ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಆರೋಗ್ಯಕ್ಕಾಗಿಯೋ ಹಕ್ಕಿಗಳಿಗಾಗಿಯೋ..

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.6

6

ಎಲ್ಲರದೂ ಒಂದು ದಾರಿಯಾದರೆ ನನ್ನದು ಒಂದು ರೀತಿಯ ಎಡವಟ್ಟಿನ ದಾರಿ, ಆರೋಗ್ಯದ ವಿಷಯದಲ್ಲಿ. ಯಾವ ಕೆಲಸವನ್ನಾದರೂ ನನ್ನಿಂದಾಗುವಷ್ಟು ಹೊಣೆ ಹೊತ್ತು ನಿರ್ವಹಿಸುವ ಅಭ್ಯಾಸ ಮೊದಲಿನಿಂದಲೂ ರೂಢಿಯಾಗಿದೆ. ಯಾವುದನ್ನೋ ಮಾಡಬೇಕು ಎನಿಸುತ್ತದೆಯೋ ಅದಕ್ಕೆ ನನ್ನನ್ನು ಸಂಪೂರ್ಣವಾಗಿ ತೆತ್ತುಕೊಳ್ಳುವುದೇ ನನ್ನ ಕೆಲಸ ಆಗಿದೆ. ಹಾಗಾಗಿ ಆರೋಗ್ಯದ ಕಡೆಗೆ ಇಡೀ ಜೀವನದಲ್ಲೇ ಅತ್ಯಂತ ಕಡಿಮೆ ಗಮನ ಕೊಟ್ಟೆ. ಏರಿದ ತೂಕವೋ, ಕೂತಲ್ಲೇ ಕೂತು ಸ್ಥಾವರವಾಗುವ ಅವತಾರವನ್ನೇ ಸದಾ ಧರಿಸುವುದರಿಂದ ನಾನು ಏನೆಲ್ಲಾ ಹೇಳಿದರೂ ಕಾಲುಗಳು ನನ್ನ ಮಾತು ಕೇಳುವುದಿಲ್ಲ. ಜಂಗಮಿಯೂ ಆಗುವುದಿಲ್ಲ.

ಕಾಲುನೋವಿಗೆ ಕಾರಣ, ಎಲ್ಲರ ಕಣ್ಣಿಗೆದ್ದು ಕಾಣುವುದು ನನ್ನ ಏರಿದ ಏರುತ್ತಲೇ ಇರುವ ತೂಕವೇ ಆಗಿರುವುದರಿಂದ ತೂಕವಿಳಿಸಿ ಸರಿ ಹೋಗುತ್ತದೆಂದು ಉಚಿತಾನುಚಿತ ಸಲಹೆಗಳು ಪುಂಖಾನುಪುಂಖವಾಗಿ ಬಂದುಬೀಳುತ್ತವೆ. ಕಾಲುನೋವಿರುವ ಕಾರಣ ನಿತ್ಯ ವಾಕಿಂಗ್ ಮಾಡುವುದಿಲ್ಲ. ಮಾಡಲಾಗದ ಸೋಮಾರಿತನಕ್ಕೆ ನಡೆದರೆ ನನಗೆ ನೋವು ಬರುತ್ತದೆಂಬ ನೆಪ ಕೊಡುತ್ತಿರುತ್ತೇನೆ. ನಾನು ವಾಕ್ ಮಾಡುವ ಸ್ಥಳ ಫ್ಲ್ಯಾಟ್ ಆಗಿದ್ದರೆ ಮಾತ್ರ ಸಾಧ್ಯ, ಇಲ್ಲದಿದ್ದರೆ ಕಷ್ಟ ಎಂದು ಕುಂಟುನೆಪ ಕೊಟ್ಟುಕೊಳ್ಳುವ ಅಭ್ಯಾಸ ಬೇರೆ. ಆಚೆ ಹೋಗುವುದು ಬೇಡ, ನನ್ನ ಮನೆ ಗೇಟಿನಿಂದ ಗ್ಯಾರೇಜಿನ ತನಕ ಒಂದಿಪ್ಪತ್ತು ಸಲ ಓಡಾಡಿದರೂ ಸಣ್ಣ ವಾಕಿಂಗ್ ಸಂಪನ್ನವಾಗುತ್ತದೆ. ಅದಕ್ಕೂ ಸೋಮಾರಿತನ ತೋರಿಸುವ ನಾನು ಹೇಳುವುದು ಗೇಟಿನಿಂದ ಬರುವಾಗ ಸ್ವಲ್ಪ up ಎನಿಸುತ್ತದೆ, ಅದಕ್ಕೆ ಸ್ವಲ್ಪ ಉಸಿರಾಡಲು ಒದ್ದಾಟ ಆಗುತ್ತದೆಂದು. ಆ up ಎಷ್ಟಿದೆ ಎಂದರೆ ಅರ್ಧ ಅಡಿಯೂ ಇಲ್ಲ. ನಿವೃತ್ತಳಾಗುವ ಕೆಲ ತಿಂಗಳ ಹಿಂದೆ ಸತತವಾಗಿ ವಾಕ್ ಮಾಡಿ ಕಾಲೂ ಸುಧಾರಿಸಿತ್ತು, ಸ್ವಲ್ಪ ತೂಕವೂ ಕೇವಲ ಕೆಲವೇ ಗ್ರಾಂಗಳಲ್ಲಿ ಕಡಿಮೆ ಆದ ಹಾಗೆ ಮನಸಿಗೂ ಅನಿಸಿತ್ತು, weighing machine ಮಾತ್ರ ಏನೂ ವ್ಯತ್ಯಾಸ ತೋರಿಸುತ್ತಿರಲಿಲ್ಲ. ತೂಕ ನೋಡಿಕೊಂಡ ಮೇಲೆ ಸಿಟ್ಟಿನಿಂದ ಒದ್ದು ಒಳಕ್ಕೆ ತಳ್ಳುತ್ತಿದ್ದೆ. ಅದಕ್ಕೇನೋ ನನ್ನನ್ನು ಕಂಡರೆ ಬಿಡದ ಶತ್ರುತ್ವ ಇರಬಹುದು. ಏರುಮುಖವಾಗಿ ಗುರುತಿಸುತ್ತದೆಯೇ ವಿನಾ ಇಳಿಮುಖದ ಹಾದಿಯನ್ನು ತೋರಿಸುವ ಕೃಪೆ ಮಾಡುವುದೇ ಇಲ್ಲ, ಈ ತೂಕಮಾಪಕವೇ ಸರಿಯಿಲ್ಲ ಎಂದು ಗೊಣಗಿಕೊಳ್ಳುತ್ತಿರುತ್ತೇನೆ, ಇದ್ದೇನೆ.

ಇನ್ನು ಯೋಗ ವ್ಯಾಯಾಮ ಮಾಡಿನೋಡುವ ಅಂದರೆ ಮೂರು ದಿನ ಯೋಗ ವ್ಯಾಯಾಮ. ಮಾರನೇ ದಿನ ಕೈಬಿಡುವ ಯೋಗ. ನೆನಪಾದಾಗ ಮಾಡುವ, ಇಲ್ಲದಿದ್ದರೆ ಮರೆತುಬಿಡುವ ಪೈಕಿ ನಾನು. ಬೆಳಿಗ್ಗೆ ಹೇಗೂ ಎಚ್ಚರ ಆಗಿಯೇ ಆಗಿರುತ್ತದೆ ಮಾಡಿಯೇ ಬಿಡೋಣ ಎಂದುಕೊಂಡರೂ ಬೆಳಿಗ್ಗೆ ಕೈಕಾಲುಗಳು ಅಲುಗಾಡಲು ಮುಷ್ಕರ ಹೂಡುತ್ತವೆ. ಬಾಕಿ ಇರುವುದು ಆಹಾರದ ವಿಷಯದಲ್ಲಿ ಪಥ್ಯ ಮಾಡೋಣ ಎಂದರೆ ನನ್ನ ತಿನ್ನುವ ಪಟ್ಟಿಯಲ್ಲಿ ತಿನ್ನುವುದಕ್ಕಿಂದ ತಿನ್ನದಿರುವಂತಹ ಆಹಾರಗಳ ಪಟ್ಟಿಯೇ ಹನುಮಂತನ ಬಾಲ. ಅನ್ನ ತಿನ್ನಬೇಡಿ ಅಂದರೆ ನಾಲ್ಕಾರು ವರ್ಷ ಅನ್ನ ಮುಟ್ಟಿರಲ್ಲ, ಸಿಹಿ ಬಿಡಿ ಅಂದರೆ ಸಿಹಿ ಬಿಟ್ಟೆ ಹತ್ತಾರು ವರ್ಷ ಆಗಿರುತ್ತದೆ. ನಾನ್‌ವೆಜ್ಜು ಬಿಡಿ ಎಂದರೆ ನಲವತ್ತು ವರ್ಷದ ಹಿಂದೆಯೇ ಬಿಟ್ಟು ಸ್ಟ್ರಿಕ್ಟಾಗಿ ಪ್ಯೂರ್ ಅಂದರೆ ಪ್ಯೂರ್ ವೆಜ್ಜು. ಇನ್ನೇನು ಮಾಡೋದು. ಆಹಾರದ ವಿಷಯದಲ್ಲೂ ನಾನಾ ನಮೂನೆ ಸರ್ಕಸ್ ಮಾಡುತ್ತಿರುತ್ತೇನೆ. ತಿಂಗಳುಗಟ್ಟಲೆ ಕೇವಲ ಹಣ್ಣು ತಿಂದುಕೊಂಡು, ಅಥವಾ ಒಂದೂಟ ಮಾಡಿಕೊಂಡು, ಅಥವಾ ಒಂದು ತಿಂಡಿ, ಒಂದೂಟ ಮಾಡಿಕೊಂಡು. ಪ್ರತಿದಿನ ತಿಂಡಿಗಾಗಿ ಎಚ್.ನರಸಿಂಹಯ್ಯ ಅಮೆರಿಕಾದಲ್ಲಿ ಬರೆ ಉಪ್ಪಿಟ್ಟು ಮಾತ್ರ ತಿನ್ನುತ್ತಿದ್ದರು ಎಂದು ತಿಂಗಳುಗಟ್ಟಲೆ ಉಪ್ಪಿಟ್ಟು ಮಾತ್ರ ತಿಂದು, ಅಥವಾ ಚಪಾತಿ ಮಾತ್ರ ತಿಂದು ಹೀಗೆ ವಿಧವಿಧವಾದ ಪ್ರಯೋಗಗಳನ್ನು ಮಾಡಿ ಸಾಕಾಗಿ ಸುಸ್ತಾಗಿದ್ದೇನೆ. ಆದರೆ ತೂಕವಂತೂ ಬೇಸರ ಮಾಡಿಕೊಳ್ಳದೆ ನನ್ನೊಡನೆ ನಿರಾತಂಕವಾಗಿ ಒಟ್ಟಿಗೆ ಹಾಯಾಗಿದೆ, ಜೊತೆಗೆ ಕಾಲುನೋವು ಕೂಡಾ.

ಈಗ ಹಕ್ಕಿ ಹಿಂದೆ ಅಲೆಯುವ ಕಾರಣದಿಂದ ತೂಕ ಹೇಗಾದರೂ ಇರಲಿ, ಕಾಲನ್ನಾದರೂ ಒಂದಿಷ್ಟು ಫಿಟ್ ಮಾಡಿಕೊಳ್ಳಲೇಬೇಕು ಎನ್ನುವ ಕಾರಣಕ್ಕಾಗಿ 2016ರಲ್ಲಿ ಮೊದಲ ಬಾರಿಗೆ ದೂರದ ಮಣಿಪಾಲದ ಬಳಿಯ ಪರೀಕಾದಲ್ಲಿ ಧರ್ಮಸ್ಥಳದವರು ನಡೆಸುವ ಯೋಗ ಹಾಗೂ ನ್ಯಾಚುರೋಪತಿ ಸೆಂಟರಿಗೆ ಸೇರಲು ನಿರ್ಧರಿಸಿದೆ. ನಾನು ಕೆಲಸ ಮಾಡಿದ ಕಾಲೇಜಿನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಕಲಾವಿದೆ ಜಯಲಕ್ಷ್ಮಿ ಪಾಟೀಲ್ ನನಗೆ ಫೇಸ್‌ಬುಕ್ಕಿನ ಗೆಳತಿಯೂ ಆಗಿದ್ದು, ಅವರು ಈ ಸೆಂಟರಿಗೆ ಹೋಗಿದ್ದ ಮಾಹಿತಿ ಹಾಕಿದ್ದರು. ಅವರಿಗೆ ಫೋನಾಯಿಸಿ ಮತ್ತಷ್ಟು ವಿವರ ಪಡೆದು ಹೊರಡಲು ಸನ್ನದ್ಧಳಾದೆ. ಮೊದಲ ಬಾರಿಗೆ ಏಕಾಂಗಿಯಾಗಿಯೇ ಹೊರಟೆ. ಹೊರಟಿದ್ದು ಚಿಕಿತ್ಸೆಗಾಗಿಯೆ, ಆದರೆ ಇದ್ದರೂ ಇರಲಿ ಎಂದು ಕ್ಯಾಮೆರಾ ಲೆನ್ಸುಗಳೂ ಬ್ಯಾಗಿನೊಳಗೆ ಸೇರಲು ಅತ್ಯಾತುರದಿಂದ ಮುನ್ನುಗ್ಗಿದವು. ಮೊದಲ ಬಾರಿಗೆ ಬೆಂಗಳೂರು – ಮಂಗಳೂರು ಕಾರವಾರ ರೈಲು ಹತ್ತಿದೆ. ನಾನೇನೋ ಜೈತ್ರಯಾತ್ರೆಗೆ ಹೊರಟಿದ್ದೇನೆ ಎಂಬಂತೆ ಗಂಡ, ಮಗಳು ಮೊಮ್ಮಕ್ಕಳು ಮಂಡ್ಯದ ರೈಲ್ವೆನಿಲ್ದಾಣಕ್ಕೆ ಬಂದು ನನ್ನ ಬ್ಯಾಗು ಒಳಗಿರಿಸಿ, ನನ್ನನ್ನೂ ಒಳಗೆ ಸೇರಿಸಿ ಬೈಬೈ ಹೇಳಿ ರೈಲನ್ನೂ ನನ್ನನ್ನೂ ಬೀಳ್ಕೊಟ್ಟರು. ಆದರೆ ಹತ್ತಿಸುವ ಸಂಭ್ರಮದಲ್ಲಿ ಒಂದು ಬೋಗಿ ಮೊದಲೇ ಹತ್ತಿಸಿಬಿಟ್ಟಿದ್ದರು. ನಂತರ ನನ್ನನ್ನೂ ನನ್ನ ಬ್ಯಾಗನ್ನೂ ಎಳೆದುಕೊಂಡು ಹಿಂದಿನ ಬೋಗಿಗೆ ವರ್ಗಾಯಿಸಿಕೊಂಡೆ.

ಮಂಗಳೂರಿನ ರೈಲು ಹಾದಿ ಚಂದ, ಈ ನೋಟ ಬಲು ಚಂದ ಎಂದು ಅಲ್ಲಿ ಇಲ್ಲಿ ಓದಿದ್ದೇ ಓದಿದ್ದು. ಆದರೆ ರಾತ್ರಿಯ ಈ ಪ್ರಯಾಣದಲ್ಲಿ ಏನೂ ಕಾಣಿಸದೆ `ಎಲ್ಲಿರುವೆ ತಂದೆ ಕಾಣಿಸದೆ, ಇಲ್ಲಿರುವೆಯಾ ನಿಜದಿ’ ಎಂದು ಕೇಳುವಂತಿತ್ತು. ಬೆಳಿಗ್ಗೆ ಎಂಟು ಗಂಟೆಗೆ ಮಂಗಳೂರು ತಲುಪಿದೆ. ಆದರೆ ಅಲ್ಲಿಂದ ಎಂಜಿನ್ ಡಿಟ್ಯಾಚ್ ಅಟ್ಯಾಚ್‌ಗಳ ಉಪಟಳ ಸಹಿಸಿ ಉಡುಪಿಯಲ್ಲಿ ಇಳಿದಾಗ ಮಂಗಳೂರಿನಿಂದ ಉಡುಪಿಗೆ ಬರಲು ಇಷ್ಟು ಸಮಯ ಬೇಕೆ ಎಂದು ಗಾಬರಿ ಬೀಳುವಂತಿತ್ತು. ಅದೇ ಕೊನೆ ಮತ್ತೆ ಮಂಗಳೂರು ರೈಲು ಹತ್ತಿಲ್ಲ, ಹತ್ತಲ್ಲ. ಏನಿದ್ದರೂ ಬಸ್ಸೇ ಬೆಸ್ಟು, ಮಡಿಕೇರಿಯ ಆಚೀಚೆ ಉರುಳಾಡಿಸುತ್ತದೆ ಎನ್ನುವುದನ್ನು ಬಿಟ್ಟರೆ. ಮಂಡ್ಯದಿಂದಲೇ ಹೊರಡುವ ಬಸ್ಸಿಗೆ ರಾತ್ರಿ ಉಂಡು ಹತ್ತಿದರೆ ಬೆಳಕು ಮೂಡುವ ಹೊತ್ತಿಗೆ ಮಣಿಪಾಲದಲ್ಲಿ ಹಾಜರಿರಬಹುದು. ಈಗಂತೂ ನಮ್ಮೂರಿನಿಂದ ಮಣಿಪಾಲದವರೆಗೆ ನೇರ ಸ್ಲೀಪರ್ ಬಸ್ ಇರೋದರಿಂದ ಹತ್ತಿ ರೈಟ್ ಹೇಳೋದೆ. ಈಗ ಪರೀಕಾಗೆ ಹೋಗುತ್ತಿಲ್ಲ ಕೊರೊನಾದ ಕಾರಣದಿಂದ, ಇನ್ನೂ ಏನೇನೋ ಕಾರಣಗಳಿಂದ.

ಬೋರೋ ಬೋರ್ ಎನ್ನುವ ಈ ಸುದೀರ್ಘ ರೈಲು ಪ್ರಯಾಣಕ್ಕೆ ಚರಮ ಹಾಡಿ ಉಡುಪಿಯಲ್ಲಿ ಇಳಿದು, ಆಟೋ ಹತ್ತಿ ಹಳ್ಳ ಕೊರಕಲುಗಳ ದಾರಿಯಲ್ಲಿ ಕುಲುಕುಲು ಕುಲುಕಿಸಿಕೊಂಡು ಪರೀಕಾದಲ್ಲಿ ಬಂದಿಳಿದೆ ಕಾಲುನೋವು ಹಾಗೂ ತೂಕವಿಳಿಸುವ ಸಲುವಾಗಿ. ದಾಖಲಾದ ಕೂಡಲೇ ಪರೀಕ್ಷಿಸಿದ ವೈದ್ಯರು ಟ್ರೀಟ್‌ಮೆಂಟ್ ಬರೆದರು. ಪ್ರತಿ ದಿನ ಯೋಗ, ಫಿಜಿಯೋಥೆರಪಿ, ಹಾಗೂ ಕೆಲವು ಪ್ರಾಕೃತಿಕ ಚಿಕಿತ್ಸೆಗಳು. ಯಾವುದಕ್ಕೂ ಮಾತ್ರೆ ಔಷಧಿಗಳ ಕಾಟವಿಲ್ಲ. ನನಗೆ ಮೊದಲಿನಿಂದಲೂ ಮಾತ್ರೆ ಔಷಧಿ ಎಂದರೆ ದೂರ ಬಹುಬಹು ದೂರ. ನೋವಿನ ಮಾತ್ರೆ ನುಂಗಿದರೆ ಹೊಟ್ಟೆಯ ಉಬ್ಬರ ಹಾಗೆ ಹೀಗೆ ಎಂದು ಸಬೂಬು ಹೇಳಿಯಾದರೂ ನೋವು ಸಹಿಸುತ್ತೇನೆಯೇ ವಿನಾ ಮಾತ್ರೆ ನುಂಗುವುದು ಕಡಿಮೆ. ಬಂದ ಒಂದೆರಡು ದಿನಗಳಲ್ಲೇ ಈ ಕೇಂದ್ರ ಬಹಳ ಇಷ್ಟ ಆಗಿಹೋಯಿತು, ಟ್ರೀಟ್‌ಮೆಂಟಿನ ವಿಷಯದಿಂದಂತೂ ಅಲ್ಲ. ಏಕೆಂದರೆ ತೂಕವಿಳಿಸಿ ಹಕ್ಕಿಯಾಗಿಯೇ ಬಿಡುವೆ ಎಂಬ ಮೋಹಕ ಭ್ರಮೆಗಳೇನೂ ನನಗಿರಲಿಲ್ಲ. ಈ ಸೆಂಟರಿನಲ್ಲಿ ನನಗಿದ್ದ ಮೊದಲ ಮತ್ತು ಕೊನೆಯ ಆಕರ್ಷಣೆ ಸುತ್ತಲೂ ಇದ್ದ ಗಿಡಮರಗಳು, ಹತ್ತಿರದಲ್ಲೇ ಸಣ್ಣ ಕಾಡು. ಹಾಗೆಂದು ಕಾಡಿಗಿರಲಿ ಯಾವುದೇ ಕಾರಣಕ್ಕೂ ಕಾಂಪೌಂಡಿನಿಂದ ಆಚೆಗೆ ಸಹ ಕಾಲೇ ಇಡುವಂತಿರಲಿಲ್ಲ, ಇಟ್ಟರೆ ಮತ್ತೆ ಒಳಗೆ ಸೇರಿಸುತ್ತಲೂ ಇರಲಿಲ್ಲ. ವಾಕಿಂಗ್ ನೆಪವನ್ನೂ ಹಾಕುವಂತಿರಲಿಲ್ಲ. ಯಾಕೆಂದರೆ ಬಿಲ್ಡಿಂಗ್ ಸುತ್ತಲೇ ವಾಕಿಂಗ್ ಪಾಥ್ ಇತ್ತು. ಮಾಡೋದಿದ್ರೆ ಇಲ್ಲೆ ವಾಕ್ ಮಾಡಿ, ಆಚೆ ಹೋಗುವಂತಿಲ್ಲ ಎಂದು ಕಟ್ಟಾಜ್ಞೆ ವಿಧಿಸಿದ್ದರು. ಹಾಗಿದ್ದ ಮುರಿಯುವುದಾದರೂ ಹೇಗೆ?

ಮೊದಲ ಮೂರ್ನಾಲ್ಕು ದಿನ ಅಲ್ಲಿಯ ನಿಯಮದ ಪ್ರಕಾರ ಎಲ್ಲವನ್ನೂ ನಾನು ಕ್ರಮಬದ್ಧವಾಗಿ ಫಾಲೋ ಮಾಡಿದೆ, ಕೊಟ್ಟ ಆಹಾರ ಸೇವಿಸಿದೆ. ನನಗೆ ಹೊತ್ತು ಹೊತ್ತಿಗೆ ಆಹಾರ ಕೊಡದಿದ್ದರೂ ನಡೆಯುತ್ತದೆ. ಏಕೆಂದರೆ ಪ್ರತಿದಿನ ಕಾಯಕ ಮುಗಿಸಿ ಕಾಲೇಜಿನಿಂದ ಎಷ್ಟು ಹೊತ್ತಿಗೆ ಮನೆಗೆ ಮರಳಿ ಬಂದರೂ ಆ ಬಳಿಕವೇ ನನ್ನ ಊಟ ಎನ್ನುವ ಅಭ್ಯಾಸವನ್ನು ಮೊದಲಿನಿಂದಲೂ ಬೆಳೆಸಿಕೊಂಡಿದ್ದೆ. ಬರಿಯ ಪಾಠ ಮಾಡುವ ಮೇಡಂ ಆಗಿದ್ದಾಗ ಅಡ್ಡಿಯಿರಲಿಲ್ಲ, ಆದರೆ ಆಡಳಿತದ ಚುಕ್ಕಾಣಿ ಹಿಡಿದಾಗ ಹೋಗುವ ಸಮಯ ಮರಳಿ ಬರುವ ಸಮಯ ಎಂದೂ ಹತ್ತರಿಂದ ಐದು ಆಗಿರಲೇ ಇಲ್ಲ. ನನಗೆ ಅವತ್ತು ಕೆಲಸ ಮುಗೀತು ಅನ್ನಿಸಿದಾಗ ಛೇಂಬರಿನ ಬಾಗಿಲಿಗೆ ಬೀಗ. ಮಂಡ್ಯಕ್ಕೆ ಬಂದ ಮೇಲಂತೂ ಅದು ತಡ ರಾತ್ರಿಯ ತನಕ ಲಂಬಿಸುತ್ತಿತ್ತು, ಬೆಳಿಗ್ಗೆ ಹೋದವಳು ಮನೆಗೆ ಬಂದ ಬಳಿಕವೆ ಮತ್ತೆ ಆಹಾರ. ಎಂದೂ ಕಾಲೇಜಿನಲ್ಲಿ ತಿನ್ನುವ ಅಭ್ಯಾಸ ಇಟ್ಟುಕೊಂಡಿರಲಿಲ್ಲ. ಜಲವೊಂದೆ ಆ ಅವಧಿಯ ಜೀವನಾಧಾರ. ಅಲ್ಲಿ ಎಲ್ಲರೂ ಬೆರಗಿನಿಂದ ನೋಡಿದ್ದೇ ನೋಡಿದ್ದು. ಇದೆಂತಹ ಪ್ರಿನ್ಸಿಪಾಲರು ಊಟ ತಿಂಡಿಯ ಕಡೆ ಗಮನ ಕೊಡದ ವಿಚಿತ್ರ ವ್ಯಕ್ತಿ ಎಂದು ನೋಡಿದರೂ, ಗ್ಯಾಸ್ಟ್ರಿಕ್ ಬರುತ್ತೆ ಮೇಡಂ ಎಚ್ಚರ ಎಂದು ಕಾಳಜಿಯಿಂದ ಪದೇಪದೇ ಎಚ್ಚರಿಸಿದರೂ ಈ ಪಥ ಬದಲಾಗಲಿಲ್ಲ, ಗ್ಯಾಸ್ಟ್ರಿಕ್ ನನ್ನ ಬಳಿಗೆ ವೃತ್ತಿಯಲ್ಲಿರುವ ತನಕ ಸುಳಿಯಲಿಲ್ಲ. ನನ್ನ ವೃತ್ತಿ ಹಾಗೂ ಪ್ರವೃತ್ತಿಗಳ ನಡುವೆ ಅಂತರವೇ ಇರದ ಕಾರಣ ದೇಹವೂ ಅರವತ್ತನೇ ವಯಸಿನ ತನಕ ಸಹಕರಿಸಿತು. ಆರೋಗ್ಯದಲ್ಲಿ ನನಗೆ ತೊಂದರೆ ಎನ್ನುವ ಕಾರಣದಿಂದ ರಜೆ ಹಾಕಿರದ ವೃತ್ತಿಜೀವನ ಮೋಹಿ ನಾನಾಗಿದ್ದೆ.

ನನ್ನಮ್ಮನಿಗೆ ಥ್ಯಾಂಕ್ಸ್ ಹೇಳಬೇಕು ಇಂತಹ ಆರೋಗ್ಯ ಕೊಟ್ಟಿದ್ದಕ್ಕೆ ಅನ್ನೋಣ ಎಂದರೆ ಸ್ವತಃ ಆಕೆಯೇ ನಲವತ್ತರ ಸುಮಾರಿಗೆ ಷುಗರ್ ಫ್ಯಾಕ್ಟರಿ ತೆರೆದು ಐವತ್ತರ ಒಳಗೆ ಬಿ.ಪಿ. ಹೃದ್ರೋಗಗಳನ್ನು ಸ್ವಾಗತಿಸಿ ಎಪ್ಪತ್ತೇಳರ ತನಕ ಬದುಕಿದಾಕೆ. ಮಧ್ಯೆ ಹೃದಯದ ಸರ್ಜರಿ ಬೇರೆ ಮಾಡಿಸಲಾಗಿತ್ತು. ಕೊನೆಯ ದಿನಗಳಲ್ಲಿ ಕಿಡ್ನಿಯೂ ಕೈಕೊಟ್ಟು ಮೇಲೆ ಮೂರ್ನಾಲ್ಕು ವರ್ಷ ಜೀವ ಉಳಿಸಿಕೊಂಡಿದ್ದರು. ಆದ್ದರಿಂದ ಆಕೆಗೆ ಥ್ಯಾಂಕ್ಸ್ ಹೇಳುವ ಬದಲಿಗೆ ಸದಾ ರೇಗಿಸುತ್ತಿದ್ದೆ, ಯಾವಾಗ ಯಾವುದನ್ನು ನನಗೂ ಗಿಫ್ಟ್ ಕೊಡುತ್ತೀರಿ ಎಂದು. ಪಾಪ ಅಮ್ಮ ಆ ಕೆಲಸವನ್ನು ಮಾಡಲಿಲ್ಲ ಅಥವಾ ನನ್ನ ಲೈಫ್ ಸ್ಟೈಲಿನಿಂದ ಅವು ಬಹಳ ಬೇಗ ನನ್ನ ಬಳಿ ಸುಳಿಯಲಿಲ್ಲ ಎಂದರೂ ಸರಿಯೆ.

ಮನಸ್ಸು ಸೂಚಿಸಿದಂತೆ ಸ್ವಯಂ ನಿರ್ದೇಶನದಂತೆ ತಿಂದು ಬದುಕುತ್ತಿದ್ದ ನನಗೆ ಪರೀಕಾದಲ್ಲಿ ಕೊಟ್ಟದ್ದನ್ನು ತಿನ್ನುವುದಕ್ಕೆ ಯಾವ ಪ್ರತಿಬಂಧಕಗಳೂ ಇರಲಿಲ್ಲ. ಇನ್ನು ಯೋಗ ಮಾಡಿ, ಚಿಕಿತ್ಸೆ ಪಡೆದು ಗಾಳಿಯಲ್ಲಿ ತೇಲುವಷ್ಟು ಹಗುರವಾಗ್ತೀನಿ ಎನ್ನುವಂತೇನೂ ಇರಲಿಲ್ಲ. ಆದರೆ ಮಣ್ಣು ಮೆತ್ತಿ, ಎಣ್ಣೆ ಒತ್ತಿ, ಸಾಸುವೆ ಪ್ಯಾಕ್ ಹಾಕಿ, ತರತರದ ಆವಿಯಲ್ಲಿ ಬೆಂದು ನೀರಿನಲ್ಲಿ ರಪ್‌ರಪ್ ಎಂದು ಹೊಡೆಸಿಕೊಂಡು, ಯೋಗದಲ್ಲಿ ಕೈಕಾಲು ಆಡಿಸಿದ್ದರಿಂದ ಕಾಲುನೋವು ಕಡಿಮೆ ಆಗಬಹುದೆಂಬ ನಿರೀಕ್ಷೆಯಂತೂ ಇತ್ತು. ಬೆಳಿಗ್ಗೆ ಮಧ್ಯಾಹ್ನ ಕಣ್ಣಿಗೆ ಹೊಟ್ಟೆಗೆ ಮಡ್ ಪ್ಯಾಕ್ ಹಾಕಿ ತಂಪಾಗಿಸುತ್ತಿದ್ದರು. ಆಗೆಲ್ಲಾ ಗಾಂಧಿ ಈ ಬಗೆಯ ಪ್ರಾಕೃತಿಕ ಚಿಕಿತ್ಸೆಗೆ ಪ್ರಾಶಸ್ತ್ಯ ಕೊಡುತ್ತಿದ್ದುದು ನೆನಪಿಗೆ ಬಂದು ನಾನೂ ಗಾಂಧಿ ಅನುಯಾಯಿ ಅಲ್ಲವೆ ಎಂದು ಪ್ಯಾಕ್ ಹಾಕಿಸಿಕೊಳ್ಳುತ್ತಿದ್ದೆ. ಆದರೆ ನಂತರ ಅದಕ್ಕೆ ಪ್ಯಾಕ್ ಅಪ್ ಎಂದು ಹೇಳುವಾಗ ಗಾಂಧಿಯನ್ನೂ ಮಣ್ಣು ಪ್ಯಾಕನ್ನೂ ಮರೆತೆ.
ಮೊದಲ ಮೂರು ದಿನ ಕಳೆಯಿತಾ, ಕಳೆಯಿತು. ಅಲ್ಲಿಯ ನಿಯಮಗಳನ್ನು ಚಾಚೂ ತಪ್ಪದೆ ವಿಧೇಯ ವಿದ್ಯಾರ್ಥಿನಿಯಂತೆ ಅನುಸರಿಸಿದೆ. ಕ್ಯಾಮೆರಾ ತನ್ನಷ್ಟಕ್ಕೆ ಡೀಪ್ ಸ್ಲೀಪಿನಲ್ಲಿತ್ತು. ಆದರೆ ದಿನಗಳೆದಂತೆ ಮೆಲ್ಲಮೆಲ್ಲನೆ ಕ್ಯಾಮೆರಾ ಬಿಡುವಿನ ವೇಳೆ ಕೈಗೆ ಬಂತು, ಓಡಾಡುವಾಗ, ಸಮಯ ಸಿಕ್ಕರೆ ಟೆರೇಸ್ ಏರಿ ಕಾಯುತ್ತಾ ಕುಳಿತೆ. ನಮ್ಮೂರಿನಲ್ಲಿ ಕಾಣುತ್ತಿದ್ದ ಕೆಲವು ಹಕ್ಕಿಗಳ ಜೊತೆಗೆ ಪಶ್ಚಿಮಘಟ್ಟದ ಹಕ್ಕಿಗಳೂ ಆಗೀಗ ಕಣ್ಣಿಗೆ ಬೀಳತೊಡಗಿದವು. ಆದರೆ ನನಗೂ ಹಕ್ಕಿಗೂ ಅಂದರೆ ನನಗೂ ನಿನಗೂ ನಡುವಿನಲ್ಲಿ ಕಡಲ ಅಂತರ ಎನ್ನುವಂತೆ ಅಂತರ ಹೆಚ್ಚೇ ಇದ್ದ ಕಾರಣ, ಜೊತೆಗೆ ಅವು ಎತ್ತರದ ಮರಗಳಲ್ಲಿ ಹಾರಿ ಇಳಿಯುತ್ತಿದ್ದ ಕಾರಣ ಕೆಲವು ರೆಕಾರ್ಡ್ ಷಾಟ್ ಆದವು.

ಪರೀಕಾದಲ್ಲಿ ಮೊದಲ ಬಾರಿ ಬಂದಿದ್ದರಿಂದ ಅಪರಿಚಿತರ ಜೊತೆ ಇರಲು ಕಷ್ಟ ಆದೀತೆಂದು ಸಿಂಗಲ್‌ ರೂಂ ಪಡೆದಿದ್ದೆ. ಆ ರೂಮಿಗೋ ಇದ್ದ ಒಂದೇ ಒಂದು ಕಿಟಕಿಯೂ ಒಳಾಂಗಣಕ್ಕೆ ಇತ್ತು. ಅಡ್ಡಾಡುವವರಿಗೆ ಕೊಠಡಿಯಲ್ಲಿ ನಾನು ಅಡ್ಡಾಗಿದ್ದಾಗ ಕಂಡೀತೆಂದು ಆ ಕಿಟಕಿಯನ್ನೂ ಮುಚ್ಚಿ ಬಂಧಿಯಾಗಿದ್ದೆ. ನಾನಿದ್ದ ರೂಮಿಗೆ ಮಣ್ಣುಪಟ್ಟಿ ಹಾಕಲು ಬಂದಾಗ, ನೇತಿ ಸೂತ್ರ ಮಾಡುವ ಹೊತ್ತಿನಲ್ಲಿ ಕ್ಯಾಮೆರಾ ಸಮೇತ ಪರಾರಿಯಾಗುತ್ತಿದ್ದೆ. ಮಧ್ಯಾಹ್ನವಿಡೀ ಅಂಗಳದಲ್ಲೇ ಅಡ್ಡಾಡುತ್ತಿದ್ದೆ. ಮಧ್ಯಾಹ್ನ ಯೋಗನಿದ್ರೆ ಮಾಡಿಸುತ್ತಿದ್ದರು. ಒಂದೆರಡು ದಿನ ಹೋದೆ. ಆದರೆ ಬೆಳಿಗ್ಗೆ ಯೋಗ ವ್ಯಾಯಾಮಕ್ಕಾಗಿ ಬೇಗ ಏಳುತ್ತಿದ್ದ ಕಾರಣದಿಂದ ಯೋಗನಿದ್ರೆಯ ಅವಧಿಯಲ್ಲಿ ನಿದ್ರೆ ಇನ್ ಯೋಗಹಾಲ್ ಆಗಿ ಎಲ್ಲರೂ ಯೋಗ ಮುಗಿಸುವ ಹೊತ್ತಿಗೆ ನಮ್ಮಂತಹ ಕೆಲವರ ನಿದ್ದೆ ಮುಗಿಯದೆ ಯಾರಾದರೂ ಏಳಿಸುತ್ತಿದ್ದರು. ನನಗೆ ಇವತ್ತಿಗೂ ಸೋಜಿಗ. ಅರ್ಧ ಗಂಟೆಯ ಗೈಡೆಡ್ ಯೋಗನಿದ್ರೆ ಮಾಡುವಾಗ ಅರ್ಧಕ್ಕೆ ಮೊದಲೇ ನಿದ್ದೆ ಕೈವಶ ಮಾಡಿಕೊಳ್ಳುವುದರಿಂದ ಪಾರಾಗಲು ಸಾಧ್ಯವೇ ಇಲ್ಲ.

ಬೆಳಿಗ್ಗೆ ಹೊತ್ತು ಗೈಡೆಡ್ ರೆಕಾರ್ಡ್ ಹಾಕಿಕೊಂಡು ಟ್ರಯಲ್ ಮಾಡಿ ಯಶಸ್ವಿಯಾಗಿ ನಿದ್ದೆ ಮಾಡಿದ್ದೇನೆ. ಬಹಳ ದೊಡ್ಡ ಸಮಸ್ಯೆ ಏನು ಅಂದರೆ ಈ ಹಾಳಾದ್ ನಿದ್ದೆ ಆಮೇಲೂ ಮುಂದುವರೆದರೆ ಪರವಾಗಿಲ್ಲ, ರೆಕಾರ್ಡ್ ಮುಗಿದ ಮರು ಸೆಕೆಂಡಿಗೆ ಎಚ್ಚರ ಆಗಿಬಿಡುತ್ತದೆ. ಏನ್ ಕರ್ಮದ ನಿದ್ರಾಯೋಗವೋ ನಿದ್ರಾಭಂಗವೋ ಇದು.
ಪರೀಕಾದಲ್ಲಿ ಮೊದಲ ಬಾರಿಗೆ ಹೋದಾಗ 100-600 tamaron ಲೆನ್ಸ್ ತೆಗೆದುಕೊಂಡು ಹೋಗಿದ್ದೆ. ಆಗ, ನಂತರ ಆಮೇಲೂ ಆ ಲೆನ್ಸಿನಿಂದ ತೆಗೆದ ಫೋಟೊಗಳು ಸಮಾಧಾನ ಎನಿಸುವಂತೆ ಬರಲೇ ಇಲ್ಲ. ಕ್ರಮೇಣ ಆ ಲೆನ್ಸಿಗೆ ಖಾಯಂ ರೆಸ್ಟ್ ಇತ್ತು ಮನೆಯಲ್ಲೇ ಮಲಗಿಸಿದ್ದೇನೆ. ಹೋಗತ್ಲಾಗೆ ಮಾರಿಯೇ ಬಿಡುವಾ ಎಂದರೆ ಮನಸ್ಸೂ ಬಿಲ್‌ಕುಲ್ ಒಪ್ಪುತ್ತಿಲ್ಲ, ನನ್ ಮನೆಯ ಕೂಸೆ ತಾನೆ ಎಂದು. ಮುಂದಿನ ಸಲದಿಂದ canon 100-400 ಒಯ್ಯಲು ನಿರ್ಧರಿಸಿದೆ. ಉಳಿಯುವುದು ಹತ್ತು ದಿನಕ್ಕೆ ಎಂದು ಪರೀಕಾಗೆ ಹೋದವಳು ನಂತರದಲ್ಲಿ ಮತ್ತೂ ಒಂಬತ್ತು ದಿನದ ತನಕ ಮುಂದುವರೆಸಿದೆ. ಬಹುಶಃ ವಿರಾಜಪೇಟೆಯ ಕಾಲೇಜಿನ ಒಂದು ಕಾರ್ಯಕ್ರಮಕ್ಕೆ ಒಪ್ಪಿಕೊಳ್ಳದಿದ್ದರೆ ಇನ್ನೂ ಇನ್ನಷ್ಟು ದಿನಗಳು ಅಲ್ಲಿಯೇ ಚಿಕಿತ್ಸೆಯ ನೆಪದಲ್ಲಿ ಇದ್ದೆ ಬಿಡುತ್ತಿದ್ದೆನೋ ಏನೋ, ಕೊಂಡುಹೋಗಿದ್ದ ಕಾಸು ಖಾಲಿಯಾಗುವ ತನಕ.

ಕಾಲು ಸ್ವಲ್ಪ ಸರಿಹೋಯಿತು ಎಂಬ ಸುರಮ್ಯ ಭ್ರಮೆಯೊಡನೆ, ಮೂರು ಕೆ.ಜಿ ಇಳಿಸಿಕೊಂಡು ಆಹಾ ತೂಕವೂ ಒಂದಿಷ್ಟು ಹಗುರವಾಗಿದೆ ಎಂದುಕೊಂಡು ಊರಿಗೆ ಮರಳಿದೆ. ಮರಳಿದ ಬಳಿಕ ಮರಳಿ ಮರಳಿ ಹೋಗುವ ಹವ್ಯಾಸವನ್ನೂ ಬೆಳೆಸಿಕೊಂಡೆ. ಒಮ್ಮೆ ತಂಗಿ, ಒಮ್ಮೆ ನಾದಿನಿ, ಮತ್ತೊಮ್ಮೆ ಮಗಳು ಇವರ ಜೊತೆ ಹೀಗೆ ಪರೀಕಾಗೆ ಹೋಗುತ್ತಿದ್ದೆ. ಮೂಲ ಉದ್ದೇಶ ಹಕ್ಕಿ ಚಿತ್ರ ತೆಗೆಯುವುದು. ಪರೀಕಾಗೆ ಒಟ್ಟು ಐದು ಸಲ ಹೋದೆ, ಎರಡನೇ ಮಹಡಿಯಲ್ಲೇ ರೂಮು ಕೇಳಿ ಪಡೆಯುತ್ತಿದ್ದೆ. ಎರಡನೇ ಮಹಡಿಯಿಂದ, ಅಂಗಳದಲ್ಲಿ ಅಡ್ಡಾಡುವಾಗ ಚರ‍್ರಿ ಗಿಡಕ್ಕೆ ಬರುತ್ತಿದ್ದ ಎಲೆವಕ್ಕಿಗಳು, ಕೋಗಿಲೆಗಳು, ಕುಟ್ರಗಳು, ಸೂರಕ್ಕಿಗಳು, ಬದನಿಕೆಗಳ ಆಕರ್ಷಣೆಯೇ ಇದಕ್ಕೆ ಕಾರಣವಾಗಿತ್ತು. ಕಂಡ ಮೇಲೆ ಅವು ಕ್ಯಾಮೆರಕ್ಕಿಳಿದವು.

ಮೊದಲ ಬಾರಿಗೆ ರಾಕೆಟ್ ಬಾಲದ ಕಾಜಾಣ ಪರೀಕಾದ ಅಂಗಳದಲ್ಲಿ ಕಣ್ಣಿಗೆ ಬಿದ್ದಾಗ ಅಕ್ಷರಶಃ ಭಾವ ಸಮಾಧಿಯಲ್ಲಿದ್ದೆ. ಕುವೆಂಪು ಮೆಚ್ಚಿನ ಹಕ್ಕಿ, ಅವರ ಎಲ್ಲ ಪುಸ್ತಕಗಳ ಮುದ್ರಿಕೆಗಳಲ್ಲಿ ಕಾಣಸಿಗುವ ಹಕ್ಕಿ, ಮತ್ತೆ ರೋಮಾಂಚನವಾಗದೇ ಇರುತ್ತದೆಯೇ. ವಯಸ್ಸಿನಲ್ಲಿ ಒಂದಿಪ್ಪತ್ತು ಮೂವತ್ತು ಕಡಿಮೆಯಾದಂತೆ ಎನ್ನಿಸಿತು.
`ಕೋಗಿಲೆಯಂತೆಯೆ ಬಣ್ಣವು ನಿನಗಿದೆ,
ಕೋಗಿಲೆಯಿಂಚರಕ್ಕಿಮ್ಮಡಿಯಿಂಚರ!
ಕೋಗಿಲೆಗೆಲ್ಲಿದೆ ನಿನಗಿರುವಂತಹ
ಪುಕ್ಕದೆ ನೇಲುವ ಗರಿಯೆರಡು?
ಕೋಗಿಲೆಯಿನಿದನಿಯೊಂದೇ ಆಗಿದೆ
ನಿನ್ನದು ಬಹು ವಿಧವಾಗಿಹುದು’

ಎಂದು ಮೆಚ್ಚಿದ ಕುವೆಂಪು ಮುಂದುವರೆದು

`ಕಾಜಾಣವೆ, ಕೋಗಿಲೆಗಿರುವಂದದಿ
ಮಾಗಿಯ ಬಂಧನ ನಿನಗಿಲ್ಲ’

ಎಂದು ಮುಕ್ತ ಪ್ರಶಂಸೆ ಮಾಡಿದ್ದಲ್ಲದೆ

ʼಓ ವನಗಾಯಕ ವರವಾಗೀಶ,
ನಿನ್ನಾ ಕಾನನ ಕೂಜನ ಪಾಶ
ಕಬ್ಬಿಗನಿಗೆ ಮುಕ್ತಿಯ ಆವೇಶ
ಸ್ವರಚಾಪಕೆ ನೀ ಸ್ವರಬಾಣ….ʼ

ಎಂದು ಮನದುಂಬಿ ಹಾಡಿದ್ದರೆ, ನಮ್ಮಂತಹ ಕುವೆಂಪು ಚಿತ್ರಿಸಿದ ಪ್ರಕೃತಿ, ಕಾಡು, ಕಾಡಹಕ್ಕಿಗಳ ಪ್ರೇಮಿಗಳಿಗೆ ಇನ್ನೆಷ್ಟು ಆನಂದಾನುಭೂತಿಗಳ ಅನುಭವ.

ಒಮ್ಮೆ ಕಿರಿಯ ಮಗಳ ಜೊತೆ ಪರೀಕಾಗೆ ಹೋಗಿದ್ದೆ. ಆ ಸಲವೂ ಕ್ಯಾಮೆರಾ ಜೊತೆಗೆ ಬಂದಿತ್ತು. ಮೊದಲ ಬಾರಿಗೆ ಮಲಬಾರ್ ಟ್ರೋಜನ್ ಹಾರಿಬಂದು ಕುಳಿತು, ನಾನು ಅದನ್ನು ಟ್ರೋಗನ್ ಎಂದು ಗುರುತಿಸಿ ಫೋಕಸ್ ಮಾಡುವಷ್ಟರಲ್ಲಿ ಮತ್ತೊಂದು ಕೊಂಬೆಗೆ ನೆಗೆದು ಕುಳಿತು ಸಂದಿಯಿಂದ ಅರೆಬರೆ ದರ್ಶನ ನೀಡಿತು. ಅದನ್ನೇ ಸೆರೆಹಿಡಿದು ನಾನೂ ಟ್ರೋಜನ್ ನೋಡಿದೆ ಎಂಬ ಪಟ್ಟಿಯಲ್ಲಿ ಸೇರಿಸಿದೆ. ಇನ್ನು ಮೊದಲಿನ ಎಲೆವಕ್ಕಿಗಳನ್ನೇ ಮತ್ತೆ ಮತ್ತೆ ಕ್ಯಾಮೆರಾದಲ್ಲಿ ತುಂಬಿಕೊಂಡೆ.

ಹತ್ತು ದಿನಗಳ ಬಳಿಕ ಇನ್ನೂ ಮುಂದೆ ಚಿಕ್ಕಮಗಳೂರಿನಲ್ಲಿದ್ದ ಗೆಳತಿ ಮಂಜುಳಾ ಹುಲ್ಲಳ್ಳಿ ಮನೆಗೆ ಹೋಗಿ, ಅವರ ಜೊತೆ ಅವರ ಪ್ರೀತಿಯ ಇಬ್ಬನಿಯೊಡೆಯನ ಮುಳ್ಳಯ್ಯನಗಿರಿಗೂ ಕೂಡಾ ಹೋಗಿದ್ದಾಯ್ತು. ನಂತರ ಒಂದು ದಿನಕ್ಕೆ ಅವರು ವ್ಯವಸ್ಥೆಗೊಳಿಸಿಕೊಟ್ಟ ಕೆಮ್ಮಣ್ಣುಗುಂಡಿಯಲ್ಲೂ ಬೀಡು ಬಿಟ್ಟಾಯ್ತು, ಒಂದು ದಿನ ಕಾಡಿನ ಸಂಚಾರಕ್ಕೂ, ಕೆರೆಗಳ ಸಂಚಾರಕ್ಕೂ ವ್ಯವಸ್ಥೆ ಮಾಡಿಕೊಟ್ಟರು. ಆದರೆ ಮುಳ್ಳಯ್ಯನಗಿರಿಯಲ್ಲಾಗಲೀ, ಕೆಮ್ಮಣ್ಣುಗುಂಡಿಯಲ್ಲಾಗಲೀ ಹಕ್ಕಿಗಳ ಸುಳಿವೇ ಇರಲಿಲ್ಲ. ಕೆರೆಗಳ ಬಳಿ ಕೆಲವು ಕಂಡವು. ಆದರೆ ವನಸಂಚಾರದಲ್ಲಿ ಸಂಜೆಯ ಬಳಿಕ ಸಫಾರಿ ಮಾಡಿಸಿದ್ದರಿಂದ ಕತ್ತಲಲ್ಲಿ ಹಕ್ಕಿ ಕಾಣೋದಿರಲಿ, ದಾರಿಯೂ ನೆಟ್ಟಗೆ ಕಾಣುತ್ತಿರಲಿಲ್ಲ. ಮಂಜಮ್ಮ, ಆಗಾಗ್ಗೆ ಅಕ್ಕಯ್ಯ ಬಾರಕ್ಕಯ್ಯ’ ಎಂದು ಕರೆದರೂಹೋಗೋ ಹೋಗು ನಿಮ್ಮೂರಲ್ಲಿ ಹಕ್ಕಿಗಳೆ ಸರಿಯಾಗಿ ಸಿಕ್ಕಲಿಲ್ಲ’ ಎಂದು ನಸುಮುನಿಸಿನ ನೆಪ ಹೇಳಿ ಇನ್ನೂವರೆಗೂ ಹೋಗಿಲ್ಲ. ಆದರೆ ಹಕ್ಕಿ ಸುತ್ತಾಟದಲ್ಲಿ ಅಯ್ಯನಕೆರೆ ಮುಂತಾದ ಕಡೆ ಎರಡು ದಿನ ಜೊತೆಯಾದ ಪತ್ರಕರ್ತ ಶೂದ್ರ ಶಿವ ಅವರಿಗೆ ನಾನು ಋಣಿ.

ಧರ್ಮಸ್ಥಳದಲ್ಲಿಯೂ ಎಸ್.ಡಿ.ಎಂ ನವರ ಯೋಗ-ನ್ಯಾಚುರೋಪತಿ ಸೆಂಟರ್ ಇದೆ. ನಾನೂ ನನ್ನ ತಂಗಿ ಅಲ್ಲಿಗೆ ಹೋದೆವು. ಧರ್ಮಸ್ಥಳದಲ್ಲಿ ಪ್ರಾಕೃತಿಕ ಆವರಣ ಚೆನ್ನಾಗಿದೆ, ವಿಶಾಲವಾಗಿದೆ ಹೆಚ್ಚಿನ ಹಕ್ಕಿಗಳು ಸಿಗುತ್ತವೆ ಎಂದೇ ವಿನಾ ಹೆಚ್ಚಿನ ಟ್ರೀಟ್‌ಮೆಂಟ್ ಸಿಗುತ್ತದೆಂದೇನೂ ಅಲ್ಲ. ಪಶ್ಚಿಮಘಟ್ಟದ ಹಕ್ಕಿಗಳು ಕೆಲವು ಇಲ್ಲಿದ್ದವು. ಜುಲೈ ತಿಂಗಳ ಸತತ ಮುಸಲಧಾರೆ… ರೂಮು ಮುಗ್ಗಲೋ ಮಹಾ ಮುಗ್ಗಲು. ಅದೆಷ್ಟು ಮುಗ್ಗಲು ಹಿಡಿಯುತ್ತಿತ್ತು ಮತ್ತು ಹೊಡೆಯುತ್ತಿತ್ತೆಂದರೆ ಪರ್ಸಿನೊಳಗೆ ಪ್ಲ್ಯಾಸ್ಟಿಕ್ ಕವರಿನಲ್ಲಿಟ್ಟ ನೋಟೂ ವಾಸನೆ ಹೊಡೆಯುತ್ತಿತ್ತು. ಹೊರಗೆ ಹಬ್ಬಿ ಬೆಳೆದ ಹಾವಸೆಯ ಹಸಿರು, ಕಾಲುನೋವು ಸರಿ ಮಾಡಿಸಿಕೊಳ್ಳಲು ಬಂದವಳು ಒಂದು ಸಲ ಪಾಚೀಲಿ ಪಚ್ ಎಂದು ಜಾರಿಯೇ ಬಿದ್ದೆ, ಬಿದ್ದವಳು ಎದ್ದೆ, ಆತಂಕ ಇದ್ದದ್ದು ಕ್ಯಾಮೆರಾದ್ದು. ಪುಣ್ಯಕ್ಕೆ ಕ್ಯಾಮರಾಕ್ಕೆ ಏನೂ ಆಗದೆ ಲೆನ್ಸ್ ಮುಂದೆ ಅಳವಡಿಸಿದ್ದ ಫಿಲ್ಟರ್ ಮಾತ್ರ ಒಡೆದಿತ್ತು ಅಷ್ಟೆ. ಗೆದ್ದೆ ಅಂದುಕೊಂಡೆ.

ದಬದಬ ಸುರಿವ ಮಳೆಯಲ್ಲೂ ಛತ್ರಿ ಹಿಡಿದು ಕ್ಯಾಮೆರಾ ಸಮೇತ ಆವರಣದಲ್ಲೆಲ್ಲಾ `ಆವಾರ ಹ್ಞೂಂ ಮೈ, ಆವಾರಾ ಹ್ಞೂಂ’ ಎಂದು ರೌಂಡ್ ಹಾಕಿಯೇ ಮರಳಿ ಬರುತ್ತಿದ್ದೆ. ಮಳೆಯ ಸುಖ ಅನುಭವಿಸುವುದು ನಿಜಕ್ಕೂ ಒಂದು ಯೋಗವೇ ಸರಿ. ಅಲ್ಲೊಂದು ಮಂಟಪ ಇತ್ತು. ಅಲ್ಲಿಗೆ ಹೋಗಿ ಕುಳಿತು ಬಂದರೆ ಚಿಟ್ಟೆ, ಹಕ್ಕಿ, ಇಲ್ಲದಿದ್ದರೆ ಮಳೆಯ ಪಟವನ್ನೆ ಸೆರೆಹಿಡಿಯುತ್ತಿದ್ದೆ. ಕೆಲವೊಮ್ಮೆ ಕೆಲ ಹಾಸ್ಪಿಟಲ್‌ಮೇಟ್ ನಮ್ಮ ಫೋಟೋನೂ ತೆಗೆಯಿರಿ ಅಂತಾ ತೆಗೆಸಿದರು. ಆದರೆ ವಿಳಾಸವನ್ನೇ ನೀಡದ ಅವರಿಗೆ ಕಳಿಸುವುದಾದರೂ ನಾನು ಹೇಗೆ. ಅವು ಹಾಗೆ ಉಳಿದಿವೆ ಫೋಲ್ಡರಿನಲ್ಲಿ, ಭೂಮಿ ಗುಂಡಾಗಿಯೇ ಇರುವುದರಿಂದ ಎಂದಾದರೂ ಅವರು ಸಿಕ್ಕೇ ಸಿಗಬಹುದೆಂಬ ನಿರೀಕ್ಷೆಗಳಿವೆ, ಕಾಯ್ದು ನೋಡೋಣ.

ಈ ಸೆಂಟರಿನಲ್ಲಿ ವಿ.ಐ.ಪಿಗಳಿಗಾಗಿ ಗುಡ್ಡದ ಮೇಲೆ ಕಾಟೇಜುಗಳಿದ್ದವು. ಅಲ್ಲಿಗೆ ಹೋದರೆ ಇನ್ನಷ್ಟು ಹಕ್ಕಿಗಳು ಸಿಗುತ್ತಿದ್ದವು. ಹತ್ತಿ ಹೋಗುತ್ತಿದ್ದೆ. ಅಲ್ಲಿಗೆ ಆಹಾರ, ಪರಿಚಾರಕರನ್ನು ಹೊತ್ತು ಹೋಗುವ ಜೀಪಿನಲ್ಲಿಯು ಹೋಗುತ್ತಿದ್ದೆ. ತಂಗಿಯೂ ಒಮ್ಮೊಮ್ಮೆ ಕ್ಯಾಮೆರಾ ಹಿಡಿದು ಜೊತೆಗೆ ಬರುತ್ತಿದ್ದಳು. ಹಕ್ಕಿ ಜೊತೆಗೆ ಗಿಡ ಹೂಗಳ ಚಿತ್ರ ತೆಗೆಯುತ್ತಿದ್ದಳು. ಸಸ್ಯಶಾಸ್ತ್ರಎಂ.ಎಸ್ಸಿ ಓದಿದ ಅವಳು ಕಲಾವಿದೆ, ವರ್ಣಚಿತ್ರ, ರೇಖಾಚಿತ್ರ, ಮೈಸೂರು ಆರ್ಟ್, ಕಸೂತಿ… ಇನ್ನೂ ಹತ್ತು ಹಲವು ವಿದ್ಯೆಗಳಲ್ಲಿ ಪರಿಣಿತೆ. ಚಿತ್ರ ತೆಗೆಯಬೇಕು ಎಂಬುದೂ ಅವಳಾಸೆ. ಆದರೆ ಹಕ್ಕಿ ಚಿತ್ರ ತೆಗೆಯಲು ಇಳಿದವಳು ನಾನು. ಧರ್ಮಸ್ಥಳದಲ್ಲಿ ಅವಳು ಏಳು ಹಕ್ಕಿಗಳ ಕಸೂತಿ ಕೆಲಸ ಮಾಡಿದಳು, ನಾನು ಹಕ್ಕಿ ಫೋಟೊ ತೆಗೆದೆ. ಬಲು ಅಪರೂಪ ನಮ್ಮಕ್ತಂಗಿ ಜೋಡಿ ಎನ್ನುವಂತೆ. ಮತ್ತೆ ಇಲ್ಲಿಗೇ ಬರೋಣ, ಗುಡ್ಡದ ಮೇಲಿನ ಕಾಟೇಜಿನಲ್ಲೇ ತಂಗೋಣ ಎಂದು ಮಾತಾಡಿಕೊಂಡೇ ಧರ್ಮಸ್ಥಳ ಬಿಟ್ಟಿದ್ದೆವು. 2018ರ ಜನವರಿಯಲ್ಲಿ ಒಂದು ವಾರಕ್ಕೆ ಹೋಗಿಬರೋಣ ಎಂದು ಬುಕ್ ಮಾಡಿದೆವು. ಆದರೆ ನನ್ನ ಗಂಡನಿಗೆ ಆರೋಗ್ಯ ಏರುಪೇರಾದ ಕಾರಣ ಕ್ಯಾನ್ಸಲ್ ಮಾಡಿದೆವು ಸಂಕಟ ಪಟ್ಟುಕೊಂಡು. ಮತ್ತೆ ಹೋಗಲಾಗಿಲ್ಲ ಇದುವರೆಗೂ.

ಧರ್ಮಸ್ಥಳದಲ್ಲಿ ರಾಕೆಟ್‌ ಬಾಲದ ಕಾಜಾಣ, ಹಳದಿ ಹುಬ್ಬಿನ ಪಿಕಳಾರ, ಕೆಂಪು ಕೊರಳಿನ ಪಿಕಳಾರ, ಮಲಬಾರ್ ಗಿಳಿ, ಕಂದು ಮರಕುಟಿಗ, ಕಂಚು ಕಾಜಾಣ, ನೀಲಿ ಸಿಳ್ಳಾರ ಕಪ್ಪು ತಲೆಯ ಹೊನ್ನಕ್ಕಿ, ಮಲೆಮಂಗಟ್ಟೆ, ಪಚ್ಚೆ ಪಾರಿವಾಳ ಹೀಗೆ ಹತ್ತು ಹಲವಾರು ಹಕ್ಕಿಗಳು ಸಿಕ್ಕವು. ಆದರೆ ಧರ್ಮಸ್ಥಳದಲ್ಲಿ ತುಂಬಾ ಎತ್ತೆತ್ತರದ ಮರಗಳು, ನನ್ನ ಲೆನ್ಸ್ ಅಷ್ಟು ದೂರಕ್ಕೆ ಸ್ಪಷ್ಟವಾಗಿ ಹಿಡಿದಿಡಲು ಅಸಮರ್ಥವಾಗಿದ್ದರೂ ಚಿತ್ರಗಳು ಬಂದವು. ಮುಂದಿನ ಸಲ ಇನ್ನಷ್ಟು ತೆಗೆಯೋಣ ಎಂದು ನಿರ್ಧರಿಸಿದ್ದರೂ ಹೋಗಲು ಆಗಿಲ್ಲ. ಆದರೂ ನನ್ನ ಕ್ಯಾಮೆರಾ ಲೆನ್ಸ್ ಹೊತ್ತು ಅಲ್ಲಿ ಏಕಾಂಗಿಯಾಗಿ ಅಡ್ಡಾಡುವುದು ಕೂಡಾ ಕೊಂಚ ರಿಸ್ಕಿ ಅನ್ನಿಸುತ್ತದೆ ಅಲ್ಲಿಯ ಮಳೆ, ಹಾವಸೆಯ ಅವತಾರಗಳಿಂದ.

ನಾನು ಆರೋಗ್ಯದ ನೆಪ ಹೇಳಿಕೊಂಡು ಕೊನೆಯ ಸಲ ಪರೀಕಾಗೆ ಹಕ್ಕಿಯಾತ್ರೆಗೆ ಹೋಗಿದ್ದು 2017ರಲ್ಲಿ. ಬಂಧುಗಳ ದಂಡಿನ ಸಮೇತ ಹೋಗಲು ಸೆಂಟರಿನಲ್ಲಿ ಬುಕ್ ಮಾಡಿದಾಗ ನನ್ನ ನಿರೀಕ್ಷೆ ಇದ್ದದ್ದು ಆ ವೇಳೆಗಾಗಲೇ ಬೆಂಗಳೂರಿನಲ್ಲಿ ಬುಕ್ ಮಾಡಿದ್ದ ನನ್ನ canon 600 mm prime is ii ಲೆನ್ಸ್ ಕೈಗೆ ಸಿಗುತ್ತದೆಂದು. ಹೋಗುವಷ್ಟರಲ್ಲಿ ಸಿಕ್ಕೇ ಸಿಗುತ್ತದೆ, ಹೋದ ಸಲ 100-400ರಲ್ಲಿ ತೆಗೆದ ಹಕ್ಕಿಗಳನ್ನು ಈ ಸಲ 600 mm primeನಲ್ಲಿ ಹಿಡಿದೇ ಹಿಡಿಯುತ್ತೇನೆ ಎಂದು ಕನಸು ಕಟ್ಟಿಕೊಂಡಿದ್ದೆ. ಆದರೆ ಬೆಂಗಳೂರಿಗೆ ಲೆನ್ಸ್ ಬರೋದು ತಡವಾಯಿತು. ವಿಧಿಯಿಲ್ಲದೆ 100-400 mm ಹಿಡಿದೇ ಹೋದೆ, ಚಿತ್ರ ತೆಗೆಯುವ ಆಸಕ್ತಿಯನ್ನೇ ಮನಸ್ಸು ತೋರಿಸುತ್ತಿರಲಿಲ್ಲ. ಅಷ್ಟರಲ್ಲಿ ರಾಜ್ಯೋತ್ಸವ ಆಯ್ಕೆ ಸಮಿತಿಯ ಸದಸ್ಯೆಯಾಗಿ ಕೆಲಸ ಮಾಡಲು ಕರೆ ಬಂದಿತ್ತು, ಜೊತೆಗೆ ಬಂದ ಬಂಧುಗಳನ್ನು ಅವರ ಪಾಡಿಗೆ ಅಲ್ಲೇ ಬಿಟ್ಟು ನಾನು ಬೆಂಗಳೂರು ಸೇರಿ ಮೀಟಿಂಗ್ ಅಟೆಂಡ್ ಮಾಡಿ ಆ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗುವವರ ಆಯ್ಕೆಯಲ್ಲಿ ಸಹಕರಿಸಿದೆ. ಅದೇ ಸಮಯದಲ್ಲಿ ಸುಮಾರು ಏಳೂವರೆ ಲಕ್ಷದ canon 600 mm prime is ii ಲೆನ್ಸ್ ಕೈಗೆ ಬಂತು, ಆದರೆ ನಾಲ್ಕಾರು ದಿನಗಳ ಸತತ ಮೀಟಿಂಗ್, ಲೆನ್ಸ್ ಹೊರತೆಗೆಯಲೇ ಇಲ್ಲ. ಮೀಟಿಂಗ್ ನಡೆಯುತ್ತಿದ್ದ ಆಚೀಚೆ ಜಾಗದಲ್ಲಿ ಹಕ್ಕಿಗಳು ಕಾಣಿಸುತ್ತಿದ್ದವಾದರೂ ದಿನವಿಡೀ ಮೀಟಿಂಗಿನಲ್ಲಿ ಇರುತ್ತಿದ್ದ ಕಾರಣ ಲೆನ್ಸ್ ತನ್ನ ಪೆಟ್ಟಿಗೆಯಲ್ಲಿ ಭದ್ರವಾಗಿತ್ತು. ಜೊತೆಗೆ ಮೊದಲಿದ್ದ ಟ್ರೈಪಾಡ್ 600mm prime ಭಾರ ಹೊರಲು ಬಿಲ್‌ಕುಲ್ ಆಗುವುದೇ ಇಲ್ಲ ಎಂದು ಗೋಳಾಡಿತು. ಮತ್ತೇನು ಮಾಡುವುದು ಪರಿಚಿತರ ಬಳಿ ಗಿಟ್ಸೊ ಟ್ರೈಪಾಡ್ ಕೊಂಡುಕೊಂಡೆ, ಜೊತೆಗೆ ನಾನು ಮಹಾ ಮ್ಯಾಕ್ರೊ ಫೋಟೋಗ್ರಫಿ ಮಾಡುವೆನೆಂದು 100 mm macro lens ಕೊಂಡೆ. ಆಗೀಗ ಹುಕಿ ಬಂದರೆ ಮ್ಯಾಕ್ರೋಗೆ ಕೆಲಸ ಕೊಡುತ್ತೇನೆ.

ಇತ್ತ ಕಾಲಂತೂ ಸರಿಯೂ ಹೋಗಲಿಲ್ಲ, ಅತ್ತ ತೂಕವೂ ಗಮನಾರ್ಹವಾಗಿ ಇಳಿಯಲಿಲ್ಲ. ಇಳಿಸಿಕೊಂಡದ್ದನ್ನು ಹೋಗುವಷ್ಟರಲ್ಲಿ ಮತ್ತಷ್ಟು ಹೆಚ್ಚಿಸಿಕೊಂಡು ಕಾಸು ತೆತ್ತು ಕೊಂಚ ಕರಗಿಸಿಕೊಂಡದ್ದಷ್ಟೆ ಲಾಭ. ಆದರೆ ಹೋದ ಜಾಗಗಳಲ್ಲಿನ ಹಕ್ಕಿಗಳ ಚಿತ್ರ ಬಣ್ಣಬಣ್ಣವಾಗಿ ಮನಕ್ಕಿಳಿದು ಕ್ಯಾಮೆರಾದೊಳಕ್ಕೆ ನುಗ್ಗಿ ಬಂದವು. ಹಕ್ಕಿ ಬಂದ್ವು ಹಕ್ಕಿ ಬಂದ್ವು ಡುಂ ಡುಂ ಡುಂ. 600 mm ಹೊತ್ತು ಪರೀಕಾಗೆ ಹೋಗಬೇಕೆಂಬ ಆಸೆ ಹಾಗೇ ಉಳಿದಿದೆ encash ಆಗದೆ. ಇರಲಿ ಎಂದಾದರೂ ಒಮ್ಮೆ ಹೋದರೆ ಹೋದೇನು, ಮತ್ತೆ ಅದೇ ಹಕ್ಕಿಗಳ ಪಟ ಹಿಡಿದೇನು, ಆಗ ಮಂಡ್ಯದ ಕ್ಯಾಮೆರಾ ಮೇಡಂ ಬಂದರು ಎಂದು ಅಲ್ಲಿಯವರು ಹೇಳಲೂಬಹುದು. ಹೊಸಬರು ಪಿಳಿಪಿಳಿ ನೋಡಲೂಬಹುದು. ಈಗ ಮಗಳು ಮಣಿಪಾಲದಲ್ಲಿದ್ದಾಳೆ, ಅಲ್ಲಿಗೆ ಹೋಗುವುದು ಸ್ವಾಮಿಕಾರ್ಯ, ಸ್ವಕಾರ್ಯ ಸಾಧ್ಯ. ಆದರೆ ಕಳೆದ ಮೂರು ವರ್ಷದಿಂದ ಕೋವಿಡ್ ಕಾರಣದಿಂದಾಗಿ ಪರೀಖಾಗೆ ಹೋಗಲು ಅವಳು ಅನುಮತಿಸಿಲ್ಲ, ಹೋಗಲೂ ಸಾಧ್ಯವಾಗಿಲ್ಲ. ಈಗೀಗ ಒಬ್ಬಳೇ ಹೋಗಿರಬಲ್ಲೆನೆ ಎಂಬಅನುಮಾನವೂ ನನ್ನೊಳಗೆ ಇದೆ. ಈಗ ಕಾಲನ್ನು ಮಣಿಪಾಲದ ಮಗಳೆ ರಿಪೇರಿ ಮಾಡಿಸಿಕೊಟ್ಟಿದ್ದಾಳೆ, ಆದರೆ ಫಿಜಿಯೋಥೆರಪಿಸ್ಟ್ ಹೆಚ್ಚು ಮಸಾಜ್ ಮಾಡಿಸಿಕೊಳ್ಳಬೇಡಿ ಜೋಪಾನ ಎಂದಿದ್ದಾರೆ. ಆದರೂ ಹೋಗುವ ಆಸೆ ಇನ್ನೂ ಉಳಿದಿದೆ. ನೋಡೋಣ ಎಂದಿಗೆ ಈ ಕಾರ್ಯ ಕೈಗೂಡಲಿದೆ.

‍ಲೇಖಕರು Admin

November 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: