ಲುವಾಂಡಾದ 'ರಸ್ತೆ ಪುರಾಣ'


 
ಅದೊಂದು ದಾರಿ…
ಮುನ್ನೂರು ಚಿಲ್ಲರೆ ಕಿಲೋಮೀಟರುಗಳ ದಾರಿ…
ಆರೂವರೆ ತಾಸಿನ ಪ್ರಯಾಣವನ್ನು ಬೇಡುವ ದಾರಿ…
ಅಂಗೋಲಾದ ಲುವಾಂಡಾದಿಂದ ವೀಜ್ ವರೆಗಿನ ಈ ದಾರಿಯನ್ನು ನಾನು ಕಳೆದೆರಡು ವರ್ಷಗಳಲ್ಲಿ ಹಲವಾರು ಬಾರಿ ಕ್ರಮಿಸಿದ್ದೇನೆ. ಆದರೆ ಪ್ರತೀಬಾರಿಯೂ ಇಲ್ಲಾಗುವ ಅನುಭವಗಳ ಖದರೇ ಬೇರೆ. ಕೆಲವೊಮ್ಮೆ ಈ ಪ್ರಯಾಣವು ವಿಹಾರದ ಆಹ್ಲಾದವನ್ನು ತಂದರೆ, ಇನ್ನು ಕೆಲವೊಮ್ಮೆ ತೀರಾ ಶಿಕ್ಷೆಯೆಂಬಂತೆ ಸತಾಯಿಸಬಹುದು. ಹೀಗಾಗಿಯೇ ಲುವಾಂಡಾ-ವೀಜ್ ಗಳನ್ನು ಬೆಸೆಯುವ ಈ ದಾರಿಯು ನನಗೆ ಅಚ್ಚರಿ, ಅನಿರೀಕ್ಷಿತ, ಕೌತುಕಗಳ ಆಗರ. ಅಂಗೋಲಾಕ್ಕೆ ಬಂದಿಳಿದ ಮೊದಲ ದಿನದಿಂದ ಇಂದಿನವರೆಗೂ ಈ ಒಂದು ರಸ್ತೆಯು ತಕ್ಕಮಟ್ಟಿನ ನಿಗೂಢತೆಯನ್ನು ತನ್ನಲ್ಲಿ ಉಳಿಸಿಕೊಂಡು ನನ್ನನ್ನು ಬಹಳಷ್ಟು ಕಾಡಿದೆ.

ಮೊದಲೇ ಹೇಳಿದಂತೆ ರಾಜಧಾನಿಯಾದ ಲುವಾಂಡಾದಿಂದ ವೀಜ್ ಗಿರುವ ಮುನ್ನೂರು ಚಿಲ್ಲರೆ ಕಿಲೋಮೀಟರುಗಳ ದಾರಿಯಲ್ಲಿ ಎಪ್ಪತ್ತೈದು ಪ್ರತಿಶತ ಕಾಡಿನದ್ದೇ ಸಾಮ್ರಾಜ್ಯ. ಕೆಲವೊಮ್ಮೆ ದಟ್ಟಕಾಡಾದರೆ ಇನ್ನು ಕೆಲವೊಮ್ಮೆ ವಿಶಾಲ ಖಾಲಿ ಬಯಲುಪ್ರದೇಶಗಳು. ಕೆಲವೊಮ್ಮೆ ಪುಟ್ಟ ತೊರೆಯಂತೆ ಏನೋ ಕಂಡರೆ ಮತ್ತೆ ಕೆಲವೊಮ್ಮೆ ಧಾರಾಕಾರ ಮಳೆಗೆ ದಾರಿಮಧ್ಯದಲ್ಲಿ ಉರುಳಿಬಿದ್ದ ಕೊಂಬೆಗಳ ಸ್ವಾಗತ. ಇಪ್ಪತ್ತು-ಇಪ್ಪತ್ತೈದು ಕಿಲೋಮೀಟರುಗಳಿಗೊಮ್ಮೆ ಏಳೆಂಟು ಇಟ್ಟಿಗೆಯ ಪುಟ್ಟ ಮನೆಗಳ ಗುಂಪುಗಳು, ರಸ್ತೆಬದಿಯಲ್ಲಿ ಗೆಣಸು, ಬಾಳೆಕಾಯಿಗಳನ್ನು ಮಾರುತ್ತಿರುವ ಹೆಂಗಸರು ಕಾಣಸಿಕ್ಕರೆ ಅದೇ ದೊಡ್ಡದು. ಈ ಕಾಡಿನ ಗರ್ಭದಲ್ಲಿ ರಸ್ತೆಯ ಬದಿಗಳಲ್ಲಿ ತಕ್ಕಮಟ್ಟಿನ ಬಿಡಾರವೊಂದನ್ನು ಹೂಡಿಕೊಂಡು ಉದ್ಯಮದಂತಹ ಪುಟ್ಟ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಿಕೊಂಡ ಚೀನೀಯರನ್ನು ಬಿಟ್ಟರೆ ಅಂಗಡಿಗಳಾಗಲೀ, ಮಾರುಕಟ್ಟೆಗಳಾಗಲೀ, ಆಸ್ಪತ್ರೆಗಳಾಗಲೀ ಅಥವಾ ಇತರೆ ಕಟ್ಟಡಗಳಾಗಲೀ ಇಲ್ಲಿಲ್ಲ.
ಸೂರ್ಯದೇವ ನೆತ್ತಿಯ ಮೇಲೆ ನಿಗಿನಿಗಿ ಸುಡುತ್ತಿರುವಾಗ, ಹೀಗೆ ಏನೆಂದರೆ ಏನೂ ಇಲ್ಲದ ಜಾಗದಲ್ಲೊಮ್ಮೆ ವಾಹನದಿಂದ ಇಳಿದು ಸುಮ್ಮನೆ ಅತ್ತಿತ್ತ ನೋಡಬೇಕು. ಅದರ ಅನುಭವವೇ ಬೇರೆ. ತಲೆಯೆತ್ತಿ ನೋಡಿದರೆ ಆಗಸ, ಸುತ್ತಲೂ ವಿಶಾಲ ಬಯಲುಪ್ರದೇಶ, ಕಾಲಡಿಯಲ್ಲಿ ನೆಲ ಮತ್ತು ಪಕ್ಕದಲ್ಲಿ ನಿಂತಿರುವ ವಾಹನ. ಎತ್ತ ನೋಡಿದರೂ ಮಾನವನ ಸುಳಿವಿಲ್ಲದ ಆ ಪ್ರದೇಶವನ್ನು ನೋಡಿದರೆ ಇದೇನು ಹೊಸ ಗ್ರಹವೊಂದಕ್ಕೆ ಬಂದಿಳಿದುಬಿಟ್ಟೆವೋ ಎಂಬಂತಾಗುತ್ತದೆ. ಇಡೀ ಜಗತ್ತಿನ ಜನರೆಲ್ಲರೂ ಖಾಲಿಯಾಗಿ ನಾವಷ್ಟೇ ಉಳಿದುಬಿಟ್ಟೆವೋ ಎಂಬ ವಿಚಿತ್ರ ದಿಗಿಲಾಗುತ್ತದೆ. ಆ ವಿಚಿತ್ರ ಮೌನ, ರಣಬಿಸಿಲು, ಗಾಳಿಗೆ ಮೆಲ್ಲನೆ ತಲೆದೂಗುವ ಒಣಹುಲ್ಲುಗಳ ರಾಶಿ, ದಿಕ್ಕುತಪ್ಪಿದಂತೆ ಎಲ್ಲೆಂದರಲ್ಲಿ ಹಾರಾಡುತ್ತಿರುವ ಚಿಕ್ಕ ಅಪರಿಚಿತ ಚಿಟ್ಟೆ, ಹೆಸರು ಗೊತ್ತಿಲ್ಲದ ಕೀಟಗಳ, ಹಕ್ಕಿಗಳ ಸದ್ದು, ನಮ್ಮನ್ನೇ ದುರುಗುಟ್ಟಿನೋಡುತ್ತಿರುವ ಓತಿಕ್ಯಾತ, ಮಾತಿಲ್ಲದೆ ಮೈಸೋಕುವ ಗಾಳಿ… ಇವೆಲ್ಲವೂ ಹುಟ್ಟಿಸುವ ರೋಮಾಂಚನದಲ್ಲಿ ಅಚ್ಚರಿ, ಆತಂಕ, ಭಯಗಳ ವಿಲಕ್ಷಣವಾದ ಮಿಶ್ರಣವಿದೆ.
ಇದರಲ್ಲೇನು ಭಯ, ಆತಂಕ, ಅಚ್ಚರಿ ಎನ್ನುವಿರಾ? ಹಾಗಿದ್ದರೆ ಇಂಥಾ ಅನುಭವಗಳು ನಿಮಗಾಗಿಲ್ಲವೆಂದೇ ಹೇಳಬೇಕು. ಏಕೆಂದರೆ ತನಗೆ ಮನಃಶ್ಶಾಂತಿ ಬೇಕು ಎಂದು ಹೇಳುವ ಮನುಷ್ಯ ದೂರದ ಪರ್ವತ ಪ್ರದೇಶಗಳಿಗೆ ಹೋಗುವುದು, ಇನ್ನೇನೋ ಮಾಡುವುದು ಇತ್ಯಾದಿಗಳೆಲ್ಲಾ ಒಂದು ರೀತಿಯಲ್ಲಿ ಏಕಾಂತವನ್ನು ಹಂಬಲಿಸುವ, ಇರುವ ಏಕತಾನತೆಯನ್ನು ತೊರೆದು ಹೊಸದನ್ನು ಅನುಭವಿಸಬಯಸುವ ತುಡಿತವಷ್ಟೇ. ಅಸಲಿಗೆ ತನ್ನ ಸುತ್ತಮುತ್ತ ಮತ್ತು ತನ್ನೊಳಗೆ ಏನಾದರೊಂದು ನಡೆಯುತ್ತಿದ್ದರೇನೇ ಮನುಷ್ಯನಿಗೆ ಸಮಾಧಾನ. ಒಂದೆರಡು ನಿಮಿಷಗಳಿಗಿಂತ ಹೆಚ್ಚಿನ ನಿರ್ವಾತ, ಮೌನಗಳು ಅವನನ್ನು ಕಂಗೆಡಿಸಬಲ್ಲದು. ಹೀಗಾಗಿಯೇ ಆತ ಸಂಗೀತದ, ಪುಸ್ತಕಗಳ ಮೊರೆಹೋಗುತ್ತಾನೆ. ಯಾರಿಗೋ ಫೋನು ಹಚ್ಚುತ್ತಾನೆ. ಎಲ್ಲೋ ಎದ್ದು ಹೋಗಲು ತಯಾರಾಗುತ್ತಾನೆ. ಇಲ್ಲದ ಚಟಕ್ಕೆ ಬೀಳುತ್ತಾನೆ. ಏನೂ ಇಲ್ಲದಿದ್ದರೆ `ಸಾಯ್ಲಿ ಅತ್ಲಾಗೆ’ ಎಂದು ಸುಮ್ಮನೆ ಹೊದ್ದು ಮಲಗುತ್ತಾನೆ. ಅದೇನೇ ಆದರೂ ಮನುಷ್ಯ ಇಂಥಾ ಮಾನಸಿಕ ನಿರ್ವಾತ ಎಂಬಂತಿನ ಕ್ಷಣಗಳನ್ನು ತನ್ನಿಂದ ದೂರವೇ ಇಟ್ಟುಕೊಳ್ಳಲು ಶಕ್ತಿಮೀರಿ ಪ್ರಯತ್ನಿಸುತ್ತಾನೆ. ಇದಕ್ಕೆ ಕಾರಣ ತನ್ನೊಂದಿಗೆ ತಾನು ಮುಖಾಮುಖಿಯಾಗುವ ಬಗೆಗಿನ ಭಯವಿರಬಹುದು. ಅಂತಃಸಾಕ್ಷಿಯ ಮಾತುಗಳಿಗೆ ಕಿವಿಯಾಗುವ ದಿಗಿಲಾಗಿರಬಹುದು. ಮರ್ಕಟ ಮನಸ್ಸಿನ ಅಡಿಯಾಳಾಗಿ ನಾಶವಾಗುವ ಆತಂಕವೂ ಆಗಿರಬಹುದು.
ಅಮೇರಿಕಾದ ಮಿನ್ನೆಸೋಟಾದಲ್ಲಿ ಜಗತ್ತಿನ ಅತ್ಯಂತ ಮೌನದ ಜಾಗವೆಂದು ಹೇಳಲಾಗುವ ಕೋಣೆಯೊಂದಿದೆ. ಈ ಕೋಣೆಯನ್ನು ಹೇಗೆ ವಿನ್ಯಾಸಗೊಳಿಸಲಾಗಿದೆಯೆಂದರೆ ದೇಹದ ಅತೀ ಚಿಕ್ಕ ಆಂತರಿಕ ಪ್ರಕ್ರಿಯೆಗಳಾದ ಎದೆಬಡಿತ, ಎಂಜಲು ನುಂಗುವಿಕೆ, ರಕ್ತದ ಚಲನೆಗಳಿಂದ ಹಿಡಿದು ತೊಟ್ಟ ಬಟ್ಟೆಯ ನೆರಿಗೆಗಳು ನಿಧಾನಕ್ಕೆ ತೆರೆದುಕೊಳ್ಳುವ/ಮಡಚುವ ಶಬ್ದಗಳೂ ಕೇಳಬಹುದು. ಈ ಪುಟ್ಟ ಕೋಣೆಯ ಅನುಭವವನ್ನು ತನ್ನದಾಗಿಸಿಕೊಳ್ಳಲು ಬಂದ ಯಾರೊಬ್ಬರೂ ಬೆರಳೆಣಿಕೆಯ ನಿಮಿಷಗಳಿಗಿಂತ ಹೆಚ್ಚಿನ ಕಾಲ ಅಲ್ಲಿ ಕೂರಲಾಗದೆ ಕಂಗೆಟ್ಟಿದ್ದಾರೆ. ಉಸಿರುಗಟ್ಟಿದಂತಾಗುತ್ತದೆಂದು ಹೊರಕ್ಕೋಡಿ ಬಂದಿದ್ದಾರೆ. ಭ್ರಮೆಗಳು ಹುಟ್ಟಿದಂತಾಗಿ ಕಂಗಾಲಾಗಿದ್ದಾರೆ. ನಲವತ್ತೈದು ನಿಮಿಷಗಳಿಗಿಂತ ಹೆಚ್ಚಿನ ಕಾಲ ಇಲ್ಲಿ ಕೂತಿದ್ದೇ ಆದರೆ ಮತಿಭ್ರಮಣೆಯಾಗುವುದು ಖಚಿತವೆಂದು ಹೇಳಲಾಗುತ್ತದೆಯಂತೆ.
ಇಲ್ಲಿ ನಾನು ಹೇಳುತ್ತಿರುವ ಮೌನವೂ ಇಂಥದ್ದೇ ಬಗೆಯದ್ದು. ಯೋಗಿಗಳ, ತಾಂತ್ರಿಕರ, ಮಿಸ್ಟಿಕ್ ಗಳ ಬಗ್ಗೆ ನಾನೇನೂ ಹೇಳಲಾರೆ. ಆದರೆ ಸಾಮಾನ್ಯರಿಗೆ ಒಂದೆರಡು ನಿಮಿಷಗಳಾದರೆ ಇದು ಶಾಂತಿ. ಅದಕ್ಕಿಂತ ಹೆಚ್ಚಾದರೆ ಬೆನ್ನಹುರಿಯಲ್ಲಿ ಅದೆಂಥದ್ದೋ ಹರಿದಾಡಿದಂತಾಗುತ್ತದೆ. ಇಕ್ಕೆಲಗಳಲ್ಲಿ ಕಾಡುಗಳನ್ನೇ ಹೊಂದಿರುವ ಈ ರಸ್ತೆಯ ಸುಮಾರು ಎಪ್ಪತ್ತು ಪ್ರತಿಶತದ ಭಾಗಗಳಲ್ಲಿ ವಿದ್ಯುಚ್ಛಕ್ತಿಯ ಸೌಲಭ್ಯಗಳೂ ಇಲ್ಲದಿರುವುದರಿಂದ ನೀವು ರಾತ್ರಿಯ ವೇಳೆ ಪ್ರಯಾಣಿಸುವವರಾದರೆ ದೃಶ್ಯವು ಮತ್ತಷ್ಟು ಭಯಾನಕವಾಗುವುದಂತೂ ಸಹಜ. ಅಂಗೋಲಾ ಸೇರಿದಂತೆ ಆಫ್ರಿಕಾದ ಹಲವು ಭಾಗಗಳಲ್ಲಿ ಸೂರ್ಯಾಸ್ತದ ನಂತರ ಪ್ರಯಾಣಿಸುವುದು, ಅಡ್ಡಾಡುವುದು ಇತ್ಯಾದಿಗಳೆಲ್ಲಾ ಅಪಾಯಕ್ಕೆ ಆಹ್ವಾನವಿತ್ತಂತೆ. ಜನನಿಬಿಡ ಲುವಾಂಡಾದಂತಹ ಲುವಾಂಡಾದಲ್ಲೂ ರಾತ್ರಿಯ ಬೀದಿಗಳು ಸುರಕ್ಷಿತವಾಗಿಲ್ಲದಿದ್ದಾಗ ಇಂತಹ ಅಪಾಯಕರ ದಾರಿಗಳಲ್ಲಿ ಪ್ರಯಾಣಿಸುವುದು ಮೂರ್ಖತನವೇ ಸರಿ. ಪುಡಿಗಾಸಿಗಾಗಿ ಕೊಲೆ, ಸುಲಿಗೆಗಳಾಗುವ ಅಪಾಯಗಳು ಒಂದೆಡೆ ಇದ್ದರೆ ಅಪಘಾತದಂತಹ ತುರ್ತಿನ ಸಂದರ್ಭಗಳಲ್ಲಿ ಸಹಾಯವನ್ನು ನಿರೀಕ್ಷಿಸುವುದು ಇಲ್ಲಿ ಕನಸಿನ ಮಾತು.
ಆದರೆ ಇಂಥಾ ವಿಚಿತ್ರ ಪ್ರದೇಶಗಳಲ್ಲೂ ಹಲವು ಕಿಲೋಮೀಟರುಗಳ ಅಂತರದಲ್ಲಿ ಬೆರಳೆಣಿಕೆಯ ಮನೆಗಳು ಗುಂಪಾಗಿ ಕಾಣಸಿಗುವುದುಂಟು. ಅವುಗಳು ಥೇಟು ಡಬ್ಬದಂತಿರುವ ಮನೆಗಳು, ಬೆಂಕಿಪೊಟ್ಟಣದಂತಿರುವ ಇಟ್ಟಿಗೆಯ ಮನೆಗಳು, ಕಬ್ಬಿಣದ ಶೀಟುಗಳಿಂದ ಮಾಡಿದ ಹಕ್ಕಿಗೂಡಿನಂತಿರುವ ಮನೆಗಳು. ಈ ಮನೆಗಳಲ್ಲಿ ಹತ್ತರಿಂದ ಹದಿನೈದು ಪ್ರತಿಶತ ಮನೆಗಳಲ್ಲಷ್ಟೇ ಒಂದೇ ಒಂದು ಪುಟ್ಟ ಬಲ್ಬ್ ಪ್ರಕಾಶಿಸುತ್ತದೆ. ಉಳಿದವರಿಗೆ ಬೆಳಕೆಂಬುದು ಮುಂಜಾನೆಯ ಸೂರ್ಯನೊಂದಿಗೇ ಬರಬೇಕು (ಹಣ ಹೊಂದಿಸುವಷ್ಟು ಸ್ಥಿತಿವಂತರಾಗಿದ್ದರೆ ಕೆಲವರು ಮೇಣದ ಬತ್ತಿ, ಪೆಟ್ರೋಮ್ಯಾಕ್ಸ್ ಗಳನ್ನೂ ಬಳಸುವುದುಂಟು). ಆದರೆ ಶಿಕ್ಷಣ, ಆರೋಗ್ಯಗಳಂತಹ ಮೂಲಭೂತ ಸೌಲಭ್ಯಗಳಿಗಾಗಿ ದೂರದೂರದ ಪ್ರದೇಶಗಳಿಗೆ ಹೋಗಬೇಕಾಗಿರುವುದು ಇವರ ದುರಾದೃಷ್ಟವೇ ಸರಿ.

ಎಲ್ಲೆಲ್ಲೂ ಕಾಣಸಿಗುವ ಕಾಡುಗಳದ್ದೇ ಒಂದು ತೂಕವಾದರೆ, ಟಾರುರಸ್ತೆಗಳ ಪಕ್ಕಕ್ಕಿರುವ ಒಂದಿಷ್ಟು ಪಾದಚಾರಿಗಳ ಮಾರ್ಗವನ್ನೂ ಗುಳುಂ ಮಾಡಿಬಿಟ್ಟಿರುವ ಹುಲ್ಲು, ಮೂರಡಿ ಎತ್ತರದ ಪೊದೆಗಳದ್ದೇ ಒಂದು ತೂಕ. ಈ ಪ್ರದೇಶಗಳ ಸಿಂಹಪಾಲು ಸಂಪೂರ್ಣ ಖಾಲಿಯಾಗಿರುವಂತೆ ಭಾಸವಾದರೂ ಬುಟ್ಟಿಗಳನ್ನು ಹಿಡಿದು ಸಾಗುತ್ತಿರುವ ಗ್ರಾಮೀಣ ಹೆಂಗಸರು, ಮಕ್ಕಳು, ಮೊಪೆಡ್ಡುಗಳಲ್ಲಿ ಹೋಗುತ್ತಿರುವ ಸ್ಥಳೀಯ ಯುವಕರು, ದಿನದ ಕೆಲಸವನ್ನು ಮುಗಿಸಿ ಮನೆಯತ್ತ ತೆರಳುವ ಗಂಡಸರು… ಹೀಗೆ ಬೆರಳೆಣಿಕೆಯ ಜನರು ಐದಾರು ಕಿಲೋಮೀಟರುಗಳಿಗೊಮ್ಮೆ ಕಾಣಸಿಗುವುದು ಸಾಮಾನ್ಯ. ಖಾಲಿ ರಸ್ತೆಯೆಂದು ಘಂಟೆಗೆ ನೂರರಿಂದ ನೂರಾ ನಲವತ್ತು ಕಿಲೋಮೀಟರುಗಳ ಶರವೇಗದಲ್ಲಿ ಸಾಗುವ ಎಲ್ಲಾ ವಾಹನಗಳ ಚಾಲಕರೂ ಕೂಡ ಇಂಥಾ ದಾರಿಹೋಕರ ಬಗ್ಗೆ ಹೆಚ್ಚಿನ ಎಚ್ಚರವಹಿಸುವುದು ಇಲ್ಲಿಯ ಅವಶ್ಯಕತೆಗಳಲ್ಲೊಂದು. ಸಾಮಾನ್ಯವಾಗಿ ರಸ್ತೆಗಳನ್ನು ಚುಂಬಿಸುತ್ತಿರುವ ಪೊದೆಗಳನ್ನು ಸರಿಸುತ್ತಾ, ನೇರವಾಗಿ ರಸ್ತೆಗೂ ಬರದಂತೆ ಈ ದಾರಿಹೋಕರು ಹೇಗೋ ಕಿಲೋಮೀಟರುಗಟ್ಟಲೆ ನಡೆಯುತ್ತಿರುತ್ತಾರೆ. ವಾಹನವೊಂದು ಬರುತ್ತಿದೆಯೆಂದು ಹಿಂದೆ ಸರಿದರೆ ಅವರನ್ನು ಈ ಪೊದೆಗಳು ಬಹುತೇಕ ಮರೆಮಾಚುತ್ತವೆ. ಇಂಥಾ ದಾರಿಗಳಲ್ಲಿ ಭಯಂಕರ ವೇಗಗಳಲ್ಲಿ ಹೋಗುವ ವಾಹನಗಳು ಕ್ಷಣಮಾತ್ರಕ್ಕೂ ಮೈಮರೆತುಬಿಟ್ಟರೆ ಅನಾಹುತವೇ ನಡೆದುಬಿಟ್ಟೀತು.
ಆದರೆ ಈ ಸುದೀರ್ಘ ನಿರ್ಜನ ದಾರಿಯ ನಡುವಲ್ಲಿ ಬರುವ ಕೆಲ ಮನೆಗಳ ಗುಂಪುಗಳು ನಮ್ಮಂತಹ ಪ್ರಯಾಣಿಕರಲ್ಲಿ ಕೊಂಚ ನಿರಾಳತೆಯನ್ನು ತರುವುದೂ ಕೂಡ ಸತ್ಯ. ಸೊಂಟಕ್ಕೆ ಹಸುಳೆಗಳನ್ನು ಕಟ್ಟಿಕೊಂಡ ಅಂಗೋಲನ್ ಗ್ರಾಮೀಣ ಹೆಂಗಸರು ಇಂಥಾ ಜಾಗಗಳಲ್ಲಿ ಕುಳಿತುಕೊಂಡು ತಾವೇ ಬೆಳೆದ ಗೆಣಸು, ಬಾಳೆಹಣ್ಣು, ಬಟಾಟೆ, ಶೇಂಗಾ, ಪಪ್ಪಾಯಿ ಮತ್ತು ಸ್ಥಳೀಯ ತಿನಿಸುಗಳನ್ನು ಮಾರುತ್ತಾರೆ. ಜಾಗವು ಕೊಂಚ ಸಮತಟ್ಟಾಗಿದ್ದರೆ ಇದ್ದ ಜಾಗದಲ್ಲೇ ಹಳೆಯ ಚೆಂಡಿನೊಂದಿಗೆ ಫುಟ್ಬಾಲ್ ಆಡುತ್ತಿರುವ ಮಕ್ಕಳ ಚಿಕ್ಕ ಗುಂಪುಗಳು ಸಿಗುತ್ತವೆ. ಜೊತೆಗೇ ಸೌದೆಗಳನ್ನು ಕಡಿದು ತಲೆಯ ಮೇಲಿರಿಸಿ ಬರುತ್ತಿರುವ ಮಹಿಳೆಯರು, ದಿನನಿತ್ಯದ ಕೆಲಸಗಳಿಗಾಗಿ ತಮ್ಮ ಕತಾನಾ (ಮಚ್ಚು)ಗಳೊಂದಿಗೆ ಸಾಗುತ್ತಿರುವ ಗಂಡಸರು, ಸಿಕ್ಕ ಸಿಕ್ಕ ವಾಹನಗಳಿಗೆಲ್ಲಾ ಕೈಯಾಡಿಸುತ್ತಾ ಲಿಫ್ಟ್ ಕೇಳುತ್ತಿರುವ ದಾರಿಹೋಕರು… ಹೀಗೆ ಈ ರಸ್ತೆಗಳಲ್ಲಿ ಕಾಣಬರುವ ಬೆರಳೆಣಿಕೆಯ ಇತರರು ಇವರು.
ಇನ್ನು ಎತ್ತರದ ಹಸಿರು ಪ್ರದೇಶಗಳಲ್ಲಿ ಕೃಷಿ ಸಂಬಂಧಿ ಚಟುವಟಿಕೆಗಳಿಗಾಗಿ ಕೆಲವೊಮ್ಮೆ ಸ್ಥಳೀಯರು ಬೆಂಕಿ ಹಚ್ಚುವ ಕೆಲಸಗಳೂ ನಡೆಯುತ್ತವೆ. ತಮ್ಮ ಮುಂದಿನ ಬೆಳೆಗಾಗಿ ನೆಲವನ್ನು ಸಜ್ಜುಗೊಳಿಸುವ ವಿಧಾನವದು. ಆದರೆ ಕೆಲವೊಮ್ಮೆ ಈ ಬೆಂಕಿ ಒಣಹುಲ್ಲುಗಳ ಮೂಲಕವಾಗಿ ರಸ್ತೆಯವರೆಗೂ ಹಬ್ಬಿ ದಟ್ಟ ಹೊಗೆಯನ್ನು ತಂದು ಏನನ್ನೂ ಕಾಣದಂತಾಗುವ ಪರಿಸ್ಥಿತಿಗಳನ್ನೂ ಸೃಷ್ಟಿಸುವುದುಂಟು. ರಾತ್ರಿಗಳಲ್ಲಿ ಇಂಥಾ ಸಮಸ್ಯೆಗಳು ಉದ್ಭವವಾದರೆ ದಟ್ಟಹೊಗೆಯ ಪರದೆಯಿಂದಾಗಿ ಏನೇನೂ ಕಾಣದಂತಾಗಿ ಚಾಲಕರು ಕ್ಷಣಮಾತ್ರಕ್ಕಾದರೂ ಗೊಂದಲಕ್ಕೊಳಗಾಗುವುದು ಸಹಜ. ಈ ನಿರ್ಜನ ರಸ್ತೆಗಳಲ್ಲೆಲ್ಲಾದರೂ ಅಪಘಾತಗಳಾದರೆ ಅಥವಾ ವಾಹನವು ಕೆಟ್ಟುಹೋದರೆ ರಿಪೇರಿಯಾಗಲು ಕಾಯುತ್ತಿರುವ ವಾಹನಕ್ಕಿಂತ ಸುಮಾರು ಹತ್ತರಿಂದ ಮೂವತ್ತು ಅಡಿಗಳ ವಿವಿಧ ದೂರಗಳಲ್ಲಿ ಸೊಪ್ಪುಗಳ ರಾಶಿಯನ್ನಿಟ್ಟು ಆಸುಪಾಸಿನಲ್ಲಿ ಸಾಗುತ್ತಿರುವ ವಾಹನಗಳಿಗೆ ಎಚ್ಚರಿಕೆಯ ಸುಳಿವನ್ನು ನೀಡುವ ರೂಢಿಯಿದೆ.

ಇವೆಲ್ಲದರ ಹೊರತಾಗಿಯೂ ಈ ದಾರಿಗಳು ಗುಂಡಿರಹಿತವಾಗಿವೆ ಎಂಬುದನ್ನು ಹೇಳಲೇಬೇಕು. ಎಲ್ಲೋ ನಾಲ್ಕೈದು ಕಿಲೋಮೀಟರುಗಳ ಬೆಲ್ಟ್ ಅನ್ನು ಹೊರತುಪಡಿಸಿ ಈ ರಸ್ತೆಯು ಡ್ರೈವಿಂಗ್ ಮಾಡಲು ಸರಾಗ. ಹೀಗಾಗಿಯೇ ವಾಹನಗಳು ಇಲ್ಲಿ ನೂರಕ್ಕಿಂತ ಕಮ್ಮಿಯ ವೇಗಕ್ಕಿಳಿಯುವುದು ಕಮ್ಮಿ. ಖಾಲಿ ರಸ್ತೆ ಮತ್ತು ಒಳ್ಳೆಯ ರಸ್ತೆ ಎಂದಾದರೆ ಬಹುಷಃ ಎಲ್ಲಾ ಚಾಲಕರಲ್ಲೂ ಅದೆಂಥದ್ದೋ ಹುರುಪು ಬಂದುಬಿಟ್ಟು ತೀರಾ ಫಾರ್ಮುಲಾ ವನ್ ರೇಸ್ ಪಂದ್ಯಗಳ ಮೈಕಲ್ ಶುಮಾಕರ್ ಆಗಿಬಿಡುತ್ತಾರೆ. ಆರೂವರೆ ತಾಸುಗಳ ಕಾಲ ಡ್ರೈವ್ ಮಾಡುತ್ತಾ ವೀಜ್ ನಿಂದ ಲುವಾಂಡಾದತ್ತ ಸಾಗಿದರೆ ಮೊದಲ ಸುಮಾರು ನೂರೆಂಭತ್ತು ಕಿಲೋಮೀಟರುಗಳ ರಸ್ತೆಯು ತಿರುವುಗಳದ್ದಾದರೆ, ಉಳಿದ ನೂರು ಚಿಲ್ಲರೆ ಕಿಲೋಮೀಟರುಗಳ ರಸ್ತೆಯು ನೇರವಾಗಿರುವಂಥದ್ದು. ಮಧ್ಯದಲ್ಲಿ ಘಾಟಿಯೊಂದು ಇದ್ದಿದ್ದರೆ ನಮ್ಮ ಮಂಗಳೂರು-ಬೆಂಗಳೂರು ಪ್ರಯಾಣವಿದ್ದಂತೆಯೇ ಇರುತ್ತದೆ ಎಂದು ನಾನು ಈ ಬಗ್ಗೆ ಆಗಾಗ ಹೇಳುವುದುಂಟು.
ಚಲನಚಿತ್ರಗಳಲ್ಲಿ `ರೋಡ್ ಮೂವಿ’ ಅನ್ನೋ ವಿಧವಿರುತ್ತಂತೆ. ಲುವಾಂಡಾ-ವೀಜ್ ರಸ್ತೆಯ ಸ್ವಾರಸ್ಯವನ್ನು ಹೇಳುತ್ತಾ ಇದೂ ಒಂದು `ರಸ್ತೆ ಲೇಖನ’ವೇ ಆಗಿಬಿಟ್ಟಿತು. ಆದರೆ ಈ ಸ್ವಾರಸ್ಯಕರ ರಸ್ತೆ ಪುರಾಣವು ಇಲ್ಲಿಗೇ ಮುಗಿಯುವಂಥದ್ದಲ್ಲ. ಹೇಳಬೇಕಾಗಿರುವಂಥದ್ದು ಇನ್ನಷ್ಟಿದೆ. ಕಳೆದ ಒಂದೂವರೆ ವರ್ಷಗಳಲ್ಲಿ ಈ ರಸ್ತೆಯು ಉಣಬಡಿಸಿದ ಸಿಹಿ-ಕಹಿ ಅನುಭವಗಳು ಒಂದೆರಡಲ್ಲ. ಹಾಗಿರುವಾಗ ಒಂದೇ ಭಾಗದಲ್ಲಿ ರಸ್ತೆ ಪುರಾಣಕ್ಕೆ ಮಂಗಳ ಹಾಡಿದರೆ ಹೇಗಾದೀತು?
ನಮ್ಮ ಪಯಣವು ಈಗ ಶುರುವಾಗಿದ್ದಷ್ಟೇ…
 

‍ಲೇಖಕರು avadhi

October 10, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: