ವಜ್ರಕಂಠದ ಅಂಜನಾಪುರದ ವಿ ವಜ್ರಮುನಿ…

ಲಕ್ಷ್ಮಣ್ ವಿ ಎ

ಓಹ್ ! ಇದು ವಜ್ರಮುನಿಯವರ ಮನೆ ಇರಬಹುದಾ? ಎಂದು ಒಂದು ಬಾರಿ ಚಕಿತನಾಗಿ ನಿಂತೆ! ಗಾಡಿ ಸೈಡಿಗೆ ಹಾಕಿ ಒಂದು ಕ್ಷಣ ಸುತ್ತ ಕಣ್ಣಾಡಿಸಿದೆ. ಒಳಗೆ ಪುರಾತನ ಕಾಲದ ಒಂದು ಬಂಗ್ಲೋ ಇದ್ದಂತಿತ್ತು, ಅದರ ಎಡಗಡೆಗೆ ವಜ್ರಗಿರಿ ನರ್ಸರಿ, ಆರೆಂಟು ಹಸು ಕುರಿ ಕೋಳಿ ಇನ್ನೇನೊ. ಒಳಗೆ ಹೋಗಲು ಯಾವ ಕಾರಣಗಳೂ ಇರಲಿಲ್ಲ, ಆದರೆ ಈ ಮನೆ ಅವ್ರದೇನಾ ಎಂಬ ಅನುಮಾನ ಬಂದು ಸುತ್ತ ಯಾರನ್ನಾದರೂ ಕೇಳೋಣವೆಂದುಕೊಳ್ಳುವಷ್ಟರಲ್ಲಿ ಒಂದು ಆಟೋ ಪಾಸಾಯಿತು, ಹಿಂದಿ ಮಾತನಾಡುವ ವಲಸೆ ಕಾರ್ಮಿಕರ ಗುಂಪು ಹೋಯಿತು.

ತುಸು ಮುಂದೆ ಹೋಗಿ ಸರ್ಕಲ್ಲಿನ ಬೇಕರಿಯಲ್ಲಿ ಒಂದು ಕಾಫಿ ಕುಡಿಯುತ್ತ ಕೇಳಿದೆ- ಅಣ್ಣಾ ಅಲ್ಲಿ ಕಾಣಿಸ್ತದಲ್ಲ ಆ ಬಿಲ್ಡಿಂಗು ಅದು ಚಲನಚಿತ್ರ ನಟ ವಜ್ರಮುನಿಯವರದ್ದಾ ಎಂದು ಕೇಳಿದೆ. ಹೌದು ಎನ್ನುವ ಹಾಗೆ ತಲೆಯಲ್ಲಾಡಿಸುತ್ತ ಕಸ್ಟಮರಿಗೆ ಕಾಫೀ ಸಿಗರೇಟು ಕೊಡುತ್ತ ಬಿಜಿಯಾದ. ಸಾಮಾನ್ಯವಾಗಿ ಕಲಾವಿದರಿಗೆ ಕವಿಗಳಿಗೆ ತಮ್ಮದೇ ಊರಿನಲ್ಲಿ ಒಂಥರಾ ಉದಾಸೀನ ಉಡಾಫೆ ಇರುತ್ತದೆ.

ಈ ಹಿಂದೆ ಮಾಸ್ತಿ ಎಂಬ ಊರಿಗೆ ಕೇವಲ ಮಾಸ್ತಿಯವರ ಮನೆ ನೋಡಲು ಬೆಂಗಳೂರಿನಿಂದ ಹೋಗಿದ್ದೆ.ಗೆಳೆಯ ಡಾ. ಸಲೀಂ ಅಲ್ಲೇ ಇದ್ದದ್ದೂ ಹೋಗಲು ಒಂದು ಕಾರಣವಾಗಿತ್ತು.ಅಲ್ಲೂ ಹೀಗೆ ಈಗ ವಜ್ರಮುನಿ ನೆನಪಿಸಿಕೊಂಡು ಮನಸು ಮೂವತ್ತು ವರುಷ ಹಿಂದಕ್ಕೆ ಓಡಿತು. ನಮ್ಮೂರಿನಲ್ಲಿ ಸಿನೇಮಾ ಟಾಕೀಜು ಇರಲಿಲ್ಲ. ತುಸು ದೊಡ್ಡ ಊರಾದ ಐನಾಪೂರದಲ್ಲಿ ಜಯಶ್ರೀ ಟೂರಿಂಗ್ ಟಾಕೀಜು ಆ ಕಾಲದ ನಮ್ಮ ಖಾಯಂ ಎಂಟರ್ಟೈನ್ಮೆಂಟ್.

ಬಯಲು ಸೀಮೆಯ ಆ ಉರುಟುರುಟು ನೆಲದ ಮೇಲೆ ಮುಂದಿನ ಬೆಳ್ಳಿ ಪರದೆಯ ಮೇಲೆ ರಾಜಕುಮಾರ,ಶಂಕರ್ ನಾಗ, ವಿಷ್ಣುವರ್ಧನ, ಟೈಗರ್ ಪ್ರಭಾಕರ ಮತ್ತು ವಜ್ರಮುನಿ. ಸಾಂಗ್ಲಿಯಾನ ಚಿತ್ರ ನೋಡಿ ಬಂದ ಮಾರನೇಯ ದಿನ ನಮ್ಮ ಓಣಿಯಲ್ಲಿ ಆ ಸಿನೇಮಾದ ಪಾತ್ರಗಳ ನಕಲು ನಾಟಕ ನಡೆಯುತ್ತಿತ್ತು ಅಷ್ಟೇ ಅಲ್ಲ ಬೆಂಗಳೂರಿನಲ್ಲಿ ಹೀರೋ /ಹೀರೋಯಿನ್ ಗಳಿರಬಹುದಾದ ಮನೆ,ವಿಲಾಸ ಎಲ್ಲ ಒಂದು ಕ್ಷಣ ನೆನಪಿಸಿಕೊಂಡು ಛೇ ! ಬೆಂಗಳೂರಿಗರು ಎಷ್ಟು ಅದೃಷ್ಟವಂತರಲ್ಲ ಎಂದು ಎನಿಸಿ ಕರಬುತ್ತಿದ್ದೆವು.

ಪ್ರತಿ ವರ್ಷ ಮಕರ ಸಂಕ್ರಾಂತಿಯಲ್ಲಿ ಐನಾಪುರ ಜಾತ್ರೆ ನೆರವೇರುತ್ತಿತ್ತು. ಜಾತ್ರೆಯೆಂದರೆ ನಮಗೆ ಸಿನೇಮಾ ಮಾತ್ರ ನೆನಪು. ಮಹಾರಾಷ್ಟ್ರದ ಮೀರಜ್ ಸಾಂಗ್ಲಿ ಸಾತಾರಾ ಕೊಲ್ಲಾಪುರ ದ ಕಡೆಯಿಂದ ದೊಡ್ಡ ದೊಡ್ಡ ಟೆಂಟುಗಳು ಬರುತ್ತಿದ್ದವು. ಅದರ ಜೊತೆಗೆ ನಾಟಕ ಕಂಪನಿಗಳು ಸರ್ಕಸ್ಸು,ತಮಾಷಾ ತಂಡಗಳು, ದೊಡ್ಡ ತೂಗು ತೊಟ್ಟಿಲುಗಳು, ಪೋಟೋ ಸ್ಟುಡಿಯೋಗಳು, ಪಾತ್ರೆ ಪಗಡೆ, ಎತ್ತು, ಹಸು ಮಾರುವವರು.ಈ ಜಾತ್ರೆ ನೆರೆಯುವ ಹೊತ್ತಿನ ಸುಮಾರಿಗೆ ನಮ್ಮ ಹೊಲದಲ್ಲಿ ಬೆಳೆದ ಬಿಳಿಜೋಳ ಕೂಡ ಕುಯ್ಲಿಗೆ ಬಂದಿರುತ್ತಿತ್ತು. ತೆನೆ ಸಮೇತ ಕುಯ್ದ ಫಸಲು ಕಾಯಲು ನಾನು ನಮ್ಮ ಅಣ್ಣಂದಿರೊಂದಿಗೆ ಹೊಲಕೆ ಹೋಗಬೇಕಿತ್ತು.

ನಾನು ಯಾಕೆ ಹೋಗಬೇಕಿತ್ತೆಂದರೆ ನಮ್ಮ ಅಣ್ಣಂದಿರು ಹಾಗು ಅಕ್ಕ ಪಕ್ಕದ ಸಂಗಡಿಗರು ಜೋಳ ಕಾಯುವ ನೆಪ ಹೂಡಿ ರಾತ್ರಿ ಸಿಲೇಮಾ ನೋಡಲು ಹೋಗುತ್ತಿದ್ದರು. ಯಾರಿಗೂ ಗೊತ್ತಾಗದಿರಲೆಂದು, ಜೋಳ ಕದಿಯುವ ಕಳ್ಳರಿಗೆ ದಿಕ್ಕು ತಪ್ಪಿಸಲು ಮಾಮೂಲಿ ಹಾಸಿಗೆ ಹಾಸಿ ಅದರ ಮೇಲೆ ಒಂದು ಜೋಳದ ಸೂಡು ಇಟ್ಟು ಅದರ ಮೇಲೆ ಹೊದಿಕೆ ಇಟ್ಟು ಥೇಟ್ ಇಲ್ಲಿ ಯಾರೋ ಮನುಷ್ಯರು ಮಲಗಿರಬೇಕೆಂದು ತಿಳಿಯಬೇಕು.ನಮ್ಮ ಜೊತೆಗೆ ಒಂದು ನಾಯಿ ಕೂಡ ಇರುತ್ತಿತ್ತು, ಅದಕ್ಕೆ ಹೊಟ್ಟೆ ತುಂಬ ಊಟ ಹಾಕಿ ಅದನ್ನು ಅಲ್ಲೇ ಕಟ್ಟಿ ನಾವೆಲ್ಲಾ ದರೋಡೆಕೋರರಂತೆ ಕಳ್ಳ ಹೆಜ್ಜೆ ಇಡುತ್ತ ಎರಡೇ ಕಿ ಮಿ ದೂರವಿದ್ದ ಟೂರಿಂಗ್ ಟಾಕೀಜಿನ ಕಡೆಗೆ ನಡೆಯುತ್ತಿದ್ದೆವು.

ಅರೆಬೆಳದಿಂಗಳ ರಾತ್ರಿಯಲ್ಲಿ ಸಿನೇಮಾ ನೋಡುವ ಹುರುಪಿನಲಿ ದಾರಿ ಸಾಗಿದ್ದೇ ಗೊತ್ತಾಗುತ್ತಿರಲಿಲ್ಲ. ಸಾಮಾನ್ಯವಾಗಿ ಜಾತ್ರೆಯಲ್ಲಿ ಇಡೀ ರಾತ್ರಿ ಸಿನೇಮಾಗಳು ಪ್ರದರ್ಶನವಾಗುತ್ತಿದ್ದವು. ಸಾಯಂಕಾಲ ಆರರಿಂದ ಶುರುವಾಗುತ್ತಿದ್ದ ಆಟಗಳು ಬೆಳಗಿನ ತನಕ ನಡೆಯುತ್ತಿದ್ದವು.ಹೀಗಾಗಿ ನಮ್ಮ ಬಜೆಟ್ ಹೊಂದಿಸಿಕೊಂಡು ಸಮಯ ನೋಡಿಕೊಂಡು ಒಂದು ಅಂದಾಜಿನಲ್ಲಿ ಹೋಗಿ ಮತ್ತೆ ರಾತ್ರಿ ಮರಳಿ ಅದೇ ಹಾಸಿಗೆಯ ಮೇಲಿನ ಜೋಳದ ಸೂಡು ತೆಗೆದು ಮಲಗುತ್ತಿದ್ದೆವು.

ಹೊಟ್ಟೆ ಹಸಿದಿದ್ದರೆ ಶೇಂಗಾ ಬಳ್ಳಿಯ ಕಿತ್ತು ಉರಿ ಹಾಕಿ ಸುಟ್ಟು ತಿನ್ನುತ್ತಿದ್ದೆವು.ನಮ್ಮ ಕಳ್ಳಾಟ ಈ ನಾಯಿಗೆ ಏನು ಅನಿಸಿತ್ತೋ ಏನೊ ? ನೀರು ಕುಡಿದು ಮೇಲೆ ಚುಕ್ಕಿಗಳ ನೋಡುತ್ತ ಮಲಗಿದವನಿಗೆ ತುಸುವೇ ದೂರದ ಟಾಕೀಜಿನಲ್ಲಿ ನಡೆಯುತ್ತಿದ್ದ ಸಿನೇಮಾದ ಹಾಡುಗಳು ನಾಟಕದ ರುದ್ರ ದೃಶ್ಯದ ಸಂಭಾಷಣೆಗಳು ಗಾಳಿಯಲ್ಲಿ ತೇಲಿ ಬಂದು ನಮ್ಮ ಕಿವಿಗೆ ಅಪ್ಪಳಿಸಿ ನಾವು ಮತ್ತೊಮ್ಮೆ ಆ ಚಿತ್ರ ನೋಡುವ ಅನುಭವ ಕೊಡುತ್ತಿದ್ದವು. ಅದರಲ್ಲೂ ಈ ವಜ್ರಮುನಿಯೆಂಬ ಖಳ ನಟನ ಸಾಂಗ್ಲಿಯಾನ ……. ಎಂದು ಅರಚುವುದಂತೂ ನಮಗೆ ಮರೆಯಲಾರದ ಡೈಲಾಗುಗಳು.

ಕೆಳಗೆ ಕಪ್ಪು ನೆಲದ ಜೋಳ ಕುಯ್ದ ಉರುಟುರುಟಿನ ನೆಲ ಮೇಲೆ ತಾರೆ, ಚಂದ್ರ, ಮೋಡ ಸುತ್ತ ಬೆಳದಿಂಗಳು, ಸ್ವಲ್ಪ ಸದ್ದಾದರೆ ಬೊಗಳುವ ನಾಯಿ, ಎಲ್ಲೋ ಜೀರುಂಡೆ ಸದ್ದು. ನಾವಿರುವ ಕ್ಷಿತಿಜದಾಚೆಗೆ ಇಡೀ ಚಿತ್ರರಂಗ ಕುಣಿಯುವ ಅರ್ಧ ಕನಸಿನ ಅರ್ಧ ಎಚ್ಚರದ ರಾತ್ರಿಗಳು. ಎಲ್ಲಿಯ ಐನಾಪುರ ಎಂಬ ಜಯಶ್ರೀ ಟೂರಿಂಗ್ ಟಾಕೀಜು ಮತ್ತು ಈಗ ನನ್ನ ಪಕ್ಕದಲ್ಲೇ ಇರುವ ವಜ್ರಕಂಠದ ಅಂಜನಾಪುರದ ವಿ.ವಜ್ರಮುನಿ ? ಎತ್ತಣದಿಂದೆತ್ತ ಎಸೆದ ಬದುಕು!

‍ಲೇಖಕರು Admin

April 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: