ಮೂಲ ವಿಲ್ಫ್ರೆಡ್ ಓವನ್

ಅನುವಾದ ಪ್ರಮೋದ ಮುತಾಲಿಕ
ಯುದ್ಧದಿಂದ ಮುಕ್ತಿ ಹೊಂದಿದ್ದೇ
ಅವಿರತ ಕದನಗಳಿಂದ ಬೆಣಚು ಕಲ್ಲೂ
ಕೊಳಿವೆಯಾಗಿದ್ದ ಮಾರ್ಗದಲ್ಲಿ ಜಾರುತ್ತಲೇ ಹೋದೆ.
ಅಲ್ಲಿಯೂ ಬಿತ್ತು ಕಿವಿಗೆ ಮಲಗಿದ್ದವರ ನರಳಾಟ.
ಗಾಢ ಯೋಚನೆಯೊ, ಇಲ್ಲ ಮೃತ್ಯು ವಶದಲ್ಲಿರುವವರಂತೆ
ಅಲುಗಾಡಲೇ ಇಲ್ಲ ಯಾರೂ . ಜಿಗಿದೆದ್ದ ಒಬ್ಬ
ಇನ್ನೂ ಹೋಗಿ ಹತ್ತಿರ ದಿಟ್ಟಿಸಲು.
ಸಿಕ್ಕಂತೆ ಗುರುತು ನೋಡಿದ ನನ್ನನ್ನೇ ದಯೆ
ತುಂಬಿದ ನಿಶ್ಚಲ ಕಣ್ಣುಗಳಿಂದ.
ತನ್ನ ಅಸಹಾಯಕ ಕೈಗಳನ್ನು ಮೇಲೆತ್ತಿದ
ನನ್ನ ಹರಸುವವನಂತೆ.
ನಾವಿದ್ದ ಸ್ಥಳದ ಸೂಚನೆ ನೀಡಿತು
ಆತನ ನಿರ್ಜೀವ ಮುಗುಳುನಗೆ :
ನಾವಿದ್ದುದು ನರಕದಲ್ಲಿ !
ಸಾವಿರ ಹೆದರಿಕೆಗಳಿಂದ ಬಿಳಚಿ ಕೊಂಡಂತ್ತಿತ್ತು ಮುಖ
ಮುಖದಲ್ಲಿಳಿರಿದಿಲ್ಲ ಹನಿ ರಕ್ತವೂ ಮೇಲಿನ ನೆಲದಿಂದ.
ತೋಪುಗಳ ಶಬ್ದಗಳು ಕೆಳಗಿಳಿದಿರಲಿಲ್ಲ.
‘ಮಿತ್ರಾ, ವಿಚಿತ್ರ. ಬೇಸರಕ್ಕೆ ಕಾರಣವೆ ಇಲ್ಲಿಲ್ಲ ‘ಎಂದೆ ನಾನು.
‘ಯಾವುದೂ ಇಲ್ಲ ‘ಹೇಳಿದ ಆತ ‘ಉಳಿದ ನಮ್ಮ
ಬದುಕನ್ನು ಹೊರತು ಪಡಿಸಿ. ನಿರೀಕ್ಷೆಗಳ ಬತ್ತುವಿಕೆ ಮಾತ್ರ.
ನಿನ್ನ ಈ ಆಸೆಯೇ ನನ್ನ ಬದುಕು ಆಗಿತ್ತು. ಏರಿ
ಉತ್ಸಾಹದ ಕುದುರೆಯ ಬೇಟೆ ಆಡಿದೆ ಕನಸಿಗೂ
ಮೀರಿದ ನಿರೀಕ್ಷೆ ಗಳ. ಸುಮ್ಮನಿರಿಸಲ್ಲ ನಿನ್ನನ್ನದು.
ವ್ಯಕ್ತವಾಗುವದು ನಿನ್ನ ಕಣ್ಣು, ಕೆದರಿದ ಕೂದಲುಗಳಲ್ಲಿ.
ಗೇಲಿಮಾಡುವದು ಕ್ರಮಬದ್ಧ ಉರುಳುವ ಕಾಲವ.
ಬೇಸರ ಇಲ್ಲಿಗಿಂತ ಹೆಚ್ಚು.
ಗೇಲಿ ಮಾಡಿದವರೆ ಹೆಚ್ಚು ನನ್ನ ಅತ್ತ್ಯುತ್ಸಾಹವನ್ನ,
ನಕ್ಕುಬಿಟ್ಟಿದ್ದರು ಸಹ.

ಉಳಿದಿದೆ ಸ್ವಲ್ಪ ನನ್ನ ಅಳು :ಸಾಯಬೇಕು ಈಗದು.
ಅಂದರೆ ಹೇಳಬೇಕಿದೆ ಹೇಳದೆ ಉಳಿದ ಸತ್ಯವನ್ನು.
ಯುದ್ಧಗಳ ದಯನೀಯತೆಯನ್ನ, ಯುದ್ಧ
ಸೋಸಿದ ದಯನೀಯ ಸ್ಥಿತಿಯನ್ನು.
ಖುಷಿ ಪಟ್ಟಾರು ಮೇಲಿನ ಜನರೀಗ
ನಾವು ಮಾಡಿದ ನಾಶಕ್ಕೆ. ಇಲ್ಲಾ ಕುದಿದು
ಮತ್ತೆ ಹಾಳಾದಾರು ಹೆಣ್ಣು ಹುಲಿಯ
ವೇಗವನ್ನೂ ಮೀರಿಸುವ ಶೀಘ್ರತೆಯಿಂದ !
ದೇಶ ಹಾಳಾಗುವದಷ್ಟೆ.
ಧೈರ್ಯವೂ ನನಗಿತ್ತು, ಬುದ್ಧಿಮತ್ತೆಯೂ ಇತ್ತು,
ಚಾಕಚಕ್ಯತೆಯಿಂದ ತಪ್ಪಿಸಿಕೊಳ್ಳಲು ಅಲ್ಲಿಂದ
ಗೋಡೆಗಳೇ ಇರದ ಈ ಜಗಕೆ ಬರಲು.
ಮುಂದೊಮ್ಮೆ ರಕ್ತದ ಮಡುವಲ್ಲಿ ಸಿಕ್ಕಾಗ
ಅವರ ಕಾಲುಗಳು, ಹೋಗುತ್ತೇನೆ ನಾನು ಮೇಲೆ
ಎಲ್ಲ ತೊಳೆಯಲು ಸಿಹಿ ನೀರಿನಿಂದ,
ಎಂದೂ ಮಾಸದ ಸತ್ಯಗಳಿಂದ.
ಜೀವ ತುಂಬುತ್ತೇನವರಿಗೆ ನನ್ನ ಉತ್ಸಾಹದಿಂದ
ಯುದ್ಧದ ಹುರಿದುಂಬಿಕೆಯಿಂದಲ್ಲ.
ನೋವೇ ಇರದ ಕಡೆ ಜನರ ರಕ್ತ ಹರಿದದ್ದುಂಟು !
‘ಮಿತ್ರಾ, ನಿನ್ನೆ ನೀ ಕೊಂದ ವೈರಿ ನಾನೇ.
ಕತ್ತಲಲ್ಲೂ ಸಿಕ್ಕಿತು ನಿನ್ನ ಗುರ್ತು.
ಮರೆತಿಲ್ಲ ಇನ್ನೂ ನಿನ್ನೆ ನೀನು ಇರಿದ ಪರಿ,
ತಪ್ಪಿಸಿ ಕೊಳ್ಳುವ ವ್ಯರ್ಥ ಪ್ರಯತ್ನ ನನ್ನದು
ದೇಹ ತಣ್ಣಗಾಗಿತ್ತಾಗಲೆ !…
ಬಾ, ಮಲಗೋಣ ಇನ್ನು…. ‘






0 Comments