
ಗುರುಪ್ರಸಾದ್ ಕಾಗಿನೆಲೆ
ವಸುಧೇಂದ್ರ ನ ಪುಸ್ತಕ ‘ಮೋಹನಸ್ವಾಮಿ’ ಯನ್ನು ಓದಿ ಹೆಚ್ಚು ಹೆಂಗಸರು ಮಾತ್ರ ಪ್ರತಿಕ್ರಿಯಿಸಿದ್ದಾರೆ ಎಂಬುದು ಒಂದು ಗಮನ. ಗಂಡಸರು ‘ಮೋಹನಸ್ವಾಮಿ’ಗೆ ಪ್ರತಿಕ್ರಿಯಿಸಲು ಇರುವ ಮೊದಲ ಅಡಚಣೆ ಗಂಡಸರ ‘ಲೈಂಗಿಕ ಧೋರಣೆಯೇ’. ಮೋಹನ ಸ್ವಾಮಿ ಪುಸ್ತಕ ಚೆನ್ನಾಗಿದೆ ಎಂದರೆ ಈತ ‘ಗೇ’ ಸಿಂಪಥೈಸರ್, ಚೆನ್ನಾಗಿಲ್ಲ ಎಂದರೆ ಹೋಮೋಪೋಬಿಕ್ ಆಗಬಹುದು ಎಂಬ ಭಾವನೆ ಗಂಡುಮನದಾಳದಲ್ಲಿ ಅಡಗಿ ಕೂತಿದೆ.
ಈ ಗೇ ಸಿಂಪಥೈಸರ್ ಎನ್ನುವುದು ಒಂದು ವಿಚಿತ್ರ ಲಗತ್ತು. ಯಾಕೆಂದರೆ ಸಲಿಂಗಿ ಗಂಡಸರ ಬದುಕಿನ ಎಲ್ಲ ಕಷ್ಟ ಸುಖಗಳಿಗೆ ವಿಲಿಂಗಿ ( ಹೆಟೆರೊಸೆಕ್ಷುಯಲ್) ಗಂಡಸರು ಸಹಾನುಭೂತಿ ತೋರಿಸುವುದು ಬಿಟ್ಟು ಬೇರಾವ ಪ್ರತಿಕ್ರಿಯೆಯನ್ನೂ ತೋರಿಸಲಾರರು. ಆದರೆ ಹೆಂಗಸರ ದೃಷ್ಟಿಕೋನ ಇಲ್ಲಿ ಸ್ವಲ್ಪ ಬೇರೆ. ಇಲ್ಲಿ ‘ಮೋಹನಸ್ವಾಮಿ’ ತಮ್ಮ ಗೆಣೆಕಾರನಾಗಿ ಕಾಣುತ್ತಾನೆ. ಗಂಡನ್ನು ಬಯಸುವ ಇನ್ನೊಂದು ಗಂಡಿನ ಹೆಣ್ಣುಮನ ಹೆಂಗಸರಿಗೆ ಪ್ರಿಯವಾಗುತ್ತದೆ. ಪಕ್ಕದಲ್ಲಿ ಕೂತು ಕಥೆಯನ್ನು ಹೇಳಿದಾಗ ಆಲಿಸುತ್ತದೆ. ಇದು ಬರೇ ಸಾಹಿತ್ಯಕ್ಕಲ್ಲ. ಬದುಕಿಗೂ ನಿಜ.
ಇದು ತಪ್ಪೋ ಸರಿಯೋ ಗೊತ್ತಿಲ್ಲ.. ನಮ್ಮ ಲೈಂಗಿಕ ಧೋರಣೆಯನ್ನು ನಾವು ಮುರಿಯುವುದು ಕಷ್ಟ. ಅದು ಬೇಕಾಗೂ ಇಲ್ಲ. ಅವೆಲ್ಲವನ್ನೂ ಪಕ್ಕಕ್ಕಿಟ್ಟು ನಿರಪೇಕ್ಷವಾಗಿ ಪುಸ್ತಕದ ಸಾಹಿತ್ಯಕತೆಯನ್ನು ಮಾತಾಡುವುದು ಸಾಧ್ಯವೇ? ಇದನ್ನು ಕಾಲವೇ ಹೇಳಬೇಕು.
ಕೆಲವು ವರ್ಷಗಳ ಹಿಂದೆ ಉದಯವಾಣಿಯಲ್ಲಿ ಒಂದು ಕಾಲಂ ಬರೆಯುತ್ತಿದ್ದೆ. ಆಗ ಬರೆದ ಒಂದು ಲೇಖನ ಈ ನಮ್ಮ ಹೆಟೆರೊಸೆಕ್ಷುಯಲ್ ಗಂಡುಗಳ ಧೋರಣೆಯನ್ನು ತೀರ ಮೇಲುಮಟ್ಟದಲ್ಲಿಯಾದರೂ ಹಿಡಿಯುತ್ತದೆ ಎಂದು ಅಂದುಕೊಂಡಿದ್ದೇನೆ.
ಐ ಲವ್ ಯು, ಮ್ಯಾನ್
ಮೊದಲೇ ಹೇಳಿದ ಹಾಗ ಇದೊಂದು ಹಾಲಿವುಡ್ಡಿನ ರೊಮ್ಯಾಂಟಿಕ್ ಕಾಮಿಡಿ. ವಿಮಾನದಲ್ಲಿ ಕಾಲಿರಿಕಿಸಿಕೊಂಡು ಕೂರಲಾಗದ ಕುರ್ಚಿಯಲ್ಲಿ ಕೂತು, ಐಫೋನಿನ ಸ್ಕ್ರೀನಿಗಿಂತಾ ಕೆಲವೊಂದು ಇಂಚು ದೊಡ್ದದಾಗಿರುವ ಮಾನಿಟರ್ ನಲ್ಲಿ, ಇಯರ್ ಫೋನುಗಳ ಮೂಲಕ ಯಾವ ಚಿತ್ರವನ್ನು ಆಸ್ವಾದಿಸುವುದಕ್ಕಂತೂ ಸಾಧ್ಯವಿಲ್ಲ. ನೋಡಬಹುದಷ್ಟೆ. ಹಾಗೆ ನೋಡಿದಾಗಲೂ ಈ ಚಿತ್ರ ಗಮನ ಸೆಳೆಯಲು ಕಾರಣವೇನು? ಗಮನಸೆಳೆಯುವುದು ಅನ್ನುವುದಕ್ಕಿಂತಾ ಹೀಗೆ ಒಂದು ಲೇಖನ ಬರೆಯುವುದಕ್ಕೆ ವಸ್ತುವನ್ನು ಕೊಡುವಂತಹ ಚಿತ್ರವಾ ಇದು ಎಂದು ಹಲವು ಅನುಮಾನಗಳ ನಡುವೆಯೇ ಬರೆಯುತ್ತಿದ್ದೇನೆ.
ಚಿತ್ರದ ಕತೆ ಬಹಳ ಸರಳ. ನಾಯಕ, ನಾಯಕಿಗೆ ಮದುವೆ ನಿಶ್ಚಯವಾಗಿರುತ್ತದೆ. ನಾಯಕಿ ತನ್ನ ಸಂತೋಷವನ್ನು ತನ್ನ ಗೆಳತಿಯರೊಡನೆ ಹೇಳಿಕೊಂಡು ತಿರುಗುತ್ತಾಳೆ ಮದುವೆಯಲ್ಲಿ, ಬ್ರೈಡ್ಸ್‌ಮೈಡ್ ಯಾರು, ರಿಂಗ್ ಬೇರರ್ ಯಾರು, ಮತ್ತಿನ್ಯಾರ‍್ಯಾರು ಇನ್ನೇನು ಕೆಲಸ ಮಾಡಬೇಕೆಂದು ಎಲ್ಲ ವಹಿಸಿಕೊಟ್ಟು ಸಂಭ್ರಮಿಸುತ್ತಾ ಇರುತ್ತಾಳೆ.
ಆದರೆ ಸಮಸ್ಯೆಯಿರುವುದು ನಮ್ಮ ನಾಯಕನಿಗೆ. ಆತನಿಗೆ ಒಬ್ಬನೇ ಒಬ್ಬನೂ ಸ್ನೇಹಿತನಿಲ್ಲ. ತನ್ನ ಮದುವೆಯ ಸಂಭ್ರಮವನ್ನು ಹೇಳಿಕೊಂಡು ಖುಷಿಪಡಲು ಯಾರೂ ಜತೆಗಿಲ್ಲ. ಕಡೆಯಪಕ್ಷ ತನ್ನ ಮದುವೆಗೆ ಬೆಸ್ಟ್‌ಮ್ಯಾನ್ ಆಗಲೂ ಆತನಿಗೆ ಯಾರೂ ಗೆಳೆಯರಿಲ್ಲ. ಆದರೆ ತನಗೆ ಯಾರೂ ಸ್ನೇಹಿತರೇ ಇಲ್ಲವೆಂಬ ಅರಿವು ಕೂಡ ಆಗುವುದು ಅವನ ಮದುವೆ ಗೊತ್ತಾದ ಮೇಲೆಯೇ. ಮದುವೆಯ ದಿನದ ಮುಂಚೆ ಯಾರಾದರೂ ಒಬ್ಬನನ್ನಾದರೂ ಗಂಡಸನ್ನು ಸ್ನೇಹಿತನನ್ನಾಗಿ ಜತೆಮಾಡಿಕೊಳ್ಳಬೇಕು ಎನ್ನುವ ಹಠಕ್ಕೆ ಬಿದ್ದು ತನ್ನ ತಮ್ಮನ ಸಹಾಯ ಪಡಕೊಂಡು ತನಗೆ ಸ್ನೇಹಿತನೊಬ್ಬನನ್ನು ಹುಡುಕುತ್ತಾ ಹೋಗುತ್ತಾನೆ.ಹೀಗೆ ಒಬ್ಬ ಗಂಡು ಇನ್ನೊಬ್ಬ ಗಂಡನ್ನು ಬರೇ ಸ್ನೇಹಿತನಾಗಿ ಪಡೆಯುವುದು ಈ ನಾಗರಿಕ ಸಮಾಜದಲ್ಲಿ ಎಷ್ಟು ಕಷ್ಟ ಎಂಬುದೇ ಚಿತ್ರದ ಕಥೆ. ನಾಯಕಿಯೂ ನಾಯಕನಿಗೆ ಹೋಗಿ ಒಬ್ಬ ಗಂಡು ಗೆಳೆಯನನ್ನು ಗುರುತುಮಾಡಿಕೊ ಎಂದು ದುಂಬಾಲು ಬಿದ್ದನಂತರ ಮುಂದೆ ನಡೆಯುವುದೆಲ್ಲ ಪ್ರಹಸನಗಳು. ಮೊದಲು ಈತ ಯಾರೋ ಒಬ್ಬನನ್ನು ಭೇಟಿಮಾಡಿ ಆತನನ್ನು ರಾತ್ರಿ ಡಿನ್ನರಿಗೆಂದು ಕರಕೊಂಡು ಹೋಗುತ್ತಾನೆ. ವೈನು, ಡೈನಿನ ನಂತರ ಆ ಹೊಸ ಗೆಳೆಯ ಈ ತಮ್ಮ ಗೆಳೆತನಕ್ಕೆ ಬೇರೇನೋ ಆಯಾಮವನ್ನೇ ಹುಡುಕುತ್ತಾನೆ. ಗೆಳೆಯ ಪ್ರಿಯತಮನಾಗುತ್ತಾನೆ. ಮ್ಯಾನ್ ಡೇಟ್ ಅಲ್ಲಿಗೆ ಮುರಿದುಬೀಳುತ್ತದೆ.
ನಂತರ ಕೆಲವೊಂದು ಕ್ಲೀಶೆ ಎನ್ನುವ ನಿಯಮಗಳನ್ನು ಹಾಕಿಕೊಂಡು ತನ್ನ ಮೇಲೆ ಯಾವ ಲೈಂಗಿಕಾಕರ್ಷಣೆಯಿಲ್ಲದೇ ಬರೇ ಗೆಳೆಯನಾಗಿ ಉಳಿಯಬಲ್ಲ ಗೆಳೆಯನನ್ನು ಮಾತ್ರ ಹುಡುಕಲೆಂದು ಆತ ಪ್ರಯತ್ನ ಮಾಡುತ್ತಾನೆ. ಹಾಗೆ ಹುಡಕೊಂಡ ಗೆಳೆಯನನ್ನು ‘ಐ ಲವ್ ಯು, ಮ್ಯಾನ್’ ಎಂದು ಸಂಭೋದಿಸುವ ಧೈರ್ಯ ಮಾಡುತ್ತಾನೆ.
* * *
ನನ್ನ ಕೆಲಸದಲ್ಲಿ ನಾನು ಹೆಣ್ಣು ಗಂಡಿನ ಬೇಧವಿಲ್ಲದೇ ವೈದ್ಯಕೀಯ ಕಾರಣಕ್ಕಾಗಿ ರೋಗಿಗಳನ್ನು ಮೇಲಿಂದ ಕೆಳಗೆ ಬಟ್ಟೆ ಬಿಚ್ಚಿಸಿ ಪರೀಕ್ಷೆ ಮಾಡುತ್ತೇವೆ. ಹತ್ತುವರ್ಷಗಳ ಹಿಂದೆ ನಾನು ರೆಸಿಡೆನ್ಸಿ ಮಾಡುತ್ತಿರಬೇಕಾದರೆ ‘ಒಬ್ಬ ಗಂಡು ಡಾಕ್ಟರು ಹೆಣ್ಣು ರೋಗಿಯನ್ನು ಪರೀಕ್ಷೆ ಮಾಡಬೇಕಾದರೆ ಪರೀಕ್ಷಾ ಕೊಠಡಿಯಲ್ಲಿ ಇನ್ನೊಬ್ಬ ಹೆಂಗಸು ಇರುವುದು ಆ ಹೆಣ್ಣು ರೋಗಿಗೆ ಸಾಂತ್ವನವನ್ನು ಕೊಡುತ್ತದೆ ಮತ್ತೆ ಪರೀಕ್ಷೆ ಮಾಡುವ ಗಂಡು ವೈದ್ಯನಿಗೂ ಕೊಂಚ ಮುಜುಗರ ಕಡಿಮೆಯಾಗುತ್ತದೆ’ ಎಂಬ ನಂಬಿಕೆಯಿಂದ ಹೆಣ್ಣು ರೋಗಿಗಳಿಗೆ ಹೆಣ್ಣು ನರ್ಸನ್ನು ಶ್ಯಾಪರೋನ್ ಆಗಿ ಬಳಸುತ್ತಿದ್ದೆವು. ಇದು ಒಂದು ರೀತಿಯ ವೈದ್ಯಕೀಯ ರಂಗದಲ್ಲಿ ಇನ್ನೂ ನಡೆದುಬಂದಿರುವ ಸಂಪ್ರದಾಯ. ಆದರೆ, ಈಗ ಕಳೆದ ಒಂದೈದು ವರ್ಷಗಳಲ್ಲಿ ನನಗೆ ಗೊತ್ತಿಲ್ಲದೇ ಆಗಿರುವ ಬೆಳವಣಿಗೆಯೆಂದರೆ ಗಂಡಸರು ರೋಗಿಗಳಿಗೂ ನಾನು ಹರ್ನಿಯಾ ಪರೀಕ್ಷೆ ಮಾಡಬೇಕಾದರೆ ಅಥವಾ ಯಾವುದೇ ಗುಪ್ತಾಂಗಗಳ ಪರೀಕ್ಷೆ ಮಾಡಬೇಕಾದರೂ ಪರೀಕ್ಷಾ ಕೊಠಡಿಯಲ್ಲಿ ಇನ್ನೊಬ್ಬ ವ್ಯಕ್ತಿ ಇದ್ದೇ ಇರುತ್ತದೆ. ಈ ವ್ಯಕ್ತಿ ಗಂಡಸೂ ಆಗಿರಬಹುದು, ಹೆಂಗಸೂ ಆಗಿರಬಹುದು. ಸಂಕೋಚ ಅಥವಾ ಖಾಸಗೀತನಗಳು ಲಿಂಗ ಪರಿಧಿಗಳನ್ನು ಮೀರಿದೆ. ಗಂಡು ಗಂಡನ್ನು ಪರೀಕ್ಷೆ ಮಾಡಲಿ, ಹೆಣ್ಣು ಹೆಣ್ಣನ್ನು ಪರೀಕ್ಷೆ ಮಾಡಲಿ ಯಾವಾಗ ಪ್ರೈವೆಸಿಯ ಲಗ್ಗೆ ಮೀರುತ್ತದೋ ಅಲ್ಲಿ ಇನ್ನೊಬ್ಬ ವ್ಯಕ್ತಿ- ರೋಗಿಗೂ ವೈದ್ಯನಿಗೂ ಸಾಕ್ಷಿಯಾಗಿ ನಿಲ್ಲಬೇಕಾಗುತ್ತದೆ.ಆದರೆ, ಇಲ್ಲಿ ನಾವು ನಮಗೆ ಸಾಕ್ಷಿಗಳನ್ನು, ಶ್ಯಾಪರೋನ್‌ಗಳನ್ನು ಬಳಸುವುದು ಯಾರು ಯಾರಿಗೂ ಸಾಂತ್ವನ ಕೊಡಬೇಕಾಗುವ ಕಾರಣಕ್ಕಲ್ಲ ಎನ್ನುವುದು ವಿಷಾದದ ಸಂಗತಿ. ಇಲ್ಲಿ ಈ ವ್ಯಕ್ತಿ ನಾನು ನನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದೀನಾ ಇಲ್ಲವಾ ಎನ್ನುವುದನು ಗಮನಿಸಲು ಮಾತ್ರ ಕಾವಲು ನಿಂತಿರುತ್ತಾನೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ ನಾನು ಪರೀಕ್ಷೆ ಮಾಡುವ ರೋಗಿ ನಾಳೆ ಈ ವೈದ್ಯ ಅನವಶ್ಯಕವಾಗಿ ನನ್ನ ಮೇಲೆ ಕೈಯಾಡಿಸಿದ ಎಂದು ಕೋರ್ಟಿನಲ್ಲಿ ಕೇಸುಹಾಕಿದಲ್ಲಿ ‘ಅದು ಹಾಗಲ್ಲ. ಈ ವೈದ್ಯ ಮಾಡಿದ್ದು ಎಲ್ಲವೂ ವೈದ್ಯಕೀಯ ಪರೀಕ್ಷೆಯ ಪರಿಮಿತಿಯಿಒಳಗೇ ಇತ್ತು ಎಂದು ನನ್ನನ್ನು ಕೆಲವೊಂದು ಪುಂಡ ರೋಗಿಗಳಿಂದ ಕಾಪಾಡಲು ಮಾತ್ರ ನಿಂತಿರುತ್ತಾರೆ. ಇದು ವೈಸವರ್ಸಾ ಕೂಡ. ಕೆಲ ಪುಂಡ ಡಾಕ್ಟರುಗಳೂ ಇರುತ್ತಾರಲ್ಲವಾ?
ಹೆಂಗಸರು ‘ನನಗೆ ಲೇಡಿ ಡಾಕ್ಟರು ಬೇಕು’ ಎಂದು ಕೇಳಿದರೆ, ಆ ವಾಕ್ಯ ಅರ್ಥವನ್ನೇ ಕಳಕೊಂಡಿದೆ.
* * *
ಈ ಬಾರಿಯ ನೀನಾಸಮ್ ಶಿಬಿರದಲ್ಲಿ ತಿರುಗಾಟದ ನಾಟಕ ‘ವೆನಿಸಿನ ವ್ಯಾಪಾರ’ ದಲ್ಲಿ ಮುಖ್ಯಪಾತ್ರಗಳಾದ ಆಂಟೋನಿಯೋ ಮತ್ತು ಬೆಸಿನಿಯೋ ಮಧ್ಯೆ ಸಲಿಂಗ ಸಂಬಂಧ ಇರಬಹುದು ಎಂಬ ಒಂದು ಅಂಶವನ್ನು ನಾಟಕದಲ್ಲಿ ಸೂಚ್ಯವಾಗಿ ತೋರಿಸಿದ್ದು ಮಾರನೆಯ ದಿನ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಶೇಕ್ಸ್‌ಪಿಯರನ
ಕಾಲದಲ್ಲಿ ಸಲಿಂಗ ಸ್ನೇಹ, ಕಾಮ ಶಿಕ್ಷಾರ್ಹ ಅಪರಾಧವಾಗಿದ್ದರಿಂದ ಶೇಕ್ಸ್‌ಪಿಯರಿನ ನಾಟಕದ ಪಠ್ಯವನ್ನು ಈ ರೀತಿ ಅರ್ಥೈಸುವುದು, ವಿರೂಪಗೊಳಿಸುವುದು ತಪ್ಪು ಎಂಬ ಅಭಿಪ್ರಾಯವೂ ಅಲ್ಲಿ ಬಂತು. ಇದೇ ನಾಟಕವನ್ನು ಆಧರಿಸಿ ೨೦೦೬ರಲ್ಲಿ ಬಂದ ‘ಮರ್ಚಂಟ್ ಆಫ್ ವೆನಿಸ್’ ಚಲನಚಿತ್ರದಲ್ಲಿಯೂ ಈ ಸಲಿಂಗಿ ಸಂಬಂಧದ ಎಳೆ ಇನ್ನೂ ಗಾಢವಾಗಿಯೇ ಇದೆ. (ಶೇಕ್ಸ್ಪಿಯರನ ಕಾಲದಲ್ಲಿ ಪ್ಲೆಟೊನಿಕ್ ಗಂಡು, ಗಂಡಿನ ಸಂಬಂಧ (ಲೈಂಗಿಕಾರ್ಷಣೆಯಿಲ್ಲದ) ಬೇರೆಲ್ಲ ಸಂಬಂಧಗಳಿಗಿಂತ ಪವಿತ್ರವಾದದ್ದು.ಆ ಹಿರಿಯರ ಮಾತಿಗೆ ಗೌರವಯುತವಾಗಿಯೇ ಅಸಮ್ಮತಿಯನ್ನು ಸೂಚಿಸುವ ಕಾಲವಿದು.
ನಾಗರಿಕತೆಯ ಪರಿಣಾಮವೋ, ಅಥವಾ ಇನ್ನೇನೋ ‘ಕೇವಲ ಸ್ನೇಹ’ ಎನ್ನುವುದು ಬರೇ ಇದ್ದು ತೋರಿಸಲಾಗದು, ಅದನ್ನು ಪುರಾವೆ ಸಮೇತ ತೋರಿಸಬೇಕಾದ ಸಂದರ್ಭ ನಮ್ಮ ಮುಂದೆ ಇದೆ. ಕಾಲೇಜಿನಲ್ಲಿದ್ದಾಗ ಒಂದೇ ಮಂಚದಲ್ಲಿ ಮಲಗಿಯೂ ಉಳಕೊಳ್ಳುತ್ತಿದ್ದ ‘ಕೇವಲ ಸ್ನೇಹ’ ಈಗ ಅಷ್ಟು ಸುಭವಾಗಿ ದೊರೆಯುವುದಿಲ್ಲ. ಎಲ್ಲ ಸಂಬಂಧಗಳಿಗೂ ಲೈಂಗಿಕ ಲಗತ್ತಿತ್ತು ಈ ನಾಗರೀಕತೆ ಅಪ್ಪಟ ಗೆಳೆತನವನ್ನು ಹಾಳುಮಾಡಿಹಾಕಿದೆ. ಅದಕ್ಕೆ ಲಿಂಗ ಪರಿಧಿಯಿಲ್ಲ ಎನ್ನುವುದನ್ನು ನಾವು ಜಾಗರೂಕರಾಗಿ ಗಮನಿಸಬೇಕಾಗಿದೆ. ನಾಲ್ವರು ಒಂದೇ ಕೋಣೆಯಲ್ಲಿ ಮುಜುಗರವಿಲ್ಲದೇ ಮಲಗಬಹುದೇನೋ, ಇಬ್ಬರು ಮಾತ್ರ ಒಂದು ಕೋಣೆಯಲ್ಲಿ ಮುಜುಗರವಿಲ್ಲದೇ ಮಲಗಲಾಗದ (ಒಂದೇ ಲಿಂಗದ ಅಥವಾ ವಿರುದ್ಧಲಿಂಗದ) ಕಾಲ ಬಂದಿದೆ.
* * *
ಕೆಲವು ವರ್ಷಗಳ ಹಿಂದೆ ನನ್ನ ಜತೆಗೆ ಕೆಲಸ ಮಾಡುತ್ತಿದ್ದ ನನ್ನ ಜತೆಕೆಲಸಗಾರರೊಬ್ಬರು ಕೆಲಸ ಬಿಟ್ಟು ಬೇರೊಂದು ಕೆಲಸಕ್ಕೆ ಹೋದಾಗ ನಾನು ಅವರನ್ನು ಡ್ರಿಂಕಿಗೆಂದು ಆಹ್ವಾನಿಸಿದ್ದೆ. ಬಹಳ ಮುಜುಗರದಿಂದ ಬರಲು ಒಪ್ಪಿಕೊಂಡಿದ್ದರು. ಬರೇ ಜೋಡಿಗಳಿದ್ದ ರೆಸ್ಟುರೆಂಟಿನಲ್ಲಿ ನಾವಿಬ್ಬರೇ ಗಂಡಸರು. ಎರಡು ಡ್ರಿಂಕು, ಊಟವಾದ ನಂತರ ಮನೆಗೆ ಹೋಗುವ ಮೊದಲು ಆತ ‘ತಪ್ಪು ತಿಳಿಯಬೇಡ ಗುರು, this pretty much amounts to date.’ ಎಂದು ಹೇಳಿ ಹೋಗಿದ್ದರು.
ಪೇಯ, ಊಟ ಮತ್ತು ಮೂವಿ ಯೆಂದರೆ ಅದೊಂದು ಡೇಟ್ ಎನ್ನುವ ಕ್ಲೀಶೆಯ ಕಲ್ಪನೆಯನ್ನು ನಾಗರಿಕತೆ ನಮಗೆ ಕಲಿಸಿದೆ. ಪಕ್ಕಪಕ್ಕದಲ್ಲಿ ದರ್ಶಿನಿಯಲ್ಲಿ ಕೂತು ತಿಂಡಿ ತಿನ್ನುವ ಕಾಲ ಹೊರಟು ಹೋಗುತ್ತಾ ಇದೆ. ಮೂರು ವರ್ಷದ ಗಂಡು ಮಗು ಬೊಂಬೆಯ ಜತೆ ಆಟ ಆಡಿದರೆ, ಪಿಂಕುಪಿಂಕಾದ ಬಟ್ಟೆ ಹಾಕಿದರೆ ಹೌಹಾರಿಹೋಗುವ ಅಮ್ಮಂದಿರುಗಳನ್ನು ಈ ಕಾಲ ತಯ್ಯಾರು ಮಾಡುತ್ತಲಿದೆ. ‘ಬ್ರೇವ್ ಎನಫ್ ಟು ವೇರ್ ಪಿಂಕ್’ ಎನ್ನುವ ಟಿ ಶರ್ಟುಗಳು ಲೈಂಗಿಕ ಲಿಬರೇಷನ್ನಿನ ಚಿಹ್ನೆಗಳಾಗಿ ಕಾಣುತ್ತಲಿವೆ.ಇಲ್ಲಿ ಹೆಂಗಸರೇ ಇನ್ನೂ ಕೊಂಚ ಅದೃಷ್ಟವಂತರು. ಮದುವೆ ಮನೆಯಲ್ಲಿ ಜತೆಗೆ ಕೂತು ಮೆಹಂದಿ ಮಾಡಿಕೊಳ್ಳಬಹುದು, ಪರಸ್ಪರರ ಉಗುರಿಗೆ ಬಣ್ನ ಹಚ್ಚಿಕೊಳ್ಳಬಹುದು, ಲಿಪ್‌ಸ್ಟಿಕ್ ಶೇಡನ್ನು ಬದಲಿಸಿಕೊಳ್ಳಬದು, ಕಿಟ್ಟಿಪಾರ್ಟಿಗಳಲ್ಲಿ ಮಾರ್ಟಿನಿಯ ಗ್ಲಾಸುಗಳನ್ನು ಲಿಪ್‌ಸ್ಟಿಕ್ ಗುರುತನ್ನು ಒರೆಸಿ ಬದಲಿಸಿಕೊಳ್ಳಬಹುದು. ಈಗಲೂ ಅವೆಲ್ಲ ಸಲ್ಲುತ್ತದೆ. ಹೆಣ್ಣು ನನ್ನ ಗರ್ಲ್‌ಫ್ರೆಂಡಿನ ಜತೆ ಶಾಪಿಂಗ್ ಹೋಗಿದ್ದೆ ಎಂದು ಹೇಳಿದರೆ ಅಲ್ಲಿ ಇನ್ನೂ ಆಕೆ ಸ್ನೇಹಿತಳಿದ್ದರೂ ಇರಬಹುದು ಎಂಬ ಅನುಮಾನ ಕೊಂಚವಾದರೂ ಉಳಕೊಳ್ಳುತ್ತದೆ, ಆದರೆ ಒಬ್ಬ ಗಂಡು ಯಾರನ್ನಾದರೂ ತೋರಿಸಿ ‘ಈತ ನನ್ನ ಬಾಯ್‌ಫ್ರೆಂಡ್ ‘ ಎಂದಲ್ಲಿ ಅಲ್ಲಿ ಲೈಂಗಿಕವಲ್ಲದ ಬೇರೆ ಯಾವ ಸಂಬಂಧಕ್ಕೂ ಆಸ್ಪದವೇ ಕೊಡದೇ ಇರುವ ಕಾಲ ಬಂದಿದೆ.
ನಾಲ್ಕು ಜನ ಗಂಡಸರು ಸೇರಿದ ತಕ್ಷಣ ಬಿಯರು ಕುಡಕೊಂಡು, ಇಲ್ಲವೇ ಎಲೆಯಡಿಕೆ ಹಾಕಿಕೊಂಡು ಡರ್ರಂತ ತೇಗಿಯೋ ಹೂಸಿಯೋ ಇರದೆ, ಇಸ್ಪೀಟಾಟದ ಕಾರ್ಡುಗಳನ್ನು ತೆಗೆಯದಿದ್ದರೆ ಅದು ಗಂಡು ಪ್ರಪಂಚದ ಬಾಂಡಿಂಗೇ ಅಲ್ಲ. ಹಾಗಿರುವಾಗ ಯಾರೇ ಒಬ್ಬ ತನ್ನ ಇನ್ನೊಬ್ಬ ಗೆಳೆಯನನ್ನು ಕಂಡು ‘ಐ ಲವ್ ಯು, ಮ್ಯಾನ್’ ಎಂದು ಯಾವ ಲೈಂಗಿಕ ಲೇಬಲ್ಲಿಲ್ಲದೇ ಹೇಳುವುದು ನಿಜಕ್ಕೂ ಧಾಡಸೀ ಕೆಲಸವೇ,






Well written. Will speak to you later. I cannot type kannada from my ipad.
samayochita lekhana !
ಹೌದು, ಮೋಹನಸ್ವಾಮಿಯ ಬಗ್ಗೆ ತಕ್ಷಣ ಪ್ರತಿಕ್ರಿಯಿಸುವುದು ಸ್ವಲ್ಪ ಕಷ್ಟದ ಕೆಲಸ. ಹೇಗೆ react ಮಾಡಬೇಕೆಂದು ಗೊತ್ತಾಗುವುದಿಲ್ಲ. ಮೊದಲ ಸಮಸ್ಯೆಯೆಂದರೆ ಈ ಲೋಕಕ್ಕೆ ನಾವು ಹೊಸದಾಗಿ ತೆರೆದುಕೊಂಡಿರುವುದು. ಇನ್ನೂ ಹಾಗಂದರೇನೆಂಬುದು ಗೊತ್ತಿಲ್ಲದ ಸಮಸ್ಯೆ, ನನ್ನಂಥ ಕೆಲವರಿಗೆ. ಏನೋ ಕುತೂಹಲ, ಆದರೆ ಹೊರಗೆ ರಾಜಾರೋಷವಾಗಿ ಹೇಳಲಾರರು, ಯಾರನ್ನೂ ಕೇಳಲಾರರು. ನಾವು ಚಿಕ್ಕವರಿದ್ದಾಗ ನಮ್ಮ ಶಾಲೆಯ ಹತ್ತಿರ ಗಂಡು ಧ್ವನಿಯ, ಹೆಣ್ಣುವೇಷದ, ಏನೆನ್ನಬೇಕೋ ಅವರಿಗೆ, ಅಂಥವರು ಕುಳಿತಿರುತ್ತಿದ್ದರು, ಸಣ್ಣಪುಟ್ಟ ತಿಂಡಿ ಪದಾರ್ಥ, ತರಕಾರಿ ಮಾರುತ್ತ. ನಮಗೇನೂ ಜಾಸ್ತಿ ಕುತೂಹಲವಿರಲಿಲ್ಲ. ಬೆಳಗಾವಿಯವರಿಗೆ ಆಗೆಲ್ಲ, ಸವದತ್ತಿ ಯಲ್ಲಮ್ಮನ ಇಂಥ ಭಕ್ತರ ಮುಖಾಮುಖಿ ಮೇಲಿಂದ ಮೇಲೆ ಆಗುತ್ತಿತ್ತು. ಅವರು ದೇವರಿಗೆ ಬಿಟ್ಟವರು ಎಂದಷ್ಟೇ ಏನೋ ನಮಗೆ ತಿಳಿದಿತ್ತು. ಬರುಬರುತ್ತ ಅವರ ಸಂಖ್ಯೆ ಕಡಿಮೆಯಾಯಿತು. ಉತ್ತರ ಭಾರತದ ಕಡೆಗೆ ರೈಲಿನಲ್ಲಿ ಸೆಕೆಂಡ್ ಕ್ಲಾಸಿನಲ್ಲಿ ಪ್ರವಾಸ ಹೊರಟರೆ, ಉತ್ತರಕ್ಕೆ ಹತ್ತಿರವಾದಂತೆ ಇವರು ರೈಲು ಹತ್ತುತ್ತಾರೆ, ದುಡ್ಡು ಕೀಳುತ್ತಾರೆ, ಹಾಗಾಗಿ ಸಣ್ಣ ಭಯವೊಂದು ಮನೆ ಮಾಡಿತ್ತು, ನನ್ನಲ್ಲಿ ಅವರ ಬಗ್ಗೆ. ಭೈರಪ್ಪನವರ “ಆವರಣ” ಕಾದಂಬರಿ ಓದಿದ ಮೇಲೆ ಭಯದ ಸ್ಥಾನದಲ್ಲಿ ಸಹಾನುಭೂತಿ ಮೂಡಿತು, ಸಹನೆಯಿಂದ ನೋಡುವುದನ್ನು ಕಲಿತಾಯಿತು. ಈಗ ಇನ್ನೂ ಎಷ್ಟೋ ಲೇಖನಗಳಲ್ಲಿ, ಅವರಿವರ ಬಾಯಿಯಿಂದ ತಿಳಿದು ಅವರ ಬಗ್ಗೆ ಅವರ ಸಮಸ್ಯೆಗಳ ಬಗ್ಗೆ ವಿಚಾರ ಮಾಡುವಂತಾಗಿದೆ. ಮೋಹನಸ್ವಾಮಿಯಲ್ಲಿ ಇನ್ನೂ ಅನೇಕ ಕೋನಗಳಿಂದ ಅವರ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಕಾರ್ಪೋರೇಟ್ ಜಗತ್ತಿನಲ್ಲಿ ಒಳ್ಳೆಯ ಸಂಬಳ, ಸವಲತ್ತುಗಳೊಂದಿಗೆ ದುಡಿಯುವ ಯುವಕರ ವ್ಯಥೆಗಳೂ ಇವೆ. ಈಗೀಗ ನನ್ನಂಥವರಿಗೆ ಇವರ ಬಗ್ಗೆ ಅರಿವು ಮೂಡುತ್ತಿದೆ. ಆ ನಿಟ್ಟಿನಲ್ಲಿ ವಸುಧೇಂದ್ರರ ಕಥಾಸಂಕಲನ “ಮೋಹನಸ್ವಾಮಿ” ಒಳ್ಳೆಯ ಕೆಲಸ ಮಾಡಿದೆ, eye-opener ಥರಾ.
ಮೋಹನಸ್ವಾಮಿ ಚೆನ್ನಗಿದೆ. ಲೇಖನ ಚೆನ್ನಾಗಿದೆ. ಆದರೆ ಭಾರತದಲ್ಲಿ ಈಗಲೂ ಲೈಂಗಿಕತೆಯ ಭಾವ ಎನ್ನಿಸದೆ ಗಂಡ್ಸರಿಬ್ಬರು ಹೋಟೆಲಿನಲ್ಲಿ ಚಹಾ ಕುಡಿಯಬಹುದು. ಹೋಟೆಲು ರೂಮುಗಳ್ನ್ನು ಹಂಚಿಕೊಳ್ಳಬಹುದು ‘ಬಾಯ್ ಫ್ರೆಂಡ್’ ಅನ್ನಲು ಸಾಡ್ಯವಾಗದೇ ಇದ್ದರೂ. girIsha
ಕೆಲ ವರ್ಷಗಳ ಹಿಂದೆ ನನ್ನ ಸಹೋದ್ಯೋಗಿಯೊಬ್ಬರು (ಬಿಳಿಯ, ಪಾಶ್ಚಾತ್ಯ) ಭಾರತದ ಒಂದು ವಿಶ್ವ ವಿದ್ಯಾನಿಲಯ ಏರ್ಪಡಿಸಿದ್ದ ಕಾನ್ಫರೆನ್ಸ್ ನಲ್ಲಿ ಭಾಗವಹಿಸಲು ಹೋಗಿದ್ದರು, ಹೋಗುವ ಮುನ್ನ ನಾನು ಭಾರತೀಯಳು ಎಂದು ನನ್ನ ಬಳಿ ಹೋಗುವ ಸಮಾಚಾರವನ್ನು ಹಂಚಿಕೊಂಡಿದ್ದರು. ಕೆಲ ದಿನಗಳ ಬಳಿಕ ಅವರನ್ನ ನೋಡಿದಾಗ, ಭಾರತಕ್ಕೆ ಅವರ ಮೊತ್ತ ಮೊದಲ ಭೇಟಿ ಹೇಗಿತ್ತು, ಕಾನ್ಫರೆನ್ಸ್ ಹೇಗೆ ನಡೆಯಿತು, ಅವರ ಸಂಶೋಧನಾ ವಿಷಯದಲ್ಲಿ ಇತರೆ ಭಾಗಿಗಳು ಆಸಕ್ತಿ ತೋರಿದರಾ ಎಂದೆಲ್ಲಾ ಕೇಳಿದೆ. ಅವರು ಹೇಳಿದ ಮೊದಲ ಮಾತು “ಓಹ್ ಐ ಡೋಂಟ್ ವಾಂಟು ಟಾಕ್ ಅಬೌಟ್ ಇಟ್, ಇಟ್ ವಾಸ್ ಟೆರಿಬಲ್ ” ಎಂದು. ಮುಖದಲ್ಲಿ ಏನೋ ಆತಂಕ, ಗಂಭೀರತೆ. ಇದ್ಯಾಕಪ್ಪಾ ಹೀಗೆ ಎಂದೆನಿಸಿ, ಏನಾಯಿತು ಎಂದು ಕೇಳಿದರೆ ಹತ್ತಿರವೇ ಇದ್ದ ಕಿಚನೆಟ್ ಗೆ ನಡೆದು ಮೆಲ್ಲನೆ ದನಿಯಲ್ಲಿ ಹೇಳಿಕೊಂಡರು – ಕಾನ್ಫರೆನ್ಸ್ ಮೊದಲ ದಿನದ ಅನುಭವ, ವಿಷಯಗಳ ಮಂಡನೆ ಚೆನ್ನಾಗಿತ್ತು, ಪಾಶ್ಚಿಮಾತ್ಯ ವಿಶ್ವ ವಿದ್ಯಾನಿಲಯ ಗಳಂತೆ ಅಲ್ಲ, ಸ್ವಲ್ಪ ಭಿನ್ನ. ಆದರೆ ಆ ಟೆರಿಬಲ್ ಅನುಭವ ಆಗಿದ್ದು ರಾತ್ರಿಯ ಭೋಜನ ಮುಗಿಸಿ, ತಮಗೆ ಕೊಟ್ಟಿದ್ದ ಅಕಾಮಡೆಶನ್ ಗೆ ಹೋದಾಗ. ಅಲ್ಲಿ ಟ್ವಿನ್ ಶೇರ್ ಅಂತ ಹೇಳಿ ಒಂದು ಡಬಲ್ ಮಂಚಕ್ಕೆ ಇಬ್ಬರು ಎಂದು ಇತ್ತು. ಅಪ್ರತಿಭನಾದೆ. ಆ ಕ್ಷಣಕ್ಕೆ ಮತ್ತೊಬ್ಬನ ಪ್ರವೆಶವಾಯಿತು. ನಾನು ಅವನನ್ನು ಕೇಳಿದೆ “ನಿನಗೆ ಈ ಟ್ವಿನ್ ಶೇರ್ ಡಬಲ್ ಮಂಚದ ವಿಷಯ ತಿಳಿದಿತ್ತಾ?” ಆವ ಹೇಳಿದ ” ನೋ. ವೆಲ್ ದೇರ್ ಇಸ್ ನಥಿಂಗ್ ರಾಂಗ್. ಐ ಸ್ಲೀಪ್ ಆನ್ ದಟ್ ಸೈಡ್ ಯು ಸ್ಲೀಪ್ ದಿಸ್ ಸೈಡ್ ” ಅಂತ ಹೇಳಿ ಬಾತ್ ರೂಂ ಗೆ ನಡೆದ. ನನಗೆ ಇದು ನಂಬಲಾರದ ವಿಷಯ, ಒಂದು ಜೋಕ್ ಎನಿಸಿತು. ಒಂದೇ ಹಾಸಿಗೆಯಲ್ಲಿ ಮತ್ತೊಬ್ಬ ಅಪರಿಚಿತ ಗಂಡಸಿನ ಪಕ್ಕ ಮಲಗುವುದು ಇಂಪಾಸಿಬಲ್ ಎಂದು ಹೊರಹೋಗಿ ಕಾನ್ಫರೆನ್ಸ್ ಏರ್ಪಾಡುದಾರರನ್ನ ಬೇರೆ ರೂಂ ಇದೆಯೇ ಎಂದು ಕೇಳಿ, ಇಲ್ಲವೆಂದು ಖಾತ್ರಿಯಾದಾಗ ನನಗುಳಿದಿದ್ದು ಒಂದೇ ದಾರಿ. ತಕ್ಷಣವೇ ನನ್ನ ಬ್ಯಾಗ್ ಪ್ಯಾಕ್ ಮಾಡಿಕೊಂಡು, ಬಟ್ಟೆ ಬದಲಾಯಿಸಿ, ಒಂದು ಘಂಟೆ ಅವಧಿಯ ದೂರದಲ್ಲಿದ್ದ ನಗರಕ್ಕೆ ಟ್ಯಾಕ್ಸಿ ಮಾಡಿಕೊಂಡು ಹೋದೆ. ಅಲ್ಲಿ ಹೋಟೆಲ್ನಲ್ಲಿ ತಂಗಿ ಮರು ದಿನ ವಾಪಸ್ ಕಾನ್ಫರೆನ್ಸ್ ಗೆ ಹೋದೆ. ಆ ದಿನ ರಾತ್ರಿ ಪುನಃ ಮತ್ತದೇ ಹೋಟೆಲ್ ಗೆ ಹೋಗಿ ರಾತ್ರಿ ಕಳೆದು ಮೂರನೇ ದಿನ ವಾಪಸ್ ವಿಮಾನ ಹತ್ತಿದೆ.
ನಾನು ಕೇಳಿದೆ “ಆ ಮತ್ತೊಬ್ಬ ಟ್ವಿನ್ ಶೇರ್ ವ್ಯಕ್ತಿ ಆ ವ್ಯವಸ್ಥೆಯ ಬಗ್ಗೆ ಏನೊ ಮುಜುಗರ ಪಟ್ಟುಕೊಳ್ಳಲಿಲ್ಲವಾ?” “ಇಲ್ಲ. ಆತ ಬಹಳಾ ನಾರ್ಮಲ್ ಆಗಿದ್ದ, ವಿ ಆರ್ ಯುಸೆಡ್ ಟು ಬಿಗ್ ಫ್ಯಾಮಿಲಿ ಲೈಫ್ ಅಂಡ್ ಮೆನಿ ಪೀಪಲ್ ಇನ್ ಅವರ್ ಹೋಂ ಅಂದ, ಅವನು ಇಂಡಿಯನ್ ಆಗಿದ್ದ. ಇಟ್ ವಾಸ್ ಎ ಬಿಗ್ ಕಲ್ಚರಲ್ ಲೆಸೆನ್ ಫಾರ್ ಮಿ” ಎಂದರು.
ಬರುಬರುತ್ತಾ ನಾವು ಹೆಚ್ಚು ಹೆಚ್ಚು ನಮ್ಮದೇ ನಿರ್ಮಿತ ಬಾಕ್ಸ್ ಗಳಲ್ಲಿ ನಮ್ಮನ್ನು ಇರಿಕಿಸಿಕೊಂಡು ಆ ಇಕ್ಕಟ್ಟಿನಲ್ಲಿ ಉಂಟಾಗುವ ಅನೇಕ ದ್ವಂದ್ವಗಳ ಜೊತೆ ಪಂಚ್ ಬ್ಯಾಗ್ ಬಾಕ್ಸಿಂಗ್ ನಡೆಸುತ್ತೀವಿ. ಒಂದು ಕಡೆ ನಮ್ಮ ಸೆಕ್ಷುಆಲಿಟಿ ಬಗ್ಗೆ, ಸೆಕ್ಷುಅಲ್ ಆಯ್ಕೆಗಳ ಬಗ್ಗೆ ಹೆಚ್ಚುತ್ತಿರುವ ಅರಿವು ಮತ್ತು ಹೋರಾಟ, ಇನ್ನೊಂದು ಕಡೆ ಲೇಬಲ್ ರಹಿತ ಮಾನವ ಸಂಬಂಧಗಳು ಬೆರಳುಗಳ ಮಧ್ಯೆ ಸೋರಿ ಹೋಗುತ್ತಿರುವ ವಾಸ್ತವ. ಕೆಲ ವರ್ಷಗಳ ಹಿಂದೆ ನನ್ನ ಮಗ ನೆನಪಿಸಿದ್ದ – “ಅಮ್ಮ, ನನ್ನ ಪ್ರತಿ ವಸ್ತುವಿಗೂ ಲೇಬಲ್ ಹಚ್ಚು. ಇಲ್ಲವಾದರೆ ನನ್ನ ಟೀಚರ್ ಅದನ್ನು ಒಪ್ಪುವುದಿಲ್ಲ. ನನ್ನ ವಸ್ತು ಕಳೆದು ಹೋಗುತ್ತದೆ.”
ಹಾಗೆ ನಾನಾ ತರಹದ ಲೇಬಲ್ ಸುರಕ್ಷೆ ಇಲ್ಲವಾದರೆ, ಅದು ಕಾಣದಿದ್ದರೆ, ನಾವು ಕಳೆದು ಹೋಗುವ ದಿನಗಳು ನಮ್ಮವು. ಕೆಲ ಲೇಬಲ್ ಗಳು ಬೇಕು, ಕೆಲವು ಬೇಡ – ಕೊನೆಗಾಣದ ದಾರಿ. ಒಂಥರಾ ಅವಸ್ಥೆ. ಕಳೆದುಹೋಗದ ನಮ್ಮ ಪ್ರಯತ್ನವೆಂದರೆ ಅವಸ್ಥೆಗಳನ್ನು ಪ್ರಶ್ನಿಸುವ ನಮ್ಮ ಧೈರ್ಯ, ಆ ಬಾಕ್ಸ್ ಗಳನ್ನ ಒಪ್ಪಿಕೊಳ್ಳದೆ ನಮ್ಮದೇ ಹೊಸ ಬದುಕುಗಳನ್ನು ನಿರ್ಮಿಸಿಕೊಳ್ಳುವ ಛಾತಿ, ಬೇಕಿರುವ ಎದೆಗಾರಿಕೆ.
ಅಸ್ಪೃಶ್ಯ ಮೋಹನಸ್ವಾಮಿಯನ್ನು ಸ್ಪರ್ಶಿಸಿದ್ದಕ್ಕೆ ಧನ್ಯವಾದಗಳು ಗುರು. ಲೇಖನ ನಮ್ಮನ್ನು ಮತ್ತೊಂದು ಆಯಾಮದಿಂದ ಚಿಂತಿಸುವದಕ್ಕೆ ಪ್ರೇರಣೆ ನೀಡುತ್ತದೆ.