ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಉತ್ಕಲದಲ್ಲಿ ಖಗಾನ್ವೇಷಣೆ ಭಾಗ -3…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

14.3

ಮತ್ತೆ ಉತ್ಕಲ

ಮಂಗಲಜೋಡಿ-ಬಿರತಕನ್ನಿಕಾ ಬಾ ಬಾ ಎಂದು ಕರೆಯುತ್ತಿದ್ದಂತೆ ಮುಂದಿನ ವರ್ಷದೊಳಗೆ ಅಂದರೆ ೨೦೧೯ರ ಜನವರಿಯಲ್ಲಿ ಮತ್ತೊಂದು ಯಾತ್ರೆಯ ಅವಕಾಶ ಅರಸಿ ಬಂದಿತು. ಖುಷ್ಬೂ `ಅಮ್ಮಾ ನಾವು ಮೂವರೂ ಮಂಗಲಜೋಡಿ, ಬಿತರ್‌ಕನಿಕಾ ಟೂರ್ ಮಾಡೋಣ, ಬರುವಿರಾ ಎಂದ ಕೂಡಲೆ ಹೊರಟುನಿಂತೆ. ಮಂಗಲಜೋಡಿಗೆ ಮೂರುದಿನ, ಬಿತರ್‌ಕನಿಕಾ ಎರಡು ದಿನದ ಪ್ರವಾಸ ಎಂದು ನಿರ್ಧರಿಸಿದ್ದರು. ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದೆ.  ನಡುರಾತ್ರಿ ದೆಹಲಿಗೆ ತಲುಪಿ ಅಲ್ಲಿಂದ ಅವರಿಬ್ಬರ ಜೊತೆ ಭುವನೇಶ್ವರಕ್ಕೆ ಹೋಗಬೇಕಿತ್ತು. ಆದರೆ ಅಂದುಕೊಂಡ ಹಾಗೆ ಆದರೆ ನಾವೇಕೆ ಮನುಜರು, ದೇವರೆ ಆಗಿಬಿಡುತ್ತೇವೆ.

ನನ್ನ ಸ್ನೇಹಿತನಂತೆ ಇದ್ದ, ಬಾಲ್ಯದಿಂದ ನನ್ನನ್ನು ಎತ್ತಿ ಆಡಿಸಿದ್ದ ಅಮೆರಿಕಾದಲ್ಲಿದ್ದ ಸೋದರಮಾವ/ಭಾವ ಜನವರಿ ಒಂದರಂದು ತೀರಿಹೋಗಿದ್ದರು. ನಾನು ಪಯಣಿಸಬೇಕಿದ್ದ ದಿನ ಅವರ ನೆನಪಿಗಾಗಿ ನಮ್ಮೂರಿನಲ್ಲಿ ಕಾರ್ಯ ಇರಿಸಿಕೊಂಡಿದ್ದೆವು. ಅದರಲ್ಲಿ ಭಾಗಿಯಾಗಿ ಅವರಿಗೆ ನನ್ನ ಕೊನೆಯ ನಮನ ಸಲ್ಲಿಸಿದೆ. ಆ ರಾತ್ರಿ ಬೆಂಗಳೂರಿಗೆ ಹೊರಟು ಮರುದಿನ ಬೆಳಗ್ಗಿನ ವಿಮಾನವೇರಿ ಒಂದು ದಿನ ತಡವಾಗಿ ನೇರವಾಗಿ ಭುವನೇಶ್ವರಕ್ಕೆ ಹೊರಟೆ. ಭುವನೇಶ್ವರದಲ್ಲಿಳಿದು ಮಂಗಳಜೋಡಿಗೆ ತಲುಪಿ ಅಲ್ಲಿನ ಎರಡು ದಿನ ಹಕ್ಕಿ ಪ್ರವಾಸಕ್ಕೆ ರಾಹುಲ್-ಖುಷ್ಬೂ ಜೊತೆಗೆ ಕೂಡಿಕೊಂಡೆ. ಅಷ್ಟರ ಹೊತ್ತಿಗೆ ಅವರಿಬ್ಬರೂ ಒಂದು ದಿನ ಮಂಗಲಜೋಡಿಯಲ್ಲಿ ಛಾಯಾಗ್ರಹಣ ಮಾಡಿದ್ದರು.

ನನ್ನ ಕಳೆದ ಸಲದ ಒರಿಸ್ಸಾ ಟೂರ್ ವ್ಯವಸ್ಥೆಯನ್ನು ಮಾಡಿದ್ದ ಮಂಗಳಜೋಡಿ ಹಾಗೂ ಬಿತರ್‌ಕನಿಕಾ ಹಕ್ಕಿಟೂರ್ ಸ್ಪೆಶಲಿಷ್ಟ್ ಅನುಪಮ್‌ದಾಸ್ ಸುಸೂತ್ರವಾಗಿ ಹಕ್ಕಿ ಛಾಯಾಗ್ರಹಣಕ್ಕೆ ಮಾರ್ಗದರ್ಶಿಸಿ ಜೊತೆಗಿದ್ದರು. ಭುವನೇಶ್ವರದ ಹಕ್ಕಿಛಾಯಾಗ್ರಾಹಕರಾದ ಪಂಚಮಿ ಮನು ಉಕಿಲ್ ಹಾಗೂ ಅವಿನಾಶ್ ಖೇಮ್ಕ ರಾಹುಲ್–ಖೂಷ್ಬೂ ಶರ್ಮಾರ ಹಕ್ಕಿ ಗೆಳೆಯರು. ಖೇಮ್ಕ ಮೂಲಕ ರಾಹುಲ್ ಒರಿಸ್ಸಾ ಟೂರನ್ನು ವ್ಯವಸ್ಥೆಗೊಳಿಸಿದ್ದರು. ವಿಶ್ವದ ಹಲವು ಹತ್ತು ಕಡೆ ಫೋಟೋಗ್ರಫಿ ಮಾಡಿದ ರಾಹುಲ್, ಖುಷ್ಬೂಗೆ ಮಂಗಳಜೋಡಿ-ಬಿತರಕನ್ನಿಕಾ ಹೊಸದೂ ಆಗಿರಲಿಲ್ಲ.  ಅವರಿಬ್ಬರೆ ಒರಿಸ್ಸಾ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿ ಕೊನೆ ಗಳಿಗೆಯಲ್ಲಿ ನನ್ನನ್ನೂ ಸೇರಿಸಿಕೊಂಡಿದ್ದರು. ಅವರ ತೀರ್ಮಾನಗಳಂತೆ ಪ್ರವಾಸಗಳ ರೂಪುರೇಷೆ ಇತ್ತು. ಸ್ಥಳೀಯವಾಗಿಯೂ ಹಕ್ಕಿಗೈಡನ್ನು ನೇಮಿಸಿಕೊಳ್ಳಲಿಲ್ಲ.

ದೋಣಿಯೇರಿ ಸಾಗುವುದು, ಹಕ್ಕಿ ಕಂಡ ಕಡೆಗಳಿಗೆ ಹೋಗುವುದು, ಅಲ್ಲಿ ಚಿತ್ರ ತೆಗೆಯುವುದು. ನಿರ್ದಿಷ್ಟವಾದ ಹಕ್ಕಿಗಳ ಗುರಿ ಇರಲಿಲ್ಲ. ನಾವಂತೂ Freelance journalist, photographer ತರಹ ಆಗಿದ್ದೆವು. ಬಂದ ದಿನ ಮಧ್ಯಾಹ್ನ ಮೊದಲ ಸೆಷನ್ ಮಾಡಿದೆ. ಹಿಂದಿನ ಸಲ ಬಂದಿದ್ದಾಗ ಕಣ್ಣಿಗೆ ಬಿದ್ದವುಗಳಲ್ಲಿ ಬಹುತೇಕ ಲೈಫರ್ ಆಗಿದ್ದರೂ ಈ ಸಲ ಅವೆಲ್ಲ ಚಿರಪರಿಚಿತವಾಗಿದ್ದವು. grey headed lapwing, baillons crake ಮಾತ್ರ ಆ ದಿನದ ಲೈಫರ್ ಆಗಿದ್ದವು. ಸಂಜೆ ಐದನ್ನು ಮುಳ್ಳು ಮುಟ್ಟುವುದರೊಳಗೆ ಸೆಷನ್ ಮುಗಿಸಿ ಗಾಡ್ವಿಟ್ ಕಾಟೇಜಿಗೆ ಸೇರಿಕೊಂಡೆವು. ಸ್ವಲ್ಪ ನಿಧಾನಿಸಿದ್ದರೆ ಸಂಜೆ ಹೊಂಬೆಳಕಿನಲ್ಲಿ ಹಕ್ಕಿಗಳ ಚಿತ್ರ ತೆಗೆಯಬಹುದಿತ್ತು. ಆದರೆ ಅವರಿಬ್ಬರಿಗೂ ಅದರಲ್ಲಿ ಆಸಕ್ತಿ ಇರಲಿಲ್ಲ. ನಾನೂ ಒತ್ತಾಯಿಸಲಿಲ್ಲ, ಆಸೆ ಇದ್ದರೂ. ಕೆಲವು ಸಲ ಹೀಗಾಗುವುದುಂಟು.

ಮರುದಿನ ಬೆಳಿಗ್ಗೆ ಆರು ಗಂಟೆಗೆ ದೋಣಿಯೇರಿ ಹಕ್ಕಿ ಹಿಂದೆ ಬಿದ್ದೆವು. ರಾಹುಲ್ ಅಂದು ಬೆಳಿಗ್ಗೆ ಏಳು ಗಂಟೆಯಿಂದ ಹತ್ತು ಗಂಟೆಯವರೆಗೆ ಒಂದೇ ಸಮನೆ Baillons crake ಹಿಂದೆ ಬಿದ್ದುದ್ದರಿಂದ ಮತ್ತೆ ಅವುಗಳ ಚಿತ್ರ ಹಿಡಿದೆ. ನಂತರದ ಅರ್ಧ ಗಂಟೆಗೆ ಬಿಡಾರ ತಲುಪಿದ್ದೆವು. ಮತ್ತೆ ಮಧ್ಯಾಹ್ನ ಎರಡೂವರೆಗೆ ಮಧ್ಯಾಹ್ನದ ಸೆಷನ್ ಆರಂಭಿಸಿ ಅದದೇ ಹಕ್ಕಿಗಳ ಚಿತ್ರ ತೆಗೆದು ಐದು ಗಂಟೆಗೆಲ್ಲಾ ಸ್ಥಳ ಬಿಟ್ಟೆವು. ಪೂರ್ವ ಭಾರತದ ಭಾಗದಲ್ಲಿ ಸೂರ್ಯಾಸ್ತಮಾನ ಸ್ವಲ್ಪ ಬೇಗ ಆಗುವುದರಿಂದ ಹೆಚ್ಚು ಹೊತ್ತು ಫೋಟೋಗ್ರಫಿ ಆಗದು. ಕೊನೆಯ ದಿನ ಬೆಳಗ್ಗಿನ ಸೆಷನ್ ಆರೂವರೆಗೆ ಶುರು ಮಾಡಿ ಒಂಬತ್ತೂವರೆಗೆ ಮುಕ್ತಾಯ ಮಾಡಿ ಭುವನೇಶ್ವರದತ್ತ ಹೊರಡಲು ತಯಾರಾಗಲು ಕಾಟೇಜಿಗೆ ಮರಳಿದೆವು. ಒಂದೆರಡು liferಗಳ ಒಳ್ಳೆಯ ಫೋಟೊ ತೆಗೆಯಲು ಸಾಧ್ಯವಾದ ಈ ಸಲದ ಮಂಗಳಜೋಡಿ ಪ್ರವಾಸ ಮೊದಲ ಟೂರಿನಷ್ಟು ಫಲಪ್ರದ ಪ್ರವಾಸ ಎನ್ನಿಸಲಿಲ್ಲ. 

ಮಂಗಳಜೋಡಿಗೆ ವಿದಾಯ ಹೇಳಿ ಭುವನೇಶ್ವರಕ್ಕೆ ಬಂದ ನಮಗೆ ಪಂಚಮಿ, ಅವಿನಾಶ್ ಖೇಮ್ಕ ಹೊಟೇಲಿನಲ್ಲಿ ಸುಗ್ರಾಸ ಭೋಜನ ಕೊಡಿಸಿದ್ದು ನೆನಪಿನಲ್ಲಿದೆ. ಅವಿನಾಶ್ ಖೇಮ್ಕ ಮಂಗಳಜೋಡಿಯ ಹಕ್ಕಿ ಫೋಟೋಗ್ರಫಿಗೆ ಸಂಬಂಧಿಸಿದಂತೆ ಸೊಗಸಾಸ ಕಾಫಿ ಟೇಬಲ್ ಪುಸ್ತಕ ಮಾಡಿದ್ದರು. ನನಗೊಂದು ಹಾಗೂ ರಾಹಲ್‌ಗೊಂದು ಪುಸ್ತಕದ ಕೊಡುಗೆಯನ್ನೂ ಕೊಟ್ಟರು. ಆದರೆ ಅದು ಮಂಡ್ಯಕ್ಕೆ ಬರದೆ ಖುಷ್ಬೂ ಕೈಸೇರಿ ಅವರ ಸತ್ತಾಲಿನಲ್ಲಿದ್ದ ಪುಸ್ತಕಗಳ ಸಂಗ್ರಹದ ಜೊತೆಗೂಡಿತು ಅಷ್ಟೆ. ಖೇಮ್ಕ ಅವರ ಪುಸ್ತಕ ನನ್ನ ಕೈಸೇರಿಯೂ ನನ್ನನ್ನು ಸೇರದೆ ಹೋದದ್ದಕ್ಕೆ ಇಂದಿಗೂ ನೋವಿದೆ. 

ಭುವನೇಶ್ವರದಿಂದ ಇಳಿಸಂಜೆಗೆ ಬಿತರ್‌ಕನ್ನಿಕಾ ತಲುಪಿದೆವು. ಕಳೆದ ಸಲ ಉಳಿದುಕೊಂಡಿದ್ದ ಫಾರೆಸ್ಟ್ ರೆಸ್ಟ್ ಹೌಸಿನಲ್ಲಿ ಬಿಡಾರದ ವ್ಯವಸ್ಥೆ ಆಗಿತ್ತು. ರಾಹುಲ್ ಬಿತರಕನ್ನಿಕಾ ಪ್ರವಾಸಕ್ಕೆ ನ್ಯಾಚುರಲಿಸ್ಟ್ ಬಿಜಯಕುಮಾರ್ ದಾಸರನ್ನು ಮಾರ್ಗದರ್ಶಕ್ಕೆ ಗೊತ್ತುಪಡಿಸಿದ್ದರು. ಅವರ ನೇತೃತ್ವದಲ್ಲಿ ಆ ರಾತ್ರಿ ಹಾಗೂ ಬೆಳಗ್ಗಿನ ಜಾವ ಮೂರು ಗಂಟೆ ಹೊತ್ತಿನಲ್ಲಿ leopard catಗಾಗಿ ಹೋಗಿ ಫೋಟೋಗ್ರಫಿ ಮಾಡಿದ್ದರು. ನಾನಂತೂ ಕೋಣೆ ಬಿಟ್ಟು ಅಲುಗಾಡಲಿಲ್ಲ. ದಾರಿಯಲ್ಲಿ ಎದುರಿಗೆ ಬಂದರೆ ಮಾತ್ರ ಪ್ರಾಣಿಗಳು, ಅದಕ್ಕಾಗಿ ಹುಡುಕಿಕೊಂಡು ಹೋಗಲ್ಲ. 

ಬೆಳಗಿನ ಜಾವವೇ ಬೆಕ್ಕಿಗಾಗಿ ಅವರಿಬ್ಬರೂ ಎದ್ದು ಹೋಗಿದ್ದುದರಿಂದ ಅವರು ರೆಡಿಯಾಗಿ ಹೊರಡುವುದು ತಡವಾಯಿತು. ಬೆಳಿಗ್ಗೆ ಏಳೂವರೆಗೆ ಬೋಟೇರಿ ಟಾಪಿನಲ್ಲಿ ಮೂವರೂ ಆಸೀನರಾಗಿ ಬಿತರಕನ್ನಿಕಾದ ಮೊದಲ ಸೆಷನ್ನಿಗೆ ಸಜ್ಜಾದೆವು. ಹಿಂದಿನ ಪ್ರವಾಸದಲ್ಲಿ ಏಳು ಕಿಂಗ್‌ಫಿಷರುಗಳ ಫೋಟೊ ತೆಗೆದಿದ್ದರೂ ಅವನ್ನು ಮತ್ತೆ ತೆಗೆಯಲು ಸಡಗರಿಸುತ್ತದೆ. ಬೆಳಿಗ್ಗೆಯ ದೋಣಿಯಾನದಲ್ಲಿ ಕೆಲವು ಮಿಂಚುಳ್ಳಿಗಳು ಸಿಕ್ಕವು. ಆದರೂ ಈ ಸಲ ಮುಖ್ಯವಾದ ಗುರಿ mangrove pitta. ಇಂಡಿಯನ್ ಪಿಟ್ಟಾಗಿಂತ ಸ್ವಲ್ಪ ವಿಶಿಷ್ಟವಾದ ಅದರ ಹುಡುಕಾಟದಲ್ಲಿದ್ದೆ. ಕೊನೆಗೆ ಅದು ಸುಡು ಬಿಸಿಲಿನಲ್ಲಿ ಕೆಲ ಕ್ಷಣಗಳ ಸಿಕ್ಕು ಪೊದೆಗಳ ಹಿಂದೆ ಮರೆಯಾಯಿತು. ಬೇಕಾದಂತೆ ಸಿಗಲಿಲ್ಲವೆಂಬ ಬೇಸರ ಇನ್ನೂ ಇದೆ. 

ಮಧ್ಯಾಹ್ನ ಊಟದ ಬಳಿಕ ಇನ್ನೊಂದು ಸೆಷನ್ನಿಗೆ ಸಿದ್ದವಾಗಿ ದೋಣಿಯೇರಿದೆವು. ಅದು ಹೋಗುತ್ತಲೇ ಇದೆ. ಹಕ್ಕಿ ಕಂಡಾಗಲೂ ನಿಲ್ಲಿಸಲಿಲ್ಲ. ಇದೇನು ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎನ್ನುವುದೇ ಗೊತ್ತಾಗದೆ ಅವರನ್ನು ಕೇಳಿದಾಗ fishing catಗೆ ಹೋಗುತ್ತಿದ್ದೇವೆ ಅಮ್ಮಾ ಎಂದರು. ಹಕ್ಕಿಪ್ರಿಯಳಾದ ನನಗೆ ಕ್ಯಾಟ್ ಗೀಟುಗಳ ಬಗ್ಗೆ ಆಸಕ್ತಿಯಿರಲಿಲ್ಲ, ನಮ್ಮ ಟೂರ್ ಪ್ಲ್ಯಾನ್ ಬಗ್ಗೆಯೂ ನನಗೆ ಪೂರ್ಣವಾಗಿ ತಿಳಿಸಿರಲಿಲ್ಲ. ಹಕ್ಕಿ ಬಿಟ್ಟು ಬೆಕ್ಕಿನ ಹಿಂದೆ ಬಿದ್ದದ್ದು ಸ್ವಲ್ಪ ಬೇಸರವನ್ನೂ ತರಿಸಿತು. 

ಆದರೆ ದೋಣಿ ಪ್ರಯಾಣ… ಬೆಳದಿಂಗಳ ಹಿಂದಿನ ರಾತ್ರಿ. ಕನಸಿನಲ್ಲೂ ಕೈಗೂಡದ ಪ್ರಯಾಣ. ಮಧ್ಯಾಹ್ನ ಎರಡೂವರೆಗೆ ದೋಣಿ ಏರಿದ್ದು. ಏಳು ಗಂಟೆಗೆ ಫಿಶಿಂಗ್ ಕ್ಯಾಟ್ ಇರುವ ನೆಲೆ ತಲುಪುತ್ತೇವೆ ಎಂದರು. ಆದರೆ ಹುಣ್ಣಿಮೆಯಿಂದಾಗಿ ಹಿನ್ನೀರಿನ ಭರತ ಹೆಚ್ಚಿತ್ತು, ದೋಣಿ ಪ್ರಯಾಣ ನಿಧಾನವಾಯಿತು. ಸಂಜೆಯಿಂದ ಡೆಕ್ ಮೇಲೆ ಅಡ್ಡಾಡಿ ಹಾಗೆಯೇ ಅಡ್ಡಾಗಿದ್ದೆ, ಆದರೆ ಚಳಿ ಹೆಚ್ಚಾಗಿ ಒಳಗೆ ಬಂದೆ. ಮಲಗಲು ದೋಣಿಯೊಳಗಿನ ಕಿರಿದಾದ ಸೀಟು ಇಕ್ಕಟ್ಟಾಗಿತ್ತು. ಬೆನ್ನು ನೋವು ಶುರುವಾಯಿತು. ಮಲಗುವ ಏಳುವ ಸರ್ಕಸ್ ನಡೆಯುತ್ತಿತ್ತು. ನಿರಂತರವಾಗಿ ಬರುತ್ತಿದ್ದ ಡೀಸೆಲ್ ವಾಸನೆಗೆ ಹೊಟ್ಟೆ ತೊಳಸುತ್ತಿತ್ತು. ನೀರಯಾನದ ನಡುವೆಯೇ ದಾರಿಯಲ್ಲೊಂದೆಡೆ ದೋಣಿಯಿಂದ ಇಳಿದು ಪ್ರಕೃತಿಯ ಕರೆಯನ್ನೂ ಪೂರೈಸಿದ್ದಾಯ್ತು. ಅದಾಗದಿದ್ದರೆ ಬಹುಶಃ ಇಡೀ ರಾತ್ರಿ ಭಯಂಕರವಾಗಿ ಒದ್ದಾಡಬೇಕಿತ್ತು. ಅಂತೂ ರಾತ್ರಿ ಹತ್ತೂವರೆಗೆ ಗಂಟೆ ಸುಮಾರಿಗೆ ಬೆಕ್ಕು ಅಡ್ಡಾಡುವ ಜಾಗ ತಲುಪಿದ್ದಾಯ್ತು.

ಆ ಕತ್ತಲಲ್ಲಿ ಇವರು ಯಾವ ಬೆಕ್ಕಿನ ಚಿತ್ರ ತೆಗೆಯುತ್ತಾರಪ್ಪ ಎಂಬ ಕುತೂಹಲವಿತ್ತು. ಆಗಾಗ್ಗೆ ಬಿಜಯಕುಮಾರ್ ಟಾರ್ಚ್ ಬಿಟ್ಟು ಬೆಕ್ಕು ಕಂಡೀತೆ ಎಂದು ಹುಡುಕುತ್ತಿದ್ದರು. ಕೊನೆಗೆ ರಾತ್ರಿ ಹನ್ನೆರಡೂವರೆಯ ಸುಮಾರಿಗೆ ಬೆಕ್ಕು ಟಾರ್ಚ್ ಬೆಳಕಿನಲ್ಲಿ ಕಾಣಿಸಿ ನಿಧಾನವಾಗಿ ನದಿಯಂಚಿಗೆ ಬಂತು. ಆಚೆ ಇವರಿಬ್ಬರು ಅವರ ಹತ್ಯಾರಗಳೊಡನೆ ಸಜ್ಜಾಗಿದ್ದರು. ಒಬ್ಬರದ್ದು ೮೦೦ mm, ಇನ್ನೊಬ್ಬರದ್ದು ೨೦೦-೪೦೦ mm. ನನ್ನದು ೬೦೦ ಜೊತೆಗೆ 1.4 ಟಿ.ಸಿ. ೧೦೦-೪೦೦ ಎರಡೂ ರೆಡಿ ಇದ್ದವು. ೮೦೦ mm ರೇಂಜಿಗೆ ಬರಲೇ ಇಲ್ಲ. ನನ್ನದು ತಕ್ಕಮಟ್ಟಿಗೆ ಬಂದಿತು. ಆದರೆ ಬೆಕ್ಕು ನಮ್ಮೆದುರಿಗೆ ಮೀನಿನ ಬೇಟೆ ಆಡದೆ ನಡೆದು ಮರೆಯಾಗಿ ಹೋಯಿತು. ಆಮೇಲೂ ಸ್ವಲ್ಪ ಹೊತ್ತು ಮತ್ತೆ ಬರಬಹುದೆಂದು ಕಾಯುತ್ತಿದ್ದು ಮರಳುವ ಹಾದಿ ಹಿಡಿದೆವು. ನಡುರಾತ್ರಿಯ ಆ ಚಳಿಯಲ್ಲಿ ನಡನಡುಗುತ್ತಾ ದೋಣಿಯಾನ ಮುಗಿಸಿ ಇಳಿದಾಗ ಬೆಳಗಿನ ಜಾವ ಐದು ಸಮೀಪಿಸಿತ್ತು. ಅಲ್ಲಿಂದ ಒಂದೂವರೆ ಕಿ.ಮೀ ನಡುಗುತ್ತಾ ನಡೆದು ರೂಮು ಸೇರಿದಾಗ ಐದೂವರೆ. ಕೊಠಡಿ ಸೇರಿದ್ದೆ ತಡ ನಿದ್ರೆಗೆ ಶರಣಾದೆವು.

ನಾನು ಮಲಗಿದರೂ ಬೆಳಿಗ್ಗೆ ಹಕ್ಕಿ ಸೆಷನ್ ಇರುತ್ತದೆಂದು ಬೇಗ ಎದ್ದು ರೆಡಿಯಾಗಿದ್ದೆ. ಆದರೆ ಅವರಿಬ್ಬರೂ ಏಳುವಾಗ ಮುಳ್ಳು ಹನ್ನೆರಡನ್ನು ಸಮೀಪಿಸಿತ್ತು. ಬೆಳಗಿನ ಕಿಂಗ್‌ಫಿಷರ್ ದೋಣಿಯಾನ ರದ್ದಾಯಿತು. ಆವಾಗ ನಾನು ಬೈದುಕೊಂಡಿದ್ದು ಹಾಳಾದ್ ಮೀನು ಹಿಡಿಯುವ ಬೆಕ್ಕಿನಿಂದ ನನ್ ಮಿಂಚುಳ್ಳಿ ನೋಟದ ಒಂದು ಯಾನ ಹಾಳಾಯ್ತು ಎಂದು. ಆದರೂ ಈ ಬೆಕ್ಕಿಗಾಗಿ ಬೆಳದಿಂಗಳಿನ ಯಾನದ ಅನುಭವವೂ ರೋಮಾಂಚಕವೇ ಸರಿ. ಅವರು ಏಳುವ ತನಕ ಸುತ್ತಮುತ್ತ ಅಡ್ಡಾಡಿದೆ ಕ್ಯಾಮೆರಾ ಹಿಡಿಯದೆ. ಮಲಗಿ ಎದ್ದವರು ಸಿದ್ಧವಾಗಿ ಊಟ ಮುಗಿಸಿ ಮಧ್ಯಾಹ್ನದ ಸೆಷನ್ನಿಗೆ ಮೂರು ಗಂಟೆಗೆ ದೋಣಿಯೇರಿದೆವು. ರಾಹುಲನಿಗೆ ಇರುಳ ನಿದ್ರೆ ಸಾಲದೆ ನಿಮಿಷಕ್ಕಿಪ್ಪತ್ತು ಸಲ ಆಕಳಿಸುತ್ತಿದ್ದ. ಒಂದೂವರೆ ತಾಸಿನ ಸುತ್ತಾಟದ ಬಳಿಕ ಕೆಳಗಿಳಿದು ಬಂದೆವು.

ಮರುದಿನ ಬೆಳಿಗ್ಗೆಯೂ ಏಳುವರೆಯಿಂದ ಒಂಬತ್ತು ಗಂಟೆಯ ತನಕ ದೋಣಿಯಾನ ಮಾಡಿದೆವು. ಮಾಡಿದೆವು ಅಷ್ಟೆ.Black capped kingfisher ನನಗೆ ಹೊಸದಲ್ಲ, ಕೊನೆಯ ದಿನದ ಕೊನೆಯ ದೋಣಿ ಪಯಣ ಮುಗಿಸಿ ಇಳಿದಾಣದಲ್ಲಿ ಇಳಿಯುವ ಮುನ್ನ ಹಾರಿ ಬಂದು ಬೋರ್ಡ್ ಮೇಲೆ ಕುಳಿತು ಊರಗಲ ಬಾಯ್ತೆಗೆದಾಗ ಮತ್ತೆ ಬರಲು ಮರೆಯಬೇಡ ಎಂದು ಕೂಗಿ ಕರೆದಂತೆ ಕೇಳಿಸಿತು. ಅದಕ್ಕೆ ಬೈ ಬೈ ಹೇಳಿ ಭುವನೇಶ್ವರದತ್ತ ಹೊರಟ ನಾವು ಏರಿದ್ದು ದೆಹಲಿಯ ವಿಮಾನಕ್ಕೆ ಭರತಪುರದ ಪಕ್ಷಿಯಾತ್ರೆಗಾಗಿ.. ಮತ್ತೊಂದು ಉತ್ಕಲದ ಯಾತ್ರೆಯ ಆಲೋಚನೆ ಸಧ್ಯಕ್ಕಿಲ್ಲ. ಆದರೆ ಅನುಪಮ್‌ದಾಸ್ ತಮ್ಮ Deep Forest Farmstayಗೆ ಒಮ್ಮೆಯಾದರೂ ಬರಬೇಕೆಂದು ಆಹ್ವಾನಿಸಿದ್ದಾರೆ. ಹಕ್ಕಿಪಯಣ ಆರಂಭಿಸಿದ ಬಳಿಕ ಕ್ಯಾಮೆರಾ ಲೆನ್ಸ್ ಇಲ್ಲದೆ ಎಲ್ಲಿಯೂ ಯಾವ ಊರಿಗೂ ಹೋಗಿಲ್ಲ. ಒರಿಸ್ಸಾದ ಅತ್ತ ಕೋನಾರ್ಕ ಇತ್ತ ಪುರಿಯ ನೋಟಕ್ಕಾದರೂ ಬನ್ನಿ ಎಂಬ ಆತ್ಮೀಯ ಕರೆ ಅವರದ್ದಾಗಿತ್ತು. ರಸಗುಲ್ಲಾ ತಿನ್ನಲೇಬೇಕೆಂಬ ಅವರ ಸಿಹಿ ಒತ್ತಾಯಕ್ಕೆ ಆಗ ಒಪ್ಪಿರಲಿಲ್ಲ. ಲಡಾಖ್ ಘಟನೆಯ ಬಳಿಕ ಆಹಾರ ಸಂಬಂಧಿತ ಬಹುತೇಕ ನಿರ್ಬಂಧಗಳನ್ನು ಮುರಿದಿದ್ದೇನೆ, ಮತ್ತೊಮ್ಮೆ ತೊಂದರೆ ಆಗಬಾರದೆಂದು. ಆದ್ದರಿಂದ ರಸಗುಲ್ಲಾ ತಿನ್ನಲು, ಕೋನಾರ್ಕ್ ನೋಡಲು ಅನುಪಮ್‌ರ Farm stayಗೆ ಹೋಗುವ ಮನಸ್ಸಿದೆ. ಕಾಲ-ಕಾಲೂ ಎರಡೂ ಒಪ್ಪಿ ಕರೆದುಕೊಂಡು ಹೋಗುವ ಸಮಯಕ್ಕೆ ಕಾಯುತ್ತಿದ್ದೇನೆ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

March 19, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: