ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಾವಣ್ಯ ಎನ್ ಕೆ ಕವಿತೆ – ಹೂ ಬುಟ್ಟಿ…

ಲಾವಣ್ಯ ಎನ್ ಕೆ

ದಿನಾ ಬೆಳಗ್ಗೆ, ಒಣಗಿದ ಬಳ್ಳಿಯ ಹೂ ಬುಟ್ಟಿ
ಹಿಡಿದು ಶಹರದ ರಸ್ತೆಗಿಳಿಯುತ್ತೇನೆ ನಾನು,
ದಾರಿಯಲ್ಲಿ ಬುಟ್ಟಿ ತುಂಬ ಹೂ ಸಿಗುತ್ತವೆಂಬ
ಗಟ್ಟಿ ನಂಬಿಕೆ ನನಗೆ

ಎಲ್ಲರಿಗೂ ಬೇಕಾದ,
ಯಾರಿಗೂ ಪರಿಚಿತವಲ್ಲದ
ಹೆಸರೇ ಗೊತ್ತಿಲ್ಲದ ರಾಶಿ ಹೂಗಳು
ಎದುರು ಬರುತ್ತವೆ.
ನೆಲದ ಮೇಲಿನ ಹಳದಿ‌ ಹೂಗಳು
ಹಸಿರಿನ ಮಧ್ಯೆ ಹೊಳೆಯುವ ಗುಲಾಬಿ
ಪೇಪರ್ ಹೂ, ಇನ್ನೇನು ಜಾರುತ್ತಿರುವ
ಬಿಳಿ ಹೂಗಳು,
ಎಲ್ಲವೂ ಬೇಕು ನನಗೆ

ಎಲ್ಲದಕ್ಕೂ ಹೂವುಗಳಿರಬೇಕು ನನಗೆ
ನಗುವಿಗೆ, ಅಳುವಿಗೆ, ಸಾಂತ್ವನಕ್ಕೆ,‌ ಆಸರೆಗೆ.
ಬಿಗುವಿನ ಜಗತ್ತಿನಲ್ಲಿ ನೆಮ್ಮದಿಯ ಉಸಿರಾಟಕ್ಕೆ
ಧೂಳಿನ ಮಧ್ಯೆ ಶುದ್ಧ ಮೃದುತ್ವಕ್ಕೆ ಮತ್ತು
ಮುಗಿಯದ ಪ್ರೀತಿಗೆ.

ಆದರೆ ಸಂಜೆ ಹಿಂತಿರುಗುತ್ತಾ
ದಾರಿಯಲ್ಲಿ ಸಿಕ್ಕವರಿಗೆ, ದಕ್ಕಿದ
ಹೂವುಗಳನ್ನೆಲ್ಲಾ ಹಂಚಿ ಬರುತ್ತೇನೆ ನಾನು
ನನ್ನ ಇಷ್ಟದ ವ್ಯಕ್ತಿಗೆ, ಸಿಗ್ನಲ್ ನಲ್ಲಿ ಹೂ
ಕಟ್ಟುವ ಹೂವಾಡಗಿತ್ತಿಗೆ, ಊಟ ತಂದು ಕೊಟ್ಟ
ಬೈಕು ಸವಾರನಿಗೆ, ಇನ್ನೇನು ಕಳೆದುಹೋಗುತ್ತಿದ್ದೇನೆ
ಎನ್ನುವಾಗ ಎದುರಾಗುವ ಆಟೋ ಡ್ರೈವರ್ ಗೆ,
ಹೀಗೇ ಕಾಣುವ, ಸಂಗಾತಿಯ ಕೈಹಿಡಿದು ರಸ್ತೆ
ದಾಟುವಾಗಿನ ಕಣ್ಣುಗಳಲ್ಲಿರುವ ನಗುವಿಗೆ,
ಮತ್ತು ಎಂದಿಗೂ ನೆತ್ತಿಯ ಮೇಲಿರುವ
ಆಕಾಶದ ಚಪ್ಪರಕ್ಕೆ.

ಮನೆಗೆ ಹಿಂದಿರುವಾಗ ಹೂಗಳು ಖಾಲಿ
ನಾನೂ ಖಾಲಿ, ನಿಟ್ಟುಸಿರು ಮಾತ್ರ.
ಮತ್ತೆ ಬೆಳಗಾಗುತ್ತದೆ.
ಅದೇ ಹೂ ಬುಟ್ಟಿ ಹಡಿದು ರಸ್ತೆಗಿಳಿಯುತ್ತೇನೆ ನಾನು,
ದಾರಿಯಲ್ಲಿ ಬುಟ್ಟಿ ತುಂಬ ಹೂ
ಸಿಗುತ್ತದೆಂಬ ಗಟ್ಟಿ ನಂಬಿಕೆ ನನಗೆ!

‍ಲೇಖಕರು Admin

16 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading