ವಸುಂಧರಾ ಕದಲೂರು
ಮಾರುಕಟ್ಟೆ ಬೀದಿಯಲಿ; ಆಳೆತ್ತರದ
ಮಾಡೆಲ್ಲಿನ ಗೊಂಬೆಯುಡುಗೆ
ಚೆಂದ ಕಂಡರೆ ಆಕೆ ನಿಲ್ಲುತ್ತಾಳೆ
ತನಗಾಗಿಯೇ ಕೊಳ್ಳಲು.
‘ಬೇರೆ ಪೀಸ್ ಇರುವುದೇ…?’
ಹುಸಿ ಹುಡುಕಾಟ; ‘ಇದು ನೋಡಿ
ಲೇಟೆಸ್ಟು’ ನವೀನ ಫ್ಯಾಶನ್ನು
ಹೊಸ ಡಿಸೈನು ಬಣ್ಣ – ಫ್ಯಾಬ್ರಿಕ್ಕು
ಬಗೆಬಗೆ ಬಟ್ಟೆಗಳತ್ತ ಚಿತ್ತ ಸೆಳೆಯಲು
ಚಡಪಡಿಸುತ್ತಾರೆ..

ಗೊತ್ತಾಕೆಗೆ ಇರುವುದು ಅದೊಂದೇ
‘ಸಿಂಗಲ್ ಪೀಸ್!’ ಹಕ್ಕಿನಿಂದ
ಕೇಳುತಾಳೆ ‘ನನಗೆ ಅದೇ ಬೇಕು’
ಅಲ್ಲೇ ಕಳಚಿಕೊಡಲು ಸಂಬಳದ
ಹುಡುಗನಿಗೆ, ‘ಬಿಚ್ಚಿ ಕೊಡು’ ಎನಲು
ಗ್ರಾಹಕ’ಳ’ ಮುಂದೆ ಮಾಲೀಕನಿಗೆ
ಲಜ್ಜೆ ಅಡ್ಡಿ.
ತೊಗಲಿಗೆ ಶೀಲದ ಮೌಲ್ಯ
ತಾಗಿಸದಾಕೆ ‘ತಡವಾಗುತಿದೆ
ಬೇಗ ತೆಗೆದುಕೊಡಿ, ಬೆಲೆಯೆಷ್ಟು?’
‘ಕಾರ್ಡ್, ಪೇಟಿಎಂ, ಗೂಗಲ್
ಪೇ ನಡೆದೀತೇ’ ವಿಚಾರಿಸುತಾಳೆ.

ಕಣ್ಣು- ಮಿದುಳು- ಮನಗಳೊಳಗೆ
ಹೆಣ್ಣುಗಳ ಬತ್ತಲು ಮಾಡುವವರು
ದಿಢೀರು ಗೊಂಬೆಯೊಂದರ ಮಾನ
ಹರಾಜಿಗೆ ಹೆದರಿ ನಾಚುತ್ತಾರೆಯೇ?!
ನಾಕು ಬದಿ ಕನ್ನಡಿಯ ಟ್ರಯಲ್
ರೂಮಿನೊಳಗೆ ಗೊಂಬೆ ವಸ್ತ್ರಾಪಹರಣ ಮಾಡುತಾ ಅವಳನ್ನೇ
ಕನವರಿಸುತಾ ನಾಲಗೆಯಿಂದ ತುಟಿ ಸವರುತ್ತಾರೆ..






0 Comments