ರೋಸಾ ಲಕ್ಸಂಬರ್ಗ್ ನೆರಳಿನಲ್ಲಿ..

ಮ ಶ್ರೀ ಮುರಳಿಕೃಷ್ಣ

ಒಂದುನೂರು ಐವತ್ತು ವರ್ಷಗಳ ಹಿಂದೆ, ಅಂದರೆ ಮಾರ್ಚ್ 5, 1871ರಂದು ಇಂದಿನ ಪೋಲ್ಯಾಂಡ್ ನಲ್ಲಿ (ಅಂದು ಅದು ರಷ್ಯಾ ಸಾಮ್ರಾಜ್ಯದ ಭಾಗವಾಗಿತ್ತು) ಜನಿಸಿದ ರೋಸಾ ಲಕ್ಸಂಬರ್ಗನ್ನು ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಂದು ವಿಶೇಷವಾಗಿ ನೆನಪಿಸಿಕೊಳ್ಳಬೇಕು.  ಸಾರ್ವಜನಿಕ ರಂಗದ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಲಯದ ಪ್ರಜ್ಞಾವಂತ ಹೋರಾಟಗಾರರಿಗೆ ರೋಸಾ ಸಮ ಸಮಾಜದ ಚಳವಳಿಗೆ ನೀಡಿದ ಅಪೂರ್ವ ಕೊಡುಗೆಗಳ ಸ್ಥೂಲ ಪರಿಚಯವಾದರೂ ಇದ್ದೇ ಇರುತ್ತದೆ. ಈ ಸಂದರ್ಭದಲ್ಲಿ ಆಕೆಯ ಬಗೆಗಿನ ಒಂದು ಝಲಕನ್ನು ಈ ಕಿರು ಬರಹದಲ್ಲಿ ಪ್ರಯತ್ನಿಸಲಾಗಿದೆ.

ರೋಸಾ ಒಂದು ಕೆಳ-ಮಧ್ಯಮ ವರ್ಗದ ಯಹೂದಿ ಕುಟುಂಬದಲ್ಲಿ ಐದನೇ ಮಗುವಾಗಿ ಜನಿಸಿದಳು. ಪ್ರೌಢಶಾಲೆಯಲ್ಲೇ ಆಕೆ ಭೂಗತ ಚಟುವಟಿಕೆಗಳಲ್ಲಿ ನಿರತಳಾಗಿದ್ದಳು. ನಂತರ ಝ್ಯರಿಚ್ ನಲ್ಲಿ ಕಾನೂನು ಮತ್ತು ರಾಜಕೀಯ ಅರ್ಥಶಾಸ್ತ್ರಗಳಲ್ಲಿ ಡಾಕ್ಟರೇಟನ್ನು ಪಡೆದಳು. ಕ್ರಮೇಣ ಅಂತರರಾಷ್ಟ್ರೀಯ ಮಟ್ಟದ ಸಮಾಜವಾದಿ ಚಳವಳಿಯಲ್ಲಿ ಸಕ್ರಿಯಳಾದಳು. ಕುಶಾಗ್ರಮತಿಯಾಗಿದ್ದ ಆಕೆ ಸಮತಾವಾದವನ್ನು ಆಳವಾಗಿ ಅಧ್ಯಯನ ಮಾಡಿದಳು. ಮುಂದೆ, ಆಕೆ ಮತ್ತು ಕೆಲವು ಸಂಗಾತಿಗಳು, ಪೋಲ್ಯಾಂಡ್ ಸ್ವಾತಂತ್ರ್ಯದ ಬಗೆಗಿನ ತಾತ್ವಿಕ ಭಿನ್ನಾಭಿಪ್ರಾಯಗಳ ಕಾರಣದಿಂದ ಪ್ರತಿಸ್ಪರ್ಧಿ ಪೋಲಿಶ್ ಸೋಷಯಲ್ ಡೆಮೋಕ್ರಟಿಕ್ ಪಕ್ಷವನ್ನು ಸ್ಥಾಪಿಸಿದರು.

ಆಕೆಗೆ ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ವಿಮೋಚನಾ ಮಾರ್ಗದ ಬಗೆಗೆ ವ್ಯತಿರಿಕ್ತ ಅಭಿಮತಗಳಿದ್ದವು. ಅವು ಬೂರ್ಶ್ವಾ ವರ್ಗಕ್ಕೆ (ಆಸ್ತಿ ಹೊಂದಿದ ಉಚ್ಚ ಮತ್ತು ಮಧ್ಯಮ ವರ್ಗದ ಜನರನ್ನು ಬಣ್ಣಿಸಲು ಮಾರ್ಕ್ಸ್ವಾದಿ ಪರಿಭಾಷೆಯಲ್ಲಿ ಬಳಸುವ ಪದ) ನೀಡುವ ಪ್ರತಿಗಾಮಿ ರಿಯಾಯಿತಿಗಳೇ ಎಂಬುದು ಅವರ ನಿಲುವಾಗಿತ್ತು. ಇದಕ್ಕೆ ಪರ್ಯಾಯವಾಗಿ ಅವರು ಸಮಾಜವಾದಿ ಅಂತರರಾಷ್ಟ್ರೀಯತೆಯನ್ನು ಎತ್ತಿ ಹಿಡಿದರು. 

ಈ ನಿಟ್ಟಿನಲ್ಲಿ ಅವರು ವ್ಲಾಡಮೀರ್ ಲೆನಿನ್ ಪ್ರತಿಪಾದಿಸಿದ ರಾಷ್ಟ್ರೀಯ ಸ್ವಯಾಮಾಧಿಕಾರ (ನ್ಯಾಷನಲ್ ಸೆಲ್ಫ್-ಡಿಟರ್ಮಿನೇಶನ್) ತತ್ವವನ್ನೂ ವಿರೋಧಿಸಿದರು. ಲಿನಿನ್ನಂತಹ ಅಂತರರಾಷ್ಟ್ರೀಯ ಮಟ್ಟದ ಸಮತಾವಾದಿ ನಾಯಕನ ನಿಲುವನ್ನು ಪ್ರಶ್ನಿಸುವ ಸೈದ್ಧಾಂತಿಕ ಪ್ರಖರತೆ ಮತ್ತು ಧೀಶಕ್ತಿ ಆಕೆಗಿತ್ತು!

ರೋಸಾ 1898ರಲ್ಲಿ ಗುಸ್ಟವ್ ಲ್ಯುಬೆಕನ್ನು ವಿವಾಹವಾಗಿ ಜರ್ಮನಿಯ ಪೌರತ್ವವನ್ನು ಪಡೆದಳು. ಬರ್ಲಿನಲ್ಲಿ ನೆಲಸಿ ಆ ಕಾಲದ ವಿಶ್ವದಲ್ಲೇ ಅತಿ ದೊಡ್ಡ ಮಾರ್ಕ್ಸವಾದಿ ಪಕ್ಷವಾಗಿದ್ದ ಜರ್ಮನ್ ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿಯ ಅನೇಕ ಚಟುವಟಿಕೆಗಳಲ್ಲಿ ಕ್ರಿಯಾಶೀಲಳಾದಳು. ಜರ್ಮನಿಯಾದ್ಯಂತ ಕಾರ್ಮಿಕ ವರ್ಗವನ್ನು ಸಂಘಟಿಸಿ ಧೀರೋದಾತ್ತ ಹೋರಾಟಗಳಿಗೆ ನೇತೃತ್ವವನ್ನು ನೀಡಿದಳು. ಕಾರಾಗ್ರಹವಾಸವನ್ನೂ ಅನುಭವಿಸಿದಳು. ಸಾಮೂಹಿಕ ಮುಷ್ಕರ ದುಡಿಯುವ ವರ್ಗದ ಅತ್ಯಂತ ಪ್ರಬಲ ಅಸ್ತ್ರವೆಂಬ ನಿಲುಮೆಯನ್ನು ಹೊಂದಿದ್ದ ಆಕೆ ಸಮತಾವಾದದ ಕ್ರಾಂತಿಯ ವಿಜಯಕ್ಕೆ ಇದು ಪ್ರಧಾನ ಸಾಧನವಾಗುತ್ತದೆ ಎಂದು ಪ್ರತಿಪಾದಿಸಿದಳು.

ಆಕೆ 1913ರಲ್ಲಿ ‘ಅಕ್ಯುಮಲೇಶನ್ ಆಫ್ ಕ್ಯಾಪಿಟಲ್ʼ ಎಂಬ ಕೃತಿಯನ್ನು ರಚಿಸಿದಳು. ಅದರಲ್ಲಿ ಮಾರ್ಕ್ಸ್ನ ಆರ್ಥಿಕ ವಿಚಾರ ಸರಣಿಯನ್ನು ವಿಸ್ತರಿಸುತ್ತ ಆ ಕಾಲದಲ್ಲಿ ಅಟ್ಟಹಾಸದ ನಡೆಯಲ್ಲಿದ್ದ ಸಾಮ್ರಾಜ್ಯಶಾಹಿಯನ್ನು ವಿಶ್ಲೇಷಿಸಿದಳು. ಬಂಡವಾಳದ ಸಂಗ್ರಹಕ್ಕಾಗಿ ಸರಕುಗಳ ಮಾರುಕಟ್ಟೆಗಳು ವಿಸ್ತರಿಸುತ್ತಲೇ ಇರಬೇಕು, ಮಾರುಕಟ್ಟೆಗಳಿಗಾಗಿ ಜರುಗಿದ ಹುಡುಕಾಟಗಳು ಪರಸ್ಪರ ಸಾಮ್ರಾಜ್ಯಶಾಹಿ ಪ್ರತಿಸ್ಪರ್ಧೆಯನ್ನು ಸೃಷ್ಟಿಸಿ, ಪ್ರಥಮ ವಿಶ್ವ ಸಮರಕ್ಕೆ ಕಾರಣವಾಯಿತೆಂದು ವಾದಿಸಿದಳು.

ಆಕೆ ‘ಸಮತಾವಾದ ಅಥವಾ ಬರ್ಬರತೆʼ ಎಂಬ ಘೋಷಣೆಯನ್ನು ಜನಪ್ರಿಯಗೊಳಿಸಿದಳು. (ಈ ಘೋಷಣೆಯನ್ನು ಪ್ರಥಮ ಬಾರಿಗೆ ಬಳಸಿದ್ದು ಝೆಕ್-ಆಸ್ಟ್ರೀಯನ್ ಮಾರ್ಕ್ಸ್ವಾದಿಯಾಗಿದ್ದ ಕಾರ್ಲ್ ಕೌಟ್ಸ್ಕಿ). ಇದರರ್ಥ ಬಂಡವಾಳಶಾಹಿಯ ಬದಲು ಸಮಾಜವಾದ ಅಸ್ತಿತ್ವಕ್ಕೆ ಬರದಿದ್ದರೇ, ಅದು ಜಾಗತಿಕ ಯುದ್ಧಗಳಿಗೆ ಎಡೆಮಾಡಿಕೊಟ್ಟು, ಇಡೀ ನಾಗರಿಕತೆಗೇ ಕುತ್ತಾಗುತ್ತದೆ.

ವಿಶ್ವದಲ್ಲೇ ಪ್ರಥಮ ಬಾರಿಗೆ ‘ಸಮಾಜವಾದಿ ಕ್ರಾಂತಿʼ 1917ರಲ್ಲಿ ರಷ್ಯಾದಲ್ಲಿ ಜರುಗಿತು. ನಂತರ ಅನೇಕ ಪ್ರತಿಕೂಲಕರ ಸನ್ನಿವೇಶಗಳನ್ನು ಎದುರಿಸಿ, ಲಿನಿನ್ ನಾಯಕತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆಂತರಿಕ ಝಾರ್ಶಾಹಿ ಶಕ್ತಿಗಳು ಮತ್ತು ಬಾಹ್ಯ ಬಂಡವಾಳಶಾಹಿ ಶಕ್ತಿಗಳ ಪ್ರಹಾರಗಳ (ವಿನ್ಸೆಂಟ್ ಚರ್ಚಿಲ್–ಸಮಾಜಿವಾದಿ ಕೂಸನ್ನು ಶೈಶವದಲ್ಲೇ ಕತ್ತು ಹಿಸುಕಿ ಕೊಲ್ಲಬೇಕೆಂದು ಸಾರ್ವಜನಿಕವಾಗಿ ಹೇಳಿದ್ದ) ಹಿನ್ನಲೆಯಲ್ಲಿ ಲೆನಿನ್ ‘ಪ್ರಜಾಸತ್ತಾತ್ಮಕ ಕೇಂದ್ರೀಕರಣʼ (ಡೆಮಾಕ್ರಟಿಕ್ ಸೆಂಟ್ರಲಿಸಂ) ಪರಿಕಲ್ಪನೆಗೆ ಚಾಲನೆಯನ್ನು ನೀಡಿದ. ಆದರೆ ಪ್ರಜಾಪ್ರಭುತ್ವದಲ್ಲಿ ಅಪಾರ ನಂಬಿಕೆಯಿರಿಸಿದ್ದ ರೋಸಾ, ಲಿನಿನ್ನ ಈ ನಡೆಯನ್ನು ವಿರೋಧಿಸಿದಳು!

ಪ್ರಥಮ ವಿಶ್ವ ಸಮರ ಪ್ರಾರಂಭವಾದಾಗ, ರೋಸಾ, ಕಾರ್ಲ್ ಲಿಬ್ನೆಕ್ಟ್ ಮತ್ತು ಇತರ ರ್ಯಾಡಿಕಲ್ಗಳೊಡನೆ ಸೇರಿ ‘ಸ್ಪಾರ್ಟಕಸ್ ಲೀಗ್ʼ ಎಂಬ ಸಂಘಟನೆಯನ್ನು ಶುರುಮಾಡಿದಳು. ಕ್ರಾಂತಿಯ ಮೂಲಕ ಸಮರವನ್ನು ಕೊನೆಗಾಣಿಸಿ, ದುಡಿಯುವ ವರ್ಗದ ಸರ್ಕಾರವನ್ನು ಸ್ಥಾಪಿಸುವುದು ಇದರ ಗುರಿಯಾಗಿತ್ತು. ತರುವಾಯ, ಇದು ಜರ್ಮನಿಯ ಕಮ್ಯುನಿಸ್ಟ್ ಪಕ್ಷಕ್ಕೆ ನಾಂದಿ ಹಾಡಿತು.

ಜನವರಿ 15, 1919ರಂದು ಬರ್ಲಿನ್ ನಲ್ಲಿ ರೋಸಾ ಮತ್ತು ಲಿಬ್ನೆಕ್ಟ್ ರನ್ನು ಫ್ರಿ ಕಾಪ್ ಎಂಬ ಫ್ಯಾಸಿಸ್ಟ್ ಅರೆಮಿಲಿಟರಿ ಪಡೆ ಹತ್ಯೆ ಮಾಡಿತು.  ರೋಸಾಳ ದೇಹವನ್ನು ನಾಲೆಯೊಂದರಲ್ಲಿ ಎಸೆಯಲಾಗಿತ್ತು. ಆಗ ಆಕೆಗೆ 47 ವರ್ಷ ವಯಸ್ಸಾಗಿತ್ತು. 

ಪ್ರಜಾಪ್ರಭುತ್ವಕ್ಕೆ ಸರ್ವಾಧಿಕಾರದಿಂದ ಘಾತಗಳಾಗುತ್ತಿರುವಾಗ, ರೋಸಾ ಲಕ್ಸ್ಂಬರ್ಗ್ಳ ಈ ಮಾತುಗಳು ಮನನೀಯ – ‘ಸರ್ಕಾರದ ಬೆಂಬಲಿಗರಿಗೆ, ಪಕ್ಷದ ಸದಸ್ಕಯರಿಗೆ, ಅವರ ಸಂಖ್ಯೆ ಎಷ್ಟೇ ದೊಡ್ಡದಿರಲಿ, ಸ್ವಾತಂತ್ರ್ಯವಿದ್ದರೇ, ಅದು ಸ್ವಾತಂತ್ರ್ಯವಾಗುವುದೇ ಇಲ್ಲ.  ಯಾವುದೇ ವ್ಯಕ್ತಿಗೆ ಭಿನ್ನವಾಗಿ ಯೋಚಿಸುವ ಸ್ವಾತಂತ್ರ್ಯವಿದ್ದಾಗಲೇ, ಅದು ನಿಜವಾದ ಸ್ವಾತಂತ್ರ್ಯವಾಗುತ್ತದೆ.’

‍ಲೇಖಕರು Avadhi

March 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭ ಕಠಾರಿ

    ಲೇಖನ ಲಕ್ಸ್ಂಬರ್ಗ್ಳ ಕಿರು ಪರಿಚಯವನ್ನು ಮಾಡಿಕೊಡುತ್ತದೆ. ಕೊನೆಯ ಮಾತುಗಳು – ಯಾವುದೇ ವ್ಯಕ್ತಿಗೆ ಭಿನ್ನವಾಗಿ ಯೋಚಿಸುವ ಸ್ವಾತಂತ್ರ್ಯವಿದ್ದಾಗಲೇ, ಅದು ನಿಜವಾದ ಸ್ವಾತಂತ್ರ್ಯವಾಗುತ್ತದೆ ಎಂಬ ಮಾತುಗಳು ನಿಜಕ್ಕೂ ಮನನೀಯ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: