ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ –ರಾಜಾಸ್ಥಾನದ ಹಕ್ಕಿಗಳ ಆಸ್ಥಾನದಲ್ಲಿ ಭಾಗ-2..

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

17.2

ಭರತಪುರದಲ್ಲಿ ಮಳೆಯ ನಡುವೆ

ಹೊರರಾಜ್ಯಗಳಲ್ಲಿ ಹೆಚ್ಚು ಪ್ರವಾಸ ಮಾಡಿದ ವರ್ಷ 2019. 2019ರ ಜನವರಿ 13ರಿಂದ ಫೆಬ್ರವರಿ 20ರ ತನಕ (ಒಂದು ವಾರದ ವಿರಾಮ) ದೇಶದ ನಾಲ್ಕೂ ದಿಕ್ಕುಗಳಲ್ಲಿ ಪಕ್ಷಿ ಪರ್ಯಟನ ಮಾಡಿದೆ. ಈ ಪ್ರಯಾಣಗಳಲ್ಲಿ ರಾಜಸ್ಥಾನದ ಭರತಪುರವೂ ಸೇರಿತ್ತು ಮೊದಲಿಗೆ ಒರಿಸ್ಸಾದ ಎರಡನಯ ಸಲದ ಟೂರ್ ಮುಗಿಸಿ ದೆಹಲಿಯಲ್ಲಿ ಒಂದು ದಿನದ ಹಾಲ್ಟ್ ಮಾಡಿ ದೆಹಲಿಯಿಂದ ಭರತಪುರಕ್ಕೆ.  ದೆಹಲಿಯಿಂದ ೧೭೫ ಕಿಲೋಮೀಟರ್ ದೂರದಲ್ಲಿರುವ ಭರತ್‌ಪುರದ ಉದ್ಯಾನವನವು 18ನೇ ಶ.ದಲ್ಲಿ ಭರತ್‌ಪುರದ ದೊರೆ ಸೂರಜ್ಮಲ್ ಬೇಟೆಯಾಡಲು ನಿರ್ಮಿಸಿದ 29 ಚದರ ಕಿ.ಮೀ. ವಿಸ್ತಾರದ ಸಂರಕ್ಷಿತ ಉದ್ಯಾನವನ. ಇದರೊಳಗಿರುವ ಕಿಯೋಲಾಡಿಯೊ (ಶಿವ) ದೇವಾಲಯದ ಹೆಸರನ್ನೇ ಉದ್ಯಾನವನಕ್ಕೂ ಹೆಸರಿಸಿದೆ. 1971ರಲ್ಲಿ ಸಂರಕ್ಷಿತ ಅಭಯಾರಣ್ಯವೆಂದು ಘೋಷಿಸಿದರೆ 1982ರಲ್ಲಿ ರಾಷ್ಟ್ರೀಯ ಉದ್ಯಾನವನವಾಗಿ ಈಗ UNESCO ವಿಶ್ವ ಪರಂಪರೆಯ ತಾಣವಾಗಿದೆ. ಒಣ ಹುಲ್ಲುಗಾವಲುಗಳು, ಕಾಡುಪ್ರದೇಶಗಳು, ಕಾಡುಪ್ರದೇಶದ ಜೌಗು ಪ್ರದೇಶಗಳು ಮತ್ತು ಜೌಗು ಪ್ರದೇಶಗಳಿವೆ. ಚಳಿಗಾಲದಲ್ಲಿ ಸಾವಿರಾರು ಪಕ್ಷಿಗಳು ಬರುತ್ತವೆ. ಇಂತಹ ತಾಣಕ್ಕೆ ಹೋಗುವ ಕನಸು ಕಾರ್ಯರೂಪಕ್ಕೆ ಬರುವಾಗ ಮಳೆ ನಮ್ಮ ನಡುವೆ ನಾನೂ ಬರುವೆ ಎಂದು ಒಳ ನುಸುಳಿತ್ತು.

ದೆಹಲಿಯಿಂದ ಹೊರಡುವಾಗಲೇ ಬೀಳುತ್ತಿದ್ದ ಮಳೆ ಆತಂಕ ಹುಟ್ಟಿಸಿತ್ತು. ಭರತಪುರದ ರೈಲ್ವೆನಿಲ್ದಾಣದಲ್ಲಿ ನಮ್ಮನ್ನು ಕರೆದೊಯ್ಯಲು ಬಂದವರ ಜೊತೆಯಲ್ಲೆ ಸುರಿದ ಮಳೆಯೂ ನಾನೂ ಇಲ್ಲಿ ಇದ್ದೇನೆಂದು ಧಾರಾಳವಾಗಿ ಸ್ವಾಗತಿಸಿತು. ಭರತಪುರದ ಸುಪ್ರಸಿದ್ಧ ಹಕ್ಕಿ ಮಾರ್ಗದರ್ಶಿ ರತನ್‌ಸಿಂಗರ ಐಬಿಸ್ ಫಾರಂಸ್ಟೇಯಲ್ಲಿ ಉಳಿದ ನಮಗೆ ರಾಜಸ್ಥಾನಿ ಊಟೋಪಚಾರ ಆತಿಥ್ಯಕ್ಕೆ ಫಿದಾ ಆದೆ. ಸುರಿಯುತ್ತಿದ್ದ ಮಳೆಯನ್ನು ಮರೆಸುವಂತೆ ಊಟ ಮುದ ಕೊಟ್ಟಿತ್ತು. ಅದಕ್ಕಿಂತ ಮಿಗಿಲಾಗಿ ಅವರು ಸಂಗ್ರಹಿಸಿದ್ದ ವಿವಿಧ ರೀತಿಯ ಪಕ್ಷಿಗಳ ಗೊಂಬೆಗಳು ಬೆರಗು ಹುಟ್ಟಿಸುವಷ್ಟು ಚಂದವಾಗಿದ್ದವು. ಅದರಲ್ಲೂ ಗೂಬೆ ಗೊಂಬೆಗಳಂತೂ ಅತ್ಯಾಕರ್ಷಕವಾಗಿದ್ದವು.

ಬೆಳಿಗ್ಗೆ ಸುರಿದ ಮಳೆ ಹಕ್ಕಿಯ ಆಸೆಗಳನ್ನು ಪೂರ್ತಿ ಮಕಾಡೆ ಮಲಗಿಸಿತ್ತು… ಕಪ್ಪಾನೆ ಮೋಡ ಕವ್ಕೊಂಡೇ ಇತ್ತು, ಹೊರಗೆ ಹಾಗೂ ಮನದಲ್ಲಿ. ಸ್ಟೇಗೆ ಅನತಿ ದೂರದಲ್ಲಿ ಹಳದಿ ಹೂಗಳ ಸಾಸಿವೆ ಹೊಲವೂ ಚಂದ ಕಾಣುತ್ತಿತ್ತು, ಹಕ್ಕಿಗಳು ಕಾಣದಿದ್ದರೂ. ಮಸುಕು ಬೆಳಗಿನಲ್ಲಿ ಕ್ಯಾಮೆರಾ ಹೊಂದಿಸಿಕೊಂಡು ಸ್ಟೇಹೋಂ ಅಕ್ಕಪಕ್ಕದ ಮರಗಿಡಗಳ ಮೇಲೆ ಕಣ್ಣಿಟ್ಟು ಕಾಯುತ್ತಿದ್ದೆ. ಮೆಲ್ಲನೆ ಇಣುಕುತ್ತಿದ್ದ ಬಿಳಿಗೆನ್ನೆಯ ಪಿಕಳಾರ ಲೈಫರ್ ಆಯಿತು. ಲೆಸ್ಸರ್ ವೈಟ್‌ಥ್ರೋಟ್ ಮತ್ತೊಂದು ಲೈಫರ್ ಸೇರಿಕೊಂಡಿತು. ಕವಿದ ಮಬ್ಬು ಬೆಳಕಿನಲ್ಲಿ ಸಂತಸದ ಸೂರ್ಯ ಉದಯಿಸಿದ್ದ ನನ್ನೊಳಗೆ. ಹೊಸಹಕ್ಕಿಯೊಂದು ಎದುರಾದರೆ ಸಹಜವಾಗಿ ಸಂಭ್ರಮ ತಾನೆ. ಇವಲ್ಲದೆ ಹರಟೆಮಲ್ಲ, ಸಿಂಪಿಗ, ಕಲ್ಲುಚಟಕಗಳೂ ಕಾಣಿಸಿಕೊಂಡವು. ಆ ಮಬ್ಬಿನಲ್ಲೇ ಸಾಸಿವೆ ಹೊಲಕ್ಕೂ ಕ್ಯಾಮೆರಾ ಹಿಡಿದೆ.

ಒಂಬತ್ತೂವರೆ ವೇಳೆಗೆ ಸೂರ್ಯದೇವ ಮೆಲ್ಲನೆ ಇಣುಕಿದ. ಬಳಿಕ ಸವಾರಿ ಪಕ್ಷಿಧಾಮಕ್ಕೆ ಚಿತ್ತೈಸಿತು. ಪ್ರವಾಸಿಗರಿಗೆ ಸೈಕಲ್, ಸೈಕಲ್ ರಿಕ್ಷಾ, ಟಾಂಗ, ಎಲೆಕ್ಟ್ರಿಕ್ ವ್ಯಾನ್ ಲಭ್ಯವಿದೆ. ಬಹಳ ದೂರ ನಡೆಯಬೇಕು. ಕೆಲವರು ಸೈಕಲ್ ಬಾಡಿಗೆ ಪಡೆದು ಓಡಾಡುತ್ತಾರೆ. ಬೈಸಿಕಲ್‌ನಿಂದ ಎಳೆಯುವ ಗಾಡಿಯಲ್ಲಿ ಪಕ್ಷಿಗಳನ್ನು ನೋಡಲು ಎಲ್ಲಿ ನಿಲ್ಲಿಸಬೇಕೆಂದು ನಿಖರವಾಗಿ ತಿಳಿದಿರುವ ಪರಿಣಿತ ಸ್ಥಳೀಯ ಚಾಲಕರೊಂದಿಗೆ ಉದ್ಯಾನವನದಲ್ಲಿ ಪ್ರವಾಸ ಮಾಡಬಹುದು. ನಡೆಯಲಾರದ ನಾನೂ ನಡೆಯಬಲ್ಲ ಹುಮ್ಮಸ್ಸಿನ ಖುಷ್ಬೂ ರಾಹುಲರೂ ಸೈಕಲ್ ರಿಕ್ಷಾ ಹತ್ತಿ ಹೊರಟೆವು. ಇಡೀ ದಿನ ಒಬ್ಬ ವ್ಯಕ್ತಿಯ ಶ್ರಮದಲ್ಲಿ ಸವಾರಿ ಮಾಡಿದ್ದು ಮನಸ್ಸನ್ನು ಕಾಡುತ್ತಿತ್ತು. ಆದರೂ ಅವನಿಗೆ ಒಂದು ದಿನದ ಜೀವನ ನಿರ್ವಹಣೆಗೆ ನೆರವಾದೆ ಎನ್ನುವುದೇ ನನಗೆ ನಾನೇ ಮಾಡಿಕೊಂಡ ಸಮಾಧಾನ. ನಮಗೆ ಬೇಕಾದ ಕಡೆ ರಿಕ್ಷಾ ನಿಲ್ಲಿಸಿ ಫೋಟೋಗ್ರಫಿಗೆ ಅನುವು ಮಾಡಿಕೊಳ್ಳುತ್ತಿದ್ದರು. ಗಾಡಿಯಿಂದ ಇಳಿದೂ ತೆಗೆಯಬಹುದಾಗಿತ್ತು. 

ಅಕ್ಕಪಕ್ಕ ನೀರು-ಪೊದೆಗಳ ದಾರಿ. ಅಲ್ಲಲ್ಲಿ ಜೌಗು ನೆಲ. ಇಂತಹ ದಾರಿಯಲ್ಲಿ ಹೊರಟ ಸವಾರಿಯಲ್ಲಿ ಮೊದಲು ಎದುರುಗೊಂಡವರೆ ಮರದ ಕೊಂಬೆಯಲ್ಲಿ  ನಿದ್ರೆ ಮುಗಿಯದ ಪಿಳಿಪಿಳಿ ಕಣ್ಣು ಚಳಿಗೆ ಮುದುರಿದ್ದ spotted owlet. ಕೆಳಗಿದ್ದಿದ್ದರೆ, ಮುದ್ದು ಮಾಡಬೇಕೆನ್ನುವಷ್ಟು ಮುದ್ಮುದ್ದಾಗಿತ್ತು ಹಾಲಕ್ಕಿ. ನಾನು ಕ್ಯಾಮೆರಾಗೆ ಒಂದೇ ಸಮನೆ ಕೆಲಸ ಕೊಡುತ್ತಿದ್ದುದನ್ನು ಕಂಡು ಖುಷ್ಬೂ `ಅಮ್ಮಾ ಮುಂದೆ ಹೋಗೋಣ’ ಎಂದು ಹೊರಡಿಸಿಕೊಂಡು ಹೊರಟರು. ಅಷ್ಟರಲ್ಲಿ ರಾಹುಲ್ ‘`ಅಮ್ಮಾ ಇಲ್ಲಿ ಬನ್ನಿ ಎಂದು ಕರೆದು ಮರದ ಕೊಂಬೆಯೊಂದರಲ್ಲಿ ಬಿಡಲಾರದೆ ಕಣ್ಣು ಬಿಡುತ್ತಿದ್ದ Little collared owl ತೋರಿಸಿ ಲೈಫರ್ ಪಟ್ಟಿಗೆ ಹೊಸದೊಂದನ್ನು ಸೇರಿಸಲು ನೆರವಾದರು. ಗೂಬೆ ನನ್ ಮಕ್ಕಳಾ ಕಣ್ಣು ಬಿಟ್ಟು ಪೋಸ್ ಕೊಡ್ರೋ ಎಂದು ರಿಕ್ವೆಸ್ಟ್ ಮಾಡಿದರೂ ಕ್ಯಾರೆ ಎನ್ನದ್ದರಿಂದ ನಾವೂ ಮುಂದೆ ಹೊರಟೆವು.

ಮಂದ ಬೆಳಕಿದ್ದರೂ ಸವಾರಿಗೆ ಅಡೆತಡೆ ಇರಲಿಲ್ಲ. ಮುಂದಿನ ಹೊಸ ಹಕ್ಕಿ ಬಿಳಿಬಾಲದ ಟಿಟ್ಟಿಭ ಅಥವಾ ಕುವೆಂಪು ಹೇಳಿದಂತೆ ತೇನೆಹಕ್ಕಿ. ಒಂಟಿಕಾಲಿನಲ್ಲಿ ನಿಂತು ನನಗಾಗಿಯೇ ಕಾಯುತ್ತಿದ್ದಂತೆ ಕಂಡ ಅದನ್ನು ಒಂಟಿಕಾಲಿನ ಪೋಸಿನಲ್ಲೇ ಕ್ಲಿಕ್ಕಿಸಿಕೊಂಡು ಎರಡೂ ಕಾಲಿನಲ್ಲಿ ನಿಂತ ಫೋಟೋಗಾಗಿ ಕಾಯುತ್ತಿದ್ದರೂ ಅದಕ್ಕೆ ಅವಸರವಿರಲಿಲ್ಲ. ನನಗೇ ಬೋರಾಗಿ ಅಲ್ಲೇ ಕಂಡ ಲಿಟಲ್ ಗ್ರೇಬನ್ನೇ ಕ್ಲಿಕ್ಕಿಸುತ್ತಿದ್ದಂತೆ ಈ ಟಿಟ್ಟಿಭ ತನ್ನ ಒಳಮಡಿಸಿಕೊಂಡ ಕಾಲನ್ನು ಇಳಿಬಿಟ್ಟು ಬಾ ಎಂದು ಕರೆಯಿತು. ಈ ಸಮಯಕ್ಕೆ ಕಾಯುತ್ತಿದ್ದಂತೆ ಅದನ್ನು ಸೆರೆಹಿಡಿದೆ. ಸ್ವಲ್ಪ ದೂರದ ಮರವೊಂದರಲ್ಲಿ ಕುಳಿತ dusky eagle-owl ಅಲ್ಲಿಂದಲೇ ತೆಗೆ ಸನಿಹಕ್ಕೆ ಬರಬೇಡ ಎಂದು ನಿರ್ಬಂಧಿಸಿತು. 

ಅಲ್ಲಿಂದ ರಿಕ್ಷಾ ಸಂಚರಿಸದ ದಾರಿಯಲ್ಲಿ ಕ್ಯಾಮೆರಾ ಸಮೇತ ನಡೆಯುತ್ತಾ ಹೋದೆ. ಖುಷ್ಬೂ ರಾಹಲರಿಗೆ ಗೆಳೆಯರು ಸಿಕ್ಕಿ ಮಾತಿನಲ್ಲಿ ಮಗ್ನರಾದರು. ಅವರು ಇಲ್ಲಿಗೆ ಅದೆಷ್ಟನೇ ಸಲಕ್ಕೆ ಬರುತ್ತಿರುವುದೋ. ನನಗಾದರೆ ಮೊದಲ ಟೂರು. ಹೊಸಹಕ್ಕಿಗಳೆಡೆಗೆ ಕುತೂಹಲ. ಅದನ್ನು ತಣಿಸುವಂತೆ ಗ್ರೇಟ್‌ವೈಟ್ ಪೆಲಿಕಾನ್ ಮತ್ತೊಂದು ಲೈಫರ್ ಆಯಿತು. ಮತ್ತೂ ಮುಂದೆ ಹೋಗುತ್ತಿದ್ದಂತೆ ಕಾಟನ್ ಪಿಗ್ಮಿಗೂಸ್‌ ಸಿಕ್ಕಿದವು. ಮನುಷ್ಯರಂತೆ ಮುಖಎತ್ತಿ ಮಾತನಾಡಿಸುವ ಪೋಸ್ ನೀಡಿದ್ದು ಮಜವಾಗಿತ್ತು. ಜೊತೆಗೆ ಕಿರುಮಿಂಚುಳ್ಳಿಯೊಂದು ಕೈಬೀಸಿ ಕರೆದು ಸೇರಿಕೊಂಡಿತು. 

ಒಂದಿಷ್ಟು ಕೊಕ್ಕರೆಗಳು, ಕಪ್ಪುತಲೆಯ ಐಬಿಸ್, ಬಣ್ಣದ ಕೊಕ್ಕರೆಗಳಿದ್ದವು. ವುಲಿಸ್ಟಾರ್ಕ್ ಏನನ್ನೋ ಎಳೆದಾಡುತ್ತಿದ್ದುದನ್ನು ಕಂಡು ಕಾಲು ನಿಂತಿತು. ಸತ್ತ ಚುಕ್ಕೆ ಜಿಂಕೆಯೊಂದರ ಒಳಗರುಳನ್ನು ಎಳೆದು ತೆಗೆಯುತ್ತಿದ್ದುದನ್ನು ನೋಡಿ ಕಸಿವಿಸಿಯಾಗಿ ಮುಂದಡಿಯಿಟ್ಟೆ. ಮುಂದೆ ಒಂದೆರಡು ಪಟ್ಟೆತಲೆಯ ಬಾತುಗಳಿದ್ದವು. ಪಟ್ಟೆತಲೆಯ ಬಾತುಗಳನ್ನು ಬನ್ನೂರು, ಹದಿನಾರುಗಳಲ್ಲಿ ಹಲವು ಭಂಗಿಗಳಲ್ಲಿ ತೆಗೆದಿದ್ದೆ. ಇಲ್ಲಂತೂ ತಿನ್ನುವುದರಲ್ಲಿ ತನ್ಮಯವಾಗಿ ತಮ್ಮ ತಲೆಯನ್ನೂ ಎತ್ತಲಿಲ್ಲ. 

ಹಕ್ಕಿ ಸಿಕ್ಕ ಖುಷಿಯನ್ನು ಹೆಚ್ಚಿಸಲು ಗ್ರೇಟ್ ವೈಟ್ ಪೆಲಿಕಾನ್‌ಗಳ ದಂಡು ಎದುರಾದವು. ಒಂದು ಮೀನಿಗಾಗಿ ಇಡೀ ಗುಂಪು ಕಾದಾಡಿದ ದೃಶ್ಯವಿತ್ತು. ಕಾದಾಟದ ನೋಟ ಬಿಡಲುಂಟೆ. ಎಂತಹ ಕೇಡಿಗಳಲ್ವಾ ನಾವು! ಮುಂದೆ ಎರಡು ಹೆಜ್ಜೆ ಹಾಕುತ್ತಿದ್ದಂತೆ ಪೆಲಿಕಾನ್‌ಗಳ ಜೋಡಿ ಸೂಪರ್‌ ಜೋಡಿ ಮಾಡೆಲ್‌ಗಳಾಗಿ ಸಖತ್ ಪೋಸ್ ನೀಡಿದವು. ಹಾವುಗತ್ತಿನ ಡಾರ್ಟರ್ ಕೊಂಬೆಯ ಮೇಲೆ ಫೋಟೋ ತೆಗೆಯಲು ಕೈಬೀಸಿ ಕರೆಯುತ್ತಿತ್ತು. ಅಲ್ಲಿಯ ತನಕ ನಡೆದು ಫೋಟೋಗ್ರಫಿ ಮಾಡಿದ್ದವಳು ರಿಕ್ಷಾ ಹತ್ತಿ ಸಾಗಿದೆ. ಮಳೆ ಬರದಿದ್ದರೂ ಮೋಡ ಕವಿದಂತೆಯೇ ಇತ್ತು. ಬೆಳಕೂ ಮಬ್ಬಾಗಿತ್ತು. ಸಂಧಿಯಲ್ಲಿ ನರಿಯೊಂದು ನುಸುಳಿ ಬಂದರೂ ಸರಿಯಾದ ಕ್ಲಿಕ್ ಸಿಗಲಿಲ್ಲ. Grey lag goose ಲೈಫರ್ ಆಗಿ ಸಿಕ್ಕು ಒಂದು ದಿನದಲ್ಲಿ ಏಳು ಲೈಫರ್‌ ದೊರೆತು ಮಳೆಯ ನಡುವೆಯೂ ಮಹಾನಂದ. ಅಲ್ಲಿಗೆ ಸಂಜೆಯಾಗುತ್ತಾ ಬಂದು ಭರತಪುರಕ್ಕೆ ಗುಡ್‌ಬೈ ಹೇಳುವ ಸಮಯ ಸನ್ನಿಹಿತವಾಗಿ ನಾವೂ ದೆಹಲಿಯತ್ತ ಮುಖ ಮಾಡಿದೆವು. ನಾವು ರೈಲುನಿಲ್ದಾಣ ತಲುಪುವ ತನಕ ಬಿಡುವ ಕೊಟ್ಟ ಮಳೆರಾಯ ಸಾರಿ, ಇನ್ನೊಂದು ಸಲ ಬನ್ನಿ ಎಂದ. ಬರದೆ ಇರುತ್ತೇನೆಯೇ ಮಹಾರಾಯ, ನಾನು ಬಂದಾಗ ನೀನು ಮಾತ್ರ ಬರಬೇಡ ಎಂದೆ. ಮುಖ ದುಮ್ಮಿಸಿಕೊಂಡ. ನಾನೇನು ಕಡಿಮೆ, ನೀನು ಬರದಿದ್ದಾಗ ಮತ್ತೆ ರಾಜಾಸ್ಥಾನಕ್ಕೆ ಬಂದೇ ಬರುತ್ತೇನೆಂದುಕೊಳ್ಳುತ್ತಾ ದೆಹಲಿಯತ್ತಣ ರೈಲು ಹತ್ತಿದೆ.

‍ಲೇಖಕರು avadhi

May 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: