ಹೇಗೆ ಬಿಡಿಸಲಿ ಕಣ್ಣೊಳಗೆ ಅಳಿಸಲಾಗದ ಚಿತ್ರವ ?
ನಾಗರಾಜ ಹರಪನಹಳ್ಳಿ
ಎದೆಯೊಳಗೆ ಮಳೆ ಜಿನುಗುತ್ತಿದೆ
ಒಲೆಯೊಳಗೆ ಆಗ್ನಿ ಕುದಿಯುತ್ತಿದೆ
ಮೇಲೆ ಅರಳುತ್ತಿದೆ ಬದುಕು
ಅಂಗಳದಲಿ ಅರಳಿದ ಗುಲಾಬಿ
ಅವಳ ಕತೆ ಹೇಳುತ್ತಿದೆ
ನವಿರು ಪ್ರೇಮಕೆ ಉಳಿದಿರುವುದೊಂದೇ ಸಾಕ್ಷಿ
ಹೇಗೆ ಬಿಡಿಸಲಿ ಕಣ್ಣೊಳಗೆ
ಅಳಿಸಲಾಗದ ಚಿತ್ರವ ?
ಮುಂಗಾರು ಹೊತ್ತು ತಂತು
ಒಲವಿನ ನೆನಪು
ನೆಲ ಹದಗೊಳ್ಳುತ್ತಲೇ ಇದೆ
ಜೊತೆಗೂಡಿ ಕಾಳ ಬಿತ್ತೊಣ
ಹೊಲ ತುಂಬಿ ಬರಲಿ ತೆನೆ
ನೆಲದೊಳಗಿನ ಆಗೇವು
ಕಾಳು ತುಂಬಿ ಚೆಲ್ಲಲಿ ಎಂಬ ಕನಸು

ಮನೆಯೊಳಗಿನ ಒಡೇವು
ಬದುಕು ತುಂಬಿ ಚೆಲ್ಲಲಿ
ಅಡಕಲಿ ಸಾಲುಗಳು ನಗಲಿ
ಎಂಬ ಆಶಯ ಮೊಳಕೆಯೊಡೆಯಲಿಲ್ಲ
ನೀನು ಬಾರದೇ ಆಗೇವು
ಅಡಕಲಿ ನೆಲುವು ನಗಂದಿ
ಅಡ್ಡಣಗಿ ಮೇಲಿನ ಕಂಚಿನ ಗಂಗಾಳ
ಎಲ್ಲವೂ ಖಾಲಿ ಖಾಲಿ
ಲೆಕ್ಕವಿಡದೇ ಸುರಿದ ಮುಂಗಾರು
ಬೇಸರ ಮಾಡಿಕೊಂಡು ಹೊರಟುಹೋಯ್ತು
ಇನ್ನಾದರೂ ಕರುಣೆ ಬಾರದೇ
ನೀ ಬರುವ ದಾರಿಗೆ?






nice poem..