ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವರುಷಗಳೆ ಉರುಳಿದವು ನೀನು ತೊರೆದು…

ಮದ್ಯಸಾರ-ಅಪಾರ ಬರೆಯುತ್ತಿರುವ ಕಿಕ್ ಕೊಡುವ ಕವಿತೆಗಳ ಗುಚ್ಚ. ಎಂಡ್ಕುಡ್ಕ ರತ್ನ ನಂತರ ಬಹುಶಃ ಅಪಾರರೇ ಇರಬೇಕು ಹೀಗೆ ಕಾಡುವ ಕವಿತೆಗಳನ್ನು ಬರೆಯುತ್ತಿರುವವರು. ಹೇಗಿದೆ ಈ ‘ಪೆಗ್’ ಗಳು. ರುಚಿ ನೋಡಿ-

boozebar.jpg

1
ಸಲುಪ ಹೆಚ್ಚಾಗಿದೆ ಮತ್ತೆ
ಫುಟ್‌ಪಾತಿನಲಿ ಬಿದ್ದಿರುವೆ
ನಗುವ ಜನರಿಗೆ ಗೊತ್ತೆ
ಇನ್ನೊಂದ್‌ ದಿನವ ಗೆದ್ದಿರುವೆ

2
ವರುಷಗಳೆ ಉರುಳಿದವು ನೀನು ತೊರೆದು
ನೆನಪೇಕೆ ಕಾಡುವುದು ಕೊರೆದು ಕೊರೆದು
ಮದಿರೆಯದೆ ಕಿತಾಪತಿ ಒಮ್ಮೊಮ್ಮೆ ಅನಿಸುವುದು
ಅದರಿಂದೆ ನನ ವಿರಹ ಜೀವಂತ ಉಳಿದಿಹುದು

boozebar.jpg

3

ನಡುರಾತ್ರಿಯ ಈ ಬಿಕನಾಸಿ ಬಾರಲ್ಲಿ
ಏಳು ಏಳೆನ್ನುತಿರುವ ವೇಟರನೆದುರು
ಇನ್ನೊಂದು ಥರ್ಟಿಗೆ ಗೋಗರೆಯುತಿರುವಾಗ
ಏಕೋ ನಿನ್ನ ನಿದ್ರಾಭಂಗಿ ನೆನಪಾಯಿತು

4

ನೋವಿನಿಂದ ತಪ್ಪಿಸಿಕೊಳ್ಳಲು
ಕುಡಿವವರು ನೂರಾರು
ನನ್ನಂತೆ ಸಾವಿನಿಂದ ತಪ್ಪಿಸಿಕೊಳ್ಳಲು
ಕುಡಿವವರು ಬೇರಾರು?

boozebar.jpg

5
ಮಧುಪಾತ್ರೆ ಕಣ್ಣಿನಂತೆ ಗೆಳೆಯಾ
ಖುಷಿಗೂ ತುಂಬುತ್ತೆ ದುಃಖಕೂ ತುಂಬುತ್ತೆ
ಕುಡಿತ ಸಾವಿದ್ದಂತೆ ಗೆಳೆಯಾ
ಮೈಯನೂ ಮರೆಸುತ್ತೆ ನೋವನೂ ಮರೆಸುತ್ತೆ

6
ಎಲ್ಲ ಗೆಳತಿಯರೂ ನೆನಪಾಗುತಿಹರೀಗ
ತುಟಿಗೆ ಸೋಕುತಿರುವ ಮದ್ಯಕೆ ಯಾರ ಹೆಸರು
ತಿಳಿಯುತಿಲ್ಲ ಯಾರ ವಿರಹ ಯಾವ ತರಹ
ಕುಡುಕನದು ಎಂದೂ ಇದೇ ಹಣೆಬರಹ

7
ಚಳಿಗಾಲದ ಸಂಜೆ ಹಿತವಾಗಿ ಆವರಿಸಿದೆ
ಸುರಿಯುತಿಹ ಮಳೆ ಹೂವಂತೆ ನೇವರಿಸಿದೆ
ಈ ಖುಷಿಗೆ ಕುಡಿಯಲು ಗೆಳೆಯರೊಬ್ಬರೂ ಇಲ್ಲ
ಹಾಗೆಂದು ಸುಮ್ಮನುಳಿದರೆ ದೇವರೂ ಕ್ಷಮಿಸಲ್ಲ

‍ಲೇಖಕರು avadhi

21 March, 2008

2 Comments

  1. ವಿನಾಯಕ

    ಅಪಾರರ ಮದ್ಯಸಾರ ಇರೋವಾಗ ಸರ್ಕಾರ ಸರಾಯಿ ನಿಷೇಧಿಸಿದರೂ ಚಿಂತೆಯಿಲ್ಲ!

  2. Shankar

    ಬೆಳ್ಳಂಬೆಳಗ್ಗೆ ಗಡಂಗಿಗೆ ಹೋಗ್ ಬಂದಂಗಾಯ್ತು!! ಎರೆಡೆರಡೂ ಮಾನೀಟರ್, ಎರೆಡೆರಡು ‘ಅವಧಿ’ ಕಾಣಿಸ್ತಾ ಇದೆ!! ಎಲ್ಲವೂ ಮದ್ಯಸಾರದ ಮಹಿಮೆಯೆ!!;)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading