ವರದೇಂದ್ರ ಕೆ ಮಸ್ಕಿ ಓದಿದ ‘ಕಥಾರಂಜನಿ’

ಮನದ ನಂಜಿಗೆ ಮದ್ದಾಗುವ ‘ಕಥಾರಂಜನಿ’

ವರದೇಂದ್ರ ಕೆ ಮಸ್ಕಿ

'ಕಥಾರಂಜನಿ' 27 ಸ್ವರಚಿತ ಮತ್ತು ಮೂರು ಅನುವಾದಿತ ಕಥೆಗಳನ್ನೊಳಗೊಂಡ ಉತ್ತಮವಾದ ಕಥಾ ಸಂಕಲನ. ಶ್ರೀಮತಿ ಮಾಧುರಿ ದೇಶಪಾಂಡೆಯವರು ಸುವಿಚಾರಗಳ ಲೇಖನಗಳಿಂದ ಮುಖಪುಟದಲ್ಲಿ ಬಹು ಪರಿಚಿತರು. ಅನೇಕ ವಿಚಾರಗಳ ಮೇಲೆ ತಮ್ಮ ಸೂಕ್ಷ್ಮ ದೃಷ್ಟಿಯನ್ನು ಬೀರಿ ಉದಾಹರಣೆಗಳೊಂದಿಗೆ‌ ಓದುಗನ ಮನಕ್ಕೆ ಅಕ್ಷರಗಳಿಂದ ಬಿತ್ತುವ ಸಾಹಿತ್ಯದ ಒಕ್ಕಲುತನದಲ್ಲಿ ತಮ್ಮನ್ನು ಬಹುವಾಗಿ ತೊಡಗಿಸಿಕೊಂಡವರು.

'ಕಥಾರಂಜನಿ' ಸಂಕಲನದ ಹಲವು ಕಥೆಗಳು ಓದುಗನಿಗೆ ಇಷ್ಟವಾಗುತ್ತವೆ. ಏಕೆಂದರೆ ಸಂಕಲನದ ಬಹುತೇಕ ಕಥೆಗಳು ನಮ್ಮ ಬದುಕಿಗೆ ಕನ್ನಡಿಯಾಗಿವೆ. ನಮ್ಮ ಮನೆಯಲ್ಲಿಯ ಘಟನಾವಳಿಗಳೇ ಕಥಾ ರೂಪ ಪಡೆದಿವೆಯೇನೋ ಅನ್ನಿಸುವಷ್ಟು ಕೌಟುಂಬಿಕವಾಗಿ ಕಥೆಗಳು ರಚಿತವಾಗಿವೆ. ಅಂತಹ ಕಥೆಗಳ ಒಂದಷ್ಟು ಅವಲೋಕನ ನುಡಿಗಳೊಂದಿಗೆ ಕೃತಿಯ ಪರಿಚಯವನ್ನು ಮಾಡಬಯಸುತ್ತೇನೆ.

ತಾಯ್ತನ ಅನ್ನೋ ಖುಷಿ ಮತ್ತು ಸುಖವನ್ನು ಕೇವಲ ಸಂತಾನದಿಂದ ಪಡೆಯಬಹುದೆಂಬ ಓದುಗನ ಅಭಿಪ್ರಾಯವನ್ನು ಸಂಪೂರ್ಣವಾಗಿ ಅಳಿಸಿ ಹಾಕುವ ಕಥೆ “ಮಾತೃತ್ವ”. ಸಂಸಾರದಲ್ಲಿ ಗಂಡನ ಆಸೆಯನ್ನು ಹೆಂಡತಿ‌ ಉಳಿಸಿ, ಹೆಂಡತಿಯ ಆಸೆಯನ್ನು ಗಂಡ ಈಡೇರಿಸುವುದು ಬದುಕಿನ ಸಾರ್ಥಕತೆ ಎಂಬದಕ್ಕೆ ಉದಾಹರಣೆಯಾಗಿ ನಮಗೆ ಈ ಕಥೆ ಸಿಗುತ್ತದೆ.

“ಹೆಣ್ಣು ಸಂಸಾರದ ಕಣ್ಣು”, ಆಕೆ ಮನಸು ಮಾಡಿದರೆ ತನ್ನ ಸಂಸಾರದ ದಿಕ್ಕನ್ನೇ ಬದಲಿಸುತ್ತಾಳೆ ಎಂಬುದನ್ನು ‘ವೈಜಯಂತಿ’ ಪಾತ್ರದ ಮೂಲಕ ನಿರೂಪಿಸುವ ಲೇಖಕಿಯವರು ಹೆಣ್ಣಿನ ಮನೋ ಬಲದ ಸಾಮರ್ಥ್ಯವನ್ನು ತುಂಬ ಸೊಗಸಾಗಿ ಚಿತ್ರಿಸಿದ್ದಾರೆ.

ಇಂತಹುದೇ ಕಥಾ ವಸ್ತುವನ್ನು ಹೊಂದಿದ ಮತ್ತೊಂದು ಕಥೆ “ತ್ಯಾಗಮಯಿ”. ಹೆಣ್ಣು ತಾನು ಮನಸು ಮಾಡಿದರೆ ಏನೆಲ್ಲಾ ಸಾಧಿಸಬಹುದು, ಸಾಧನೆಗೆ ಬಂದ ಎಡರುಗಳನ್ನು ಹೇಗೆ‌ ದಾಟಿ ಗುರಿ ಮುಟ್ಟುತ್ತಾಳೆ. ಸಂಸಾರದಲ್ಲಿ ತನ್ನ ಬೆಳವಣಿಗೆಗೆ ಅಸಹಕಾರವಿದ್ದಾಗಲೂ ಧೃತಿಗೆಡದೆ ಅವಳು ಇಡುವ ಹೆಜ್ಜೆ, ತೆಗೆದುಕೊಳ್ಳುವ ನಿರ್ಧಾರಗಳು ಹೇಗೆ ಅವಳಿಗೆ ಪೂರಕವಾಗುತ್ತವೆ ಎಂಬುದನ್ನು “ತ್ಯಾಗಮಯಿ” ಕಥೆ ತಿಳಿಸುತ್ತದೆ. ಅವಳ‌ ತ್ಯಾಗವೂ ಅವಳ ಸಾಧನೆಗೆ ಕಾರಣವೆಂಬ ಸತ್ಯದ ದರ್ಶನ ಓದುಗನಿಗೆ ಈ ಕಥೆಯಲ್ಲಿ ಆಗುತ್ತದೆ.

ನಾವು ಬದುಕಲ್ಲಿ “ನೆಮ್ಮದಿಯ ನೆಲೆ” ಕಂಡು ಕೊಳ್ಳಬೇಕೆಂದರೆ ಸಮಾಜಮುಖಿಗಳಾಗಿರಬೇಕು. ಅದು ಯಾವ ವಯಸ್ಸಲ್ಲಿ ಎಂಬುದೇ ಈ ಕಥೆಯ ತಿರುಳು. ಮತ್ತು ಆ ಸ್ದಿತಿಗೆ ತಲುಪಲು ಹೇಗೆ ಸಾಧ್ಯ, ಬದುಕು‌ ಹೇಗೆ ಪಾಠ ಕಲಿಸುತ್ತದೆ ಎಂಬ ಕಥೆಯ ಅಂತಸ್ಸತ್ವವನ್ನು ಲೇಖಕಿಯವರು ಉತ್ತಮವಾಗಿ ಕಥೆಯಲ್ಲಿ ತುಂಬಿದ್ದಾರೆ.

“ಸುಪರ್ಣ” ವೈವಾಹಿಕ ಕಟ್ಟುಪಾಡುಗಳಿಂದ ಹೊರಗಿದ್ದು ತನ್ನ ಕಲೆಯನ್ನು ಉತ್ತುಂಗಕ್ಕೇರಿಸಿಕೊಂಡ ಹುಡುಗಿಯ ಕಥೆ. ಪ್ರತಿಯೊಂದು ಹೆಣ್ಣೂ ಮದುವೆಯ ಬಳಿಕ ತನ್ನತನವನ್ನು ಕಳೆದುಕೊಳ್ಳುತ್ತಾಳೆ ಎಂಬ ಭಾವನೆಯನ್ನು ಹೊಂದಿದ ಸುಪರ್ಣಳಿಗೆ ನಿಶ್ಚಿತಾರ್ಥದ ಬಳಿಕ ತನ್ನನ್ನು ಮದುವೆಯಾಗುವ ಜಯಂತನೊಂದಿಗೆ ನಡೆದ ಘಟನೆಗಳು ಸಾಕ್ಷೀಕರಿಸಿದವು.

ಆ ಕಾರಣದಿಂದ ಬದುಕು ಪೂರ್ತಿ ಮದುವೆಯೇ ಆಗದೆ ಸಾಧನೆಯೆಡೆಗೆ ಸಾಗಿದಳು ಎಂಬುದು ವಿಶೇಷವಾದರೂ ಪ್ರಕೃತಿಯ ವಿರುದ್ಧ ಬದುಕನ್ನು ಒಡ್ಡುವುದು ಕೆಲವರಿಗೆ ಮಾತ್ರ ಸಾಧ್ಯ. ಬದುಕನ್ನು ಬಂದಂತೆ ಸ್ವೀಕರಿಸಬೇಕು. ನಮ್ಮಿಚ್ಛೆಯಂತೆ ಬದಲಿಸಿಕೊಳ್ಳಲು ಪ್ರಯತ್ನಿಸಬೇಕೆಂಬುದು ನಾನು ಅಭಿಪ್ರಾಯವಾಗಿದೆ.

ಒಂದು ಹೆಣ್ಣು ತಾಯಿಯಾಗಿ, ತನ್ನ ಬದುಕಿನೊಂದಿಗೆ ಸಂಸಾರವನ್ನು, ಮಕ್ಕಳ ಬದುಕನ್ನು ಸುಗಮಗೊಳಿಸಲು ಎಷ್ಟೆಲ್ಲ ಕಷ್ಟ ಪಡುತ್ತಾಳೆ. ಆ ನಿಟ್ಟಿನಲ್ಲಿ ಅವಳ‌ ಹೃದಯ ವಿಶಾಲತೆ, ತ್ಯಾಗ, ಹೊಂದಾಣಿಕೆಯ ಕುರಿತಾದ “ತಾಯಿಯ ಹೃದಯ” ಕಥೆ ಓದುಗನ ಹೃದಯಕ್ಕೆ‌ ತಾಕುತ್ತದೆ.

ಈ ಸಂಕಲನದಲ್ಲಿ ಬಹಳ ಆಪ್ತವಾಗುವ ಕಥೆ “ಸೌಭಾಗ್ಯ”. ನಿರಪೇಕ್ಷಿಯಾಗಿ ಸೇವೆ ಮಾಡಬೇಕು, ದುಡಿಯಬೇಕು ಎಂಬ‌ ಸೋಮುವಿನ ಹೆಂಡತಿ “ಸೌಭಾಗ್ಯ”ಳ ಹೆಸರನ್ನೇ ಕಥೆಯ ಶೀರ್ಷಿಕೆಯನ್ನಾಗಿಸಿದ್ದು ವಿಶೇಷ ಮತ್ತು ಸೂಕ್ತ ಎನಿಸಿದೆ. ಕಥೆಯ ಅನಿರೀಕ್ಷಿತ ಅಂತ್ಯ, ಶೇಷಪ್ಪನವರ ತೀರ್ಮಾನ ಸೋಮುವಿನ ಮನಸಿಗೆ ನಾಟಿದಷ್ಟು ಓದುಗನಿಗೂ ನಾಟುತ್ತದೆ ಎಂಬುದು ಕಥೆಯ ಗಟ್ಟಿತನ.

“ಪ್ರಾಯಶ್ಚಿತ್ತ”, ಬದುಕಿನ ಅಂತಿಮ ಕ್ಷಣಗಳಲ್ಲಿ ಬಹುತೇಕರಿಗೆ ಆಗುವ ಅನುಭವ. ಬದುಕಿನುದ್ದಕ್ಕೂ ಅಹಂಕಾರ, ದ್ವೇಷ, ರೋಷ, ಸ್ವಾರ್ಥದಲ್ಲಿ ಬದುಕಿದವರಿಗೆ ಇದು ಅತ್ಯಂತ ಹೀನಾಯವಾಗಿ ಕಾಡುತ್ತದೆ. ಇದಕ್ಕೆ ತಕ್ಕ ಉದಾಹರಣೆಯೇ “ಪ್ರಾಯಶ್ಚಿತ್ತ” ಕಥೆ. ಕನಕಮ್ಮಳ ಜೋರು ಸ್ವಭಾವ, ಸೊಸೆಯನ್ನು ಕಾಡಿದ ಪರಿ, ಕೊನೆಗೆ ಆದೇ ಸೊಸೆ(ಶೈಲ)ಯಿಂದ ಸೇವೆ ಮಾಡಿಸಿಕೊಳ್ಳುವ ಸಂದರ್ಭವನ್ನು ಕಥೆಗಾರ್ತಿ ಚೆನ್ನಾಗಿ ಚಿತ್ರಿಸಿದ್ದಾರೆ. ಜೋರು ಸ್ವಭಾವದ ಓದುಗನಾಗಿದ್ದರೆ ಅವನ ಮನ ತಾಕಿ, ಅವನ ಸ್ವಭಾವವನ್ನು ಬದಲಾಯಿಸುವಲ್ಲಿ ಕಥೆ ಮಹತ್ತರ ಪಾತ್ರ ವಹಿಸುತ್ತದೆ.

“ನಿರ್ಧಾರ” ಕಥೆಯಂತೂ ಮಾದರಿಯಾದ ಕಥಾವಸ್ತುವನ್ನು ಹೊಂದಿದೆ. ಓದಿನ ಜೊತೆ ಪ್ರೀತಿ, ಪರದೇಶದ ವ್ಯಾಮೋಹ ಬೆಳೆಸಿಕೊಳ್ಳುವ ಯುವಜನತೆಗೆ ಇದು ಒಂದು ಪಾಠವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

“ಕೃಷ್ಣನ ಪ್ರೀತಿ”, ಈ ಕಥೆಯ ಶೀರ್ಷಿಕೆ ನೋಡಿದರೆ ‘ಕೃಷ್ಣನ ನಡೆ ಪ್ರೀತಿಯ ಕಡೆ’ ಎಂಬ ಭಾವ ಮೇಲ್ನೋಟಕ್ಕೆ ಓದುಗನಲ್ಲಿ ಮೂಡುತ್ತದೆ. ಅಂತೆಯೇ ಪ್ರೇಮ ಪಾಶಕ್ಕೆ ಬಿದ್ದು ಮೋಸ ಹೋದ ಕೃಷ್ಣ ತನ್ನ ಸಾಧನೆಯೆಡೆಗೆ ಗಮನಹರಿಸಿ ತನ್ನ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವುದರ ಜೊತೆಗೆ ಅನೇಕ ಮಕ್ಕಳ ಬದುಕನ್ನೂ ಉದ್ಧಾರ ಮಾಡುತ್ತಾನೆ. ಜೀವನದ ಜವಾಬ್ದಾರಿಯನ್ನು ಅರಿತು ಸಾಗಿದ ಕೃಷ್ಣನ ಪ್ರೀತಿಯ ಬದುಕು ಓದುಗನಿಗೆ ಮೆಚ್ಚುಗೆಯಾಗುತ್ತದೆ.

ಒಂದು ನಿಷ್ಕಲ್ಮಷ ಹೆಣ್ಮನಸಿನ ಕಥೆ “ಶಾಂತಿ”. ಯಾವುದೇ ಕಾರಣವಿಲ್ಲದೆ ತವರಿನ ನಿರ್ಲಕ್ಷ್ಯಕ್ಕೆ ಗುರಿಯಾದ ಬುದ್ಧಿವಂತಳಾದ ಶಾಂತಿಯ ಬದುಕು ಮದುವೆ ಬಳಿಕ ಸುಂದರವಾಗಿರುತ್ತದೆ ಎಂದು ಓದುತ್ತಲೇ ಸಾಗುವ ನಮಗೆ ಕಥೆಯ ತಿರುವು ಗೊತ್ತಾಗುವ ಹಂತಕ್ಕೆ ಕಸಿವಿಸಿ ಪ್ರಾರಂಭವಾಗಿರುತ್ತದೆ. ಗಂಡನಾಗುವವನು ವಿಮಾನ ಅಪಘಾತದಲ್ಲಿ ಜೀವಂತ ಶವವಾಗಿ ಬಂದಾಗ, ಮುಂದಿನ ಶಾಂತಿಯ ನಿರ್ಧಾರ ಏನು ಎಂಬದುನ್ನು ಊಹಿಸುವ ಓದುಗ ಅವಳ ನಿರ್ಧಾರಕ್ಕೆ ಶರಣಾಗುತ್ತಾನೆ. ಅಂತಹ ಸುಮನಸಿನ ಪಾತ್ರವನ್ನು ಕಟ್ಟಿಕೊಟ್ಟ ಲೇಖಕಿ ಕಥೆಗಾರರಾಗಿ ತಾವೂ ಗೆದ್ದು, ಕಥೆಯನ್ನೂ ಗೆಲ್ಲಿಸಿದ್ದಾರೆ.

“ಪರಿವರ್ತನೆ” ಜಗದ ನಿಯಮ. ನಾವು ಇಡುವ ಪ್ರತಿಯೊಂದು ಹೆಜ್ಜೆಯ ಹಿಂದೆ ಆಲೋಚನೆ ಇರಬೇಕು. ಹದಿಹರೆಯದ ವಯಸ್ಸಲ್ಲಂತೂ ಒಂದು ಹೆಜ್ಜೆಗೆ ನೂರು ಆಲೋಚನೆಗಳಿರಬೇಕು. ವಯೋಸಹಜ ಕಾಮನೆಗಳು ಯಾರನ್ನೂ ಬಿಡುವುದಿಲ್ಲವೆಂಬುದು ನಿಜವಾದರೂ ಆ ಅಭೀಷ್ಟೆಗಳಿಂದ ನಾವು ವಂಚಿತರಾಗುವುದಿಲ್ಲ ಎಂಬ ಅರಿವು ನಮ್ಮಲ್ಲಿರಬೇಕು. ಅದು ತಾನಾಗೇ ಒಲಿದು ಬರುವವರೆಗೆ ತಾಳ್ಮೆಯಿರಬೇಕು. ಅಂತಹದ್ದೇ ಹದಿಹರೆಯದ ಹುಡುಗಿ ರಾಧಿಕಾಳ ದುಡುಕಿನ ಬುದ್ಧಿ, ಸಣ್ಣತನದ ಪ್ರದರ್ಶನವನ್ನು ತೋರುವ ಕಥೆ ಈ “ಪರಿವರ್ತನೆ”. ನಮ್ಮ ಒಂದು ತಪ್ಪಿನ ನಡೆಯಿಂದ ಅದೆಷ್ಟು ಮನಸುಗಳಿಗೆ ಘಾಸಿಯಾಗುತ್ತವೆ ಎಂಬುದನ್ನು ತಿಳಿಸುವ ಕಥೆ ನಮ್ಮ ಮನೋ “ಪರಿವರ್ತನೆ”ಗೂ ಕಾರಣವಾಗುತ್ತದೆ.

ಆಹಾ ಎಂತಹ ಮೈತ್ರಿ, “ಬಿಂದುಗಳೆರಡರ ಮಿಲನ”. ಒಬ್ಬನ ಮದುವೆಗಾಗಿ ಎಷ್ಟೆಲ್ಲಾ ಸರ್ಕಸ್ ಮಾಡಬೇಕಾಗಿ‌ ಬಂತು. ಸದುದ್ದೇಶ ಹೊಂದಿದ ಎರಡು ಜೀವಗಳನ್ನು ಒಂದಾಗಿಸಲು ಪಟ್ಟ ಹರಸಾಹಸ ತಮಾಷೆಯೊಂದಿಗೆ ಖುಷಿಯೂ ಕೊಡುತ್ತದೆ. ಸಾಂಸಾರಿಕ ಬದುಕು ಸಮಾಜ ಸೇವೆಗೆ ಅಡ್ಡಗಾಲು ಎಂಬುದನ್ನು ಅಲ್ಲಗಳೆಯುವ ಕಥೆ ಉತ್ತಮ ನೀತಿಯ ಸಂದೇಶವನ್ನೂ ಸಾರುತ್ತದೆ.

ಮದುವೆ ನಂತರ ದಾಂಪತ್ಯದಲ್ಲಿ ಸುಖ ಇರಬೇಕೆಂದರೆ ಎರಡು ದೇಹಗಳ ಜೊತೆ ಎರಡು ಮನಸುಗಳು ಒಂದಾಗಬೇಕು. ಹಾಗಾಗದೇ ದಾಂಪತ್ಯದಿಂದ ವಿಚ್ಛೇದನ ಪಡೆದ ಎರಡು ವಿಚ್ಛೇದಿತ ಮನಸುಗಳು ಒಂದಾಗುವ ಕಥೆ “ಮಧುಕರನ ಮದುವೆ”. ಒಬ್ಬಳು ಧನದಾಹಿ, ಮತ್ತೊಬ್ಬ ಅನುಮಾನ ಪೇತು.‌ ಇದರಿಂದ ಮುಕ್ತಿ ಪಡೆದ ‘ಮಧುಕರ’ ಮತ್ತು ‘ಸಿರಿ’ಯ ನಡುವೆ ಹುಟ್ಟಿದ ಪ್ರೇಮಕ್ಕೆ ನೆಲೆ ಸಿಗುತ್ತದೆಯೇ ಎಂಬುದೇ ಕಥೆಯ ಗುಟ್ಟು, ಕಥೆ ಓದಿಯೇ ಕಥಾ ಸಾರಾಂಶದ ಸವಿ ಸವಿಯಬೇಕು.

ಚಿಕ್ಕ ವಯಸ್ಸಲ್ಲಿ ಹೆಣ್ಣುಮಕ್ಕಳಿಗೆ ವೈಧವ್ಯ ಪ್ರಾಪ್ತಿ ಅಥವಾ ಗಂಡನಿಂದ ದೂರವಾಗುವ ಸಂದರ್ಭ ಬಂದರೆ , ಆ ಬದುಕು; ಆ ಹೆಣ್ಣು ಮಕ್ಕಳಿಗೆ ಒಂಥರಾ ನರಕ ಯಾತನೆ. ಒಂದು ಮಗು ಕೈಯಲ್ಲಿದ್ದರಂತೂ ಜೀವನ ಮುಳ್ಳಿನ ಮೇಲೆ ನಡೆದಂತೆ. ವಿದ್ಯೆ, ನೌಕರಿ ಇದ್ದರೆ‌ ಕೊಂಚ ನಿಟ್ಟುಸಿರು. ಇಲ್ಲದಿದ್ದರೆ ಪರರ ಹಂಗಿನಲ್ಲೇ ಜೀತದಾಳಂತೆ ಇರಬೇಕಾಗಿಬಿಡುತ್ತದೆ. ಅಂತಹ‌ ಹೆಣ್ಣಿನ ಜೀವನವನ್ನು ಹಸನುಗೊಳಿಸುವ ಸದುದ್ದೇಶದ ಕಥೆ‌ “ಆಸರೆ”. ಓದುಗನಿಗೆ ಬಹುವಾಗಿ ಇಷ್ಟವಾಗುತ್ತದೆ.

ಮನೋ ವೈಜ್ಞಾನಿಕ ಹಿನ್ನೆಲೆಯುಳ್ಳ, ಮಾನಸಿಕವಾಗಿ ಸಧೃಢರಾಗಿರಲು ಮನೆಯ ಮತ್ತು ಮನಸುಗಳ ನಡುವೆ ಹೇಗೆ ಪೂರಕವಾದ ವಾತಾವರಣ ಇರಬೇಕೆಂಬುದನ್ನ ಬಹಳ ಅರ್ಥಪೂರ್ಣವಾಗಿ ತಿಳಿಸಿಕೊಡುವ ಕಥೆ “ಮನಸುಗಳ ನಡುವೆ” ಬಹು ಪ್ರಮುಖವಾಗಿ ಓದಲೇ ಬೇಕಾದುದಾಗಿದೆ.

ಸ್ನೇಹದಲ್ಲಿ ಹಣದ ವ್ಯವಹಾರ ಇರಬಾರದೆನ್ನುತ್ತಾರೆ. ಹಾಗೆ ವ್ಯವಹರಿಸಿದರೆ ಸ್ನೇಹದಲ್ಲಿ ಬಿರುಕು ಉಂಟಾಗುತ್ತದೆ. ಇಂತಹ ವಿಚಾರವಿದ್ದರೂ ಗೆಳೆಯನಿಗೆ ೧೨ ಲಕ್ಷ ಸಾಲಕೊಟ್ಟು ಅದನ್ನು ತೀರಿಸಲಾಗದ ಪರಿಸ್ಥಿತಿಗೆ ಗೆಳೆಯ ತಲುಪಿದಾಗ, ಅನುಸಂಕ್ಟಕ್ಕೆ ಬೀಳುವ ಹೊತ್ತು ಹಣ ಕೊಟ್ಟ ಗೆಳೆಯನ ಪಾಲಿಗೆ. ಹೇಗೋ ಅಕ್ಕಳ ಗೆಳತಿ (ಸಾಲ ಪಡೆದ ಗೆಳೆಯನ ಅಕ್ಕ)ಅದಕ್ಕೊಂದು ಇತಿಶ್ರೀ ಹಾಡಿ ಗ್ರೇಟ್ ಆಗುತ್ತಾಳೆ. ಏನಾದರಾಗಲಿ ಬಾಲ್ಯದ ಗೆಳೆಯನಿಗೆ ಸಹಾಯ ಮಾಡುತ್ತೇನೆ ಎಂಬ ಗೆಳೆಯನ ಪಾತ್ರವೂ ವಿಶೇಷವಾಗಿದೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಸುಖವಾಗಿರಬೇಕೆಂಬ ತತ್ವ ಸಾರುವ ಕಥೆ “ಸ್ನೇಹ ಬಾಂಧವ್ಯ”ವನ್ನು ಲೇಖಕಿಯವರು ಮನಮುಟ್ಟುವಂತೆ ಬರೆದಿದ್ದಾರೆ.

ಬದುಕು ತನ್ನಿಷ್ಟಕ್ಕೆ ನಮ್ಮನ್ನು ನಡೆಸಿಕೊಂಡು ಹೋಗುತ್ತದೆ ಎಂಬುದಕ್ಕೆ ಸಾಕ್ಷಿಯಾದ ಕಥೆ “ಭಾತೃಪ್ರೇಮ”. ವಿಚ್ಛೇದನ, ಮರು ಮದುವೆ ನಂತರವೂ ತಂದೆಯ ಮೊದಲ ಹೆಂಡತಿಯ ಮಗನನ್ನು ಅಣ್ಣನನ್ನಾಗಿ ಗೌರವಿಸಿದ, ಪ್ರೇಮಿಸಿದ ಎರಡನೇ ಹೆಂಡತಿಯ ಮಗ ಭರತನ ಪರಿಗೆ ಓದುಗ ಮೂಕ ವಿಸ್ಮಿತನಾಗುತ್ತಾನೆ. ರಾಮಾಯಣದ ಭರತನನ್ನೇ ನೆನಪಿಸುವ ಕಥೆ “ಭಾತೃಪ್ರೇಮ” ಅತ್ಯಂತ ಉತ್ತಮವಾದುದಾಗಿದೆ.

ಡಿ ವಿ ಜಿಯವರ ಕಗ್ಗಗಳೂ ಕೂಡ ಲೇಖಕಿಯವರ ಮೇಲೆ ಅಗಾಧ ಪರಿಣಾಮ ಬೀರಿವೆ. ಕಗ್ಗಗಳಿಗೊಂದೊಂದು ಕಥಾ ವಸ್ತುಗಳನ್ನು ಸೃಷ್ಟಿಸಿ ನೀಡಿದ ವಿವರಣೆಗಳು “ಮನೋಹರ ನಿಲಯ”, “ಕತ್ತಲೆಯೊಳೇನೋ”, “ಆಶಾ ಕಿರಣ”, ಕಥೆಗಳಲ್ಲಿ ಕಾಣಸಿಗುತ್ತವೆ. ಸುವಿಚಾರಗಳನ್ನು ಕಗ್ಗಗಳೊಂದಿಗೆ ಹೋಲಿಸಿಕೊಂಡು ಬರೆದ ಲೇಖನಗಳು ವೈಚಾರಿಕ ದೃಷ್ಟಿಯಿಂದ ಓದುಗನನ್ನು ಸೆರೆ ಹಿಡಿಯುತ್ತವೆ.

ಸಂಕಲನದ ಮತ್ತೊಂದು ಉತ್ತಮ, ಆಕರ್ಷಕವಾದ ಬಹುದಿನಗಳವರೆಗೆ ಕಾಡುವ ಕಥೆ “ಕಾದಂಬರಿ”. ವಿಶಿಷ್ಟವಾದ ಕಥಾವಸ್ತು ಹೊಂದಿದ ಈ ಕಥೆಯಲ್ಲಿ ಸ್ವಾರ್ಥ, ಅಹಂಕಾರ ತುಂಬಿದ ಗಂಡಸಿನ ಮನಸ್ಥಿತಿಯ ಅನಾವರಣವಾಗಿದೆ. ಹೃದಯದಲ್ಲಿ ತೂತು ಬಿದ್ದ ಕಾದಂಬರಿ(ಕಥಾ ನಾಯಕಿ)ಗಿಂತ ಮನಸಲ್ಲಿ ತೂತು ತುಂಬಿದ ಕಮಲಾಕರ, ಶಿಶಿರ ನಿಜವಾದ ರೋಗಿಗಳೆನಿಸುತ್ತಾರೆ. ಮಧುಕರನ ಪಾತ್ರ ಬಹುವಾಗಿ ಮೆಚ್ಚುಗೆಯಾಗುತ್ತದೆ. ಕಥೆಯ ನಿರೂಪಣೆ, ಕಥೆಯೊಳಗೊಬ್ಬ ಸಾಹಿತಿಯನ್ನು ಸೃಷ್ಟಿಸಿ ಕಥೆಯನ್ನು ಹೆಣೆದಿರುವುದುದು ವೈಶಿಷ್ಟ್ಯಪೂರ್ಣವೆನಿಸುತ್ತದೆ.

ಕೊನೆಯಲ್ಲಿ ಅನುವಾದಿಸಿದ ಮೂರು ಕಥೆಗಳಂತೂ ಅಮೋಘವಾಗಿವೆ. ಮುನ್ಷಿ ಪ್ರೇಮಚಂದ್ ಅವರ ಎರಡು ಕಥೆಗಳನ್ನು ಮತ್ತು ವಿಶ್ವಂಬರ ಶರ್ಮ ಕೌಶಿಕ ಅವರ ಒಂದು ಕಥೆಯನ್ನು ಲೇಖಕಿ ಮಾಧುರಿ ಅವರು ಚೊಕ್ಕವಾಗಿ ಅನುವಾದಿಸಿದ್ದಾರೆ. ಮುನ್ಷಿ ಪ್ರೇಮಚಂದ ಅವರ “ದೊಡ್ಡ ಅಣ್ಣನವರು” ಕಥೆಯಲ್ಲಿ, ಅತೀ ಹೆಚ್ಚು ಓದಿನಲ್ಲಿ ತೊಡಗಿಕೊಂಡರೂ ಮತ್ತೆ ಮತ್ತೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ಅಣ್ಣಂದಿರು ಮತ್ತು ಅವರ ಉಪದೇಶ, ಆಟದಲ್ಲಿ ಮತ್ತಿತರ ವಿಷಯದಲ್ಲಿ ಆಸಕ್ತನಾಗಿದ್ದರೂ ಪ್ರತೀ ವರ್ಷ ಪ್ರಥಮ ರ್‍ಯಾಂಕ್ ಬರುವ ತಮ್ಮ, ಇವರ ನಡುವಿನ ಸಂಭಾಷಣೆ ಓದುಗನಿಗೆ ಆಸಕ್ತಿದಾಯಕ ಎನಿಸುತ್ತದೆ.ಮುಗಿಯುತ್ತದೆ

ಕಟ್ಟಕಡೆಗೂ ತನ್ನ ರ್‍ಯಾಂಕ್ ನಿಂದ ಅಹಂಕಾರ ತಲೆಗೇರಿಸಿಕೊಂಡ ತಮ್ಮ, ಅಣ್ಣನವರ ಕಟಿ ಬಿರುಸು ಸತ್ಯವಾದ ಮಾತುಗಳಿಗೆ ಶರಣಾಗಿ ತನ್ನನ್ನು ತಿದ್ದಿಕೊಳ್ಳುತ್ತಾನೆ. ಕೊನೆಯವರೆಗೂ ಅಣ್ಣಂದಿರ ವಿರುದ್ಧ ನಿಲ್ಲುತ್ತಾನೇನೋ ಎಂದು ಓದುಗ ಅಂದುಕೊಳ್ಳುತ್ತಿರುವಂತೆ ಕಥೆ ಸಾಗಿ, ಕೊನೆಯಲ್ಲಿ ಅಣ್ಣನವರ ಅನುಭವದ ಮಾತುಗಳಿಗೆ ಬೆಲೆಕೊಡುವ ತಮ್ಮ ನಮಗೆ ಇಷ್ಟವಾಗುತ್ತಾನೆ. ಇವರದೇ ಮತ್ತೊಂದು ಕಥೆ “ಪರೀಕ್ಷೆ” ಯೂ ಬಹಳ ಮಾರ್ಮಿಕವಾಗಿದೆ.

ರಾಜ್ಯಕ್ಕೆ ಮಂತ್ರಿಯನ್ನು ಆಯ್ದುಕೊಳ್ಳಲು ರಾಜನ ಪರೀಕ್ಷೆ ವಿಶೇಷವಾಗಿದ್ದು; ಮಂತ್ರಿಯಾಗುವವನಿಗೆ ವಿದ್ಯೆಗಿಂತ ಬಹುಮುಖ್ಯವಾದುದು ಧೈರ್ಯ, ಸಾಹಸ, ಉದಾರತೆ ಎಂಬ ನೀತಿ ಓದುಗನ ಮತಿಗೆ ತಾಗುತ್ತದೆ. ಮತ್ತು ಆ ನೀತಿ ಅಳವಡಿಸಿಕೊಳ್ಳಬೇಕು ಅನಿಸುವಂತೆ ಲೇಖಕಿ ಕಥೆಯನ್ನು ಅನುವಾದಿಸಿದ್ದಾರೆ.

ಮಕ್ಕಳಾಗದೇ ಪರಿತಪಿಸುವ ಹೆಣ್ಣು (ದೊಡ್ಡಮ್ಮ- ಮೂಲ ಕಥೆಗಾರರು -ವಿಶ್ವಂಬರ ಶರ್ಮ ಕೌಶಿಕ) ತನ್ನ ಮೈದುನನ ಮಕ್ಕಳ ಸಾವನ್ನು ಬಯಸಿ ಮನೋರೋಗಿ ಏನೋ ಎನ್ನಿಸುವಂತೆ ವರ್ತಿಸಿ ಅಂತಿಮದಲ್ಲಿ ನಡೆದ ಘಟನೆಯಿಂದ ಮೈದುನನ ಮಕ್ಕಳನ್ನೇ ತನ್ನ ಮಕ್ಕಳೆಂದು ಪ್ರೀತಿಸುವ ಹಂತಕ್ಕೆ ಕಥೆ ಅರ್ಥಪೂರ್ಣವಾಗಿ ಮುಗಿಯುತ್ತದೆ.

ಅನುವಾದಿತ ಕಥೆಗಳಾದರೂ ಎಲ್ಲಿಯೂ ಕಥೆಗಳು ತಮ್ಮತನವನ್ನು, ಆಸಕ್ತಿದಾಯಕತ್ವವನ್ನು ಬಿಟ್ಟುಕೊಡುವುದಿಲ್ಲ. ಕಥೆಯ ಉದ್ದೇಶಕ್ಕೆ ಚ್ಯುತಿ ಬಾರದಂತ ನಿರೂಪಣೆ, ಸಾಹಿತ್ಯ ಲೇಖಕಿಯವರಿಂದ ಮೂಡಿಬಂದಿದ್ದು ಅಭಿನಂದನಾರ್ಹರಾಗುತ್ತಾರೆ.

ಒಟ್ಟಿನಲ್ಲಿ ಲೇಖಕಿ, ಸಹೋದರಿ ಶ್ರೀಮತಿ ಮಾಧುರಿ ದೇಶಪಾಂಡೆಯವರ ಬೇರೆ ಬೇರೆ ಕೃತಿಗಳ ಒಟ್ಟು ಸಂಕಲನವಾದ ಈ “ಕಥಾ ರಂಜನಿ” ಪರಿಪೂರ್ಣ ಕೃತಿಯಾಗಿದೆ. ಎಲ್ಲಿಯೂ ಓದುಗನ ಚಿತ್ತ ಕದಡದಂತೆ ತನ್ನಲ್ಲೇ ಉಳಿಸಿಕೊಳ್ಳುವ ಕೃತಿ ಇದಾಗಿದೆ.

ವಿಶೇಷ ಕಥಾವಸ್ತುಗಳು ಈ ಸಂಕಲನದಲ್ಲಿ ಇಲ್ಲ, ಎಂದು ಓದುಗನಿಗೆ ಅನಿಸಿದರೂ ನಮ್ಮ ಬದುಕಿಗೆ ಹತ್ತಿರ ಇರುವ, ಸತ್ಯಕ್ಕೆ ಕನ್ನಡಿಯಂತಿರುವ ಕಥೆಗಳು ಇವು ಎಂದು ಅನ್ನಿಸದೇ ಇರದು. ಜೊತೆಗೆ ಅನವಶ್ಯಕವಾಗಿ ಕಥೆಗಳ ಪ್ರಾರಂಭದಲ್ಲಿ ಕಥೆಯ ಪಾತ್ರಗಳ ಹೊರತಾಗಿ ಅನೇಕ ಸಂಬಂಧಗಳನ್ನು ಅವರ ಹೆಸರುಗಳನ್ನು ಸೂಚಿಸುವ ಅವಶ್ಯಕತೆ ಇದ್ದಿಲ್ಲ ಎಂಬುದರ ಹೊರತಾಗಿ ಎಲ್ಲ ಕಥೆಗಳು ಓದುಗನಿಗೆ ಇಷ್ಟವಾಗುತ್ತವೆ. ಯಾವುದೇ ಕಲ್ಪನೆಗಳಿಲ್ಲದ, ವೃಥಾ ವರ್ಣನೆ, ಹೋಲಿಕೆಗಳಿಲ್ಲದ ಕಥೆಗಳು ಆಪ್ತವಾಗಿಯೇ ಉಳಿದು ಬದುಕಿನ ನೈಜ ಚಿತ್ರಣವನ್ನು ನೀಡುತ್ತದೆ.

ಇಂತಹ ಅನೇಕಾನೇಕ ಕಥೆಗಳು ಸಹೋದರಿ ಮಾಧುರಿಯವರಿಂದ ಮತ್ತಷ್ಟು ಮೂಡಿಬರಲಿ, ಓದುಗನಿಗೆ ರಸದೌತಣ ನೀಡಲಿ ಎಂದು ಆಶಿಸುತ್ತಾ‌ ನನ್ನ ಕೃತಿ ಪರಿಚಯಕ್ಕೆ‌ ವಿರಾಮ ನೀಡುತ್ತೇನೆ.

‍ಲೇಖಕರು Admin

February 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: