‘ಜನಮನ’ದ ಹೃದಯಸ್ಪರ್ಶಿ ಪ್ರಯೋಗ-ದೋಪ್ದಿ

ನಾ ದಿವಾಕರ

(ಬದುಕುವುದನ್ನು ಬದುಕುಳಿಯುವುದರಿಂದಲೇ ಕಲಿತವರ ಕತೆ)

ಮಹಾಶ್ವೇತಾದೇವಿ (14 ಜನವರಿ 1926- 28 ಜುಲೈ 2016) ಬಂಗಾಲದ ಖ್ಯಾತ ಲೇಖಕಿ, ಕತೆಗಾರ್ತಿ ಮತ್ತು ಎಡಪಂಥೀಯ ಧೋರಣೆಯ ಕಾರ್ಯಕರ್ತೆಯೂ ಆಗಿದ್ದರು. ಹಝಾರ್ ಚೌರಶಿರ್ ಮಾ, ರುಡಾಲಿ ಮತ್ತು ಅರಣ್ಯೇರ್ ಅಧಿಕಾರ್ ಮತ್ತು ಅಗ್ನಿಗರ್ಭ (ಸಣ್ಣಕಥಾ ಸಂಕಲನ) ಮುಂತಾದ ಕೃತಿಗಳನ್ನು ರಚಿಸುವ ಮೂಲಕ ಭಾರತದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಮಹಾಶ್ವೇತಾದೇವಿ ಲೋಧಾ ಮತ್ತು ಶಬರ್ ಆದಿವಾಸಿ ಬುಡಕಟ್ಟು ಜನಸಮುದಾಯಗಳ ನಡುವೆ ಕೆಲಸ ಮಾಡಿ ಅವರ ಹಕ್ಕುಗಳಿಗಾಗಿ, ಸಬಲೀಕರಣಕ್ಕಾಗಿ ಅವಿರತ ಶ್ರಮಿಸಿದ ಹೋರಾಟಗಾರ್ತಿಯೂ ಹೌದು.

ಅವರ ಅನೇಕ ಕತೆಗಳಲ್ಲಿ ಈ ಆದಿವಾಸಿ ಜನಸಮುದಾಯಗಳ ಹೋರಾಟ, ಸಂಘರ್ಷ ಮತ್ತು ನೋವಿನ ದನಿಗಳನ್ನು ಗುರುತಿಸಬಹುದು. ಅವರ ಅಗ್ನಿಗರ್ಭ ಕಥಾ ಸಂಕಲನದಿಂದ ಆಯ್ದ ಒಂದು ಪುಟ್ಟ ಕತೆ ‘ದ್ರೌಪದಿ ಅಥವಾ ದೋಪ್ದಿ’. ಇದನ್ನು ಆಂಗ್ಲಭಾಷೆಗೆ ಗಾಯತ್ರಿ ಚಕ್ರವರ್ತಿ ಸ್ಪಿವಾಕ್ ಮತ್ತು ಕನ್ನಡಕ್ಕೆ ಎಚ್ ಎಸ್ ಶ್ರೀಮತಿ ಅನುವಾದಿಸಿದ್ದಾರೆ.

ದೋಪ್ದಿ (ದ್ರೌಪದಿ)ಯ ಮೇಲೆ ಭೂ ಮಾಲೀಕರಿಂದ ನಡೆಯುವ ದೌರ್ಜನ್ಯ ಮತ್ತು ಸೇನಾನಾಯಕನಿಂದ ನಡೆಯುವ ಅತ್ಯಾಚಾರ ಮತ್ತು ದೋಪ್ದಿ ಮತ್ತು ಆಕೆಯ ಗಂಡ ದುಲ್ನಾ ಆದಿವಾಸಿಗಳ ಭೂ ಹಕ್ಕುಗಳಿಗಾಗಿ ಹೋರಾಡುತ್ತಾ ಕೃಷಿಕಾರ್ಮಿಕರ, ರೈತರ ಸಂಘರ್ಷದಲ್ಲಿ ಪಾಲ್ಗೊಳ್ಳುವ ಕಥಾ ಹಂದರವನ್ನು ಮಹಾಶ್ವೇತಾದೇವಿ ಹೆಣೆಯುತ್ತಾ ಹೋಗುತ್ತಾರೆ.

ಮಹಾಭಾರತದ ದ್ರೌಪದಿಯನ್ನು ದೌರ್ಜನ್ಯದಿಂದ ಕಾಪಾಡಲು ದೈವೀಕ ಶಕ್ತಿಯೊಂದಿದ್ದರೆ ಆಧುನಿಕ ಭಾರತದಲ್ಲಿ ದೌರ್ಜನ್ಯಕ್ಕೊಳಗಾಗುವ ದೋಪ್ದಿಯರು (ದ್ರೌಪದಿಯರು) ಅಂತಿಮವಾಗಿ ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾಗುವ ಸನ್ನಿವೇಶವನ್ನು ಮಹಾಶ್ವೇತಾ ದೇವಿ ಆದಿವಾಸಿಗಳ ಬವಣೆ ಮತ್ತು ಆಡಳಿತ ವ್ಯವಸ್ಥೆಯೊಡಗಿನ ಸಂಘರ್ಷ, ಭೂಮಾಲಿಕರ ದೌರ್ಜನ್ಯ ಮತ್ತು ದೇಶದ ಆಡಳಿತ-ಕಾನೂನು ವ್ಯವಸ್ಥೆಯ ನಿರ್ದಯಿ ಸ್ವರೂಪದ ಮೂಲಕ ಬಿಚ್ಚಿಡುತ್ತಾರೆ.

ಭಾರತದ ಶೋಷಿತ, ದಮನಿತ ಮತ್ತು ಅವಕಾಶ ವಂಚಿತ ಜನಸಮುದಾಯಗಳನ್ನು ಪ್ರತಿನಿಧಿಸುವ ಒಂದು ಕಥೆಯಾಗಿ ದೋಪ್ದಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಆದಿವಾಸಿ ಸಮುದಾಯಗಳು ನೆಲೆಸುವ ಪ್ರದೇಶಗಳಲ್ಲಿ ದಲಿತ ಹಾಗೂ ಬುಡಕಟ್ಟು ಮಹಿಳೆಯರು ಎದುರಿಸುವ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಲೈಂಗಿಕ ದೌರ್ಜನ್ಯ ಮತ್ತು ಜಾತಿ, ವರ್ಗ ಹಾಗೂ ಲಿಂಗತ್ವದ ನೆಲೆಯಲ್ಲಿ ಅನುಭವಿಸುವ ಸಂಕಷ್ಟಗಳನ್ನು ಈ ಕತೆಯಲ್ಲಿ ಆದಿವಾಸಿಗಳು ಬದುಕುವ ಹಕ್ಕಿಗಾಗಿ ನಡೆಸುವ ಚಳುವಳಿಯ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ.

20 ವರ್ಷಗಳ ಸ್ವತಂತ್ರ ಆಡಳಿತದ ನಂತರವೂ ಊಳಿಗಮಾನ್ಯ ವ್ಯವಸ್ಥೆ ಮತ್ತು ಪ್ರಭುತ್ವದ ಶೋಷಣೆಯಿಂದ ಮುಕ್ತಿ ಪಡೆಯದ ಆದಿವಾಸಿಗಳು ಮತ್ತು ಹಳ್ಳಿಗಾಡಿನ ಕೃಷಿ ಕಾರ್ಮಿಕ, ಭೂಹೀನ ಸಮುದಾಯಗಳು ತಮ್ಮ ಭೂಮಿಯ ಹಕ್ಕುಗಳಿಗಾಗಿ, ಅನ್ನದ ಹಕ್ಕಿಗಾಗಿ, ಬದುಕುವ ಹಕ್ಕಿಗಾಗಿ ಪ್ರಭುತ್ವದ ವಿರುದ್ಧ, ಪ್ರಭುತ್ವ ಪೋಷಿಸುವ ಊಳಿಗಮಾನ್ಯ ಭೂಮಾಲಿಕರ ವಿರುದ್ಧ ಹೋರಾಡುವ ಕಥನವನ್ನು ದೋಪ್ದಿ ನಿರೂಪಿಸುತ್ತಾ ಹೋಗುತ್ತದೆ.

ಈ ಸಂಘರ್ಷದಲ್ಲಿ ಸಕ್ರಿಯವಾಗಿರುವ ಗುಂಪು ಸುರ್ಜಾಸಾಹು ಎಂಬ ಭೂಮಾಲಿಕನನ್ನು ಪ್ರತೀಕಾರದಿಂದ ಕೊಲೆ ಮಾಡುತ್ತದೆ. ಈ ಆಕ್ರೋಶಭರಿತ ಬುಡಕಟ್ಟು ವಾಸಿಗಳನ್ನು ದೋಪ್ದಿ ಮೇಜನ್ ಮತ್ತು ಆಕೆಯ ಗಂಡ ದುಲ್ನಾ ಮೇಜನ್ ಪ್ರತಿನಿಧಿಸುತ್ತಾರೆ. ಇದರಿಂದ ಇಬ್ಬರೂ ಸೇನಾನಾಯಕನ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಪೊಲೀಸರ ಕಣ್ಣಿಂದ ತಪ್ಪಿಸಿಕೊಂಡು ಭೂಗತರಾಗುವ ದೋಪ್ದಿ ಮತ್ತು ದುಲ್ನಾ ಗ್ರಾಮದ ಜನರಲ್ಲಿ ಹೋರಾಟದ ಛಲ ತುಂಬುವುದರಲ್ಲಿ ಯಶಸ್ವಿಯಾಗುತ್ತಾರೆ. ಝಾರ್ಖನಿ ಪ್ರದೇಶದಲ್ಲಿ ತಮ್ಮ ಚಳುವಳಿಯ ಚಟುವಟಿಕೆಗಳನ್ನು ಮುಂದುವರೆಸುವ ದಂಪತಿಗಳು, ಕೌಟುಂಬಿಕ ಜೀವನವನ್ನೂ ತ್ಯಾಗ ಮಾಡಿ ಹೋರಾಟಕ್ಕೆ ತಮ್ಮ ಜೀವ ಪಣ ಇಡುತ್ತಾರೆ. ಕೊನೆಗೆ ದುಲ್ನಾ ಪೊಲೀಸರ ಗುಂಡೇಟಿಗೆ ಬಲಿಯಾಗುತ್ತಾನೆ. ದೋಪ್ದಿಯನ್ನು ಬಂಧಿಸಲಾಗುತ್ತದೆ.

ಒಬ್ಬ ಸಾಧಾರಣ, ಅನಕ್ಷರಸ್ಥ ಆದಿವಾಸಿ ಮಹಿಳೆ ದೋಪ್ದಿ , ಪ್ರಭುತ್ವ ಮತ್ತು ವ್ಯವಸ್ಥೆಯ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತಾಳೆ. ಕಾಡಿನಲ್ಲಿ ಭೂಗತಳಾಗಿ ಸಾಂಪ್ರದಾಯಿಕ ಅಸ್ತ್ರಗಳಿಂದಲೇ ಸೇನೆ ಮತ್ತು ಪೊಲೀಸರನ್ನು ಎದುರಿಸುವ ದಿಟ್ಟ ಮಹಿಳೆ ದೋಪ್ದಿ ಕೊನೆಗೂ ಬಂಧನಕ್ಕೊಳಗಾಗುತ್ತಾಳೆ. ಆದರೆ ಎಷ್ಟೇ ಚಿತ್ರ ಹಿಂಸೆ ನೀಡಿದರೂ ಬಾಯಿಬಿಡದ ದೋಪ್ದಿಯಿಂದ ಒಂದೇ ಒಂದು ಸಾಕ್ಷ್ಯವನ್ನು ಪಡೆಯಲೂ ಸಾಧ್ಯವಾಗದೆ ಹತಾಶನಾಗುವ ಸೇನಾನಾಯಕ ‘ಆಕೆಗೆ ಏನು ಮಾಡಬೇಕೋ ಅದನ್ನು ಮಾಡಿ’ ಎಂದು ತನ್ನ ಅಧಿಕಾರಿಗಳಿಗೆ ಆದೇಶ ನೀಡುತ್ತಾನೆ. ದೋಪ್ದಿ ಸಮವಸ್ತ್ರಧಾರಿಗಳಿಂದ ಚಿತ್ರಹಿಂಸೆ, ದೌರ್ಜನ್ಯಕ್ಕೀಡಾಗುತ್ತಾಳೆ, ಅತ್ಯಾಚಾರಕ್ಕೀಡಾಗುತ್ತಾಳೆ, ಹಲವು ರಾತ್ರಿಗಳು ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತದೆ.

ಈ ಅಮಾನುಷ ಘಟನೆಯ ನಂತರ ದೋಪ್ದಿ ಹತಾಶಳಾಗುವುದಿಲ್ಲ. ತನ್ನ ಸ್ಥೈರ್ಯ ಕಳೆದುಕೊಳ್ಳುವುದಿಲ್ಲ. ಸೇನಾನಾಯಕನ ಎದುರು ಬೆತ್ತಲಾಗಿ ನಿಲ್ಲುತ್ತಾಳೆ. ‘ನೀನು ನನ್ನನ್ನು ವಿವಸ್ತ್ರಳನ್ನಾಗಿ ಮಾಡಬಹುದು ಆದರೆ ಮತ್ತೆ ಬಟ್ಟೆ ತೊಡಿಸಲಾರೆ’ ಎಂದು ಸವಾಲೆಸೆಯುತ್ತಾಳೆ. ಸೇನಾನಾಯಕ ಭಯಭೀತನಾಗುತ್ತಾನೆ. ಮಹಾಭಾರತದ ದ್ರೌಪದಿಗೆ ದೈವೀಕ ರಕ್ಷಣೆ ದೊರೆತಂತೆ ಮಹಾಶ್ವೇತಾ ದೇವಿಯವರ ದೋಪ್ದಿಗೆ ಯಾವ ರಕ್ಷಣೆಯೂ ದೊರೆಯುವುದಿಲ್ಲ. ತಾನು ಬೆತ್ತಲಾಗಿರುವುದಕ್ಕೆ ನಾಚಿಕೊಳ್ಳದ ದೋಪ್ದಿ, ತನ್ನ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ದೌರ್ಜನ್ಯದಿಂದಲೂ ಧೃತಿಗೆಡುವುದಿಲ್ಲ. ‘ಇಲ್ಲಿ ನಾನು ಮಾನ ಕಳೆದುಕೊಂಡಿಲ್ಲ ಮಾನ ಕಳೆದುಕೊಂಡಿರುವುದು ನೀನು, ನೀವೆಲ್ಲರೂ’ ಎಂದು ಬೆಟ್ಟುಮಾಡುತ್ತಾಳೆ.

ಇಡೀ ಪುರುಷ ಸಮಾಜದತ್ತ ಬೆರಳು ಮಾಡಿ ಹೇಳುತ್ತಾಳೆ ‘ಮಾನ ಕಳೆದುಕೊಂಡಿರುವುದು ನೀವು’ ಎಂದು ಗಟ್ಟಿದನಿಯಲ್ಲಿ ಹೇಳುತ್ತಾಳೆ. ಸಾಂಕೇತಿಕವಾಗಿ ಈ ಮಾತುಗಳ ಮೂಲಕ ದೋಪ್ದಿ ಮಹಿಳೆಯರ ಮೇಲಿನ ನಿರಂತರ ಅತ್ಯಾಚಾರ ಮತ್ತು ದೌರ್ಜನ್ಯದ ಹೊರತಾಗಿಯೂ ಮೌನವಹಿಸುವ ಪುರುಷ ಸಮಾಜಕ್ಕೆ ಸವಾಲೆಸೆಯುತ್ತಾಳೆ. ‘ನೀವು ಇನ್ನೇನು ಮಾಡಲು ಸಾಧ್ಯ’ ಎಂದು ಕೇಳುವ ಮೂಲಕ ತನ್ನ ಹೆಣ್ತನವನ್ನು ಸ್ವತಃ ತಾನೇ ರಕ್ಷಿಸಿಕೊಳ್ಳುತ್ತಾಳೆ. ಸೇನಾನಾಯಕನೊಬ್ಬನೇ ಅಲ್ಲ ಇಡೀ ಪುರುಷ ಸಮುದಾಯ, ಸಮಾಜ ತಲೆತಗ್ಗಿಸುತ್ತದೆ. 

ಮಹಿಳೆಯ ಅಂತರ್ ಪ್ರಜ್ಞೆ, ಹೆಣ್ತನದ ಸ್ವ ರಕ್ಷಣೆ ಮತ್ತು ಪಿತೃಪ್ರಧಾನ ಸಮಾಜದ ದೌರ್ಜನ್ಯ ಅಟ್ಟಹಾಸ, ಊಳಿಗಮಾನ್ಯ ವ್ಯವಸ್ಥೆಯ ದರ್ಪ, ಜಾತಿ ವ್ಯವಸ್ಥೆಯ ಶೋಷಣೆ ಇವೆಲ್ಲವನ್ನೂ ಒಮ್ಮೆಲೆ ಎದುರಿಸುವ ಒಬ್ಬ ದಿಟ್ಟ ಮಹಿಳೆಯಾಗಿ ದೋಪ್ದಿ ಹೊರಹೊಮ್ಮುತ್ತಾಳೆ. ಈ ಕಥಾಹಂದರದ ಮೂಲಕ ಮಹಾಶ್ವೇತಾದೇವಿ ಆದಿವಾಸಿಗಳ ಬದುಕು, ಬವಣೆ, ಈ ಸಮುದಾಯಗಳು ಎದುರಿಸುವ ಶೋಷಣೆ, ಪ್ರಭುತ್ವದ ದಮನಕಾರಿ ಧೋರಣೆ, ಭಾರತೀಯ ಸಮಾಜದ ಶೋಷಕ ಪ್ರವೃತ್ತಿ ಮತ್ತು ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಶೋಷಕ ಧೋರಣೆ ಇವೆಲ್ಲವನ್ನೂ ದೋಪ್ದಿಯ ಮೂಲಕ ಲೇಖಕಿ ಬಿಂಬಿಸುತ್ತಾರೆ.

1970ರ ಸಂದರ್ಭದ ಈ ಕಥೆ 2021ರಲ್ಲೂ ಪ್ರಸ್ತುತವಾಗುವುದು ಹಥ್ರಾಸ್‍ನಂತಹ ಘಟನೆಗಳ ಹಿನ್ನೆಲೆಯಲ್ಲಿ ಮತ್ತು ನಿರಂತರವಾಗಿ ದೇಶದ ಮೂಲೆ ಮೂಲೆಯಲ್ಲಿ ನಡೆಯುತ್ತಲೇ ಇರುವ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳ ಹಿನ್ನೆಲೆಯಲ್ಲಿ. ಈ ಕಥಾವಸ್ತುವನ್ನು ಮೈಸೂರಿನ  ಜನಮನ ಸಾಂಸ್ಕೃತಿಕ ಸಂಘಟನೆಯ ಆಶ್ರಯದಲ್ಲಿ ‘ದೋಪ್ದಿ’ ನಾಟಕದ ಮೂಲಕ ಪ್ರದರ್ಶಿಸಲಾಗಿತ್ತು. ಧ್ವನ್ಯಾಲೋಕದ ರಂಗಮಂದಿರದಲ್ಲಿ ಎರಡು ಪ್ರದರ್ಶನಗಳನ್ನು ಕಂಡ ಈ ನಾಟಕದ ರಂಗರೂಪ, ವಿನ್ಯಾಸ ಮತ್ತು ನಿರ್ದೇಶನವನ್ನು ಸಮರ್ಪಕವಾಗಿ, ಸಮರ್ಥವಾಗಿ ನಿರ್ವಹಿಸಿದವರು ಹಿರಿಯ ರಂಗ ನಿರ್ದೇಶಕಿ ಕೆ ಆರ್ ಸುಮತಿ.

12 ಯುವ ಕಲಾವಿದರ ಮೂಲಕ ಇಡೀ ಕಥನವನ್ನು ರಂಗಭೂಮಿಗೆ ಅಳವಡಿಸಿರುವ ನಿರ್ದೇಶಕಿ ಕೆ ಆರ್ ಸುಮತಿ ಅವರ ಶ್ರದ್ಧೆ, ಪರಿಶ್ರಮ ಮತ್ತು ಬದ್ಧತೆ ಈ ಯುವ ಪ್ರತಿಭೆಗಳ ಅದ್ಭುತ ನಟನೆಯಲ್ಲಿ ವ್ಯಕ್ತವಾಗುತ್ತದೆ. ಆಂಗಿಕ ಅಭಿನಯ ಮತ್ತು ಭಾವಾಭಿನಯ ಎರಡರಲ್ಲೂ ಈ ಕಲಾವಿದರು ಪ್ರೌಢಿಮೆಯನ್ನು ಮೆರೆದಿರುವುದು ನಾಟಕದ ವೈಶಿಷ್ಟ್ಯ. ಇವರಲ್ಲಿ ಬಹುತೇಕ ಕಲಾವಿದರಿಗೆ ಇದು ರಂಗಪ್ರವೇಶದ ಮೊದಲ ಹೆಜ್ಜೆ ಎನ್ನುವುದು ನಿಜಕ್ಕೂ ಅಚ್ಚರಿ ಮೂಡಿಸುವ ವಿಚಾರ. ಅಷ್ಟು ಪ್ರಬುದ್ಧ ನಟನಾ ಕೌಶಲ್ಯ ಮತ್ತು ಪ್ರತಿಭೆ ಅವರಲ್ಲಿ ಗುರುತಿಸಬಹುದು.

ರಂಗಸಜ್ಜಿಕೆ ಮತ್ತು ವಿನ್ಯಾಸ (ವಿಶ್ವ ಕಾವಾ), ಬೆಳಕಿನ ವಿನ್ಯಾಸ (ನಂದಕಿಶೋರ್) ಮತ್ತು ಹಿನ್ನೆಲೆ ಸಂಗೀತ (ಜನ್ನಿ ಮತ್ತು ಸನತ್ ಆಚಾರ್ಯ) ಎಲ್ಲವೂ ಪರಿಣಾಮಕಾರಿಯಾಗಿ ಮೂಡಿಬಂದಿರುವುದು ನಾಟಕಕ್ಕೆ ಮತ್ತಷ್ಟು ಮೆರುಗು ನೀಡುವಂತಹುದು. ಇಂದಿಗೂ ನಮ್ಮ ಸಮಾಜದಲ್ಲಿ ಮಹಿಳೆಯರನ್ನು ಕಾಡುತ್ತಿರುವ ದೌರ್ಜನ್ಯ, ಅತ್ಯಾಚಾರ, ಶೋಷಣೆ ಮತ್ತು ಲೈಂಗಿಕ ಕಿರುಕುಳಗಳಂತಹ ಜ್ವಲಂತ ಸಮಸ್ಯೆಗಳನ್ನು ಒಂದು ಪುಟ್ಟ ಕಥಾ ಹಂದರದ ಮೂಲಕ ಪರಿಣಾಮಕಾರಿಯಾಗಿ ರಂಗವೇದಿಕೆಯ ಮೇಲೆ ಪ್ರದರ್ಶಿಸಿರುವುದು ಜನಮನ ಸಂಘಟನೆಯ ಪರಿಶ್ರಮಕ್ಕೆ ಸಾಕ್ಷಿ.

ದೋಪ್ದಿ ಪಾತ್ರವನ್ನು ನಿರ್ವಹಿಸಿದ ದಿವ್ಯ, ಸೇನಾನಾಯಕ ಪಾತ್ರದ ಪ್ರಜ್ವಲ್, ಸೂರ್ಜಸಾಹು ಪಾತ್ರದ ದರ್ಶನ್, ದುಲ್ನ ಪಾತ್ರದ ಆಕಾಶ್ ಮತ್ತು ಇತರ ಪಾತ್ರಗಳನ್ನು ನಿರ್ವಹಿಸಿರುವ ಹೃತಿಕ್, ಕಿರಣ್, ಆದರ್ಶ, ಮಾನಸಿ, ದವನ, ಅನಘ, ಕವಿತ, ದೀಪಿಕ ಈ ಎಲ್ಲ ಯುವ ಪ್ರತಿಭೆಗಳು ಜನಮನ ಸಂಘಟನೆಯ ಈ ಅದ್ಭುತ ಪ್ರಯತ್ನಕ್ಕೆ ಸಮರ್ಥವಾಗಿ ಕೈಜೋಡಿಸಿದ್ದಾರೆ.

ಮಹಾಶ್ವೇತಾದೇವಿಯವರ ಪುಟ್ಟಕಥೆ ‘ದ್ರೌಪದಿ’ ಅಥವಾ ‘ದೋಪ್ದಿ’ 50 ವರ್ಷಗಳ ನಂತರವೂ ಈ ನಾಟಕದ ಮೂಲಕ ಶೋಷಕ ವ್ಯವಸ್ಥೆಯನ್ನು, ಪಿತೃಪ್ರಧಾನ ಧೋರಣೆಯನ್ನು ಮತ್ತು ಈ ವ್ಯವಸ್ಥೆಯ ಸಮರ್ಥಕರನ್ನು ವಿಚಲಿತಗೊಳಿಸುತ್ತದೆ. ಇದರಲ್ಲೇ ಈ ನಾಟಕದ ಗೆಲುವೂ ಅಡಗಿದೆ. ಈ ಕಥೆಯನ್ನು ಅಷ್ಟೇ ಪರಿಣಾಮಕಾರಿಯಾಗಿ ರಂಗದ ಮೇಲೆ ತರುವಲ್ಲಿ ನಿರ್ದೇಶಕಿ ಕೆ ಆರ್ ಸುಮತಿ ಯಶಸ್ವಿಯಾಗಿದ್ದಾರೆ. ಜನಮನ ಸಾಂಸ್ಕೃತಿಕ ಸಂಘಟನೆಯ ಆಶ್ರಯದಲ್ಲಿ ಈ ಅದ್ಭುತ ಪ್ರಯೋಗ ಮಾಡಿರುವ ರಂಗ ನಿರ್ದೇಶಕಿ ಕೆ ಆರ್ ಸುಮತಿ ಮತ್ತು ಕಲಾವಿದರ ತಂಡ ಅಭಿನಂದನಾರ್ಹರು.

ದೇಶದಲ್ಲಿ ದೋಪ್ದಿಗಳು (ದ್ರೌಪದಿ) ಹೆಚ್ಚಾಗುತ್ತಿದ್ದಾರೆ. ಸೇನಾನಾಯಕರಂತಹವರು ಬಲಿಷ್ಟವಾಗುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಂಡೂ ಕಾಣದಂತಿರುವ ದೃತರಾಷ್ಟ್ರ ಸಂತತಿಯೂ ಹೆಚ್ಚುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ನೋಡಲೇಬೇಕಾದ ನಾಟಕ ‘ದೋಪ್ದಿ’.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಾರ್ಚ್ 8 ಮತ್ತು ಮಾರ್ಚ್ 13 ರಂದು ಸಂಜೆ 6.30ಕ್ಕೆ ಈ ನಾಟಕದ ಪ್ರದರ್ಶನವನ್ನು ರಂಗಾಯಣದ ಕಿರುರಂಗಮಂದಿರದಲ್ಲಿ ಆಯೋಜಿಸಲಾಗಿದೆ.

‍ಲೇಖಕರು Avadhi

March 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: