ಜೋಗಿ ಬರೆದ ಅರಣ್ಯ ಪರ್ವ : ಗುರುವಿನ ಹುಡುಕಾಟದಲ್ಲಿ…

ಜೋಗಿ

ನೀವು ಹೇಳುತ್ತಿರುವ ಗುರು ಯಾರು? ಅವರು ನಿಜಕ್ಕೂ ಎಲ್ಲಿದ್ದಾರೆ? ಅವರನ್ನು ನೋಡಬಹುದೇ? ನೀವು ಅವರನ್ನು ಹೇಗೆ ಕಂಡುಕೊಂಡಿರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಅನೇಕರು ಕೇಳಿದ್ದಾರೆ. ಅವರ ಮಾತುಗಳು ಸ್ಪೂರ್ತಿದಾಯಕವಾಗಿದೆ ಎಂದಿದ್ದಾರೆ. ಆ ಗುರುಗಳನ್ನು ನಾವೆಲ್ಲ ಭೇಟಿಯಾದ ಪ್ರಸಂಗವೇ ತುಂಬ ರೋಚಕವಾಗಿದೆ. ಅವರು ನಮಗೆ ಸಿಕ್ಕಿದ್ದೂ ನಮ್ಮ ಅದೃಷ್ಟವೆಂದೇ ಹೇಳಬೇಕು. ಅಷ್ಟಕ್ಕೂ ನಾವು ಹುಡುಕಿಕೊಂಡು ಹೋದ ಗುರುಗಳೂ ನಮಗೆ ಸಿಕ್ಕವರೂ ಅವರೇನಾ ಅನ್ನುವುದು ನಮಗಿವತ್ತಿಗೂ ಸ್ಪಷ್ಟವಿಲ್ಲ. ಆ ಕಾಲಕ್ಕೆ ನಮ್ಮ ಮನಸ್ಸಿನಲ್ಲಿ ಇದ್ದ ಅಗತ್ಯಗಳಿಗೆ ತಕ್ಕಂಥ ಒಬ್ಬರು ಸಿಕ್ಕರು ಎಂಬುದೇ ನಮ್ಮ ಸಂತೋಷಕ್ಕೆ ಕಾರಣವಾಗಿತ್ತು.

ಆ ಪ್ರಸಂಗ ಹೀಗೆ:

ಒಂದು ಕಡೆ ಮೈನಡುಗಿಸುವ ಹಾಗೆ ಸೊಟ್ಟಪಟ್ಟ ಚಾಚಿಕೊಂಡ ಕಣಿವೆ. ಮತ್ತೊಂದು ಕಡೆ ಅಲ್ಲಿನ ಮಣ್ಣನ್ನೆಲ್ಲ ಯಾರೋ ಎತ್ತಿ ಒಟ್ಟಿದ್ದಾರೇನೋ ಎಂಬಂತೆ ತಲೆಯೆತ್ತಿ ನಿಂತ ಬೆಟ್ಟ. ಅದರ ನಡುವಿನ ತಪ್ಪಲಿನಲ್ಲಿ ಪುಟ್ಟದೊಂದು ಮನೆ. ಆ ಮನೆಯಲ್ಲಿದ್ದದ್ದು ಅವರೊಬ್ಬರೇ. ಈ ಕಾಲಕ್ಕೂ ಹಾಗೆ ಬದುಕಲಿಕ್ಕಾಗುತ್ತಾ ಅಂತ ಬೆರಗು ಹುಟ್ಟಿಸುವಂತೆ ಅವರೊಬ್ಬರೇ ಇದ್ದರು. ಅವರಿಗೆಷ್ಟು ಬೇಕೋ ಅಷ್ಟೇ ಮನೆ. ಮನೆಯ ಎದುರಿಗೇ ಕಣಿವೆಯಾಳದಲ್ಲಿ ಬೋರ್ಗರೆಯುತ್ತಾ ಹರಿಯುವ ಹೊಳೆ. ಒಂದು ವಾರ ಆ ಮನೆಯಲ್ಲಿದ್ದರೆ ಸಾಕು, ಕಿವಿಯ ತುಂಬ ನದಿ ಬೋರ್ಗರೆಯುವ ಸದ್ದು. ರಾತ್ರಿ ಇದ್ದಕ್ಕಿದ್ದ ಹಾಗೆ ಆ ಹೊಳೆ ತುಂಬಿ ಹರಿಯುತ್ತಿತ್ತು. ಕತ್ತಲಲ್ಲಿ ಮಲಗಿದವರಿಗೆ ನಿಧಾನವಾಗಿ ನದಿಯ ರಭಸ ಜೋರಾಗುವುದು ಅನುಭವ ಆಗುತ್ತಿತ್ತು.

ಅವರು ಆ ಕಾಡಲ್ಲಿ ಯಾಕಿದ್ದಾರೆ ಎಂಬ ಪ್ರಶ್ನೆಯನ್ನು ಅವರು ಯಾವತ್ತೂ ಕೇಳಿಕೊಂಡವರಲ್ಲ. ಅವರ ಬಗ್ಗೆ ನೂರೆಂಟು ಕತೆಗಳಿದ್ದವು. ನಮ್ಮನ್ನು ಅವರಿದ್ದ ಜಾಗಕ್ಕೆ ಕರೆದುಕೊಂಡು ಹೋಗಿ ಬಿಟ್ಟವನ ಹೆಸರು ತಿಮ್ಮಸೆಟ್ಟಿ. ಅವರಿದ್ದ ಜಾಗಕ್ಕಿಂತ ಐದಾರು ಮೈಲಿ ದೂರದಲ್ಲಿ ಹೊಲ, ತೋಟ ಮಾಡಿಕೊಂಡಿದ್ದ. ಆ ಘಟ್ಟದ ತಪ್ಪಲಲ್ಲಿ ಹುಲುಸಾದ, ರುಚಿಯಾದ ವೀಳ್ಯದೆಲೆ ಬೆಳೆಯುತ್ತಿತ್ತು. ಅವನು ನೂರೆಂಟು ಹಂಬುಗಳ ಎಲೆತೋಟ ಮಾಡಿದ್ದ. ಅದರ ಜೊತೆಗೇ, ಅಲಸಂಡೆ, ಬೆಂಡೆಕಾಯಿ, ಸೌತೆಕಾಯಿ, ಮೆಣಸು ಬೆಳೆಯುತ್ತಿದ್ದ. ಅದನ್ನು ಸಂತೆಗೆ ಒಯ್ದು ಮಾರುತ್ತಿದ್ದ.

ನೀವು ಅಲ್ಲಿಗೆ ಹೋಗುವಾಗ ಅಕ್ಕಿ,ಮೆಣಸು ತಗೊಂಡು ಹೋಗುವುದು ಒಳ್ಳೆಯದಯ್ಯ. ಅವರು ಹೊಟ್ಟೆಗೆ ಅನ್ನ ತಿನ್ನುವುದಿಲ್ಲ. ನಿಮಗೆ ಅಲ್ಲಿ ಇಲ್ಲಿ ಸಿಗುವುದೇನೂ ಸಿಗುವುದಿಲ್ಲ. ಅದೊಂದು ವಿಚಿತ್ರ ಜನ ಅಯ್ಯ ಅಂತ ತಿಮ್ಮ ಸೆಟ್ಟಿ ನಗಾಡುತ್ತಲೇ ಅವರ ಬಗ್ಗೆ ಹೇಳಿದ್ದ. ಮತ್ತಷ್ಟು ಕೆದಕಿ ಕೇಳಿದಾಗ ನಮಗೆ ಗೊತ್ತಾದದ್ದು ಇಷ್ಟು:

ಅವರು ಏನನ್ನೂ ಬೇಯಿಸಿ ತಿನ್ನುತ್ತಿರಲಿಲ್ಲ. ಹಣ್ಣಾದರೆ ಹಾಗೆಯೇ, ಗೆಡ್ಡೆಗೆಣಸಾದರೆ ಸುಟ್ಟು, ಸೊಪ್ಪನ್ನು ಹಸಿಯೇ ಜಗಿದು ನುಂಗುತ್ತಿದ್ದರು. ಬರೀ ಸಸ್ಯಾಹಾರವೇ ಅಂತಿಲ್ಲ. ಮೂರು ನಾಲ್ಕು ದಿನ ಬಿಡದೇ ಮಳೆ ಸುರಿದರೆ ಬೆತ್ತ ಹಿಡಕೊಂಡು ಕಾಡಿಗೆ ನುಗ್ಗುತ್ತಿದ್ದರು. ಮೊಲವೋ ಮೀನೋ ಇನ್ನೊಂದೋ ಸಿಕ್ಕರೆ ಅದನ್ನೂ ಸುಟ್ಟು ತಿನ್ನಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಯಾವುದು ತಿನ್ನಲಿಕ್ಕಾಗುವ ಸೊಪ್ಪು, ಯಾವುದು ಅಲ್ಲ ಅನ್ನುವುದು ಅವರಿಗೆ ಗೊತ್ತಿತ್ತು. ಹಾಗೇ, ಹೊಳೆಬದಿಗೆ ಇಳಿದು ಯಾವುದೋ ಪೊಟರೆಗೆ ಕೈ ಹಾಕಿದರೆ ಅಲ್ಲಿ ಏಡಿಯೋ ಸಿಗಡಿಯೋ ಸಿಗುತ್ತಿತ್ತು. ಅದನ್ನೂ ಕೆಂಡದಲ್ಲಿ ಸುಟ್ಟು ತಿನ್ನುತ್ತಿದ್ದರು. ಅದೂ ಇಷ್ಟೇ ಹೊತ್ತಿಗೆ ತಿನ್ನಬೇಕು ಅಂತೇನೂ ಇಲ್ಲ. ಯಾವಾಗ ತಿಂದರೂ ನಡೆಯುತ್ತದೆ. ದಿನಾ ತಿನ್ನಬೇಕು ಅಂತಲೂ ಇಲ್ಲ. ಹಸಿವಾದಾಗ ತಿನ್ನುವುದು.

ಅವರು ಅಲ್ಲೇ ಇರುತ್ತಾರೆ ಅಂತಲೂ ಇರಲಿಲ್ಲ. ಎಲ್ಲೆಲ್ಲೋ ಸುತ್ತುತ್ತಿದ್ದರು. ಅವರಿಗೊಬ್ಬ ಶಿಷ್ಯನಿದ್ದಾನಂತೆ. ಅವನು ಯಾರೆಂಬುದು ಯಾರಿಗೂ ಗೊತ್ತಿಲ್ಲ. ಅವರಿಗೆ ತಿರುಗಾಟ ಮಾಡಬೇಕು ಅನ್ನಿಸಿದಾಗ ಅವನ ಮನೆಗೆ ಹೊರಟು ಹೋಗುತ್ತಾರೆ. ಅವನು ಅವರನ್ನು ಕರೆದುಕೊಂಡು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಕರೆದೊಯ್ದು, ವಾಪಸ್ಸು ಕರಕೊಂಡು ಬರುತ್ತಾನೆ. ಖರ್ಚೆಲ್ಲವೂ ಅವನದೆ. ಅವನಾದರೂ ಯಾಕೆ ಅವರ ಸೇವೆ ಮಾಡುತ್ತಾನೋ ಗೊತ್ತಿಲ್ಲ.

 

ಹೀಗೆಲ್ಲ ಅವರ ಬಗ್ಗೆ ಕತೆಗಳಿದ್ದವು. ಅವರ ಹೆಸರು ಕೂಡ ಯಾರಿಗೂ ಗೊತ್ತಿದ್ದ ಹಾಗಿರಲಿಲ್ಲ. ಸುಬ್ರಾಯ ಕಾರಂತ ಅಂತ ಇರಬೇಕು. ಸಣ್ಣಯ್ಯ ಕಾರಂತರ ಕೊನೆಯ ಮಗ. ಏಳು ಮಕ್ಕಳಾದ ನಂತರ ಹುಟ್ಟಿದವನು. ಇವರು ಹುಟ್ಟುವ ಹೊತ್ತಿಗೆ ಸಣ್ಣಯ್ಯ ಕಾರಂತರು ತೀರಿಕೊಂಡಿದ್ದರು. ದೊಡ್ಡಣ್ಣನಿಗೆ ಆಗಲೇ ಇಪ್ಪತ್ತೆರಡೋ ಇಪ್ಪತ್ತಮೂರೋ ವರ್ಷ. ಅವನಿಗೆ ತಮ್ಮಂದಿರನ್ನು ಸಾಕುವುದರಲ್ಲೇ ಸಾಕುಬೇಕಾಗಿತ್ತು. ಅವನ ಹೆಂಡತಿಯಾಗಿ ಬಂದವಳು, ಈ ಪೀಡೆಗಳು ತೊಲಗಿದರೆ ಸಾಕು ಎಂಬಂತೆ ಒಂದಷ್ಟು ಬೇಯಿಸಿ ಸುರಿದದ್ದು ಬಿಟ್ಟರೆ ಮೈದುನಂದಿರ ಮೇಲೆ ಪ್ರೀತಿ ತೋರಲಿಲ್ಲ. ಮಿಕ್ಕವರು ಬೇರೆ ಗತಿಯಿಲ್ಲದೇ, ಅಲ್ಲೇ ಉಳಿದರು. ಇವರೊಬ್ಬರು ಮಾತ್ರ ಎಂಟು ವರುಷ ಆಗುತ್ತಿದ್ದಂತೆ ಮನೆ ಬಿಟ್ಟು ಹೊರಟರು. ಇಡೀ ದೇಶ ಸುತ್ತಿದ್ದಾರೆ. ಹಿಮಾಲಯಕ್ಕೂ ಹೋಗಿ ಬಂದಿದ್ದಾರೆ. ಇದೆಲ್ಲ ಐವತ್ತು ಅರುವತ್ತು ವರುಷದ ಹಿಂದಿನ ಕತೆ. ಅವರಿಗೆ ಹಿಮಾಲಯದ ಯಾವುದೋ ತಪ್ಪಲಿನಲ್ಲಿ eನೋದಯ ಆಗಿದೆಯಂತೆ ಎಂಬಿತ್ಯಾದಿ ಕತೆಗಳನ್ನು ಅನೇಕರು ಹೇಳಿದ್ದರು. ನಾವು ಅವರನ್ನು ಗುರುವೆಂದು ಸ್ವೀಕಾರ ಮಾಡಿಬಿಟ್ಟಿದ್ದೆವು. ನಮಗೆ ಅವರ ಹೆಸರಾಗಲೀ, ಊರಾಗಲೀ ಗೊತ್ತಿರಲಿಲ್ಲ. ಅವರು ಸಣ್ಣಯ್ಯ ಕಾರಂತರ ಮಗ ಹೌದೋ ಅಲ್ಲವೋ ಅನ್ನುವ ಬಗ್ಗೆಯೇ ಅನುಮಾನಗಳಿದ್ದವು.

ಯಾಕೆಂದರೆ ಸಣ್ಣಯ್ಯ ಕಾರಂತರ ಮಕ್ಕಳೆಲ್ಲ ಹೊಡೆದಾಡಿ, ಆಸ್ತಿಯನ್ನೆಲ್ಲ ಯಾರಿಗೋ ಮಾರಿ ದೇಶಾಂತರ ಹೊರಟು ಹೋದಂತಿತ್ತು. ಅವರಿದ್ದ ಮನೆಗೆ ನಾವು ಹೋದಾಗ ಅಲ್ಲಿ ಶರಟು ಹಾಕಿಕೊಳ್ಳದ, ಮುಖತುಂಬ ನೆರಿಗೆಯಿದ್ದ, ಕುಂಟುಕಾಲಿನ, ಉದ್ದಬಾಯಿಯ ಮುದುಕನೊಬ್ಬ ಕೂತಿದ್ದ. ಯಾವುದೋ ಬೇರೆ ದೇಶದಿಂದ ಬಂದವನಂತೆ ಕಾಣುತ್ತಿದ್ದ ಅವನಿಗೆ ಕಿವಿಯೂ ಕೇಳುತ್ತಿರಲಿಲ್ಲ, ಕಣ್ಣೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಸಣ್ಣಯ್ಯ ಕಾರಂತರ ಆಸ್ತಿಯನ್ನು ಅವನೇ ಕೊಂಡುಕೊಂಡದ್ದೆಂದೂ, ಅಲ್ಲಿನ ನಾಗಬನವನ್ನು ಅವನು ನೆಲಸಮ ಮಾಡಿದ ನಂತರ ಬುದ್ಧಿ ಕಳಕೊಂಡನೆಂದೂ ಅವನ ಮಕ್ಕಳು ಆಸ್ತಿಯನ್ನು ಮಾರಲು ಹವಣಿಸುತ್ತಿದ್ದಾರೆಂದೂ ನಮಗೆ ದಾರೀಲಿ ಸಿಕ್ಕವರು ಹೇಳಿದರು. ಇವಿಷ್ಟೂ ಎರಡನೆಯ ತಲೆಮಾರಿನ ಕತೆಯಂತಿತ್ತು. ನಾವು ಹುಡುಕಿಕೊಂಡು ಹೊರಟವರು ಮೊದಲನೆಯ ತಲೆಮಾರಿನವರಂತೂ ಆಗಿರಲಿಲ್ಲ.

ಎಷ್ಟೋ ದಿನದ ಹುಡುಕಾಟದ ನಂತರ ಚೆನ್ನಕೇಶವ ಅವರನ್ನು ಪತ್ತೆ ಮಾಡಿದ್ದ. ಇಲ್ಲೆಲ್ಲೋ ಇದ್ದಾರಂತೆ ಎಂದು -ನ್ ಮಾಡಿ ಹೇಳಿ, ನಮ್ಮನ್ನೆಲ್ಲ ಕಡೋಳಿ ಅನ್ನುವ ಊರಿಗೆ ಬರಹೇಳಿದ್ದ. ಅಲ್ಲಿಂದ ಕಾಡು ಹಾದಿಯಲ್ಲಿ ಎತ್ತಿನ ಬಂಡಿಯಲ್ಲಿ ಪ್ರಯಾಣ ಮಾಡಬೇಕಾಗುತ್ತದೆ ಎಂದೂ ಆಮೇಲೆ ನಡಕೊಂಡು ಹೋಗಬೇಕಾದೀತು ಎಂದೂ ಹೆದರಿಸಿದ್ದ. ಏನೇ ಆದರೂ ಅದೊಂದು ನಿಗೂಢ ಅನುಭವಕ್ಕೆ ತುತ್ತಾಗಿಯೇ ತೀರಬೇಕೆಂದು ನಾವು ನಾಲ್ಕು ಮಂದಿ ಹೊರಟೇ ಬಿಟ್ಟಿದ್ದೆವು. ಕಣ್ಮುಂದೆ ಕೆಲಸವಿಲ್ಲದೇ, ಹೇಳುವವರು ಕೇಳುವವರಿಲ್ಲದೇ ಬಿದ್ದುಕೊಂಡ ಅಗಾಧವಾದ ಕಾಲ ಇತ್ತು.

ನಾವೆಲ್ಲ ಒಂದು ಬೆಳಗ್ಗೆ ಕಡೋಳಿಗೆ ಹೊರಟು ನಿಂತೆವು.

 

‍ಲೇಖಕರು avadhi

July 3, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: