ಲಿಂಗರಾಜ್ ಸೊಟ್ಟಪ್ಪನವರ್
ಒಂದು ತಪ್ಪಾದ ಅಂದಾಜಿಗೆ
ಎದೆಯ ಆಳ ಸಿಕ್ಕಿತು
ಒಂದು ಅಪ್ಪಿ ತಪ್ಪಿ ನೋಟಕ್ಕೆ
ನೀನು ಕಂಡಿದ್ದು
ಒಂದು ಸುಮ್ಮನೆ ಮಾತಿಗೆ
ಇಷ್ಟು ದೂರ ಸಾಗಿ ಬಂದೆ
ಒಂದು ಸುಮ್ಮಾನಕೆ
ನಿತ್ಯ ಅಂಗಳ ಗುಡಿಸಿ ರಂಗೋಲಿ ಹಾಕುತ್ತಿರುವಿ
ಒಂದು ಒಣ ಬೇಸಿಗೆ

ನಿನ್ನ ರಮ್ಯ ಸಂಜೆಗಳಿಗಾಗಿ ಬೇಯುತ್ತಿರುವದು
ನಿನಗೆ ಅರ್ಥವೆ ಆಗುವದಿಲ್ಲ
ಬದುಕು ಹೀಗೆ ಹುಡುಗಿ
ಬೇಷರತ್ತಾಗಿ ಮಳೆ ಸುರಿಯುತ್ತಿರುವಾಗ
ನೀನು ಕೊಡೆ ಹಿಡಿದು ಸಾಗಿ ಬಿಡುತ್ತಿ
ನೆನೆಯುವ ಸುಖ
ನೆನೆಯದೆ ಹೋದ ದುಮ್ಮಾನ
ಅವರವರ ಏಕಾಂತದಲ್ಲಿ ರೋಧಿಸುತ್ತಿರುತ್ತವೆ
ಕೆರೆ ಪಾಲಾದ ನದಿ ಪಾಲಾದ
ಮಳೆಯ ಕುರಿತು
ಮರುಕವನ್ನಲ್ಲದೆ
ಮತ್ತೇನೂ ವ್ಯಕ್ತಪಡಿಸಲಾಗದ ನಾನು
ಬೊಗಸೆಯೊಡ್ಡಿ ಮಳೆ ಹಿಡಿಯುತ್ತ ಅಬ್ಬೆಪಾರಿಯಂತೆ
ಪ್ರತಿ ರಸ್ತೆಯಲ್ಲೂ ನಿಂತಿರುತ್ತೇನೆ
ನಿನ್ನ ಒಂದು ಅಪ್ಪಿ ತಪ್ಪಿ ನೋಟಕ್ಕೆ






0 Comments