ವಿಜಯಮ್ಮ ಈಗ ‘ಮುದ್ರಣ ರತ್ನ’

ಸ್ವ್ಯಾನ್ ಕೃಷ್ಣಮೂರ್ತಿ

ಚಿತ್ರದುರ್ಗ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿದ ಶ್ರೀಮತಿ ವಿಜಯಲಕ್ಷ್ಮಿ ಅವರು ಹದಿಹರೆಯದ ಅಂಚಿನಲ್ಲಿಯೇ ಎರಡು ಮಕ್ಕಳ ತಾಯಿಯಾದರು.

ಸಾಂಸಾರಿಕ ಬದುಕು ಸರಿದೂಗದೆ ಸ್ವತಂತ್ರವಾದ ಬದುಕು ಕಟ್ಟಿಕೊಂಡ ವಿಜಯ ಲಕ್ಷ್ಮಿ ಅವರು ಕಷ್ಟ ಕಾರ್ಪಣ್ಯಗಳ ನಡುವೆಯು ತಮ್ಮ ಕಲಿಯುವ ಛಲವನ್ನು ಬಿಡಲಿಲ್ಲ.

ಓದು ಮುಂದುವರೆಸಿ ಕನ್ನಡ ಎಂ.ಎ. ಮಾಡಿದ್ದು, ಶ್ರೀರಂಗರ ಕುರಿತು ಪಿಎಚ್.ಡಿ. ಪ್ರಬಂಧ ಬರೆದು ಡಾಕ್ಟರೇಟ್ ಪದವಿ ಸಂಪಾದಿಸಿದ್ದು ಅನೇಕ ಹೆಣ್ಣುಮಕ್ಕಳಿಗೆ ಮಾದರಿ.

ಅನೇಕ ಪತ್ರಿಕೆಗಳ ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದ ಡಾ. ವಿಜಯ ಲಕ್ಷ್ಮಿಯವರು ತುರ್ತು ಪರಿಸ್ಥಿತಿಯಲ್ಲಿ (Emergency period) ಬರೆಯುತ್ತಿದ್ದ ಕ್ರಾಂತಿಕಾರಕ ಲೇಖನಗಳ ಪ್ರಕಟಣೆಯನ್ನು ಪತ್ರಿಕೆಗಳು ನಿಲ್ಲಿಸಿದಾಗ ತಮ್ಮ ಕೆಲಸವೇ ಎಲ್ಲಿ ತಪ್ಪಿಹೋಗಬಹುದೆಂಬ ಆತಂಕದಿಂದ ಮುಂದೆ ಸ್ವಂತ ಉದ್ಯಮ ಸ್ಥಾಪಿಸಬೇಕೆಂದು ಛಲ ತೊಟ್ಟರು.

ಆಗ ಅವರು ಆಯ್ದುಕೊಂಡದ್ದು ಮುದ್ರಣೋದ್ಯಮವನ್ನು. ೧೯೭೬ರಲ್ಲಿ ಇಡೀ ದೇಶವೇ ತುರ್ತು ಪರಿಸ್ಥಿತಿ ಹೇರಿಕೆಯಿಂದ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ದಿನಗಳಲ್ಲಿ ಬಲು ಪ್ರಯಾಸದಿಂದ ಮೂವತ್ತು ಸಾವಿರ ರೂಪಾಯಿಗಳ ಸಾಲ ಮಾಡಿ `ಇಳಾ ಮುದ್ರಣಾಲಯ’ವನ್ನು ಆರಂಭಿಸಿದರು.

ಈ ಮುದ್ರಣಾಲಯದಿಂದ ಅವರು ಮುದ್ರಿಸಿದ ಮೊದಲ ಪುಸ್ತಕ ಕಾಳೇಗೌಡ ನಾಗವಾರ ಅವರು ಮುಂಗಾರು ಪ್ರಕಾಶನದಿಂದ ಪ್ರಕಟಿಸಿದ ಅಗ್ರಹಾರ ಕೃಷ್ಣಮೂರ್ತಿಯವರ ಬೆಳ್ದಿಂಗ್ಳಪ್ಪನ ಪೂಜೆ'. ಹಲವು ಬಗೆಯ ಏಳು ಬೀಳುಗಳನ್ನು ದಾಟಿಕೊಂಡು ಜೀವನದುದ್ದಕ್ಕೂ ಹೆಣ್ಣು ಎಂಬ ಕಾರಣಕ್ಕೆ ಅವರು ಅನುಭವಿಸಿದ ಸಂಕಷ್ಟಗಳು ದೊಡ್ಡವು. (ಇವರು ಎದುರಿಸಿದ ಸಂಕಷ್ಟಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿಕುದಿ ಎಸರು’ ಭಾಗ ಒಂದರಲ್ಲಿ ಸುವಿಸ್ತಾರವಾಗಿ ವಿವರಿಸಿದ್ದಾರೆ.)

ಇಳಾ ಮುದ್ರಣಾಲಯದ ಮುಖಾಂತರ ಅನೇಕ ಹಿರಿಯ ಕಿರಿಯ ಲೇಖಕರ, ಪ್ರಕಾಶಕರ ಅಸಂಖ್ಯಾತ ಪುಸ್ತಕಗಳನ್ನು ಮುದ್ರಿಸಿ ಪ್ರಚಾರಪಡಿಸಿದರು.
ಬಹುಬೇಗ ಇಳಾ ಮುದ್ರಣಾಲಯವನ್ನು ವಿಶ್ವದಾದ್ಯಂತ ಸಾಹಿತ್ಯಾಸ್ತಕರ ಮನೆಮನಗಳಿಗೆ ಪ್ರಿಯವಾಗುವಂತೆ ಬೆಳೆಸಿದರು. ಅನೇಕ ಚಳುವಳಿಗಳಿಗೆ ಕರಪತ್ರ ರಸೀದಿ ಪುಸ್ತಕಗಳಿಗೆ ಮುದ್ರಣದ ನೆರವನ್ನು ನೀಡುತ್ತಿದ್ದುದ್ದನ್ನು ಅನೇಕ ಹಿರಿಯ ಹೋರಾಟಗಾರರು ಈಗಲೂ ನೆನೆಯುತ್ತಾರೆ.

ಇದೊಂದು ಬರೀ ಮುದ್ರಣಾಲಯವಾಗಿ ಉಳಿಯದೇ ಕಷ್ಟ ಎಂದು ಬಂದ ಅನೇಕರ ಆಶ್ರಯತಾಣವಾಗಿ ಮಾರ್ಪಟ್ಟಿತ್ತು. ಜೊತೆಗೆ ಸಾಹಿತ್ಯಿಕ – ಸಾಂಸ್ಕೃತಿಕ – ಜನಪರ ಚಳುವಳಿಯ ಕೇಂದ್ರವಾಗಿ ರೂಪುಗೊಂಡಿತು. ಹೀಗೆ ಮಾತೃ ಸ್ವರೂಪಿ ಸಂಸ್ಥೆಯಾದ ಇಳಾ ಮುದ್ರಣಾಲಯದ ಡಾ. ವಿಜಯ ಲಕ್ಷ್ಮಿ ಸಾಹಿತ್ಯ-ಸಾಂಸ್ಕೃತಿಕ ಪರಿಸರದಲ್ಲಿ ಡಾ. ವಿಜಯಾ ಆಗಿ ಬಹುಬೇಗ ಇಳಾ ವಿಜಯಮ್ಮನೆಂದೇ ಪ್ರಖ್ಯಾತರಾದರು.

ಇಳಾ ಮುದ್ರಣದ ಜೊತೆ ಜೊತೆಗೆ ಇಳಾ ಪ್ರಕಾಶನ',ಜನ ಸಾಹಿತ್ಯ’ದ ಮೂಲಕ ಕನ್ನಡ ಸಾಹಿತ್ಯ ಲೋಕದ ಖ್ಯಾತ ನಾಮರ ಕೃತಿಗಳಲ್ಲದೆ ಅನೇಕ ಹೊಸ ಲೇಖಕರ ಕೃತಿಗಳನ್ನು ಬೆಳಕಿಗೆ ತಂದರು.

ವಿಜಯಮ್ಮನವರ ಜೊತೆ ಜೊತೆಯಲ್ಲೇ ಮುದ್ರಣಾಲಯದ ಒಳ ಹೊರಗುಗಳನ್ನು ಅರಿತಿದ್ದ ಅವರ ಹಿರಿಯ ಮಗ ಬಿ. ಗುರುಮೂರ್ತಿ ಮುದ್ರಣೋದಮದಲ್ಲಿ ಕಾಲ ಕಾಲಕ್ಕೆ ಬದಲಾಗುತ್ತಿರುವ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಇಳಾ ಮುದ್ರಣಾಲಯವನ್ನು ಇನ್ನಷ್ಟು ಉತ್ತುಂಗಕ್ಕೆ ಒಯ್ದರು. ಕಿರಿಯ ಮಗ ಬಿ. ಸುರೇಶ ಪ್ರಕಾಶನ, ಸಾಹಿತ್ಯ, ಹಿರಿತೆರೆ, ಕಿರುತೆರೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

ಇಳಾ ಮುದ್ರಣಾಲಯವನ್ನು ಕೇಂದ್ರವಾಗಿಸಿಕೊಂಡು, ಪತ್ರಕರ್ತೆಯಾಗಿದ್ದುದರ ಜೊತೆಗೆ ಸಿನಿಮಾ, ನಾಟಕ, ಸಾಹಿತ್ಯ, ಸಾಂಸ್ಕೃತಿಕ ಲೋಕದ ಒಳಹೊರಗನ್ನು ತಮ್ಮ ಬರಹಗಳ ಮೂಲಕವೇ ತೆರೆದಿಟ್ಟರು.

ಬೊಂಬೆಯಾಟದಂತಹ ಪ್ರಕಾರಗಳಿಗೆ ಹೆಂಗಳೆಯರನ್ನು ಕಟ್ಟಿಕೊಂಡು ಹೊಸ ರೂಪ ಕೊಟ್ಟರು. ಬೀದಿ ನಾಟಕಗಳನ್ನು ಬರೆದು ಆ ಪ್ರಕಾರದ ಮೂಲಕ ನಾಡಿನಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು.
ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುವ ವಿಜಯಮ್ಮನವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಮಾಧ್ಯಮ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಮಾಸ್ತಿ ಪ್ರಶಸ್ತಿ, ಅನುಪಮ ಪ್ರಶಸ್ತಿ ಹೀಗೆ ಹಲವು ಗೌರವಗಳು ಸಂದಿವೆ.

ಎಂಬತ್ತರ ವಸಂತದಲ್ಲಿಯು ಸಹಾ ಸದಾ ಪುಟಿಯುವ ಉತ್ಸಾಹದ ಚಿಲುಮೆಯಾದ ವಿಜಯಮ್ಮನವರಿಗೆ ಈ ಸಾಲಿನ `ಮುದ್ರಣರತ್ನ’ ಪ್ರಶಸ್ತಿ ದೊರೆತಿರುವುದು ಅಭಿಮಾನಿಗಳೆಲ್ಲ ಸಂಭ್ರಮಿಸುವ ಸಂಗತಿಯಾಗಿದೆ.

‍ಲೇಖಕರು Admin

July 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: