ವಿಠ್ಠಲನಿಗೊಂದು ವಿದಾಯ ಪತ್ರ: ಹೇಳುವುದು ಹಾಗೇ ಉಳಿದುಹೋಯಿತು…‌

ಶ್ರೀಪಾದ್ ಭಟ್

ಪ್ರಿಯ ಗೆಳೆಯ ವಿಠ್ಠಲ,

ಏಪ್ರಿಲ್‌ ೩ ಬೈಂದೂರಿನ ಕಾರ್ಯಕ್ರಮಕ್ಕೆ ಅಂತ ನಿನ್ನೊಡನೆ ನಾನು, ಕಿರಣ ಬಂದಿದ್ದೆವು. ಕಾರ್ಯಕ್ರಮ ಮುಗಿಸಿ ಊಟದ ಹೊತ್ತಲ್ಲಿ ನೀನು ‘ಕೆಲಸ ಎಷ್ಟು ಬಾಕಿ ಇದೆ ಮಾರಾಯಾ..’ ಅನ್ನುತ್ತ, ಥಟ್ಟನೆ ಗಂಭೀರವಾಗಿ ‘ಆರೋಗ್ಯ ಸರಿ ನೋಡ್ಕೊ’ ಅಂದೆ. ನಾನು ತಮಾಶೆ ಮಾಡ್ತಾ, ‘ನಿಜ. ಇಲ್ದಿದ್ರೆ ನಿನಗಿರುವ ಕೆಲಸಗಳ ಜತೆ ವರ್ಷಕ್ಕೆ ಒಂದು ಸಾರಿ ನನ್ನ ಹೆಸರಿನಲ್ಲಿಯೂ ನಾಟಕೋತ್ಸವ ಮಾಡೋ ಕೆಲಸವೂ ಸೇರ್ಕೋತದೆ ನೋಡು’ ಎಂದೆ. ಇಬ್ಬರೂ ನಕ್ಕೆವು. ಆದರೆ ಎಂದಿನಷ್ಟಲ್ಲ. ಮೊದಲೆಲ್ಲ ಹೊಟ್ಟೆ ತುಂಬ ನಕ್ಕು, ಕಣ್ಣಲ್ಲಿ ನೀರು ತುಂಬಿ, ನಿನ್ನ ಕದಪುಗಳು ಅಲ್ಲಾಡುತ್ತಿದ್ದವು.

ಆ ದಿನ ಅಷ್ಟು ನಗಲಾಗಲಿಲ್ಲ ಇಬ್ಬರಿಗೂ. ಕಾರಣ?? ವೈಯಕ್ತಿಕವಂತೂ ಆಗಿರಲಿಲ್ಲ. ನಮ್ಮಿಬ್ಬರ ಬದುಕಿನಲ್ಲಿ ವೈಯಕ್ತಿಕವಾದುದೆಲ್ಲ ಬಯಲಿನಲಿತ್ತು. ಮತ್ತು ಒಬ್ಬರು ಇನ್ನೊಬ್ಬರ ಮಾತನ್ನು ಆಲಿಸುತ್ತಿದ್ದೆವು. ಒಬ್ಬರು ಇನ್ನೊಬ್ಬರ ನಡೆಯನ್ನು ಅನುಸರಿಸುತ್ತಿದ್ದೆವು. ಇಬ್ಬರಿಗೂ ಆ ಕುರಿತ ನಿಸ್ವಾರ್ಥತೆಯಲ್ಲಿ ಅಗತ್ಯಕ್ಕಿಂತ ಹೆಚ್ಚೇ ನಂಬುಗೆ ಇತ್ತು. ಇನ್ನು, ಸಂಘಟನೆಗೆ ಸಂಬಂಧಿಸಿದ ನಿಲುವು. ನಿಜ. ಇಲ್ಲಿ ತುಸು ವ್ಯತ್ಯಾಸ ಇಬ್ಬರಿಗೂ ಬಂದಿತ್ತು. ಹೇಳಿಕೊಳ್ಳಲಾರದ, ಬಗೆಹರಿಯಲಾರದ ಬಹುದೊಡ್ಡದೇನೂ ಆಗಿರಲಿಲ್ಲ. ಹೀಗಾಗಿ ಪರಸ್ಪರ ಸಮಯ ಹುಡುಕುತಿದ್ದೆವು. ಕೊನೆಗೂ ಆ ಸಮಯ ಬರಲೇ ಇಲ್ಲ. ಹೊಟ್ಟೆಯೊಳಗೆ ನೋವಕೆಂಡಗಳನಿಟ್ಟುಕೊಂಡು ಈಗ ಮಾತನಾಡುತಿರುವೆ; ಯಾರಿಗೆ? ನನ್ನೊಳಗಿನ ನಿನಗೆ..ಅಂದರೆ ನನಗೇ. ಈ ನೋವು ಯಾವತ್ತೂ ಅಳಿಯದಿರಲಿ ಎಂಬ ಹಂಬಲದೊಂದಿಗೆ. ಅದು ಕಾಡುತ್ತಲೇ ಇರಬೇಕು ಮತ್ತು ಅಂತಹ ತಪ್ಪುಗಳಾಗದಂತೆ ಕಾಯುತ್ತಲೇ ಇರಬೇಕು.

ʼಸಂಘಟನೆʼ ಮತ್ತು ʼನಾಯಕತ್ವದ ಹೊಣೆʼ. ಈ ಪದದ ಮೇಲೆ ನಿನಗೆಂತ ವ್ಯಾಮೋಹವಿತ್ತು! ಈಗ ನೆನೆದರೆ ಆಶ್ಚರ್ಯವಾಗುತ್ತದೆ. ನಮ್ಮ ಕಾಲೇಜು ದಿನಗಳಿಂದಲೂ ನಿನಗೆ ಅದರ ಕುರಿತು ಹುಡುಗಿಯರಿಗಿಂತ ಹೆಚ್ಚಾದ ಮೋಹವಿತ್ತು.

ನಾನು ಅರೆ ಅಂಗಡಿಯಲ್ಲಿ ಓದುವಾಗ ನನಗಿಂತ ಒಂದು ವರ್ಷ ಹಿರಿಯ ನೀನು. ಆಗ ನೀನು ಪರಿಚಯ ಆಗಿರಲಿಲ್ಲ. ನಾನು ಆರ್.ವಿ.ಭಂಡಾರಿಯವರ ಕುರಿತು ಸಹೋದರ ಕಿರಣನ ಮೂಲಕ ಕೇಳಿಬಲ್ಲೆನಾದರೂ ನಿನ್ನ ಕುರಿತು ತಿಳಿದಿರಲಿಲ್ಲ. ಅಲ್ಲಿ ಮತ್ತು ಸಂತೆಗುಳಿ ಎಂಬ ಶಾಲಾ ಬಯಲಿನಲ್ಲಿ ನಾನು ನಾಟಕ ಆಡುವಾಗಲಿ ಅಥವಾ ಕಿರಣ ಭಟ್‌ ‘ನಾಗರಿಕ’ ಪತ್ರಿಕೆಯ ಸಂಘಟನೆಯಡಿ ‘ಕುರಿತೇರು’ ನಾಟಕ ಆಡಿಸಿದಾಗಲಾಗಲಿ ನೀನು ಕಾಣಿಸಿಕೊಂಡಿರಲಿಲ್ಲ. ಆರ್.ವಿ.ಬರುತ್ತಿದ್ದರು ಮತ್ತು ಅವರು ನಮ್ಮನ್ನು ಅಭಿನಂದಿಸಿದಾಗಲೆಲ್ಲ ಹೆಮ್ಮೆಯಿಂದ ಉಬ್ಬುತ್ತಿದ್ದೆವು. ನಿನ್ನ ಕಂಡಿರಲೇ ಇಲ್ಲ. ಮುಂದೆ ಬಿ.ಎ. ಪ್ರಥಮ ವರ್ಷದಲ್ಲಿ ಒಮ್ಮೆ ಕಿರಣ ನಿನ್ನನ್ನು ಹಾದಿಯ ಮೇಲೆ ಪರಿಚಯಿಸಿ, ‘ಇವ ಆರ್.ವಿ. ಮಗ’ ಅಂದಾಗ ತುಂಬ ಸೋಜಿಗವಾಗಿತ್ತು. ಆರ್.ವಿ. ಮಗನಾಗಿ ಹೇಗೆ ನೀನು ಪರಿಚಯವಾಗದೇ ಹೋದೆ ಇಷ್ಟು ದಿನ! ಅಂತ.

ಆ ದಿನದಿಂದ ನಾವಿಬ್ಬರೂ ಸ್ನೇಹಿತರಾದೆವು. ಆರ್.ವಿ. ಹೆಸರಿನ ಕಾರಣಕ್ಕೇನೇ ನಾನು ನಿನ್ನ ತುಂಬ ಹಚ್ಚಿಕೊಂಡೆ. ನಿನ್ನ ಮೂಲಕ ನಿಮ್ಮ ಮನೆಗೆ ಬಂದು ಆರ್.ವಿ.ಯವರನ್ನು ಭೇಟಿಯಾಗುವ ಅವಕಾಶ ದೊರಕುವ ಭಾಗ್ಯಕ್ಕಾಗಿಯೇ ಹಚ್ಚಿಕೊಂಡೆ. ಒಂದೂ ಸುಳ್ಳಾಗಲಿಲ್ಲ. ಆರ್.ವಿ., ಮತ್ತೆ ನಿಮ್ಮಮ್ಮ, ಅಕ್ಕಂದಿರು ಎಲ್ಲರೂ ನನ್ನನ್ನು ಮನದೊಳಗೇ ಬಿಟ್ಟುಕೊಂಡರು. ನಾನು ಬರಬರುತ್ತ ನಿಮ್ಮ ಮನೆಯವರಲ್ಲಿ ಒಬ್ಬನಾಗಿ ಹೋದೆ.

ಕಾಲೇಜಿನಲ್ಲಿಯೂ ಸೆಮಿನಾರಿಗಿಂತ ಹೆಚ್ಚು ವಿದ್ಯಾರ್ಥಿ ಚುನಾವಣೆಗಳಲ್ಲಿಯೇ ನಿನಗೆ ಹೆಚ್ಚು ಆಸಕ್ತಿ. ಅಲ್ಲಿಯ ಬ್ರಾಹ್ಮಣೇತರರ ಗುಂಪಿಗೆ ನೀನೇ ನಾಯಕ. ಬಂಡಾಯ ಸಾಹಿತಿ, ಉಪನ್ಯಾಸಕ ಅವಧಾನಿಯವರು ನಮ್ಮ ಮಾರ್ಗದರ್ಶಕರು. ಆರ್.ವಿ.ಯವರ ಕಾರಣಕ್ಕಾಗಿ ಅವಧಾನಿ, ಆಗಾಗ ಬರುತ್ತಿದ್ದ ಕೇಶವ ಶರ್ಮ, ಭಾಸ್ಕರ ಮಯ್ಯ, ಆರ್.ಕೆ.ಮಣಿಪಾಲ ಇವರೆಲ್ಲರ ಸ್ನೇಹ ಲಭಿಸಿತು. ನನಗೆ ಸಾಹಿತ್ಯ ಕಥನಗಳಲ್ಲಿ ಹುಚ್ಚು ಹೆಚ್ಚಾಗುತ್ತ ಬಂದರೆ ನಿನಗೆ ಸಂಘಟನೆಯಲ್ಲಿ. ನೆನಪಿದೆಯಾ ನಿನಗೆ? ಸಹ್ಯಾದ್ರಿ ಅನ್ನೋ ಪತ್ರಿಕೆ ತರ್ತಿದ್ವಿ. ಎಷ್ಟೆಲ್ಲ ಬರಹಗಳನ್ನು ತುಂಬ್ತಿದ್ವಿ. ‘ನೀನು ಬರೆ ಮಾರಾಯಾ, ಬುಕ್‌ ಬೈಂಡ್‌ ಚಂದ ಮಾಡಿ ನಾ ಮಾಡಿಸ್ಕೊಡ್ತೆ’ ಅಂತಿದ್ದೆ ನೀನು.

ಚರ್ಚಾಕೂಟ ನಡೆದಾಗ ನಾನು ಮಾತನಾಡಿದ ಕೂಡಲೇ ಸ್ನೇಹಿತರೊಡನೆ ಜಾಸ್ತಿ ಚಪ್ಪಾಳೆ ತಟ್ಟಿಸಿ ಎಲ್ಲರೂ ಕಂಗಾಲಾಗೋ ಹಾಗೆ, ಬಹುಮಾನ ನನಗೇ ಬರೋ ಹಾಗೆ ಮಾಡ್ತಿದ್ದೆ. ನಾಟಕ, ಹಾಡು, ಆರ್ಕೆಸ್ಟ್ರಾ, ಕನ್ನಡ ಸಂಘದ ಕಾರ್ಯಕ್ರಮ ಏನೇ ಇರಲಿ ಸಂಘಟನೆ ನಿನ್ನದು, ವೇದಿಕೆ ನನ್ನದು. ನಮ್ಮನ್ನ ‘ಸಂಗ್ಯಾ ಬಾಳ್ಯ’ ಅಂತಿದ್ರು. ನಮ್ಮ ಜೋಡಿ ಖ್ಯಾತವಾಗಿತ್ತು. ನಾಟಕ ಆಡುತ್ತ, ಆಡುತ್ತ ಕೈಯಲ್ಲಿ ಪೈಸೆ ಇಲ್ಲದಿದ್ದರೂ ದಕ್ಷಿಣ ಭಾರತ ಸುತ್ತಿದೆವು. ʼಶ್ರೀಪಾದ ನಾಟಕ ಆಡಿಸಿದ್ರೆ ಬಹುಮಾನ ಗ್ಯಾರಂಟಿʼ ಅಂತ ನಿನ್ನ ನಂಬುಗೆ, ನೀನಿದ್ದ ಮೇಲೆ ಹೇಗೂ ಜವಾಬ್ದಾರಿ ತಗೊಳ್ತಿ, ಹಾಗಾಗಿ ಕಾಸಿಲ್ಲದೇ ಜಗತ್ತಿನ ಯಾವ ಭಾಗಕ್ಕಾದರೂ ಹೋಗಬಹುದು ಅಂತ ನನ್ನ ನಂಬುಗೆ. ಆತುಕೊಂಡಿದ್ವಿ ನಾವು ಪರಸ್ಪರ.

ಬಹುಬೇಗ ನೌಕರಿ ಸಿಕ್ಕು ಮಂಡ್ಯಕ್ಕೆ ಹೋದೆ ನಾನು, ಮದುವೆಯೂ ಬಹುಬೇಗ ಆದೆ. ಹೊನ್ನಾವರ ಕಾಲೇಜು ಮುಗಿಸಿ ನೀನು ಶಿವಮೊಗ್ಗ ವಿಶ್ವವಿದ್ಯಾಲಯ ಪ್ರವೇಶಿಸಿದೆ. ಅಲ್ಲಿ ಹೋದ ನಂತರ ನಿನ್ನ ಯೋಚನಾಕ್ರಮ, ಬದುಕಿನ ಹಾದಿ ಎಲ್ಲವೂ ಸ್ಪಷ್ಟವಾಗಿಬಿಟ್ಟಿತ್ತು. ಸಂಘಟನೆಯ ಬದುಕಿನ ರೂಪುರೇಷೆ ಸಿದ್ಧಮಾಡುವದರಲ್ಲಿ ನೀನು ತೀವ್ರವಾಗಿ ತೊಡಗಿದ್ದೆ. ದೊರಕಿದ ಕತೆಕಾದಂಬರಿಗಳಲೆಲ್ಲ ಸಮಾಜವಾದದ ಸಾಲುಗಳನ್ನು ಹೆಕ್ಕತೊಡಗಿದ್ದೆ. ವಿದ್ಯಾರ್ಥಿ ಯುವಜನರ ಸಂಘಟನೆ ನಿನಗೆ ಅನ್ನದಷ್ಟೇ ಮಹತ್ವದ್ದಾಗಿತ್ತು. ಅದು ಅಭ್ಯಾಸ ಮತ್ತು ಹೋರಾಟದ ಖಚಿತ ಹಾದಿ ಹಿಡಿಸಿತ್ತು. ನನ್ನನ್ನೂ ಅಲ್ಲಿಗೆ ನಾಟಕಮಾಡಿಸಲು ಕರೆಸಿಕೊಂಡೆ. ಕೇಶವ ಶರ್ಮರ ಮನೆಯ ಸದಸ್ಯನನ್ನಾಗಿಸಿದೆ.

ಮುಂದೆ ದಶಕಗಳ ಕಾಲ ನಾನು ಶಿವಮೊಗ್ಗದಲ್ಲಿ ರಂಗ ಚಟುವಟಿಕೆ ಮಾಡಲು ಆ ಸಂದರ್ಭ ನೆವ ನೀಡಿತು. ವಿಶ್ವವಿದ್ಯಾನಿಲಯದ ಆ ಗುಡ್ಡಗಳ ಮೇಲೆ ರಾತ್ರಿಯೆಲ್ಲ ಕುಳಿತು ‘ಹೇಗೆ ವಿ.ವಿ.ಯ ಅಡಿಯಲ್ಲಿ ಬರುವ ಕಾಲೇಜುಗಳಲೆಲ್ಲ ಎಸ್.‌ ಎಫ್.‌ ಐ. ಸಂಘಟನೆ ಕಟ್ಬೇಕುʼ ಅನ್ನೋ ಕನಸು ಬಿಟ್ರೆ ಬೇರೆ ಮಾತಾಡ್ತಿರಲಿಲ್ಲ ನೀನು. ʼನೌಕರಿಗೆ ಹೋಗೋದೇ ಇಲ್ಲ ನಾನು, ಸಂಘಟನೆ ಕಟ್ತೇನೆʼ ಅಂತ ನೀನು ಹೇಳುವಾಗ, ನೌಕರಿ ಇಲ್ಲದೇ ಬದುಕೋದು ಹೇಗೆ ಅಂತ ತಿಳಿಯದೇ ನಾನು ಬಿಟ್ಟಬಾಯಿ ಮುಚ್ಚುತಿರಲಿಲ್ಲ. ‘ಅಣ್ಣ ಅದಕೆಲ್ಲ ಫುಲ್‌ ಸಪೋರ್ಟ್’ ಅಂತ ನೀನೆಂದಾಗ ನನಗೆ ಆರ್.ವಿ.ಯವರು ದೇವರ ಹಾಗೆ ಕಾಣುತ್ತಿದ್ದರು.

ಬಹುಶಃ ನಾನು ವರ್ಗವಾಗಿ ಹೊನ್ನಾವರಕ್ಕೆ ಬಂದ ಮೇಲೆ ನಮ್ಮ ಸ್ನೇಹ ಇನ್ನೊಂದು ಮಜಲನ್ನು ಪಡೆಯಿತು. ಅಲ್ಲಿಯವರೆಗೆ ರಜಾಕಾಲದ ಅತಿಥಿಗಳಂತೆ ಸೇರುತ್ತಿದ್ದ ನಾವು ದಿನನಿತ್ಯದ ಒಡನಾಡಿಗಳಾದೆವು. ನಮ್ಮ ಕನಸಿಗೆ ಮಿತಿಯೂ ಇರಲಿಲ್ಲ, ಅಡ್ಡಿಯೂ ಇರಲಿಲ್ಲ.  ಸಾಕ್ಷರತಾ ಆಂದೋಲನದಲ್ಲಿ ಹಗಲು ರಾತ್ರಿ ದುಡಿದೆವು. ಅಕ್ಷರದ ಬೆಳಕು ಅಲ್ಲೆಲ್ಲ ಎಷ್ಟು ಹೊತ್ತಿತೋ ತಿಳಿಯದು, ಆದರೆ ನಮ್ಮೊಳಗೆ ಅದು ಬಿತ್ತಿದ ಅರಿವು ಅಪಾರ. ಬೀದಿ ನಾಟಕದ ಎಲ್ಲ ಬಗೆಯ ಸಾಧ್ಯತೆಯನ್ನೂ ಶೋಧಿಸಿದೆವು, ರಾತ್ರಿ ಹೊತ್ತಿನಲ್ಲಿ ಅವಧಾನಿ ಮತ್ತು ಆರ್.ವಿ.ಯವರ ಜತೆ ಹಳ್ಳಿಹಳ್ಳಿಗಳ ಸಾಕ್ಷರತಾ ಶಾಲೆಗಳಲ್ಲಿ ವೀರಾವೇಶದ ಭಾಷಣ ಮಾಡುತ್ತಿದ್ದೆವು.

ಹೊನ್ನಾವರದಲ್ಲಿ ಹಾಕಿಕೊಂಡಿದ್ದ ಅಕ್ಷರ ಗುಡಿಸಲಿನಲ್ಲಿ ಅದೆಷ್ಟು ಕಾರ್ಯಕ್ರಮಗಳು?!! ಬಿ.ವಿ.ಕಾರಂತರನ್ನೂ, ಶಿವರಾಮ ಕಾರಂತರಂತವರೆಲ್ಲ ಆ ಅಕ್ಷರದ ಗುಡಿಸಲಿನಲ್ಲಿ ಕುಳಿತು ಭಾಷಣ ಮಾಡುವಾಗ ನಮ್ಮಿಬ್ಬರ ಮೈಯಲ್ಲಿಯೂ ನವಿರೇಳುತಿತ್ತು. ಒಮ್ಮೊಮ್ಮೆ ರಾತ್ರಿ ಕಾರ್ಯಕ್ರಮ ಮುಗಿಸಿ ನಾನು ನನ್ನ ಹಳ್ಳಿ ದಿಬ್ಬಣಗಲ್ಲಿಗೆ ಹೋಗೋಕೆ ಬಸ್‌ ಇಲ್ಲದೇ ನಡೆದು ಹೋಗುತ್ತಿದ್ದೆ ಎಂಬುದು ತಿಳಿದ ತಕ್ಷಣ ನೀನು ʼಕಛೇರಿಯ ವಾಹನಗಳಿರುವುದು ಅಧಿಕಾರಿಗಳ ಓಡಾಟಕ್ಕೆ ಮಾತ್ರ ಅಂತಲ್ಲ, ಕಾರ್ಯಕರ್ತರಿಗೂ ಅದು ಒದಗಬೇಕುʼ ಅಂತೆಲ್ಲ ಕೂಗಾಡಿ ಅಗತ್ಯ ಸಮಯದಲ್ಲಿ ವೆಹಿಕಲ್‌ ಮಾಡಿಸುತ್ತಿದ್ದೆ.

ಅಂತಹ ಅನೇಕ ಸಮಯದಲ್ಲಿ ನಾನು ಮುಜುಗರದಿಂದ ಒಳಸರಿಯುತ್ತಿದ್ದರೆ ನೀನು ಸೆಟೆದು ನಿಂತು ಮುಂದರಿಯುತಿದ್ದೆ. ಆ ದಿನಗಳು ನಮ್ಮ ಬದುಕಿನ ಸಂಭ್ರಮದ ದಿನಗಳೇ ಸರಿ. ಎಂ.ಲೋಕೇಶ ಆ ಸಮಯದಲ್ಲಿ ಹೊನ್ನಾವರದಲ್ಲಿದ್ದ. ಅವರ ಮನೆ ನಮ್ಮೆಲ್ಲರ ಮನೆಯಾಗಿ ಹೋಗಿತ್ತು. ಜತೆಗೆ ನಮಗಿರುವ ಇನ್ನೊಂದು ಮನೆ ಮಾಸ್ತಿ ಗೌಡರದು. ಇದೆಲ್ಲಕೂ ಕಳಸವಿಟ್ಟಂತೆ ಮಮತಾ ಭಾಗ್ವತ್‌ ಬಂದು ಸೇರಿಕೊಂಡಿದ್ದಳು. ಅಕ್ಷರ ಜಾಥಾದ ಜತೆ ‘ಭಾರತ ಜ್ಞಾನ ವಿಜ್ಞಾನ ಸಮಿತಿ’ಯನ್ನೂ ಆರಂಭಿಸಿದೆವು. 

ಆ ವಯಸಿನಲ್ಲಿಯೂ ನೀನು ಸಂಘಟನಾ ಕುಶಲಿಯೂ ಮತ್ತು ವಿವೇಕಿಯೂ ಆಗಿದ್ದೆ. ನನಗಿನ್ನೂ ನೆನಪಿದೆ. ನೂರು ಜನ ಕಲಾವಿದರಿಗೆ ಬೀದಿ ನಾಟಕದ ರಂಗ ತರಬೇತಿ ನೀಡುತ್ತ ನೀಡುತ್ತಲೇ, ನಾನೂ ನೀನೂ ಒಂದು ತಂಡದೊಡನೆ ಹಳ್ಳಿ ಸುತ್ತುತಿದ್ದೆವು. ಸುಸ್ತಾಗಿ ಹೈರಾಣಾಗುತಿದ್ದೆ ನಾನು. ನೀನು ಜತೆಗಿದ್ದು ನನ್ನ ಸಲಹುತಿದ್ದೆ. ಒಂದೆಡೆ ದೇವಸ್ಥಾನದ ಆ ವಾರದಲ್ಲಿ ಅಕ್ಷರದ ಬೀದಿ ನಾಟಕ ಪ್ರದರ್ಶನಕ್ಕೆ ಸಮಯ ನಿಗಧಿಯಾಗಿತ್ತು. ದೇವಸ್ಥಾನದ ಯಾರೋ ಕೆಲವರು ಈಗ ನಾಟಕ ಬೇಡ ದೇವಸ್ಥಾನದ ಕಾರ್ಯಕ್ರಮವಿದೆ ಅಂದರು. 

ನಾನು ಸಿಟ್ಟಿನಿಂದ ತಂಡ ತಗೊಂಡು ಹೊರಟೇ ಬಿಟ್ಟಿದ್ದೆ. ನೀನು ಮೆತ್ತಗೆ ನನ್ನ ಕಿವಿಯಲ್ಲಿ, ‘ನಾವು ಬಂದಿರೋದು ಇಲ್ಲಿಯ ಜನರಿಗೆ ನಾಟಕ ತೋರಿಸಲು, ದೇವಸ್ಥಾನದವರ ಮಾತಿಗೆ ಸಿಟ್ಟು ಮಾಡಿಕೊಂಡು ಹೋದರೆ ಅನ್ಯಾಯ ಆಗೋದು ಜನರಿಗಲ್ವಾ’? ಅಂದೆ.  ನಾನು ಅಕ್ಷರಶಃ ʼಮುಚ್ಚಿಕೊಂಡುʼ ನಾಟಕ ಪ್ರಯೋಗ ಮಾಡಿದೆ. ನಿಜವಾಗಿಯೂ ಆ ರಾತ್ರಿ ನಮಗೆ ತುಂಬ ತಡವಾಗಿ ಹೊರಗೆಲ್ಲೂ ಊಟ ದೊರೆಯದೇ ಯಾವುದೋ ಶಾಲಾ ಜಗಲಿಯಲ್ಲಿ ಮಲಗಿದ್ದೆವು. ಹಸಿವೆಗೆಂದು ಆ ಶಾಲೆಯ ಆವರಣದ ಎಳೆನೀರನ್ನು ಕಿತ್ತು ಕುಡಿದಿದ್ದೆವು, ತುಂಬು ನೆಮ್ಮದಿಯಿಂದ.

ಉತ್ತರ ಕನ್ನಡದ ಸಾಹಿತ್ಯ, ಸಂಗೀತ, ರಂಗಭೂಮಿ, ಜಾನಪದ ಅಂತೆಲ್ಲ ನಾನು ಜಿಲ್ಲೆಯ ಒಳಗೇ ಅಲೆಯುತಿದ್ದರೆ ನೀನು ನಿಧಾನವಾಗಿ ನನ್ನ ಕೈಹಿಡಿದು ಜಿಲ್ಲೆಯನ್ನು ದಾಟಿಸುತ್ತಿದ್ದೆ. ಭಾರತ ಜ್ಞಾನ ವಿಜ್ಞಾನ ಸಮಿತಿಯನ್ನು ಉತ್ತರ ಕನ್ನಡ ಜಿಲ್ಲೆಗೆ ತಂದು ಅದರ ಕಾರ್ಯದರ್ಶಿಯನ್ನಾಗಿ ನನ್ನನ್ನು ನೇಮಿಸಿದೆ. ಯತಿರಾಜ್‌ ಅವರೊಡನೆ ಹಲವು ವರ್ಕ್‌ ಶಾಪ್‌ ಗಳಿಗೆ ನಾನು ಜಿಲ್ಲೆಯ ಹೊರ ಹೋಗುವಂತೆ ಮಾಡಿದೆ. ತಾಲೂಕು ತಾಲೂಕುಗಳಲ್ಲಿ ನೀನು ಸಂಘಟಿಸಿದ ಯುವ ಪಡೆಯ ಜತೆ ನಾನು ಜೀವನ, ಧರ್ಮ, ಬದುಕು ಅಂತೆಲ್ಲ ಸಂವಾದ ಗೋಷ್ಠಿ ನಡೆಸತೊಡಗಿದೆ. ನನ್ನ ಲೋಕ ಗ್ರಹಿಕೆಯ ಕ್ರಮ ಬದಲಾದದ್ದು ಅಲ್ಲಿಯೇ. ಸಮುದಾಯವನ್ನು ಉತ್ತರ ಕನ್ನಡ ಜಿಲ್ಲೆಗೆ ಪರಿಚಯಿಸಿದವನೂ ನೀನೇ.

ಭಟ್ಕಳ ಕೋಮು ಗಲಬೆಯಿಂದ ಹೊತ್ತುರಿದಾಗ ಜಿಲ್ಲೆಯ ಹಿರಿಯರ ಜತೆ ಸೇರಿ ಕಟ್ಟಿದ ʼಚಿಂತನʼ ಏನೆಲ್ಲ ಚಟುವಟಿಕೆಗಳಿಗೆ ಕಾರಣವಾಯ್ತು. ಚಿಂತನ ಸೆಮಿನಾರ್‌, ಚಿಂತನ ಪುಸ್ತಕ ಮಳಿಗೆ, ಚಿಂತನ ಕಿರು ಪುಸ್ತಕ ಪ್ರಕಾಶನ, ಹೀಗೆ ಒಂದೆರಡಲ್ಲ. ಆ ಸಮಯದಲ್ಲಿ ಕಿರಣಭಟ್‌ ಸಹ ಶಿರಸಿಗೆ ಬಂದು ರಂಗ ಚಟುವಟಿಕೆ ಆರಂಭಿಸಿದ್ದ, ಸಿ.ಆರ್.ಶಾನಭಾಗ್‌ ಪುಸ್ತಕ ಚಳುವಳಿ ನಡೆಸಿದ್ದರು. ಕರಾವಳಿಯಿಂದ ನಾವೆಲ್ಲ ಜತೆ ಸೇರಿದೆವು. ಶಿರಸಿಯನ್ನು ಕೇಂದ್ರವಾಗಿಸಿಕೊಂಡು ಹಲವು ಚಟುವಟಿಕೆಗಳು ಅವ್ಯಾಹತವಾಗಿ ನಡೆದವು.

ಹಾ! ನನಗಿನ್ನೂ ಸರಿಯಾಗಿ ನೆನಪಿದೆ. ಆರ್.ವಿ.ಭಂಡಾರಿ ಜತೆಯಲ್ಲಿರುವದರಿಂದ ಒಂದೇ ಮನೆಯ ಇಬ್ಬರ ಹೆಸರು ಎಲ್ಲೂ ವೇದಿಕೆಯ ಮೇಲೆ ಬರದಂತೆ ನೋಡಿಕೊಳ್ಳಲು ನೀನು ಸದಾ ನೇಪಥ್ಯದಲ್ಲೇ ಉಳಿದು ಕೆಲಸ ಮಾಡಿದೆ. ‘ನಿಮ್ಮ ಮಗನಾದದ್ದು ಅವನ ತಪ್ಪಾ?’ ಅಂತ ನಾನು ಅವರೊಡನೆ ಜಗಳಾಡಿದ್ದೆ. ಏನೂ ಪ್ರಯೋಜನವಾಗಲಿಲ್ಲ. ನಿಮ್ಮ ನಿಲುವು ಖಚಿತವಾಗಿತ್ತು. ಸಂಘಟನೆಯಲ್ಲಿರುವವರಿಗೆಲ್ಲ ಅತ್ಯುತ್ತಮ ಪಾಠವಾಗಿತ್ತದು.

ಶನಿವಾರ ಬಂತೆಂದರೆ ಹೊನ್ನಾವರದಿಂದ ನನ್ನನ್ನು ಎಳಕೊಂಡು ಶಿರಸಿಗೆ ಬರುತ್ತಿದ್ದ ನೀನು ಶಿರಸಿಯ ಬಸ್‌ ಸ್ಟ್ಯಾಂಡಿನಲ್ಲಿ ನನ್ನಿಂದ ಹಾಡು ಹೇಳಿಸಿ, ಭಾಷಣ ಮಾಡಿಸಿ ಕಿರುಪುಸ್ತಕಗಳನ್ನು ಮಾರುತ್ತಿದ್ದೆ. ಸಂವಹನದ ಹಲವು ಮಟ್ಟುಗಳನ್ನು ನಾನು ಕಲಿತಿದ್ದು ನಿನ್ನ ಈ ತರಬೇತಿಯಿಂದಲೇ.

ಕಿರಣ ಭಟ್‌ ಮತ್ತು ನನ್ನನ್ನು ಸೇರಿಸಿಕೊಂಡು ನೀನು ‘ಚಿಂತನ ರಂಗ ಅಧ್ಯಯನ ಕೇಂದ್ರ’ ಆರಂಭಿಸಿದ ಮೇಲೆ ನಮ್ಮ ಚಟುವಟಿಕೆಗಳಿಗೆ ಬೇರೆಯದೇ ಆದ ವಿಸ್ತಾರ ದೊರೆಯಿತು. ಇದು ತನಕ ಶಿರಸಿಯಲ್ಲಿ ಕೇಂದ್ರೀಕೃತವಾಗಿದ್ದ ಚಟುವಟಿಕೆಗಳು ಹೊನ್ನಾವರ, ಅಂಕೋಲಾ, ಕಾರವಾರಗಳಲ್ಲಿಯೂ ವಿಸ್ತರಿಸತೊಡಗಿತು. ವಿಜ್ಞಾನ ವರ್ಷಾಚರಣೆಗಾಗಿ ಜಿಲ್ಲಾ ಜಾಥಾ, ಪವಾಡ ರಹಸ್ಯ ಬಯಲು ಕಾರ್ಯಕ್ರಮಗಳು, ಸಾಹಿತ್ಯ ಸಮ್ಮೇಳನ ನೆವದಲ್ಲಿ ‘ಜೊಯ್ಡಾ ಜಾಥಾ’, ಅಸ್ಪೃಶ್ಯತಾ ನಿವಾರಣೆಗಾಗಿ ‘ಪ್ರೀತಿ ಪದಗಳ ಪಯಣ’, ‘ಪ್ರೀತಿ ಹಂಚೋಣ ಬನ್ನಿ’ ಜಾಥಾಗಳು, ಸಾಹಿತ್ಯ ಸಮ್ಮೇಳನದ ಅಂಗವಾಗಿ ಜೊಯ್ಡಾ ಜಾಥಾ, ಕರಾವಳಿ ಕಲಾ ಜಾಥಾ, ಜಲಸಾಕ್ಷರತಾ ಜಾಥಾ ಹೀಗೆ ಎಷ್ಟು ಜಾಥಾಗಳು! ರಂಗಭೂಮಿಯನ್ನು ಸಾಮಾಜಿಕ ಆಂದೋಲನವಾಗಿಸಲು, ಅದನ್ನು ಸ್ಥಾವರವಾಗಿಸದೇ ಜಂಗಮವಾಗಿಸಲು ನೀನು ಶ್ರಮಪಟ್ಟೆ.

ರೆಪರ್ಟರಿ ಆರಂಭವಾದಾಗ ನಮ್ಮ ನಾಟಕಗಳು ರಾಜ್ಯಾದ್ಯಂತ ತಿರುಗಾಟ ಮಾಡಬೇಕೆಂದು ಆಸೆಪಟ್ಟೆ. ಸರಿ ಸುಮಾರು ಹತ್ತಕ್ಕೂ ಹೆಚ್ಚು ನಾಟಕೋತ್ಸವಗಳನ್ನು ಸಂಘಟಿಸಿದೆ. ವಿಚಾರ ಸಂಕಿರಣಗಳನ್ನು ಆಯೋಜಿಸಿದೆ. ಹಂಪಿ ಯುನಿವರ್ಸಿಟಿಯಿಂದ ಥಿಯೇಟರ್‌ ಡಿಪ್ಲೊಮಾ ಕೋರ್ಸ್‌ ಶುರುವಾದಾಗ ನಮ್ಮ ಜಿಲ್ಲೆಯ ಕಲಾವಿದರಿಗೆ ಅದರಲ್ಲಿಯೂ ಚಿಂತನದಲ್ಲಿ ಅನೇಕ ವರ್ಷ ಕಲಾವಿದರಾಗಿ ದುಡಿದವರಿಗೆ ಕೋರ್ಸ್‌ ಸರ್ಟಿಫಿಕೇಟ್‌ ಸಿಗಲೆಂದು ಸಿದ್ದಾಪುರ ಕಾಲೇಜಿನಲ್ಲಿ ಮೂರು ವರ್ಷ ಸತತವಾಗಿ ಡ್ರಾಮಾ ಡಿಪ್ಲೊಮಾ ಕೋರ್ಸ್‌ ನಡೆಸಿದೆ.

‘ಮಹಿಳೆ ಮತ್ತು ಸಂಸ್ಕೃತಿ’ ಎಂಬ ವಿಷಯದಡಿ ಎಷ್ಟೆಲ್ಲ ಕಾರ್ಯಾಗಾರಗಳಾದವು. ಶಿರಸಿಯಲ್ಲಿ ನಿನ್ನ ನೇತೃತ್ವದಲ್ಲಿ ಸಂಘಟಿಸಲ್ಪಟ್ಟ ಉತ್ತರ ಕನ್ನಡ ಜಿಲ್ಲಾ ಮಹಿಳಾ ಗೋಷ್ಠಿಯಲ್ಲಿ ಜಿಲ್ಲೆಯ ಹೊರಗೆ ಕೆಲಸ ಮಾಡುತ್ತಿರುವ ಎಲ್ಲ ವಿಭಾಗದ ಹೆಣ್ಣು ಮಕ್ಕಳೂ ಸೇರಿ ಮುಂಜಾನೆಯಿಂದ ರಾತ್ರಿಯವರೆಗೆ ಮಾತನಾಡಿದ್ದು, ಅನೇಕರು ಹೇಳುವಂತೆ ತೌರುಮನೆಯ ಸಂಭ್ರಮವನ್ನು ಕಟ್ಟಿಕೊಟ್ಟಿತ್ತು. ನೀನಂತೂ ಅಮ್ಮನೇ, ಎಲ್ಲರಿಗೂ ಎಲ್ಲ ಬಗೆಯಲ್ಲೂ. ಮನೆಯಲ್ಲಿ ನಿನ್ನನ್ನ ಪ್ರೀತಿಯಿಂದ ʼಮರಿʼ ಎಂದು ಕರೆಯುತ್ತಾರೆ. ಆದರೆ ನಿಜವೆಂದರೆ ನೀನು ಎಲ್ಲರನ್ನೂ ನಿನ್ನ ಮರಿಗಳಂತೇ ಸಲಹಿದೆ. ಎಂತಹ ಕಟು ಸಂದರ್ಭದಲ್ಲಿಯೂ ತಾಯ್ತನವನ್ನು ಮರೆಯಲಾಗದ ಕಕ್ಕುಲಾತಿ ನಿನ್ನಲಿತ್ತು.

ಹಾ. ಸರಿಸುಮಾರು ಒಂದೇ ವೇಳೆಗೆ ನಾವಿಬ್ಬರೂ ಜಿಲ್ಲೆಯಿಂದ ಆಚೆ ನಮ್ಮ ಕೆಲಸಗಳನ್ನು ವಿಸ್ತರಿಸಿಕೊಂಡೆವು. ನಾನು ಉಳಿದೆಲ್ಲ ಚಟುವಟಿಕೆಗಳನ್ನೂ ಕಡಿಮೆ ಮಾಡುತ್ತ ರಂಗಭೂಮಿಗೇ ಆತು ಕೊಂಡೆ. ನೀನು ಎಲ್ಲ ಬಗೆಯ ಎಡ ಚಳುವಳಿಗಳನ್ನೂ ಮುನ್ನಡೆಸತೊಡಗಿದೆ.  ಯಮುನಾ ಜತೆಯಾದ ಮೇಲೆ ನಿನ್ನ ಕೆಲಸಗಳ ವಿಸ್ತಾರವೂ ಹೆಚ್ಚಾಯಿತು. ಆರ್.ವಿ.ಯವರ ಅಗಲುವಿಕೆ ‘ಸಹಯಾನ’ವನ್ನು ಸಂಘಟಿಸುವಂತೆ ಮಾಡಿತು. ಡಾ.ಎಂ.ಜಿ.ಹೆಗಡೆ, ವಿಷ್ಣು ನಾಯ್ಕರ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ರೂಪಿಸತೊಡಗಿದೆವು. ಹೊಸ ತಲೆಮಾರು ಎನ್ನುವ ಖಾಯಂ ಶೀರ್ಷಿಕೆಯಡಿ ಸಾಹಿತ್ಯ, ಜಾನಪದ, ಹೋರಾಟ, ಓದಿನ ಹಾದಿ, ಆತ್ಮಚರಿತ್ರೆಗಳು ಹೀಗೆ ಮುಂದುವರಿಯುತ್ತ ಅದು ಎಲ್ಲ ಏಸ್ಥೆಟಿಕ್ಸ್‌ಗಳನ್ನೂ ಒಳಗೊಂಡಂತೆ ಸಂಗೀತ, ಚಿತ್ರಕಲೆ, ಶಿಲ್ಪ ಹೀಗೆ ಮುಂದುವರಿಯಬೇಕೆಂದು ಆಶಿಸಿ ಮುನ್ನಡೆದೆವು.

ಚಂದದ ದಿನಗಳವು. ‘ಮನೆ’ ಯನ್ನು ‘ಮಹಾಮನೆ’ಯಾಗಿಸುವ ಕೆಲಸ ಭರದಿಂದ ಸಾಗಿತು. ಸಾಹಿತ್ಯೋತ್ಸವ, ಕಮ್ಮಟಗಳು, ಮಕ್ಕಳಿಗಾಗಿ ಶಿಬಿರಗಳು, ತಾಳ ಮದ್ದಲೆ, ಯಕ್ಷಗಾನ ಕೂಟಗಳು ಒಂದೇ ಎರಡೇ.  ಯಕ್ಷಗಾನ ಕಲಾವಿದರಾಗಿದ್ದ ನನ್ನ ತಂದೆಯ ಹೆಸರಿನಲ್ಲಿಯೂ ನೀನು ಪ್ರಶಸ್ತಿ ಪುರಸ್ಕಾರ ಶುರು ಮಾಡಿದೆ.

ಕಾವ್ಯರಂಗ ಮೊದಲ ಬಾರಿಗೆ ಅರಳಿದ್ದು ಸಹಯಾನದ ಅಂಗಳದಲ್ಲಿಯೆ. ಅದು ಮುಂದೆ ನಾಡಿನೆಲ್ಲಡೆ ಹಲವು ಸ್ವರೂಪದಿಂದ ಮುನ್ನಡೆಯಿತು. ಸಹಯಾನದ ಆವರಣದಲ್ಲಿ ಮನೆ ಮಾಡುವ, ಜೀವ ಮಾನದ ಕೊನೆಯ ಕ್ಷಣಗಳನ್ನು ಕಳೆಯುವ ಕನಸು ಕಂಡೆವು. ‘ಕೆಲವು ವರ್ಷದ ನಂತರ ಕೆಲಸಕ್ಕೆ ರಾಜಿನಾಮೆ ನೀಡಿ ಬಂದು ಬಿಡು, ಸಹಯಾನದಲ್ಲಿ ಏನೆಲ್ಲ ಮಾಡಲಿಕ್ಕಿದೆ’ ಎನ್ನುತ್ತಿದ್ದೆ ನೀನು.

ಒಂದಷ್ಟು ವರ್ಷ ವೈವಿಧ್ಯಪೂರ್ಣವಾಗಿ ನಡೆದ ಕಾರ್ಯಕ್ರಮಗಳು ಮುಂದೆ ತುಸು ಏಕತಾನತೆ ಪಡೆಯತೊಡಗಿತು. ಮತ್ತೆ ಮತ್ತೆ ಸಂಘಟನೆ, ಹೋರಾಟದ ವಿಷಯಗಳೇ ಪುನರುಕ್ತಿ ಆಗತೊಡಗಿದಾಗʼ ಮತ್ತೆ ಮತ್ತೆ ಅದೇ ಜನಗಳನ್ನು ಸೇರಿಸಿ ಅದೇ ವಿಷಯಗಳನ್ನು ಮಾತನಾಡುತ್ತೇವಲ್ಲವೇʼ ಎಂದು ನಾನು ಏರುದನಿಯಲ್ಲಿ ಜಗಳವಾಡಿದರೆ ನೀನು ತುಸು ಅಸಹಾಯಕತೆಯಲ್ಲಿ ‘ಮುಂದೆ ಸರಿ ಮಾಡೋಣ’ ಎನ್ನುತ್ತಿದ್ದೆ. ಯಾವ ಒತ್ತಡಗಳು ನಿನಗಿದ್ದವೋ ತಿಳಿಯದೇ ನಾನೂ ಮೌನವಾಗಿ ಸರಿಯುತ್ತಿದ್ದೆ.

ಸಮಾಜ ಸುಧಾರಣೆಗಾಗಿ ಹೋರಾಟ ಮತ್ತು ಚಳುವಳಿಗಳೆಂಬ ಖಡ್ಗವನ್ನು ನೀನು ಆಯ್ದುಕೊಂಡಿದ್ದೆ. ಅದರ ಜೀವದ್ರವ್ಯವಾಗಿ ಕಾವ್ಯವೂ ಬೇಕೆಂಬ ಅರಿವು ನಿನ್ನೊಳಗೆ ಇರಲಿಲ್ಲವೆಂದಲ್ಲ. ಅವೆರಡರ ನಡುವಿನ ಸಮಾಸಕ್ಕಾಗಿ ನೀನು ಚಡಪಡಿಸುತ್ತಿದ್ದೆ ಅನಿಸುತ್ತದೆ.  ಹಾಗಾಗುತ್ತಿಲ್ಲವೆಂಬುದು ನನ್ನ ದುಗುಡವೂ ಆಗಿತ್ತು. ಬಹುಶಃ ಈ ತಲ್ಲಣವೇ ನಮ್ಮಿಬ್ಬರಲ್ಲೂ ವಿಷಾದ ಹುಟ್ಟಿಸುತ್ತಿತ್ತು ಅನಿಸುತ್ತಿದೆ. ತುಸು ʼಅಂತರʼ ಕೂಡ ನಮ್ಮನ್ನು ಬಾಧಿಸುತ್ತಿತ್ತು. ಏಕೆಂದರೆ ಎಲ್ಲವನ್ನೂ ಚರ್ಚಿಸಿ, ಹಂಚಿಕೊಂಡೇ ಕೆಲಸ ಮಾಡುವ ನಮ್ಮ ಮಧ್ಯೆ ಯಾವ ಗೌಪ್ಯವೂ ಅದು ತನಕ ಉಳಿದಿರಲಿಲ್ಲ. ನೀನು ನೌಕರಿಗೆ ಹೋಗಬೇಕೋ ಬೇಡವೋ ಅನ್ನುವ ತೀರ್ಮಾನದಿಂದ ಹಿಡಿದು ಮನೆಯ ಕಾಯಿಲೆ ಕಸಾಲೆಯ ನಿರ್ವಹಣೆಯ ತನಕ ನಮ್ಮದು ಒಗ್ಗಟ್ಟಿನ ತೀರ್ಮಾನಗಳಾಗಿದ್ದವು. ಇಲ್ಲಿ ಎಲ್ಲೋ….

ರಾಜ್ಯ ಸಮುದಾಯ ಸಂಘಟನೆಗೆ ನೀನೇ ಒತ್ತಾಯದಿಂದ ಕರೆತಂದೆ. ಸಂಘಟನೆಯೂ ಹೊಸ ಉತ್ಸಾಹದಿಂದ ನನ್ನ ಬರಮಾಡಿಕೊಂಡಿತು. ಸಮುದಾಯದ ಕಾರ್ಯಕ್ರಮಗಳನ್ನು ದಶವಾರ್ಷಿಕ ಚಿಂತನೆ, ರೆಪರ್ಟರಿ ಮತ್ತು ರಂಗೋತ್ಸವ, ಬುಡಕಟ್ಟು ಮಹಾಕಾವ್ಯ ಮತ್ತು ಅಧ್ಯಯನ, ಸಂಗೀತ ಸ್ವರ ಸಾಮರಸ್ಯ, ಸಿನೆಮಾ ಅಧ್ಯಯನ ಎಂಬ ಐದು ಶೀರ್ಷಿಕೆಯಡಿ ನಡೆಸಲು ನಾನು ನೀಡಿದ ಸಲಹೆಯನ್ನು ಅತ್ಯುತ್ಸಾಹದಿಂದಲೇ ಸ್ವೀಕರಿಸಲಾಯ್ತು. ಒಂದು ವರ್ಷ ರೆಪರ್ಟರಿಯೂ ನಡೆಯಿತು. ನೀನು ವಹಿಸಿಕೊಂಡ ಬುಡಕಟ್ಟು ಪ್ರದರ್ಶನ ಮತ್ತು ಅಧ್ಯಯನವನ್ನು ಅಚ್ಚುಕಟ್ಟಾಗಿ ಸಂಘಟಿಸಿದೆ. ಆದರೆ ಎಲ್ಲ ಕೆಲಸಗಳೂ ಮುಂದುವರಿಯಲಿಲ್ಲ.

ಮೊದಲು ಆಕರ್ಷಕ ಎನಿಸಿದ ಈ ಬಗೆಯ ಕಾರ್ಯಕ್ರಮಗಳು ಮುಂದೆ ಸಂಘಟನೆಯ ಬೇರೆ ಹಿತಾಸಕ್ತಿಗಳಿಂದ ಅಮುಖ್ಯವಾಗತೊಡಗಿತು. ಪಕ್ಷ ಸಂಘಟನೆಗೂ ಸಮುದಾಯ ಸಂಘಟನೆಗೂ ಇರುವ ಸಂಬಂಧದ ಸ್ವರೂಪದ ಬಗ್ಗೆ ನಾನು ಪ್ರಶ್ನಿಸತೊಡಗಿದಂತೆ, ನಮ್ಮ ಚಿಂತನೆಗಳನ್ನು ಹೊಸದಾಗಿ ರೂಪಿಸಿಕೊಳ್ಳುವತ್ತ ಮುನ್ನಡೆಯಲು ನಾನು ಒತ್ತಾಯಿಸುತ್ತಿದ್ದಂತೆ ಕಾರ್ಯಕಾರಿಣಿ ತಂಡಕ್ಕೆ ನಾನು ಹೊರೆಯಾಗತೊಡಗಿದೆನೇನೋ ಎಂದು ನನಗೇ ಅನಿಸತೊಡಗಿತು. ಅನಿವಾರ್ಯವಾಗಿ ಸಂಘಟನಾ ಸ್ವರೂಪದ ತಾತ್ವಿಕ ಕಾರಣದ ದೆಸೆಯಿಂದ ನಾವಿಬ್ಬರೂ ಒಟ್ಟಿಗೇ ಸೇರಿ ಚರ್ಚಿಸುವ ಅವಕಾಶ ಮುಂದೂಡಲ್ಪಡುತ್ತಲೇ ಹೋಯಿತು.

ನಿನ್ನೊಡನೆ ನಿನ್ನ ಮೂಲಕ ಚರ್ಚಿಸಬೇಕಾದ ಹಲವು ಸಂಗತಿಗಳು ಹಾಗೆಯೇ ಉಳಿದು ಹೋದವು. ಕೆಲವನ್ನು ಟಿಪ್ಪಣಿ ಮಾಡಿಕೊಂಡಿದ್ದೆ. ಅದರಲ್ಲಿ ಇದೂ ಒಂದಿದೆ ನೋಡು, ಈಗ ನನ್ನೊಳಗಿನ ನಿನಗಾಗಿ ಮತ್ತೆ ಓದಿಕೊಳ್ಳುತ್ತಿದ್ದೇನೆ.

ಕಲಾವಿದರು ಮತ್ತು ರಾಜಕೀಯ ಪಕ್ಷಗಳ ಸಂಬಂಧದ ಕುರಿತು

ಸಾಹಿತ್ಯ, ರಂಗಭೂಮಿಯಂತಹ ಕಲೆಗಳು ಮಾನವ ಒಳಿತಿನ ಹಾದಿಗಳ ಹುಡುಕಾಟ ನಡೆಸುತ್ತಿರುತ್ತವೆ. ಕೆಲವು ಸಾಮಾಜಿಕ ಸಿದ್ಧಾಂತಗಳ ಶೋಧದ ಪಯಣವೂ ಅಲ್ಲಿರಬಹುದು. ವ್ಯಕ್ತಿ–ಸಮಾಜ, ವ್ಯಕ್ತಿ–ಉತ್ಪಾದನಾ ಸಂಬಂಧಗಳು, ವ್ಯಕ್ತಿ–ಪರಿಸರ, ವ್ಯಕ್ತಿ–ಧರ್ಮ ಹೀಗೆ…ಹುಡುಕಾಟಕ್ಕೆ ಹಲವು ರೂಹುಗಳು. ಅದೊಂದು ಸೃಜನಶೀಲ ಹುಡುಕಾಟ.

ಹಲವು ಸಾರಿ ಕಲೆಯು ಈ ಸೈದ್ಧಾಂತಿಕ ಹುಡುಕಾಟದಲ್ಲಿ ಕಂಡುಕೊಂಡ ಅನುಭವಗಳನ್ನು ವೈಜ್ಞಾನಿಕ ಸಂಗತಿಗಳ ಆಧಾರದಲ್ಲಿ ವಿಮರ್ಶಿಸಿ ಫಲಗಳನ್ನಾಗಿ ರೂಪಿಸಿ ಅವುಗಳನ್ನು ಜಾರಿಗೆ ತರಲು, ವಾಸ್ತವದಲ್ಲಿ ಪ್ರಯೋಗಿಸಲು ರಾಜಕೀಯ ಪಕ್ಷಗಳು ಪ್ರಯತ್ನಿಸುತ್ತವೆ.  ಆದರೆ ಪಕ್ಷಗಳು ತನ್ನ ಕೆಲಸದಲ್ಲಿ ಒಂದು ಸಾಧನವನ್ನಾಗಿ ಕಲೆಗಳನ್ನು ಬಳಸಿಕೊಳ್ಳ ಹೊರಡುತ್ತೇನೆ ಎಂದಾಗ ಇಬ್ಬರ ಸಂಬಂಧಗಳಲ್ಲಿಯೂ ಬಿರುಕು ಮೂಡಲು ಆರಂಭವಾಗುತ್ತವೆ. 

ಈ ಬಗೆಯ ದೂರಾಲೋಚನೆಯಿಲ್ಲದ ನಡೆ, ಕಲೆಗಿರುವ ಸೃಜನಶೀಲ ಅನ್ವೇಷಣೆಯ ಸಾಧ್ಯತೆಯನ್ನೇ ಮುರುಟಿಸಿ ಬಿಡುತ್ತದೆ. ಕಲಾವಿದರಿಗೂ ರಾಜಕೀಯ ಪಕ್ಷಗಳಿಗೂ ಬಹು ಹಿಂದಿನಿಂದಲೂ ಇರುವ ಜಗಳಗಳ ಹಿನ್ನೆಲೆ ಇದು. ಹೊರತಾಗಿ ಹಲವಾರು ಜನರು ಪಕ್ಷಗಳ ವಕ್ತಾರರು ಭಾವಿಸಿದಂತೆ ಕಲಾವಿದರ ವೈಯಕ್ತಿಕ ಶ್ರೇಷ್ಠತೆಯ ವ್ಯಸನ ಮತ್ತು ಸಮೂಹ ಚಿಂತನೆಯ ನಡುವಿನ ಜಗಳವಿದಲ್ಲ. ʼಕಲೆಯನ್ನು ಬಳಸಿಕೊಳ್ಳುವದುʼ ಎಂಬ ಭಾಷೆ ಮೂಲತಃ ಮಾರುಕಟ್ಟೆಯದು; ಅದನ್ನು ಪ್ರಗತಿಪರ ಪಕ್ಷಗಳು ಬಳಸಿದರೂ ಅದೇ ಅರ್ಥ ಹೊರಡುವದು. … ಇಂತಹ ಕೆಲವು ಟಿಪ್ಪಣಿಗಳಿದ್ದವು ನನ್ನಲ್ಲಿ.

ಈ ಚರ್ಚೆ ಹಳೆಯದೇ ನನಗೆ ತಿಳಿದಿದೆ. ಆದರೆ ಬಗೆಹರಿದಿಲ್ಲ. ಸಾಂಸ್ಕೃತಿಕ ನೀತಿ ಮಾರ್ಗದರ್ಶನಕ್ಕಾಗಿ ಪಕ್ಷಗಳು ಬಳಸುವ ಹಳೆಯ ಕೈಪಿಡಿಯ ಉತ್ತರಗಳು ಈಗ ಸಾಕಾಗುವದಿಲ್ಲ. ನೀನಾದರೆ ಸಾವಧಾನದಿಂದ ಇದನ್ನು ಕೇಳಿಸಿಕೊಳ್ಳುತ್ತಿದ್ದೆ ಅನ್ನುವದರಲ್ಲಿ ಯಾವ ಅನುಮಾನವೂ ಇರಲಿಲ್ಲವಾದರೂ .. ಅದು ಸಾಧ್ಯವಾಗಲಿಲ್ಲ.. ಕಾರಣ? ಗೊತ್ತಿಲ್ಲ? ತಡವಾಗಿ ಹೋಯಿತು. ನಿನ್ನನ್ನು ದೂಷಿಸಲಾರೆ.

ನಿನ್ನನ್ನು, ನಿನ್ನ ಬದ್ಧತೆಯನ್ನು ಯಾರೂ ಪ್ರಶ್ನಿಸುವ ಹಾಗಿರಲಿಲ್ಲ. ಅವಿರತವಾಗಿ ಎಡಚಿಂತನೆಯ ಸಾಕಾರಕ್ಕಾಗಿ ನಿನ್ನನ್ನು ಅರ್ಪಿಸಿಕೊಂಡು ಬಿಟ್ಟಿದ್ದೆ.  ನನ್ನ ಮಗಳು ಒಂದೆಡೆ ಬರೆದಿದ್ದಾಳೆ. ಅವಳು ಹೈಸ್ಕೂಲು ಓದುವಾಗಲೇ ನೀನೊಮ್ಮೆ ಅವಳನ್ನು ಕುಳ್ಳಿರಿಸಿಕೊಂಡು ಅಖಂಡ ಮೂರು ತಾಸು ಮಾರ್ಕ್ಸ್‌ ಸಿದ್ದಾಂತ ಎಂದರೇನು ಎಂದು ಪಾಠ ಮಾಡಿದ್ದಿಯಂತೆ.! ಯಾವುದೇ ಚಟುವಟಿಕೆಯುಳ್ಳ ಜೀವ ಕಂಡರೂ ಸಾಕು. ಅವರನ್ನು ಸಂಘಟನೆಗೆ ಕರೆತರುವದು ಹೇಗೆ ಅಂತಲೇ ಚಿಂತಿಸುತ್ತಿದ್ದೆ ನೀನು. ನಾನು ತಮಾಶೆ ಮಾಡ್ತಿದ್ದೆ ‘ಉಪ್ಪಿನಕಾಯಿ ಹಾಕೋಕೆ ಅಪ್ಪೆ ಮಿಡಿ ಹುಡುಕ್ತಿರ್ತಾನೆ ವಿಠ್ಠಲ’ ಅಂತ.

ಆ ದಿನ ನಿನಗೆ ನೆನಪಿರಬಹುದು. ಬಿ.ಎ.ಮೊದಲ ವರ್ಷ, ‘ಮಿಡ್‌ ಸಮ್ಮರ್‌ ನೈಟ್‌ ಡ್ರೀಮ್ಸ್‌ ‘ ನಾಟಕ ಆಡುತ್ತಿದ್ದ ದಿನಗಳಲ್ಲಿಯ ಒಂದು ದಿನ. ನಿನ್ನದೊಂದು ಲವರ್‌ ಪಾತ್ರ. ಚಂದದ ಹುಡುಗಿಯೊಬ್ಬಳು ನಿನ್ನ ಸಹ ನಟಿ. ಹೆಸರು ಮರೆತಿರುವೆ. ಆ ಒಂದು ದಿನ ರಾತ್ರಿ ನಿಮ್ಮ ಮನೆಯಲ್ಲಿ ನಾನೂ ಉಳಿದಿದ್ದೆ. ನಾವಿಬ್ಬರೂ ಹುಡುಗಿಯರ ಸುದ್ದಿ ಹೇಳ್ತಾ ನಗುತ್ತಿದ್ದೆವು. ಆರ್.ವಿ.ನಮ್ಮ ಬಳಿ ಬಂದು ಕೀಟಲೆಯ ದನಿಯಲ್ಲಿ ‘ನಿಮ್ಮ ವಯಸ್ಸಿನಲ್ಲಿ ಲೆನಿನ್‌ ದೇಶ ಕಟ್ಟುವ ಮಾತಾಡ್ತಿದ್ದ ಗೊತ್ತಾ?’ ಎಂದು ಹೇಳಿ ಒಳ ನಡೆದರು. ಕ್ಷಣದಲ್ಲಿಯೇ ಆ ಮಾತನ್ನು ಮರೆತ ನಾವು ಮತ್ತೇನೋ ಮಾತನಾಡುತ್ತ ಮಲಗಿದೆವು.

ಮುಂಜಾನೆ ನಾವು ಏಳುವದನ್ನೇ ಕಾಯುತ್ತ ಕುಳಿತಿದ್ದರು ಆರ್.ವಿ.ಯವರು ಬಾಗಿ ನಮ್ಮ ಬಳಿ ಬಂದು ‘ನಾನು ನಿನ್ನೆ ರಾತ್ರಿ ಲೆನಿನ್‌ ವಿಷಯ ಹೇಳಿದ್ದು ತಮಾಶೆಗೆ ಆಯ್ತಾ. ನೀವದನ್ನು ಗಂಭೀರವಾಗಿ ತಗೋಬೇಡಿ. ಈ ವಯಸ್ಸಿನಲ್ಲಿ ಹುಡುಗರು ಹುಡುಗಿಯರ ವಿಷಯವನ್ನೇ ಮಾತಾಡ್ಬೇಕು’ ಎಂದರು. ಅವರ ಕಾಳಜಿಗೆ ಪ್ರೀತಿಗೆ ನಾನು ಕರಗಿ ಹೋಗಿದ್ದೆ. ಈಗ ಅದನ್ನು ನೆನಪಿಸಿಕೊಂಡರೆ ನನಗನಿಸುತ್ತದೆ, ನೀನು ಅವರ ಮಾತನ್ನು ತುಂಬ ಗಂಭೀರವಾಗಿ ಸ್ವೀಕರಿಸಿದೆ ಮತ್ತು ಸದಾ ಕಾಲ ದೇಶದ ಕುರಿತು, ಸಂಘಟನೆಯ ಕುರಿತು ಮಾತನಾಡತೊಡಗಿದೆ. ಸಂಘಟನೆಯನ್ನು ಸ್ಥಾಯೀಭಾವವನ್ನಾಗಿ ಸ್ವೀಕರಿಸಿದೆ.

ನನಗೆ ಗೊತ್ತು. ನೀನು ಬರೆಯಬಲ್ಲವನಾಗಿದ್ದರೂ ಉಳಿದವರ ಬರವಣಿಗೆಯ ಪ್ರಕಟಣೆಗಾಗಿ ಪ್ರಕಾಶನದ ಜವಾಬ್ದಾರಿ ಕೈಗೊಂಡೆ, ನಟಿಸಬಲ್ಲ ಸಾಮರ್ಥ್ಯವಿದ್ದರೂ ನಟರಿಗೆ ನೆರವಾಗಲೆಂದು ನೇಪಥ್ಯದಲ್ಲಿ ಕೆಲಸ ಮಾಡಿದೆ, ಮಾತನಾಡಬಲ್ಲವನಾದರೂ ಬಹುಮುಖ್ಯ ಸೆಮಿನಾರ್‌ ಗಳಲ್ಲಿ ಪ್ರಬಂಧ ಓದುವದಕ್ಕಿಂತ ಹೆಚ್ಚಾಗಿ ವೇದಿಕೆ ನಿರ್ಮಿಸಿ ಕೊಡುವದರಲ್ಲಿ ಆಸಕ್ತಿ ವಹಿಸಿದೆ. ಮಾತನ್ನು ಕ್ರಿಯೆಯಾಗಿಸುವದರತ್ತ ನಡೆದೆ. ಆರ್.ವಿ.ಭಂಡಾರಿಯವರು ನಮ್ಮ ಜಿಲ್ಲೆಯ ಸಾಂಸ್ಕೃತಿಕ ಜಗದ ನೈತಿಕ ಶಕ್ತಿಯಾಗಿದ್ದರೆ, ನೀನು ಸಾಂಘಿಕ ಶಕ್ತಿಯಾಗಿ ಮುನ್ನಡೆದೆ.  ಜತೆಗಿರುತ್ತ, ಜತೆ ಸೇರುತ್ತ ಹಿರಿದಾಗಿ ಬದುಕಿದೆ. ಒಳಹೊರಗೆ ಅಪಾರ ನೋವಿಟ್ಟುಕೊಂಡೂ ಕರುಣೆಯಿಂದ ಜಗವ ನೋಡಿದೆ.

ನಿನ್ನೊಡನೆ ಬಹಳ ಹೇಳಿಕೊಳ್ಳುವುದಿತ್ತು. ಸಾಗರದಿಂದ ಶಿರಸಿಗೆ ಬರುವಾಗಲೆಲ್ಲ ಸಿದ್ದಾಪುರದಲೊಮ್ಮೆ ನನ್ನ ಕಾರು ಸ್ವಲ್ಪ ಹೊತ್ತು ಸುಮ್ಮನೆ ನಿಂತು ಬರುತ್ತಿತ್ತು. ಸುಮ್ಮನೆ ನಾಲ್ಕಾರು ದಿನ ನಾವು ಒಟ್ಟಿಗೇ ಕುಳಿತಿದ್ದರೂ ಸಾಕಿತ್ತು. ಆಗಲಿಲ್ಲ. ತಡವಾಯಿತು. ಎಷ್ಟು ಅನಿರೀಕ್ಷಿತವಾಗಿ ಮುನ್ನಡೆದೆ; ನನ್ನ ಹೆಸರಿನ ನಾಟಕೋತ್ಸವವನ್ನೂ ಯೋಜಿಸದೇ. ನೀನು ಆಸ್ಪತ್ರೆಗೆ ಸೇರಿದ ನಾಲ್ಕು ದಿನದ ನಂತರʼ ನಾನು ಕೋವಿಡ್‌ ಬೆಡ್‌ ನಲ್ಲಿದ್ದೇನೆʼ ಎಂಬ ನಿನ್ನ ಮೆಸೆಜ್‌ ಒಂದೇ ನನಗೆ ತಲುಪಿದ್ದು. ನಂತರವೆಲ್ಲ ನಾನು ಅನ್ಯನಾಗುತ್ತ ಹೋದೆ; ನಿನ್ನ ಅಂತಿಮ ದಿನದವರೆಗೂ ಇಂಚು ಇಂಚಾಗಿ ನವೆಯುತ್ತ.

ಆರ್.ವಿ.ಯವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಿದ ಆ ದಿನಗಳು. ಅವರಿಗೆ ಅರಿವು ಮರೆಯಾಗುತ್ತಿದ್ದ ಕಾಲವದು. ತಾಳ ಮದ್ದಲೆಯಲ್ಲಿ ಅವರು ಕರ್ಣನ ಪಾತ್ರವನ್ನು ತುಂಬ ಇಷ್ಟ ಪಟ್ಟು ಮಾಡುತ್ತಿದ್ದರಾದ್ದರಿಂದ ಆ ಪ್ರಸಂಗದ ಪದ್ಯಗಳು ಅವರಿಗೆ ನೆನಪಾಗುತಿದ್ದವು. ನಾನೂ ಅವರೊಡನೆ ತಾಳಮದ್ದಲೆಯಲ್ಲಿ ಭಾಗವಹಿಸುತ್ತಿದ್ದ, ಕಾರಣ ನನ್ನನ್ನು ಆಸ್ಪತ್ರೆಯಲ್ಲಿ ಕಂಡಾಗೊಮ್ಮೆʼ ಹರಹರಾ ಸಮರದಲಿ ಕೈಸೋತೆನಲ್ಲಾʼ ಎಂಬ ಕರ್ಣನ ಪದವನ್ನು ನೆನೆಸಿಕೊಳ್ಳುತ್ತಿದ್ದರು. ನೀನು ಆಸ್ಪತ್ರೆ ಸೇರಿದಾಗಿನಿಂದ ಮತ್ತೆ ಮತ್ತೆ ಈ ಪದ ನೆನಪಿಗೆ ಬರುತ್ತಿತ್ತು ಕಣೋ. ಕೊನೆಗೂ ನಾ ಕೈ ಸೋತೆ.

ಇರಲಿ ಬಿಡು. ಮಹಾ ಮನೆಯಲ್ಲಿ ಕೆಲಸವಿದೆ. ಸಮುದಾಯಕ್ಕೆ ಹಲವು ನೆನಪುಗಳಿರಬಹುದು. ನೀನು ಉಪ್ಪಿನಕಾಯಿ ಜರಡಿಗೆ ಹಾಕಿದ ಮಿಡಿಗಳು ಮತ್ತೀಗ ನೆರವಿಗೆ ಬಂದಾವು. ಹಾ! ನಿನಗೊಂದು ವಿಶೇಷ ಹೇಳ್ಬೇಕು ನಾನು. ಮಗಳು ಶೀತಲಾ ಅನಿವಾರ್ಯವಾಗಿ ಈಗ ಅಮೇರಿಕಾದಲ್ಲಿ ಸಿಲುಕಿಕೊಂಡಿದಾಳೆ. ಮೊನ್ನೆ ನಿನ್ನ ಅಗಲಿಕೆಯಿಂದ ಅಳುತ್ತಿದ್ದ ಅವಳನ್ನು ಈಗ ಅವಳಿರುವ ಮನೆಯ ೮೫ ವರ್ಷದ ಅಜ್ಜಿ ಬಾರ್ಬರಾʼಏನಾಯ್ತು?ʼ ಎಂದು ಕೇಳಿದಳಂತೆ. ಶೀತಲಾ ನಿನ್ನಕುರಿತು, ನಿನ್ನ ಸಾಮಾಜಿಕ ಕಳಕಳಿಯ ಕುರಿತು ವಿವರಿಸಿದಾಳೆ. ಆ ಅಜ್ಜಿ ತಕ್ಷಣ ಅಂಗಡಿಯಿಂದ ಗುಲಾಬಿ ಗಿಡವೊಂದನ್ನು ತಂದು ಶೀತಲಳಿಗೆ ನೀಡಿ, ಅವರ ಮನೆಯಲ್ಲಿ ನಿನ್ನ ಹೆಸರಿನಿಂದ ಈ ಗಿಡವನ್ನು ನೆಡು ಎಂದರಂತೆ. ಇದೀಗ ಅಮೇರಿಕೆಯ ತೋಟವೊಂದರಲ್ಲೂ ನಿನ್ನ ಕೆಂಪು ಅರಳುತ್ತಿದೆ.

ನಿಜ ಹೇಳಲಾ, ನಾವು ಆಡಿಯೂ ಉಳಿದ ಮಾತುಗಳಿವೆಯಲ್ಲ, ಅದು ಸತ್ಯವಾಗಿಯೂ ನಾವು ಆಡಬೇಕಾದ ಮಾತುಗಳಾಗಿರುತ್ತವೆ. ಆಡದೆಯೇ ಉಳಿದ, ಆಡಲಾಗದ ಮಾತುಗಳು ಅವು. ನಮ್ಮ ನಡುವಿನ ‘ನಿಜ’ ಅಲ್ಲಿರುತ್ತದೆ. ಕಣ್ಣೀರಿನಿಂದ ಒರೆಸಿ ಮುಗಿಸಬಾರದ, ಬರೆದು ಮರೆಸಬಾರದ, ಹಾಡಿ ನಿಲ್ಲಿಸಬಾರದ ಕ್ಷಣಗಳವು. ನಿನ್ನ ನೆನಪು ಎಂದರದು ಒಳಗೇ ಮುರಿದು ಹೋದ ಮುಳ್ಳಿನಂತೆಯೇ ಹಿತವಾದುದು. ಅಲ್ಲಾಡಿದಾಗ, ಬದುಕಿನಲ್ಲಿ ತುಸು ಪೊಳ್ಳಾಗಿ ಅತ್ತಲಿತ್ತಲಾದಾಗಲೆಲ್ಲ ತುಸು ಹೆಚ್ಚಿಗೆ ಒತ್ತಿ ನೋವು ನೀಡಿ ಎಚ್ಚರಿಸುವಂತದು. ಅರ್ಧ ಮುರಿದ ಮುಳ್ಳಿನಲ್ಲಿ ಆಡದುಳಿದ ಮಾತುಗಳ ಪೋಣಿಸಿ ಇಟ್ಟುಕೊಂಡಿರುವೆ, ಅದು ಆಗಾಗ ಚುಚ್ಚುತ್ತಲೇ ಎಚ್ಚರದಲ್ಲಿಡಲಿ..

‍ಲೇಖಕರು Avadhi

May 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

7 ಪ್ರತಿಕ್ರಿಯೆಗಳು

    • Sudha ChidanandaGowda

      ಕಣ್ಣಲ್ಲಿ ನೀರು ಬರಿಸುವಂಥಾ ಲೇಖನ. ಸಮುದಾಯ, ವೈಯಕ್ತಿಕ ಎರಡೂ ಒಂದೇ ಆದಂಥ ಅಪರೂಪದ ಗೆಳೆತನ. ಕೊನೆಯ ಪ್ಯಾರಾಗ್ರಾಫ್ ಅತ್ಯುತ್ತಮವಾಗಿದೆ.

      ಪ್ರತಿಕ್ರಿಯೆ
    • ಕೀರ್ತಿ ಎಸ್.

      ಕಣ್ಣು ತೇವವಾಗಿಸಿದ ಪತ್ರ. ಹೇಳದುಳಿದ ಮಾತುಗಳಿಗೆ ಕಿವಿಗೊಡುತ್ತಲೇ ದಿವ್ಯ ಮೌನ ತಬ್ಬಿತು. ಸರಿದ ನೆನಪುಗಳನ್ನ ಮತ್ತೆ ನೆನಪಿಸುತ್ತಲೆ, ಬಹಳ ಪ್ರೀತಿಯಿಂದ ಪೋಣಿಸಿ ಸ್ನೇಹಿತನಿಗೆ ಅರ್ಪಿಸಿದ ಹಾಗೆ. ಜಗಕಂಟಿದ ದುಃಖವಳಿಯಲಿ ಎಂಬುದು ಪ್ರಾರ್ಥನೆಯಾಗಲಿ.

      ಪ್ರತಿಕ್ರಿಯೆ
  1. ನೂತನ ದೋಶೆಟ್ಟಿ

    ಇಂಥ ಸ್ನೇಹ, ಅನುಭವ ಅನುಬಂಧಗಳಂತೆ . ಈ ನೆನಪು ಮೆರವಣಿಗೆಯೂ ಬಹಳ ಅಪರೂಪದಲ್ಲಿ ಅಪರೂಪ.

    ಪ್ರತಿಕ್ರಿಯೆ
  2. Shreedevi Keremane

    ಆತ್ಮೀಯ ಬರೆಹ. ತಾಯಿಯ ಪ್ರೀತಿ ಎಂಬ ಮಾತು ಕಲಕಿತು. ಯಾಕೆಂತರೆ ಆ ತಾಯಿಪ್ರೀತಿಯನ್ನು ನಾನೂ ಪಡೆದಿರುವೆ. ನನ್ನ ಹೈಸ್ಕೂಲು ದಿನಗಳಿಂದಲೂ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: