್ರಯೋಗಾಲಯ ಕೈನಲ್ಲಿ ಕತ್ತಿ ಹಿಡಿದುಕೊಂಡವರಿಂದ ಮಾತ್ರವೇ ಸೃಷ್ಟಿಯಾಗುವುದಿಲ್ಲ. ಬೆಳಕಿನ ಅರಮನೆಗೆ ದಾರಿಗಳು ನೂರಾರು ಹೇಗಿದೆಯೋ ಅಂತಹದೇ ನೂರಾರು ದಾರಿಗಳು ಕತ್ತಲೆಯ ಕೋಣೆಗೂ ಇರುತ್ತದೆ ಎನ್ನುವುದು ಗೊತ್ತಾಗದಿದ್ದರೆ ನಾವು ಆ ಕತ್ತಲ ಕೋಣೆಯತ್ತ ಸ್ವಯಂಪ್ರೇರಿತರಾಗಿ ಹೆಜ್ಜೆ ಹಾಕುತ್ತಿರುತ್ತೇವೆ ಎಂದಷ್ಟೇ ಅರ್ಥ.

ರಾಜಾರಾಂ ಬರಹಗಳು ಯಾಕೆ ನನಗೆ ಇಷ್ಟವಾಗುತ್ತದೆ ಎಂದರೆ ಅವರಿಗೆ ಒಂದು ದೂರದಲ್ಲಿ ನಿಂತು ಇಂದಿನ ಪರಿಸ್ಥಿತಿಯನ್ನು ಅವಲೋಕಿಸಲು ಸಾಧ್ಯವಾಗಿದೆ. ರಾಜಕೀಯ ನಡೆಗಳಿಗೆ ಚದುರಂಗದ ವಿನ್ಯಾಸಗಳಿವೆ ಎನ್ನುವುದು ಗೊತ್ತಿದೆ. ಒಂದು ಆರಂಭ ಯಾವುದಕ್ಕೆ ಅಂತ್ಯ ಎನ್ನುವುದನ್ನು ಕಾಣುವ ನೋಟ ಅವರಿಗಿದೆ. ‘ಕಿಸ್’ ಎನ್ನುವ ಶಬ್ದವನ್ನು ಸೆನ್ಸಾರ್ ಮಂಡಳಿ ನಿಷೇಧಿಸಿದಾಗ ಅದು ನಾಳೆ ಅಮಾರ್ತ್ಯ ಸೇನ್ ಅವರು ‘ಗೋವು’ ಎನ್ನುವ ಪದ ಆಡದಂತೆ ನೋಡಿಕೊಳ್ಳಲು ಹರಿತಗೊಳಿಸಿಕೊಳ್ಳುತ್ತಿರುವ ಕತ್ತರಿ ಎನ್ನುವುದು ಅರಿವಾಗುತ್ತದೆ.

ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’ ಕಾದಂಬರಿಯಲ್ಲಿ ನೆಲಕ್ಕೆ ಕಿವಿ ಕೊಟ್ಟು ಎಲ್ಲಿಂದಲೋ ಹರಿದು ಬರುತ್ತಿರುವ ನೀರಿನ ಹರಿವನ್ನು ಹೇಳುವ ಜಾಣರಿದ್ದಾರೆ. ಹಾಗೆ ನಾವು ಇಂದಿನ ಒಂದು ನಡೆಯಿಂದ ಎಂತಹ ನಾಳೆಯನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಸಮಾಜವನ್ನು ಹದ ಮಾಡುವ, ಎಲ್ಲರಿಗೂ ಸಹನೀಯ ಮಾಡುವ, ಎಲ್ಲರಿಗೂ ಬದುಕುವ, ಉಸಿರಾಡುವ ಅವಕಾಶವನ್ನು ಮಾಡುವ ಹೋರಾಟಗಳು ಮಂದಗಣ್ಣಿನಲ್ಲಿ ಉಳಿದುಬಿಟ್ಟರೆ, ಸಂಕೀರ್ಣತೆಯ ಅರ್ಥ ಮಾಡಿಕೊಳ್ಳದಿದ್ದರೆ, ಹೀಗಿದ್ದರೆ ಮಾತ್ರ ಹೋರಾಟ ಎನ್ನುವ ಟೈಪ್ ಗಳ ಬಂಧಿಯಾಗಿದ್ದರೆ ಅದು ಚಳವಳಿಯ ಸೋಲು. ಅದು ಚಲನೆಯ ಸೋಲು.

ರಾಜಾರಾಂ ಅವರಿಗೆ ಅಂಕಣ ಬರೆಯಿರಿ ಎಂದು ನಾನು ಕೇಳುವ ವೇಳೆಗಾಗಲೇ ಅವರು ಫೇಸ್ ಬುಕ್ ನಲ್ಲಿ ತಮ್ಮ ಖಡಕ್ ಬರಹಗಳಿಂದ ತಮ್ಮದೇ ಓದುಗರನ್ನು ಸೃಷ್ಟಿಸಿಕೊಂಡಿದ್ದರು. ಅಂತಹ ಬರಹಕ್ಕೆ ‘ಅವಧಿ’ಯ ಮೂಲಕ ಇನ್ನಷ್ಟು ವಿಶಾಲವಾದ ಕ್ಯಾನ್ವಾಸ್ ಒದಗಿಸಿದ್ದೇವೆ ಅಷ್ಟೇ.  ಅವರ ಅಂಕಣಕ್ಕೆ ಹೆಸರು ಏನು ಎಂದಾಗ ಅವರು ಸೂಚಿಸಿದ್ದು ‘ನುಣ್ಣನ್ನ ಬೆಟ್ಟ’.   ದೂರದಿಂದ ನೋಡಿದರೆ ಎಲ್ಲವೂ ನುಣ್ಣನೆ. ಆದರೆ ಅದರ ಸಂಕೀರ್ಣತೆ, ನಿಜ ರೂಪ ಗೊತ್ತಾಗುವುದು ಹತ್ತಿರ ಹೋದಾಗಲೇ.. ಮೋದಿ, ಅರ್ನಾಬ್ ಗೋಸ್ವಾಮಿ, ಬಿಜೆಪಿ, ಕಾಂಗ್ರೆಸ್, ಸಗಣಿ, ಗೋವು, ಹಳೆ ಟ್ಯಾಕ್ಸು ಹೊಸ ಜಿ ಎಸ್ ಟಿ, ಸರ್ಕಾರಿ ಆಸ್ಪತ್ರೆ ಒಳಗೆ ಖಾಸಗಿ ಚಮಕ್.. ಹೀಗೆ ಎಷ್ಟೋ ನುಣ್ಣನ್ನ ಬೆಟ್ಟಗಳನ್ನ ರಾಜಾರಾಂ ವಿಶ್ಲೇಷಿಸಿದ್ದಾರೆ.

ರಾಜಾರಾಂ ತಲ್ಲೂರು ಅವರ ಬರಹಗಳು ಆಗಲೇ ಬಣ್ಣಿಸಿದಂತೆ Short in length. ಡಿಜಿಟಲ್ ಪತ್ರಿಕೋದ್ಯಮದ ಆರಂಭಕ್ಕೆ ಕಾರಣರಾದವರ ಪೈಕಿ ರಾಜಾರಾಂ ಮುಖ್ಯರು. ‘ಉದಯವಾಣಿ’ ಸಮೂಹದ ವೆಬ್ ಆವೃತ್ತಿಗೆ ಕಾರಣರಾದವರ ಪೈಕಿ ಒಬ್ಬರು. ಡಿಜಿಟಲ್ ಕಾಲದ ಓದಿನ ರೀತಿ, ಶೈಲಿಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಇವರು ಆ ಕಾರಣಕ್ಕಾಗಿಯೇ ಈಗಿನ ಕಾಲದ ಓದಿನ ರೀತಿಗೆ ಈ ಅಂಕಣವನ್ನು ಒಗ್ಗಿಸಿದ್ದಾರೆ. ಈ ಅಂಕಣ ಬರಹಗಳ ಉದ್ದ, ಇದಕ್ಕಿರುವ ತಲೆಬರಹಗಳು, ಇಲ್ಲಿ ಬಳಸಿರುವ ಭಾಷೆ ಅಷ್ಟೇ ಅಲ್ಲ ಈ ಬರಹಕ್ಕಿರುವ ಚುರುಕುತನ ಈ ಗಂಭೀರ ವೀಕ್ಷಣೆಯ ಫಲ.

ವಾರಕ್ಕೆ ಎರಡು ಬಾರಿ ಪ್ರಕಟವಾಗುತ್ತಿದ್ದ ಇವರ ಬರಹಗಳು ಒಂದು ರೀತಿಯಲ್ಲಿ ನನಗೆ ಜಗತ್ತಿನ ಆಗುಹೋಗುಗಳ ಬಗ್ಗೆ ನನ್ನಲ್ಲಿ ಆಗಲೇ ಮೂಡಿದ್ದ ಅಭಿಪ್ರಾಯವನ್ನು ಪರಿಶೀಲಿಸಿ ನೋಡಿಕೊಳ್ಳಲು ಇದ್ದ ದಾರಿ. ಅಥವಾ ವೈದ್ಯ ಜಗತ್ತಿನ ಭಾಷೆಯಲ್ಲಿ ಹೇಳಬೇಕೆಂದರೆ ‘ಸೆಕೆಂಡ್ ಒಪಿನಿಯನ್’. ರಾಜಾರಾಂ ಅವರ ಬರಹಗಳಿಗೆ ಒಂದು ಕುದಿ ಹುಟ್ಟಿಸುವ ಶಕ್ತಿ ಇದೆ. ಅದು ಗೊತ್ತಾದದ್ದು ಅವಧಿಯಲ್ಲಿ ಲೇಖನಗಳು ಪ್ರಕಟವಾಗಲು ತೊಡಗಿದಾಗಲೇ. ಅವರ ಬರಹ ಪ್ರಕಟವಾದಾಗ ಸುನಾಮಿಯಂತೆ ಆ ಬರಹಗಳನ್ನು ಕೊಚ್ಚಿ ಕೆಡಹುವ ಹಲವಾರು  ಕಾಮೆಂಟ್ ಗಳು ಬಂದು ಬೀಳುತ್ತಿತ್ತು.  ಫೇಸ್ ಬುಕ್ ನಲ್ಲಿ ಶೇರ್ ಮಾಡಿದಾಗ ಅಲ್ಲೂ ಇದೇ ಪುನರಾವರ್ತನೆ. ರಾಜಾರಾಂ ಅವರಿಗಾಗಲೀ, ನನಗಾಗಲೀ ಈ ಸುನಾಮಿ ಹುಟ್ಟುವ ಕೇಂದ್ರಗಳ ಪರಿಚಯವಿರುವುದರಿಂದ ಹಾಗೂ ಈಗಾಗಲೇ ನಾವು ಇಂತಹ ವ್ಯವಸ್ಥಿತ ಟ್ರಾಲ್ ಗಳ ಬಗ್ಗೆ ರಾಮಚಂದ್ರ ಗುಹಾ ಬರೆದ ಮೊದಲ ಲೇಖನದಿಂದ ಆರಂಭಿಸಿ ಇತ್ತೀಚಿನ ಸ್ವಾತಿ ಚತುರ್ವೇದಿ ಅವರ I am a troll ಕೃತಿಯವರೆಗೆ ಗಮನ ಹರಿಸಿರುವುದರಿಂದ ಈ ಬರಹಗಳು ಮುಟ್ಟಬೇಕಾದ ಕೇಂದ್ರಗಳನ್ನು ಮುಟ್ಟುತ್ತಿವೆ ಎನ್ನುವ ಭರವಸೆಯಂತೂ ಇವೆ.

ನಾನು ಅವರಿಗೆ ತಮಾಷೆ ಮಾಡುತ್ತೇನೆ ‘ನೀವು ಎಫ್ ಬಿ ನಿರೋಧಕ ಲಸಿಕೆ ಹಾಕಿಸಿಕೊಂಡಿದ್ದೀರಾ’ ಎಂದು. ಸಾಮಾಜಿಕ ತಾಣಗಳ ಬಗ್ಗೆ ಮೂಗು ಮುರಿಯುತ್ತಾ ಅದರಿಂದ ದೂರ ಸರಿಯುವ, ಅದರ ಕಟು ಟೀಕೆ ಮಾಡುವ ಬದಲು ಅದನ್ನು ಹೇಗೆ ತಮಗೆ ಬೇಕಾದ ರೀತಿಯಲ್ಲಿ ಪಳಗಿಸಿಕೊಳ್ಳಬೇಕು ಎಂದು ಗೊತ್ತುಮಾಡಿಕೊಳ್ಳುವ ಅಗತ್ಯ ಇದೆ. ಅಂತಹದ್ದನ್ನು ಪ್ರತೀ ದಿನವೂ ಮಾಡುತ್ತಿರುವವರು ರಾಜಾರಾಂ. ರಾಜಾರಾಂ ಅವರ ಫೇಸ್ ಬುಕ್ ಪುಟ ನೋಡಿದರೆ ಅದೇ ಒಂದು ಪತ್ರಿಕೆಯ ರೀತಿ ಅನಿಸುತ್ತದೆ. ಅಲ್ಲಿ ಸುದ್ದಿ, ವಿಮರ್ಶೆ, ಇತರ ನೋಟ, ವ್ಯಂಗ್ಯಚಿತ್ರ, ಚಿತ್ರ ಹೀಗೆ ಎಲ್ಲವೂ ಉಂಟು. ಹಾಗಾಗಿಯೇ ನನಗೆ ಅನಿಸಿದ್ದು. ನಾವು ಸಾಮಾಜಿಕ ತಾಣವನ್ನು ವೈದ್ಯನ ಅಸ್ತ್ರದಂತೆಯೂ ಬಳಸಬಹುದು ಹಾಗೆಯೇ ಕೊಲೆಗಾರನ ಬಾಕುವಿನಂತೆಯೂ..

ಮಾಧ್ಯಮದ ದಾರಿ ಬದಲಾಗಿದೆ. ಚಿಂತನೆ ಬದಲಾಗಿದೆ. ಅಭಿವ್ಯಕ್ತಿಯ ರೀತಿಗಳು ಬದಲಾಗಿವೆ. ಮಾಧ್ಯಮದಲ್ಲಿ ಇರುವ ಬೆಳಕಿನ ಅಂಗಳಗಳು ಕಿರಿದಾಗುತ್ತಿವೆ. ಇಂತಹ ಸ್ಥಿತಿಯಲ್ಲಿ ಹೊಸ ಬೆಳಕಿನ ದಾರಿಗಳನ್ನು ಕಂಡುಕೊಳ್ಳಬೇಕಾದ ಸವಾಲು ಸಮಾಜದ ಮುಂದಿದೆ. ಅಂತಹ ಅಂಗಳಗಳನ್ನು ಹುಡುಕುತ್ತಿರುವವರಲ್ಲಿ ರಾಜಾರಾಂ ಸಹಾ ಮುಖ್ಯರು.

‘ನಿಮ್ಮೊಡನಿದ್ದೂ ನಿಮ್ಮಂತಾಗದೆ.. ‘ ಎನ್ನುವ ಕವಿತೆ ಎಷ್ಟು ಬಾರಿ ಕೇಳಿಲ್ಲ?. ಹೌದಲ್ಲಾ, ಎಲ್ಲರೊಂದಿಗೆ ಒಂದಾಗಲು ಆಗುತ್ತಿಲ್ಲವಲ್ಲ, ಒಂದಾಗಲು ಬಿಡುತ್ತಿಲ್ಲವಲ್ಲ ಎನ್ನುವ ದನಿ ಕವಿಯದ್ದು. ಆದರೆ ಕಾಲ ಬದಲಾಗಿದೆ. ಎಲ್ಲರೊಡನೆ ಎಲ್ಲರಂತಿರು, ಎಲ್ಲರೂ ಯೋಚಿಸುತ್ತಿರುವ ರೀತಿಯೇ ಯೋಚಿಸು, ಎಲ್ಲರ ಆಯ್ಕೆಯೇ ನಿನ್ನ ಆಯ್ಕೆಯಾಗಬೇಕು, ಎಲ್ಲರೂ ಈಜುತ್ತಿರುವ ಧಿಕ್ಕಿನಲ್ಲಿಯೇ ಈಜು ಎನ್ನುವ ಕಾಲ ಘಟ್ಟದಲ್ಲಿ, ಅದೇ ಸರಿ ಎನ್ನುವ ನಂಬಿಕೆ ಹುಟ್ಟಿಸುತ್ತಿರುವ ಕಾಲದಲ್ಲಿ ರಾಜಾರಾಂ ‘ಎಲ್ಲರೊಡನಿದ್ದೂ ಎಲ್ಲರಂತಾಗಿಲ್ಲ’ ಎನ್ನುವುದೇ ಅವರ ಯಶಸ್ಸು.

ಅವರು, ಅವರ ಆಲೋಚನೆ, ಅವರ ಬರಹಗಳು, ಅವರ ಈಜುವಿಕೆ ಹೀಗೆ ಪ್ರವಾಹದ ವಿರುದ್ಧವೇ ಇರಲಿ ಎಂದು ಆಶಿಸುತ್ತೇನೆ

‍ಲೇಖಕರು avadhi

August 19, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shylesh

    Nice Article Sir… It’s always Exciting to swim against the Tide… That’s why They say “Only the Dead Fish Go with the Flow” … ☺

    ಪ್ರತಿಕ್ರಿಯೆ
  2. Parvathi Aithsl

    ಎಲ್ಲರೊಡನಿದ್ದೂ ಎಲ್ಲರಂತಾಗದೆ ಭಿನ್ನ ರೀತಿಯಲ್ಲಿ ತಮ್ನ ಚಿಂತನೆ
    ಇಗಳನ್ನು ನುಣ್ಷನ್ನ ಬೆಟ್ಡದಲ್ಲಿ ಓದುಗರೊಂದಿಗೆ ಹಂಚಿಕೊಳ್ಟ ಹೊರಟಿರುವ ರಾಜಾರಾಂ ತಲ್ಲೂರು ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: