ಲಕ್ಷ್ಮಣ್ ಕೆ ಪಿ
1.
ಒಂದೇ ಪ್ರಾರ್ಥನೆ
ನಾನು
ಹಿಂಸೆಯ ಪಗಡೆಯ ಜೊತೆ
ಬೆಳೆದೆ
ಬರಿ ನಾನು ಅಂದರೆ ತಪ್ಪಾಗುತ್ತದೆ
ಆ ಮಗು, ಆ ಹೆಂಗಸು
ಎಲ್ಲರು
ಕಣ್ಣು ಕಿವಿ ಮೂಗು ತೊಗಲೆಲ್ಲ
ಪಗಡೆಯಲ್ಲಿ ಮಿಂದೆಳಬೇಕು
ಜೀವ ಹಿಡಿದಿಟ್ಟುಕೊಂಡು
ಬಿಳಿ ಸೋರೆಯ ಹೂವಿನ ಮೇಲೂ
ರಕ್ತದ ಕಲೆ
ಬೆನ್ನಿಗೆ ಪಚ್ಚೆ ಸೋರೆ ಮರಿಕಾಯಿ
ರಕ್ತ ಸೋರೆ ಹೂವು ಬಾಡಿದ ಮೇಲೆ
ಬೆಳೆದು ಬಾಳಬೇಕು

ನಮದೆಲ್ಲ ಆಗ ಒಂದೇ ಪ್ರಾರ್ಥನೆ
“ಶಕ್ತಿ ಕೊಡು ದೇವರೇ
ನಾವು ಅವರನ್ನು ಹೊಡಿಬೇಕು”
ಒಮ್ಮೆ ಅನ್ನಿಸಿಬಿಟ್ಟಿತು
ದೇವರೂ
ನನ್ನಷ್ಟೇ
ಅಪೌಷ್ಟಿಕತೆಯಲ್ಲಿ
ಬೆಳೆಯುತ್ತಿರುವ ಕೂಸೆಂದು
ಅಕ್ಷರ ಕಲಿತೆ
ಅಂದು ದೇವರಿಗೆ
ಕಪ್ಪು ಹಲಗೆಯ ಮೇಲೆ ಬಿಳೀ ಸೋರೆ ಹೂವಿನ ಬಣ್ಣದ
ಬಳಪ ಹಿಡಿದು
ಕಪ್ಪು ಹಲಗೆಯ ಮೇಲೆ ಬರೆದು ಪಾಠ ಮಾಡಿದೆ
“ದೇವರೇ ಅವರೇನು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿದೆ”
2.
ಪ್ರೇಮದ ಬುಗ್ಗೆಗಳು ಎಲ್ಲಿರುತ್ತವೆ
ಪ್ರೇಮದ ಬುಗ್ಗೆಗಳು ಎಲ್ಲಿರುತ್ತವೆ
ನೆಲವನ್ನು ಕಳೆದುಕೊಂಡವರ ಕಣ್ಣುಗಳನ್ನು
ಒಮ್ಮೆ ನೋಡಬೇಕು
ಅವರನ್ನು
ಊರಿಂದ ಅಟ್ಟಿದಾಗ
ತಿರುಗಿ ನೋಡುವಾಗ
ಹೋಗಿ ಬನ್ನಿ ಎಂದು ಹೇಳಲು
ಯಾರೂ
ಇಲ್ಲದಿರುವಾಗ
ಅಲ್ಲಿ ಪ್ರೇಮದ ಕುಲುಮೆ
ಹೊಟ್ಟೆ ಉರಿಯನ್ನೆ ಉಸಿರು ಮಾಡಿಕೊಂಡು ಉರಿಯುತ್ತದೆ
ಆಕಾಶವೇನೋ ಅಲ್ಲಿಯೇ ಇದೆ
ನೆಲಬಳ್ಳಿ ಕಡಿದ ಮೇಲೆ
ನಡೆದಲ್ಲೆಲ್ಲ ರಕ್ತದ ಗುರುತು

ಬರಿ ರೊಟ್ಟಿಯೊಂದಿದ್ದರೆ
ಮನುಷ್ಯರ
ಬದುಕು ಸಾಗುವುದಿಲ್ಲ
ಎಂದ ಯೇಸು
ಮತ್ತೇನು ಬೇಕೆಂದು ಅವನನ್ನು ಕೇಳದೆ
ಕೊಂದುಬಿಟ್ಟೆವು
ಪ್ರೀತಿಯನ್ನು ಕೊಂದು
ಮತ್ತೆ ಹುಟ್ಟುತ್ತವೆ ಎಂದು ಕತೆ ಕಟ್ಟುತ್ತೇವೆ
ಅಷ್ಟೇ ಉಳಿದದ್ದು ನಮಗೆ
ಇಷ್ಟಾದರೂ ಸಂತರ ಬಾಯಿಯಿಂದ
ಪ್ರೀತಿ ಕುರಿತು ಪ್ರವಚನ ಕೇಳಬೇಡಿ
ಅವರು ಪ್ರೀತಿಯ ದಿಕ್ಕು ತಪ್ಪಿಸುತ್ತಾರೆ
ನಂಬಬೇಡಿ
ತಿಪ್ಪೆ ಸಾರಿಸುವ ನ್ಯಾಯ ಹೇಳುತ್ತಾರೆ






0 Comments