ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾಚ್ ಕಟ್ಟಲಿಲ್ಲ ಇವತ್ತಿಗೂ..

rajakumar madivalara

ರಾಜಕುಮಾರ್ ಮಡಿವಾಳರ 

WATCH………..

ಅವು ಕಷ್ಟದ ದಿನಗಳು

ಅವತ್ತಿಗೆ ಅಪ್ಪನ ಸಾವು ಇನ್ನು ಹಸಿ ಹಸಿ ಗಾಯದಂತ ಇವತ್ತಿಗೂ ಮಾಯದಂತ ದಿನಗಳು,

ನೀವು ಧಾರವಾಡದವರು ಆಗಿದ್ದರೆ ಸುಮಾರು ೧೦ ವರ್ಷಗಳ ಹಿಂದೆ ಸಪ್ತಾಪುರ ಬಾವಿ ಹತ್ತಿರದ ಶೀತಲ್ ಐಸ್ ಕ್ರೀಮ್ ಅಂಗಡಿ ಗೊತ್ತಿರುತ್ತೆ. ಅಲ್ಲಿ ಸಪ್ಲೈಯರ್ ,ಕ್ಲೀನರ್ + ಸುಮಾರು ೨೫ ತರದ ತಂಪು ಸೋಡಾ ಮಾಡಬಲ್ಲ ಭಟ್ಟ ಅನ್ಕೊಬಹುದಾದ ಏಕೈಕ ಹುಡುಗ ಕುಮಾರನ ಪರಿಚಯ ನಿಮಗಿದ್ದರೆ ಅದು ನಾನೇ.

ಅಂಗಡಿ ಮಾಲೀಕರು ಹುಕ್ಕೇರಿ ಅಂತಾ. ಅದೊಂದಿನ ತುಂಬಾ ಕುಶಾಲಿನಲ್ಲಿ ಅವರ್ಜೊತೆ ಮಾತಾಡ್ತಾ ಇರೋವಾಗ ಬಾಳೆ ಹಣ್ಣು ತಿನ್ನಿ ಅಂದೆ. ಅವ್ರು ನಾನ್ ತಿನ್ನಲ್ಲಾ ನಂ ತಂದೆ ತೀರಿ ಹೋದಮೇಲೆ ಅವ್ರು ತುಂಬಾ ಇಷ್ಟ ಪಡೋ ಹಣ್ಣು ಈ ಬಾಳೆ ತಿನ್ನೋದು ಬಿಟ್ಬಿಟ್ಟೆ ಅಂದ್ರು. 

ಅದ್ಯಾಕೋ ಕೆಲವೇ ದಿನಗಳ ಹಿಂದೆ ಹೋದ ಅಪ್ಪ ಮತ್ತೆ ಮರಳಿ ಕಣ್ಣಲ್ಲಿ ಹನಿ.

ಅದೇನೋ ಗೊತ್ತಿಲ್ಲ ಅಪ್ಪ ಸ್ನಾನದ ೧೫ ನಿಮಿಷ ಹೊರತಾಗಿ ಇಡಿ ೨೩ ತಾಸು ೪೫ ನಿಮಿಷ WATCH ಕಟ್ಕೊಂಡೆ ಇರ್ತಿದ್ರು. ಅದು HMT ಆಕಾಶ್.. ಹುಕ್ಕೇರಿ ಅವರ ಜೊತೆ ಮಾತಾಡಿದ ನಂತರ ನಾನು WATCH ಕಟ್ಟಲಿಲ್ಲ ಇವತ್ತಿಗೂ..

ಕಾರಣ…?
ಇನ್ನು ಈ ಚಿತ್ರ ಅವತ್ತಿನದೇ.. 

ಮಗನನ್ನ ಅಂಗೈಲಿ ಹಿಡಿದು ಬೆಳಿಸಿದಿನಿ ಅನ್ನೋ ಪ್ರೂಫ್ ತರ ಇದೆ. ತಮಾಷೆ ಅಂದ್ರೆ ಇವನಿಗೆ ನಿನ್ನೆ branded + ದುಬಾರಿ ಅಲ್ಲದೆ ಬರಿ ೧೦೦ ರೂಪಾಯಿಯ ಒಂದು ಟಚ್ ಸ್ಕ್ರೀನ್ WATCH ತಂದು ಕೊಟ್ಟೆ. ಅದನ್ನು ಮುಟ್ಟಿದರೆ ಕೆಂಪು ಅಂಕಿಗಳ ಸಮಯ ತೋರ್ಸುತ್ತೆ. ನಿನ್ನೆ ಇವನ ಕಾಲು ನೆಲದ ಮೇಲೆ ನಿಂತಿಲ್ಲ. ಗೆಳೆಯರಿಗೆಲ್ಲ ತೋರ್ಸಿ ಮನೆ ಸೇರಿದಾಗ ರಾತ್ರಿ ೧೦-೩೦ . 

ದನ್ನ ಮೀರಿ ಮತ್ತೊಬ್ಬ ಗೆಳೆಯ ಮಿಲಿಂದ ಅವನಿಗೆ call ಮಾಡಿ ಲೇ ಮಿಲಿ ನಮ್ಮಪ್ಪ WATCH ತಂದಾರ್ಲೆ ಹೆಂಗ ಐತಿ ಅಂತಿ ಅವನಜ್ಜಿ “ಮುಟ್ಟಿ ನೋಡ್ಕಬೇಕಪಾ”(touch screen )..

ಅಲಮಾರಿನ ಒಳಗೆ ಇದ್ದ ತಲೆಮಾರಿನ ಗಂಟು ತಗ್ದು ಆ HMT ಆಕಾಶ್ ಯಾಕೋ ಮುಟ್ಟಿ ನೋಡ್ತಾನೆ ಇದ್ದೆ..

rajakumar madivalara2

‍ಲೇಖಕರು Admin

22 February, 2016

6 Comments

  1. ಟಿ.ಕೆ.ಗಂಗಾಧರ ಪತ್ತಾರ.

    ನಮ್ಮ-ನಿಮ್ಮಂಥ ಬಡಪಾಯಿಗಳು ವಾಚ್ ಕಟ್ಟದಿದ್ರೇನಾಯ್ತು ಬಿಡಿ. ನಮ್ಮನ್ನಾಳುವವರು ಲಕ್ಷಗಟ್ಟಲೆ ಬೆಲೆಬಾಳುವ ವಾಚು ಕಟ್ಟಿ ಮೆರೆಯುತ್ತಿದ್ದಾರಲ್ಲ. ಆ ವೈಭವವನ್ನು ಕಣ್ತುಂಬಿಕೊಂಡು ಆನಂದಿಸೋಣ.

  2. Rajkumar madiwalar

    ನನ್ನ ಮೇಷ್ಟ್ರು ಶ್ರೀ Chandru Alur ಅವರ ಪ್ರಬಂಧ ಸಾವಿರ ಸಲ ಓದಿ ಅಷ್ಟೇ ಸಲ ಕಣ್ಣೀರಾಗಿದ್ದೇನೆ.. ಇವತ್ತು ಮತ್ತದೇ ಆರ್ದ್ರತೆಯಲ್ಲಿ ಆಯ್ದ ಭಾಗ ನಿಮ್ಮ ಓದಿಗಾಗಿ..

    “ಈಡೇರದ ಆಸೆ ಹೊಸ ಬಗೆಯ ಕಾರು
    ಎಂಥಾ! ಮೋಜಿನ ಕುದರಿ…. ಈ ಬಾಳು..!”

    ಬಹುಶಃ ಕಾರು ರಾಮನಗರ ದಾಟಿದಮೇಲಿರಬೇಕು.
    ನಿದ್ದೆಯಿಂದ ಎಚ್ಚೆತ್ತವರಂತೆ ಯಾವುದೋ ಕನಸಿನಿಂದ ಹೊರಬಂದವರಂತೆ ” ಇಂಥ ಕಾರಿಗೆ ಎಷ್ಟಾಗುತ್ತುಪ್ಪಾ ಚಂದ್ರು? ” ಎಂದರು. “ಅಯ್ಯೋ ಇದು ಅಂಬಾಸಿಡಾರ್ ಕಾರು ಕಣ್ರಪ್ಪಾ ಟ್ಯಾಕ್ಸಿಗೆ ಲಾಯಕ್ಕು. ಇದನ್ನು ಯಾರೂ ತಗಳಲ್ಲ. ಸರ್ಕಾರದವರು ಕೊಂಡುಕೋತಾರೆ ಅಷ್ಟೆ. ಈಗ ಮಾರುತಿಲಿ ಹೈಕ್ಲಾಸ್ ಕಾರುಗಳು ಬಂದಿವೆ.
    ಏಯ್ಟ್ ಹಂಡ್ರೆಡ್, ಜೆನ್, ಎಸ್ಟೀಮ್ ಮುಂತಾಗಿ. ಬೇರೆ ಕಂಪನಿಗಳು ಕಾರುಗಳು ಸಾಕಷ್ಟು ಬಂದಿವೆ. ಅದು ಸರಿ ಈಗ ಯಾಕೆ ಈ ಕಾರಿನ ಬೆಲೆ ಕೇಳಿದಿರಿ?”

    “ಎಲ್ಲಯ್ಯಾ ನೀನು ಕಾರು ತಗೊಳ್ಳಲೇ ಇಲ್ಲ. ನೀನು ಕಾರ್ ತಗೊಂಡಿದ್ರೆ ನಿನ್ನನ್ನು ಕರ್ಕೊಂಡು, ನಿಮ್ಮ ಅಮ್ಮನ ಜೊತೆ ಒಂದು ಸಲ ನಿನ್ನ ತಂಗಿಯರ ಊರಿಗೆಲ್ಲ ಹೋಗಿ, ಹಾಗೆ ನಿಮ್ಮ ಅಮ್ಮನ ತವರಿಗೂ ಹೋಗಿ ಎಲ್ಲರನ್ನೂ ಮಾತಾಡಿಸಿಕೊಂಡು ಬರೋಣ ಅಂದುಕೊಂಡಿದ್ದೆ…”

    “ಅಯ್ಯೋ ಅದರಲ್ಲೇನ್ರಪ್ಪ. ಮದ್ದೂರಲ್ಲಿ ಈಗ ಕಣ್ಣಿಗೆ ಬೇಕಾದ ಕಾರು ಸಿಕ್ತವೆ. ನೀವು ಹೇಳಿದ್ರೆ ಒಂದು ಟ್ಯಾಕ್ಸಿ ಮಾಡ್ಕೊಂಡು ಎಲ್ಲಾ ಕಡೆ ಹೋಗಿ ಬರಬಹುದಿತ್ತು”

    ” ಟ್ಯಾಕ್ಸಿಗೂ ಸ್ವಂತ ಕಾರಿಗೂ ವ್ಯತ್ಯಾಸ ಇಲ್ವೆನಯ್ಯಾ… ನನ್ನ ಮಗನ ಕಾರು ಅಂದ್ರೆ ಅದೇ ಒಂದು ಖದರ ಕಣಯ್ಯ…” ಎಂದು ನಗುತ್ತಲೇ ಕೆಮ್ಮಲಾರಂಬಿಸಿದರು.

    ಆದರೆ ಅದೇಕೊ ನನಗೆ ತುಂಬಾ ಸಂಕಟವಾಯ್ತು. ಅಂತೆಯೆ ” ಛೇ, ಇದೇನ್ರಪ್ಪಾ ಈಗ ಹೇಳ್ತಿದಿರಿ. ನೀವು ಒಂದು ಮಾತು ಹೇಳಿದ್ರೆ ಯಾವತ್ತೋ ಮನೆ ಮುಂದೆ ಕಾರು ನಿಲ್ಲಿಸುತ್ತಿದ್ದೆ” ಎಂದರೆ, “ಅದಕ್ಕೆನು ಬೇಜಾರು ಮಾಡ್ಕೊಬೇಡ ಕಣ್ರಪ್ಪಾ. ಏನೋ ಅನಿಸಿತು ಹೇಳಿದೆ ಅಷ್ಟೆ…..

    ….. 25ಕ್ಕೆ ಮುನ್ನ ಆದಷ್ಟು ಬೇಖ ಕಾರು ತೆಗೆದುಕೊಳ್ಳಬೇಕು. ಒಬ್ಬನೆ ನೂರಾರು ಮೈಲಿ ಲಾಂಗ್ ಡ್ರೈವ್ ಹೋಗಬೇಕು. ಅಪ್ಪ-ಅಮ್ಮನನ್ನು ಕರೆದುಕೊಂಡು ಅವರಿಗಿಷ್ಟವಾದ ದೇವಸ್ಥಾನಗಳನೆಲ್ಲ ತೋರಿಸಿಕೊಂಡು ಬರಬೇಕು ಎಂದು ಆಗಾಗ್ಗೆ ಅನಿಸುತಿತ್ತು. ನಮ್ಮ ಆರ್ಥಿಕ ಪರಿಸ್ಥಿತಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ಆದರೆ ಕ್ರಮೇಣ ಕಾರಿನ ಖಯಾಲಿ ಹೊರಟೇ ಹೋಯ್ತು. ನಂತರದ ದಿನಗಳಲ್ಲಿ ನನಗೆ ಅದೇಕೊ ಕಾರು ಒಂದು ಅತ್ಯಗತ್ಯ ಅನಿಲೇ ಇಲ್ಲ. ಜೊತೆಗೆ ಬೆಂಗಳೂರು ಟ್ರಾಫಿಕ್ ನಲ್ಲಿ ಕಾರಿನಲ್ಲಿ ಬಂಧಿಯಾಗಿರುವದಕ್ಕಿಂತ ಬೈಕಿನಲ್ಲಿ ಓಡಾಡುವುದೆ ಸೊಗಸು, ಅದೊಂದು ಅಪರಿಮಿತ ಸ್ವಾತಂತ್ರ್ಯ ಅನ್ನಿಸಿ ಬಿಟ್ಟಿತ್ತು. ಆದರೆ ನನ್ನ ತೊಡೆಯ ಮೇಲೆ ಅಸಹಾಯಕರಾಗಿ ಮಲಗಿದ್ದ ನನ್ನ ತಂದೆಯವರ ಮುಖವನ್ನು ನೋಡಿದಾಗ ಛೇ, ನಾನೆಂತಹ ತಪ್ಪು ಮಾಡಿಬಿಟ್ಟರೆ ಅನಿಸಿತು. ಮೂವತ್ತು ವರ್ಷ ಹೊರಗೆ ಕೇಂದ್ರ ಸರಕಾರದ ನೌಕರಿಯಲ್ಲಿದ್ದು ನಂತರ ಹಳ್ಳಿಯಲ್ಲಿ ನೆಲೆಸಿ ಅಪ್ಪಟ ರೈತನಂತೆ, ರೈತ ಕಾರ್ಮಿಕನಂತೆ ಬದುಕುತ್ತಿದ್ದ ತಂದೆಯವರ ಮನಸಿನಲ್ಲಿ ನನ್ನ ಮಗ ಕಾರು ತೆಗೆದುಕೊಳ್ಳಲಿ ಎಂಬ ಹಂಬಲ ಇರಬಹುದು ಎನ್ನುವುದು ನನ್ನ ದೊಡ್ಡ ಮನಸ್ಸಿಗೆ ಹೊಳೆಯಲೇ ಇಲ್ಲವಲ್ಲ ಎಂದು ಪರಿತಪಿಸಿದೆ. ” ಇದೊಂದು ಸಲ ಅಣ್ಣಾರು ಹುಷಾರಾಗಿ ಬಿಡಲಿ, ಅವರನ್ನು ಬೆಂಗಳೂರಿನಿಂದ ಸ್ವಂತ ಕಾರಿನಲ್ಲಿಯೇ ಊರಿಗೆ ಕರೆದುಕೊಂಡು ಹೋಗಬೇಕು” ಎಂದು ಆ ಕ್ಷಣದಲ್ಲಿಯೇ ನಿಶ್ಚಯ ಮಾಡಿದೆ.

    ಮರುದಿನ ಆಫೀಸಿಗೆ ರಜೆ ಹಾಕಿದ್ದರೂ ತಂದೆಯವರ ಬಳಿ ತಂಗಿಯನ್ನು ಬಿಟ್ಟು ಆಫೀಸಿಗೆ ಹೋಗಿ ಕಾರುಸಾಲಕ್ಕೆ ಅರ್ಜಿ ಸಲ್ಲಿಸಿ ಬಂದೆ. ಆದರೆ ದಿನದಿಂದ ದಿನಕ್ಕೆ ತಂದೆಯವರ ಆರೋಗ್ಯ ಕ್ಷೀಣಿಸುತ್ತ ಹೋಗಿ, ಅಂತಿಮವಾಗಿ ನಮ್ಮೆಲ್ಲರಿಗೂ ವಿದಾಯ ಹೇಳಿ ಹೊರಟೇ ಹೋದರು. ರೇಲ್ವೆ ಸ್ಟೇಶನ್ನಿನಲ್ಲಿ ಮುಂದಿನ ಟ್ರೈನಿಗೆ ಸಿಗ್ನಲ್ ಕೊಡಲು ಹೋಗುವವರಂತೆ..!

    ತಂದೆಯವರ ಸಾವಿನ ನಂತರ ಕಾರು ತಗೆದುಕೊಳ್ಳುವದನ್ನು ಮತ್ತೆ ಮುಂದೂಡಿದೆ. ಕಾರಿನ ಬಗ್ಗೆ ಇದ್ದ ಅಳಿದುಳಿದ ವ್ಯಾಮೋಹವೂ ಹೊರಟು ಹೋಗಿತ್ತು. 2002 ರ ಮೇಲಿನಲ್ಲಿ ನನ್ನ ಪತ್ನಿ ಈಜಿಪ್ತಿಗೆ ಹೋಗುವ ಮುನ್ನಾ ದಿನ ” ಮಾರುತಿ ಜೆನ್ ಬುಕ್ ಮಾಡಿದ್ದೇನೆ, ಇವತ್ತೇ ಡೆಲಿವರಿ ತೆಗೆದುಕೊಳ್ಳಬೇಕು” ಎಂದಳು. ನಾನು ಒಂದು ಬಗೆಯ ದಿವ್ಯ ನಿರ್ಲಿಪ್ತತೆಯಿಂದ ಅವಳೊಂದಿಗೆ ಹೋದೆ. ಶೋರೂಮಿನಿಂದ ಕಾರ್ ಡ್ರೈವ್ ಮಾಡಿಕೊಂಡು ಬರುವಾಗ ಆಕೆ How do you feel? ಎಂದಳು .
    ” ನನಗೆ ದೇವರಲ್ಲಿ ನಂಬಿಕೆಯಿಲ್ಲ, ನಿಜ. ಆದರೆ ಸಿನಿಮಾಗಳಲ್ಲಿ, ಕಥೆಗಳಲ್ಲಿ ಆಗುವಂತೆ ಆ ದೇವರೇನಾದರು ಪ್ರತ್ಯಕ್ಷವಾಗಿ ಏನಾದರೂ ವರ ಕೇಳಿಕೊ” ಅಂದ್ರೆ
    ” ಒಂದೇ ಒಂದು ಸಲ ನನ್ನ ತಂದೆಯವರನ್ನು ಈ ಕಾರಿನಲ್ಲಿ ಕರೆದುಕೊಂಡು ಹೋಗುವಂತೆ ಮಾಡು ಸಾಕು”……

    ಪೂರ್ತಿ ಓದಿಗೆ ಓದಿ -ಔಟರ್ ಸಿಗ್ನಲ್.
    ಇದಿಷ್ಟು ಟೈಪಿಸುವ ಸಹಾಯಕ್ಕೆ ಯಾವದೂ ಎದೆಗೆ ಅರ್ಥವಾಗದವನಂತೆ ಡಿಕ್ಟೆಟ್ ಮಾಡಿದ ಮಗನಿಗೆ ಕೃತಜ್ಞತೆ.

  3. Sangeeta Kalmane

    ವಾಚಿನ ಟಿಕ್ ಟಿಕ್ ಸೌಂಡೇ ಕಂಡ್ರೀ ನಿಮ್ಮಪ್ಪನ ಉಸಿರಾಟ. ಅದು ಹೇಗೆ ಮರೆಯಲು ಸಾಧ್ಯ! ಅಪ್ಪನ
    ಜೀವವೇ ಅಡಗಿ ಕುಳಿತಿದೆ ಅದರಲ್ಲಿ.

    ಅದ್ಯಾವಾಗಲೂ ಹಂಗೇ ಕಂಡ್ರೀ, ನಮ್ಮಮ್ಮಂದು, ನಮ್ಮಪ್ಪಂದು ಅಂತ ನಾವು ಹಳಬರು ಬಹಳ ಮುತುವಜಿ೯ಯಿಂದ, ಆಗಾಗ ಮುಟ್ಟಿ ನೋಡುತ್ತ, ಅವುಗಳಲ್ಲೇ ಹೆತ್ತವರನ್ನು ಕಾಣುತ್ತ, ಜೀವವಿರುವ ಜೀವಿಗಳಂತೆ ಕಾಣುತ್ತೇವೆ.
    ಆದರೆ ಈಗಿನ ಜನ ಹಾಂಗಲ್ಲ ಕಂಡ್ರೀ ಒಂದೆರಡು ವಷ್೯ದಲ್ಲೆ ಏನೇ ಆದರೂ ಹಳತಾಗಿ ಬಿಡುತ್ತದೆ. OLX ನಲ್ಲಿ ಮಾರಿಬಿಡೊ ಖಯಾಲಿ. ನೆನಪಿಸಿಕೊಳ್ಳೋಕೆನಿದೆ ಮಣ್ಣು!
    ಹಾ! ನಮ್ಮಮ್ಮನ ಕುಂಕುಮದ ಒಂದು ಚಿಕ್ಕ ಸ್ಟೀಲ ಡಬ್ಬ ಇನ್ನೂ ನನ್ನ ಹತ್ತಿರ ಇದೆ ಕಂಡ್ರೀ. 1988 ಜನವರಿಯಿಂದ ಕಳೆದುಕೊಂಡ ಅವರ ನೆನಪಿನಲ್ಲಿ ದೇವರ ಮನೆಯಲ್ಲಿ ಜೋಪಾನವಾಗಿ ನನ್ನಮ್ಮನನ್ನು ಕಾಣುತ್ತೇನೆ ಪ್ರತಿದಿನ ಅದರಲ್ಲಿ.

    ಕಣ್ಣು ಮಂಜಾಗುತ್ತದೆ ಕಂಡಾಗಲೆಲ್ಲ. ನನ್ನಮ್ಮ ನನ್ನ ಕರೆಯುವ ಕೂಗು ಕೇಳಿಸುತ್ತದೆ. ನಗುವ ವದನ ಕಣ್ಣಿಗೆ ಕಾಣುತ್ತದೆ. ಆ ಬೆಳದಿಂಗಳ ನಗು!

  4. chandrualur

    chennagide.kumar.naanu idannu odiralilla

  5. Vinaya

    You wrote it very well..much love to parents

  6. Vijaya Kulkarni

    ನಿಮ್ಮ ಅನುಭವನೇ ನಿಮ್ಮನ್ನ ಬರಹಗಾರರನ್ನಾಗಿ ಮಾಡಿದ್ದು ರಾಜಣ್ಣ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading