ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೋಲಾಕ್ಷಿ

 ಬೆಂಶ್ರೀ ರವೀಂದ್ರ 

**

ಬೇಕೇ ಅವಲೋಕನ ಎಪ್ಪತ್ತಕ್ಕೆ ಲೋಲಾಕ್ಷಿ

ನಿನ್ನ ಪರಿಣಯದ ಬೆರಗಿನ್ನೂ 

ಬಿಸಿಯುಸಿರ ಬಾಗಿನವ ನೀಡುತ್ತಿರಲು

ಏಕೆ ಗಣಿಸಲಿ ಅಂಕಿಸಂಖ್ಯೆಗಳನ್ನು

ಜಾರಿದ ಅಂಕ ಪರದೆಗಳನು

ಒಂದು ವೇಳೆ ಬೇಕೆಂದರೆ… ಒಂದು….ಎರಡು…. ಮತ್ತೆ ಬೇಕಾದಿತಲ್ಲ ಎಪ್ಪತ್ತು…. ಹ್ಞಾ….

ವರ್ತಮಾನದಲಿ ನಿಂದು 

ಭೂತಕ್ಕೊಂದು ನೋಟ ಎಸೆದು 

ಭವಿಷ್ಯಕ್ಕೆ ಕಟ್ಟಲೇನು ಗರಿಯ

ಈಗ ಕೂಟವಿಳಿದು ಹೊರಟಿದ್ದೇನೆ 

ಮೂಲಶಿಬಿರಕ್ಕೆ  

ಅದರ ಕುರುಹುಗಳೇ ಕಾಣುತ್ತಿಲ್ಲವಲ್ಲ

ಇಲ್ಲೇ ಇತ್ತಲ್ಲವೇ

ಗಾಳಿ  ನೀರು ಬಿಸಿಲು ತಾಪಕ್ಕೆ ಪಾತಕ್ಕೆ ಆಘಾತಕ್ಕೆ ಆಯಿತೇ ಬುಡಮೇಲು

ಅಳಿಸಿತೇ ಹಳೆಯ ಹಾದಿ

ಅಗೋ… ಅಲ್ಲಿ….ಮೇಲಕ್ಕೆ….. ಅಂತ್ಹೇಳಿದವರಾರೂ ಕಾಣುತ್ತಿಲ್ಲವಲ್ಲ

ಪಾಪ ಒಳ್ಳೆಯವರು ಏನಾದರೋ

ಎಷ್ಟು ಜನ ಸಿಕ್ಕರು ಗುಡ್ಡವೇರುವಾಗ

ತರತರದ ತರೆಹೆವಾರಿ

ಕೆಂಚು ಬಿಳುಪು ಕಪ್ಪು ಹಳದಿ

ಉದ್ದ ಗಿಡ್ಡ ಡುಮ್ಮ ಸಣಕಲ

ಕೆಲವರ ಮೂಗಂತೂ ನೆಲಮುಟ್ಟಿತ್ತು

ಅಂಟಿದರು ಬೇರಾದರು ಸೆಳೆದರು 

ಬಂದವರು ಯಾರೂ ಹೋಗಲಿಲ್ಲ

ಇದ್ದವರು ಇರುವವರು ಈಗ

ಜೊತೆಯಾಗಿಯೇ ಹಾಕುತ್ತಿರುವರು ಹೆಜ್ಜೆ

ಗಂಡು ಹೆಣ್ಣು ಪಕ್ಷಿ ಪ್ರಾಣಿ ಅದು ಇದು

ಕಟ್ಟಿದೆ ಕಿಣಿಕಿಣಿ ಗೆಜ್ಜೆ

ಗುಡಿ ಗುಡಾರ ಗಹ್ವರಗಳ ಅನಂತದಲಿ

ವ್ಯೋಮದ ನೀಹಾರಿಕೆ ನಕ್ಷತ್ರಪುಂಜಗಳಲಿ

ಗೂಢವಿಸ್ಮಯದ ಬುಡ್ಡಿಯನಿಟ್ಟು 

ತೇಲಿ ಬಿಟ್ಟ ಆಕಾಶ ಬುಟ್ಟಿ ನಾನು

ಯಾರು ನೀನು ನೀನು ಯಾರು 

ಅನಾಹತ ಅಕ್ಷರ ಅಗಣಿತ ಅಹತವೇ

ಹುಡುಕು ಎಂದಷ್ಟೆ ಹೇಳಿದೆಯಾ

ಉರುಳುವ ಕಲ್ಲುಗಳು 

ನೆಲದ ತೇವವ ಹೀರಲಾರದು

ಎಷ್ಟೂಂದು ತಿಣುಕುಗಳು 

ಸಂತಸದ ಮಿಣಕುಗಳಾದವು

ನೆನಪೆಂಬ ಭಾರದ ಹೊರೆಗೆ ಬಾಗಿದರೂ 

ಬೇಸರವಿಲ್ಲ ಈಗ ಇಲ್ಲೇ ಒಗೆದು ಬಿಡುವೆ

ಅಷ್ಟು ಸುಲಭವೇ ಸುಭಗೆ ಈ ಮಣ್ಣ ಭಾರ

ನನ್ನ ಮಾಡಿದವರಿಗೆಲ್ಲ ಬಾಗಲೆಬೇಕು

ಹಾಡಬೇಕು ಋಣಸಂಪದದ ಉಸಿರಸಾರ

ನಮಸ್ಕಾರ ಯಾರಿಗೆ ಮಾಡಲಿ

ನಿನಗೆ ಅವಗೆ … ಹೀಗೆ… ಹಾಗೆ…

ಚಿತ್ತ ಚಿತ್ತಾರದ ಬೆಡಗು ಭಾನಗಡಿಗೆ

ಏನು ಬ್ಯಾಡ ಇಲ್ಲಿ ಬಾ

ಬಾಗಿನವನ್ನು ಬಿಚ್ಚಿಟ್ಟಿದ್ದೇನೆ

ಬೇಗ  ಕೂತು ಉಣ್ಣುವ

ಚಂದದ ಗಾಳಿಲಿ ಮಿಕ್ಕಿದ್ದು ಹಾರಿಬಿಡುವ.

ಕವಿಯೇ ನೀನೇನೋ ಹೇಳಿಬಿಟ್ಟೆ ನಿರ್ಭಿಡೆಯಿಂದ ಲೋಲಾಕ್ಷಿ ಅಂತ

ಹೇಳಲಾರೆ ನಾನು ಲೋಲಾಕ್ಷ ಅಂತ  

‍ಲೇಖಕರು Admin MM

27 February, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading