ವಿನಯಾ ಒಕ್ಕುಂದ ಓದಿದ ‘ಮಾಕನಡುಕು’

ಕುಂ ವೀರಭದ್ರಪ್ಪನವರ ಎರಡು ಕೃತಿಗಳು ಬೆಂಗಳೂರಿನಲ್ಲಿ ಈ ಶನಿವಾರದಂದು (ಜ 20) ಬಿಡುಗಡೆಯಾಗುತ್ತಿವೆ.

‘ವಸಂತ ಪ್ರಕಾಶನ’ ಈ ಕೃತಿಗಳನ್ನು ಪ್ರಕಟಿಸಿದೆ.

‘ಮಾಕನಡಕು’ ಹೊಸ ಕೃತಿಯ ಜೊತೆ ಕುಂ ವೀ ಅವರ ಬಹು ಜನಪ್ರಿಯ ಕೃತಿ ಶಾಮಣ್ಣ ಸಹಾ ಮರುಮುದ್ರಣವಾಗುತ್ತಿದೆ

ಮಾಕನಡಕು ಕೃತಿಗೆ ಖ್ಯಾತ ಸಂಸ್ಕೃತಿ ಚಿಂತಕರಾದ ಡಾ ವಿನಯಾ ಒಕ್ಕುಂದ ಅವರು ಬರೆದ ಮುನ್ನುಡಿ ಇಲ್ಲಿದೆ-

**

‘ಸಮಕಾಲೀನತೆಗೆ ಸೃಜನಶೀಲತೆಯ ಉಸಿರು’

ವಿನಯಾ ವಕ್ಕುಂದ

ವಿನಯಾ ಒಕ್ಕುಂದ

**

ಕನ್ನಡದ ಕಥನವಂತಿಕೆಯ ತ್ರಾಣವನ್ನು ಹೆಚ್ಚಿಸಿದ ಕಥೆಗಾರ ಕುಂವೀ. ‘ನಾವು ಕಥೆಗಳ ನಡುವೆಯೇ ಬದುಕುತ್ತೇವೆ’- ಎಂದ ಮಾರ್ಕ್ವೆಜ್ ನಂತೆ, ಜನರ ಬದುಕಿನ ಉಸಿರ ವಿನ್ಯಾಸಗಳನ್ನು ಕನ್ನಡದ ಸಂವೇದನೆಗೆ ತಾಕಿಸಿದವರು. ಕತ್ತಲ ಹಿಡಿದ ತ್ರಿಶೂಲದ ಹೊಳಪು ಇಂದಿಗೂ ಕನ್ನಡ ಕಥನದ ಹಾದಿಯಾಗಿದೆ. ಗೋರಿ ಬಗೆಯುತ್ತಿದ್ದ ಕಿವುಡನ ಕೈಗಳು ಅಸಹಾಯಕತೆಯ ಅಂತರಾಳವನ್ನು ಬಗೆಯುವ ಬಗೆಯನ್ನು ತೋರಿವೆ. ಬಹುದೊಡ್ಡ ಸೃಜನಶೀಲ ಮತ್ತು ಚಿಂತನಾ ತಾಕತ್ತಿನ ಕುಂವೀ ತಮ್ಮ ಕಥನಕ್ರಮವನ್ನು ತಾವೇ ಬದಲಿಸಿಕೊಳ್ಳುತ್ತ ಬಂದವರು. ಈ ದಾರಿ ಈಗ ‘ಮಾಕನಡುಕು’ವಿಗೆ ತಲುಪಿದೆ.

ಮಾಕನಡುಕು ಐದು ದಶಕಗಳ ಹಿಂದಿನ ನಲ್ಲಮಲ ಕಾಡು (ಆಂಧ್ರಪ್ರದೇಶ) ಹೊಕ್ಕ ಅನುಭೂತಿಯ ಕೃತಿ. ಸರ್ಕಾರಿ ದಫ್ತರಲ್ಲಿ ಮಾತ್ರ ಉಳಿದಿದ್ದ ಶಾಲೆಗೆ ಮಾಸ್ತರನಾಗಿ ಹೋದವನು ಆ ದಟ್ಟ ದಾರಿದ್ರ್ಯದ ಬಾಳಿಗೆ ನಾಗರಿಕತೆಯ ಸ್ಪರ್ಶವನ್ನು ಅನ್ನಮಯವಾದ ಅಕ್ಷರವನ್ನೂ ಕೊಡಲೇಬೇಕು ಎಂಬ ಬದ್ಧತೆಯ ಕಾರಣಕ್ಕಾಗಿ ಪಡುವ ಪಾಡಿನಗುಂಟ ಈ ಕಥೆ ಸಾಗುತ್ತದೆ. ಬುಡಕಟ್ಟು ಸಮುದಾಯಗಳು ಅವರ ಬದುಕಿನ ವೈವಿಧ್ಯ ವೈರುಧ್ಯಗಳು ನಾಗರಿಕ ಪ್ರಪಂಚದ ಮೋಸದಿಂದ ಛಿದ್ರವಾಗುವ ದುರಂತ ಇಲ್ಲಿದೆ. ತನ್ನ ಹಿತಾಸಕ್ತಿಗಾಗಿ ಅನ್ಯರ ಬಾಳಿಗೆ ನಾಜೂಕಾಗಿ ಕತ್ತರಿಯಾಡಿಸುವ ಪದ್ಮನಾಭರಾವ್, ಸ್ವಾರ್ಥ ಲೋಲುಪತೆಯ ಆತ್ಯಂತಿಕ ರೂಪವಾಗುವ ವೆಂಕಟ್ರಾಮುಡು, ಇಂಥ ಅಕ್ಷರಸ್ಥ ಭ್ರಷ್ಟರ ಬೆನ್ನು ಕಾಯುವ ಪ್ರಜಾಸತ್ತೀಯ ವ್ಯವಸ್ಥೆ ಈ ಹೆಣಿಗೆ ಸಂಕೀರ್ಣವಾಗಿದೆ. ಅನ್ನವನ್ನು ಧರ್ಮಕ್ಕೆ ಲಗತ್ತಿಸುವ ಜಾಲದಲ್ಲಿ ಶಿಕ್ಷಣ ಒತ್ತುವರಿಯಾಗುತ್ತದೆ. ಈ ವಿಷಗಾಳಿಯನ್ನೇ ಉಸಿರಾಡಬೇಕಾದ ಸ್ಥಿತಿ. ಅಂಥಲ್ಲೂ ಮನುಷ್ಯತ್ವದ ಸಂಕೇತದಂತಿರುವ ಎರುಕಲಯ್ಯನಂಥವರು.

ಓಹ್! ಇದೊಂದು ನಿಬಿಡಾರಣ್ಯ! ಇದು ಕಥನವಲ್ಲ, ಕಥನದ ಮೂಲಕ ಬಾಳಿನ ತಾತ್ವಿಕತೆಯ ಶೋಧ, ಶೋಧನೆಯ ಹಾದಿಯುದ್ದ ಗಮ್ಮೆನ್ನುವ ಜೀವದಾಯಿ ಸತ್ವ. ಮಾಕನಡುಕು ನಮ್ಮ ಪ್ರಜ್ಞೆಯ ಭಾಗವಾಗುತ್ತದೆ. ನಮ್ಮ ಸಂಸ್ಕೃತಿಯ ಚಹರೆಯೇ ಏಕತಾರಿಯಾಗುತ್ತ ಬಹುತ್ವವನ್ನು ಮುರುಟಿಸುತ್ತಿರುವಾಗ ಈ ಕಥನ ಬಹುತ್ವದ ಚಹರೆಯನ್ನು ಶ್ರದ್ಧೆಯಿಂದ ನಿರೂಪಿಸುತ್ತದೆ, ಸ್ವಾತಂತ್ರ್ಯಾನಂತರದ ನಮ್ಮ ಅಭಿವೃದ್ದಿ ಮಾದರಿಗಳು ಯಾರನ್ನು ಯಾಕೆ ದೂರೀಕರಿಸಿತು ಎಂಬುದರ ಸಾಕ್ಷ್ಯಚಿತ್ರವಾಗುತ್ತದೆ, ಸ್ವಾತಂತ್ರ್ಯಾನಂತರವೂ ಪ್ರಜಾಸತ್ತೀಯ ಚಿಂತನೆಗಳಲ್ಲಿ ಸೇರಿಕೊಂಡ ಧಾರ್ಮಿಕ ಪೂರ್ವಾಗ್ರಹಗಳು ಹಳೆಯ ಶ್ರೇಣೀಕರಣದ ರೋಗವನ್ನು ವಾಸಿ ಮಾಡಲಿಲ್ಲ. ಒಳಗೇ ಅರಗಿಸಿ ಬಾಳನ್ನು ಕೊಳೆಯಿಸುತ್ತಿದೆ, ನಿಜ, ಅದನ್ನು ಅರಿಯಲು ಮತ್ತು ಎದುರಿಸಲು ಅಪಾರ ಆತ್ಮಶಕ್ತಿ ಬೇಕು. ಬ್ಲೇಕನ ಚಿಮಣಿ ಸ್ವೀರ‍್ಸ್ ಹುಡುಗರಂತೆ, ಇಲ್ಲಿನ ನಾಯಕನೂ ಸೃಜನಶೀಲತೆಯೊಂದಿಗೆ ನಿರಂತರ ಅನುಸಂಧಾನಿಸುತ್ತ ಜೀವಂತಿಕೆಯನ್ನು ಕಾಪಿಟ್ಟುಕೊಳ್ಳಬಲ್ಲವನಾಗಿದ್ದಾನೆ. ಅನುಭವವನ್ನು ಸೃಷ್ಟಿಶೀಲವಾಗಿಸುವ ಬರಹಗಾರರು ಎದುರಿಸುವ ಸ್ವಪರತೆಯಿಂದ ಈ ಸೃಜನಶೀಲ ಸಂವಾದ ಎಚ್ಚರವಹಿಸುತ್ತದೆ. ಅಪ್ಪಟ ಸೃಷ್ಟಿಶೀಲ ಸಾಮರ್ಥ್ಯ ಮಾತ್ರ ಈ ಬಿಕ್ಕಟ್ಟಿನಿಂದ ತನ್ನನ್ನು ಪಾರುಗಾಣಿಸಿಕೊಂಡೀತು. ಹಿಮಪಾತಕ್ಕೆ ಸಿಲುಕಿದ ಎಸ್ಕಿಮೋ ಜನರು ಸಾವಿನ ಭೀತಿ ಗೆಲ್ಲಲು ಆ ಹಿಮದಡಿಯಲ್ಲಿಯೆ ಪರಸ್ಪರ ಕಥೆ ಹೇಳಿಕೊಳ್ಳುತ್ತಾರಂತೆ. ಈ ಕೃತಿ ಅಂಥ ಎಚ್ಚರದ ನಿರ್ಮಿತಿ. ಹಾಗೆಯೇ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಎಲ್ಲವೂ ಭ್ರಷ್ಟಗೊಂಡಾಗ ಆ ಕುಸಿತಕ್ಕೆ ತನ್ನ ಬೆನ್ನು ಒಡ್ಡಿ ತಡೆಯಬೇಕಾದದ್ದು ಸೃಜನಶೀಲತೆಯೆ.

ನಾವಿಂದು ಭಾಷೆಯ ಬಿಕ್ಕಟ್ಟಿನಲ್ಲಿದ್ದೇವೆ. ಸಂಭಾವಿತರು ಮತ್ತು ನೀಚರು ಒಂದೇ ಪರಿಭಾಷೆಯಲ್ಲಿ ಮಾತಾಡುತ್ತಾರೆ. ಅದು ವೆಂಕಟ್ರಾಮುಡುನ ಜನಾಕರ್ಷಕ ಶೈಲಿ. ಸುಶಿಕ್ಷಿತ ಪ್ರತಿಭಾವಂತ ಮಹಾನ್ ಭ್ರಷ್ಟನೂ ಸ್ವಾರ್ಥಿಯೂ ಆದಾಗ ಮಾತಿನ ಮೂಲಸತ್ವ ಘಾಸಿಗೊಳ್ಳುತ್ತದೆ. ಆದರೆ ಅಷ್ಟರಲ್ಲಾಗಲೇ ಆ ವರಸೆಗೆ ಜನ ಬಲಿಯಾಗುತ್ತಾರೆ, ಸತ್ಯ ಅಪಥ್ಯವೆನಿಸುತ್ತದೆ. ನಯವಂಚಕ ಮಾತಿನ ತಣ್ಣನೆಯ ಕ್ರೌರ್ಯ ಬೆಳೆಯುತ್ತದೆ.
ಮಾತು ಬರಿ ಮಾತಲ್ಲ. ಅದು ವರ್ತನೆ. ಈ ಅಸಹಜ ಸ್ಥಿತಿಯೆ ಸಮಾಜದ ನಡೆಯಂತಾದಾಗ ಸಂಭಾವಿತ ಮಾತು ಸತ್ತವನಂತಾಗುತ್ತಾನೆ. ಸದ್ಯದ ಭಾರತದ ಧರ್ಮ ಕಾರಣ, ರಾಜಕಾರಣಗಳ ಜುಗಲ್‌ಬಂದಿಯಲ್ಲಿ ಮಾನವೀಯತೆಯ ನರಳುವಿಕೆಯನ್ನು, ಕಟ್ಟಕಡೆಯ ಸಮುದಾಯದ ಅಸಹಾಯಕ ತಳಮಳವನ್ನು, ಸಾಮಾಜಿಕವಾಗಿ ದಟ್ಟಯಿಸಿಕೊಂಡ ಭ್ರಷ್ಟತೆ ವೈಯಕ್ತಿಕ ಭ್ರಷ್ಟತೆಯೂ ಆಗಲು ಸತಾಯಿಸುವುದನ್ನು, ಒಳಿತು ಕೆಡುಕುಗಳನ್ನು ಗುರುತಿಸುವ ಅನುಸರಿಸುವ ನೈತಿಕತೆಯೂ ಆಕ್ರಮಣಕ್ಕೀಡಾಗುವುದನ್ನು, ಬಂಡವಾಳೋದ್ಯಮವು ಮನುಷ್ಯ ಸಂವೇದನೆಯ ಮೇಲೆ ಸಾಧಿಸುವ ದಿಗ್ವಿಜಯವನ್ನು ಮಾಕನಡುಕು ಕಾಣಿಸುತ್ತದೆ. ಹೀಗೆ ನಮ್ಮೊಳಗನ್ನು ಕಲಕುವ ಸಮಕಾಲೀನತೆಯ ಸೃಜನಶೀಲ ಕಥನ ‘ಮಾಕನಡುಕು’ ನಮ್ಮ ಸಂವೇದನೆಯ ಭಾಗವಾಗಿಬಿಡುತ್ತದೆ.

‍ಲೇಖಕರು avadhi

January 15, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: