ರೈಲ್ವೆ ಚಿಲ್ಡ್ರನ್

 

 

 

 

 

ಗೊರೂರು ಶಿವೇಶ್

ಹಳಿ ತಪ್ಪಿದ ಮಕ್ಕಳ  ಜೀವನಗಾಥೆ ‘ರೈಲ್ವೆ ಚಿಲ್ಡ್ರನ್’ ಕೆಲವು ದಿನಗಳ ಹಿಂದೆ ಶಾಂತಿಗ್ರಾಮದ ದೊಡ್ಮನೆ ಆವರಣದಲ್ಲಿ ‘ರೈಲ್ವೆ ಚಿಲ್ಡ್ರನ್’ ಸಿನಿಮಾ ನೋಡುವ ಅವಕಾಶ ದೊರೆಯಿತು. ಕನ್ನಡದ ಅತ್ಯುತ್ತಮ ಚಲನಚಿತ್ರಗಳನ್ನು ಪ್ರತಿ ತಿಂಗಳು ತಮ್ಮ ಮನೆ ಅಂಗಳದಲ್ಲಿ ಗ್ರಾಮಸ್ಥರು ಮತ್ತು ಆಸಕ್ತರಿಗಾಗಿ ಗ್ರಾಮ ಸಿನಿಮಾ ಸಮುದಾಯದ ಸಂಚಾಲಕ ಜಿ.ಆರ್. ಮಂಜೇಶ್ ಆಯೋಜಿಸುತ್ತಿದ್ದಾರೆ. ಇದರ ಜೊತೆಗೆ ಚಿತ್ರ ಕುರಿತಾದ ಸಂವಾದವನ್ನು ಚಿತ್ರದ ನಿರ್ದೇಶಕರು, ನಟರು, ತಂತ್ರಜ್ಞರೊಂದಿಗೆ  ಏರ್ಪಡಿಸುತ್ತಿದ್ದಾರೆ. ಚಿತ್ರ ಕುರಿತಾಗಿ ಮಕ್ಕಳಿಗೆ ಸ್ಪರ್ದೆಗಳನ್ನು ಏರ್ಪಡಿಸುತ್ತಿದ್ದಾರೆ. ಗೋವಾದಲ್ಲಿ 21ರಂದು ಪ್ರಾರಂಭವಾಗಲಿರುವ  ಪ್ರತಿಷ್ಠಿತ ಪನೋರಮಾ ಫಿಲಂ ಫೆಸ್ಟಿವಲ್‍ಗೆ ಆಯ್ಕೆಯಾಗಿರುವ ಏಕೈಕ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರೈಲ್ವೆ ಚಿಲ್ಡ್ರನ್‍ನ ನಿರ್ದೇಶಕ ಪೃಥ್ವಿ ಕೊಣನೂರು. ಪಬ್ಲಿಕ್ ಫಂಡಿಂಗ್ ಮೂಲಕ ಚಿತ್ರ ನಿರ್ಮಾಣವಾಗಿದೆ. ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಬಾಲನಟ ಪ್ರಶಸ್ತಿಯ ಜೊತೆಗೆ ರಾಜ್ಯ ಮಟ್ಟದ 2016ರ ಎರಡನೇ ಅತ್ಯುತ್ತಮ ಚಿತ್ರವೆಂಬ ರಾಜ್ಯ ಪ್ರಶಸ್ತಿಯನ್ನು ಪಡೆದಿದೆ. .

ರೈಲ್ವೆ ಚಿಲ್ಡ್ರನ್ ಹೆಸರೇ ಹೇಳುವಂತೆ ರೈಲ್ವೆ ಸ್ಟೇಷನ್‍ನ್ನು ತಮ್ಮ ಮನೆಯಾಗಿಸಿಕೊಂಡು ವಾಸ ಮಾಡುತ್ತಿರುವ ಮಕ್ಕಳ ಕಥೆ. ರೈಲ್ವೆ ಹಳಿಗುಂಟ ಹಾದುಹೋಗುವ ನಿಯಂತ್ರಿತ ಪ್ರದೇಶಗಳಲ್ಲಿ ಸ್ಲಂಗಳು ತಲೆ ಎತ್ತಿರುವುದನ್ನು ಅನೇಕ ಕಡೆ ನೋಡಬಹುದು. ಬೇರೆ ಬೇರೆ ಕಾರಣಗಳಿಗಾಗಿ ಮೂಲೆ ಸೇರಿರುವ ರೈಲ್ವೆ ಬೋಗಿಗಳು, ಅದರ ಆಚೀಚೆ ದೊಡ್ಡ ದೊಡ್ಡ ಪೈಪ್‍ಗಳು ಸುರಂಗಗಳಿಗಾಘಿ ತಂದ ದೊಡ್ಡ ದೊಡ್ಡ ಪೈಪ್‍ಗಳು ನಿರಾಶ್ರಿತರನ್ನು ಕೂಗಿಕೂಗಿ ಕರೆಯುತ್ತವೆ.  ಬಿಕ್ಷುಕರು, ತಂದೆ ತಾಯಿಗಳ ನಿರ್ಲಕ್ಷಕ್ಕೆ ಒಳಗಾದವರು, ಕುಡುಕ ತಂದೆ, ಅಸಹಾಯಕ ತಾಯಿ, ಇಲ್ಲವೆ ಓದುವ ಭಯ, ದುಶ್ಚಟಗಳನ್ನು ಚಿಕ್ಕ ವಯಸ್ಸಿನಲ್ಲಿ ಕಲಿತು ತಂದೆ ತಾಯಿಗಳಿಗೆ ಬುದ್ದಿ ಕಲಿಸಲೆಂದೇ ಹೊರಟವರು… ಹೀಗೆ ಎಲ್ಲರಿಗೂ ಇದುವೆ ಆಶ್ರಯತಾಣ. ಹೀಗೆ  ಓಡಿಬಂದ ಬಹುತೇಕರು ತಮ್ಮ ಮೂಲ ಹೆಸರನ್ನು ಮರೆಮಾಚಿ ಇತರರು ನೀಡುವ ಅಡ್ಡ ಹೆಸರುಗಳಲ್ಲಿ ಜೀವಿಸುತ್ತಾರೆ.

ಅಂತಯೇ ಈ ಸಿನಿಮಾದಲ್ಲಿ ಸಲ್ಯೂಷನ್, ಜೊಲ್ಲು ಮುಂತಾದ ಹೆಸರಿನ ಜೀವಿಗಳಿವೆ. ಹೀಗೆ ತನ್ನ ಊರಿನಿಂದ ಓಡಿಬರುವ ಹುಡುಗ (?) ನಿಧಾನವಾಗಿ ಅಲ್ಲಿನ ವಿಷವರ್ತುಲಕ್ಕೆ ಸಿಲುಕುತ್ತಾನೆ. ಅಲ್ಲಿಯೆ ತಲೆಯತ್ತಿರುವ ಮಕ್ಕಳ ಮಾಫಿಯವು ಅವರ ಕೈಲಿ ಬಿಕ್ಷಾಟನೆ, ಚಿಂದಿ ಆಯುವ, ಪ್ರಯಾಣಿಕರು ಎಸೆದು ಹೋದ ಬಾಟಲ್, ಲೋಟಗಳನ್ನು ಆಯುವ ಕೆಲಸಕ್ಕೆ ಹಚ್ಚುತ್ತದೆ. ಅವರ ಕೈಯಲ್ಲಿ ದುಡಿಸಿಕೊಂಡು ಊಟಕ್ಕೆಂದು ಅಷ್ಟೋ ಇಷ್ಟೋ ನೀಡಿ,  ಆಗೀಗ ಬಿರ್ಯಾನಿ ತಿನ್ನಿಸಿ ಟ್ಯೂಬ್‍ಗೆ ಹಚ್ಚುವ ಸಲ್ಯೂಷನ್‍ನ್ನು ಮೂಸಲು ನೀಡಿ ಅದಕ್ಕೆ ದಾಸರನ್ನಾಗಿಸುತ್ತದೆ. ತಾವು ಗಳಿಸಿದ ಹಣವನ್ನು ಸರಿಯಾಗಿ ನೀಡದ, ತಿರುಗಿ ಬೀಳುವವರಿಗೆ ಅಮಾನವೀಯವಾದ ಕ್ರೂರಶಿಕ್ಷೆ, ಒಮ್ಮೊಮ್ಮೆ  ಮರಣ ಮೃದಂಗವೂ ಆಗುವುದುಂಟು. ಇಂಥ ಬೆಂಕಿಯ ಬಲೆಗೆ ಬೀಳುವ ಮಕ್ಕಳಲ್ಲಿ ಅನೇಕ ಕನಸುಗಳಿವೆ. ಆದರೆ ಕನಸುಗಳನ್ನು ಸಾಕಾರಗೊಳಿಸುವ ಹಾದಿ ಮಾತ್ರ ದುರ್ಗಮ. ಚಿಂದಿ ಆಯುವವರಿಗೆ ಒಮ್ಮೊಮ್ಮೆ ರೈಲಿನಲ್ಲಿ ತಿಂಡಿ, ನೀರು ಮಾರಲು ಹೋಗುವ ಪ್ರಮೋಷನ್ ಸಿಗುವ ಕನಸು ಉಂಟು. ಆದರೆ ಅದು ಆಯ್ದ ಕೆಲವರಿಗೆ ಮಾತ್ರ ದಕ್ಕುತ್ತದೆ. ಈ ಮಾಫಿಯಾದಿಂದ ತಪ್ಪಿಸಿಕೊಂಡು ತನ್ನದೆ ನೀರಿನ ಉದ್ಯಮ (ಪ್ರಯಾಣಿಕರು ಎಸೆದು ಹೋದ ಬಾಟಲ್‍ಗಳಿಗೆ ನಲ್ಲಿ ನೀರು ತುಂಬಿ ಮಾರಾಟ) ಮಾಡಲು ಹೊರಟು, ಕೊನೆಗೆ ಮಾಫಿಯಾದ ಕೈಗೆ ಸಿಲುಕಿ ಅನುಭವಿಸುವ ಯಾತನೆ ನಡೆಸುವ ಹೋರಾಟ ಚಿತ್ರ್ರವನ್ನು ಮುನ್ನಡೆಸುತ್ತಾ ಹೋಗುತ್ತದೆ.

ರೈಲ್ವೆ ಸ್ಟೇಷನ್, ರೈಲ್ವೆಹಳಿಯ ಸುತ್ತಲೆ ಚಿತ್ರಿತವಾದ ಸಿನಿಮಾವನ್ನು ಸಾಕ್ಷಚಿತ್ರವಾಗುವ ಸಾದ್ಯತೆಯಿಂದ ಪಾರುಮಾಡುವುದು ಕುತೂಹಲಕಾರಿ ಕಥಾ ಹೆಣಿಗೆ. ತನ್ನ ಊರಿನಲ್ಲಿ ತನ್ನ ಸ್ನೇಹಿತೆಯಿರುವಳೆಂದು ಹೇಳುವ ಅವಳನ್ನು ತನ್ನಲ್ಲಿಗೆ ಕರೆಯಿಸಿಕೊಳ್ಳುತ್ತೇನೆಂದು ಹೇಳುವ ಹುಡುಗನ ಹಿಂದೆ ಒಂದು ರಹಸ್ಯವಿದೆ. ಅಂತ್ಯದಲ್ಲಿ ಸ್ಪೋಟವಾಗುವ ರಹಸ್ಯ ಚಿತ್ರಕ್ಕೆ ಅನೇಕ ತಿರುವುಗಳನ್ನು ನೀಡುತ್ತದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಉತ್ತಮ ಬಾಲನಟ ಈ ಚಿತ್ರಕ್ಕೆ ಪ್ರಶಸ್ತಿ ಪಡೆದಿರುವುದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಪಾತ್ರದಾರಿ ಬದಲಾಗಿ ಜೊಲ್ಲು ಪಾತ್ರ ನಿರ್ವಹಿಸಿರುವ ಮನೋಹರನೆಂಬ ಹುಡುಗನಿಗೆ ಉತ್ತಮ ಬಾಲನಟ ಪ್ರಶಸ್ತಿ ದಕ್ಕಿದೆ.

ಉತ್ತಮ ಛಾಯಾಗ್ರಹಣ ಬಿಗಿ ನಿರೂಪಣೆಯಿಂದಾಗಿ ಚಿತ್ರ ಗೆಲ್ಲುತ್ತದೆ. ದಿವ್ಯ ಪರಿಮಳ, ಮನೋಹರ, ಯಶಶೆಟ್ಟಿ, ಸಯ್ಯದ್, ಪರ್ವಿಜ್, ಕಾರ್ತಿಕ್ ಪ್ರಮುಖ ಪಾತ್ರವರ್ಗದಲ್ಲಿರುವ ಚಿತ್ರಕ್ಕೆ ಚಂದನ್‍ಶೆಟ್ಟಿ ಸಂಗೀತವಿದ್ದು ಈಶ್ವರನ್ ತಂಗವೇಲುರವರ ಛಾಯಾಗ್ರಹಣವಿದೆ. ಎಲ್ಲಾ ಹೊಸ ಕಲಾವಿದರಿಂದ ಅತ್ಯುತ್ತಮ ಅಭಿನಯ ಪಡೆದ ಶ್ರೇಯ ಚಿತ್ರನಿರ್ದೇಶಕರಿಗಿದೆ. ಆದರೆ ಚಿತ್ರದಲ್ಲಿ ‘ಸಲ್ಯೂಷನ್‍ಗೆ ದಾಸನಾಗಿರುವ ಮಕ್ಕಳನ್ನು ತೋರಿಸುವ ಭರದಲ್ಲಿ ಚಿತ್ರದ ಬಹಳಷ್ಟು ಸಮಯ ಅದನ್ನೆ ಮತ್ತೆ ಮತ್ತೆ ತೋರಿಸುವುದು ನೋಡುಗರ, ಮಕ್ಕಳಲ್ಲಿ ಭಯ ಹುಟ್ಟಿಸುವಿಕೆಯ ಕಾರಣಕ್ಕೆ ಇರಬಹುದಾದರೂ ಜಿಗುಪ್ಸೆ ಮೂಡಿಸುತ್ತದೆ. ಆದರೆ ಬೇರೆ ಬೇರೆ ಕಾರಣಗಳಿಗಾಗಿ ಮನೆ ಬಿಟ್ಟು ಓಡಿಹೋಗುವ ಮಕ್ಕಳಿಗೆ ಎಚ್ಚರಿಕೆಯ ಸಂದೇಶವಂತೂ ಚಿತ್ರದಲ್ಲಿದೆ.

‍ಲೇಖಕರು avadhi

December 20, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: