ಇನ್ನಾದರೂ ಆ ಅನ್ನದಾತನ ಬದುಕು ಹಸನಾಗಲಿ
ಭವ್ಯ ಎಲ್. ಹಳ್ಳಿ

ಒಂದು ಪುಟ್ಟ ಚಾಕೋಲೇಟ್ ತಯಾರು ಮಾಡುವವ ಕೂಡ ತನ್ನ ವಸ್ತುವಿನ ಬೆಲೆಯನ್ನು ಅವನೇ ನಿರ್ಧಾರ ಮಾಡುತ್ತಾನೆ! 50 ಪೈಸೆಯಿಂದ 500 ಹಾಗೂ 1000 ರೂಪಾಯಿ ವರೆಗೆ ತನ್ನ ಚಾಕೋಲೇಟ್ ಮಾರಾಟ ಮಾಡುತ್ತಾನೆ. ಹೀಗೆ ಜಗತ್ತಿನ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ತಮ್ಮ ವಸ್ತುಗಳಿಗೆ ಬೆಲೆ ನಿಗದಿ ಮಾಡಿಕೊಳ್ಳುತ್ತಾರೆ. ಜೊತೆಗೆ ಅದನ್ನು ತನಗೆ ಹೇಗೆ ಬೇಕೋ ಹಾಗೆ ಶೇಖರಿಸಿಟ್ಟುಕೊಳ್ಳುತ್ತಾರೆ. ಬೆಲೆ ಸಿಕ್ಕಾಗಿ ಮಾರಾಟ ಮಾಡುತ್ತಾರೆ, ಇನ್ನೂ ಕೆಲವು ಸರಿ ಕೃತಕ ಅಭಾವ ಸೃಷ್ಟಿ ಮಾಡಿ ಬೇಡಿಕೆ ಸೃಷ್ಟಿಸಿಕೊಳ್ಳುತ್ತಾರೆ. ಆದರೆ ಈ ದೇಶಕ್ಕೆ ಅನ್ನ ಕೊಡುವ ರೈತನಿಗೆ ಮಾತ್ರ ಆ ಯಾವುದೇ ಹಕ್ಕುಗಳಿಲ್ಲ. ಇದು ರೈತರ ಇಂದಿನ ಪರಿಸ್ಥಿತಿ, ವಸ್ತುಸ್ಥಿತಿ…!
ಸ್ವಾತಂತ್ರ್ಯ ಬಂದು 65 ವರ್ಷ ದಾಟಿದರೂ ರೈತನ ಬದುಕನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ದೇಶದ ಯಾವುದೇ ಸರ್ಕಾರಗಳು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿಲ್ಲ. ನಾವು ರೈತನನ್ನು ಈ ದೇಶದ ಬೆನ್ನಲುಬು, ಅನ್ನದಾತ ಅಂತೆಲ್ಲಾ ಕರೆಯುತ್ತೇವೆ ಅಷ್ಟೆ. ಅಥವಾ ಅವನನ್ನು ವರ್ಷಕ್ಕೊಮ್ಮೆ ವೇದಿಕೆಗಳ ಮೇಲೆ ಆರಾಧಿಸುತ್ತೇವೆ. ಆದರೆ ಅವನ ಬದುಕಿನ ಬಗ್ಗೆ ಮಾತ್ರ ಯೋಚಿಸುತ್ತಲೇ ಇಲ್ಲ. ಆತ ಬೆಳೆದ ಬೆಳೆಗೆ ಸರಿಯಾದ ಬೆಲೆ ನಿರ್ಧರಿಸಲು ಇದೂವರೆಗೆ ಸಾಧ್ಯವಾಗಿಲ್ಲ. ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಅವನದು ಸಿಂಹಪಾಲು ಎನ್ನುವ ಸರ್ಕಾರಗಳು ಅವನು ಬೆಳೆದ ಕಬ್ಬು, ಟೊಮ್ಯಾಟೋ, ಆಲೂ, ಈರುಳ್ಳಿ, ಹೂವು ಮುಂತಾದ ಬೆಳೆಗಳಿಗೆ ಸಿಗಬೇಕಾದ ಮೂಲ ಬೆಲೆಯನ್ನೂ ನಿರ್ದಿಷ್ಟವಾಗಿ ನಿರ್ಧಾರ ಮಾಡುವ ಹಕ್ಕನ್ನು ಅವನಿಗೆ ನೀಡದೆ ಇನ್ಯಾರೋ ಮೂರನೇವರು ನಿರ್ಧಾರ ಮಾಡುವಂತಾಗಿದೆ. ಹೀಗಾಗಿ ಅವನ ಬದುಕು ಇಂದಿಗೂ ಮೂರಾಮಟ್ಟೆ.
ತನ್ನ ಪಾಡಿಗೆ ತಾನು ನೈಸರ್ಗಿಕ ಕೃಷಿ ಮಾಡಿಕೊಂಡಿದ್ದ ರೈತನಿಗೆ ಇದೇ ಸರ್ಕಾರಗಳು “ಹೆಚ್ಚು ಬೆಳೆ ಬೆಳೆಯಬೇಕು” ಎಂದು ಹೇಳಿ ರಾಸಾಯನಿಕ ಗೊಬ್ಬರವನ್ನು ರಾಶಿ ರಾಶಿಯಾಗಿ ಸುರಿಯುವುದನ್ನು ಕಲಿಸಿದವು. ಆದರೆ ಅದೇ ಗೊಬ್ಬರಕ್ಕಾಗಿ ರೈತ ಗಲಾಟೆ ಮಾಡಿದಾಗ ಗುಂಡಿನ ಮೂಲಕ ಉತ್ತರ ಕೊಟ್ಟಿದ್ದೂ ಆಯಿತು. ರಕ್ತ ಬಸಿದು ದುಡಿಯುವ ಕೈಗಳಿಗೆ ಕೆಲಸ ನೀಡದ ಸರ್ಕಾರಗಳು ಇದ್ದ ಬದ್ದ ಯೋಜನೆಗಳನ್ನೆಲ್ಲಾ ರೈತರ ಜಮೀನಿಗೇ ತಂದು ಆ ಜಮೀನನ್ನೂ ಕಸಿದುಕೊಳ್ಳುತ್ತಿವೆ. ಹೀಗಿರುವಾಗ ಅವನು ನೆಟ್ಟಗೆ ನೆಲೆ ಕಂಡುಕೊಳ್ಳುವುದಾದರೂ ಎಲ್ಲ?
ರೈತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಸುತ್ತಲೇ ಇವೆ. ಇಷ್ಟಾದರೂ ರೈತರು ಮಾತ್ರ ಸುಮ್ಮನೆ ಕೂರುವುದಿಲ್ಲ. ಜೀವ ಹೋದರೂ ಸರಿ ಭೂಮಿಯನುಳುವುದೇ ನಮ್ಮ ಕಾಯಕ ಎಂದುಕೊಂಡು ಬಿಸಿಲು, ಮಳೆ, ಗಾಳಿ ಎಲ್ಲದೆ ಬೆವರು ಸುರಿಸಿ ದುಡಿಯುತ್ತಲೇ ಇದ್ದಾನೆ. ಆಗಾಗ ತನ್ನ ಸಹನೆಯ ಕಟ್ಟೆಯೊಡೆದು ಬೀದಿಗಿಳಿದು ಪ್ರತಿಭಟಿಸಿದಾಗ ಪೊಲೀಸರ ಬೂಟಿನ ಏಟು, ಲಾಠಿ ರುಚಿ ಅನುಭವಿಸುತ್ತಲೇ ಇದ್ದಾನೆ!
ಪ್ರತಿವರ್ಷ ಕೃಷಿ ಅಭಿವೃದ್ಧಿಗಾಗಿಯೇ ಸರಕಾರ ಕೊಟ್ಯಾಂತರ ರೂಪಾಯಿಯನ್ನು ಬಿಡುಗಡೆ ಮಾಡುತ್ತಿದೆ. ಹಿಂದಿನ ಸರ್ಕಾರವಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರೈತರಿಗಾಗಿ ಎನ್ನುವ ಹಣೆಪಟ್ಟಿ ಕೊಟ್ಟು ‘ಕೃಷಿ ಬಜೆಟ್’ಕೂಡ ಮಂಡಿಸಿ ಆಗಿದೆ. ಇದರಿಂದ ರೈತನಿಗೆ ಆದದ್ದೇನು ? ಏನೂ ಇಲ್ಲ. ಅವನ ಬದುಕು ಬದಲಾಗಲೇ ಇಲ್ಲ.
1974-80 ರವರೆಗೆ ಸತತ 6 ವರ್ಷಗಳ ಕಾಲ ಬರಗಾಲ ಇದ್ದಾಗಲೂ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಸರ್ಕಾರ ರೈತರಿಂದ ನೀರಾವರಿ ಕರ, ಲೆವಿ ಹಾಗೂ ಸುಸ್ತು ಬಡ್ಡಿ ವಸೂಲಿಗೆ ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು. ಅಧಿಕಾರಿಗಳು ರೈತರ ಮನೆಗಳಿಗೆ ನುಗ್ಗಿ ಎಲ್ಲವನ್ನು ಜಪ್ತಿ ಮಾಡತೊಡಗಿದರು. ದೇಶಕ್ಕೆ ಅನ್ನ ಕೊಡುವ ರೈತ ಎಂದು ಹೇಳುತ್ತಲೇ ಅವನ ಅನ್ನವನ್ನೂ ಕಸಿಕೊಳ್ಳಲು ಮುಂದಾಯಿತು. ಹೀಗಾಗಿ ಸರ್ಕಾರದ ಅಂಥ ನಿರ್ಧಾರದ ವಿರುದ್ದ ನವಲಗುಂದ, ನರಗುಂದ, ಸವದತ್ತಿ, ರಾಮದುರ್ಗ ತಾಲ್ಲೂಕುಗಳ ರೈತರು ಬೃಹತ್ ಸಮಾವೇಶ ನಡೆಸಿದರು. ಇತ್ತ ಬೆಳೆಗೆ ಸರಿಯಾದ ಬೆಲೆಯನ್ನೂ ನಿಗದಿ ಮಾಡದೆ, ಅತ್ತ ಕರ ವಸೂಲಿಯನ್ನೂ ನಿಲ್ಲಿಸದೆ ಸರ್ಕಾರವೇ ರೈತರ ಶೋಷಣೆಗೆ ಮುಂದಾದಾಗ ನಾನು ಕಡೆ ಹೋರಾಟಗಳು ನಡೆಯತೊಡಗಿದವು. ಆದರೂ ಅವತ್ತಿನ ಸರ್ಕಾರ ಅದನ್ನು ಪರಿಗಣಿಸಲಿಲ್ಲ. ಇದರಿಂದ ಸತತವಾಗಿ ರೈತರ ಸತ್ಯಾಗ್ರಹ, ಅರೆ ಬೆತ್ತಲೆ ಮೆರಣಿಗೆ, ಮಳೆಯಲ್ಲಿ ಬಾರುಕೋಲಿ ಚಳವಳಿಗಳು ನಡೆಯುತ್ತಲ್ಲೆ ಇದ್ದವು. ಜೂನ್ 21ರಂದು ನರಗುಂದ, ನವಲಗುಂದ, ರಾಮದುರ್ಗ, ಸೌವತ್ತಿಗಳಲ್ಲಿ ಬಂದ್ ಆಚರಿಸಿ ಸರ್ಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ನರಗುಂದ ತಹಶೀಲ್ದಾರರು ಪ್ರತಿಭಟಿಸುತ್ತಿದ್ದ ರೈತರನ್ನು ತುಳಿದುಕೊಂಡೇ ಕಚೇರಿಯ ಒಳಗೆ ನಡೆದರು. ಅದೇ ವೇಳೆಗೆ ಗಲಾಟೆಯನ್ನು ನಿಯಾಂತ್ರಿಸುವ ಸಲುವಾಗಿ ಡಿವೈಎಸ್ಪಿ ರೈತರ ಮೇಲೆ ಗುಂಡು ಹಾರಿಸಿದರು. ‘ಈರಪ್ಪ ಕಡ್ಲಿಕೊಪ್ಪ ಎಂಬ ರೈತಗುಂಡು ತಗಲಿ ಒದ್ಯಾಡತೊಡಗಿದ. ರೊಚ್ಚಿಗೆದ್ದ ರೈತರು ಕಚೇರಿಯನ್ನು ದ್ವಂಸ ಮಾಡಿದರು, ಪೊಲೀಸರ ಮೇಲೆ ಪ್ರತಿ ದಾಳಿ ಮಾಡಿದರು. ಈ ಗಲಭೆಯಲ್ಲಿ ಮೂವರು ಪೊಲೀಸರೂ ಬಿಲಿಯಾದರು.
ಇದೇ ವೇಳೆ ನವಲಗುಂದದಲ್ಲಿ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿದ ರೈತರ ಮೇಲೆ ಗೋಲಿಬಾರ್ ನಡೆಯಿತು. ಅಲ್ಲಿ ಮತ್ತೊಬ್ಬ ರೈತ ಬಸಪ್ಪ ಲಕ್ಕುಂಡಿ ಆಹುತಿಯಾದ. ಮತ್ತೆ ಸಿಟ್ಟಿಗೆದ್ದ ರೈತರು ನೀರಾವರಿ ಕಚೇರಿಗೆ ಬೆಂಕಿ ಹಚ್ಚಿ ಕಂಡ ಕಂಡ ಅಧಿಕಾರಿಗಳನ್ನು ಬೆನ್ನಟ್ಟಿ ಥಳಿಸತೊಡಗಿದರು. ಪ್ರತಿಕಾರದ ಕಿಡಿ ಹತ್ತಿ ಇಡಿ ಗದಗ ಜಿಲ್ಲೆ ಪೂರ್ತಿ ಸೂತಕದ ಛಾಯೆಯಲ್ಲಿ ಮುಳುಗಿತು. ಅನ್ನದಾತನ ಆಕ್ರೋಶ ಪ್ರತಿಭಟನೆ ಹಾಗೂ ಪ್ರತಿಯಾಗಿ ಸರ್ಕಾರ ಗೋಲಿಬಾರ್ ನಡೆಸಿತು. ಹೀಗಾಗಿ ರೈತ ಚಳವಳಿ ರಾಜ್ಯಾದ್ಯಾಂತ ವ್ಯಾಪಿಸಿತು. ರಾಜ್ಯದೆಲ್ಲೆಡೆ ರೈತರು ಪ್ರತಿಭಟನೆ ನಡೆಸುವಾಗ ಅಲ್ಲಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಲಾಯತು. ಹೀಗೆ ನಡೆದ ದಾಳಿಗಳಲ್ಲಿ ಬಲಿಯಾದವರ ಸಂಖ್ಯೆ ಮರೊಬ್ಬರಿ 139.
ಆ ಸಮಯದಲ್ಲಿ ಎಚ್.ಎಸ್. ರುದ್ರಪ, ಎನ್.ಡಿ. ಸುಂದರೇಶ್, ಹಾಗೂ ಪ್ರೊ. ಎಂ.ಡಿ. ನಜುಂಡಸ್ವಾಮಿ, ಕಡಿದಾಳು ಶಾಮಣ್ಣ ಮುಂತಾದವರು ರೈತರ ಹೋರಾಟಕ್ಕೆ ಸೈದ್ದಾಂತಿಕ ಚೌಕಟ್ಟುನ್ನು ಹಾಕಿದರು. ಆ ಮೂಲಕ ರೈತರಿಗೆ ಧ್ವನಿಯಾದರು. ಆನಂತರದಲ್ಲಿ ರೈತ ಹೋರಾಟ ಸ್ವಲ್ಪ ಮಟ್ಟಿಗೆ ಚುರುಕು ಪಡೆಯಿತು. ರೈತರ ಧ್ವನಿ ಗಟ್ಟಿಯಾಯಿತಾದರೂ ಆನಂತರದಲ್ಲಿ ಮತ್ತೆ ಅದೆ ರೈತ ಚಳವಳಿ ಹೋಳಾಗುವ ಮೂಲಕ ಮತ್ತೆ ಅವರ ಧ್ವನಿ ಉಡುಗಿದೆ. ಇಂಥ ಸಂದಿಗ್ದ ಸ್ಥಿತಿಯಲ್ಲಿ ಮತ್ತೊಂದು ರೈತ ಹುತಾತ್ಮ ದಿನ ಬಂದಿದೆ.
ನವಲಗುಂದ-ನರಗುಂದದ ಗೋಲಿಬಾರ್ನಲ್ಲಿ ಮಡಿದ ರೈತರ ಸ್ಮರಿಸುವ ಸಲುವಾಗಿ ಜೂನ್ 21ನ್ನು ‘ರೈತ ಹುತಾತ್ಮ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಈ ಆಚರಣೆಗಳೂ ಕೂಡ ಕೇವಲ ಮಾರ್ಮಿಕವಾಗುತ್ತಿವೆ. ಇನ್ನಾದರೂ ರೈತ ಚಳವಳಿಗಳು ಧಕ್ಷಗೊಳ್ಳಲಿ. ಸರ್ಕಾರ ಅವರ ಧ್ವನಿಗೆ ಸ್ಪಂದಿಸಲಿ, ನಮಗೆಲ್ಲ ಅನ್ನ ನೀಡುವ ಆ ಅನ್ನದಾತನ ಬಾಳು ಹಸನಾಗಲಿ…







ರೈತರನ್ನು ಸಂಘಟಿಸುವ,ಜಗಳಕ್ಕಿಳಿಸುವ ತುರ್ತು ಅಗತ್ಯವಿದೆ. ಒಳ್ಳೆ ಲೇಖನ
Excellent article..
Nammellara a nireekshe nijavagli.
ರೈತರ ಹೋರಾಟ ಎಂದಿಗೂ ನಿಲ್ಲುವುದಿಲ್ಲ. ಆಗಾಗ ಪ್ರತಿಭನೆಗಳು ನಡೆಯುತ್ತಲೇ ಇರುತ್ತವೆ. ಸರ್ಕಾರ ಅಮಾಯಕರ ಮೇಲೆ ಇಂಥ ದೌರ್ಜನ್ಯವನ್ನು ನಡೆಸುತ್ತಲೇ ಇರುತ್ತದೆ. ಅದಕ್ಕೆ ಹೋರಾಟಗಳು ನಿಂತ ನೀರಾಗದೆ ಆಗಾಗ ಸರ್ಕಾರಗಳಿಗೆ ಪ್ರತಿಭಟನೆಯ ಮೂಲಕ ಬಿಸಿನೀರು ಕುಡುಸುತ್ತಲೇ ಇರಬೇಕು. ಒಳ್ಳೆಯ ಬರವಣಿಗೆ. ಇದೇ ರೀತಿ ಜನಪರ ಹಾಗೂ ರೈಪರವಾದ ಬರಹಗಳು ನಿಮ್ಮಿಂದ ಆಗಾಗ ಬರಲಿ ಭವ್ಯಾ, ಹುತಾತ್ಮದಿನವನ್ನು ನೆನಪಿಸಿ ಎಚ್ಚರಗೊಳಿಸಿದ್ದಕ್ಕೆ ಧನ್ಯವಾದಗಳು.
ee dinavannu neevu nenapicidudakke tmge vandanegalu
ಕೋಪ ಇಲ್ಲೇನೋ ರೈತಣ್ಣ
ಕೋಪ ಇಲ್ಲೇನೋ
ಕೋಪ ಇಲ್ಲದೆ ಬದುಕಿದ್ದಕ್ಕೆ
ಘಾಸಿ ಠಕ್ಕರೆಲ್ಲ ಸೇರಿ
ಸಿಂಬಿಸುತ್ತಿ ಕುಂತು ನಿನ್ನ
ಕೊಂದು ತಿಂದು ತೇಗುತಿರುವರು
– ಎಂಬ ನನ್ನ ತಂದೆ (ಲಿಂಗಣ್ಣ ಸತ್ಯಂಪೇಟೆ) ಯವರು ಬರೆದ ಹಾಡು ಲೇಖನ ಓದುತ್ತಿರುವಂತೆ ನೆನಪಾಯಿತು.ಧನ್ಯವಾದಗಳು.