ವಸಂತ ಬನ್ನಾಡಿ ಹೊಸ ಕವನ ಸಂಕಲನ ಬರುತ್ತಿದೆ..

‘ಕಡಲ ಧ್ಯಾನ’ದ ಕವಿ ಈಗ ಹೊಸ ಸಂಕಲನದೊಂದಿಗೆ ಬಂದಿದ್ದಾರೆ. ಅವರ ಹೊಸ ಸಂಕಲನ ‘ಬೆಳದಿಂಗಳ ಮರ’ ಬರುತ್ತಿರುವ ಸಂದರ್ಭದಲ್ಲಿ ಅವರು ತಮಗೆ ತಾವೇ ಕಂಡುಕೊಂಡ ಮಾತುಗಳು ಇಲ್ಲಿವೆ. ಇದು ಇವರ ಏಳನೆಯ ಕವನ ಸಂಕಲನ. ಎಂದಿನಂತೆ ‘ಶಬ್ದಗುಣ ಪ್ರಕಾಶನ’ ಇದನ್ನು ಪ್ರಕಟಿಸಿದೆ.

ವಸಂತ ಬನ್ನಾಡಿ

‘ಬೆಳದಿಂಗಳ ಮರ’ ನನ್ನ ಏಳನೆಯ ಕವನ ಸಂಕಲನ. ಒಂದು ರೀತಿಯಲ್ಲಿ ನನ್ನ ಐದನೆಯ ಕವನ ಸಂಕಲನವಾದ ‘ಇಗೋ ಅರಿವೆ’ಯಲ್ಲಿ ನಾನು ಹಿಡಿದ ದಾರಿಯ ಮುಂದುವರಿಕೆ ಕೂಡ.

ಅತ್ತ ಕಥನ ಕವನವೂ ಅಲ್ಲದ, ಇತ್ತ ಬಿಡಿಗವನವೂ ಅಲ್ಲದ ದಾರಿ. ನನ್ನ ಈ ಬಗೆಯ ಕವನಗಳಿಗೆ ಒಂದು ಪೂರ್ವ ಮಾದರಿ ಅಂತೇನೂ ಇರಲಿಲ್ಲ.

ಯಾವಾಗಲೋ ಒಮ್ಮೆ ಮಾತ್ರ ನೋಡಿದ, ಎಂದೂ ಸಿಗಲಾರದ ಹೆಣ್ಣೊಬ್ಬಳ ಬಗ್ಗೆ ಕನವರಿಸಿ ಪೆಟ್ರಾಕ೯ ಎಂಬ ಫ್ಲಾರೆನ್ಸ್ ನ ಕವಿ ಬರೆದ ಹಾತೊರೆಯುವಿಕೆ ಮತ್ತು ವಿರಹವೇ ವಸ್ತುವಾಗಿರುವ ಅನೇಕ ಸಾನೆಟ್ಟುಗಳ ಬಗ್ಗೆ ಕೇಳಿದ್ದೇವೆ. ಹದಿನಾಲ್ಕನೇ ಶತಮಾನದ ಈ ಕವಿ ಕ್ರೈಸ್ತ ಮಠ ಒಂದರಲ್ಲಿನ ಪಾದ್ರಿ ಬೇರೆ! ಶೇಕ್ಸ್ಪಿಯರನ ನೂರ ಐವತ್ತನಾಲ್ಕು ಸಾನೆಟ್ಟುಗಳದು ಬೇರೆಯದೇ ಒಂದು ಕಥೆ. ಇಲ್ಲಿನ ಮೊದಲ ನೂರ ಇಪ್ಪತ್ತಾರು ಸಾನೆಟ್ಟುಗಳು ಆತನ ಗೆಳೆಯನನ್ನು ಕುರಿತು ಬರೆದುದಾದರೂ ಆಪ್ತ ಪ್ರೇಯಸಿಯೊಬ್ಬಳ ಕುರಿತು ಬರೆದಂತಿದೆ! ಉಳಿದ ಇಪ್ಪತ್ತಾರು ಸಾನೆಟ್ಟುಗಳಲ್ಲಿ ಬರುವ ಕಪ್ಪು ಚೆಲುವೆ ಯಾರಿರಬಹುದು ಎಂಬ ಬಗ್ಗೆ ಒಂದು ದೀರ್ಘ ಸಂಶೋಧನೆಯೇ ನಡೆದು ಹೋಯಿತು! ಪ್ರೇಮ ಕವಿತೆಗಳ ಕುಲ, ಗೋತ್ರ, ಜಾತಕಗಳ ತನಿಖೆಯ ಬಗ್ಗೆ ಹೀಗೆ ದಂತಕಥೆಗಳೇ ಇವೆ.

‘ಬೆಳದಿಂಗಳ ಮರ’ದ ಪ್ರಕಟಣೆಯ ಹೊತ್ತಿನಲ್ಲಿ ಮೇಲಿನ ರಚನೆಗಳು ನನಗೆ ನೆನಪಾದುವು. ಇಲ್ಲಿ ಇರುವ ಅಷ್ಟೂ ಕವಿತೆಗಳು ಒಂದು ಹೆಣ್ಣು ಜೀವದ ಕುರಿತು ಬರೆದವುಗಳು.

ಪ್ರಾಯಶಃ ಹೋಲಿಕೆ ಅಲ್ಲಿಗೆ ನಿಂತುಬಿಡುತ್ತದೆ. ಒಂದು ದೀರ್ಘ ಸ್ವಗತದಂತಿರುವ ಈ ಕವಿತೆಗಳನ್ನು ನಾನು ದಿನಕ್ಕೊಂದರಂತೆ ಬರೆದೆ.
ತಿರುಗಿ ನೋಡಿದರೆ ಇದು ನನಗೇ ಆಶ್ಚರ್ಯ ಎನಿಸುತ್ತದೆ.

ಬದುಕು ಸಂಕೀರ್ಣವಾದುದು. ಹಾಗೆ ಸಂಕೀರ್ಣವಾಗಿರುವ ಬದುಕನ್ನು ಕಾವ್ಯದ ಹೆಸರಿನಲ್ಲಿ ಇನ್ನಷ್ಟು ಸಂಕೀರ್ಣಗೊಳಿಸುವುದಾಗಲೀ ಅಥವಾ ಸರಳಗೊಳಿಸುವುದಾಗಲೀ ನನ್ನ ದಾರಿಯಲ್ಲ. ನಾನುಸಂಕೀರ್ಣವಾದುದನ್ನೂ ಸರಳವಾಗಿ ಯೋಚಿಸಿ,ಸರಳವಾಗಿ ಮಂಡಿಸುವುದನ್ನು ಇಷ್ಟಪಡುವವನು. ಚಡಪಡಿಕೆ, ತಳಮಳ, ಆಸೆ, ಕಾಮನೆ, ಸ್ವಾರ್ಥ ಎಲ್ಲವೂ ಕಳ್ಳ ಬೆಕ್ಕಿನಂತೆ ಹೊಮ್ಮಲು ಕಾದಿರುವ ಹೊತ್ತಿಗೇ, ಎಲ್ಲವನ್ನೂ ನಿರ್ಲಿಪ್ತವಾಗಿ ನೋಡು ಎಂದು ಸಂಜ್ಞೆಯನ್ನೂ ಮಾಡುತ್ತಿರುತ್ತವೆ. ತೀವ್ರ ಬೆರಗಿನಲ್ಲಿ, ಅತಿರೇಕದ ಬೆಡಗಿನಲ್ಲಿ ರೂಪ ತಳೆಯಲೂ ಅವು
ಕಾತರಿಸುತ್ತಿರುತ್ತವೆ.

ಒಲವಿನ ಕವಿತೆಗಳು ಕೇವಲ ಪ್ರೇಮ ನಿವೇದನೆಯಷ್ಟೇ ಅಲ್ಲವಲ್ಲ. ಒಂದು ಮರವನ್ನು ಚಿಟ್ಟೆಯನ್ನಾಗಿಯೂ ಒಂದು ಹಕ್ಕಿಯನ್ನು ಹೂವನ್ನಾಗಿಯೂ ನೋಡಬಲ್ಲೆ ಎಂಬ ತನ್ನ ಚಮತ್ಕಾರದ ಮೇಲೇ ಕವಿಗಿರುವ ಭರವಸೆ ಬರವಣಿಗೆಯ ಅನಂತ ಸಾಧ್ಯತೆಯತ್ತಲೂ ಬೊಟ್ಟು ಮಾಡುತ್ತಿರುತ್ತದೆ. ಅದು ಸಂತೋಷವನ್ನೂ ಹತಾಶೆಯನ್ನೂ ಒಂದೇ ಕಾಲಕ್ಕೆ ಹುಟ್ಟಿಸುವ ಕ್ರಿಯೆ.

ಅಷ್ಟು ಸುಲಭವಾಗಿ ಯಾವುದೂ ದಕ್ಕುವುದಿಲ್ಲ ಇಲ್ಲಿ. ‘ಬೆಳದಿಂಗಳ ಮರ’ದ ಕವಿತೆಗಳೂ ನನಗೆ ಅದೇ ಬಗೆಯ ಅನುಭವವನ್ನು ನೀಡಿದವು.ದಕ್ಕದುದನ್ನು ತಕ್ಕ ಮಟ್ಟಿಗೆ ದಕ್ಕಿಸಿಕೊಂಡ ಅಪೂರ್ವ ಕ್ರಿಯೆಯಾಗಿ.

ಈ ಕಾಲದಲ್ಲೂ ಒಲವಿನ ಕವಿತೆ ಎಂಬುದು ಸಾಧ್ಯವೇ? ಆಚೀಚೆ ನೋಡದೆ ಒಲವನಷ್ಟೇ ಧ್ಯಾನಿಸುತ್ತಾ ಇದ್ದುದನು ಇದ್ದಂತೆ ಮಂಡಿಸುತ್ತಾ ಇದ್ದು ಬಿಡು ಎಂಬ ಒಳ ದನಿಯೇನೋ ಇದ್ದೇ ಇರುತ್ತದೆ. ಆದರೆ ಸಮಾಜ ಜೀವಿಯಾದ ಕವಿ ತನ್ನೆದುರು ಹಾಸಿ ಬಿದ್ದಿರುವ ಪ್ರಪಂಚದ ದ್ವಂದ್ವಗಳಿಂದ ಅದು ಹೇಗೆ ತಪ್ಪಿಸಿಕೊಳ್ಳಬಲ್ಲ? ಎಷ್ಟೋ ಸಲ ಆತ ಅವುಗಳನ್ನು ಸುಮ್ಮನೆ ನೋಡುವುದಿದೆ. ಒಳಗೆ ಬಿಟ್ಟುಕೊಳ್ಳದಿರಲು ಪ್ರಯತ್ನಿಸುವುದಿದೆ. ಆದರೆ ಇಂದಿನ ವಿಷಮ ಕಾಲಘಟ್ಟದಲ್ಲಿ ಇವೆಲ್ಲ ಅಸಾಧ್ಯವಾದ ಮಾತು. ಒಮ್ಮುಖ ಚಿಂತನೆ ನನಗೆ ಎಂದೂ ಸಾಧ್ಯವಿಲ್ಲದ ಮಾತು. ಬದುಕಿನ ಉತ್ಪಾತಗಳು ನನ್ನಲ್ಲಿ ಎಬ್ಬಿಸುವ ಗಾಢವಾದ ಅನುರಣನ, ನನ್ನೊಳಗಿನ ಕ್ರಿಯಾಶೀಲತೆಯನ್ನೂ ಬಡಿದೆಬ್ಬಿಸುವುದಿದೆ. ಕಲ್ಪನೆಯ ವಿಸ್ತಾರಕ್ಕೂ ಕಾರಣವಾಗುವುದಿದೆ.

ಪ್ರೇಮ ಮತ್ತು ಒಲವು ಇಲ್ಲಿನ ಕವಿತೆಗಳ ಮುಖ್ಯ ವಸ್ತುಗಳಾದರೂ ಅವು ಸಾಮಾಜಿಕ ಆವರಣದೊಂದಿಗೆ ಅಖಂಡವಾಗಿ ಬೆರೆತುಹೋಗಿವೆ ಎಂದೇ ನಾನು ಭಾವಿಸಿದ್ದೇನೆ. ಹೇಳಿದ್ದನ್ನೇ ಹಲವು ರೀತಿಯಲ್ಲಿ ಹೇಳಲು ಯತ್ನಿಸುವ ಇಲ್ಲಿನ ಕವನಗಳು, ಒಂದೇ ಮೂಲದಿಂದ ಹೊರಟ ಕಿರಣಗಳು ಹೊಸದಾಗಿ ಛಳಪಿಸುತ್ತಿರುತ್ತವಲ್ಲ, ಹಾಗೆ ಮೈದಳೆಯಲಿ ಎಂಬ ಆಶಯದೊಂದಿಗೆ ರೂಪು ಪಡೆದಿವೆ.

ಹಾಗಾಗಿ ಈ ಕವನಗಳನ್ನು ಒಂದು ಸಂಯೋಜನೆಯಲ್ಲಿ ಹಿಡಿದಿಡಲು ನಾನು ಪ್ರಯತ್ನಿಸಿಲ್ಲ. ಅವು ತಮಗೆ ಕಂಡಂತೆ ರೂಪುಗೊಳ್ಳುತ್ತಾ ಹೋಗಿವೆ. ಯಾವುದು ಎಚ್ಚರ, ಯಾವುದು ಕನಸು, ಯಾವುದು ವಾಸ್ತವ, ಯಾವುದು ಕಲ್ಪನೆ ಎಂಬುದರ ಪರಿವೆಯೇ ಇಲ್ಲದೆ.

ಪ್ರೇಮ, ಕಾಮ, ವಿರಹ, ನೀತಿ, ಅನೀತಿಗಳ ಆಚೆಗೂ ಇರಬಹುದಾದ ಒಂದು ವಿಸ್ತಾರವಾದ ಬಯಲಿನಲ್ಲಿ ನಡೆಯುತ್ತಾ ಹೋದಂತೆ ಮೂಡಿದ ಹೆಜ್ಜೆಗುರುತುಗಳಂತಹ ರಚನೆಗಳು ಇವು ಎಂದಷ್ಟೇ ಹೇಳಬಲ್ಲೆ.

ಬೇರೆ ಕವಿಗಳ ಪ್ರಭಾವವೂ ನನ್ನ ಮೇಲೆ ಇಲ್ಲವೆಂದಲ್ಲ. ಆದರೆ ‘ಬೆಳದಿಂಗಳ ಮರ’ದ ಕವಿತೆಗಳಲ್ಲಿ ಅದನ್ನು ಮೀರಲು ಯತ್ನಿಸಿದ್ದೇನೆ. ತಾರುಣ್ಯದ ವಾಂಛೆಗಳನ್ನು ನೂರಾರು ಪ್ರೇಮ ಕವಿತೆಗಳಲ್ಲಿ ತೀವ್ರವಾಗಿ ವ್ಯಕ್ತಪಡಿಸಿದ ಪಾಬ್ಲೋ ನೆರುಡಾನ ಕವಿತೆಗಳಿಗಿಂತ ಈ ಕವಿತೆಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ಗಮನಿಸಬಹುದು. ಬಟೋ೯ಲ್ಟ್ ಬ್ರೆಕ್ಟ್ ಕೂಡ ಪ್ರೇಮ ಕವಿತೆಗಳನ್ನು ಬರೆದದ್ದಿದೆ. ತನ್ನ ಬದುಕಿನಲ್ಲಿ ಬಂದು ಹೋದ ಹೆಣ್ಣುಗಳ ಬಗ್ಗೆ ಆತ ಹತಾಶೆ, ಅನುರಕ್ತಿ ಹಾಗೂ ವಗರುಗಳೊಂದಿಗೆ ಬರೆಯುತ್ತಾನೆ. ಇಲ್ಲಿನ ಕವಿತೆಗಳದು ಆ ದಾರಿ ಅಲ್ಲ.

ಇದೆಂತಹ ವಿಕೃತ ಅಭಿವ್ಯಕ್ತಿ ಎಂಬಂತೆ ಕಾಣಿಸಿಕೊಂಡ ಕನ್ನಡದ ನವ್ಯರ ಕಾಮವೇ ಮುಖ್ಯವಾದ ಪ್ರೇಮ ಕವಿತೆಗಳ ಬಗ್ಗೆಯೂ ನನಗೆ ಆಸಕ್ತಿ ಇಲ್ಲ. ಈ ಅರ್ಥದಲ್ಲಿ ನನ್ನ ಕವನಗಳು ಪ್ರೇಮ ಕವನಗಳಲ್ಲ.
ಒಂದು ಜೀವದ ಜೊತೆಗಿನ ಇನ್ನೊಂದು ಜೀವದ ಮಾತುಕತೆ.
ಅರಿಯದ ದಾರಿಯಲ್ಲಿ ಸಾಗುತ್ತಾ ಹೋಗುವ ನಿರಂತರ ಪ್ರಯತ್ನ.

ಸಹಜವಾಗಿ ಈ ಕವನಗಳ ಬಗ್ಗೆ ಬರಬಹುದಾದ ಪ್ರತಿಕ್ರಿಯೆಗಳ ಕುರಿತು ನನಗೆ ಕುತೂಹಲವಿತ್ತು. ಸಾಮಾಜಿಕ ಜಾಲತಾಣದಲ್ಲಿ ಕಾಲ ಕಾಲಕ್ಕೆ ಬಂದ ಓದುಗರ ಪ್ರತಿಕ್ರಿಯೆ ನನ್ನಲ್ಲಿ ನಿಜಕ್ಕೂ ಅಚ್ಚರಿ ಹುಟ್ಟಿಸಿತು.ಹಾಗೆ ಬಂದ ನೂರಾರು ಪ್ರತಿಕ್ರಿಯೆಗಳು ಘನ ಪಂಡಿತರ ವಿಮರ್ಶಾ ರೂಪದ ಬರಹಗಳಿಗಿಂತ ಚೇತೋಹಾರಿಯಾಗಿದ್ದವು. ಅಂತಹ ಒಂದು ಪ್ರತಿಕ್ರಿಯೆ ಹೀಗಿದೆ –

“ವಸಂತ ಬನ್ನಾಡಿಯವರು ಇತ್ತೀಚೆಗೆ ಬರೆಯುತ್ತಿರುವ ಕವಿತೆಗಳು ಹೊಸ ಮಜಲೊಂದನ್ನು ತೆರೆದಿಟ್ಟಂತೆ ತೋರುತ್ತಿದೆ. ಅವರು ಇಂದಿನ ಸಾಮಾಜಿಕ ಸುಡು ವಾಸ್ತವಕ್ಕೆ ಬ್ರೆಕ್ಟನ ಮಾದರಿಯಲ್ಲಿ ಪ್ರತಿಕ್ರಿಯಿಸಿದರೆ, ಅವರ ಸಖ – ಸಖಿ ಭಾವದ ಕವಿತೆಗಳು ಹೊಸ ಹೊಸ ಪ್ರತಿಮೆ ಮತ್ತು ರೂಪಕಗಳಿಂದ ಭಾಷೆಯ ಹೊಸ ನೇಯ್ಗೆಯಲ್ಲಿ ಮೈ ತಳೆದವುಗಳು. ಇವುಗಳ ಪ್ರಬುದ್ಧವಾದ ಗದ್ಯ ಲಯದಲ್ಲಿ ಬೇಂದ್ರೆಯವರ ‘ಸಖೀ ಗೀತ’ ದ ಭಾವ ತೀವ್ರತೆಯನ್ನೂ ಮತ್ತು ಕೆ‍ಎಸ್‍ನ ಅವರ ಕಾವ್ಯದ ಸೊಗಸನ್ನೂ ಒಟ್ಟಾಗಿ ಕಾಣಬಹುದಾಗಿದೆ. ನೇರ ಮಾತುಗಳ ಸ್ವಭಾವೋಕ್ತಿಯೇ ಕಾವ್ಯವಾಗಿರುವ ಇಂದಿನ ದಿನದಲ್ಲಿ ಮತ್ತೆ ಪ್ರತಿಮಾ ವಿಧಾನಕ್ಕೆ ಹೊಸ ರೀತಿಯಲ್ಲಿ ಇವರ ಕಾವ್ಯ ಸ್ಪಂದಿಸುತ್ತಿರುವುದು ಕುತೂಹಲಕಾರಿಯಾಗಿದೆ. ಭಾಷೆಯ ಬಳಕೆಯಲ್ಲಿಯೂ ಕವನದಿಂದ ಕವನಕ್ಕೆ ಹೊಸ ಪ್ರಯೋಗಗಳ ಪ್ರಯತ್ನ ನಡೆದಿರುವುದನ್ನೂ ನೊಡಬಹುದಾಗಿದೆ. ಕಾವ್ಯ ಮಾಧ್ಯಮಕ್ಕೆ ತುಂಬ ಗಂಭಿರವಾಗಿ ತೊಡಗಿಸಿ ಕೊಂಡಿರುವ ಇವರು ಹೀಗೆ ಕಾವ್ಯ ಸುಧೆ ಹರಿಸುತ್ತಿರುವುದು ನನಗಂತೂ ಸಂತಸದ ವಿಷಯ”

ಇದನ್ನು ಬರೆದಿರುವವರು ಗೆಳೆಯ ಶ್ರೀಪಾದ ಹೆಗ್ಡೆಯವರು. ಒಬ್ಬ ಗಂಭೀರ ಓದುಗರಾಗಿ ತಮ್ಮ ಮಾತುಗಳನ್ನು ಅವರು ಇಲ್ಲಿ ದಾಖಲಿಸಿದ್ದಾರೆ. ಬೇಂದ್ರೆಯವರ ‘ಸಖೀ ಗೀತ’ದ ಬಗ್ಗೆ ಅವರು ಪ್ರಸ್ತಾಪಿಸಿರುವುದು ನನಗೆ ತುಂಬಾ ಕುತೂಹಲ ಹುಟ್ಟಿಸಿತು. ಅಲ್ಲಿನಂತೆ ಇಲ್ಲಿಯೂ ಎದುರಿಗಿರುವ ಹೆಣ್ಣಿನ ಜೊತೆ ನಿರಂತರವಾಗಿ ಮಾತನಾಡುತ್ತಲೇ ಹೋಗುವ ಗಂಡು ಮನದ ಚಿತ್ರಣ ಇರುವುದು ನನಗೂ ಥಟ್ಟನೆ ಗಮನಕ್ಕೆ ಬಂತು. ಅಂತೆಯೇ ಬದಲಾದ ಕಾಲದ ಜೊತೆ ಮುಖಾಮುಖಿಯಾಗುವಲ್ಲಿ ಎದುರಿಸಬೇಕಾಗಿ ಬಂದ ಸವಾಲೂ ನೆನಪಿಗೆ ಬಂತು.

ಕವಿಯ ಕಷ್ಟ ಏನು ಗೊತ್ತೇ? ಆತನ ಮಾತು ಎಲ್ಲರ ಮಾತಾದಾಗಲೇ ಅವನ ಕವನಗಳಿಗೆ ಒಂದು ಅರ್ಥ ಬರುವುದು. ಪ್ರೀತಿ, ಪ್ರೇಮ, ಒಲವುಗಳನ್ನು ವಸ್ತುವಾಗುಳ್ಳ ಕವಿತೆಗಳ ಬಗ್ಗೆಯಂತೂ ಇದು ಇನ್ನಷ್ಟು ನಿಜ. ಇಂತಹ ಕವನಗಳ ಸಾರ್ಥಕತೆ ಇರುವುದು ಅಲ್ಲಿಯೇ. ಕೆ.ಎಸ್. ನರಸಿಂಹಸ್ವಾಮಿಗಳ ಪ್ರೇಮ ಕವಿತೆಗಳು ಅವು ಯಾರ ಕುರಿತು ಬರೆದಿರಬಹುದು ಎಂಬ ಜಿಜ್ಞಾಸೆಗೆ ಕಾರಣವಾಗಿಯೂ ಅದರಾಚೆ ಜನರ ಮನಸ್ಸಿನಲ್ಲಿ ಬಳ್ಳಿಯಂತೆ ಹಬ್ಬಿಕೊಂಡದ್ದನ್ನು ಇಲ್ಲಿ ನೆನೆಯಬಹುದು.

ನನ್ನ ಇಲ್ಲಿನ ಕವಿತೆಗಳೋ, ನನ್ನೆದುರು ಈ ನನ್ನ ಮಾತುಗಳನ್ನು ಕೇಳಲು ಯಾರಾದರೂ ಇದ್ದಾರೆಯೋ ಇಲ್ಲವೋ ಎಂಬುದೂ ಸ್ಪಷ್ಟವಿಲ್ಲದ ಆತಂಕದಲ್ಲಿ ಹುಟ್ಟಿದ ಮಾತುಗಳು.

ಸಿಹಿಯಾದ ಮಾತುಗಳನ್ನು ಮಾತ್ರ ಬರೆಯುವುದು ನನಗೆ ಸಾಧ್ಯವೇ ಇರಲಿಲ್ಲ. ಭಾವಗಳು ನನ್ನ ಅರಿವನ್ನೂ ಮೀರಿ ಒಂದರ ಬಳಿಕ ಒಂದು ಇಡಿಕಿರಿದು ತೀವ್ರವಾಗಿ ಹೊಮ್ಮುವುದಿದೆ.

ಅವುಗಳಿಗೆ ತುದಿಯೆಂಬುದಾಗಲಿ ಕೊನೆಯೆಂಬುದಾಗಲಿ ಇರುವುದಿಲ್ಲ. ಗೊತ್ತು ಗುರಿ ಇಲ್ಲದ ಜಲಪಾತದಂತೆ ನನ್ನ ಕವನಗಳು. ಸಂತೃಪ್ತವೂ ಸುಕೋಮಲವೂ ಆದ ಮಧ್ಯಮ ವರ್ಗದ ಮನಸ್ಥಿತಿಯಿಂದ ಮೂಡಿ ಬಂದ ರಚನೆಗಳಲ್ಲ ಇವು. ಕಾದ ಕುಲುಮೆ ಮೇಲೆ ಕೂರದೆ ಯಾವ ಕಾವ್ಯವೂ ಹೊರಹೊಮ್ಮದು. ರಾಜಕೀಯ ಕಾವ್ಯದ ಮಟ್ಟಿಗೂ ಈ ಮಾತು ಸತ್ಯ.

ಕವಿ ತನ್ನ ಕವಿತೆಗಳ ಬಗ್ಗೆ ತಾನೇ ಹೆಚ್ಚು ಮಾತನಾಡಬಾರದು ಎಂಬ ನಿಯಮ ಒಂದಿದೆ. ನನಗೂ ಅದರಲ್ಲಿ ನಂಬಿಕೆ ಇದೆ. ಈ ಕವಿತೆಗಳನ್ನು ಬರೆಯುವಾಗ ನನ್ನಲ್ಲಿ ಹೊಮ್ಮಿದ ಅನನ್ಯ ಭಾವಗಳು ಓದುಗರಲ್ಲೂ ಮರು ಹುಟ್ಟು ಪಡೆದರೆ ಈ ಕವನಗಳು ಸಾರ್ಥಕವಾದಂತೆ.

‍ಲೇಖಕರು admin j

July 12, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: