‘ಲೇಖ’ಕಿ ‘ಲೋಕ’ದ ಅನಾವರಣ

ಗಿರಿಜಾ ಶಾಸ್ತ್ರಿ

ಕರ್ನಾಟಕ ಲೇಖಕಿಯರ ಸಂಘವು ಕೆಲವು ವರ್ಷಗಳಿಂದ ಲೇಖಕಿಯರು ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುವ ‘ಲೇಖಕಿಯರ ಆತ್ಮ ಕಥೆಗಳ ನಿರೂಪಣೆ ಮತ್ತು ಸಂವಾದ’ ಕಾರ್ಯಕ್ರಮವನ್ನು ಏರ್ಪಡಿಸುತ್ತಾ ಬಂದಿದೆ. ಎರಡು ವರುಷಗಳ ಹಿಂದೆ ನಮ್ಮ ಮುಂಬಯಿ ಗೆಳತಿಯರನ್ನೂ ಕಲೇಸಂ ಆಹ್ವಾನಿಸಿತ್ತು. ಅದರಲ್ಲಿ ನಾನೂ ಒಬ್ಬಳು. ಎಲ್ಲರೂ ಕುಪ್ಪಳಿಯಲ್ಲಿ ಸೇರಿದ್ದೆವು.

ಅತಿಪರಿಚಯ ಅವಜ್ಞೆಯನ್ನು ಉಂಟುಮಾಡುತ್ತದೆ ಎಂಬ ಮಾತಿದೆ. ಅಪರಿಚಯವೂ ಹಾಗೆಯೇ. ‘ಅಯ್ಯೋ ಇವರೇನು ಮಹಾ’ ಎನ್ನುವ ಭಾವ. ಎಂದೂ ಕಂಡಿರದ ೧೫ ಜನ ಲೇಖಕಿಯರು, ಉಳಿದ ಕಾರ್ಯಕರ್ತೆಯರು, ಆಹ್ವಾನಿತ ಅತಿಥಿಗಳು ಹೀಗೆ ಒಂದು ಮಹಿಳೆಯರ ದೊಡ್ಡ ತಂಡವೇ ಅಲ್ಲಿತ್ತು. ಆದರೆ ದೈಹಿಕವಾಗಿ ಪಕ್ಕದಲ್ಲೇ ಕುಳಿತಿದ್ದರೂ, ಮಾನಸಿಕವಾಗಿ ಮಾತ್ರ ಮುಂಬಯಿ ಶಿವಮೊಗ್ಗದಷ್ಟೇ ದೂರ. ಕಾರ್ಯಕ್ರಮ ಪ್ರಾರಂಭವಾಯಿತು. ಒಬ್ಬೊಬ್ಬರಾಗಿ ಮಹಿಳೆಯರು ಬಂದು ತಮ್ಮ ಬದುಕು ಬವಣೆ ಬರಹಗಳನ್ನು ಹೇಳಿಕೊಳ್ಳತೊಡಗಿದರು ‘ಅಯ್ಯೋ ಇದು ನನ್ನದೇ ಕತೆಯಲ್ಲ? ನನ್ನದೇ ಪಾಡು ಹಾಡು’ ಎನಿಸತೊಡಗಿತು. ಕೊನೆ ಕೊನೆಗೆ ನಾನೇ ಅವಳು, ಅವಳೇ ನಾನು ಎನ್ನುವ ಅವಿನಾಭಾವ!!! ಆಶ್ಚರ್ಯವೆಂದರೆ ಎಲ್ಲರೂ ತಮ್ಮ ಪಾಡುಗಳನ್ನು ನಗು ನಗುತ್ತಾ, ಉತ್ಸಾಹ ಉಲ್ಲಾಸಗಳಿಂದ, ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

ಬಣ್ಣ ಬಣ್ಣದ ಸೀರೆಗಳಿಂದ, ಚೆಂದವಾಗಿ ಸಿಂಗರಿಸಿಕೊಂಡು ಮಹಿಳೆಯರು ಅಲ್ಲಲ್ಲಿ ಸುಳಿದಾಡುತ್ತಿದ್ದುದು ಹಬ್ಬದ ವಾತಾವರಣವನ್ನು ಸೃಷ್ಟಿಸಿತ್ತೇ ವಿನಃ ಗೋಳಿನ ಕರುಣಾರಾಗ ಅಲ್ಲಿ ತಪ್ಪಿಯೂ ಸುಳಿಯಲಿಲ್ಲ. ಕಹಿಯಾದ ನೆನಪುಗಳನ್ನೂ ಸವಿಯುವ ಹಾಗೆ. ಕಹಿ ಅನುಭವಗಳಿಗೆ ಕಾಲದ ದೂರ ಸಿದ್ಧಿಸಿ ಸಿಹಿಯಾಗಿತ್ತು. ಈ ಸಂತೋಷದಲ್ಲಿಯೇ ಕೆಲವರಂತೂ ವೇದಿಕೆಯಿಂದ ಕೆಳಗಿಳಿದು ಬಂದವರನ್ನು ಪರಸ್ಪರ ಅಪ್ಪಿಕೊಂಡಿದ್ದೂ ಇದೆ. ಒಂದು ದಿನದ ಕಾರ್ಯಕ್ರಮ ಮುಗಿದು ಬೆಳಿಗ್ಗೆ ಕಾಫಿಗೆ ಸೇರಿದಾಗ ಎಲ್ಲರ ಮುಖದಲ್ಲೂ ಪರಿಚಯದ ನಗೆ. ಕನ್ನಡದ ಖ್ಯಾತ ವಿದ್ವಾಂಸರಾದ ಎಲ್ ಗುಂಡಪ್ಪನವರ ಮಗಳು ಕಮಲಾ ಅವರೂ ಸನ್ಮಾನ ಸ್ವೀಕರಿಸಲು ಬಂದಿದ್ದರು. ಅವರ ಮಾತಿನ ಮೋಡಿಗೆ ಸಿಲುಕಿದ ನಾವೆಲ್ಲಾ ಅವರ ಸುತ್ತ ಗುಂಪು ಕೂಡಿಕೊಂಡು, ಅವರ ಕಾಲದ ಕತೆಯನ್ನು ಕೇಳುತ್ತಾ ದಾಂಧಲೆ ಎಬ್ಬಿಸಿದ ಕ್ಷಣಗಳನ್ನು ಮರೆಯುವ ಹಾಗೆಯೇ ಇಲ್ಲ.

ಕುಪ್ಪಳಿಯ ಅವಿಸ್ಮರಣೀಯ ನೆನಪುಗಳನ್ನು ಮುಂದುವರೆಸುವಂತೆ ಅನೇಕ ಲೇಖಕಿಯರು ಫೇಸ್ ಬುಕ್ ಮೂಲಕ ಗೆಳತಿಯರಾದರು. ಅಲ್ಲಿ ಪರಿಚಯವಾದ ಗೆಳತಿ ಉಷಾನರಸಿಂಹನ್ ಅವರು ಅಗಾಗ್ಗೆ ಫೋನು ಮಾಡುವುದರ ಮೂಲಕ ಪುಸ್ತಕಗಳನ್ನು ಕಳುಹಿಸುವುದರ ಮೂಲಕ ಸಂಪರ್ಕ ಇಟ್ಟುಕೊಂಡಿದ್ದಾರೆ. ಅಧ್ಯಕ್ಷೆಯಾದ ವನಮಾಲ ಸಂಪನ್ನಕುಮಾರ ಅವರಂತೂ ನನಗೆ ಮೊದಲಿನಿಂದಲೇ ಮೊಗಹೊತ್ತಿಗೆಯ ಗೆಳತಿ. ಕುಪ್ಪಳಿಗೆ ಹೋಗುವವರೆಗೆ ಅವರ ಮೊಗವನ್ನೇ ನಾನು ನೋಡಿರಲಿಲ್ಲ. ಈ ಮಾತಿಗೆ ಎರಡು ವರ್ಷಗಳಾಗಿವೆಯಷ್ಟೇ.

ಮಹಿಳೆಯರ ‘ಬದುಕು ಬರಹ’ ಮಹಿಳಾ ಆತ್ಮ ಚರಿತ್ರೆಯಲ್ಲಿ ದಾಖಲಾಗಬೇಕೆಂಬ ಕಲೇಸಂನ ಕನಸು ಲೇಖ-ಲೋಕ ( ಆತ್ಮ ಕಥಾನಕ ಸಂಕಲನ) ಕೃತಿಯ ಮೂಲಕ ನನಸಾಗಿದೆ. ಈವರೆಗೆ ಆರು ಸಂಕಲನಗಳು ಬಂದಿವೆ. ಇದು ಸಾಮಾನ್ಯವಾದ ಕೆಲಸವೇನಲ್ಲ. ಇದು ಅಪಾರ ಶ್ರಮ ಮತ್ತು ಸಮಯವನ್ನು ಬೇಡುತ್ತದೆ. ಹಾಗೆ ನೋಡಿದರೆ ಮಹಿಳೆಯರಿಗೆ ಮೌಲಿಕ ಸಮಯ(quality time) ಸಿಗುವುದು ಕಡಿಮೆ. ಅಲ್ಲದೆ ಹೊರಗೆ ಕೊರೋನಾ ಮಾರಿ ಬೇರೆ ವಕ್ಕರಿಸಿದ್ದಾಳೆ.

ಈ ಎಲ್ಲ ತಾಪತ್ರಯಗಳ ನಡುವೆಯೂ ಇದೀಗ ಏಳು ಮತ್ತು ಎಂಟನೆಯ ಸಂಕಲನಗಳು ಬಂದಿರುವುದು ಅಭಿನಂದನೀಯ. ಏಳನೆಯ ಸಂಕಲನದಲ್ಲಿರುವ ನನ್ನ ಬರಹ ಒಂದಿನಿತೂ ತಪ್ಪಿಲ್ಲದೆ ಸುಂದರವಾಗಿ ಅಚ್ಚಾಗಿದೆ. ( ಉಳಿದುದನ್ನು ಇನ್ನಷ್ಟೇ ಓದಬೇಕಾಗಿದೆ) ಇಲ್ಲಿನ ಎಲ್ಲಾ ಲೇಖಕಿಯರಿಗೆ ನನ್ನ ಅಭಿನಂದನೆಗಳು. ಕಲೇಸಂ ಅಧ್ಯಕ್ಷೆಯಾದ ವನಮಾಲ ಸಂಪನ್ನಕುಮಾರ, ಕಾರ್ಯದರ್ಶಿಯಾದ ಜಿ.ವಿ.ನಿರ್ಮಲಾ ಹಾಗೂ ಉಳಿದ ಪದಾಧಿಕಾರಿಗಳಿಗೆ, ಈ ಪುಸ್ತಕ ತರಲು ಶ್ರಮವಹಿಸಿದ ಎಲ್ಲಾ ಸುಮನಸ್ಸುಗಳಿಗೆ ನನ್ನ ಹೃತ್ಪೂರ್ವಕ ವಂದನೆ ಅಭಿನಂದನೆ. ಇದೇ ಬರುವ ಶುಕ್ರವಾರ ಈ ಕೃತಿಗಳ ಲೋಕಾರ್ಪಣೆ.

‍ಲೇಖಕರು Avadhi

February 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: