ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೋಹಿತ್ ಕೇಳಿಸ್ತಿದ್ಯಾ, ಇಲ್ಲ ನಿನಗಾಗಿ ಒಂದು ಹನಿ ಕಣ್ಣೀರೂ ಉರುಳದಂತೆ ನಿಗ್ರಹಿಸಿಕೊಳ್ಳಲೇಬೇಕು ನನಗೆ..

 

 

 

 

 

 

 

 

Juzt Shafi

ಪ್ರೀತಿಯ ರೋಹಿತ್‌,

ನಿನ್ನ ಪತ್ರವನ್ನು ನಾನೂ ಓದಿದೆ.

rohith vemula readingಆತ್ಮ ಮತ್ತು ದೇಹದ ನಡುವೆ ಕಂದರವೊಂದು ಬೆಳೆಯುತ್ತಾ ಹೋಗುತ್ತಿರುವುದು ಅರಿವಾದಾಗ ಆಗುವ ಕರುಣಾಜನಕ ಸ್ಥಿತಿ, ಮನುಷ್ಯರು ವಸ್ತುಗಳಂತಾಗಿ ಎದುರಾಗುವಾಗ, ನಮ್ಮ ಬಣ್ಣಗಳು ಮಾತುಗಳು ಕೃತಕ ಎಂದು ಒಪ್ಪಿಕೊಳ್ಳಬೇಕಾದಾಗ, ನೋವಿಲ್ಲದೆ ಒಂದು ಹಿಡಿ ಪ್ರೀತಿಯೂ ಅಲಭ್ಯವಾಗುವ ಕಹಿ ಸತ್ಯ ಅರಗಿಸಿಕೊಳ್ಳುವಾಗೆಲ್ಲ ತಲುಪಿಬಿಡುವ ಖಾಲಿತನ ಮತ್ತು ಅಲ್ಲಿನ ಕ್ರೂರ ಹಿಂಸೆಗಳನ್ನು ಸಹಿಸಿಕೊಂಡೂ ಸಾವಿಗೆ ಕೊರಳೊಡ್ಡದೇ ಉಳಿದ ನಾನು, ನಿನ್ನ ನಿರ್ಧಾರದ ಬಗ್ಗೆ ಸಹಮತ ಹೊಂದಲಾರೆ, ಹಾಗಾಗಿ ನಿನ್ನ ಸಾವಿನ ಬಗ್ಗೆ ಮರುಕ ವ್ಯಕ್ತಪಡಿಸುವವರೊಂದಿಗೆಯೂ ಸಹಮತ ವ್ಯಕ್ತಪಡಿಸಲಾರೆ.

ನೀನು ಸಾವಿನ ನಂತರದ ಪ್ರೇತ ಪಿಶಾಚಿ ಕಥೆಗಳನ್ನು ನಿರಾಕರಿಸುತ್ತಲೇ, ಸತ್ತ ನಂತರ ನಕ್ಷತ್ರಗಳ ಬಳಿಗೆ ತಲುಪಬಹುದು ಎಂದು ಭಾವಿಸುತ್ತೇನೆ ಎಂದು ಬರೆದು ನಿನ್ನ ಪ್ರೀತಿಸಿದ ಹೋರಾಟದ ಹುಡುಗರ ಎದೆಯಲ್ಲಿ ಪ್ರೇತ ಪಿಶಾಚಿ ಕಥೆಗಳಿಗಿಂತಲೂ ನಿಕೃಷ್ಟ ಮೌಢ್ಯವನ್ನು ಬಿತ್ತಿದುದರ ಬಗ್ಗೆ ನನಗೆ ನಿನ್ನೊಂದಿಗೆ ಅಸಮಾಧಾನವಿದೆ. ಸತ್ಯದಲ್ಲಿ ನೀನು ನಿಜವಾಗಿಯೂ, ನಕ್ಷತ್ರವನ್ನು ಪ್ರೀತಿಸಿದ್ದಿದ್ದಾದರೆ ಅವುಗಳ ಬಳಿಗೆ ತಲುಪಬಹುದಾಗಿದ್ದು, ನಿನಗೆ ಅವುಗಳನ್ನು ಪಡೆಯಬಹುದಾಗಿದ್ದು ಇಲ್ಲಿ ಮಾತ್ರವೇ.

ಇಲ್ಲಿ ನಿನಗೆ ಅಂತಹ ಲಕ್ಷ ಲಕ್ಷ ಅವಕಾಶಗಳಿದ್ದವು. ಆದರೆ ನೀನು..? ಇಲ್ಲ ನಾ ಯಾವ ಕಾರಣಕ್ಕೂ ನಿನ್ನ ವಾದಗಳನ್ನು ಒಪ್ಪಲಾರೆ. ನಕ್ಷತ್ರಗಳ ಬಳಿಗೆ ತಲುಪುವವನು ಯಾವಾಗಲೂ ಹೋರಾಟದ ಹಾಡುಗಳನ್ನು ಹಾಡುವ ಯುವ ಶಕ್ತಿಗಳ ಮುಂದಾಳತ್ವ ವಹಿಸಿಯೇ ನಿಂತಿರುತ್ತಾನೆ. ಅವನು ವಿರಾಮ ಬಯಸುವುದಿಲ್ಲ, ಅಥವಾ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದಿಲ್ಲ.

ನಿನ್ನ ಸಾವಿನ ಬಗ್ಗೆ ಎಲ್ಲರೂ ಕಣ್ಣಂಚು ಒದ್ದೆಯಾಗಿಸುತ್ತಿರುವಾಗ ನನ್ನ ಈ ಒರಟು ಬರಹ ನಾನು ಬರೆಯಬಾರದಿತ್ತು. ಆದರೆ ಇಲ್ಲ, ಬಾಬಾ ಸಾಹೇಬರ ಕನಸು ನನಸು ಮಾಡುತ್ತೇನೆ ಎಂದು ಹೊರಡುವವರು, ಎದೆಯ ಮೇಲಿನ ಬೂಟುಕಾಲಿಗೆ ಕ್ಯಾಕರಿಸಿ ಉಗಿದು ಹುತಾತ್ಮರಾದವರನ್ನು ಪ್ರೇರಣೆಯಾಗಿಟ್ಟುಕೊಂಡು ಹೋರಾಟದ ಹಾಡು ಕಟ್ಟಿದ ನನ್ನ ದೇಶದ ಯಾವ ಯುವಕನೂ ನೀನು ತುಳಿದ ದಾರಿ ಮತ್ತು ಕೊಟ್ಟ ಸಮರ್ಥನೆಗಳು ಸರಿ ಎಂದು ನಂಬುವುದನ್ನು ನಾನು ಭಯಪಡುತ್ತೇನೆ.

ಅವರನ್ನು ಸೋಲಿಸಲು ಹೊರಟವರಿಗಿಂತಲೂ ಅಪಾಯಕಾರಿ ಅಪಾಯವೊಂದು ಚಾಲ್ತಿಗೆ ಬರುವುದನ್ನು ಅಥವಾ ಪ್ರಿಯವೆನ್ನಿಸುವುದನ್ನು ನಡೆಯಗೊಡಲು ನಾನು ಕಾರಣವಾಗುವುದನ್ನೂ ನಾನು ಭಯಪಡುತ್ತೇನೆ. ಯಾಕೆಂದರೆ ನಮ್ಮ ಹೋರಾಟಗಳು ಅಂತಿಮ ಗುರಿಗಳನ್ನು ತಲುಪದೇ ಹೋದರೆ, ಮತ್ತೆ ನಮ್ಮ ತಲೆಮಾರುಗಳನ್ನು ಬಿಗಿದುಕೊಳ್ಳಬಹುದಾದ ದಾಸ್ಯದ ಸಂಕೋಲೆಗಳು ನನ್ನನ್ನು ಅತೀವವಾಗಿ ಚಿಂತೆಗೀಡುಮಾಡುತ್ತದೆ.

ಇರಬಹುದು ನನಗೂ, ನಿನಗಾಗಿ ಅಳಬೇಕೆಂಬ ಹಂಬಲ, ಆದರೆ ಇಲ್ಲ ನಿನಗಾಗಿ ಒಂದು ಹನಿ ಕಣ್ಣೀರೂ ಉರುಳದಂತೆ ನಿಗ್ರಹಿಸಿಕೊಳ್ಳಲೇಬೇಕು ನನಗೆ. ನಿನ್ನ ದಾರಿ ತುಳಿಯುವ ಯಾರಿಗೂ ನನ್ನ ಕಣ್ಣಂಚುಗಳು ಒದ್ದೆಯಾಗಗೊಡಬಾರದು.

ಆ ಮೂಲಕವಾದರೂ ನಾನು ನಿನ್ನಂತಹ ಸಾವಿರ ಸಾವಿರ ಯುವಕರನ್ನು ಅವರ ಗುರಿಗಳ ಬಗ್ಗೆ ನೆನಪಿಸಬೇಕಿದೆ. ಅವರು ನಕ್ಷತ್ರಗಳನ್ನು ಭೂಮಿಗೆ ತರುವ ದಿನಗಳನ್ನು ಎದುರು ನೋಡುವ ಬಯಕೆಯಿದೆ. ಮತ್ತು ನಕ್ಷತ್ರಗಳನ್ನು ಹುಡುಕಿ ನೇಣಿಗೆ ಕೊರಳೊಡ್ಡಬೇಕಾದ ಅವಶ್ಯಕತೆ ಇಲ್ಲಿ ಯಾರಿಗೂ ಬಾರದ ದಿನವೊಂದರ ಬಗ್ಗೆ ತುಡಿತವಿದೆ.

-ಬೇಸರದೊಂದಿಗೇ ನಿನ್ನ ಸಹೋದರ

‍ಲೇಖಕರು Admin

19 January, 2016

4 Comments

  1. Anonymous

    ನಕ್ಷತ್ರಗಳನ್ನು ತಲುಪಲು ಹೋರಾಟದ ಹಾದಿಯೇ ಮಾರ್ಗ, ಅದನ್ನು ಸಾಧಿಸಲು ಈಬದುಕೆೇ ರಹದಾರಿ ಎಂಬುದು ಕಟು ವಾಸ್ತವ. ರೋಹಿತ್ ಅವಸರಪಟ್ಟ ಎನಿಸುವುದು ಇದೇ ಕಾರಣಕ್ಕೆ.ಅವನಂಥವರ ಸಾರಥ್ಯ ಉಳಿದವರಿಗೆ ಪ್ರೇರಣೆಯಾಗಬಹುದಾದ ಸಂದರ್ಭದಲ್ಲಿ ಆತನ ಆಯ್ಯಕೆ ಒಂದು ಗುಂಪಗೆ, ಸಮಾಜಕ್ಕೆ ಉಂಟಾದ ನಷ್ಟ. ನಿಮ್ಮ ಅನಿಸಿಕೆ ಹಲವರ ಅನಿಸಿಕೆ.ಥ್ಯಾಂಕ್ಯುೂ ಶಫಿ.

  2. Samvartha 'Sahil

    ಮನುಷ್ಯನ ಅಸಹಾಯಕತೆ ಅತಂತ್ರ ಅವಮಾನ ಮತ್ತು ಅವು ಮನುಷ್ಯನನ್ನು ಹೇಗೆ ಅಧೃಡಗೊಳಿಸಬಹುದು ಎಂಬುದರ ನಿಜವಾದ ಅರಿವು ಇರದ ರಾಜಕೀಯ ಪರಿಜ್ಞಾನ ಮಾತ್ರ ಇಂತಹ ಪತ್ರ ಬರೆಯಬಹುದು. ಆತ್ಮಹತೆಯ್ಯೇ ಕೊನೆಗುಳಿದ ಅಸ್ತ್ರ ಆಗುವ ಪರಿಸ್ಥಿತಿಯನ್ನು ಗ್ರಹಿಸಲಾಗದೆ “ಹೋರಾಟ”ದ ಮಾತು ಆಡುವುದು ಉಪದೇಶ ನೀಡುವುದು ಒಂದು ಬ್ಯಾಡ್-ಫೈತ್ ಕ್ರಿಯೆ ಎಂದು ನನ್ನ ಅಭಿಪ್ರಾಯ. “ಈಸ ಬೇಕು ಇದ್ದು ಜಯಿಸಬೇಕು” ಎಂಬ ಒಣ ಆದರ್ಶ ಉಳ್ಳವರ ಶಿವಾಲಯವೇ ಹೊರತು ಮತ್ತಿನ್ನೇನೂ ಅಲ್ಲ. ಮನುಷ್ಯ ಬದುಕಿನ ನಿಷ್ಯಕ್ತಿಯ ಹತಾಶೆಯ ದೌರ್ಬಲ್ಯದ ಕ್ಷಣಗಳನ್ನು ಅರಿಯಲಾಗದ ರಾಜಕೀಯ ಬರಿ ಘೋಷಣೆ ಮಾತ್ರವಾಗಿಯೇ ಉಳಿಯುತ್ತದೆ. ಇದರಿಂದ ‘ಹೋರಾಟ’ಕ್ಕೂ ನಿಜವಾದ ಬಲ ಬರುವುದಿಲ್ಲ ಎಂಬುದು ಕಹಿ ಸತ್ಯ. “ಆತ್ಮಹತ್ಯೆಯಿಂದ ಬರುತ್ತದಾ?” ಎಂಬ ಮರುಪ್ರಶ್ನೆ ಬರುವ ಖಾತ್ರಿ ಇದ್ದೂ ಈ ಮಾತನ್ನು ಹೇಳುತ್ತಿದ್ದೇನೆ, ಆತ್ಮಹತ್ಯೆಯನ್ನು ಸಮರ್ಥಿಸಿಕೊಳ್ಳುವ ಆರೋಪ ಬರಬಹುದು ಎಂಬುದನ್ನು ಅರಿತೂ ಬರೆದಿರುವ ಹಾಗೆ, ಆತ್ಮಹತ್ಯೆಯ ಹಿಂದಿನ ರಾಜಕೀಯ ಅರ್ಥ ಆದಾಗ ಆತ್ಮಹತೆ ದುರ್ಬಲವಾಗಿ ಕಾಣಿಸುವುದಿಲ್ಲ, ಮನುಷ್ಯ ತನ್ನ ದೇಹವನ್ನೇ ತನ್ನ ಬದುಕನ್ನೇ ತನ್ನ ಪರಿಸ್ಥಿತಿಯ ವಿರುದ್ಧದ ಹೋರಾಟದ ಅಸ್ತ್ರವಾಗಿಸಿದ ಅಸಹಾಯಕತೆ ಕಾಣಿಸುತ್ತದೆ. ಆಗ ಹೋರಾಟ ಕಟ್ಟಬೇಕಿರುವ ಮಾರ್ಗಗಳು ಸಹ ಕಾಣಿಸಿಕೊಳ್ಳುತ್ತವೆ. ಹೃದಯವಂತಿಕೆಯಿಲ್ಲದ ಇಲ್ಲದ ರಾಜಕೀಯಕ್ಕೆ ದೃಷ್ಟಿಯೂ ಇರುವುದಿಲ್ಲ, ದೂರದ್ರುಷ್ಟಿಯೂ ಇರುವುದಿಲ್ಲ. ಕ್ಷಮಿಸಿ ನಿಮ್ಮ ಬಹಿರಂಗ ಪತ್ರ ಸಿಟ್ಟು ತರಿಸಿತು ಮತ್ತು ತೀರಾ ಬ್ಯಾಡ್-ಫೈತ್ ಪತ್ರ ಅನ್ನಿಸಿತು. ಕವಿ ಹೃದಯಿ ಆದ ನೀವು ಭಾವುಕವಾಗಿಯೇ ಬರೆದಿದ್ದೀರಿ ಎಂಬ ಅರಿವು ಇದೆ ಮತ್ತು ನಿಮ್ಮ ನಿಲುವಿನ ಬಗೆಗೆ ಯಾವ ಸಂಶಯವೂ ಇಲ್ಲ. ಆದರೆ ಈ ಪತ್ರ ಮಾತ್ರ ಯಾಕೋ ರಾಜಕೀಯ ಆಕ್ರೋಶದ ನಡುವೆ ಸ್ವಲ್ಪ ಅಮಾನವೀಯ ಆಗಿದೆ ಅನ್ನಿಸಿತು. ನನ್ನ ಸಿಟ್ಟು ನನ್ನ ಮಾತು ನೋವು ಉಂಟು ಮಾಡಿದರೆ ಕ್ಷಮೆ ಇರಲಿ.

  3. Dr. Prabhakar M. Nimbargi

    Shafi, your article should & must open the eyes of the youngsters who very often, having been earlier disillusioned of a bright future as is seen in the movies, become suddenly highly pessimistic turn to such drastic acts ending their life. One must understand that life is not a bed of roses, especially for the poor ones.

  4. ಶಮ, ನಂದಿಬೆಟ್ಟ

    Shafi, I second you…
    “ಎದೆಯ ಮೇಲಿನ ಬೂಟುಕಾಲಿಗೆ ಕ್ಯಾಕರಿಸಿ ಉಗಿದು ಹುತಾತ್ಮರಾದವರನ್ನು ಪ್ರೇರಣೆಯಾಗಿಟ್ಟುಕೊಂಡು ಹೋರಾಟದ ಹಾಡು ಕಟ್ಟಿದ ನನ್ನ ದೇಶದ ಯಾವ ಯುವಕನೂ ನೀನು ತುಳಿದ ದಾರಿ ಮತ್ತು ಕೊಟ್ಟ ಸಮರ್ಥನೆಗಳು ಸರಿ ಎಂದು ನಂಬುವುದನ್ನು ನಾನು ಭಯಪಡುತ್ತೇನೆ. ನಕ್ಷತ್ರಗಳನ್ನು ಹುಡುಕಿ ನೇಣಿಗೆ ಕೊರಳೊಡ್ಡಬೇಕಾದ ಅವಶ್ಯಕತೆ ಇಲ್ಲಿ ಯಾರಿಗೂ ಬಾರದ ದಿನವೊಂದರ ಬಗ್ಗೆ ತುಡಿತವಿದೆ.” –

    ಇದು ನನ್ನ ಮಾತು ಕೂಡ. ಒಣ ಆದರ್ಶ ಅಥವಾ ಭಾವುಕ ನೆಲೆಯಲ್ಲಿ ಹೇಳುತ್ತಿಲ್ಲ ನಾನು. ಅವನು ಅನುಭವಿಸಿದ ನೋವು ಅಪಮಾನಗಳಲ್ಲಿ ಬಹಳಷ್ಟನ್ನು ಸ್ವತಃ ಅನುಭವಿಸಿದವಳು ನಾನು. ಅದೂ ಅವನ ವಯಸ್ಸಲ್ಲಿ ಅಲ್ಲ. ಬಹಳ ಎಳೆಯ ವಯಸ್ಸಿನಲ್ಲಿ ಕೂಡ. ನಾನು ಅನುಭವಿಸಿದ್ದು ಜಾತಿಯ ಕಾರಣಕ್ಕೂ ಹೌದು; ಬಡತನದ ಕಾರಣಕ್ಕೂ ಹೌದು. ಅವತ್ತು ನಾನೂ ಹೀಗೇ ಕುಣಿಕೆ ಸುತ್ತಿಕೊಂಡಿದ್ದರೆ ನಕ್ಷತ್ರಗಳನ್ನೆಣಿಸುವುದು ಸಾಧ್ಯವಾಗುತ್ತಿರಲಿಲ್ಲ.

    ನನ್ನ ಮನದ ಮಾತಿಗೂ ದನಿಯಾಗಿದ್ದಕ್ಕೆ Thanks brother

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading