ಲೀಲಾ ಅಪ್ಪಾಜಿ ಸೂಕ್ಷ ಮನಸ್ಸಿನ ಶಿಕ್ಷಣ ತಜ್ಞರು. ಕನ್ನಡ ಓದುಗ ಲೋಕಕ್ಕೆ ಒಂದು ರೀತಿಯಲ್ಲಿ ಕುವೆಂಪು ಅವರ ನೆನಪನ್ನು ಕಾಪಿಟ್ಟು ಕೊಟ್ಟವರು. ತಾವು ಕೆಲಸ ಮಾಡುವ ಕಡೆಯೆಲ್ಲಾ ಹಕ್ಕಿ ಹಿಂಡಿನಂತೆ ಬಳಗ ಸೇರಿಸಿ ಕುಹೂ ಹೊನಲು ಹರಡುವವರು. ಇಡೀ ಆವರಣವನ್ನು ಹೊಸ ಕಲ್ಪನೆಯಿಂದ ಕಟ್ಟಿ ಕೊಟ್ಟು ತೋರಿಸಿದವರು.
ಅವಧಿಯ ಓದುಗರಾದ ಲೀಲಾ ಅಪ್ಪಾಜಿ ಅವರ ತಾಯಿ ಇತ್ತೀಚಿಗೆ ಇಲ್ಲವಾದರು. ಅವರ ನೋವಿಗೆ ಅವಧಿ ಸಾಂತ್ವನ ಹೇಳಲು ಬಯಸುತ್ತದೆ.
ನನ್ನಮ್ಮಾ….
ಎಲ್ಲ ದಿನದಂತೆ ಸೀರಿಯಲ್ ನೋಡಿ,10.30ಕ್ಕೆ ಮುಗೀತು ಆಫ್ ಮಾಡಲೇ ಎಂದು ರಿಮೋಟ್ ಕಂಟ್ರೋಲ್ ನನಗಿತ್ತು, ಸ್ವಿಚ್ ಆಫ್ ಮಾಡಿ ಮಲಗಿದರು.
ನನಗೆ ಮರುದಿನ ಬಿ.ಎಂ ಶ್ರೀಕಂಠಯ್ಯ ಬಗ್ಗೆ ವಿಚಾರಸಂಕಿರಣದ ಅಧ್ಯಕ್ಷತೆ ಇತ್ತು.
ಒಂದಿಷ್ಟು ಮಾತಿಗೆ ಟೈಪ್ ಮಾಡಿ ಮುಗಿಸಿದೆ.
ಗೊತ್ತು ಅಮ್ಮನಿಗೆ ಅಷ್ಟು ಬೇಗ ನಿದ್ದೆ ಬಂದಿರಲ್ಲ ಎಂದು.
ಆದರೂ ಸದ್ದಾಗುತ್ತದೆ ಈಗ ಬೇಡ
ಬೆಳಿಗ್ಗೆ ಪ್ರಿಂಟ್ ಹಾಕಿಕೊಳ್ಳುವೆ ಎಂದು ಕಂಪ್ಯೂಟರ್ ಆಫ್ ಮಾಡಿ ಎದ್ದೆ.
ಯಾಕೋ ಉಸಿರಾಟದ ವ್ಯತ್ಯಾಸ ಅನ್ನಿಸಿತು.
ಹತ್ತಿರ ಹೋಗಿ ‘ಏನಮ್ಮಾ’ ಎಂದೆ.
‘ಕಷ್ಟ ಆಗುತ್ತಿದೆ’.
‘ಈ ಕಡೆ ತಿರುಗಿ ಮಲಗಿ’ ಎಂದೆ.
ಮಗಳನ್ನು ಕರೆದೆ, ಅಳಿಯನೂ ಬಂದರು.
ಉಸಿರಾಟಕ್ಕೆ ನೆಬ್ಯುಲೈಜರ್ ಹಾಕಿದರು.
ಆಗುತ್ತಿಲ್ಲ…. ಆಗುತ್ತಿಲ್ಲ…. ಎಂದರು..
ಎಲ್ಲಾ 25-30 ನಿಮಿಷದ ಒಳಗೆ….
ನಮ್ಮೊಡನೆ ಮೂರು ದಶಕಗಳಿಂದ ತನ್ನ ಖಾಯಿಲೆಗಳಿಗೆ ಸ್ಪಂದಿಸಿ ಪವಾಡಸದೃಶವಾಗಿ ಚೇತರಿಸಿಕೊಳ್ಳುತ್ತಿದ್ದ ಅಮ್ಮ ತಣ್ಣಗೆ ಮಲಗಿದರು.
ಆ ಒದ್ದಾಟವೂ ಕಾಣದಂತೆ ನಸುನಗುತ್ತಾ ಮಲಗಿದಂತೆ ನನ್ನ ರೂಂಮೇಟ್ ಆಗಿದ್ದ ಅಮ್ಮ ನನ್ನ ರೂಮಿನಲ್ಲೇ ತನ್ನ ಕೊನೆ ಉಸಿರನ್ನು ನನ್ನ ಬದುಕಿನ ನೆನಪಾಗಿ ಬಿಟ್ಟು ವೈಕುಂಠ ಏಕಾದಶಿಯ ದಿನ ಕೊನೆಯ ಪಯಣ ಬೆಳೆಸಿದರು.
ಕಳೆದ ವರ್ಷ ಡಿಸೆಂಬರ್ 30ರಂದು ಹೈದರಾಬಾದಿನಿಂದ ವಿಪಶ್ಯನ ಮುಗಿಸಿ ಬಂದ ರಾತ್ರಿ ಅಪ್ಪ ಇನ್ನಿರಲಿಲ್ಲ.
ಈ ವರ್ಷ ಡಿಸೆಂಬರ್ 21ರಂದು ಅಮ್ಮ ಇನ್ನಿಲ್ಲ.
ಲೀಲಾ 'ಅಮ್ಮಾಜಿ'
ನಿಮಗೆ ಇವೂ ಇಷ್ಟವಾಗಬಹುದು…

ಶ್ರೀಮತಿ ಲೀಲಾ ಅಪ್ಪಾಜಿ ಅವರಿಗೆ ನನ್ನ ಸಂತಾಪಗಳು.
ಇಂದು ಅವರು ತಮ್ಮ ಕುವೆಂಪು ಚಿತ್ರ ಸಂಗ್ರಹದೊಂದಿಗೆ
ಸಂಭ್ರಮಿಸುವ ದಿನ. ಅವರು ನಮ್ಮ ಅಧ್ಯಯನ ಸಂಸ್ಥೆಯಲ್ಲಿ
ತಮ್ಮ ಅಪೂರ್ವ ಸಂಗ್ರಹವನ್ನು ಪ್ರದರ್ಶಿಸಿದ್ದು ಮರೆಯುವಂಥದಲ್ಲ.