ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹಕ್ಕಿ ಬಯಸಿ ಹಕ್ಕಿ ಸ್ವರ್ಗದಲ್ಲಿ – 5

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

9.5

ಗಣೇಶಗುಡಿಯಲ್ಲಿ ಹಕ್ಕಿಭಕ್ತೆ

ಕಾಯುವ ತಪಕ್ಕೆ ಫಲವೂ ಸಿಕ್ಕೇ ಸಿಗುತ್ತದೆ ಎಂಬ ನಿರೀಕ್ಷೆ ಇದ್ದೇ ಇತ್ತಲ್ಲ. ತಂಗಿಗೆ ನೀನು ಮಗನ ಮನೆಗೆ ಹೋಗಲ್ವಾ ಗಣೇಶಗುಡಿಗೆ ಹೋಗಲ್ವಾ ಎಂದು ಕೇಳಿ ಕೇಳಿ ಆಕೆಯೂ ಕೊನೆಗೊಮ್ಮೆ ಒಪ್ಪಿ ಹೋಗೋಣ ಎಂದಳು. ನವೆಂಬರ್ ತಿಂಗಳಿನ ಕೊನೆಯಲ್ಲಿ ಹೋಗುವ ಎಂದುಕೊಂಡೆವು. ಆದರೆ ದುದ್ದದಲ್ಲಿ ನಡೆಯುತ್ತಿದ್ದ ಮಂಡ್ಯ ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷತೆ ವಹಿಸಲು ಬಂದ ಪ್ರೀತಿಯ ಒತ್ತಡವನ್ನು ಮೀರಲಾಗಲಿಲ್ಲ. ಡಿಸೆಂಬರ್ ಏಳರ ಸಮ್ಮೇಳನದಂದು ಏಕಾಂಗಿಯಾಗಿ ರಥವೇರಿ ದುದ್ದದಲ್ಲಿ ನಡೆದ ನನ್ನ ಮೆರವಣಿಗೆ ತಪ್ಪಿಸಲು ಆದೀತೆ! ಇಡೀ ದಿನ ವೇದಿಕೆಯಲ್ಲಿ ಆಸೀನಳಾಗಿ ಎದುರಿದ್ದ ಸಾಹಿತ್ಯದ ಪಕ್ಷಿಗಳನ್ನು ಕಾಣದೆ ಇರಲು ಆದೀತೆ!?
ವೇದಿಕೆಯಲ್ಲಿ ಕೂತು, ಎದುರಿಗೆ ಇರುವವರನ್ನು ಕಾಣುತ್ತಾ ಆಡುವ ಮಾತುಗಳನ್ನು ಕೇಳುತ್ತಾ ನಾಲ್ಕು ದಿನಕ್ಕೆ ಗಣೇಶಗುಡಿಯತ್ತ ಹೊರಡುವ ಕನಸಿನಲ್ಲಿ ಮಂಡಿಗೆ ತಿನ್ನುತ್ತಿದ್ದೆ. ಮುಖ್ಯ ಅತಿಥಿಗಳು ಮಾತಾಡುತ್ತಾ ಎದುರಿಗಿದ್ದ ಬಿಲ್ಡಿಂಗ್ ತೋರಿಸಿ ಹೊಸ ಬಿಲ್ಡಿಂಗ್ ಬಳಸದಿದ್ದರೆ ಒಳಗೆ ಜೇಡ ಬಲೆ ನೆಯ್ಯುತ್ತದೆ, ಹಕ್ಕಿಪಕ್ಷಿಗಳು ಗೂಡು ಕಟ್ಟುತ್ತವೆ’ ಎಂದರು. ಎದುರಿಗೆ ಇದ್ದ ನನ್ನ ಕಿಡಿಗೇಡಿ ಶಿಷ್ಯೆ ಚಂದ್ರಕಲಾ ಕೂಡಲೇ ವಾಟ್ಸಪ್ಪಿನಲ್ಲಿ ಮೆಸೇಜ್ ಮಾಡಿದಳುಗೂಡು ಕಟ್ಟಿ ಹಕ್ಕಿ ಪಕ್ಷಿಗಳು ಬಂದರೆ ಆಗ ನಮ್ಮ ಮೇಡಂ ಬಂದು ಹಕ್ಕಿಯ ಫೋಟೋ ತೆಗೆಯುತ್ತಾರೆ’ ಎಂದು. ಅದು ಸತ್ಯವೂ ಆಗಿದ್ದುದರಿಂದ ಮೆಚ್ಚಿ ತಲೆದೂಗಿದೆ.

ನಾನೂ ಹೊರಟೆ, ಅದೂ ಹೊರಟಿತು. ನನ್ನದಾದರೋ ಪೂರ್ವನಿಯೋಜಿತ. ಆದರೆ ಅದರದು ದಿಢೀರ್ ಆಗಮನ. ಅಮ್ಮ ಮಳೆ ಕರೆದುಕೊಂಡು ಹೋಗ್ತೀರಾ’ ಎಂದಳು ಮಗಳು. ಸಿಕ್ಕಸಿಕ್ಕವರು ಇಂತಹ ಮಳೆ ಸುರಿಯುವ ಹೊತ್ತಿನಲ್ಲಿ ಗಣೇಶಗುಡಿಗೆ ಹೋಗ್ತೀಯಾ ಎಂದು ಪ್ರಶ್ನೆಗಳ ಬಾಣ ಬಿಟ್ಟು ಕ್ಯಾಮರಾಸ್ತ್ರ ಕೈಬಿಟ್ಟು ನಿಶ್ಯಸ್ತ್ರಳನ್ನಾಗಿಸಲು ಪ್ರಯತ್ನಿಸಿದರು. ಮಳೆಯನ್ನು ಮಂಡ್ಯದಲ್ಲೇ ಬಿಟ್ಟುಹೋಗುವಾಸೆ, ಆದರೆ ಅದು ಒಪ್ಪಬೇಕಲ್ಲ ಎಂದೆ. ಸಮ್ಮೇಳನ ಮುಗಿದು ಹೋಗಲಿ ಎಂದು ಸರ್ವಾಧ್ಯಕ್ಷರು ಕಾಯ್ದು ಹೊರಟರು. ನೀನು ಯಾವಾಗ ಹೋಗ್ತೀಯಾ ನಾನೂ ಆಗಲೇ ಬರುವೆ ಎಂದು ತಡೆದಿದ್ದ ಮಳೆರಾಯ ಜೊತೆಗೆ ಸಿದ್ಧವಾದ. ಡಿಸೆಂಬರ್ ಹತ್ತಕ್ಕೆ ಬೆಂಗಳೂರು ತಲುಪಿ ಹನ್ನೊಂದರ ರಾತ್ರಿ ತಂಗಿ, ತಂಗಿಯ ಮಗ ಡಾ.ನಿರೂಪ್, ಮೊಮ್ಮಗಳು ಧ್ವನಿಯ ಜೊತೆ ದಾಂಡೇಲಿಯ ಬಸ್ ಹತ್ತುವಾಗಲೇ ಮಳೆಯಪ್ಪ ಬಿಡದೆ ಹಿಂಬಾಲಿಸಿದ. ಪಯಣದ ಉದ್ದಕ್ಕೂ ನಿದ್ದೆ ಹತ್ತಿಸಿಕೊಳ್ಳುವ ಬದಲು, ಮಳೆ ಬರುತ್ತಿದೆಯೆ ಎಂದು ಎದ್ದೆದ್ದು ಕಿಟಕಿ ನೋಡುತ್ತಿದ್ದೆ. ಹಾವೇರಿ ದಾಟಿದ ಮೇಲಂತೂ ಆತಂಕ ಹೆಚ್ಚಾಯಿತು. ಧಾರವಾಡದಲ್ಲೂ ಹನಿದಿತ್ತು, ನೆಲದ ಮೇಲೆ, ನನ್ನ ಕಣ್ಣಿನೊಳಗೆ. ಆದರೆ ಬೆಳಿಗ್ಗೆ ಏಳೂವರೆಗೆ ದಾಂಡೇಲಿಯಲ್ಲಿ ಇಳಿದಾಗ ಮಬ್ಬು ಕವಿದಿದ್ದರೂ ಮಳೆ ಇರಲಿಲ್ಲ.ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯಾ ಮಳೆರಾಯನ ಭಂಜನೆಯೆ ಭಾಗ್ಯವಯ್ಯಾ’ ಎಂದು ಗುನುಗಿಕೊಂಡೆ. ಮೊನ್ನೆ ಮಳೆ ಬಂದಿತ್ತು ನಿನ್ನೆ ಇರಲಿಲ್ಲ ಎಂದರು ಸ್ಥಳೀಯರು. ಗಣೇಶಗುಡಿಗೆ ಹಕ್ಕಿ ಭಕ್ತೆ ತಲುಪಿಕೊಂಡಳು.

ಮನೆ ತಲುಪಿದ ಕೂಡಲೇ ತಿಂಡಿ ಮುಗಿಸಿ ಆಸ್ಪತ್ರೆಗೆ ಹೋಗಲು ಸಿದ್ಧವಾದ ಡಾ.ನಿರೂಪ್ ಇವತ್ತು ಹಕ್ಕಿಗೆ ಬೇಡ, ರೆಸ್ಟ್ ಮಾಡಿ’ ಎಂದ. ತಂಗಿಯೂಇವತ್ತು ಬೇಡ, ಮಲಗಿ ರಿಲ್ಯಾಕ್ಸ್ ಮಾಡಿ’ ಎಂದಳು. ಹಕ್ಕಿಗೆ ಹೋಗೋದೆ ದೊಡ್ಡ ರೆಸ್ಟ್ ಮತ್ತು ರಿಲ್ಯಾಕ್ಸ್. ಹಕ್ಕಿ ಬಂದರೆ ಹಿಡಿತೀನಿ, ಇಲ್ಲದಿದ್ರೆ ಕೂತು ತೂಕಡಸ್ತೀನಿ, ಬಿಡಪ್ಪ ಪ್ಲೀಜ್’ ಎಂದು ಗೋಗರೆದೆ. ಅವನೂ ಈ ಮೊಂಡು ಲೀಲಕ್ಕನ್ನ ರಿಪೇರಿ ಮಾಡಕ್ಕಾಗಲ್ಲ ಎಂದು ಓಲ್ಡ್ ಮ್ಯಾಗಜೈನ್ ಹೌಸಿಗೆ ಬಿಟ್ಟು ಸಂಜೆಗೆ ಕರೆದುಕೊಂಡು ಹೋಗಲು ಬರ್ತೀನಿ ಎಂದ. ನದಾಫ್ಬನ್ನಿ ಮೇಡಂ, ಇವತ್ತು ಮಳೆ ಇಲ್ಲ. ನಿನ್ನೆ ಹಕ್ಕಿಗಳು ಬಂದಿರಲಿಲ್ಲ.

ಇವತ್ತು ಬರಬಹುದು’ ಎಂದರು. ಇಡೀ ದಿನ ಕಾಯ್ದರೂ ಒಂದೆರಡು ಹಕ್ಕಿ ಬಂದರೂ ನಾನೇ ಪುಣ್ಯವತಿ, ಇಂದು ನಾನೇ ಭಾಗ್ಯವತಿ’ ಎಂದುಕೊಳ್ಳುವ ನನಗೆ ಬೇಸರ ಬರುವ ಛಾನ್ಸೆ ಇರಲಿಲ್ಲ.ಮೇಲೆ ಗಗನ ನೀಲತಲ, ಕೆಳಗೆ ತಿರೆಯ ಹಸುರುನೆಲ, ಸುಂದರ ಅರಣ್ಯ ರಮಣಿಯ’ ಗಿಡಮರಗಳ ನಡುವೆ ತಂಗಿ ಬರುತ್ತಾ ತಂಪಾಗಿ ಬೀಸುವ ಪರಿಶುದ್ಧ ಗಾಳಿ, ಹಸುರಿನ ಗಂಧದೌತಣಕ್ಕಿಂತ ಮಿಗಿಲಾದದ್ದು ತಾನೆ ಏನು. ನನಗೆ ಅವಸರವಿಲ್ಲ, ಮತ್ತೆ ಬೇಸರವಿಲ್ಲ…. ಕಾಯುವೆನು ನೀನೆದೆಗೆ ಬರುವನ್ನೆಗಂ’. ಅಲ್ಲವೆ… ಹಕ್ಕಿ ನನ್ನೆಡೆಗೆ.. ನಾ ಹಕ್ಕಿಯೆಡೆಗೆ ಬರುವತನಕ ಕಾಯುವುದೂ ಒಂದು ಕಾಣ್ಕೆಯೆ ಸೈ.

ಗಣೇಶಗುಡಿಯ ವಾತಾವರಣದ ಸೊಗಡು ಸೊಗಸು. ದೂರದ ದೆಹಲಿಯಿಂದ ತೃಪ್ತಿ ಉಪಾಧ್ಯೆ ಕೇವಲ ಓಲ್ಡ್ ಮ್ಯಾಗಜೈನ್ ಹೌಸಿನ ಆವರಣದಲ್ಲಿ ಕಾಲ ಕಳೆಯಲು ನೆಪಕ್ಕೆ ಚಿಕ್ಕ ಲೆನ್ಸಿನ ಕ್ಯಾಮೆರಾ ಹಿಡಿದು ಐದಾರು ದಿನ ಇದ್ದು ಹೊಸತನ ತುಂಬಿಸಿಕೊಳ್ಳಲು ಬರುತ್ತಿರುತ್ತಾರೆ. ಪ್ರತಿ ಜೀವಕ್ಕೂ ಇಂತಹ ಚೈತನ್ಯದಾಯಿ ನೆಲೆ ಸೆಲೆ ಅತ್ಯವಶ್ಯ ತಾನೆ. ಇದರಲ್ಲಿ ಹಕ್ಕಿ ಒಂದು ನೆಪ. ಕಲ್ಲುಮಣ್ಣುಗಳ ದಾರಿಯಾದರೂತೌರೂರ ದಾರೀಲಿ ಕಲ್ಲಿಲ್ಲ ಮುಳ್ಳಿಲ್ಲ ಸಾಸುವೆಯಷ್ಟು ಮರಳಿಲ್ಲ, ಬಾನಲಿ ಬಿಸಿಲಿನ ಬೇಗೆಯು ಸುಡಲಿಲ್ಲ’ ಎಂದು ಹೇಳಿಕೊಳ್ಳುವ ಅಸೀಮ ಪ್ರೀತಿ.

ಛೇರಿನಲ್ಲಿ ಕುಳಿತರೆ ಏಳುವುದು ಕಷ್ಟವೆಂದು ಅಲ್ಲಿದ್ದ ಕಟ್ಟೆಯ ಮೇಲೆ ಕೂತರೆ ಪಕ್ಕದಲ್ಲಿ ದಂಡ ಕಮಂಡಲು ಇರದ ಕ್ಯಾಮೆರಾ ಹಿಡಿದ ಹಕ್ಕಿತಪಸ್ವಿನಿ ನಾನು. ಕೂತು ಬೇಸರವಾದರೆ ಅತ್ತಿಂದಿತ್ತ ತಿರುಗಾಡಿದರೆ ಕಾಲಿಗೆ-ಕಾಯಕ್ಕೆ ಕಸರತ್ತು. ತಪಸ್ವಿನಿಯ ತಪಸ್ಸಿಗೆ ಭಂಗ ಬಾರದಿರಲಿ, ಕಟ್ಟೆಯ ಕೈಬಿಟ್ಟು ಮಾಡವನು ಏರುವ ಪಾಡು ಪಡದಿರಲಿ ಎಂದು ಉದರ ಪೋಷಣೆಗೆ ಮಧ್ಯಾಹ್ನ ಕಟ್ಟೆಗೆ ಉಣಿಸು ತಂದುಕೊಡುತ್ತಿದ್ದರು. ಏಪ್ರಿಲ್ ತಿಂಗಳಲ್ಲಿ ಬಂದಾಗ ನನ್ನನ್ನು ನಾನೇ ಖಿನ್ನತೆಗೆ ತಳ್ಳಿಕೊಂಡರೆ ಎಂಬ ತಳ್ಳಂಕದಿಂದ ಬಂದಿದ್ದೆ. ಮಾರ್ಚ್ ಮೊದಲ ವಾರದಲ್ಲಿ ಎಡಗೈ ಎಡಗಾಲಿಗೆ ಮೈಲ್ಡಾಗಿ ಸ್ಟ್ರೋಕ್ ಆಗಿತ್ತು. ಮಕ್ಕಳು ಭಯದಿಂದ ಎಲ್ಲಿಗಾದರೂ ಕಳಿಸಲು ಹಿಂದೇಟು ಹಾಕುತ್ತಿದ್ದರು. ಅವರ ಆತಂಕ ಸಹಜವೆ ಆಗಿತ್ತು. ಆದರೆ ಲೀಲಾಳನ್ನು ಕಟ್ಟಿಹಾಕಿದರೆ ಅವಳ ಬದುಕು ಕಷ್ಟ. ನಾನೂ ನಡೆದಾಡಬಲ್ಲೆ, ಒಬ್ಬಳೆ ಹೋಗಿ ಬರಬಲ್ಲೆ ಎನ್ನುವ ಆತ್ಮಸ್ಥೈರ್ಯ ತಂದುಕೊಳ್ಳಬೇಕಿತ್ತು. ಎಲ್ಲ ಸಿದ್ಧಪಡಿಸಿಕೊಂಡು ಧಾರವಾಡದ ರೈಲು ಹತ್ತಿ ಗಣೇಶಗುಡಿಗೆ ಬಂದಿದ್ದೆ. ಓಡಾಡಲೂ ಕೋಲು ಹಿಡಿದಿದ್ದೆ. ಆದರೆ ಈ ಸಲ ಕೋಲನ್ನು ಕೂಲಾಗಿ ಸೈಡಿಗಿಟ್ಟೆ, ನನಗೆ ನಾನೇ ಓಡಾಡಿದೆ… ಆಗುವ ಕಡೆಗೆಲ್ಲ. ಅದಕ್ಕೆ ತಂಗಿ ರೇಗಿಸಿದ್ದೂ ಉಂಟು’ ಅಲ್ಲೊಂದು ಹಕ್ಕಿ ಇದೆ ಎಂದರೆ ನಿಮಗೆ ಏನೂ ನೋವೂ ಕಾಣಿಸಲ್ಲ ಅಲ್ವೆ’ ಎಂದು.

ವಿನಾಯಕ, ಪುಂಡಲೀಕರು ಗಣೇಶಗುಡಿಯ ಹಕ್ಕಿ ಮಾರ್ಗದರ್ಶಕರು. ಅವರ ಬಳಿ ಕೋರಿಕೆ ಇಟ್ಟೆ, ಕಾಕರಣೆಯ ಒಳ್ಳೆಯ ಕ್ಲಿಕ್ ಬೇಕೆಂದು. ಆಗಲೆಂದು ಆಶ್ವಾಸನೆ ಇತ್ತರು. ಪರ್ಚಿಗೆ, ಅಕ್ಕಪಕ್ಕಕ್ಕೆ ಬರುವ ಹಕ್ಕಿಗಳತ್ತ ಕಣ್ಣು ಹಾಯಿಸುತ್ತಿದ್ದಂತೆ ಕಣ್ಣು ಕಾಣುವ ತನಕ, ಕಾಲು ಸಾಗುವ ತನಕ ಆಚೀಚೆ ಮರಗಳ ರೆಂಬೆ ಕೊಂಬೆಗಳಲ್ಲಿ ಕಾಕರಣೆಯ ದರ್ಶನಕ್ಕೆ ತುಂಬು ಹಂಬಲದ ನೋಟ ಬೀರುತ್ತಿದ್ದೆ. ಒಂದೆರಡು ದಿನ ಹೀಗೆ ಸ್ವಲ್ಪ ಮಬ್ಬುಮಬ್ಬಾದ ಬೆಳಕಿನಲ್ಲಿ ಬರುತ್ತಿದ್ದ ಹಕ್ಕಿಗಳನ್ನೇ ಬಂದ ಹಾಗೆಲ್ಲಾ ಕ್ಲಿಕ್ಕಿಸುತ್ತಿದ್ದೆ. ಮುಖ್ಯವಾಗಿ ಕರಿಮುಡಿ ನೀಲ ಹಾಗೂ ಬಾಲದಂಡೆಗಳೆ ಸೆಳೆತಗಳಾಗಿದ್ದವು.

ಮೂರನೆಯ ದಿನ ಗೇಟಿನ ಬಳಿ ಕ್ಯಾಮೆರಾ ಹಿಡಿದು ಕೂತಿದ್ದೆ. ರಮೇಶ್ ಮೇಡಂ ಟ್ರೋಗನ್ ಇವೆ ಬನ್ನಿ’ ಎಂದದ್ದೇ ತಡ ದಾಪುಗಾಲು ಹಾಕುತ್ತಾ ದಿಬ್ಬದ ಮೇಲೆ ಹತ್ತಿದೆ.ಇನ್ನೂ ಮೇಲೆ ಬನ್ನಿ’ ಎಂದಾಗ ಮೆಲ್ಲಗೆ ಮೆಟ್ಟಿಲನ್ನೂ ಏರಿದೆ. ಕ್ಯಾಮೆರಾ ಅಡ್ಜೆಸ್ಟ್ ಮಾಡಿ ಟ್ರೋಗನಮ್ಮನನ್ನು ಸೆರೆ ಹಿಡಿಯಲು ಹೋದರೆ ಆ ಯಮ್ಮ ಮುಖ ಅತ್ತ ಕಡೆ ಮಾಡಿ ಕೂತೇ ಬಿಟ್ಟರು.

ಕೊನೆಗೆ ಹಾರಿಯೂ ಹೋದರು. ನೀ ಬಂದಂಗೆ ಬಾರವ್ವ ಎಂದು ಅವಳನ್ನೇ ಹಿಡಿದೆ. ಇತ್ತ ಟ್ರೋಗನಪ್ಪ ದೂರದ ಮರದ ರೆಂಬಾಸೀನರಾದರು. ಕ್ಯಾಮೆರಾ ಅತ್ತ ತಿರುಗಿಸಿ ದೂರದಿಂದ ಬಂದವನೆ, ಕೊಂಬೆಯ ಏರಿದವನೆ, ತಿರುಗೋ ನನ್ನಪ್ಪ’ ಎಂದು ಬೇಡುತ್ತಾ ಕ್ಲಿಕ್ಕಿಸಿದೆ. ಅವ ಹಾರಿದ ಮೇಲೆ ನಾನು ಇಳಿಯಲೇಬೇಕಾಯಿತು. ಅರೆ, ಇಲ್ಲಿಗೆ ಹೇಗೆ ಹತ್ತಿದ್ದೆ ಎನ್ನುವುದು ನನಗೆ ಕೌತುಕ, ಇಳಿಯುವಾಗ ಮೈಯೆಲ್ಲಾ ಕಣ್ಣಾಗಿ ರಮೇಶ್ ಕೈಯಾಸರೆ ಪಡೆದು ಇಳಿದು ಉಸ್ಸಪ್ಪಾ ಎಂದೆ.ಹೇಗೆ ಹತ್ತಿದಿರಿ ಮೇಡಂ’ ಎಂದ ರಮೇಶನಿಗೆ ಹಕ್ಕಿ ಈ ಮಟ್ಟಕ್ಕೆ ನನ್ನನ್ನು ಏರುಗಳನ್ನೂ ಏರಿಸುತ್ತದಲ್ಲಪ್ಪ… ಎಂದೆ.
ದಾಂಡೇಲಿಯ ಟಿಂಬರ್ ಯಾರ್ಡಿಗೂ ಒಂದು ದಿನ ಭೇಟಿ ಕೊಡಬೇಕಿತ್ತು. ಈ ನಡುವೆ ಎಲ್ಲರ ಬಾಯಲ್ಲೂ ಗ್ರೇಟ್ ಹಾರ್ನ್ ಬಿಲ್ಲಿನ ಮಾತು ಕೇಳಿಸುತ್ತಿತ್ತು. ದಾಂಡೇಲಿಯಲ್ಲಿ ಸಿಗಬಹುದು. ಆದರೆ ಅಲ್ಲಿ ಹಣ್ಣಿನ ಸೀಜ಼ನ್ ಮುಗಿಯುತ್ತಿದೆ, ಬಾಪೇಲಿಯಲ್ಲಿ ಹಣ್ಣು ಬಿಟ್ಟಿದೆ. ಅಲ್ಲಿ ಗ್ರೇಟ್ ಮಂಗಟ್ಟೆ ಸಿಗುವ ಛಾನ್ಸ್ ಇದೆ ಎಂದರು. ಸರಿ ಒಂದು ದಿನ ಆ ಕಾರ್ಯಕ್ರಮ ಎಂದುಕೊಂಡೆ. ಆದರೆ ಸಾರಥಿ ಸಿಗಬೇಕಿತ್ತು. ಅದು ಅಷ್ಟು ಸುಲಭವಿರಲಿಲ್ಲ. ನಿರೂಪ್ ಸಾರಥಿಗಾಗಿ ಹುಡಕಾಟ ನಡೆಸಿದ್ದ.

ಗುರುವಾರ ಧ್ವನಿಗೆ ಸ್ಕೂಲ್ ಡೇ ಸಂಜೆಗೆ ಇದ್ದ ಕಾರಣ ಬೆಳಿಗ್ಗೆಯಿಂದ ನಾಲ್ಕು ಗಂಟೆಯ ತನಕ ಹಕ್ಕಿಗೆ ಕೂತಿದ್ದೆ. ನಂತರ ತಂಗಿಯ ಜೊತೆ ಸ್ಕೂಲಿನ ಕಾರ್ಯಕ್ರಮಕ್ಕೆ ಕ್ಯಾಮೆರಾ ಹಿಡಿದೆ ಹೋದೆ. ಮೊಮ್ಮಗಳು ನೀವು ಫೋಟೋ ತೆಗೆಯಲೇ ಬಾರದೆಂದು ಖಡಕ್ಕಾಗಿ ಎಚ್ಚರಿಸಿದ್ದಳು. ಬ್ಯಾಗ್ ಮರೆಯಲ್ಲಿ ಕ್ಯಾಮೆರಾ ಇರಿಸಿ ಕ್ಲಿಕ್ಕಿಸುತ್ತಿದ್ದೆ. ಅದೊಂದು ಸರ್ಕಾರಿ ಶಾಲೆ. ಶಾಲಾ ದಿನದ ಸಿದ್ಧತೆ, ಅಚ್ಚುಕಟ್ಟತನ ಯಾವುದೇ ಖಾಸಗಿ ಶಾಲೆಯ ಕಾರ್ಯಕ್ರಮಕ್ಕೂ ಕಡಿಮೆ ಇಲ್ಲದಂತೆ ಇತ್ತು. ನಾನೂ ಮೂವತ್ತೈದು ವರ್ಷ ಸರ್ಕಾರಿ ಕಾಲೇಜಿನಲ್ಲಿ ಕೆಲಸ ಮಾಡಿದವಳಾದ್ದರಿಂದ ಇದರ ಆಳ-ಅಗಲದ ಅರಿವಿತ್ತು. ಒಂದರಿಂದ ಏಳರ ತನಕದ ಕ್ಲಾಸಿನ ಬಹುತೇಕ ಎಲ್ಲ ಮಕ್ಕಳೂ ಸ್ಟೇಜ್ ಹತ್ತಿದ್ದರು. ತಮ್ಮ ಡ್ಯಾನ್ಸಿನ ಹಾಡನ್ನು ಗುನುಗಿಕೊಳ್ಳುತ್ತಿದ್ದರು.

ಇಡೀ ಗಣೇಶಗುಡಿ ಶಾಲಾ ಆವರಣದಲ್ಲಿತ್ತು. ಹತ್ತಾರು ಆಸಕ್ತರು ಮೊಬೈಲಿನಲ್ಲೇ ಡ್ಯಾನ್ಸ್ ವಿಡಿಯೋಕರಿಸುತ್ತಿದ್ದರು. ಮಕ್ಕಳೆಲ್ಲ ಬಣ್ಣಬಣ್ಣದ ದಿರಿಸು ಧರಿಸಿ ಸೊಗಸಾಗಿ ನರ್ತಿಸಿ ನೋಡುಗರ ಕಣ್ತುಂಬಿಸಿದರು. ಬಹುತೇಕ ಕಾಲೇಜು ವಿದ್ಯಾರ್ಥಿಗಳು ಸ್ಟೆಪ್ ಎಣಿಸಿಕೊಂಡು ಹಾಡಿನ ಗಂಧ ಗಾಳಿ ಗೊತ್ತಿಲ್ಲದೆ ಡ್ಯಾನ್ಸ್ ಮಾಡಿದ್ದನ್ನು ಕಂಡ ನಾನು ಮಕ್ಕಳಿಗೆ ತರಬೇತಿ ನೀಡಿದ ಶಿಕ್ಷಕರಿಗೆ ಹ್ಯಾಟ್ಸಾಫ್ ಎಂದುಕೊಂಡೆ.

ಶುಕ್ರವಾರ ಬೆಳಿಗ್ಗೆ ಮನೆ ರಸ್ತೆಯ ಏರುಹಾದಿಯಲ್ಲಿ 100-400 ಹಿಡಿದು ವಾಕಿಂಗ್ ಹೋದೆ ಏದುಸಿರು ಬಿಡುತ್ತಾ. ದೂರದಲ್ಲಿ ಹಿಲ್ ಮೈನಾ ಕಂಡರೆ ಅದನ್ನು ಹಿಡಿದೆ. ಬಳಿಕ ಓಎಂಎಚ್ ದಾರಿ ಹಿಡಿದೆ. ಮಧ್ಯಾಹ್ನ ನಾನಿರುವಲ್ಲಿಗೆ ತಂಗಿ ನಿರೂಪ್, ಧ್ವನಿ ಜೊತೆ ಬಂದಳು. ಧ್ವನಿಗೆ ಕ್ಯಾಮೆರಾ ಇತ್ತು ಇಷ್ಟ ಬಂದಂತೆ ಕ್ಲಿಕ್ಕಿಸು ಎಂದೆ. ಅವಳೊ ಅಕ್ತಂಗಿಯರ ಫೋಟೋ ಸೆರೆಹಿಡಿದಳು. ಶನಿವಾರ ಧ್ವನಿ ಸ್ಕೂಲ್ ಬಳಿಕ ಹೊರಗೆ ಹೋಗೋಣ’ ಎಂದ ಮಗ. ಓಎಂಎಚ್ ಮರೆತು ಮನೆಯ ಮುಂದಿನ ರಸ್ತೆಗೆ ಕ್ಯಾಮೆರಾ ಹಿಡಿದು ವಾಕ್ ಹೊರಟೆ. ಬಾರ್ ವಿಂಗ್ಡ್ ಫ್ಲೈಕ್ಯಾಚರ್ ಶ್ರೈಕ್ ಕಾಣಿಸಿ ಕ್ಲಿಕ್ ಮಾಡಿಕೊಂಡೆ. ಮಧ್ಯಾಹ್ನ ಕಾಳಿ ನದಿಯ ದಂಡೆಯಲ್ಲಿದ್ದ ವಿಜ಼ಲಿಂಗ್ ವುಡ್ಸಿಗೆ ಕಾಲಿಟ್ಟರೆ ವೀಕೆಂಡಿನ ರಜಾ ಮಜಾಕ್ಕೆ ತುಂಬಿದ ದಂಡೋ ದಂಡು. ನದಿ ನೋಡುತ್ತಾ ಊಟ ಮುಗಿಸಿದೆವು. ಮೂವರು ನೀರಿನ ಹತ್ತಿರ ಹೋಗಿ ಕಾಲು ತೋಯಿಸಿಕೊಂಡರು. ನಿರೂಪ್-ಧ್ವನಿ ಸ್ವಿಮ್ಮಿಂಗ್ ಪೂಲಿಗಿಳಿದರು. ತಂಗಿ ವಾಕಿಂಗಿಗೆ ಹೋದಳು. ನಾನು ಕ್ಯಾಮೆರಾ ಹಿಡಿದುಬನ್ನಿ ಹಕ್ಕಿಗಳೆ’ ಕರೆದೆ. ಏಯ್ ವಿರಾಮದಿಂದಿರಲು ಬಂದಿದ್ದೀಯೆ ಆರಾಮವಾಗಿರಮ್ಮ’ ಎನ್ನುತ್ತಾ ಕೇವಲ ಸೂರಕ್ಕಿ, ಪಿಕಳಾರ ದೂರದಿಂದ ಮುಖ ತೋರಿಸಿ ಹಾರಿದಾಗ ಕ್ಯಾಮೆರಾಕ್ಕೆ ಕ್ಯಾಪ್ ಹಾಕಿದೆ. ಈಜೆದ್ದ ಅಪ್ಪ ಮಗಳು ಮರಳಿದ ಬಳಿಕ ಮೂವರೂ ಬೋಟಿಂಗಿಗೆ ಹೋದರು. ನೀರಿಗಿಳಿಯಲೊಪ್ಪದ ನಾನು ಅವರ ಚಿತ್ರ ತೆಗೆದೆ. ಬೋಟಿನಿಂದ ಇಳಿದ ಬಳಿಕ ಅಪ್ಪ-ಮಗಳು ನೀರಲ್ಲಿ ನೆಗೆನೆಗೆದು ಕುಣಿದರು. ಏಳುವ ಅಲೆಗಳ ಪಟ ಹಿಡಿದೆ. ಮರಳಿ ಮನೆಗೆ ಬರುವ ಹಾದಿಯಲ್ಲಿ ಒಂದೆಡೆ ಸಣ್ಣ ಕೊಳ್ಳವಿತ್ತು. ಅಪ್ಪ ಮಗಳು ಮತ್ತೆ ನೀರಲ್ಲಿ ಕುಣಿದು ಬಡಿಬಡಿದು ನೀರನ್ನು ಮೇಲೆಬ್ಬಿಸಿದ ಪಟ ಹಿಡಿಯದೆ ಬಿಟ್ಟೆನೆಯೆ. ಇಲ್ಲಿ ಚಿರತೆ, ಹುಲಿ ಓಡಾಡಿದ ಜಾಗವೆಂದು ಹೇಳುತ್ತಾ ಮಗ ಮನೆಗೆ ಸೇಫಾಗಿ ಕರೆತಂದ.

ಭಾನುವಾರ ಬೆಳಿಗ್ಗೆ ಆರು ಗಂಟೆಗೆ ದಾಂಡೇಲಿಯತ್ತ ಮನೋಜ ರಥ ಸಾರಥಿಸಿದ. ದಾಂಡೇಲಿಯ ಸೂರ್ಯ ತಡವಾಗಿ ಬಂದು ಬೆಳಕು ಬೆಳಕಿನಂತೆ ಕಾಣತೊಡಗಿದಾಗ ಕಾರಿನಿಂದ ಇಳಿದಿಳಿದು ಅಲ್ಲಲ್ಲಿ ಸುತ್ತಾಡಿದೆ. ಪೈಡ್, ಮಲಬಾರ್ ಮಂಗಟ್ಟೆ ಕಂಡಾಗ ಕ್ಯಾಮೆರಾ ಕಾಣಿಸಿದೆ. ಮತ್ತೂ ಏನಾದರೂ ಕಂಡೀತೆ ಎಂದು ಎರಡು ಮೂರು ಮೈಲಿಯಷ್ಟು ನಡೆದಾಡಿದೆ. ಹೆಣ್ಣು ಟೈಗಾ ಫ್ಲೈಕ್ಯಾಚರ್ ಕೀಟಕ್ಕಾಗಿ ಹೊಂಚು ಹಾಕುತ್ತಿದ್ದಾಗ ಬಾರವ್ವಾ ಬಾ ತಾಯೆ ಎಂದೆ, ಕ್ಯಾಮೆರಾ ಪ್ಯಾಕ್ ಮಾಡಬೇಕೆನ್ನುವಾಗ ಹಾರಿ ದೂರಕ್ಕೆ ಕುಳಿತ ಹಕ್ಕಿ ಕ್ಲಿಕ್ಕಿಸಿದರೆ ಹಳದಿ ಕೊರಳಿನ ಗುಬ್ಬಿಯಾಗಿತ್ತು. ನನಗದು ಲೈಫರ್. ನಾನೇನು ಆಕಾಶಕ್ಕೆ ಹಾರಲಿಲ್ಲ, ಏಕೆಂದರೆ ರೆಕಾರ್ಡ್ ಷಾಟ್ ಮಾತ್ರ ಸಿಕ್ಕಿದ್ದು. ಫಾರೆಸ್ಟು ವ್ಯಾಗ್ಟೇಲ್ ಎಂದು ಕ್ಯಾಮೆರಾ ಕೈಗೆತ್ತಿಕೊಳ್ಳುವಷ್ಟರಲ್ಲಿ ಕಣ್ಣಳತೆ ದಾಟಿ ಹಾರಿತ್ತು.

ದಾಂಡೇಲಿಯಲ್ಲಿ ಒಂದಿಷ್ಟು ಮಾರುಕಟ್ಟೆ ವ್ಯವಹಾರ ಮುಗಿಸಿ ಬಾಪೇಲಿಗೆ ಹೋದರೆ ಚಿತ್ರಮಿತ್ರರ ದಂಡು ಅಲ್ಲಿತ್ತು. ಹಣ್ಣಿನ ಮರವೂ ಅಲ್ಲಿತ್ತು, ಕಪಿ, ಕಾಕಗಳಿಂದ ಹಿಡಿದು ಮಲೆ ಕುಟ್ರ, ಕಂಚುಗಾರ ಕುಟ್ರ, ಮರಕುಟುಕ ಹತ್ತಾರು ಹಕ್ಕಿಗಳು ಅಕ್ಷರಶಃ ದಾಳಿ ಇಟ್ಟಿದ್ದವು. ಗ್ರೇಟ್ ಮಂಗಟ್ಟೆ ಪರಾರಿಯಾಗಿದ್ದವು. ಮರದಲ್ಲಿ ಅಡಗಿದ್ದ ಮರಿ 600ಎಂ.ಎಂಗೆ 1.4 ಟಿಸಿ ಸಿಕ್ಕಿಸಿದರೂ ಬಾರೆನೆಂದು ಪಟ್ಟು ಹಿಡಿದಿತ್ತು. ಬಹುಶಃ 1200 ಎಂ.ಎಂಗೆ 2.00ಟಿ.ಸಿ ಹಾಕಿದ್ದರೆ ಕಾಣುತ್ತಿತ್ತೇನೋ!? ಸುಡುಸುಡು ಬಿಸಿಲು. ನಡೆಯಪ್ಪ ಗಣೇಶಗುಡಿಗೆ ಎಂದೆ, ಮರಳಿದೆ. ಮಧ್ಯಾಹ್ನ ಫುಲ್ ರೆಸ್ಟ್. ಸೋಮವಾರ ಬೆಳಿಗ್ಗೆ ಮುಂದಿನ ಬೀದಿಯ ಮರದಡಿಯಲ್ಲಿ ಕ್ಯಾಮೆರಾ ಸಮೇತ ಝಾಂಡಾ. ಆಗಾಗ ಕುಳಿತು ಹಕ್ಕಿ ಬಂದಾಗ ನಿಂತು ಬೆಳ್ಗಣ್ಣಗಳ ಪಟ ಹಿಡಿದೆ. ಆರೆಂಜ್ ಮಿನಿವೆಟ್ಟಪ್ಪನ ಮಡದಿ ಬಂದಾಗ ಕ್ಲಿಕ್ ಮಾಡುವಷ್ಟರಲ್ಲಿ ಮೇಲೇರಿ ಹಾರಿಯೇ ಹೋದರು.

ಹ್ಯಾಂಗಿಂಗ್ ಪ್ಯಾರೆಟ್ಟಿಗೆ ಬಾ ಸನಿಹದ ಈ ಬಳ್ಳಿಯಲ್ಲಿ ನೇತಾಡು ಎಂದು ಪರಿಪರಿಯಾಗಿ ಪರದಾಡಿ ಬೇಡಿದರೂ ದೂರದ ಮರದ ಒಣಕೊಂಬೆಯಲ್ಲಿ ಆ ಗಿಣಿ ನೇತಾಡಿ ನನ್ನ ಕ್ಯಾಮೆರಾದಲ್ಲಿ ಚುಕ್ಕಿಯಾಯಿತು. ಹೊನ್ನಹಣೆಯ ಎಲೆವಕ್ಕಿ ಮರದ ಮೇಲ್ಮನೆ ಬಿಟ್ಟು ಕೆಳಗಿಳಿಯಲೇ ಇಲ್ಲ. ಬಂದಳಿಕೆ ಯಾನೆ ಫ್ಲವರ್ ಪೆಕರ್ ಮಾತ್ರ ಸಿಕ್ಕಸಿಕ್ಕಲ್ಲಿ ಚಂಚು ಚಾಚಿ ಹೀರುತ್ತಾ ಪೋಸು ಕೊಟ್ಟಿತು. ಒಂಬತ್ತರವರೆಗೆ ಮರದ ಸುತ್ತಾ ಅಡ್ಡಾಡಿ ನಂತರ ಇಡೀ ದಿನ ಓಲ್ಡ್ ಮ್ಯಾಗಜೈನ್ ಹೌಸಿನಲ್ಲಿ ಪ್ರತಿಷ್ಟಾಪಿತಳಾಗಿಬಿಟ್ಟೆ. ಮರುದಿನ ನಿರೂಪನಿಗೆ ಕದ್ರಾದಲ್ಲಿ ಡ್ಯೂಟಿ ಇತ್ತು. ಮೂವರೂ ಅಲ್ಲಿಗೆ ಹೋಗೋಣ. ಬಿಡುವಾದರೆ ಡ್ಯಾಂ ತೋರಿಸುವೆ ಎಂದ. ಆಗಲಾಗಲಿ ಎಂದೆವು.

ಬೆಳಿಗ್ಗೆ ನಿರೂಪ್ ಗಿಡಕ್ಕೆ ನೀರು ಹನಿಸುತ್ತಿದ್ದ. ನಾನು ಮನೆಯ ಸುತ್ತಾ ವಾಕ್ ಮಾಡೋಣವೆಂದು ಹೆಜ್ಜೆ ಇಡುತ್ತಾ ಮನೆಯ ಮುಂಭಾಗಕ್ಕೆ ಬಂದೆ. ಪೈಪ್ ದಾಟಬೇಕಿತ್ತು. ಎಚ್ಚರದಿಂದ ಕಾಲು ಎತ್ತಿ ಇಡಲು ಹೋದೆ. ಆದರೆ ತೊಟ್ಟಿದ್ದ ಚಪ್ಪಲಿ ಪೂರ್ತಾ ಮೇಲೆತ್ತದೆ ನಿರಾಕರಿಸಿ ಪೈಪಿನ ಅಡಿಗೆ ಸಿಕ್ಕಿಸಿಕೊಂಡಿತು. ಏನಾಗುತ್ತಿದೆ ಎನ್ನುವುದು ಅರಿವಾಗುವ ಮೊದಲೇ ಧಡುಂ ಸೌಂಡಿನೊಂದಿಗೆ ಧರಾಶಾಯಿಯಾದೆ. ನೀರು ಹಾಕುತ್ತಿದ್ದ ನಿರೂಪ್ ಮಂಗ ಮರಕ್ಕೆ ಹಾರುವಾಗ ಬಿದ್ದಿರಬೇಕು ಎಂದುಕೊಂಡು ತಿರುಗಿ ನೋಡಿದರೆ ಏಳಲಾರದಂತೆ ಬಿದ್ದಿದ್ದವಳು ನಾನು. ಅವಸರದಿಂದ ಮೇಲೆತ್ತಿದ. ನಿಂತ ನಾನು ನಡೆದು ನೋಡಿದೆ. ಕಾಲಿಗೆ ಮೂಗೇಟು ಬಿದ್ದಿದ್ದರೂ ಮೂಳೆ ಮುರಿದಿರಲಿಲ್ಲ. ಖುಷಿ ಪಡುವಷ್ಟರಲ್ಲಿ ರಕ್ತದ ಧಾರೆ… ಗದ್ದದಿಂದ. ತಂದ ಹತ್ತಿಗೆ ಒತ್ತಿ ಹಿಡಿದರೂ ರಕ್ತ ನಿಲ್ಲದೆ ಎರಡು ನಿಮಿಷದಲ್ಲಿ ವಾಹನವೇರಿಸಿ ಆಸ್ಪತ್ರೆಗೆ ಒಯ್ದ. ನಿರೂಪ ಹೇಳಿದ ಈ ಆಳದ ಗಾಯಕ್ಕೆ ಮೂರು ಹೊಲಿಗೆ ಬೀಳಲೇಬೇಕು’.

ನಾನು ಬಿದ್ದ ಮೇಲೆ ಹೊಲಿಗೆಯೂ ಬೀಳಲೇಬೇಕಷ್ಟೆ. ಹೊಲಿಗೆ ಬಿದ್ದಿತು. ಡ್ರೆಸ್ಸಿಂಗ್ ಆಯಿತು. ಗಣೇಶಗುಡಿಯ ನೆನಪಿಗೆ ಕಲೆ ಉಳಿಯುತ್ತದೆ’ ಎಂದ. ವಿರಾಜಪೇಟೆಯ ನೆನಪಿಗೆ ಮೂಗಿನ ಮೇಲೆರಡು ಸ್ಟಿಚ್ ಬಿದ್ದಿತ್ತು, ಇದೀಗ ಗಣೇಶಗುಡಿಯ ನೆನಪು ಗದ್ದದಲ್ಲಿ ಎಂದುಕೊಂಡೆ. ಎರಡು ಗಂಟೆ ಮೌನ ವಹಿಸಿ… ಗದ್ದದ ಅಲುಗಾಟ ಕೂಡದೆಂದ. ಸರಿ ಎಂದು ತಲೆಯಲುಗಿಸಿದೆ. ಕದ್ರಾ ಡ್ಯಾಂ ನೋಡುವ ಯೋಜನೆಯನ್ನು ಡ್ಯಾಮೇಜ್ ಮಾಡಲು ಮನವಿರಲಿಲ್ಲ. ತಂಗಿಯೂ ಹೋಗದೆ ಉಳಿದಾಳೆಂದು ಬಂದೇ ಬರ್ತೀನೆಂದು ಗಾಡಿಯೇರಿದೆ, ಮೊಗಕ್ಕೆ ಮಾಸ್ಕ್ ಧರಿಸಿ.

ದಾರಿಯಲ್ಲಿ ಬಾಪೇಲಿಗೆ ಹೋದಾಗ ಗೇಟಿನ್ನೂ ತೆರೆದಿರಲಿಲ್ಲ. ಗಾಡಿಯಲ್ಲೇ ಕೆಳಗೆ ಹೋಗಿ ನಾಲ್ಕು ಪಟ ತೆಗೆದು ಕದ್ರಾ ಮುಟ್ಟಿ ಪ್ರವಾಸಿ ಬಂಗಲೆಯಲ್ಲಿ ರೆಸ್ಟ್ ಮಾಡಿದೆ, ಸುತ್ತಾ ಹಕ್ಕಿಗಳು ಕಾಣದಿದ್ದ ಕಾರಣ. ಮಧ್ಯಾಹ್ನ ಕದ್ರಾ ಹಿನ್ನೀರು, ಡ್ಯಾಂ ನೋಡಿ ಮತ್ತೆ ರೆಸ್ಟ್ ಮಾಡಿ ಗಣೇಶಗುಡಿಗೆ ಮರಳುವ ವೇಳೆ ಬಾಪೇಲಿಯಲ್ಲಿ ಕೆಳಗಿಳಿದಾಗ ಗ್ರೇಟ್ ಹಾರ್ನ್ಬಿಲ್ ಹಣ್ಣಿಗೆ ಬಾಯಿ ಹಾಕುತ್ತಿತ್ತು. ಮೇಲೆ ಹತ್ತಿ ಸರಸರ ನಡೆದೆ.

ಆ ನಡಿಗೆ ಬಹುತೇಕ ಓಟವೇ ಆಗಿತ್ತು. ಸಂಜೆ ಸೂರ್ಯ ಮನೆಗೆ ಮರಳಲು ಅವಸರಿಸುತ್ತಿದ್ದ. ಮತ್ತೆ ತಡ ನಾ ಹೇಗೆ ಮಾಡಲಿ? ಅವು ಹಾರಿ ಜಾಗ ಖಾಲಿ ಮಾಡುವ ತನಕ ನಾನೂ ನಿರೂಪನೂ ಪಟಪಟ ಎಂದು ಬಟನ್ ಒತ್ತಿದ್ದೇ ಒತ್ತಿದ್ದು. ನಾವು ಒತ್ತುತ್ತಿದ್ದ ಸ್ಪೀಡಿಗೆ ಕೆಲವರು ಇದೇನು ಇವರಾಟವೆಂದು ನಿಂತು ನೋಡಿ, ಕ್ಯಾಮೆರಾದಲ್ಲಿಯೂ ನೋಡಿ ಹೋಗುತ್ತಿದ್ದರು. ತಂಗಿ ವಾಕ್ ಮುಗಿಸಿಕೊಂಡಳು. ನಾವೂ ಗಾಡಿಯೇರಿ ಗಣೇಶಗುಡಿಗೆ ಬಂದೆವು.

ಮರುದಿನ ಬುಧವಾರ ನೋವಿಲ್ಲನನ್ನನ್ನು ಬಿಡಪ್ಪಾ’ ಎಂದು ಮನಕರಗಿಸುವಂತೆ ಮೊರೆಯಿಟ್ಟೆ. ಮಧ್ಯಾಹ್ನದವರೆಗೆ ರೆಸ್ಟ್ ಮಾಡಿದರೆ ಓಎಂಎಚ್ ಇಲ್ಲದಿದ್ದರೆ ಬಿಡಲ್ಲ ಎಂದು ನಿರೂಪ್ ಹೇಳಿದಾಗ ಅಷ್ಟಾದರೂ ವರ ಕೊಟ್ಟಿದ್ದೆ ಹೆಚ್ಚೆಂದು ರೈಟ್ ಎಂದೆ. ಅಲ್ಲಿ ಮಾತಾಡಬಾರದು ಎಂದು ಕಂಡೀಷನ್ ಹಾಕಿ ಹನ್ನೊಂದು ಗಂಟೆಗೆ ಬಿಸಿಲಿನಲ್ಲಿ ಗಾಯಕ್ಕೆ ಬಿಸಿ ತಾಗಿಸಲು ಕೂರಿಸಿ, ನಂತರ ಡ್ರೆಸಿಂಗ್ ಮಾಡಿಸಿ ಓಎಂಎಚ್ ಆವರಣಕ್ಕೆ ಬಿಟ್ಟ. ಸಂಜೆ ಅವನು ಬಂದಾಗ ಬೆಂಗಳೂರಿನ ಪಕ್ಷಿಮಿತ್ರರೊಡನೆ ಬಾಯಿ ಬಿಟ್ಟದ್ದನ್ನು ಕಂಡುಮಾತು ಮೀರಿದಿರಿ’ ಎಂದು ಆಕ್ಷೇಪಿಸಿದ.

ಗ್ರಹಚಾರಕ್ಕೆ ಅವತ್ತು ಮನೆಗೆ ಮರಳಿದ ಬಳಿಕ ಫೋನಿನಲ್ಲಿ ಅರ್ಧ ತಾಸು ಮಾತಾಡಬೇಕಾದ ಸಂದರ್ಭವಿತ್ತು. ಗಾಯದಿಂದ ರಕ್ತ ಒಸರುತ್ತಿತ್ತು, ಸಮರ್ಥಿಸಿಕೊಳ್ಳಲು ಬಾಯಿ ಬರಲಿಲ್ಲ. ವೈದ್ಯೋ ನಾರಾಯಣ ಹರಿಃ. ನಾಳೆ ಪೂರಾ ರೆಸ್ಟ್. ಹಕ್ಕಿಯೂ ಇಲ್ಲ, ಹೋಗುವುದೂ ಇಲ್ಲವೆಂದೆ. ಮರುದಿನವಿಡೀ ದಿನ ಮಲಗಿದ್ದಲ್ಲೇ ಮಲಗಿ ಬೋರಾದಾಗ ಯಶೋದಾ ಸಿನಿಮಾ ನೋಡಿದೆ. ಸಂಜೆಗೆ ಬನ್ನಿ ಐ.ಬಿಗೆ ಬಿಡ್ತೀನಿ ಎಂದು ನಮ್ಮಿಬ್ಬರನ್ನು ಹೊರಡಿಸಿದ. ದಾರಿಯಲ್ಲಿ ಕಣ್ಣಿನ ಲೆವಲ್ಲಿಗೆ ಪೈಡ್ ಮಂಗಟ್ಟೆ ಕುಳಿತಿತ್ತು. ನಾಲ್ಕೈದು ಕ್ಲಿಕ್ ಮಾಡಿಕೊಂಡೆ. ನಮ್ಮನ್ನಿಳಿಸಿ ಹೋದವನು ಮತ್ತೆ ಮಗಳೊಂದಿಗೆ ಮರಳಿ ಬರುವವರೆಗೂ ಹಕ್ಕಿ ಬಾರದ್ದಕ್ಕೆ ಸುಮ್ಮನೆ ಕುಳಿತೆ.

ಶುಕ್ರವಾರ ಬೆಳಿಗ್ಗೆ ಓಎಂಎಚ್ ದಾರಿ ಹಿಡಿದಾಗ ಮರುದಿನ ಊರಿಗೆ ತೆರಳುತ್ತಿದ್ದುದ್ದರಿಂದ ಇವತ್ತೆ ಕಡೆಯ ದಿನ ಎಂದುಕೊಳ್ಳುತ್ತಾ ಇಳಿದೆ. ಕಟ್ಟೆಯ ಮೇಲೆ ಆಸೀನಳಾದೆ. ಅರ್ಧ ಗಂಟೆಯಲ್ಲಿ ಆಫೀಸ್ ಬಳಿ ಟ್ರೋಗನ್ ಎಂದುದನ್ನು ಕೇಳಿ ಹೆಜ್ಜೆ ಮೇಲೆ ಎಚ್ಚರಿಕೆಯ ಹೆಜ್ಜೆ ಇಟ್ಟು ನಾನು ಹೋಗುವವರೆಗೆ ಇದ್ದರೆ ಲಕ್ ಎಂದುಕೊಳ್ಳುತ್ತಾ ಸಾಗಿದೆ. ದೂರದಲ್ಲಿ ಕುಳಿತಿದ್ದ ಪುಣ್ಯಾತ್ಮ ಟ್ರೋಗನಪ್ಪ. ನಂತರ ಎಲ್ಲರೂ ಚದುರಿದರು.

ನಾನೊಬ್ಬಳೆ ಉಳಿದೆ ಅಲ್ಲಿ. ಕಣ್ಣು ಹಾಯಿಸುತ್ತಿದ್ದಂತೆ ಏನೋ ಚಲನೆ ಇದೆ ಎನ್ನಿಸಿತು. ಹಾರಿ ಹೋಗಿದ್ದ ಟ್ರೋಗನ್ ಮತ್ತೊಂದು ಕೊಂಬೆಯ ಮೇಲೆ ಕುಳಿತಿದೆ. ಕ್ಯಾಮೆರಾಕ್ಕೆ ಜೀವ ಬಂದಿತು. ಅವನಿಗೆ ಸಾಕೆನಿಸಿ ಹಾರಿಹೋದ. ಆದರೆ ನನಗೆ ಸಾಕೆನಿಸಿರಲಿಲ್ಲ. ಮತ್ತೆ ಕಣ್ಣರಸಾಟ. ನೋಡ್ತೀನಿ ಟ್ರೋಗನಮ್ಮ. ಸುತ್ತ ಮುತ್ತ ಯಾರೂ ಇಲ್ಲ ನಾನು ನೀನೇ ಇಲ್ಲಿ ಎಲ್ಲ… ತಾಳೆ ಕ್ಲಿಕ್ ಮಾಡುವೆ ಎನ್ನುತ್ತಾ ಪಟ ಪಟ ಎಂದು ಪಟಕ್ಕಾಗಿ ಒತ್ತತೊಡಗಿದೆ. ಸುಮಾರು ಇಪ್ಪತ್ತು ನಿಮಿಷ ನಾನು ಮತ್ತು ಅವಳು. ಅವಳಿಗಾಗಿ ಬಹಳ ದಿನದಿಂದ ಕಾಯ್ದಿದ್ದೆ. ನಿಂತಲ್ಲಿ ಅವಳು, ಕುಳಿತಲ್ಲಿ ಅವಳು.. ನೋಡಿದ ಕಡೆಯೆಲ್ಲಾ ಅವಳು ಇದ್ದಾಳೆಯೆ ಎಂದು ಹುಡುಕಿದ್ದೆ.

ಎರಡನೆ ಟೂರಿನಲ್ಲಿ ಅರೆಕ್ಷಣ ಕಂಡು ಕಾಣೆಯಾಗಿದ್ದ ಲಲನೆ ಈಗ ಮುಮ್ಮುಖವಾಗಿ ಸಾವಕಾಶವಾಗಿ ಕುಳಿತು ಬಾ ಲೀಲಾ, ಬಾ ಬಾ,’ ಎಂದು ಸಮಯ ನೀಡಿದಳು. ಅವಳು ಹಾರುವವರೆಗೆ ನೋಡಿ ಭದ್ರಮಾಡಿಕೊಂಡೆ. ಇನ್ನೇನು ಬೇಕಾಗಿದೆ. ಈ ಚಿತ್ರ ಸಾಕಾಗಿದೆ. ಸವಿನೋಟವ ನೀ ನೀಡಿದೆ ಎಂದು ಹಾಡಿಕೊಂಡು ಹಾರಿದೆ ಮನದಲ್ಲೆ. ನಂತರ ಕ್ಯಾಮೆರಾ ಸಮೇತ ನನ್ನ ಮಾಮೂಲಿ ಕಟ್ಟೆಗೆ ಕಾಲಿಟ್ಟೆ, ಕುಳಿತೆ. ಇಡೀ ದಿನ ಬಂದವುಗಳನ್ನು ಹಿಡಿದೆ. ಆ ದಿನ ಸಂಜೆ ಐದರ ನಂತರ ಚಟುವಟಿಕೆ ಬಿರುಸಾಯಿತು. ಕತ್ತಲು ಕಣ್ಣಿಗಿಳಿಯುವಾಗ ಇಂಡಿಯನ್ ಪಿಟ್ಟ ಬಂದಿದೆ ಎಂದು ನೆಲದಲ್ಲಿ ಅಡ್ಡಾಡುತ್ತಿದ್ದ ಕಡೆಗೆ ಎಲ್ಲರ ನೋಟ. ಐ.ಎಸ್.ಓ ಏರಿಸಿ ಶಟರ್ ಕಡಿಮೆ ಮಾಡಿದರೂ ಫೋಕಸ್ ಆಗಲೊಲ್ಲದು.

ಮ್ಯಾನ್ಯುಯಲ್ ಫೋಕಸ್ ಮಾಡಿ ಕ್ಲಿಕ್ಕಿಸಿದರೂ ಪಿಟ್ಟದ ಸೊಗಸಾದ ಬಣ್ಣವನ್ನು ನುಂಗಿತ್ತು. ಕ್ಯಾಮೆರಾಗೆ ಮುಸುಕು ಕವುಚಿ ಕಾರೇರಿಸಿ ಅಲ್ಲಿದ್ದವರಿಗೆ ವಿದಾಯ ಹೇಳಿದೆ. ಶನಿವಾರ ಸಂಜೆ ಹೊರಡಬೇಕಿತ್ತು. ಮನೆಯಲ್ಲೇ ಮಲಗಿದ್ದೆ. ಏಳು ವರ್ಷದ ಧ್ವನಿ ಕೇಳಿದ್ದಳುನಿಮಗೆ ಲೈಫಲ್ಲಿ ಫೋಟೋಗ್ರಫಿ, ಪಕ್ಷಿ ಬಿಟ್ಟರೆ ಬೇರೆ ಎಂಜಾಯ್ ಮಾಡೋದೇನೂ ಇಲ್ಲವೆ’ ಎಂದು. ನನಗೆ ನಾನೇ ಪ್ರಶ್ನೆ ಹಾಕಿಕೊಂಡೆ ಇಲ್ಲವೆ ನಿನಗೇನು ಬೇರೆ ಇಲ್ಲವೆ’ ಎಂದು.

2016ರಿಂದ ಹೊರಟ ಪಕ್ಷಿ ಪ್ರಯಾಣದ ನೆನಪುಗಳು ಸುರುಸುರಳಿಯಾಗಿ ಸುತ್ತಿಕೊಂಡವು. ನನ್ನ ಲೋಕ ಬರಿಯ ಹಕ್ಕಿಲೋಕ ಮಾತ್ರ ಆಗಿಹೋಗಿತ್ತು. ಬೀಳುತ್ತಾ ಏಳುತ್ತಾ ಪಕ್ಷಿವ್ಯೂಹದಲ್ಲಿ ಸ್ವಯಂ ಬಂಧಿಯಾಗಿದ್ದೆ. ಅದು ಖುಷಿಯನ್ನು ಕೊಟ್ಟಿತ್ತು. ಲೋಕವನ್ನೇ ಅಪರ್ಚರ್, ಷಟರ್ ಸ್ಪೀಡ್, ಐಎಸ್.ಓಗಳ ಮೂಲಕ ನೋಡುತ್ತಾ ಫೋಕಸ್ ಮಾಡುತ್ತಾ ಮಾತುಗಳಿಗೆ ದೂರವಾಗುತ್ತಿದ್ದೆ. ಆಡಿದ ಮಾತು ಎಲ್ಲಿಗೋ ಅಪ್ಪಳಿಸಿ ಸತಾಯಿಸುವ ಬದಲು ಚಿತ್ರವಾಗಿದ್ದೆ, ಚಿತ್ರವಾಗುತ್ತಿದ್ದೆ.

ಧ್ವನಿಗೆ ಹೇಗೆ ಹೇಳಲಿಬದುಕಿನ ಕ್ಯಾನವಾಸಿಗೆ ಬಿದ್ದ ನೀರು ಚಿತ್ರ ಅಳಿಸುತ್ತದೆಂದು, ನನ್ನನ್ನೂ ಅಳಿಸುತ್ತದೆಂದು, ಹಕ್ಕಿಗೆ ನಾನಾಗಿಯೇ ಅಂಟಿಕೊಂಡಿದ್ದೇನೆಂದು.’ ಹೇಳದಿದ್ದರೂ ಅದು ಸತ್ಯ. ಗಣೇಶಗುಡಿಗೆ ಮತ್ತೊಮ್ಮೆ ಹೋಗುತ್ತೇನೆಯೋ ಇಲ್ಲವೋ. ಸಾಧ್ಯವಾದರೆ ಹೋಗಬಹುದು ಎಂದುಕೊಂಡು ನಿರೂಪನಿಗೆ ಧನ್ಯವಾದ ಹೇಳಿ ತಂಗಿಯೊಡನೆ ಬಸ್ ಹತ್ತಿದೆ, ಊರಿಗೆ ಬಂದೆ. ಕಾರ್ಡ್ ತುಂಬಾ ಚಿತ್ರಗಳು, ಮನಸ್ಸಿನ ತುಂಬ ನೆನಪುಗಳು, ಗದ್ದದಲ್ಲಿ ಗಾಯದ ಹೊಲಿಗೆಯ ಕಲೆಗಳು. ನಾನಿರುವ ತನಕ ನನ್ನುಸಿರು ಇರುವ ತನಕ ಮಾಯದ ನೆನಪು. ಇಷ್ಟು ಸಾಕಲ್ಲವೆ ಬದುಕು ಸಾಗಿಸಲು.

‍ಲೇಖಕರು Admin

January 8, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: