ಲಿಂಗರಾಜ ಸೊಟ್ಟಪ್ಪನವರ
ಪರಿಭಾಷೆ
ಯಾರು ಹೇಳಿಕೊಟ್ಟಿದ್ದಾದರೇನು
ನನಗೆ ಗೊತ್ತಿರುವದು ಹೀಗೆ
ಇನ್ನಿತರ ಉಪಾಯಗಳು ನನಗೆ ತಿಳಿಯವು
ತಿಳಿದ ಹಾಗೆ ಪ್ರೀತಿಸುತ್ತೇನೆ
ಎಬಡ ಅಂತ ಮೂದಲಿಸಿದರೂ ಸರಿಯೇ
ತುಟಿಗಳಿಗೊಂದು ಪಸೆ ಇರುತ್ತಲ್ಲ
ಇನ್ನೊಂದು ತುಟಿಯೊತ್ತುವಾಗ ಆರಿ
ಆತ್ಮವೂ ಬಾಯಾರಿಬಿಡುತ್ತದೆ
ಈ ತುಟಿಯ ಸಹವಾಸ ಬೇಡವೆನಿಸುವದು ಇದಕ್ಕೆಯೆ
ಕಚ್ಚೆಂದು ಹಲುಬುವ ಹಲ್ಲುಗಳ ಒತ್ತಾಸೆ ಅವಕ್ಕಿದೆ
ತುಟಿಗಿಂತ ಈ ಬೆರಳುಗಳೆ ವಾಸಿ
ಅಂತೆಯೆ ಕೈ ಹಿಡಿಯಬೇಕೆನಿಸುವದು
ಬೆರಳಿಗೆ ಈ ತಾಪತ್ರಯವಿಲ್ಲ
ಹೇಗೂ ಹೇಗೆ ಹೇಗೊ ಜೊತೆಯಾಗುತ್ತವೆ
ನೀವೂ ಹೀಗೆ ಹೆಣೆದುಕೊಳ್ಳಿ ಎಂದು ಕಣ್ಣು ಮಿಟುಕಿಸುತ್ತವೆ
ನಿಸ್ಪೃಹ ಪ್ರೀತಿ ಪಾಠವಿದು
ಬೆರಳ ಮಾತು ಬೆರಳ ‘ಕೇಳಿ’
ಬೆರಗಲ್ಲ ಬಿಡು
ನಿನ್ನ ಕೈ ಎದೆ ಮೇಲಿಟ್ಟುಕೊಂಡು ತಟ್ಟುತ್ತೇನೆ
ಕಣ್ಮುಚ್ಚಿಕೊಳ್ಳುತ್ತೇನೆ ತನ್ಮಯಕೆ
ಹೀಗೆ ದಿಗಂತಕ್ಕೆ ತೆರೆದುಕೊಳ್ಳುತ್ತೇನೆ
ಬೆರಳು ಸುಮ್ಮನಿದ್ದಾವೆಯೆ.. ನಿನ್ನ ಹಾಗೆ

ಹೀಗೆ ಪ್ರೀತಿ ಸಾಧಿಸುವಾಗ
ಸಂಧಿ ನೋಡಿ ಧ್ಯಾನಸ್ಥ ಎವೆಗೆ ತುಟಿಯೊತ್ತಿಬಿಡುತ್ತಿ
ನಿನಗೂ ಕಣ್ಣ ಭಿತ್ತಿಯಲಿ ಸ್ಥಾಯಿಯಾಗುವ ಗತಕಾಲದ ತಹತಹಿಕೆ
ನೀನೆಂದೂ ಬೆರಳಿಗೆ ದಕ್ಕಲೆಯಿಲ್ಲ
ಚಿತ್ರವಾಗಬೇಕಿತ್ತು ನೀನು
ಅನಾದಿ ಕಾಲದ ಬಣ್ಣಗಳ ಬಯಕೆ
ಬಸಿರಾಗಲೆಂದು ಕಾದು ಕೂತಿವೆ ನೆಲ ಕಾಲ
ತುಟಿಗಳ ಮಾತು ಬಿಡು
ಕೈ ಹಿಡಿದಿಕೊ
ಬೆರಳು ಪ್ರೀತಿಸಿಕೊಳ್ಳಲಿ
ಮತ್ತೆ ಎದೆ ಮೇಲೆ ಕೈಯಿಟ್ಟುಕೊಳ್ಳುತ್ತೇನೆ
ನದಿಯೊಂದು ತಣ್ಣಗೆ ಹರಿದು ಬರಲಿ
ಸದ್ದು ಸದ್ದು ತರತರಂಗವಾಗಿ ಬೆರಳು ಕೊರಳು ತಾಕಿ ತಾಕಿ ತುಯ್ಯಲಿ
ತೂಗುಯ್ಯಾಲೆಯಲಿ ತೇಲಿ ತೇಲಿ
ತೇಲುಗಣ್ಣು ಅಮಲುದುಂಬಲಿ
ಎವೆಗೆ ತುಟಿಯೊತ್ತ ಹೋಗದಿರು
ದಿಗ್ ದಿಗಂತಕೆ ತೆರೆದುಕೊಳ್ಳುತ್ತೇನೆ
ಅಲ್ಲಿ ಚಿತ್ರವಾಗುತ್ತೇನೆ
ನೀನು ನನ್ನ ಕಾಣಬೇಕಿರುವದು ಅಲ್ಲಿಯೇ
ಕಳೆದುಹೋಗುವದೆಂದರೆ ಹೀಗೆ
ಪ್ರೀತಿಸುವದೆಂದರೂ ಹೀಗೆಯೆ
ಗೊತ್ತಿರುವ ದಾರಿಯಲ್ಲಿಯೆ ನಡೆಯುತ್ತೇನೆ
ಬೆರಳಿಗೆ ಬೆರಳ ತೊಡಗಿಸುತ್ತೇನೆ






ನಮಸ್ತೆ…