ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅಂಡಮಾನಿನಲ್ಲಿ ಅಲೆದಾಟ : ಭಾಗ: 3…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

15.3
ಲಿಟಲ್ ಅಂಡಮಾನ್

ಹದಿನೈದು ದಿನಗಳ ಸುದೀರ್ಘ ಅಂಡಮಾನಿನ ಪ್ರವಾಸ ಮುಗಿಸಿ ಮರಳುವಾಗ ಖಂಡಿತವಾಗಿಯೂ ಮತ್ತೊಂದು ಅಂಡಮಾನ್ ಪ್ರವಾಸ ಮಾಡುತ್ತೇನೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಆದರೂ ಮನದ ಮೂಲೆಯಲ್ಲಿ ನಿಕೋಬಾರ್ ಪಿಜನ್ ಬಾ ಬಾ ನಾನಿನ್ನೂ ನಿನಗೆ ಸಿಕ್ಕಿಲ್ಲ, ನನ್ನನ್ನು ನೋಡಲು ಬರುವುದಿಲ್ಲವೆ ಬಾ ಎಂದು ಕೂಗುತ್ತಲೇ ಇತ್ತು. ಅಯ್ಯೋ ಪಾರಿವಾಳವೇ ಅಂಡಮಾನಿಗೆ ಬಂದು ಅಲ್ಲಿಂದ ನಾಲ್ಕುದಿನ ನೀರಿನಲ್ಲಿ ನಿಕೋಬಾರಿಗೆ ಬರಲಾಗದು ಎಂದು ಹೇಳಿ ತೆಪ್ಪಗಿರಿಸಿದ್ದೆ. ಆದರೆ ಯಾವಾಗ ಚಂದ್ರಮೌಳಿ ಗಾಂಗೂಲಿ ಲಿಟಲ್ ಅಂಡಮಾನಿನಲ್ಲಿ ನಿಕೋಬಾರ್ ಪಿಜನ್ ಸಿಗುವ ಸಾಧ್ಯತೆ ಇದೆ ಎಂದಾಗ ಮತ್ತೆ ಹೊರಡುವ ಮನಸ್ಸು ಮಾಡಿಯೇ ಬಿಟ್ಟೆ. 

2019ರ ಕೊನೆಯ ದಿನ ಮನೆ ಬಿಟ್ಟು 2020ರ ಹೊಸ ವರ್ಷದ ಮೊದಲ ದಿನವೇ ಬೆಳಿಗ್ಗೆ ಐದೂವರೆಗೆ ಬೆಂಗಳೂರಿನಿಂದ ಅಂಡಮಾನ್ ಲಿಟಲ್ ಅಂಡಮಾನ್ ಟೂರಿಗೆ ಚಂದ್ರಮೌಳಿ ಗುಂಪಿನ ಜೊತೆಗೂಡಿಕೊಂಡೆ. ಪೋರ್ಟ್ಬ್ಲೇರಿಗೆ ಹೋಗಿ ನೋಡ್ತೀನಿ ಅದೇ ವಿಕ್ರಮ್ ಶಿಲ್ ನಮ್ಮ ಟೂರಿನ ಮಾರ್ಗದರ್ಶಕರು. ಹಾಗಾಗಿ ಪರಿಚಿತರ ಜೊತೆಯೇ ಇದ್ದೇನೆಂಬ ಭಾವನೆ ಬಂದಿತು. ಉಳಿದುಕೊಂಡಿದ್ದು ಕೂಡಾ ಹಿಂದಿನ ಸಲ ಉಳಿದುಕೊಂಡು ಹೋಟೆಲಿನಲ್ಲೆ ಆಗಿತ್ತು. ನಮ್ಮ ಗುಂಪಿನಲ್ಲಿ ಕೊಲ್ಕೊತ್ತಾದವರೆ ಹೆಚ್ಚಿನವರಾದರೂ ಬೆಂಗಳೂರಿನ ಕನ್ನಡಿಗರೊಬ್ಬರು ಜೊತೆಯಲ್ಲಿದ್ದರು ಎನ್ನುವುದು ಖುಷಿಯ ಸಂಗತಿಯಾಗಿತ್ತು. ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ ಎನ್ನುವ ಕನ್ನಡ ಪಡೆ ನಮ್ಮದು.  ಈ ಸಲ ನಮಗೆ ಎರಡು ವಾಹನಗಳ ವ್ಯವಸ್ಥೆ ಆಗಿತ್ತು. ಅದರಲ್ಲೂ ಚಂದ್ರಮೌಳಿಗೆ ನನ್ನ ಕಾಲಿನ ಸಮಸ್ಯೆ ಗೊತ್ತಿದ್ದರಿಂದ `ಅಮ್ಮಾ ಮುಂದಿನ ಸೀಟಿನಲ್ಲಿಯೇ ಕೂರುತ್ತಾರೆ’ ಎಂದು ಹೇಳಿ ವ್ಯವಸ್ಥೆ ಮಾಡಿಕೊಟ್ಟಿದ್ದರು.

ಮೊದಲ ದಿನದ ಸೆಷನ್ನಿಗೆ ಚಿಡಿಯಾ ಟಾಪಿಗೆ ಹೋದೆವು. ಈ ಸಲ ಮಾತ್ರ ಸಫಾರಿ ಗಾಡಿ ಹತ್ತುವ ಬದಲು ಸಾಕಷ್ಟು ದೂರ ನಡೆದೇ ಹೋದೆ. ನಡೆಯಲಾಗದಿದ್ದಾಗ ಅಲ್ಲಲ್ಲೇ ತಳುವಿ ಹಕ್ಕಿ ಸಿಗುತ್ತದೆಯೇ ಎಂದು ಹುಡುಕಾಡಿದೆ. ಅಲ್ಲೂ ಬಿಳಿಯೆದೆಯ ಮಿಂಚುಳ್ಳಿಯೇ ಎಲ್ಲೆ ಹೋಗು ಲೀಲಾ ನಾ ನಿನ್ನ ಬಾಲ ಎನ್ನುವಂತೆ ಕಣ್ಣಿಗೆ ಸಿಗಬೇಕೆ. ಸಿಕ್ಕ ಮೇಲೆ ತೆಗೆಯದೆ ಬಿಡಲು ಸಾಧ್ಯವೆ. ಅದಾದ ಬಳಿಕ ಅಂಡಮಾನ್ ಶಮಾ ಪೊದೆಯೊಳಗೆ ಹೋಗಿ ಹುಳು ಹುಡುಕಿ ಮತ್ತೆ ಮತ್ತೆ ಎದುರಿಗೆ ಬಂದು ಅಡ್ಡಾಡುತ್ತಿತ್ತು.

ಮರುದಿನ ಹಿಂದಿನ ಸಲದ ಟೂರಿನಂತೆಯೇ ಅಂಡಮಾನ್ ಕ್ರೇಕ್ ಅರಸಿ ಶೋಲ್ ಬೇ ಕಡೆಗೆ ಸವಾರಿ ಹೊರಟೆವು. ಮೊದಲ ಸಲ ಅಂಡಮಾನಿಗೆ ಹೋದಾಗ ಎನ್ಡೆಮಿಕ್ ಆದ ಅಂಡಮಾನ್ ಬುಲ್‌ಬುಲ್‌ನ್ನು ಸರಿಯಾಗಿ ತೆಗೆಯಲಾಗಿರಲಿಲ್ಲ. ಈ ಸಲ ಹೋದಾಗ ಚಂದ್ರಮೌಳಿಗೆ ನನ್ನ ನಿರೀಕ್ಷಿತ ಗುರಿಗಳು ಅಂಡಮಾನ್ ಬುಲ್‌ಬುಲ್, ಅಂಡಮಾನ್ ಕಣಜಗೂಬೆ ಹಾಗೂ ನಿಕೋಬಾರ್ ಪಿಜನ್ ಎಂದು ಸ್ಪಷ್ಟಪಡಿಸಿದ್ದೆ. ಶೋಲ್ ಬೇಯಲ್ಲಿ ಅಂಡಮಾನ್ ಬುಲ್‌ಬುಲ್ ಬಂದಾಗ ಉಳಿದವರೆಲ್ಲಾ ನುಗ್ಗುತ್ತಿದ್ದುದನ್ನು ಕಂಡು ಆರಡಿ ಎತ್ತರದ ಲಂಬೂಗಳ ನಡುವೆ ನನಗೆ ಚಿತ್ರ ತೆಗೆಯಲು ಸಾಧ್ಯವಿಲ್ಲ ಎಂದು ಹಿಂದೆ ಸರಿದಿದ್ದೆ. ಅಂಡಮಾನ್ ಕ್ರೇಕ್ ಹುಡುಕಿಕೊಂಡು ಬೇರೆ ಸ್ಥಳಕ್ಕೆ ಉಳಿದವರೆಲ್ಲ ತೆರಳಿದ ಬಳಿಕ  ಬುಲ್ಬುಲ್ ಪುನಃ ಬಂದಿತು. ಮೆಲ್ಲಮೆಲ್ಲನೆ ನಾನದನ್ನು ಹಿಂಬಾಲಿಸುತ್ತಿರುವಾಗ ಮರಳಿ ಬಂದ ಗುಂಪು ನಾನು ಬುಲ್‌ಬುಲ್ ಹಿಂದೆ ಇದ್ದದ್ದನ್ನು ಕಂಡು ನಾನಿದ್ದೆಡೆಗೆ ಬರಲು ಪ್ರಯತ್ನಿಸುತ್ತಿದ್ದರು. ಇದನ್ನರಿತ ಚಂದ್ರಮೌಳಿ ಅವರನ್ನು ತಡೆದು ನೀವೆಲ್ಲಾ ಆಗಲೇ ತೆಗೆದಿದ್ದೀರಿ, ಮೇಡಂ ತೆಗೆದುಕೊಳ್ಳಲಿ ನೀವು ಅಲ್ಲಿಗೆ ಹೋಗಕೂಡದು ಎಂದು ಸೂಚಿಸಿದರು. ಚಂದ್ರಮೌಳಿಗೆ ಕಣ್ಣಲ್ಲೇ ವಂದನೆ ಸೂಚಿಸಿ ಬುಲ್‌ಬುಲ್ ಚಿತ್ರ ಹಿಡಿದುಕೊಂಡೆ.

ಕೇರಳದ ತಟ್ಟೆಕಾಡಿನಲ್ಲಿ, ಮಹಾನಂದದಲ್ಲಿ ಬ್ಲ್ಯಾಕ್‌ಬಾಜಾವನ್ನು ಇದೇ ಬ್ಲ್ಯಾಕ್ ಬಾಜಾ ಎಂದು ಸಾಕ್ಷೀಕರಿಸುವ ರೀತಿ ಬಹಳ ದೂರದಲ್ಲಿ ತೆಗೆದು ಆಗಿದ್ದ ನಿರಾಶೆಯನ್ನು ಈ ಸಲದ ಅಂಡಮಾನ್ ಪ್ರವಾಸದಲ್ಲಿ ನೀಗಿಸಿಕೊಂಡೆ. ತುಂಬಾ ಚೆನ್ನಾಗಿ ಬರಲಿಲ್ಲವಾದರೂ ಇದು ಬ್ಲ್ಯಾಕ್‌ಬಾಜಾನೆ ಎಂದು ನನ್ನ ಸಾಕ್ಷಿಪತ್ರ ಬೇಡ ಎನ್ನುವ ರೀತಿಯಲ್ಲಿ ಬಂದಿತ್ತು. ದೂರದೇಶದಿಂದ ಹಾರಿಬರುವ ಇದರ ಸರಿಯಾದ ಪಟಕ್ಕಾಗಿ ಮತ್ತೂ ಕಾಯುತ್ತೇನೆ. ಕಳೆದ ಅಂಡಮಾನ್ ಪ್ರವಾಸದಲ್ಲೇ ಅಂಡಮಾನ್ ಟ್ರೀಪೈ ಸಿಕ್ಕಿದ್ದರೂ ಈ ಸಲದ ಪ್ರವಾಸದಲ್ಲಿ ಉತ್ತಮವಾದ ಕ್ಲಿಕ್‌ಗಳು ದೊರೆತವು. 

ಲಿಟಲ್ ಅಂಡಮಾನಿನ ಪ್ರಯಾಣದ ಗುರಿ ಅಂಡಮಾನ್ ಬಾರ್ನ್ ಗೂಬೆ ಮತ್ತು ನಿಕೋಬಾರ್ ಪಿಜನ್. ಕಳೆದ ಸಲದ ಅಂಡಮಾನ್ ಪ್ರವಾಸದಲ್ಲಿ ಐದಾರು ದಿನ ಹೋಗಿ ಕಾಯುತ್ತಿದ್ದರೂ ಗೂಬೆ ಕಣ್ಣೆದುರೆ ಹಾರಿಹೋಗಿ ಪಟವಾಗಿರಲಿಲ್ಲ. ಎಂಬತ್ತೆಂಟು ಮೈಲಿ ದೂರದ ಲಿಟಲ್ ಅಂಡಮಾನಿನಲ್ಲಿ ಗ್ಯಾರಂಟಿ ಸಿಕ್ಕೇ ಸಿಗುತ್ತವೆಂಬ ಖಚಿತ ಮಾಹಿತಿಯೊಡನೆ ಆರೇಳು ಗಂಟೆಯ ಹಡಗಿನ ಪ್ರವಾಸ ಮುಗಿಸಿ ಲಿಟಲ್ ಅಂಡಮಾನಿಗೆ ಊರಗಲ ಬಾಯಿ ತೆಗೆದು ರಾತ್ರಿ ಆಕಳಿಸುವಷ್ಟರಲ್ಲಿ ಬಂದಿಳಿದೆವು. ಲಗೇಜನ್ನು ಹೊಟೇಲಿನಲ್ಲಿ ಇಳಿಸಿ ಗೂಬೆ ಶಿಕಾರಿಗೆ ಹೊರಟೇಬಿಟ್ಟೆವು. ನಮ್ಮ ಹಿಂದಿನ ತಂಡದ ನಾಯಕಿ ಖುಷ್ಬೂ ಶರ್ಮಾ ಈಗಾಗಲೇ ಒಂದು ಟೂರ್ ಮಾಡಿ ಅಂಡಮಾನ್ ಕಣಜ ಗೂಬೆಗಳನ್ನು ಕ್ಲಿಕ್ ಮಾಡಿ ನಮಗೂ ಸವಾಲು ಎಸೆದಿದ್ದರು. ಕಣಜ ಗೂಬೆ ನಮಗೆ ನಿರಾಶೆ ಮಾಡಲಿಲ್ಲ. ನಾವು ನಿರ್ದಿಷ್ಟ ಸ್ಥಳ ತಲುಪಿದಾಗ ಗೂಬೆಯಿತ್ತು. ಅದೊಂದು ಕಟ್ಟಡದ ಲಿಂಟಲ್ ಮೇಲೆ ಕುಳಿತಿತ್ತು. ನಮ್ಮ ಟೀಮಿನಲ್ಲಿದ್ದ ಅಷ್ಟೂ ಜನ ಬಹುತೇಕ ಆರಡಿ ಎತ್ತರವಿದ್ದು ಹ್ಯಾಂಡ್ ಹೆಲ್ಡ್ ಆಗಿ ಅಥವಾ ಮೋನೊಪಾಡ್ ಹಾಕಿ ತೆಗೆಯುತ್ತಿದ್ದರಿಂದ ಅವರಿಗೆ ಕಷ್ಟವಾಗಲಿಲ್ಲ. ನನ್ನ ಕ್ಯಾಮೆರಾ ಕೈಯಲ್ಲಿ ಹಿಡಿದು ತೆಗೆಯುವ ತಾಕತ್ತಂತೂ ನನಗಿಲ್ಲ. ಟಾರ್ಚ್ ಬಿಟ್ಟು ಕಣ್ಣನ್ನು ಪಿಳಕಿಸುವ ಅದರ ಚಿತ್ರ ತೆಗೆಯಲು ಟ್ರೈಪಾಡ್ ಹಾಕಿಕೊಂಡು ಆ ಇರುಳಲ್ಲಿ ಅಡ್ಜೆಸ್ಟ್ ಮಾಡುತ್ತಾ ಸೆರೆ ಹಿಡಿಯಲು ನನ್ನ ಎತ್ತರವೇ ಅಡ್ಡಿಯಾಗಿತ್ತು.

 

ಮರುದಿನ ಬೆಳಿಗ್ಗೆ ನಾವು ಹೊರಟಿದ್ದು ಬಹು ನಿರೀಕ್ಷೆಯ ನಿಕೋಬಾರ್ ಪಿಜನ್ನಿಗಾಗಿ ಹರ್ಮಿಂದರ್ ಬೇ ಅರಣ್ಯದಲ್ಲಿ ನಿರರ್ಥಕ ಹುಡುಕಾಟ ನಡೆಸಿದೆವು. ಒಮ್ಮೆ ಸನಿಹದಲ್ಲಿ ಪಿಜನ್ನಿನ ಧ್ವನಿ ಕೇಳಿದ್ದೇ ತಡ ಎಲ್ಲರೂ ಮೌನವಾಗಿ ಕುತೂಹಲದಿಂದ ಕಾಯತೊಡಗಿದೆವು. ಆದರದು ನಮಗೆ ಕಾಣಿಸಿಕೊಳ್ಳುವ ಕೆಲಸ ಮಾಡದೆ ನಿರಾಶೆ ಮೂಡಿಸಿತು. ಪೆಚ್ಚುಮೋರೆ ಹಾಕಿಕೊಂಡು ಕಡಲ ತೀರದಲ್ಲಿ ಕೆಲವು ಕಾಲ ಕಳೆದು ವಸತಿಗೆ ಮರಳಿ ತಿಂಡಿ ಮುಗಿಸಿ ಮತ್ತೆ ಕಣಜ ಗೂಬೆಯ ತಾವಿನತ್ತ ಪಯಣಿಸಿದೆವು. ಮೂರ್ನಾಲ್ಕು ಕಣಜ ಗೂಬೆಗಳು ಕಟ್ಟಡದ ಸಂಧಿಯಲ್ಲಿ ಜೂಗಡಿಸುತ್ತಾ ಕುಳಿತಿದ್ದರಿಂದ ಕ್ಲಿಕ್ಕಿಸಲು ಅನುಕೂಲವಾಯಿತು. ಕಣ್ಣು ಬಿಡ್ರಪ್ಪಾ ಎಂದೆಷ್ಟು ಗೋಗರೆದರೂ ಪಿಳಿಪಿಳಿ ಎಂದು ಬಿಟ್ಟು ಮತ್ತದೇ ತೂಕಡಿಕೆ ಜೋಂಪಿನಲ್ಲಿದ್ದವು. ಒಂದು ಗೂಬೆಗೆ ಮಾತ್ರ ಸಾಕಾಗಿ ಪಕ್ಕದ ಮರವೇರಿ ಪೋಸ್ ಕೊಟ್ಟಿತು ಕೆಲ ಕ್ಷಣ. ಅಲ್ಲಿನ ಜನಕ್ಕೆ ಈ ಗೂಬೆಯ ಕಾರಣದಿಂದ ದೂರದಿಂದ ಜನ ಬರುವುದು ಗೊತ್ತಿದ್ದರಿಂದ ಬನ್ನಿ ಇಲ್ಲಿದೆ, ಇಲ್ಲಿದೆ ಬನ್ನಿ ಎಂದು ಮಾರ್ಗದರ್ಶನ ಮಾಡುತ್ತಿದ್ದರು.  ಅಂತೂ ಒಂದು ಕಣಜ ಗೂಬೆ ನನ್ನ ಕ್ಯಾಮೆರಾದಲ್ಲಿ ದಾಖಲಾಯಿತು. ಆ ಸಂಜೆಗೆ ಅಂಡಮಾನ್ ನೈಟ್ ಜಾರಿಗಾಗಿ ಬಹು ದೂರ ಹೋದೆವು. ಆದರೆ ಎಷ್ಟೇ ಹುಡುಕಿದರೂ ಅದು ಎದುರಿಗೆ ಬರಲು ಒಪ್ಪಲಿಲ್ಲ. 

ಮರುದಿನ ಬೆಳಿಗ್ಗೆ ವಸತಿಗೆ ಹತ್ತಿರದಲ್ಲಿದ್ದ ಕೆರೆಯ ಬಳಿಗೆ ಹೋಗಿ ಕೆಲವು ಹಕ್ಕಿಗಳನ್ನು ಕಂಡೆವು. ಮಧ್ಯಾಹ್ನ ಕೂಡಾ ಅಲ್ಲಿಗೆ ಹೋಗುತ್ತೇವೆ ಎಂದರು. ಲಿಟಲ್ ಅಂಡಮಾನಿನ ನಮ್ಮ ಬಿಡಾರದ ಸಮೀಪದಲ್ಲೇ ಸಮುದ್ರ ಇತ್ತು. ಒಂದು ಸೆಷನ್ ಸಮುದ್ರದ ತಡಿಯಲ್ಲಿ ಕುಳಿತು ಹಕ್ಕಿಗಳ ಚಿತ್ರ ತೆಗೆಯಲೇಬೇಕೆಂಬ ಆಸೆ ಹುಟ್ಟಿಕೊಂಡಿತು. ತಂಡದವರಿಗೆ ನಿಮ್ಮ ಜೊತೆ ಬರುವುದಿಲ್ಲ, ಇಲ್ಲೇ ಸಮುದ್ರದ ಬಳಿ ಹೋಗ್ತೀನಿ ಎಂದೆ. ಹೆಚ್ಚು ವೆರೈಟಿ ಹಕ್ಕಿಗಳು ಇರುವುದಿಲ್ಲ, ಫೆಸಿಫಿಕ್ ಹೊನ್ನಗೊರವ (pacific golden plover), little ring plover ಮುಂತಾದ ಕೆಲವೆ ಜಾತಿಯ ಹಕ್ಕಿಗಳು ಸಿಗುವುದೆಂದು ಚಂದ್ರಮೌಳಿ ಎಚ್ಚರಿಸಿದ್ದರೂ ಸಮುದ್ರದ ದಡದಲ್ಲಿ ಆಹಾರ ಹುಡುಕುವ ಹಕ್ಕಿಗಳಿಗಾಗಿ ನೆಲದ ಮೇಲೆ ಅಚ್ಚುಕಟ್ಟಾಗಿ ಕುಳಿತೆ. ಅಲೆಗಳ ಅಬ್ಬರದ ಅಲೆತಗಳ ನಡುವೆ ಓಡಾಡುತ್ತಾ ಹುಡುಕಿ ಸಿಕ್ಕಿದಾಗ ಸಿಕ್ಕಿದ್ದನ್ನು ಕೊಕ್ಕಿನಲ್ಲಿ ಕಚ್ಚಿ ಬಾಯಿಗೆ ಎಸೆದುಕೊಳ್ಳುತ್ತಿದ್ದವು ಹಕ್ಕಿಗಳು. ನನ್ನ ಕಣ್ಣು ನೀರಿನ ಕಡೆಗೂ ಇರಬೇಕಿತ್ತು. ಹಿಂದೆ ಬರುವ ಅಲೆಗಳ ಹೊಡೆತದಿಂದ ತಪ್ಪಿಸಿಕೊಳ್ಳುತ್ತಲೇ ಹುಡುಕುವ ಹಕ್ಕಿಗಳನ್ನು ಹಿಡಿಯುವಾಗ ಎತ್ತರೆತ್ತರದ ಅಲೆಗಳನ್ನು ಬ್ಲರ್ ಮಾಡಿದ ಚಿತ್ರಗಳನ್ನು ತೆಗೆದೆ. ಮಧ್ಯಾಹ್ನವೂ ಇದೇ ಕೆಲಸ. ಪುಟ್ಟಪುಟ್ಟ ಹಕ್ಕಿಗಳು ಸಾಕಾಯಿತೆಂದು ಹಾರಿಹೋಗದೆ ನಿರಂತರವಾಗಿ ಪ್ರಯತ್ನಿಸುತ್ತ ಕಡಲ ದೈತ್ಯ ಅಲೆಗಳಿಗೆ ಬೆಚ್ಚದೆ ಬೆದರದೆ ಸಾಹಸಿಸುತ್ತಿದ್ದ ಪರಿಯಂತೂ ಜೀವನಕ್ಕೆ ಪಾಠ ಕಲಿಸುವಂತಿದ್ದವು, ಆಸೆ ಹುಟ್ಟಿಸುತ್ತಿದ್ದವು ಹೀಗೆ ಆಶಿಸಲು-ಏನೇ ಬರಲಿ, ಏನೇ ಆಗಲಿ ಮುಂದಿನ ಜೀವನ ಹಕ್ಕಿಯಂತಿರಲಿ, ಅಲ್ಲಲ್ಲ ಹಕ್ಕಿಯೇ ಆಗಲಿ ಎಂದುಕೊಳ್ಳುತ್ತಿದ್ದೇನೆ. 

ಮೂರು ದಿನಗಳ ಲಿಟಲ್ ಅಂಡಮಾನ್ ವಾಸ್ತವ್ಯದ ಬಳಿಕ ಮತ್ತೆ ಹಡಗನ್ನೇರಿ ಪೋರ್ಟ್ ಬ್ಲೇರಿಗೆ ಬೆಳಿಗ್ಗೆ ಮರಳಿದೆವು. ಬೆಳಿಗ್ಗೆ ಸ್ವಲ್ಪ ತಡವಾಗಿ ಹಕ್ಕಿಗೆ ಹೊರಟೆವು. ನಮ್ಮ ತಂಡದವರಿಗೆ ಮ್ಯಾಗ್ರೋವ್ ವಿಷಲರ್ ಬೇಕೆಂದು ಅರಸುತ್ತಿದ್ದರೆ ನಾನು ಬಿಳಿ ಕಾಲರಿನ ಮಿಂಚುಳ್ಳಿಯ ಹಿಂದೆ ಬಿದ್ದೆ. ರಾತ್ರಿ ಅಂಡಮಾನ್ ಸ್ಕಾಪ್ಸ್ ಗೂಬೆಗಾಗಿ ಹೋದೆವು. ಮರುದಿನ ಅಂಡಮಾನ್ ಕ್ರೇಕಿಗಾಗಿ ಶೋಲ್ ಬೇಗೆ ಹೋದರೂ ನಿರರ್ಥಕ ಪ್ರಯತ್ನ. ನಂತರ ಅಂಡಮಾನ್ ಟೇಲ್ ಮುಂತಾದವುಗಳ ಹಿಂದೆ ಬಿದ್ದರು. ಮಧ್ಯಾಹ್ನ ಕಡಲ ತೀರದಲ್ಲಿ ಕೆಲವು ಹಕ್ಕಿಗಾಗಿ ಹುಡುಕಾಟ ಮುಗಿಸಿ ಪ್ರವಾಸದ ಕೊನೆಯ ಸೆಷನ್ ಮುಗಿಸಿದೆವು. ಒಂಬತ್ತು ದಿನಗಳಲ್ಲಿ oriental reed warbler, andaman barn owl, chinese sparrow hawk, wood sandpiper, common ringed plover, kentish plover, pacific swallow, long toed stint, frickle breasted wood pecker male-female, garganey, chinese pond heron ಲೈಫರಾಗಿ ಸಿಕ್ಕವು. ಅದರಲ್ಲಿ ಎರಡು ದಿನದ ಎರಡು ಸೆಷನ್ ಲಿಟಲ್ ಅಂಡಮಾನಿಗೆ ಹಡಗಿನ ಪ್ರವಾಸಕ್ಕೆ ಮೀಸಲಾಗಿತ್ತು. ನನ್ನ ಕಡಲ ನೀರಿನ ಪ್ರವಾಸ ಮುಗಿಸಿ ಮರಳಿ ಮನೆಗೆ ಬಂದೆ.ಮೂರನೆಯ ಸಲ ಅಂಡಮಾನಿಗೆ ಹೋಗುವ ಪ್ಲ್ಯಾನ್ ಮಾಡಿದ್ದೆ. ಮೊಮ್ಮಗಳಿಗೆ ಸ್ಕೂಬಾ ಡೈವಿಂಗ್ ಆಸೆ ಹುಟ್ಟಿತ್ತು. ವಿಕ್ರಂ ಶಿಲ್ ಬಳಿ ಈ ವಿಷಯ ಮಾತಾಡಿದಾಗ ಬನ್ನಿ ವ್ಯವಸ್ಥೆ ಮಾಡಿಕೊಡುವೆ ಎಂದರು. 2020ರ ಏಪ್ರಿಲ್‌ನಲ್ಲಿ ಹೋಗಲಿಕ್ಕೆ ಸಿದ್ಧತೆ ಮಾಡಿಕೊಳ್ಳುವಷ್ಟರಲ್ಲೇ ಕೊರೊನಾ ಮಾಯೆ ಜಗತ್ತನ್ನೇ ಆವರಿಸಿದ್ದರಿಂದ ಮನೆ ಬಿಟ್ಟು ಹೋಗುವುದೂ ಅಸಾಧ್ಯವಾಗಿ ಅದು ಕೈಗೂಡಲಿಲ್ಲ. ಆದರೂ ಶಿಲ್ ಬಳಿಯಲ್ಲಿ ನಿಕೋಬಾರ್ ಪಿಜಿನ್ನಿಗಾಗಿ ಇಟ್ಟ ಕೋರಿಕೆ ಇನ್ನೂ ಬಾಕಿಯಿದೆ, ಕಾಯುತ್ತಿದ್ದೇನೆ.

ಇನ್ನು ಮುಂದಿನ ವಾರಕ್ಕೆ|

‍ಲೇಖಕರು avadhi

April 9, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: