ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಂಧರಾ ಕದಲೂರು ಕವಿತೆ- ‘ಹೆಮ್ಲಾಕ್’…

ವಸುಂಧರಾ ಕದಲೂರು

ಅಲೆಕ್ಸಾಂಡರ್ ದಿ ಗ್ರೇಟ್
ಹಿಟ್ಲರ್ ದಿ ಗ್ರೇಟ್
ವಾರ್ ದಿ ಗ್ರೇಟ್
ಎನುತಾ ಯುದ್ಧದ ಗೆಲುವಿನ
ಹೆಮ್ಲಾಕ್ ಕುಡಿದು ಬೆಳೆದವರು,
ಗೆದ್ದ ರಾಜರಿಗೆ ಬಗ್ಗಿ ಸಲಾಮು
ಮಾಡಿ, ಉಧೋ ಉಧೋ
ಪರಾಕು ಹೇಳಿ ಗ್ರೇಟ್
ಗ್ರೇಟರ್ ಗ್ರೇಟೆಸ್ಟುಗಳ
ಚಕ್ರವ್ಯೂಹದೊಳಗೆ ಗಿರಕಿ
ಹೊಡೆಯುತಾರೆ

ಈಟಿ ಭರ್ಜಿ ಕತ್ತಿ ಖಡ್ಗಗಳ
ಹೊಸೆದು ಮಸೆದು, ರಣಭೇರಿ
ಹೊಡೆದು ಗಡಗಡಿಸುವ
ರಣಕೇಕೆ ಹಾಕಿ ನೆರೆಯವರ
ವಿನಾಕಾರಣ ಶತ್ರುವಾಗಿ
ಕಾಣುತಾ ಗೆಳೆಯರ
ದೂರ ಮಾಡಿಕೊಳ್ಳುತಾರೆ

ಕದನ ಹೇಡಿಗಳಿಗಲ್ಲ, ವೀರರಿಗೆ
ಎನುವ ಹುಸಿ ನುಡಿಗಳಡಿ
ಅಡಗಿಕೊಳುತಾ ಸಾವು ನೋವಿನ
ಕೊನೆಯನ್ನೇ ತ್ಯಾಗದ ಗೆಲುವೆಂದು
ವ್ಯಾಖ್ಯಾನಿಸುತಾರೆ

ಕರುಣೆ ಕೊಂದು ಶಾಂತಿ ಕದಡಿ
ಪ್ರೀತಿ ನಿರಾಕರಿಸುವ ಯುದ್ಧ
ಯಾವಾಗಲೂ ಸೋಲುತ್ತದೆ
ಕೊಂದು ಗೆದ್ದೆನೆಂಬ ಯಾವ
ಹುಂಬ ಯೋಧನೂ ಸಾವ
ಮೀರಿ ಉಳಿಯಲಾರ..

ಯೇಸು ದಿ ಗ್ರೇಟ್
ಬುದ್ಧ ದಿ ಗ್ರೇಟ್
ಗಾಂಧಿ ದಿ ಗ್ರೇಟ್
ಥೆರೆಸಾ ದಿ ಗ್ರೇಟ್ …
ಎನುವ ಮಂತ್ರ ಮರೆತು
ಕುರುಡುಗಣ್ಣಿನಲಿ ಕಬಂಧ
ಬಾಹುಗಳಲಿ ಬಂದೂಕು
ಬಾಂಬುಗಳ ಬಾಯಿಗೆ ಪ್ರಾಣ
ಉಣಿಸುವವರು
ಯುದ್ಧದ ಅರವಳಿಕೆ
ಮದ್ದು ಚುಚ್ಚಿಸಿಕೊಂಡಿರುತಾರೆ
ಅಂಥವರು ‘ಶಾಂತಿ’ ನೆತ್ತರ
ಗುಂಪಿನವರಿಗೆ ಹೆಮ್ಲಾಕ್
ಕುಡಿಸಲು ಬಯಸುತಾರೆ.

ಅಸಲಿಗೆ ಮತಧರ್ಮಜಾತಿ
ವರ್ಣವರ್ಗಗಳಿಗಾಗಿ
ಮಾಡುವ ಹೋರಾಟವೇ
ಹೆಮ್ಲಾಕ್!

‍ಲೇಖಕರು Admin

4 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading