ಲವ್ ಲೋಕಕ್ಕೆ ಹೊಸತನ : ಲವ್ ಮಾಕ್ ಟೇಲ್

ಲವರ್ ಬಾಯನ ಪ್ರೇಮ ಪಯಣ
ಗೊರೂರು ಶಿವೇಶ್ 

‘ಅಪಾಯಿಂಟ್ಮೆಂಟ್  ವಿತ್ ಲವ್’ ಇಂಗ್ಲೀಷ್ ನ ಪ್ರಸಿದ್ಧ ಕಥೆ. ಸೇನೆಯ ವಾಯುಪಡೆಯಲ್ಲಿ ಇರುವ ನಾಯಕನಿಗೆ ಗ್ರಂಥಾಲಯದಲ್ಲಿ ಅನಿರೀಕ್ಷಿತವಾಗಿ ದೊರಕುವ ಕಾದಂಬರಿ ಒಂದರಲ್ಲಿ ಒಬ್ಬಾಕೆ ಒಂದು ಪುಸ್ತಕದ ಕುರಿತಾಗಿ ಬರೆದ ವಿಮರ್ಶೆಯಿಂದ ಆಕರ್ಷಿತನಾಗಿ ಆಕೆಯ ಪರಿಚಯ ಬಯಸಿ ಪತ್ರ ಬರೆಯುತ್ತಾನೆ. ಮುಂದೆ ಅದು ಸ್ನೇಹಕ್ಕೆ ತಿರುಗಿ ರೈಲ್ವೆ ನಿಲ್ದಾಣದಲ್ಲಿ ಸಂಜೆ 6 ಗಂಟೆಯ ಸಮಯದಲ್ಲಿ ಭೇಟಿಯಾಗಲು ನಿರ್ಧರಿಸುತ್ತಾರೆ.

ಆ ಸಮಯಕ್ಕಿಂತ ಒಂದೆರಡು ನಿಮಿಷ ಮೊದಲೇ ಹೋಗುವ ನಾಯಕನಿಗೆ ಭೇಟಿಯಾಗುವ ಮೂವರು ಸ್ತ್ರೀಯರು ಆತನಲ್ಲಿ ಬೇರೆ-ಬೇರೆ ಭಾವನೆಗಳನ್ನು ಮೂಡಿಸುತ್ತಾರೆ. ಅಂತಿಮವಾಗಿ ಆಕೆಯನ್ನು ಭೇಟಿಯಾಗುವ ಸಂದರ್ಭ ವಿಶೇಷ ಕುತೂಹಲವನ್ನು ಮೂಡಿಸುತ್ತದೆ. ಈ ಕತೆ ನೆನಪಿಗೆ ಬಂದದ್ದು ತನ್ನ ವಿಶೇಷ ಶೀರ್ಷಿಕೆಯಿಂದ ಜನರ ಗಮನವನ್ನು ಸೆಳೆದಿರುವ ಲವ್ ಮಾಕ್ ಟೈಲ್ ಚಿತ್ರವನ್ನು ನೋಡಿದಾಗ. ಇಲ್ಲಿಯೂ ಕೂಡ ನಾಯಕ ಮೂವರು ಯುವತಿಯರನ್ನು ಭೇಟಿಯಾಗುವ ಪ್ರಸಂಗ ಕುತೂಹಲ ಹಾಸ್ಯ ಲವಲವಿಕೆಯ ಕಾರಣದಿಂದಾಗಿ ರಂಜನೀಯವಾಗಿದೆ

ಹಾಗೆ ನೋಡಿದರೆ ಈ ಚಿತ್ರ ಒಂದು ರೋಡ್ ಸಿನಿಮಾವೂ ಆಗಿದೆ. ಇಲ್ಲಿ ರಸ್ತೆಯ ಪ್ರಯಾಣ ಜೀವನದ ಪಯಣದ ರೂಪಕವು ಆಗಿದೆ. ಉಡುಪಿಗೆ ಪಯಣ ಹೊರಟ ನಾಯಕನಿಗೆ ಪರಿಚಯವಾಗುವ ಹುಡುಗಾಟದ ಮನೋಭಾವ ಹುಡುಗಿಗೆ ತನ್ನ ಆತ್ಮ ವೃತ್ತಾಂತವನ್ನು ನಾಯಕ ಹೇಳುತ್ತಾನೆ. ಪ್ರೌಢಶಾಲೆ ಕಾಲೇಜು ಹಾಗೂ ಉದ್ಯೋಗದ ಅವಧಿಯಲ್ಲಿ ಆತ ಬೇಟಿಯಾಗುವ ಮೂವರು ವಿಭಿನ್ನ ಮನೋಭಾವದ ಯುವತಿಯರು ಆತನ ಮೇಲೆ ಬೀರುವ ಪ್ರಭಾವ ಹಾಗೂ ಪರಿಣಾಮಗಳನ್ನು ಕುರಿತು ಚಿತ್ರ ಹೇಳುತ್ತದೆ. ಚಿತ್ರದ ಕಥೆ ಚಿತ್ರಕಥೆ ನಿರ್ದೇಶನದ ಜೊತೆಗೆ ಬಹುತೇಕ ತಾಂತ್ರಿಕ ವಲಯಗಳಲ್ಲಿ ಕೆಲಸ ಮಾಡಿರುವ ನಾಯಕ, ಲವರ್ ಬಾಯ್, ಮದರಂಗಿ ಚಿತ್ರದ ಮೂಲಕ ಖ್ಯಾತಿ ಪಡೆದ ಕೃಷ್ಣ ಸಿನಿಮಾವನ್ನು ಚೇತೋಹಾರಿಯಾಗಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರಂಭದಿಂದ ಅಂತ್ಯದವರೆಗೂ ಸಾಗುವ ಮೂರು ರೀತಿಯ ಭಿನ್ನ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆದರೆ ಇಡೀ ಚಿತ್ರದಲ್ಲಿ ಪ್ರೇಕ್ಷಕರನ್ನು ಹಿಡಿದಿಡುವುದು ಮಧ್ಯಂತರದ ಸುಮಾರಿಗೆ ಕಾಣಿಸಿಕೊಳ್ಳುವ ಹಾಸನದ ಹುಡುಗಿ ಮಿಲನ ನಾಗರಾಜ್. ಚಿತ್ರದ ನಿರ್ಮಾಪಕಿಯೂ ಆಗಿರುವ ಆಕೆ ಗ್ಲಾಮರ್ ಕಡಿಮೆ ಇರುವ ಆದರೆ ಅಭಿನಯಕ್ಕೆ ಹೆಚ್ಚು ಒತ್ತು ಇರುವ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿರುವುದು ಗಮನಾರ್ಹ .
ಕೊನೆ 20 ನಿಮಿಷಗಳ ಭಾವನಾತ್ಮಕ ನಿರೂಪಣೆ ಚಿತ್ರವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುತ್ತದೆ. ಕುತೂಹಲಕರ ಪ್ರಾರಂಭ ತಿರುವಿನ ಮಧ್ಯಂತರ ಹಾಗೂ ವಿಷಾದದ ಅಂತ್ಯ ಚಿತ್ರದ ವಿಶೇಷ. ಶಾಲಾ-ಕಾಲೇಜು ಆವರಣಗಳಲ್ಲಿ ಮತ್ತು ತರಗತಿಗಳಲ್ಲಿ ವಿದ್ಯಾರ್ಥಿ ಜೀವನದ ಚಟುವಟಿಕೆಗಳನ್ನು  ನೋಡಿರಬಹುದಾದರೂ ಇಲ್ಲಿ ಚಿತ್ರದ ಆರಂಭದ ಸನ್ನಿವೇಶಗಳಲ್ಲಿ ಬರುವ  ಮನೆಪಾಠದ ದೃಶ್ಯಗಳು ಇಂದಿನ ಯುವಜನಾಂಗಕ್ಕೆ ಇಪ್ಪತ್ತು ವರ್ಷಗಳ ಹಿಂದಕ್ಕೆ ಇದ್ದ ಪಾಠದ ಮನೆಯ ಸನ್ನಿವೇಶಗಳನ್ನು ನೆನಪಿಸುತ್ತದೆ. ಅದೇ ಚಿತ್ರದ ಪ್ರಮುಖ ಆಕರ್ಷಣೆ ಕೂಡ.

ರಘು ದೀಕ್ಷಿತ್ ಅವರ ಚಿತ್ರ ಸಂಗೀತ ಸಿನಿಮಾದ ಮತ್ತೊಂದು ಆಕರ್ಷಣೆ.  ಚಿತ್ರದ ಎರಡು ಹಾಡುಗಳನ್ನು ಕೇಳಲು ಮಧುರವಾಗಿದೆ. ಡ್ರೋನ್ ಕ್ಯಾಮರದಲ್ಲಿ ಸೆರೆಹಿಡಿದಿರುವ ಮಲೆನಾಡಿನ ಸನ್ನಿವೇಶಗಳು ಮನಸ್ಸಿಗೆ ಮುದ ನೀಡುತ್ತದೆ. ಚಿತ್ರದ ಶೀರ್ಷಿಕೆಯೂ ವಿಭಿನ್ನವಾಗಿದ್ದು ಗಮನಸೆಳೆಯುತ್ತದೆ. ಸಿಹಿ, ಒಗರು, ಕಹಿ ಬೆರೆತ ನಿಂಬೆಹಣ್ಣಿನ ಶರಬತ್ತಿನಂತೆ ಚಿತ್ರ ಮೂರು ಪ್ರೇಮ ಕಥೆ ಗಳ ಕಾಕ್ಟೈಲ್. ಚಿತ್ರದ ಟೈಟಲ್ ಇಲ್ಲಿ ಏಕಕಾಲಕ್ಕೆ ಆಕರ್ಷಣೆ, ಅರ್ಥವಾಗದವರಿಗೆ ತಲೆ ಕೆರೆದುಕೊಳ್ಳುವಂತೆ ಮಾಡುತ್ತದೆ.

ಚಿತ್ರದ ನಾಯಕ-ನಾಯಕಿ ಸಂಭಾಷಣೆಗಳ ಮೂಲಕ ಮೂಲಕ ಇಂಗ್ಲೀಷ್ ನಡುವೆ ಕನ್ನಡದ ಮಹತ್ವವನ್ನು ಪ್ರಚುರಪಡಿಸುವ ನಿರ್ದೇಶಕರು ಚಿತ್ರಕ್ಕೆ ಸುಲಭ ಮತ್ತು ಸರಳವಾದ ಟೈಟಲ್ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸದಿರದು. ಒಟ್ಟಾರೆ ಹೊಡಿಬಡಿ ಚಿತ್ರಗಳ ನಡುವೆ ಸದಭಿರುಚಿಯ ಚಿತ್ರವನ್ನು ಪ್ರೇಕ್ಷಕ ಮಹಾಶಯ ಗೆಲ್ಲಿಸಬೇಕಾಗಿದೆ.

‍ಲೇಖಕರು avadhi

February 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: