ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಲೆ…ಲೆ…ಲೇ… ಲೇ… ಲೇಹ್…ಲಡಾಖ್ – ಭಾಗ 2

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

16.2

ಲೇಹ್ ವಾಸ್ತವ್ಯದ ಕೊನೆಯ ದಿನ 1981ರಲ್ಲಿ ಸ್ಥಾಪಿಸಿದ 3,350 ಚದರ ಕಿ.ಮೀ ವಿಸ್ತೀರ್ಣದ ಭಾರತದ ಅತಿ ದೊಡ್ಡದಾದ ಲೇಹ್ ನಿಂದ ಐವತ್ತು ಕಿ.ಮೀ ದೂರದಲ್ಲಿದ್ದ ಜಗತ್ತಿನಲ್ಲೇ ಅತಿ ಹೆಚ್ಚು ಹಿಮಚಿರತೆಗಳ ನೆಲೆಯಾದ  Hemis high altitude national parkನಲ್ಲಿ ಸುತ್ತಾಟ. ನಮಗಲ್ಲಿ ಹಿಮಚಿರತೆ ಕಾಣಸಿಗಲಿಲ್ಲ, ನಾವೂ ನವೆಂಬರ್ ಡಿಸೆಂಬರಿನಲ್ಲಿ ಹೋಗಿರಲಿಲ್ಲ. ನಮ್ಮ ಸುತ್ತಾಟ ಬಹುತೇಕ ಕಾರಿನಲ್ಲಿ… ಕೆಲವೆಡೆ ಮಾತ್ರ ನೂರಿನ್ನೂರು ಹೆಜ್ಜೆ ಕಾಲಿನಲ್ಲಿ ಉಳಿದವರದ್ದು. ನನ್ನದು ಇನ್ನೂ ಕಡಿಮೆ ಹೆಜ್ಜೆಗಳು. ನದಿ ಹರಿಯುವ ಕೆಲ ತಾಣಗಳಲ್ಲಿ ನೆಲಬಿಟ್ಟು ಮೇಲೇಳಲು ಹೆಣಗುವ ಗಿಡ, ಪೊದೆಗಳು. ಮರಗಳಿಗೆ ದುರ್ಬೀನು ಹಾಕಬೇಕಿತ್ತು. ಉಳಿದಂತೆ ಬರಿ ಬೆಟ್ಟದ ಸಾಲುಗಳು. ಇನ್ನು ಕಾರು ಮುಂದಕ್ಕೆ ಹೋಗಲ್ಲ, ಇಷ್ಟೇ ರಸ್ತೆ ಅಂತಾ ನಿಲ್ಲಿಸಿದರು. ಮತ್ತೆ ಮುಂದಕ್ಕೆ ಕಾಲು ರಸ್ತೆ… ಕತ್ತೆ ರಸ್ತೆ… ಕುದುರೆ ರಸ್ತೆ… ಅಲ್ಲೊಂದಷ್ಟು ಕಾರೂ ನಿಂತಿದ್ದವು. ಈ ಕಾರುಗಳು ಬೆಟ್ಟದ ಕೆಳಗೆ, ಇಳಿಜಾರುಗಳಲ್ಲಿದ್ದವರದ್ದು. ರಸ್ತೆಯಿಲ್ಲದ ಕಣಿವೆಗೆ ಕಾರನ್ನು ಇಳಿಸಲಾಗದೆಂದು ಅಲ್ಲೇ ನಿಲ್ಲಿಸಿದ್ದರು. 

ಅಷ್ಟರಲ್ಲಿ ಸರಕು ಹೊತ್ತ ಹೇಸರಗತ್ತೆಗಳೊಡನೆ ಕಣಿವೆ ಕೆಳಗಿನಿಂದ ಜನ ಮೇಲೆ ಬಂದರು. ಕಣಿವೆ ಕೆಳಗೂ ಹೋದರು. ಕಣಿವೆ ಕೆಳಗಿನ ಊರುಗಳಿಗೆ ಹೇಸರಗತ್ತೆಗಳ ಮೇಲೆ ಸರಕು ಸರಂಜಾಮು ಹೊತ್ತೊಯ್ಯುವರು. ಸ್ಕಾರ್ಫ್ ಬಿಗಿದ ವಯಸ್ಸಾದ ಹೆಂಗಸರೊಬ್ಬರು ನಮ್ಮನ್ನು `ಇಂತಹ ಕ್ಯಾಮೆರಾ ಹೊತ್ತು ಇಲ್ಲಿ ಬಂದಿದೀರಾ’ ಅನ್ನೋ ಬೆರಗಿನಿಂದ ನೋಡಿ `ಅಯ್ಯೋ ನಂ ನೋವಿನ ಕತೆ ಇದು ಎನ್ನುವಂತೆ ಮುಖ ಹಿಂಡಿ ಅಲ್ಲಿ ನಿಲ್ಲಿಸಿದ್ದ ಕಾರಲ್ಲಿ ಹತ್ತಿ ಹೊರಟುಬಿಟ್ಟರು.

ಅಷ್ಟರಲ್ಲಿ ಅನೇಕ ವಾಹನಗಳಲ್ಲಿ ಚಾರಣಪ್ರಿಯರ ದಂಡು ಅಲ್ಲಿಗೆ ಬಂದಿಳಿಯಿತು. ಅವರನ್ನು ಸ್ವಾಗತಿಸಿ ಕರೆದೊಯ್ಯಲು ಸ್ಥಳೀಯರ ತಂಡವಿತ್ತು. ಮೇನಿಂದ ಸೆಪ್ಟೆಂಬರ್ ನಡುವಲ್ಲಿ ಲಡಾಖಿಗೆ  ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಬಹುತೇಕರಿಗೆ ಪ್ರಮುಖ ಆಕರ್ಷಣೆ ಟ್ರೆಕ್ಕಿಂಗ್. ಹಿಮಾವೃತ ಪರ್ವತಕ್ಕೆ ಟ್ರೆಕ್ಕಿಂಗ್ ತೆರಳುವ ಆಸಕ್ತರಿಗೆ ಅದ್ಭುತ ಅವಕಾಶವಿದೆ. ನುರಿತ ಟ್ರೆಕ್ಕಿಂಗ್ ಪಟುಗಳು ಟ್ರೆಕ್ಕಿಂಗ್ ಮಾಡಲು ಮಾರ್ಗದರ್ಶಿಸುವರು. ಹೀಗೆ ಬರುವವರಿಂದಲೇ ಲಡಾಖಿನಲ್ಲಿ ತಮ್ಮ ಬದುಕಿನ ದಾರಿ ಕಂಡುಕೊಂಡವರೆಷ್ಟು ಮಂದಿ ಎಂಬ ಬೆರಗು ನನ್ನದು. ಎರಡೋ ಮತ್ತೊಂದು ಹೆಜ್ಜೆಯನ್ನು ಎಣಿಸಿ ಎಚ್ಚರಿಕೆಯಿಂದ ಹಾಕುವ ನಾನು ನನ್ನ ಕಾಲನ್ನೊಮ್ಮೆ ಕೇಳಿಕೊಂಡೆ… `ನೋಡು ನೀನೂ ಸರಿಯಾಗಿ ಇದ್ದಿದ್ರೆ… ನಾನು ಚಾರಣ ಮಾಡಬಹುದಿತ್ತಲ್ವೆ ಎಂದು. ಬೇಸರ ಬೇಡ ಲೀಲಾ ನೀನೂ ಹಕ್ಕಿ ಚಾರಣ ಮಾಡುತ್ತಿಲ್ಲವೆ ಅದು ಸಾಂತ್ವನಿಸಿತು. ಹೌದಲ್ಲವೆ ಎಂದು ನೆಮ್ಮದಿಯಾಯಿತು.

ಅಂದು Hemis parkನಲ್ಲಿ ನಾ ತೆಗೆದ ಚಿತ್ರವೊಂದಕ್ಕೆ ಅತ್ಯಂತ ಕ್ಯೂಟ್ ಚಿತ್ರವೆಂದು ನಾನೇ ರ‍್ಯಾಂಕಿಂಗ್ ಕೊಟ್ಟಿದ್ದೇನೆ. ಹರಿಯುತ್ತಿದ್ದ ತೊರೆಯ ಕಲ್ಲಿನ ಮೇಲೊಂದು ಬ್ರೌನ್ ಡಿಪ್ಪರ್ ಇತ್ತು. ಆ ಕಲ್ಲಿನ ಕೆಳಗಿದ್ದ ಪೈಕಾ ತುದಿಗಾಲಲ್ಲಿ ನಿಂತು ಡಿಪ್ಪರ್ ಏನು ಮಾಡುತ್ತದೆಂದು ನೋಡುವಂತಿದ್ದ ಮೋಹಕ ದೃಶ್ಯವನ್ನು ನಾಲ್ಕೈದು ಚಿತ್ರಗಳಲ್ಲಿ ಸೆರೆಹಿಡಿದಿದ್ದೆ. ಆಗಾಗ್ಗೆ ಆ ಚಿತ್ರ ನೋಡುತ್ತಾ ಪೈಕಾದ ಮೋಹಕ ನೋಟಕ್ಕೆ ಮಾರುಹೋಗುತ್ತೇನೆ. ಹಕ್ಕಿ ಹುಡುಕುತ್ತಾ ಮುಂದೆ ಹೋಗುತ್ತಿದ್ದಂತೆ ಗುಂಡಗಿದ್ದ chukar partridge ಉರುಳುರುಳಿ ಹೋಗುತ್ತಿದ್ದುದು ಕಂಡು ಜಾಗೃತರಾದೆವು. ಅದರ ಉರುಳು ನಡಿಗೆ ನಮಗೆ ಕ್ಯಾಮೆರಾ ಹೊಂದಿಸಿಕೊಳ್ಳಲು ಸಮಯವಿತ್ತಿತು. ಅದರ ಹಿಂದೆ ಸಾಗಿದೆವು. ಹತ್ತಿರದಲ್ಲಿದ್ದ ಮರಳಗುಡ್ಡೆ ಹತ್ತಿಳಿದು ಹೋಯಿತು, ನನ್ನ ಲಿಸ್ಟಿಗೊಂದು ಲೈಫರ್ ಸೇರಿತು. 

ಹೆಮಿಸ್ ಪಾರ್ಕಿನಲ್ಲಿ ಸಿಕ್ಕ ಮತ್ತೊಂದು ಲೈಫರ್ bearded vulture (lammergeyer) ನ್ನು ಹಾರುವಾಗ ಕ್ಲಿಕ್ ಮಾಡಿದೆ. ಅದು ಬಂಡೆಯ ಮೇಲೆ ಕುಳಿತಿದ್ದಾಗ ತೆಗೆಯಲು ಜಾಗ, ಅವಕಾಶ ಸಿಗಲಿಲ್ಲ. ಕಂಡ ಕೂಡಲೇ ಗಾಡಿಯಿಂದ ಇಳಿದರೆ ಹಾರಿಬಿಡುತ್ತದೆ. ಬೇರೆಡೆಗೆ ತಿರುಗಿದ್ದಾಗ ಮೆಲ್ಲಗೆ ಇಳಿದರೂ ಎಂಟು ಜನರನ್ನು ಕಂಡ ಮೇಲೆ ಇದ್ದಲ್ಲಿಯೇ ಇರಲು ಸಾಧ್ಯವೇ? ಕಾರಿನ ಕಿಟಕಿಯಿಂದಲೇ ಕ್ಲಿಕ್ಕಿಸಬೇಕಿತ್ತು. ರಣಹದ್ದು ನನ್ನ ವಿರುದ್ಧ ದಿಕ್ಕಿನ ಕಿಟಕಿ ಕಡೆಯಲ್ಲಿತ್ತು. ಕಿಟಕಿವಾಲಾ ಸತತವಾಗಿ ಕ್ಲಿಕ್ಕಿಸಿ ಬಾಗಿಲು ತೆಗೆಯಹೋದರೆ ರಣಹದ್ದು ಹಾರಿಯೇ ಹೋಯಿತು. ಗಾಡಿಯಿಂದಲೇ ಕ್ಲಿಕ್ ಮಾಡುವಾಗ ಹೀಗೂ ಇಕ್ಕಟ್ಟಾಗುತ್ತದೆ. ಬಹುಶಃ ನಾನೇ ಆ ಕಿಟಕಿಯಲ್ಲಿದ್ದರೂ ನನಗೇ ಹೆಚ್ಚು ಕ್ಲಿಕ್ ಬೇಕೆಂದು ಹೀಗೆ ಮಾಡುತ್ತಿದ್ದೆನೇನೋ. ಆ ನಂತರ ಮೇಲೆ ಹಾರುತ್ತಿದ್ದ ಹದ್ದಿಗೆ ಕ್ಯಾಮೆರಾ ತೋರಿಸಿ ಸಮಾಧಾನಿಸಿದೆ.

ಹಕ್ಕಿಗಳ ಕೂಗು, ದರ್ಶನ ವಿರಳವಾದಂತೆ ಉದರದ ಕರೆ ಅಬ್ಬರಿಸಿತು. ಗಾಡಿಯನ್ನು ಇಳಿಜಾರಿನಲ್ಲಿ ಇಳಿಸಿ ನಿಲ್ಲಿಸಿ ಇಳಿದೆವು. ಪ್ಯಾಕಿಸಿ ತಂದಿದ್ದ ಪರೋಟವನ್ನು ಉದರಾಂಭೋದಿಯಲ್ಲಿ ಮುಳುಗಿಸುತ್ತಿದ್ದೆವು. ನೆಲಕ್ಕೆಸೆದ ಪರೋಟಕ್ಕೆ eurasian magpie ಕಣ್ಣುಹಾಕಿ ಕಚ್ಚಿಕೊಂಡು ಹಾರುತ್ತಿತ್ತು. ಚಿತ್ರ ಮಾಡಿಕೋ ಲೀಲಾ ಎಂದದು ಕೂಗಿದ ಇಂತಹ ಅವಕಾಶ ಬಿಡಲುಂಟೆ. ಅಲ್ಲಿ ಹರಿಯುತ್ತಿದ್ದ ನೀರಿಗೆ ಸಣ್ಣ ಹಲಗೆಗಳ ಸಂಕವಿತ್ತು. ಸಂಕದಾಚೆ ಸಾಹಸಿಗಳಿಗೆ ಕ್ಯಾಂಪ್ ನಡೆಸುವ ಜಾಗವಿತ್ತು. ಸಂಕದಾಚೆ chukar partridge, oriental turtle dove ಕಂಡ ನಮ್ಮವರು ಆ ಬದಿಗೆ ಹೋದರು. ನನಗೆ ತೆಳುಹಲಗೆಯ ಅಲುಗಾಡುವ ಸಂಕ ಮುರಿಯುವ ಮನಸಾಗಲಿಲ್ಲ. ಸಂಕದ ಕೊನೆಯ ಕಲ್ಲ ಮೇಲೆ ಕಾಲಿಟ್ಟು ಕಲ್ಲು ಜಾರಿ ಅಲ್ಲಲ್ಲ ಕಾಲು ಜಾರುವ ಬದಲು ಸುತ್ತಣ ನೋಟಕ್ಕೆ, ಅಲ್ಲಿಯ ನೀರಿಗೆ, ಸಂಕಕ್ಕೆ ಕ್ಯಾಮೆರಾ ತಿರುಗಿಸಿದೆ. ಸುತ್ತ ಇದ್ದ ಪೊದೆಗಳಿಗೆ ಬರುತ್ತಿದ್ದ Red-fronted serin ಲೈಫರ್ ಆದವು. ಮುಕ್ಕುವುದರಲ್ಲಿ ಮಗ್ನವಾದ ಸೆರಿನ್ ಮೂತಿ ಎತ್ತೋ ಎಂದರೆ ಕಿವುಡಾದವು. ಎದ್ದುಹೋದರೆ ಹಾರಿಹೋದಾವೆಂದು ಇದ್ದಲ್ಲಿಂದ ಕ್ಲಿಕ್ಕಿಸಿಕೊಂಡೆ.

ಸಂಕ ದಾಟಿದವರು ಬರುವನ್ನಕ ಕಾಯಬೇಕಿತ್ತು. ಹಕ್ಕಿ ಕಾಣದಾದಾಗ ಕಣ್ಣು ಮತ್ತೇನನ್ನೋ ಅರಸುವುದು ಸಂದರ್ಭ ಪರಿಸರಾವಲಂಬಿತ. ಲಡಾಖಿನಲ್ಲೆತ್ತ ನೋಡಿದರತ್ತ ಬೌದ್ಧನೆಲೆಗಳು. ಹಲವು ಹತ್ತು ಮಾನೆಸ್ಟ್ರಿ ಅಥವಾ ಗೊಂಪಾಗಳು ಲಡಾಖಿಗರ ಸಂಸ್ಕೃತಿ ಸಂಪ್ರದಾಯ ಮತ್ತು ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತವೆ. `ಓಂ ಮಣಿ ಪದ್ಮೆ ಹಮ್’ ಮಂತ್ರಪಠಣ ಕಿವಿದೆರೆಗೆ ತಾಗುತ್ತಿರುತ್ತದೆ. ಎಲ್ಲೆಲ್ಲೂ ಬಣ್ಣಬಣ್ಣದ ಪ್ರಾರ್ಥನಾ ಧ್ವಜಗಳಿವೆ. ಹಕ್ಕಿಗಾಗಿ ತಾಸುಗಟ್ಟಲೆ ತಳುವುತ್ತಿದ್ದ ನಾವು ಮಾನೆಸ್ಟ್ರಿಗೆ ಹೋಗಲಿಲ್ಲ. ನನ್ನ ಮಾನಸಗುರುವಾದ ಬುದ್ಧನ ನೆಲೆಗೆ ಹೋಗಬೇಕಿತ್ತೆಂದು ಈಗಲೂ ಅನ್ನಿಸುತ್ತಲೇ ಇದೆ, ಇರುತ್ತದೆ. ಹೋಗದ ವಿಷಾದವಿದೆ. ಎಲ್ಲೆಡೆಯಲ್ಲೂ ಸಮತೋಲನ-ಧ್ಯಾನಸ್ಥ ಭಾವಕ್ಕೆ ಸಾಕ್ಷಿಯಾಗಿ ಕಲ್ಲು ಜೋಡಿಸುವರು. ಮತ್ತೆಮತ್ತೆ ಅದನ್ನು ನೋಡುತ್ತಿದ್ದ ನಾನದನ್ನು ನಂಬದಿದ್ದರೂ ಹೆಮಿಸ್ ಪಾರ್ಕಿನಲ್ಲಿ ಜೋಡಿಸಿ ಪಟ ಹಿಡಿದೆ. ನಾವಲ್ಲಿದ್ದಂತೆಯೆ ವಾಹನಗಳಲ್ಲಿ ಬಂದವರು ಟೆಂಟ್ ಸಾಮಗ್ರಿ ಹೊತ್ತು ಆ ಕಡೆಗೊಯ್ದು ಪಟಾಫಟ್ ಟೆಂಟ್ ಏಳಿಸಿದರು. ಅಡಲು ಬೇಕಾದ ಸಾಮಗ್ರಿ ಸಾಗಿಸಿದರು. ಈ ಗಲಾಟೆಯಲ್ಲಿ ಹಕ್ಕಿ ಹಿಡಿಯಲಸಾಧ್ಯ ಎನಿಸಿ ಹೊರಟೆವು. ಸಂಜೆ ಲೇಹ್ ಸುತ್ತಮುತ್ತ ಹಕ್ಕಿಗಾಗಿ ಅಡ್ಡಾಡಿದೆವು.

ಮರುದಿನ ಮುಂಜಾನೆಯೆ ಲೇಹ್ಗೆ ತಾತ್ಕಾಲಿಕವಾಗಿ ವಿದಾಯಿಸಿ 225 ಕಿ.ಮೀ ದೂರದ, ಸಮುದ್ರ ಮಟ್ಟದಿಂದ 14,270 ಅಡಿ ಎತ್ತರದಲ್ಲಿರುವ 134 ಕಿ.ಮೀ ಉದ್ದದ ಭಾರತ-ಚೀನಾದಲ್ಲಿ ಹರಡಿಕೊಂಡ PangongTso lake ಕಡೆಗೆ ಹೊರಟೆವು. ನಾವೋ ಕಂಡ ನೋಟಗಳನ್ನು ಪಟವಾಗಿ ಪಟಾಯಿಸುತ್ತಾ ನಿಲ್ಲು-ನಡೆ (halt and proceed) ಮಾಡುತ್ತಾ ಆರು ತಾಸಿನ ಪ್ರಯಾಣವನ್ನು ಮತ್ತಷ್ಟು ಲಂಬಿಸುತ್ತಿದ್ದೆವು. ಹತ್ತು, ಇಳಿ. ಇಳಿ-ಹತ್ತು ಇಳಿ. ಎಡ-ಬಲ ವಾಲಿಸುತ್ತ ಏರಿಳಿತದ ದಾರಿಯಲ್ಲಿ ಕೆಲವೆಡೆ ಗಾಡಿ ನಿಲ್ಲಿಸಲೂ ಆಗದಷ್ಟು ಕಿರಿದಾದ, ಕಿತ್ತುಹೋದ ರಸ್ತೆ. ಮೋಟರ್‌ಬೈಕ್ ಸವಾರಿ ಪ್ರವಾಸಿಗಳ ದಂಡುಗಳು. ಬೈಕಿಗರು ಸಿಕ್ಕಲ್ಲಿ ನಿಲ್ಲಿಸಿ ಸೆಲ್ಫಿಸಿಕೊಳ್ಳುತ್ತಿದ್ದರು, ಪಟ ಹಿಡಿಯುತ್ತಿದ್ದವರು. 

ಎತ್ತ ನೋಡಿದರೂ ದಿಬ್ಬಗಳಿಂದ ಜಾರುವಾಟ ಆಡುತ್ತಿದ್ದ ಬಣ್ಣಬಣ್ಣದ ಮರಳರಾಶಿ. ಎಂತಾ ಮರುಳಯ್ಯೋ ಇದು ಎಂತಾ ಮರಳು. ಹತ್ತಿ ಇಳಿದು ಹತ್ತಿಳಿದು ಅವಶ್ಯವಿದ್ದೆಡೆ ಅನುಮತಿ ಪತ್ರ ತೋರಿಸಿ ಮುಂದೆ ದಾರಿ ಸಾಗುತ್ತಿತ್ತು. ಹಾರಿತೂರಿ ಬರುತ್ತಿದ್ದ ಮರಳಿನ ನಡುವೆ ಗಾಡಿಯಲ್ಲಿದ್ದವರ ಕಣ್ಣುಗಳು ಹಕ್ಕಿ ಅರಸುತ್ತಿದ್ದವು. ಮುಂದೆ ಹೋಗುತ್ತಿದ್ದಂತೆ ಮನೆಬೆಕ್ಕಿಗಿಂತ ದೊಡ್ಡ ಗಾತ್ರದ 11,500 ರಿಂದ 17,000 ಅಡಿ ಎತ್ತರದಲ್ಲಿ ಹಿಮಾಲಯದ ಹುಲ್ಲುಗಾವಲಲ್ಲಿ ವಾಸಿಸುವ ದೊಡ್ಡಗಾತ್ರದ, ದೊಡ್ಡಬಾಲದ ಅಳಿಲು ಜಾತಿಗೆ ಸೇರಿದ himalayan marmot ಮುದ್ದುಮುದ್ದುತನದಿಂದ ಸೆಳೆದು ನಿಲ್ಲಿಸಿಕೊಂಡಿತು. ಅದನ್ನು ಕ್ಲಿಕ್ಕಿಸಿದ ನಂತರ ನಮ್ಮ ತಂಡದ ಹುಡುಗರಿಗೆ maramotscape ಕ್ಲಿಕ್ಕಿಸೋ ಖಾಯಿಷ್ ಹುಟ್ಟಿ ಅದರ ಸನಿಹಕ್ಕೆ ತೆವಳುತ್ತಾ ತೆರಳುತ್ತಿದ್ದರು. Don’t feed the animal ಕಲ್ಬರಹದ ಬಳಿಯಿದ್ದ marmotಗೆ ತಿನ್ನಲು ಏನನ್ನೂ ಹಾಕದ ನಮ್ಮವರು ಅದು ತಿನ್ನಲೂ ಎತ್ತ ಹೋಗದಂತೆ ಆವರಿಸಿಕೊಂಡ ಅವಸ್ಥೆ ಕಂಡು ಕುತೂಹಲದಿಂದ ಕೆಲ ಪ್ರವಾಸಿಗರು ಏನಿದೆ ಎಂದು ಕೇಳಿ ತಾವೂ ಪಟ ಕ್ಲಿಕ್ಕಿಸಿದರು. ತೆವಳದ ನಾನು ಅದರ ಮತ್ತು ತೆಗೆಯುತ್ತಿದ್ದವರ ಚಿತ್ರಾವಸ್ಥೆಯನ್ನೂ ತೆಗೆದೆ ಅಷ್ಟೆ. ಪಯಣ ಮುನ್ಸಾಗಿತು.

`ಅನಂತದಿಂ ದಿಗಂತದಿಂ ಅನಂತದಾ ದಿಗಂತದಿಂ 

ನೋಡೆ ನೋಡೆ ಮೂಡಿತೊಂದು ಮೋಡ ಗೋಪುರ

ಗಿರಿಯ ಬಿತ್ತರ ಶಿಖರದೆತ್ತರ

ಅನುಭವಿಸುವ ರಸಋಷಿಮತಿಗತಿ ಮಹತ್ತರ…’ ಎಂದ ಕುವೆಂಪು ಲಡಾಖಿನಲ್ಲಿ ಮತ್ತೆಮತ್ತೆ ನೆನಪಾದರು. ಮಳೆಗಾಲವಲ್ಲದ ಲಡಾಖಿನ ಆಗಸದಂಗಳದಲ್ಲಿ ಹಬ್ಬಿತಬ್ಬಿದ ಬಿಳಿಯ ಮೋಡಗಳು `ಬೆಳ್ಳನೆ ಲಾಲಿಕುಲಾಲಿ ಮಿಠಾಯಿಯ ಬಾನೊಳು ಹರಡಿಹರೇನಮ್ಮ? ತೆಳ್ಳನೆ ಹಿಂಜಿದ ಬೂರುಗದರಳೆಯ ಬಿಸಿಲಿಗೆ ಕೆದರಿಹರೇನಮ್ಮ?…’ ಕುವೆಂಪು ಕವಿತೆಯನ್ನು ಸಾಕ್ಷಾತ್ಕರಿಸಿದವು. `ಮೇಘ ಬಂತು ಮೇಘ ಮೇಘ ಬಿಳಿಯ ಮೇಘ’ ಎಂದು ನೀಲಿಯ ಬದಲು ಬಿಳಿಯ ಎಂದು ಬದಲಿಸಿ ಗುನುಗುನಿಸಿ ಬಾನಿನೆಡೆಗೆ ಕಣ್ಣಾದೆ…ಅರಳೆ ರಾಶಿಗಳಂತೆ ಹಾಲ್ಗಡಲ ಅಲೆಯಂತೆ ಆಗಸದೆ ತೇಲುತಿದೆ ಮೋಡ ಎಂದು all time hit song ಅಪಾರಕೀರ್ತಿ ಗಳಿಸಿ ಹಾಡಿನ ಆರಂಭದ ಸಾಲುಗಳೂ ಜೊತೆಗೂಡಿದವು. ದೂರದೂರಕೆ ತೇಲಿ ಸಾಗುತಿರುವ ಮೋಡಗಳೇ ಮೋಡ, ಮಂಜು ಎರಡೂ ಮಿಸುಕಾಡುತ್ತಲೇ ಕಣ್ಣಾಮುಚ್ಚಾಲೆಗೆ ಇಳಿದಿದ್ದವು ಇಲ್ಲಿ. ಬೆಟ್ಟಗಳಿಗೂ ಮೇಘ ಕಂಡರೆ ಮುದ್ದು. ಹತ್ತಿರ ಹತ್ತಿರ ಬಂದಂತೆ ನಟಿಸುತ್ತಾ ಮತ್ತೆ ದೂರ ಓಡುವ ಇವನ್ನು ಕಂಡರೆ ಜಿದ್ದಿಗೆ ಬಿದ್ದಂತೆ ಪ್ರೀತಿ. ಹಾಗೆ ಆಡುತ್ತಿರುವಾಗಲೇ ಮುಗಿಲ ಮುತ್ತಿಡುವ ಸುಖ ಅವಕ್ಕೆ ಮಾತ್ರ ಗೊತ್ತು. ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿತ್ತು. ಗಿರಿಪಂಕ್ತಿಗಳಿಗೆ ಮುತ್ತಿಟ್ಟು ಸರಸವಾಡುತ್ತಿದ್ದ ಮೋಡಗಳು. ಓಡುವ ಮೋಡಗಳ ಛಾಯೆಯಿಂದ ಆವರಿಸಿದ ಗಿರಿಗಳು. ಇಳಿಜಾರುಗಳಲ್ಲಿ ಇಣುಇಣುಕುತ್ತಿದ್ದ ಹಸಿರ ತುಣುಕುಗಳು.

ಮುಂದೆ ಮುಂದೆ ಸಾಗುತ್ತಿದ್ದಂತೆ ಬಹುದಿನಗಳ ಕನಸು ನನಸಾಗುವ ರೋಮಾಂಚಕ ರಸಕ್ಷಣ. ಬಂದೇಬಿಟ್ಟಿತು ಆ ಸುಂದರ ಪ್ಯಾಂಗಾಗ್ ತ್ಸೋ ಸರೋವರ. ಋತುಮಾನಕ್ಕೆ ತಕ್ಕಂತೆ ವರ್ಣಮಯವಾಗುವ ಈ ಸರೋವರ ಒಂದೇ ತಾಣದಲ್ಲಿ ಸ್ವರ್ಗ, ಶಾಂತಿ, ನೆಮ್ಮದಿ ನೀಡುವ ನೆಲೆ. ಮೌನ ತಬ್ಬಿತು ಮನವನು ಆನಂದ ಮಹಾನಂದದಲ್ಲಿ. ಮಾತಿಲ್ಲಿ ಮೈಲಿಗೆ. ಆ ನೀಲ ನೀರ್ನೆಲೆಯ ನೋಟಕೆ ಲೀಲಾ ನೀಲವಾದಳು.  ನೀರ್ದಾಣ ನೀಲವಾಗಿ ಕಣ್ ತುಂತುಂಬಿಕೊಂಡಿತು. ಸಂಜೆ ಕಳೆದು ಇರುಳ ಕತ್ತಲು ಮುತ್ತಿಡುವವರೆಗೂ ನೀಲಿಯೋ ನೀಲಿ. ಬೆಳಕು ಬದಲಾದಂತೆ ನೀಲಿಯಲ್ಲೇ ತಿಳಿ ಗಾಢಗಳ ಸೊಗಸು. ಕಣ್ಣು ತೆರೆದರೂ ನೀಲಿ… ಮುಚ್ಚಿದರೂ ನೀಲಿ `ಲೀಲಾಮಯ ಹೇ ದೇವಾ ನೀ ತೋರಿದೆ ಈ ನೀಲಾ…’ 

ಸೂರ್ಯ ನಡುನೆತ್ತಿ ದಾಟಿದಂತೆ ಇನ್ನೊಂದು ನೆಲೆಯಿಂದ ನೀರ್ನೆಲೆಯ ನೋಟ ನಮ್ಮನ್ನು ಸೆಳೆದರೂ ಮುಖ್ಯ ಆಕರ್ಷಣೆ ಹಕ್ಕಿಗಳತ್ತ. ಬಂದವರಲ್ಲಿ ಕೆಲವರು ಸವಾರಿಯ ಖುಷಿ ಪಡುತ್ತಿದ್ದರೆ ಇನ್ನು ಕೆಲವರು ಸೆಲ್ಫಿಮಗ್ನರು. ಹಕ್ಕಿಗಳು ಸೆಲ್ಫಿಗರನ್ನು ಕೇರ್ ಮಾಡದೆ ಅವರ ಮುಂದೆಯೇ ನಿಮ್ಮದೇನು ಮಹಾ ಎನ್ನುವಂತೆ ಸವಾಲಿಸಿ ಹಾರಿ ಇಳಿಯುತ್ತಿದ್ದವು. ನೀರ ನಡುವಣ ಸಣ್ಣ ನಡುಗಡ್ಡೆಯಲ್ಲಿ great crested grebe ಗೂಡು ನಮ್ಮ ತಂಡದವರನ್ನು ಕರೆಯಿತು. ನನಗೆ ತೀರದಲ್ಲಿದ್ದ ಹಕ್ಕಿಗಳ ಆಕರ್ಷಣೆಯೆ ಹೆಚ್ಚಿತ್ತು.  great crested grebeಗೆ 600mmಗೆ 2xiii T.C ಹಾಕಿ ತೆಗೆದೆ. ಕಣ್ಣೆದುರಿಗೆ ಅಡ್ಡಾಡುತ್ತಿದ್ದ, ಹಾರುತ್ತಿದ್ದ brown headed gull ಕಂಡು ಮನಸ್ಸೂ ಗರಿಗೆದರಿತ್ತು. ನನ್ನ ಫೋಟೋ ಹಿಡಿತೀಯಾ, ಈ ಪೋಸ್‌ನಲ್ಲಿ ತೆಗೀತೀಯಾ ಎನ್ನುವಂತೆ ಕರೆದವು. ನಾನಾ ಭಂಗಿಗಳಲ್ಲಿ ರೆಕ್ಕೆ ಅಗಲಿಸಿ ನೀರ ಮೇಲೆ ನಡೆದು ಹಾರಲು ಸಿದ್ಧವಾದವು… ready 1…2…3. ಮತ್ತೊಂದು ಧುತ್ತೆಂದು ಧುಮುಕ್ಕಿತು ನೀರಿಗೆ, ನೀರನ್ನು ಹೀರಿ ಮುಖವೆತ್ತಿತು ಚಿಮ್ಮಿಸಲು ನಭಕೆ, ಚಿಲುಮೆ ಚಿಮ್ಮುವಷ್ಟರಲಿ ಹೋಗಿ ನಿಂತಿತು ದೂರಕೆ. `ನಾ ನಭದಿಂದ ಬಂದು ನೆಲಕ್ಕಿಳಿಯುತ್ತಿದ್ದೇನೆ. ನೀ ಎಲ್ಲಿದೀಯಾ? ನಾನೂ ಅಲ್ಲಿಗೆ ಬರ್ತೀನಿ ತಾಳು. ಬಾ ಬಾ…’ ಹಾರುವ, ಇಳಿವ ಕಂದುತಲೆ ಕಡಲಕ್ಕಿಗಳು ಚಿತ್ರವಾದವು.

ಕೊಂಬಿನ ನೆಲಗುಬ್ಬಿ ಕೊಂಬು ಮೇಲೆ ಮಾಡಿ ನೋಡಿತು. ಪುಟ್ಟ ಹಕ್ಕಿಗೆರಡು ಹೆಮ್ಮೆಯ ಪುಕ್ಕದ ಕೋಡುಗಳು ನೋಡಲೊಂದು ಚಂದ. horned lark full frameನಲ್ಲಿದ್ದವು. ನಂತರದಲ್ಲಿ ಹ್ಯಾನ್ಲೆಯಲ್ಲಿ ಮರಿಗಳೀಗೆ ಉಣಿಸೀಯುತ್ತಿದ್ದ ಕೊಂಬಿನ ನೆಲಗುಬ್ಬಿ ಪಟ ತೆಗೆದೆ. ಪುಟ್ಟ ಮೂಟೆಯಂತಹ ಬಣ್ಣ ಬೆಡಗುಗಳಿಲ್ಲದ ಸಣ್ಣ ಹಕ್ಕಿ twite ಹುಲ್ಲಿನಲ್ಲಿ ಉರುಳಾಡುತ್ತಾ ಕೊಕ್ಕಿನಿಂದ ಹುಡುಕಿ ತಡಕಿ ತಿನ್ನುತ್ತಿತ್ತು. ನಾನು ಇವೆಲ್ಲವನ್ನೂ ನೆಲದ ಮೇಲೆ ಬೋರಲಾಗಿ ಗ್ರೌಂಡ್ ಷಾಟ್ ತೆಗೆದೆ. 

ನಂತರ ಸಿಕ್ಕಿದ್ದು ಹೆಣ್ಣು greater rose finch. ಗಂಡೂ ಬರಲೆಂದು ಕಾಯ್ದರದು ದೂರದಲ್ಲಿ ಚುಕ್ಕಿಯಂತೆ ಕಂಡಿತೆ ವಿನಾ ಸನಿಹಕ್ಕೆ ಬರಲಿಲ್ಲ. ಮೆಲ್ಲಗೆದ್ದು ಮುಂದೆ ಹೊರಟೆ, ಅದು ಪುರ್ರೆಂದು ಹಾರಿಹೋಯಿತು. greater rose finch ಬಣ್ಣದ ಸೊಬಗು ಗಂಡಿಗೆ ಮೀಸಲಿತ್ತು. ಮತ್ತೊಂದು ಪುಟ್ಟಹಕ್ಕಿ short toed lark ಅಂದರೆ ಸಣ್ಣಬೆರಳಿನ ನೆಲಗುಬ್ಬಿ. ಲಡಾಖ್‌ನ ಹಕ್ಕಿಗಳೆಲ್ಲ terrainಗೆ ಹೊಂದಿಕೊಂಡಿರುವುದರಿಂದ ಆಕಾರ ಬೇರೆ ಆಗಿದ್ದರೂ ಬಣ್ಣದಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಅಷ್ಟೆ. ನೆಲದಲ್ಲಿದ್ದ ಪುಟ್ಟ ಹಕ್ಕಿಗಳಿಗೆ ಬಿಡುವು ಬಿಟ್ಟುಮತ್ತೆ ನೀರಿನತ್ತ ಕಣ್ಣು ಹಾಯಿಸಿದೆ. brown headed gull, common tern(ಕರಿಕೊಕ್ಕಿನ ರೀವ) ಹಾರಿಬಂದು ನೀರಿಗಿಳಿದು ಗಗನಕ್ಕೇರುತ್ತಿದ್ದವು. ನೀಲಗಗನದ ಹಿನ್ನೆಲೆಯಲ್ಲಿ ರೀವ ಆಕರ್ಷಕವಾಗಿತ್ತು.

ಇಳಿಸಂಜೆಯಲ್ಲಿ ಪ್ಯಾಂಗಾಂಗಿನ ತಿಳಿನೀಲ ನೀರಿನ ತಡಿಯಲ್ಲಿ ಅಶ್ವ ಸವಾರನೊಬ್ಬ ಬರುತ್ತಿದ್ದರೆ ನನಗೆ ಬಾಣ ಕಂಡರಿಸಿದ ಶಿವನನ್ನೇ ಮೋಹಗೊಳಿಸಿ ಅಚ್ಛೋದ ಸರಸ್ಸಿಗೆ ಅಶ್ವವೇರಿ ಬಂದ ಚಂದ್ರಾಪೀಡ, ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ ಇಳಿದು ಬಾ ಎಂದ ಬೇಂದ್ರೆ ನೆನಪಾದರು. ನೀರೆಂಬ ನೀರೆಯ ಸನಿಹದಲ್ಲಿ ಸಾಗಿಹೋದ ಸವಾರನ ಬಿಂಬ-ಪ್ರತಿಬಿಂಬಗಳು ಕಣ್ಣಂಚಿನಿಂದ ಕಣ್ಮರೆಯಾದರೂ ಅತ್ತ ಹಿಮಾಚ್ಛಾಧಿತ ಶಿಖರಗಳು ಕರಗದೆಯೂ ಮನದಲ್ಲಿ ಕರಗಿದವು. ಅದನ್ನು ಒಂದು ಪುಟ್ಟ ವಿಡಿಯೋ ಮಾಡಿ ದಾಖಲಿಸಿದೆ, ಪಾಠ ಮಾಡಿದ ಚಂದ್ರಾಪೀಡ ನೆನಪಾಗುವಂತೆ.  ತಲೆ ಎತ್ತಿ ನೋಡಿದರೆ black winged stilt ಪರಿವಾರ ನೀಲನಭದ ಬಿಳಿಮೋಡದಲ್ಲಿ ತೇಲಿದಂತೆ ಹಾರುತ್ತಿದ್ದವು. ಕಣ್ಣು ಕೆಳಗಿಳಿಸಿದರೆ ಕ್ಯಾಮೆರಾಕ್ಕೆ ಸಿಲುಕದಷ್ಟು ಸನಿಹದಲ್ಲಿ hill pigeonಗಳು. ಸಂಜೆಯ ಪಕ್ಷಿವಿಹಾರಕ್ಕೆ ವಿದಾಯ ಹೇಳುವಾಗ ದೂರದ great crested grebe ಹತ್ತಿರಕ್ಕೆ ಹೋಗಿದ್ದರೆ ಚೆನ್ನಾಗಿ  ಸಿಗುತ್ತಿತ್ತೇನೋ ಎನಿಸಿತು. ಹೋಗಿದ್ದರೆ ದಡದ ಹಕ್ಕಿಗಳ ಚಿತ್ರ ಸಿಗುತ್ತಿರಲಿಲ್ಲ. ಎರಡು ದೋಣಿಯಲ್ಲಿ ಕಾಲಿಡಬಾರದಲ್ಲವೆ. ನಾವು ಉಳಿದದ್ದು ಸರೋವರದ ಸನಿಹದ ವಸತಿಯಲ್ಲಿ. ಆಸೆ ಇತ್ತು ರಾತ್ರಿ star photography ಮಾಡಬೇಕೆಂದು. ಚಂದ್ರನ ಬೆಳಕಿನಲ್ಲಿ ನಕ್ಷತ್ರಗಳೆ ಕಾಣುತ್ತಿರಲಿಲ್ಲ.

ಮೂಡಲಮನೆಯ ಬಾಗಿಲು ತೆರೆದು ಬೆಳಕಿನ ಎರಕ ರವಿರಾಯ ಎರೆವ ಮೊದಲೇ ಪ್ಯಾಂಗಾಂಗಿಗೆ ವಿದಾಯ ಹೇಳಿ ಹ್ಯಾನ್ಲೆಯ ಕಡೆಗೆ ಹೊರಡಬೇಕಿತ್ತು. ಬಹುದೂರದ ತನಕ Pangong lake ಪಕ್ಕದಲ್ಲೇ ಪಯಣದ ಹಾದಿ. ಆ ಮಸುಕಿನ ಮುಸುಕಿನಲ್ಲಿ ತಾಯಿ common merganser ಮರಿಗಳ ಪರಿವಾರದೊಡನೆ ನೀಲನೀರಿನಲ್ಲಿ ಪಯಣಿಸುತ್ತಿದ್ದ ಚಿತ್ರ ಕಂಡಿತು. ಮನಕದ್ದ ಪಟ್ಟೆತಲೆಬಾತಿನ ಪರಿವಾರ ಸಂಸಾರವೇ ಸಾರ ಎನಿಸುವ ನೋಟದ ಮಾಟ. ಸನ್ನೇಸಿಯೂ ಜಪತಪವ ಮರೆತಾನೇನೊ ತಾಳು ನಾ ಬಂದೆ ಎನ್ನುವ ಪುಟ್ಟಮರಿ ಸಮಕ್ಕೆ ಬಂದಾಗ ಸಂಭ್ರಮದ ನೋಟ ಬೀರಿ ಮುಂದೆ ಹೋದಂತೆ.. ಇನ್ನೆರಡು ಮರಿಬಾತುಗಳೊಡನೆ ಬಂದು ಒಟ್ಟಿಗೆ ಹೋಗೋಣ ಬನ್ನಿ ಎನ್ನುತ್ತಾ ಮುಂದೆ ಸಾಗಿದ ಬಾತು follow me ಅಂದಂತೆ ಇತ್ತು ನೋಟ. brown headed gulls, twite horned larkಗಳ video ತುಣುಕುಗಳು ಇಂದಿಗೂ ಮತ್ತೆಮತ್ತೆ ಲಡಾಖಿನ ನೆನಪುಗಳಲ್ಲಿ ಅಲೆದಾಡಿಸುತ್ತವೆ, ಮುದ ತರುತ್ತವೆ.

‍ಲೇಖಕರು avadhi

April 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: