’ವಿಜಯಾದಬ್ಬೆ, ಅವಳು ಮತ್ತು ನಾನು’ – ಸ್ವರ್ಣ

Swarna-20150627_002735-150x15011

ಸ್ವರ್ಣ ಎನ್ ಪಿ

ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರಾದ ವಿಜಯ ದಬ್ಬೆಯವರ ಕವನ ಸಂಕಲನವನ್ನು ಪಠ್ಯದ ಭಾಗವಾಗಿ ಓದಿದಾಗಿನಿಂದ ಅವರ ಬಗ್ಗೆ ತೀರದ ಕುತೂಹಲವಿದೆ. ದಾರುಣ ಅಪಘಾತದಿಂದ ಚೇತರಿಸಿಕೊಂಡು, ಬದುಕಿನತ್ತ ಮುಖ ಮಾಡಿ  ಮತ್ತೆ ಲೇಖನಿ ಹಿಡಿದಿರುವ ಅದಮ್ಯ ಜೀವನೋತ್ಸಾಹದ ಮಹಿಳೆಯಾಗಿ ವಿಜಯ ದಬ್ಬೆಯವರು ಇಷ್ಟವಾಗುತ್ತಾರೆ. ಹೆಸರಿನೊಂದಿಗೆ ಗೂಗಲಿಸಿದರೆ  ಅವರ ಬಗ್ಗೆ ಹತ್ತು ಹಲವು ಬರಹಗಳು ಮತ್ತು ಅವರ ಸಂದರ್ಶನಗಳು ತೆರೆದುಕೊಳ್ಳುತ್ತವೆ. ವರ್ತಮಾನ ಪತ್ರಿಕೆಯಲ್ಲಿನ ರೂಪ ಹಾಸನ ಅವರ ಬರಹ ದಬ್ಬೆಯವರ ಬಗ್ಗೆ ಕೆಲ ಮುಖ್ಯ ಮಾಹಿತಿಗಳನ್ನು ಒದಗಿಸುವುದರ ಜೊತೆಗೆ ಅವರ ವ್ಯಕ್ತಿತ್ವದ ಪರಿಚಯವನ್ನೂ ಮಾಡಿಸುತ್ತದೆ. ಸ್ತ್ರೀವಾದ , ಮಹಿಳಾಪರ ಹೋರಾಟಗಳು ಹುಟ್ಟಿ,  ಬೆಳೆದ  ನಂತರದಲ್ಲಿ ಹುಟ್ಟಿದ ಪೀಳಿಗೆ ನಮ್ಮದು. ಆದರೂ ದಬ್ಬೆಯವರನ್ನು ಓದಿದಾಗ ಕೆಲವು ಚಿಂತನೆಗಳು , ಕೆಲವು ಸಾಲುಗಳು ಸೆಳೆದವು. ಆ ಸಾಲುಗಳಲ್ಲಿನ ಪ್ರಾಮಾಣಿಕ ಕಾಳಜಿ, ಅಬ್ಬರವಿಲ್ಲದ ಆದರೆ ದೃಢವಾದ ದನಿ ಇಷ್ಟವಾಯಿತು.  ಅವರ  ‘ನೀರು ಲೋಹದ ಚಿಂತೆ’ ಕವನ ಸಂಕಲನ  ಬಿಡುಗಡೆಯಾಗಿದ್ದು ೧೯೮೫ರಲ್ಲಿ, ಅಲ್ಲಿನ ಕೆಲವು ಸ್ತ್ರೀ ಪರ ಕಾಳಜಿಯುಳ್ಳ ಕವಿತೆಗಳ ಬಗೆಗಿನ ನನ್ನ ಗ್ರಹಿಕೆ ಇಲ್ಲಿದೆ.
vijaya-dabbe
೮೦ರ ದಶಕದ ದಾಂಪತ್ಯದಲ್ಲಿ ಎಲ್ಲವೂ ಗಂಡಸಿನ ಮರ್ಜಿಯ ಮೇಲೆ ನಡೆಯುತ್ತಿರಲಿಲ್ಲ ಆದರೆ ಹೆಣ್ಣಿಗೆ ಇನ್ನೇನೋ ಬೇಕಿತ್ತು . ಅದೇನು ? ಎಂಬ ಪ್ರಶ್ನೆಗೆ  ಉತ್ತರ  ‘ಪತಿದೇವರಿಗೊಂದು ಬಹಿರಂಗ ಪತ್ರ’ ಕವಿತೆಯಲ್ಲಿದೆ. ಕವಿತೆಗೆ ದನಿಯಾದವಳು ಗಂಡನಿಗೆ ಹೇಳುತ್ತಾಳೆ : ‘ಹಿಂದಿನವರಂತೆ ,  ಪ್ರತೀ ಮುಂಜಾನೆಯೂ ಹೆಂಡತಿ ಪಾದಕ್ಕೆ ಹಣೆ ಹಚ್ಚಬೇಕೆಂಬ ನೀರೀಕ್ಷೆ ನಿನಗಿಲ್ಲ. ಆದರೆ ನೀನು ಕ್ರಾಪು ತಿದ್ದುವ ವೇಳೆ  ಕಾಫಿ  ಲೋಟದೊಂದಿಗೆ ಪರದೆಯ ಹಿಂದೆ ಕಾಯುವ ಪುಣ್ಯ ನನ್ನದು.’  ಮೂರ್ನಾಲ್ಕು ದಶಕಗಳ ಹಿಂದೆ ಮಹಿಳೆ ಹೊರ ಹೋಗಿ ದುಡಿಯಲು ಆರಂಭಿಸಿದ್ದರೂ ಮನೆಯಲ್ಲಿರುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಗಂಡ ಸ್ಕೂಟರ್ ಸ್ಟಾರ್ಟ್ ಮಾಡುವ ವೇಳೆ ಬಾಗಿಲಲ್ಲಿ ನಿಂತು ಕೈ ಬೀಸಿ ಸಂಜೆ ಅವನು ಬರುವ ಹೊತ್ತಿಗೆ ಅಲಂಕರಿಸಿಕೊಂಡು ಬಾಗಿಲಲ್ಲಿ ಕಾಯುತ್ತಿದ್ದವಳ ಚಿತ್ರಣ ಹಲವು ಕಡೆ ಬಂದು ಹೋಗಿದೆ . ದಬ್ಬೆಯವರು ಅವಳಿಗೆ ದನಿಯಾಗಿದ್ದಾರೆ. ಅವನ ಬೇಕು ಬೇಡಗಳ ಸುತ್ತ ಗಿರಕಿಹೊಡೆವ ಬದುಕು ಅವಳಿಗೆ ಬೇಡವಾಗಿದೆ. ಸೋಕದಂತೆ ಕಡಲ ದಂಡೆಯಲ್ಲಿ ಕುಳಿತು ಮಾತನಾಡುವ ಆಸೆ ಅವಳದ್ದು. ಬದುಕಿನ ಕಡಲ ದಂಡೆಯಲ್ಲಿ ಕ್ರಾಂತಿಯ ಬಾವುಟ ಹುಗಿದು ಸದಾ ಹಸಿರಿನ ಕನಸು ಕಾಣುವ ಅವಳನ್ನು ಜನ ಸುಲಭವಾಗಿ ಒಪ್ಪಲಾರರೆಂಬ ಸತ್ಯದ ಅರಿವಿರುವ ಹೆಣ್ಣು ಅವಳು. ಈ ಕ್ರಾಂತಿಯ ಫಲವನ್ನು ಉಂಡ ನನ್ನ ಪೀಳಿಗೆಗೆ ಈ ಕವಿತೆ ಎಲ್ಲಿಂದಲೋ ತೇಲಿ ಬರುವ  ಅಮ್ಮನ ಗುನುಗಿನಂತೆ ಕೇಳಬಹುದು. ಈ ಕಾರಣಕ್ಕಾಗಿಯೇ ನನಗೀ ಕವಿತೆ ಇಷ್ಟವಾಗಿದ್ದು.
ಸೀತೆ , ಅಹಲ್ಯೆ ದ್ರೌಪದಿಯರ ನೋವನ್ನು ಸಾಮಾನ್ಯವಾಗಿ ಎಲ್ಲ ಕವಯಿತ್ರಿಯರೂ ಒಂದಿಲ್ಲೊಂದು ರೀತಿಯಲ್ಲಿ ಹಾಡಾಗಿಸಿದ್ದಾರೆ. ಅವುಗಳನ್ನು ಓದುವಾಗಲೆಲ್ಲಾ ಇತ್ತೀಚಿಗೆ ನನಗೊಂದು ಪ್ರಶ್ನೆ ಬಿಟ್ಟೂ ಬಿಡದೇ ಕಾಡಿದೆ. ಕವಿತೆಯಲ್ಲಿ ವ್ಯಕ್ತವಾದ ನೋವು ಸೀತೆಯದ್ದೋ ? ಕವಯಿತ್ರಿಯದ್ದೋ ? ನೋವು ಸೀತೆಯದ್ದೇ ಆದರೆ ಅಲ್ಲಿ ರಾಮನ ನೋವೂ ಕಾಣ ಬೇಕಿತ್ತಲ್ಲವೇ ?  ಸೀತೆಯ ಕಂಬನಿಗೆ ಲೋಕವೇ ಕಣ್ಣಾಯಿತು , ರಾಮನ ನೋವು ಅಂತಃಪುರವನ್ನು ದಾಟಲಿಲ್ಲ. ಇರಲಿ , ಇದೊಂದು ಮುಗಿಯದ ವಾದದ ಸರಣಿ . ಬದುಕಿನ ಯಾವ ಹಂತದಲ್ಲಿದ್ದೇವೆ ಎಂಬುದರ ಮೇಲೆ ನಮ್ಮ ಪಾಲಿನ ಸತ್ಯ ಅವಲಂಬಿತವಾಗಿರುತ್ತದೆ.  ದಬ್ಬೆಯವರ ಕವಿತೆಯಲ್ಲಿ  ದಿನವೂ ಗರಗಸಕ್ಕೆ ತಲೆ ಕೊಡುವ ಹೆಣ್ಣೊಬ್ಬಳು ಸೀತೆಯ ಮೂಲಕ ‘ಪರಂಪರೆ’ಯನ್ನು ಪ್ರಶ್ನಿಸುತ್ತಿದ್ದಾಳೆ.
DSC00789
‘ಬಿಚ್ಚ ಬಹುದು :
ಉಟ್ಟ ಸೀರೆಯನ್ನೂ
ಕಟ್ಟಿದ ಪೇಟವನ್ನೂ
ಬಿಚ್ಚಿ ತೋರಿಸಬಹುದೆ?
ತೋರಿಸಿ ಒಪ್ಪಿಸಬಹುದೆ?
ನಮ್ಮೆಲ್ಲ ಭೂತ -ವರ್ತಮಾನದ
ಸತ್ಯವನ್ನು ?
ನಡತೆ ಎಂಬುದು ಹೆಣ್ಣಿಗೆ ಮಾತ್ರ ಅತ್ಯಗತ್ಯ ಎಂಬ ಸಮಾಜದಲ್ಲಿ ಹುಟ್ಟಿದ ಸಾಲುಗಳು. ಅದಾವುದೋ ಅನುಮಾನದ ಬೆಂಕಿಯಲ್ಲಿ ಬೇಯುತ್ತಿರುವ ಹೆಣ್ಣಿನ ಈ ಪ್ರಶ್ನೆಗಳಿಗೆ ಉತ್ತರ ಇಂದಿಗೂ ಸಿಕ್ಕಿಲ್ಲ.   ಆದರೆ ದಬ್ಬೆಯವರ ಹೆಣ್ಣು  ಪ್ರಶ್ನೆಗಳಿಗೆ ಸೋಲಲಾರಳು,  ಸೀತೆಯ ದೃಢತೆಯೇ ಕಣ್ಣ ಬೆಳಕಾಗಿ ಬಂದು ಅವಳ ಮಲ್ಲಿಗೆಯಂತಾ ಮನಸಿಗೆ ವಜ್ರದ ಲೇಪ ಕೊಡಲಿ ಎಂದು ಆಶಿಸುತ್ತಾಳೆ. ಹಾಗೆ ಆಶಿಸುತ್ತಲೇ ಮತ್ತೆ ಮತ್ತೆ ಕೇಳುತ್ತಾಳೆ  ಈ ಶಿಕ್ಷೆ ಯಾಕಾಗಿ ?
ನಿಮ್ಮೆಲ್ಲರ ದೃಢತೆ
ಕಣ್ಣ ಬೆಳಕಾಗಿ ಬಂದು
ಈ ಮನದ ಮಲ್ಲಿಗೆಗೆ
ವಜ್ರಲೇಪವ ಬಳಿದು ಉಳಿಸಬೇಕು
ಇಂದಿಗೂ ಅನುಮಾನಕ್ಕೆ ಬಲಿಯಾಗುವ ಹೆಣ್ಣುಗಳ ಸಂಖ್ಯೆ ಕಡಿಮೆ ಏನಲ್ಲ. ನಾವೀಗ ಸೀತೆ , ಅಹಲ್ಯೆ , ದ್ರೌಪದಿಯರ ಹೆಸರಿನಲ್ಲಿ ಅವರ ಮೂಲಕ ಪ್ರಶ್ನೆ ಮಾಡುವ ಹಂತದಿಂದ ಮುಂದೆ ಸಾಗಿದ್ದೇವೆ, ಸಾಗಬೇಕು  ಎಂಬುದು ನನ್ನ ಅನಿಸಿಕೆ ಮತ್ತು ಆಶಯ. ಹೆಣ್ಣು ತನ್ನ ನೋವನ್ನು ಹಿಂದಿಗಿಂತ ಸ್ಪಷ್ಟವಾಗಿ ಅರುಹಬಲ್ಲಳು. ಕೆಲವು ಕೇಳುವ ಕಿವಿಗಳೂ ಇವೆ. ಮನದ ಮಲ್ಲಿಗೆಗೆ ವಜ್ರದ ಲೇಪ ಬಳಿಯುವ ದೃಢತೆಯಿಂದಾಗಿ ಈ ಕವಿತೆ ಆಪ್ತವಾಗುತ್ತದೆ .  ಈ ದೃಢತೆ ಸಾರ್ವಕಾಲಿಕ ಅಗತ್ಯ ಕೂಡ.
ಸಂಕಲನದ ಶೀರ್ಷಿಕೆಯಾದ ‘ನೀರು ಲೋಹದ ಚಿಂತೆ’ ಎಂಬುದು  ಎಂಟು ಸಾಲಿನ ಕವಿತೆ.  ಜೀವದ ಅಸ್ತಿತ್ವದ ಪ್ರಶ್ನೆಯನ್ನು ನೀರು ಮತ್ತು ಲೋಹದ ಮೂಲಕ ಕೇಳುವ ಕವಿತೆ.
ಈ ಸಂಕಲನದ ನನ್ನಿಷ್ಟದ ಸಾಲುಗಳು ‘ನಿಸಿದಿ ನಾಡಿನ ಹಾಡು’ ಎಂಬ ಹನಿಗವನದ್ದು :
ತೊರೆದಿದ್ದೇವೆ : ಬಟ್ಟೆಯ ಹಂಗು
ಸೂರ ಹೊಕ್ಕಿಲ್ಲ : ಹುಟ್ಟಿದ ಮೇಲೆ
ಸಲ್ಲೇಖನ : ನಿತ್ಯನೇಮ
ಇಷ್ಟೇ ವ್ಯತ್ಯಾಸ : ಆಯ್ಕೆ ನಮ್ಮದಲ್ಲ .
ಅತೀ ಕಡಿಮೆ ಪದಗಳಲ್ಲಿ ಎಲ್ಲವನ್ನೂ ಹೇಳಬಹುದೇ ? ಎಂಬ ಪ್ರಶ್ನೆಗೆ ಉತ್ತರ ಈ ಸಾಲುಗಳು. ನಾಲ್ಕು ಸಾಲಿನ ಬಗ್ಗೆ ಬರೆಯುತ್ತಲೇ ಇರಬಹುದು ಆದರೆ ಈ ಸಾಲುಗಳು ಒಳಗಿಳಿಯಲು ಬರಹದ ಅಗತ್ಯವಿಲ್ಲ .
ಬರೆದಂತೆ ಬದುಕಿದ  ಬದುಕನ್ನೇ ಬರಹವಾಗಿಸಿದ ಪ್ರಾಮಾಣಿಕತೆಯಿಂದಾಗಿ  , ಕೋಮಾದೊಡನೆ ಹೋರಾಡಿದ ನಂತರವೂ ಕವಿತೆ ಕಟ್ಟ ಬಯಸುವ ಜೀವನ್ಮುಖಿಯಾಗಿ ,  ಮಮತೆಯ ದನಿಯ ಸ್ತ್ರೀವಾದಿಯಾಗಿ ವಿಜಯ ದಬ್ಬೆ ಹೆಚ್ಚು ಆಪ್ತವಾಗುತ್ತಾರೆ , ಇಷ್ಟವಾಗುತ್ತಾರೆ. (ಸ್ತ್ರೀವಾದಿ ಎಂಬ ಪದದ ಬಗ್ಗೆ ನನ್ನದೇ ಆದ ಆಕ್ಷೇಪಣೆಗಳಿದ್ದರೂ ಅವರು ಹಾಗೆಯೇ ಗುರುತಿಸಿಕೊಂಡಿರುವುದರಿಂದ ನಾನೂ ಹಾಗೇ ಬಳಸಿದ್ದೇನೆ)  ಮುಂದೆ ಬರೆಯಲು ಮತ್ತೆ ಪದಗಳು ಸಿಗುವವರೆಗೆ ವಿಜಯ ದಬ್ಬೆಯವರಿಗೆ ಗೌರವ ಪೂರ್ವಕ ನಮಸ್ಕಾರಗಳು.

‍ಲೇಖಕರು G

August 20, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. umavallish

    ಈ ಲೇಖನ ಬರೆದಿರುವ ನಿಮಗೆ ವಂದನೆಗಳು. ನಾನು 1984-86 ಸಾಲಿನಲ್ಲಿ ವಿಜಯ ಮೆಡಮ್ ಅವರ ವಿದ್ಯಾರ್ಥಿನಿ ಆಗಿದ್ದೆ. ಗಂಗೋತ್ರಿ ಯಲ್ಲಿ ಬಹಳ ಹತ್ತಿರದಿಂದ ಕಂಡಿರುವ ನನಗೆ ಅವರ ಬಗ್ಗೆ ಬಹಳ ಗೌರವ ಪ್ರೀತಿ, ಹಾಗೂ ಅಭಿಮಾನ
    .ಅವರ ಅನಿಸಿಕೆಗಳನ್ನ
    ಅವರು ಉತ್ಸಾಹದಿಂದ ಹೇಳುವಾಗ
    ನಾವು ಮಂತ್ರಮುಗ್ದತೆ ಇಂದ ಕೇ ಳುತ್ತ ಾಇದ್ದೆವು..
    ಸ್ವರ್ಣ ಅವರೇ ನನ್ನ ಸ್ನೇಹಿತೆ ಯಂತಹ ವಿಜಯ ಮೇಡಂ ಬಗ್ಗೆ ಬರೆದ ನಿಮಗೆ ಮತ್ತೊಮ್ಮೆ ನನ್ನ ಅಭಿವಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: