‘ಕವಿತೆ ಬಂಚ್‌’ನಲ್ಲಿ ಪ್ರಕಾಶ್ ಕೊಡಗನೂರ್…

ಕವಿತೆ ಬಂಚ್-

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ ಕವಿಯ ಅಂತರಂಗ ಹೊಕ್ಕುಬಿಡಿ.

ಈ ಕವಿತೆಗಳ ಬಗ್ಗೆ ಅಭಿಪ್ರಾಯ ಬರೆದು ತಿಳಿಸಿ ಕವಿಗೂ ಖುಷಿಯಾದೀತು ಇನ್ನಷ್ಟು ಬರೆಯಲು ದಾರಿಯಾದೀತು.

ಅಷ್ಟೇ ಅಲ್ಲ, ಹೀಗೆ ‘ಪೊಯೆಟ್ ಆ ದಿ ವೀಕ್’ ಆದವರ ಕವಿತೆಗಳನ್ನು ಇನ್ನೊಬ್ಬ ಸಮರ್ಥ ಓದುಗರು ಓದಿ ಅದರ ಬಗ್ಗೆ ತಮ್ಮ ಟಿಪ್ಪಣಿ ಕೊಡುತ್ತಾರೆ.

ಅದು ನಂತರದ ದಿನಗಳಲ್ಲಿ ಅವಧಿಯಲ್ಲಿ ಪ್ರಕಟವಾಗುತ್ತದೆ.

ಕೊಡಗನೂರು, ದಾವಣಗೆರೆ ತಾಲ್ಲೂಕ್, ಜಿಲ್ಲೆ. ಮೊದಲು ಪ್ರಾಥಮಿಕ ಶಾಲಾ ಶಿಕ್ಷಕ, ಈಗ ಬಡ್ತಿ ದೊರೆತು ಹೊನ್ನಾಳಿ ತಾಲೂಕಿನ ತರಗನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಶಿಕ್ಷಕ.

ಪ್ರಾಥಮಿಕ ಶಾಲೆಯಲ್ಲಿ ಇಪ್ಪತ್ತು ವರ್ಷಗಳ ಕಾಲ ನಿರಂತರವಾಗಿ ನಟರಾಜ್ ಹುಳಿಯಾರ್, ಪ್ರೊ.ಭಿಕ್ಷಾವರ್ತಿಮಠ, ಚಿತ್ರನಟ ಲೋಹಿತಾಶ್ವ, ಬಿದರಹಳ್ಳಿ ನರಸಿಂಹಮೂರ್ತಿ, ರಾಜೇಂದ್ರ ಚೆನ್ನಿ, ಡಾ. ಸಿ. ಚನ್ನಪ್ಪ, ಆರ್ ಜಿ ಹಳ್ಳಿ ನಾಗರಾಜ್, ಬಿ. ಎನ್. ಮಲ್ಲೇಶ್, ಪ್ರೊ. ಎ. ಎಚ್. ಸಾಗರ, ಎಂ. ಟಿ. ಶರಣಪ್ಪ ಮುಂತಾದವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಇಂಗ್ಲಿಷ್ ಮತ್ತು ಕಂಗ್ಲೀಷ್ ನಾಟಕಗಳ ರಚನೆ ಮತ್ತು ಪ್ರದರ್ಶನ. ಅಲ್ಲದೆ ಇಂಗ್ಲಿಷ್ ಭಾಷಿಕ ಪರಿಸರವನ್ನು ಕಟ್ಟಿಕೊಡಲು ರೂಪಕ, ಪಾತ್ರಾಭಿನಯ, ಕಥಾಭಿನಯ, ಕಥೆ ಹೇಳುವುದು, ಪದ್ಯಾಭಿನಯ, ನಾಟಕೀಯ ಓದು ಇನ್ನಿತರ ಪ್ರಕಾರಗಳಲ್ಲಿ ಮಕ್ಕಳಿಗೆ ತರಬೇತಿ ಮತ್ತು ಪ್ರೋತ್ಸಾಹ . ಪ್ರಕಟಿತ ಕೃತಿಗಳು : ಭ್ರಮೆ (ನಾಟಕ), ಎರಡು ಹಳ್ಳಿಗಳ ನಡುವೆ (ಕವನ ಸಂಕಲನ), Little Plays (ನಾಟಕ ಸಂಕಲನ), A Secret Behind The Sacrifice (ನಾಟಕ ಸಂಕಲನ), Role Plays (ನಾಟಕ ಸಂಕಲನ), ಯೇಟ್ಸ್ ಮತ್ತು ನಾನು (ಕವನ ಸಂಕಲನ), ಇಂತಿ ನಮಸ್ಕಾರಗಳು (ಕವನ ಸಂಕಲನ).

1. ತಲೆತಲಾಂತರದ ವ್ಯಥೆ

ಬಲಾಢ್ಯರು ಅಧಿಕಾರಸ್ಥರು
ಹೂಸಿದರೂ ಸಾಕು
ಪರಿಮಳವೆಂದು ಆಘ್ರಾಣಿಸುವ
ಒಪ್ಪಿತ ಮನಸುಗಳಿವೆ

ಬಲಾಢ್ಯರು ಅಧಿಕಾರಸ್ಥರು
ಹೇತುಕೊಂಡರೂ ಸಾಕು
ಮಹಾಪ್ರಸಾದವೆಂದು ಭಾವಿಸುವ
ಭಕ್ತ ಮನಸುಗಳಿವೆ

ಬಲಾಢ್ಯರು ಅಧಿಕಾರಸ್ಥರು
ಬಾಯ್ಬಿಟ್ಟರೆ ಸಾಕು
ಆಶೀರ್ವಚನವೆಂದು ಆಂಗೀಕರಿಸುವ
ಮುಗ್ಧ ಮನಸುಗಳಿವೆ

ಬಲಾಢ್ಯರು ಅಧಿಕಾರಸ್ಥರು
ಕೃಪೆ ತೋರಿದರೆ ಸಾಕು
ಬದುಕಿಕೊಳ್ಳಬಹುದೆಂದು ಲೆಕ್ಕಿಸುವ
ದುರ್ಬಲ ಮನಸುಗಳಿವೆ

ಬಲಾಢ್ಯರು ಅಧಿಕಾರಸ್ಥರು
ಕಂಡರೆ ಸಾಕು
ದೇವಮಾನವರೆಂದು ಪುಳಕಗೊಳ್ಳುವ
ಭ್ರಾಮಕ ಮನಸುಗಳಿವೆ

ತಲೆತಲಾಂತರ ಉರುಳಿತು
ವಿಜ್ಞಾನ ತಂತ್ರಜ್ಞಾನ ಅಂತೆಲ್ಲ
ಆಧುನಿಕತೆ ಅವತರಿಸಿತು
ತತ್ವ ಸಿದ್ಧಾಂತದಿ೦ದ
ವೈಚಾರಿಕತೆಯೂ ಬೆಳೆಯಿತು

ಆದರೆ ಹಳಸಲು ಮನಸ್ಥಿತಿ
ಮಾತ್ರ ಹಾಗೇ ಉಳಿದಿದೆ
ಸಮಾಜದ ಅಸ್ಮಿತೆಯನ್ನೆ
ಅಣಕವಾಡಿದಂತೆ ಮೆರೆದಿದೆ


2 ಷರಾ

ಎದೆಯಾವರಿಸಿದ ನೋವು
ಮೆದುಳಿಗೂ ಬಂತು
ಗ್ರಹಣ ತಂತು

ಪರಿಣಾಮ
ವೃತ್ತಿ ಕುಟುಂಬ
ಬದುಕಿನ ನಿರ್ವಹಣೆಯಲ್ಲಿ
ಅಭದ್ರತೆ ಅನಾಸಕ್ತಿ
ಭಯ ಮಂಕುತನ
ನಿರುತ್ಸಾಹ ನಿದ್ರಾಹೀನತೆಗಳೆಲ್ಲ
ನಿತ್ಯದ ಸಂಗತಿಗಳಾಗಿ
ನನ್ನ ಹೈರಾಣಾಗಿಸಿದೆ

ಕಾರಣ ಸ್ಪಷ್ಟ
ಘಟಿಸಿದ ದುರಂತಗಳಿ೦ದ
ದುಪ್ಪಟ್ಟಾದ ತೊಡಕುಗಳಿಂದಲೇ
ಮೈದಾಳಿದ ಖೂಳನೋರ್ವ
ನನ್ನಲ್ಲಿಂದು ದೈತ್ಯನಾಗಿ ಬೆಳೆದಿದ್ದಾನೆ
ಖಿನ್ನತೆಯ ರೂಪ ತಾಳಿ
ತನ್ನ ಪರಾಕ್ರಮ ಮೆರೆದಿದ್ದಾನೆ

ಈ ನಿಟ್ಟಿನಲ್ಲಿ
ಎಲ್ಲ ಮರೆತು
ಹೊಸೆವ ಹೊಸತು
ನನ್ನ ಸೃಜನಶೀಲತೆಗೆ
ಸೋಪಾನವಾದರೆ ಮಾತ್ರ
ಈ ಅಸುರನ
ಕಬಂಧಬಾಹುಗಳಿ೦ದ ವಿಮುಕ್ತಿಗೊಂಡು
ದಶಕಗಳ ದಣಿವಿಗೆ
ವಿರಾಮ ದೊರೆವುದೇನೊ!?

3. ಶ್!!

ಶ್!
ಅಗೋ ಅಲ್ಲಿ
ಸೇವಕರು ಸಹಾಯಕರು
ಬಾಜಾಭಜಂತ್ರಿಯೊ೦ದಿಗೆ
ದೇವಮಾನವನ೦ತೆ ಕಂಗೊಳಿಸುವ
ಐಎಎಸ್ಸಿನ ಐರಾವತವು
ನಾಡಪರ್ಯಟನೆಗೆ ಹೊರಟಿದೆ
ದಾರಿಬಿಡಿ!!
ಶ್!
ಇಗೋ ಇಲ್ಲಿ
ಸಕಲೆಂಟು ಬಗೆಯ
ನೌಕರರು ಅಧಿಕಾರಿಗಳೊಂದಿಗೆ
ರಾಜನ೦ತೆ ಠೇಂಕರಿಸುವ
ಐಎಎಸ್ಸಿನ ಐರಾವತವು
ಪ್ರಜಾಹಿತಪಾಲನೆಯ
ಒಡ್ಡೋಲಗ ನಡೆಸುತಿದೆ
ಕಟ್ಟೆಚ್ಚರ!!


ಶ್!
ಅಲ್ಲೆಲ್ಲೊ
ಚೇಂಬರೊ ವಿಶ್ರಾಂತಿಗೃಹವೊ
ಇ೦ದ್ರನ೦ತೆ ತೇಲಾಡುವ
ಐಎಎಸ್ಸಿನ ಐರಾವತವು
ಆಡಳಿತದೊತ್ತಡಕೆ ದಣಿವ
ದೇಹ ಮನಸಿಗೆ
ಚೈತನ್ಯ ತುಂಬಲು
ಉಲ್ಲಾಸದಲಿ ಮುಳುಗಿದೆ
ಅತಿಗೋಪ್ಯ!!
ಶ್!
ಎಲ್ಲೇ ಇರಲಿ
ದೇಶದುನ್ನತ ಪದವಿ
ಹುದ್ದೆ ತನ್ನದೆಂದು
ಶ್ರೇಷ್ಠತೆಯ ವ್ಯಸನದಲಿ
ಜ್ಯೇಷ್ಠನಾಗಿ ಬೀಗುವ
ಐಎಎಸ್ಸಿನ ಐರಾವತವು
ಕಡಿವಾಣವಿರದ
ಕುದುರೆಯಂತೆ ಜಿಗಿದಿದೆ
ಜೋಪಾನ!!
ಶ್!
ಅಜ್ಞಾತದಲಿ
ಚಾಲ್ತಿ ಸರ್ಕಾರದ
ಕ್ಲಚ್ಚು ಬ್ರೇಕುಗಳನು
ತನ್ನ ಅಧೀನದಲ್ಲಿರಿಸಿಕೊಂಡು
ಬಹಿರ೦ಗದಲಿ
ಆಜ್ಞಾಪಾಲಕನ೦ತೆ ನಟಿಸುವ
ಐಎಎಸ್ಸಿನ ಐರಾವತವು
ಹಾಡಹಗಲೇ ಸಾರ್ವಜನಿಕ
ಖಜಾನೆಯ ಲೂಟಿಗೈದಿದೆ
ಕಾಣದಂತಿರಿ!!

4. ಕೊನೆಹಾಡು

ದುರ೦ತಗಳ ಸರಮಾಲೆ
ವಿಫಲತೆಯ ಸಾಗರ
ರೋಗಗಳ ಭೀಕರತೆ
ಬಾಳಿನ ಪ್ರಾರಬ್ಧ

ಭಾವ ಉರಿದುರಿದು
ಬುದ್ಧಿ ಸಿಡಿಸಿಡಿದು
ಹತಾಶೆ ಉಕ್ಕುಕ್ಕಿ
ಜೀವ ಕೆಂಡಕೆಂಡ

ಅಳಿದುಳಿದ ದಿನಗಳು
ಸರಿವ ಪ್ರತಿ ಕ್ಷಣಗಳು
ಇಡುವ ಬಿಡಿ ಹೆಜ್ಜೆಗಳು
ಮುಂದೆ ಕಣಿವೆ ಹಾದಿ

ಛಲದಿಂದ ಬಲದಿಂದ
ಹೆಣಗುತ್ತ ಸಾಗಿರುವೆ
ಉಳಿದ ಬದುಕಿಗೆ
ಅರ್ಥ ನೀಡಲೆಂದು

ಈಗೆಲ್ಲ ಉಡುಗಿ
ತೆವಳಿ ಬವಳಿ
ಕೈಮೀರಿದ ಸ್ಥಿತಿ
ನಾನಿನ್ನು ಅಸ್ಥಿ

ಸ್ಥಗಿತಗತಿಯಲಿ ಕೊಳೆವ
ಕರ್ಮ ಕಾಡಲು ಕೊನೆಗೆ
ಕಾಯುತ ಕಾಲನ ಕರೆಗೆ
ವಿಧಿಯಿಲ್ಲದೆ ಶಬರಿಯಾಗುಳಿವೆ

5. ತ್ಯಾಗ

ಅದೆಲ್ಲ
ಏನೂ ಬೇಡ
ಇನ್ನು ಮೇಲೆ
ಸುಮ್ಮನಿದ್ದುಬಿಡೋಣ
ಮಾತುಕತೆಯಲ್ಲೆ
ಜೊತೆಜೊತೆಯಲ್ಲೆ ಸಾಗುತ
ಉಳಿದೆಲ್ಲ ಒದ್ದುಬಿಡೋಣ
ಅಂದವಳ ದನಿಯಲ್ಲಿ
ಸ್ಥಿರತೆಯಿತ್ತು
ಪ್ರೀತಿಯ ಇತಿಮಿತಿಗಳ
ಅರಿವಿತ್ತು
ಬದುಕು ಕುಟುಂಬದ ಬಗ್ಗೆ
ಸ್ಪಷ್ಟತೆಯಿತ್ತು

ಅಷ್ಟೇ;
ಎದೆಯ ಮೇಲೊಂದು
ಬಾ೦ಬು ಬಿದ್ದಂತಾಗಿ ಛಿದ್ರನಾದೆ!!

ಇದೆಂಥ
ಅವಲಕ್ಷಣ!

ಕೊತಕೊತ
ಕುದಿಯುತ ಮನಸು
ಫ್ಲಾಶ್‌ಬ್ಯಾಕ್‌ಗೆ ಇಳಿಯಲಾರಂಭಿಸಿತು
ಅವಳಿಗಾಗಿ ಪಟ್ಟಪಾಡಿಗೆ
ಸ್ವಯಂ ಶಪಿಸಲಾರಂಭಿಸಿತು

ಇಡಿಯಾಗಿ
ಅಲ್ಲದಿದ್ದರೂ ಬಿಡಿಯಾಗಿ
ನಿಯಮಿತವಾಗಿ
ಆಗದಿದ್ದರೂ ಅನಿಯಮಿತವಾಗಿ
ಕಡ್ಡಾಯವಾಗಿ
ಸಿಗದಿದ್ದರೂ ಸ್ವಯಂಪ್ರೇರಿತವಾಗಿ
ಕೂಡುವ ಬಗೆಯ
ಆಯ್ಕೆಯ ಸ್ವಾತಂತ್ರ್ಯ
ಅವಳಿಗೇ ನೀಡಿದ್ದರೂ
ಕೈಚೆಲ್ಲಿ ಕುಂತವಳದ್ದು
ಅವಕಾಶವಾದವೊ ಭಯವೊ
ಪಲಾಯನವಾದವೊ?

ದ್ವಂದ್ವದಲಿ
ಮಿ೦ದೆದ್ದು ದೊಂದಿಯಾದೆ
ಮರುಕ್ಷಣವೇ
ಉಕ್ಕಿದ ಮರುಕದಲಿ
ಪರಿತ್ಯಕ್ತನಾದೆ

6. ಅವಸ್ಥೆ

ಎದೆಗೂಡಿನೊಳಗೆ
ಕಡಲು ಎದ್ದೈತಿ

ತಲೆಬುರುಡೆಯೊಳಗೆ
ಸಿಡಿಲು ಹೊಡ್ದೈತಿ

ನರನಾಡಿಯೊಳಗೆ
ನಂಜು ಹಬ್ಬೈತಿ

ಕನಸು ಮನಸೊಳಗೆ
ಬೀಳು ಬಿದ್ದೈತಿ

ನಡೆನುಡಿಯೊಳಗೆ
ಮಂಕು ಬರ್ತೈತಿ

ಕಾಲನಬಲೆಯೊಳಗೆ
ಜೀವ ಏಗ್ತೈತಿ

‍ಲೇಖಕರು avadhi

April 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: